ಗುಟ್ಟಿನಿಂದ ಬಟ್ಟಲೆಡೆಗೆ
Team Udayavani, Oct 2, 2019, 3:12 AM IST
ಮುಟ್ಟು, ಒಂದು ಗುಟ್ಟಿನ ವಿಷಯ. ಅದರ ಕಷ್ಟ-ಸುಖ, ದುಃಖ-ದುಮ್ಮಾನ ಏನೇ ಇರಲಿ, ಅದು ನಮ್ಮೊಳಗೇ ಇರಬೇಕು ಎಂದು ನಂಬಿರುವ ಮಹಿಳೆಯರು ಈಗಲೂ ಇದ್ದಾರೆ. ಹೀಗಿರುವಾಗ, ಮುಟ್ಟಿನ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಬದಲು ಮುಟ್ಟಿನ ಬಟ್ಟಲುಗಳನ್ನು ಬಳಸಿದರೆ ಒಳ್ಳೆಯದು ಎಂದು ವಿವರಿಸುವ ಅಭಿಯಾನವೊಂದು ಆರಂಭವಾಗಿದೆ…
ಆಗಸ್ಟ್ ಎರಡನೇ ವಾರದ ಒಂದು ಸಂಜೆ ಗೆಳತಿ ಕರೆ ಮಾಡಿ, “ಅಂಕೋಲದ ಕಡೆಯ ಗೆಳತಿಯರು ಅಲ್ಲಿ ನೆರೆ ಪೀಡಿತರಿಗೆ ಆಹಾರ, ಬಟ್ಟೆ ಇತ್ಯಾದಿ ಹಂಚಲು ಹೋಗಿದ್ರಂತೆ. ಕೆಲವು ಹುಡುಗಿಯರು, “ಅಕ್ಕಾ, ನಮಗೆ ಸ್ಯಾನಿಟರಿ ಪ್ಯಾಡ್ ಬೇಕಿತ್ತು’ ಅಂತ ಕೇಳಿದರಂತೆ. ಅದು ತುಂಬಾ ಅಗತ್ಯ ಅಲ್ವಾ? ಅದಕ್ಕೆ ನಾವು ಸ್ನೇಹಿತೆಯರೆಲ್ಲ ಒಂದು ವಾಟ್ಸ್ಯಾಪ್ ಗುಂಪು ಮಾಡಿ, ಹಣ ಸಂಗ್ರಹಿಸಿ ಅವರಿಗೆ ಪ್ಯಾಡ್ ತಲುಪಿಸೋಣ ಅಂತಿದೀವಿ. ನಿನ್ನನ್ನೂ ಗುಂಪಿಗೆ ಸೇರಿಸಿದ್ದೀನಿ’ ಎಂದಳು. “ಒಳ್ಳೇದಾಯ್ತು. ಮಾಡೋಣ’ ಎಂದೇನೋ ಹೇಳಿದೆ.
ಆದರೆ, ಕಳೆದ ವರ್ಷ ಕೇರಳ ಪ್ರವಾಹದ ನಂತರ ಅಲ್ಲಿ ಸ್ವಚ್ಛತಾ ಕೆಲಸ ಕೈಗೊಂಡಾಗ ಬೆಚ್ಚಿ ಬೀಳಿಸಿದ್ದ ಬಳಸಿ ಬಿಸುಟ ಟನ್‌ಗಟ್ಟಲೆ ಪ್ಯಾಡುಗಳ ರಾಶಿಯ ಚಿತ್ರ; ಹಿಂದೆಲ್ಲಾ ಬಿಡುವಿಲ್ಲದ ಸುತ್ತಾಟಗಳಲ್ಲಿ ಮುಟ್ಟಿನ ದಿನಗಳಲ್ಲಿ ನಾನು ಪಟ್ಟ ಪಾಡು ಮತ್ತು ಈಗಿನ ನಿರಾತಂಕ ದಿನಗಳು ಒಟ್ಟೊಟ್ಟಿಗೇ ಕಣ್ಮುಂದೆ ಮೂಡತೊಡಗಿದವು. ನಾವೀಗ ಪ್ಯಾಡ್ ನೀಡುವುದಕ್ಕಿಂತ ಹೆಚ್ಚಿನದನ್ನೇ ಮಾಡಬೇಕಿದೆ ಅನ್ನೋ ಯೋಚನೆ ಮೂಡಿತು. ಕಳೆದ ಎರಡು ವರ್ಷಗಳಿಂದ ಪ್ಯಾಡ್ ಬದಲು ಮುಟ್ಟಿನ ಬಟ್ಟಲು (menstrual cup)ಬಳಸಲು ಶುರು ಮಾಡಿದ್ದ ನಾನು, ಅದರ ಬಗ್ಗೆ ಸಾಕಷ್ಟು ಓದಿ ತಿಳಿದಿದ್ದೆ. ಈಗ ಆ ಕುರಿತು ಮತ್ತಷ್ಟು ಸಂಶೋಧನೆ ನಡೆಸಿದೆ.
ಸಾಮಾನ್ಯ ಪರಿಸ್ಥಿತಿಯಲ್ಲಿಯೇ ಮುಟ್ಟು ಮತ್ತು ಅದನ್ನು ನಿರ್ವಹಿಸುವಾಗಿನ ತೊಡಕುಗಳು ನಮ್ಮನ್ನು ಹೈರಾಣಾಗಿಸುವಾಗ, ಪ್ರವಾಹದ ಸಂದರ್ಭದಲ್ಲಿ ಆ ಮೂರು ದಿನಗಳು ಇನ್ನೂ ಯಾತನಾಮಯ. ವೈಯಕ್ತಿಕವಾಗಿ ನನಗೆ ಈ ಕಷ್ಟಗಳಿಂದ ಸ್ವಾತಂತ್ರ್ಯ ನೀಡಿದ “ಮುಟ್ಟಿನ ಬಟ್ಟಲು’, ಪ್ರವಾಹ ಸಂತ್ರಸ್ತೆಯರಿಗೆ ನಿಜಕ್ಕೂ ಉಪಯುಕ್ತವಾಗಬಲ್ಲದು ಎಂದು ಹಲವು ಹಿರಿ-ಕಿರಿಯ ಗೆಳತಿಯರಿಗೆ ಹೇಳಿದೆ. “ಒಳ್ಳೆಯದೇ, ಆದರೆ…’ ಎಂಬ ಅನುಮಾನದೊಂದಿಗೆ ಧನಾತ್ಮಕ ಹಾಗೂ ಋಣಾತ್ಮಕ ಸ್ಪಂದನೆಗಳೆರಡೂ ದೊರೆತವು.
ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡವರಿಗೆ ಮೊದಲು ಮೂಲಭೂತ ಅಗತ್ಯವೇ ಮುಖ್ಯವಾಗಿರು ತ್ತದೆ. ಮೊದಲೇ ಮಾನಸಿಕ ಆಘಾತದಲ್ಲಿರುವ ಅವರು ಹೊಸತನ್ನು (ಮುಟ್ಟಿನ ಬಟ್ಟಲು) ಈಗ ಒಪ್ಪಿಕೊಳ್ಳಲಾ ರರು ಎಂಬುದು ಹಲವರ ವಾದವಾಗಿತ್ತು. ಆದರೆ ಬೇರೆ ಸಂದರ್ಭಗಳಿಗಿಂತಲೂ ಈ ಪರಿಸ್ಥಿತಿಯಲ್ಲಿ ಮುಟ್ಟಿನ ಬಟ್ಟಲನ್ನು ಮಹಿಳೆಯರು ಸ್ವೀಕರಿಸುತ್ತಾರೆ ಎಂದು ನನ್ನ ಒಳದನಿ ಹೇಳುತ್ತಿತ್ತು. ಹಾಗನ್ನಿಸಲು ಇದ್ದ ಮುಖ್ಯ ಕಾರಣಗಳೆಂದರೆ-
-ಅವರು ಇರುವ ಪರಿಸ್ಥಿತಿಯಲ್ಲಿ (ಗಂಜಿಕೇಂದ್ರದಲ್ಲಿ ಅಥವಾ ಜನಜಂಗುಳಿಯ ನಡುವೆ) 4-5 ಗಂಟೆಗಳಿ ಗೊಮ್ಮೆ ಪ್ಯಾಡ್ ಬದಲಿಸಲು ಕಷ್ಟವಾಗುತ್ತದೆ. ಅದರ ಬದಲಿಗೆ, ಮುಟ್ಟಿನ ಬಟ್ಟಲನ್ನು ಧರಿಸಿ 8-10 ಗಂಟೆಗಳು ಚಿಂತೆಯಿಲ್ಲದೆ ಇರಬಹುದು.
-ಸುತ್ತಲೂ ನೀರೇ ನೀರಾಗಿರುವಾಗ ಬಳಸಿದ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವುದರಲ್ಲಿ ಇರುವ ಸಮಸ್ಯೆ (ಜೊತೆಗೆ ಅದರಿಂದ ಉಂಟಾಗಬಹುದಾದ ನೈರ್ಮಲ್ಯ ಮತ್ತು ಆರೋಗ್ಯದ ಸಮಸ್ಯೆಗಳು).
-ಥಂಡಿ ವಾತಾವರಣದಲ್ಲಿ ಪ್ಯಾಡ್ ಬಳಸುವಾಗ ತೊಡೆಗಳಲ್ಲಿ ಆಗುವ ಉರಿಯೂತದ ನರಕ ಅನುಭವಿಸಿ ದವರಿಗಷ್ಟೇ ಗೊತ್ತು. ಒಳಉಡುಪುಗಳನ್ನೂ ಒಣಗಿಸಿ ಕೊಳ್ಳುವ ಸಾಧ್ಯತೆ ಇಲ್ಲದಿರುವಾಗ ಇನ್ನೂ ಕಷ್ಟವಾಗುತ್ತೆ.
-ಒಮ್ಮೆ ಬಟ್ಟಲನ್ನು ಖರೀದಿಸಿದರೆ 8-10 ವರ್ಷಗಳವರೆಗೆ ಬಳಸಬಹುದು ಅನ್ನುವುದು ಖರ್ಚಿನ ದೃಷ್ಟಿಯಿಂದ ಬಹಳ ಉತ್ತೇಜನಕಾರಿ.
-ಅವರಲ್ಲಿ ಕೆಲವರಿಗೆ ಪ್ಯಾಡ್ ಬಳಕೆಯೂ ಸರಿಯಾಗಿ ಗೊತ್ತಿಲ್ಲ ಎನ್ನುವ ಆತಂಕ ಸಹ ವ್ಯಕ್ತವಾಯ್ತು.ಹಾಗಾದರೆ, ಆರೋಗ್ಯಕ್ಕೆ ಮಾರಕವಾದ ಬಟ್ಟೆಯ ಬಳಕೆ ಯನ್ನು ಬಿಡಿಸಲು, ಅವರ ಮೇಲಿನ ಖರ್ಚಿನ ಹೊರೆ ತಪ್ಪಿಸುವ, ಕೆಲಸ ಆಗಬೇಕು. ಜೊತೆಗೆ, ಅವರ ಆರೋಗ್ಯ, ನೈರ್ಮಲ್ಯ ಕಾಪಾಡಬೇಕು. ಪರಿಸರ ಮಾಲಿನ್ಯ ತಪ್ಪಿಸುವ, ಸಮುದಾಯ ಆರೋಗ್ಯಕ್ಕೆ ತೊಂದರೆ ಮಾಡದಂಥ ಪರ್ಯಾಯ ಮಾರ್ಗ ತೋರುವುದು ನಮ್ಮ ಆದ್ಯತೆ ಆಗಬೇಕೆನಿಸಿತು.
ಪ್ಯಾಡ್ ಯಾಕೆ ಬೇಡ?: 90% ಪ್ಲಾಸ್ಟಿಕ್‌ನಿಂದಾದ ಸ್ಯಾನಿಟರಿ ಪ್ಯಾಡ್‌ಗಳು ಮಣ್ಣಿನಲ್ಲಿ ಕರಗಲು ವರ್ಷಾನುಗಟ್ಟಲೆ ಸಮಯ ಬೇಕಾಗುತ್ತದೆ. ಬಳಸಿದ ಪ್ಯಾಡ್‌ಗಳಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ಮಣ್ಣು, ನೀರಿನಲ್ಲಿ ಬೆರೆತು ರೋಗ ಹರಡಬಲ್ಲವು. ಅವನ್ನು ಸುಟ್ಟರೂ ಪರಿಸರಕ್ಕೆ ಮಾರಕ. ಪ್ಯಾಡ್‌ನ ತ್ಯಾಜ್ಯ ವಿಲೇವಾರಿಯೂ ತಲೆನೋವಿನ ವಿಚಾರ. ಹಾಗಾಗಿ, ಮುಟ್ಟಿನ ಬಟ್ಟಲು ಬಳಸುವುದರಿಂದ ಪರಿಸರ ಮಾಲಿನ್ಯವನ್ನೂ ತಡೆಗಟ್ಟಬಹುದು. ಪ್ರಯತ್ನವನೇ° ಪಡದಿದ್ದರೆ ಸೊನ್ನೆಯಲ್ಲಿರುತ್ತೇವೆ. ಪ್ರಯತ್ನಿಸೋಣ, ಆಗ ಕೇವಲ 5% ಯಶಸ್ಸು ಸಿಕ್ಕರೂ ಅದು ಸೊನ್ನೆಗಿಂತ ಉತ್ತಮವಲ್ಲವೇ ಎಂದಾಗ ದೀಪಾ ಗಿರೀಶ್, ಜ್ಯೋತಿ ಹಿಟ್ನಾಳ್ ಮತ್ತು ಶಿವಲೀಲಾ ಗಟ್ಟಿಯಾಗಿ ಜೊತೆಗೆ ನಿಂತರು.
ಅಲ್ಲಿಂದ ಮುಂದೆ ಆಗಿದ್ದೆಲ್ಲ ಸಾರ್ಥಕತೆ ಮೂಡಿಸಿದ ಕೆಲಸ. ನಮ್ಮ ಅಭಿಯಾನದ ವಿಷಯವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆ, ಎರಡೇ ದಿನಗಳಲ್ಲಿ ಸಮಾನಮನಸ್ಕರು ಅಭಿಯಾನಕ್ಕೆ ಬೇಕಾದ ಹಣವನ್ನು ಒಟ್ಟು ಮಾಡಿದರು. ಕೇರಳ ಸರ್ಕಾರವು, ಪ್ರವಾಹದ ನಂತರ ಅಲ್ಲಿನ ಹೆಣ್ಣುಮಕ್ಕಳಿಗೆ 5000 ಮುಟ್ಟಿನ ಬಟ್ಟಲನ್ನು ಹಂಚಿದೆ. ಇಲ್ಲಿ ಕರ್ನಾಟಕದಲ್ಲಿ ನಾವು ಒಂದಷ್ಟು ಹೆಣ್ಣುಮಕ್ಕಳೇ ಸೇರಿ, 1000 ಬಟ್ಟಲನ್ನು ಹಂಚುವ ಯೋಜನೆ ಹಾಕಿಕೊಂಡೆವು. ಈಗಾಗಲೇ ಮುಕ್ಕಾಲು ಪಾಲು ಕೆಲಸ ಮಾಡಿದ್ದೇವೆ.
ಜಾಗೃತಿ ಯಾತ್ರೆ…: ಗದಗ ಜಿಲ್ಲೆಯ ರೋಣದಿಂದ ಪ್ರಾರಂಭಿಸಿ, ಮೈಸೂರು ಭಾಗದ ಎಚ್.ಡಿ.ಕೋಟೆ, ಕೊಡಗಿನ ಪೊನ್ನಂಪೇಟೆಯ ಹಳ್ಳಿಗಟ್ಟಿನ ಹಾಡಿಗಳು, ಮಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ, ಚಿಕ್ಕಮಗಳೂರಿನ ಮೂಡಿಗೆರೆ-ಬಿದರಳ್ಳಿ, ಮಧುಗುಂಡಿ, ಜಮಖಂಡಿಯ ರಬಕವಿ- ಬನಹಟ್ಟಿ, ಅಸ್ಕಿಗಳವರೆಗೆ ನಮ್ಮ ಯಾತ್ರೆಯಾಯಿತು. ಪ್ರವಾಹ ಸಂತ್ರಸ್ತ ಮಹಿಳೆಯರ ಬಳಿಗೆ ಮುಟ್ಟಿನ ಬಟ್ಟಲನ್ನು ತಲುಪಿಸುವುದರಲ್ಲಿ ಈ ಅಭಿಯಾನವು ನಮಗೆ ಕಟ್ಟಿಕೊಡುತ್ತಿರುವ ಅನುಭವ ದೊಡ್ಡದು. ಆ ಜನರ ಪ್ರೀತಿ ಹಾಗೂ ಜೀವನೋತ್ಸಾಹ ಕೊಡುತ್ತಿರುವ ಕಲಿಕೆಯೂ ಬಹು ದೊಡ್ಡದು. ಅಲ್ಲಿನ ಜನ ಅನಕ್ಷರಸ್ಥರು. ಇದನ್ನು ಸುಲಭವಾಗಿ ಒಪ್ಪಲಾರರು.
ನಗರವಾಸಿಗಳೇ ಇನ್ನೂ ಇದನ್ನು ಬಳಸುತ್ತಿಲ್ಲ. ಇನ್ನು ಅವರು ಬಳಸುವರೇ? ಎಂಬ ಪೂರ್ವಾಗ್ರಹಗಳೆಲ್ಲ ಸಂಪೂರ್ಣ ತಪ್ಪು ಎನ್ನುವುದಂತೂ ಅರಿವಾಯಿತು. ರೋಣದ ಹಂಚಿಕೆಯ ತಂಡದಲ್ಲಿದ್ದ, ಕೊಟ್ಟೂರಿನ ಗೆಳೆಯ ಕೊಟ್ರೇಶನ ಈ ಮಾತುಗಳೇ ಅದಕ್ಕೆ ಸಾಕ್ಷಿ- “ಮುಟ್ಟಿನ ಬಟ್ಟಲುಗಳನ್ನು ಬಳಸುವುದು ಹೇಗೆ? ಅವುಗಳು ಯಾವ ರೀತಿಯಲ್ಲಿ ಪರಿಸರಸೇ°ಹಿ ಎಂದು ತಿಳಿಹೇಳಿದಾಗ ಅವರು ಒಪ್ಪಿದ್ದನ್ನು ಕಂಡು, ನನಗೇ ಆಶ್ಚರ್ಯವಾಯಿತು. ನಿಜವಾಗಿಯೂ ಆ ತಾಯಂದಿರ ಹುರುಪು ಹೇಗಿತ್ತೆಂದರೆ, ಇದೇನೋ ಮ್ಯಾಜಿಕ್ ಇರಬೇಕು ಎನ್ನುವಷ್ಟರ ಮಟ್ಟಿಗೆ ಅವರ ಪ್ರತಿಕ್ರಿಯೆ ಮುಖದಲ್ಲಿ ಕಾಣುತ್ತಿತ್ತು’.
ನಾವು ಕಪ್ ನೀಡಿದ ಮರುದಿನವೇ ಅದನ್ನು ಬಳಸಿ, “ನೀವು ಕಪ್ ಕೊಟ್ಟಿದ್ದು ಭಾಳ ಚಲೋ ಆತ್ರಿ. ನನಗ ಇವತ್ತು ಹೆಂಗೆ ಕಳೀತು ಅನ್ನೋದೇ ತಿಳೀಲಿಲ್ರೀ. ಇಂಥ ಒಂದು ವಸ್ತು ಭೂಮಿ ಮ್ಯಾಗ ಇರೋದೇ ತಿಳ್ದಿರ್ಲಿಲ್ಲ ನೋಡ್ರೀ’ಎಂದು ಪ್ರತಿಕ್ರಿಯಿಸಿದ ಕುರುವಿನಕೊಪ್ಪದ ಶೋಭಾ ಮೆಣಸಗಿ ಅವರ ಮಾತುಗಳು ನಮ್ಮಲ್ಲಿ ಅದಮ್ಯ ವಿಶ್ವಾಸವನ್ನೂ, ಉತ್ಸಾಹವನ್ನೂ ತುಂಬಿದವು.
ಹಲವಾರು ಕೈಗಳು ಕೂಡಿವೆ: ನಮ್ಮ ಕೆಲಸದ ಬಗ್ಗೆ ತಿಳಿದು, ಸ್ವಯಂಪ್ರೇರಣೆಯಿಂದ ನಮ್ಮೊಂದಿಗೆ ಕೈಜೋಡಿಸಿದ ರೋಣದ ವೈದ್ಯ ಡಾ.ಹಾದಿಮನಿ, ಬನಹಟ್ಟಿಯ ಡಾ.ಸೌಮ್ಯ, ತೇರದಾಳದ ತಹಸೀಲ್ದಾರ ಮೆಹಬೂಬಿ, ಪ್ರಕಾಶಕ ಟಿ.ಎಸ್. ಗೊರವರ, ಸಾತ್ವಿಕ ರಂಗಪಯಣದ ನಯನ ಸೂಡ ಮತ್ತು ಬಳಗ, ಪೋಸ್ಟರ್‌ಗಳನ್ನು ಮಾಡಿ ಕೊಟ್ಟ ಗೆಳೆಯ ಸುನೈಫ್, ಜೊತೆಗೆ ನಿಂತ ವೈದ್ಯಕೀಯ ವಿದ್ಯಾರ್ಥಿಗಳು, ಉಚಿತವಾಗಿ ಪೋಸ್ಟರ್‌ಗಳನ್ನು ಜೆರಾಕ್ಸ್ ಮಾಡಿಕೊಟ್ಟ, ಬಸ್‌ನಲ್ಲಿ ಉಚಿತವಾಗಿ ಬಾಕ್ಸ್ ಗಳನ್ನು ಊರಿಂದೂರಿಗೆ ತಲುಪಿಸಿದ ಹೆಸರು ತಿಳಿಯದ ಗೆಳೆಯರು- ಇವರೆಲ್ಲರಿಗೂ ಈ ಶ್ರೇಯ ಸಲ್ಲಬೇಕು.
ಬಟ್ಟಲೆಡೆಗೆ ದಿಟ್ಟ ನಡಿಗೆ: “ಮುಟ್ಟು’ ಒಂದು ಗುಟ್ಟಿನ ವಿಷಯ. ಅದರ ಕಷ್ಟ- ಸುಖ, ದುಃಖ-ದುಮ್ಮಾನಗಳೇನೇ ಇದ್ದರೂ ಅದನ್ನು ನಮ್ಮೊಳಗೆ ನಾವೇ ಸಹಿಸಿಕೊಳ್ಳಬೇಕು. ಅದು ಮತ್ತೂಬ್ಬ ರೊಡನೆ ಹಂಚಿಕೊಳ್ಳುವ, ಮಾತಾಡುವ ವಿಷಯವೇ ಅಲ್ಲ ಎಂದು ಈಗಲೂ ಬಹಳಷ್ಟು ಜನ ನಂಬಿದ್ದಾರೆ. ಹೀಗಿರುವಾಗ, ಇದು ನಿಜಕ್ಕೂ ಗುಟ್ಟು ಮಾಡುವ ವಿಷಯವಲ್ಲ, ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ, ತನ್ಮೂಲಕ ಇಡೀ ಮನುಕುಲದ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಸಾರುವ ಉದ್ದೇಶ ನಮ್ಮದಿತ್ತು.
ಅದಕ್ಕೇ ಈ ಅಭಿಯಾನವನ್ನು “ಗುಟ್ಟಿನಿಂದ ಬಟ್ಟಲೆಡೆಗೆ ದಿಟ್ಟ ನಡಿಗೆ’ ಎಂದು ಹೆಸರಿಸಿದೆವು. ಹೀಗೆ ಗುಟ್ಟು ಮಾಡುವುದರಿಂದಲೇ, ಬಹು ಸುಲಭವಾಗಿ ಮತ್ತು ಆರೋಗ್ಯಕರವಾಗಿ ನಿಭಾಯಿಸಬಹುದಾದ ಮುಟ್ಟನ್ನು ಸಮಾಜ ಹೆಣ್ಣುಮಕ್ಕಳ ಪಾಲಿಗೆ ಒಂದು ಸಮಸ್ಯೆಯೇನೋ ಎಂಬಂತಾಗಿಸಿದೆ. ಇದನ್ನು ಹೆಚ್ಚು ಮುಕ್ತವಾಗಿ ಚರ್ಚಿಸುವ, ಹಂಚಿಕೊಳ್ಳುವ ಮುಖಾಂತರ ನಾವು ಇದರ ಬಗೆಗಿನ ಮೌಡ್ಯವನ್ನು ತೊಡೆದು ಹಾಕಬೇಕಿದೆ.
ಬಟ್ಟಲು ಖರೀದಿಸೋ ಮುನ್ನ…: ಉತ್ತಮ ಗುಣಮಟ್ಟದ ಮುಟ್ಟಿನ ಬಟ್ಟಲುಗಳ ಬೆಲೆ 600-2 ಸಾವಿರದವರೆಗೂ ಇರುತ್ತದೆ. ಅಗ್ಗದ ಕಪ್‌ಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತವಾದರೂ, ಅದನ್ನು ಬಳಸದಿರುವುದು ಉತ್ತಮ. ಮೆಡಿಕೇಟೆಡ್ ಸಿಲಿಕಾನ್‌ನಿಂದ ಮಾಡಲ್ಪಟ್ಟ, ಎಫ್ಡಿಎ ಸರ್ಟಿಫೈಡ್ ಕಪ್‌ಗಳನ್ನೇ ಖರೀದಿಸಿ. ಮೊದಲ ಬಾರಿಗೆ ಹೊಸ ಕಪ್ ಅನ್ನು ನೀರಿನಲ್ಲಿ ಹತ್ತು ನಿಮಿಷ ಕುದಿಸಿ, ಸ್ಟೆರಿಲೈಸ್ ಮಾಡಿ ಬಳಸಬೇಕು. ನಂತರ ಮುಟ್ಟು ಮುಗಿಯುವವರೆಗೂ ಬರೀ ನೀರಿನಲ್ಲಿ ಸ್ವಚ್ಛಗೊಳಿಸಿ ಬಳಸಬಹುದು. ನಂತರ, ತೊಳೆದು ತೆಗೆದಿಟ್ಟುಕೊಂಡರೆ, ಮುಂದಿನ ತಿಂಗಳು ಸ್ಟೆರಿಲೈಸ್ ಮಾಡಿ ಬಳಸಿದರಾಯ್ತು. ರಕ್ತಸ್ರಾವವನ್ನು ಗಮನಿಸಿ, ಐದಾರು ಗಂಟೆಗಳಿಗೊಮ್ಮೆ ಬದಲಿಸಬೇಕಾಗಬಹುದು.
ಒಂದು ರೂ.ಗೆ ಪ್ಯಾಡ್!: ಸ್ಯಾನಿಟರಿ ನ್ಯಾಪ್‌ಕಿನ್‌ಗಳು ದುಬಾರಿ ಎಂಬ ಕಾರಣದಿಂದ, ಮುಟ್ಟಿನ ದಿನಗಳಲ್ಲಿ ಬಟ್ಟೆ ಬಳಸುವ ಮಹಿಳೆಯರೂ ಇದ್ದಾರೆ. ಅವರಿಗಾಗಿ ಕೇಂದ್ರ ಸರ್ಕಾರ ಒಂದು ರೂ.ಗೆ ಸುವಿಧಾ ನ್ಯಾಪ್‌ಕಿನ್ ಅನ್ನು ನೀಡಲು ಮುಂದಾಗಿದೆ. ಜನೌಷಧ ಕೇಂದ್ರಗಳಲ್ಲಿ ಲಭ್ಯವಿದ್ದ ಈ ಪ್ಯಾಡ್‌ಗಳ ಬೆಲೆ ಮೊದಲು 2.50 ರೂ ಇತ್ತು!
* ಸಂಜ್ಯೋತಿ ವಿ.ಕೆ.