ಗೆಳತೀ, ಹುಷಾರು. ಎಲ್ಲೆಲ್ಲೂ ಇದ್ದಾರೆ ಅವರು…
ಪಾರಿವಾಳದ ಸುತ್ತ ಹದ್ದುಗಳ ಹಾರಾಟ
Team Udayavani, Dec 11, 2019, 6:00 AM IST
ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್ ಲೈಟ್ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ “ವಾಸನಾ’ ವ್ಯಕ್ತಿತ್ವದ ಅನಾವರಣ ಆಗುತ್ತದೆ. ಮೆಲ್ಲಗೆ ಅತ್ತಿತ್ತ ಇರುವ ಮಹಿಳಾ ಪ್ರಯಾಣಿಕರ ಮೇಲೆ ಕೈ ಹಾಕಲು ಪ್ರಯತ್ನ ಮಾಡುವುದು. ಅವರು ಅಕಸ್ಮಾತ್ ಮಲಗಿಬಿಟ್ಟಿದ್ದು, ಈ ಸ್ಪರ್ಶ ಅವರ ಗಮನಕ್ಕೆ ಬರಲಿಲ್ಲ ಅಂತಾದರೆ ಇನ್ನೂ ಮುಂದುವರೆಯುವುದು… ಹೀಗೆ. ಈ ವಿಕೃತಿಗೆ ವಯಸ್ಸಿನ ಮಿತಿ ಇಲ್ಲ.
ಮನೆಯಿಂದ ಹೊರಡುವಾಗ ಬಾಗಿಲಿಗೆ ಸರಿಯಾಗಿ ಬೀಗ ಹಾಕಿದ್ದೇವಾ ಅಂತ ಖಾತ್ರಿ ಪಡಿಸಿಕೊಳ್ಳುತ್ತೇವೆ. ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರೆ, ವಾಚ್‌ಮ್ಯಾನ್ ಸರಿಯಾಗಿ ಕೆಲಸ ಮಾಡುತ್ತಿ¨ªಾನಾ ಅಂತ ಕಣ್ಣಿಡುತ್ತೇವೆ. ಊರಿಗೆ ಹೊರಟರೆ, ಅಂದುಕೊಂಡ ವಸ್ತುಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡಿದ್ದೇವಾ? ಎಲ್ಲಾ ಬ್ಯಾಗುಗಳನ್ನು ತೆಗೆದುಕೊಂಡಿದ್ದೇವಾ ಅಂತ ಒಮ್ಮೆ ಪರೀಕ್ಷೆ ಮಾಡುತ್ತೇವೆ. ವಾಹನ ಏರಿದ ಬಳಿಕ, ಟಿಕೆಟ್ ಪರಿಶೀಲನೆ ಮಾಡುತ್ತೇವೆ, ಸೀಟ್ ನಂಬರ್ ಇತ್ಯಾದಿಗಳನ್ನು ಖಾತ್ರಿ ಪಡಿಸಿಕೊಳ್ಳುತ್ತೇವೆ. ದುಡ್ಡಿದೆಯಾ, ಚಿಲ್ಲರೆ ಇದೆಯಾ, ಫೋನು- ಚಾರ್ಜರು ಕೈಗೆ ಸಿಗುವಂತೆ ಇಟ್ಟುಕೊಂಡಿದ್ದೇವಾ ಅಂತ ಚೆಕ್ ಮಾಡುತ್ತೇವೆ. ಹೊರಟ ತಕ್ಷಣ ಮೆಸೇಜ್ ಹಾಕುತ್ತೇವೆ. ಇಲ್ಲವೇ ಕಾಲ್ ಮಾಡುತ್ತೇವೆ. ಹೋಗಬೇಕಿದ್ದ ಜಾಗ ತಲುಪಿದ ಸ್ವಲ್ಪ ಹೊತ್ತಿನಲ್ಲಿ ಮತ್ತದೇ ಪುನರಾವರ್ತನೆ.
ಇದೆಲ್ಲಾ ಯಾಕೆ ಮಾಡುತ್ತೇವೆ ಅಂದರೆ, ನಾವಿರುವ ಜಾಗ ಸುರಕ್ಷಿತವಾಗಿರಬೇಕು, ಮತ್ತು ಪ್ರಯಾಣಕ್ಕೆ ಹೊರಟರೆ, ಆ ಜಾಗಕ್ಕೆ ಹೋಗೇ ತೀರುತ್ತೇವೆ ಎನ್ನುವ ನಂಬಿಕೆಯನ್ನು ಪರೋಕ್ಷವಾಗಿಯಾದರೂ ಪೋಷಿಸಿಕೊಂಡಿರುತ್ತೇವೆ. ಇದು ಸಾಮಾನ್ಯ ಸಂಗತಿ. ಆದರೆ ಇಂಥ ನಂಬಿಕೆ ಎಷ್ಟೋ ಕಾಲದಿಂದಲೂ ಕೆಲವೊಂದು ವರ್ಗದ ಹೆಣ್ಣು ಮಕ್ಕಳ ಮಟ್ಟಿಗೆ ಪೊಳ್ಳಾಗುತ್ತಲೇ ಬಂದಿದೆ. ಹಳ್ಳಿಯಲ್ಲಿ ಪದೇ ಪದೆ ಶೋಷಣೆಗೆ ಒಳಗಾಗುವ ಹುಡುಗಿ/ಮಹಿಳೆ ಇರಬಹುದು, ಜಾತಿಯ ಕಾರಣಕ್ಕೆ ಸಂಪ್ರದಾಯಕ್ಕೆ ಬಲಿಯಾಗಿ ಮುತ್ತು ಕಟ್ಟಿಸಿಕೊಳ್ಳಬೇಕಾದ ಹೆಣ್ಣು ಮಗಳಿರಬಹುದು, ಶಾಸ್ತ್ರಗಳಲ್ಲಿ ಇನ್ನೊಬ್ಬಳ ನೋವಿಗೆ ಪರಿಹಾರ ಸಿಕ್ಕದೆ ಜೀವನ ದುರ್ಭರ ಆಗಿರಬಹುದು. ಶ್ರದ್ಧೆಯಿಂದ ಓದಿ-ಬರೆದು ಒಳ್ಳೆಯ ಕೋರ್ಸ್ ಸೇರಿ, ಆರ್ಥಿಕ ಸ್ವಾವಲಂಬನೆಯ ಕನಸು ಕಂಡು ಅದು ನನಸಾಗುವ ಹಾದಿಯಲ್ಲಿ ಬರೀ ಮುಳ್ಳು ತುಂಬಿದೆ ಎಂದು ಗೊತ್ತಾಗಿ ಅಧೀರಳಾಗಿರಬಹುದು, ಅಥವಾ ಹಳ್ಳಿ ಜೀವನದಲ್ಲಿ ಬದುಕಿಗೆ ಆಗುವಷ್ಟು ಅನ್ನ ಹುಟ್ಟುತ್ತಿಲ್ಲ ಎಂದು ಗೊತ್ತಾಗಿ ನಾಲ್ಕು ಪಾತ್ರೆ ಹೊತ್ತು ತಂದು ದೊಡ್ಡ ನಗರದಲ್ಲಿ ಕೆಲಸಕ್ಕೆ ಸೇರಿದರೂ, ಭರಿಸಲಾಗದ ಕೆಟ್ಟ ಕಣ್ಣುಗಳಿಗೆ ಬಲಿ ಕೂಡ ಆಗಿರಬಹುದು.
ಎಲ್ಲೆಲ್ಲೂ ನಡೆಯುತ್ತದೆ
ಬಸ್ಸಿನಲ್ಲಿ, ಆಟೋದಲ್ಲಿ, ರೈಲಿನಲ್ಲಿ, ಟ್ಯಾಕ್ಸಿಯಲ್ಲಿ, ವಿಮಾನದಲ್ಲಿ ಎಲ್ಲ ಕಡೆಯೂ ತೊಡೆ ಮೇಲೆ ಕೈ ಹಾಕಲು ಮಸಲತ್ತು ಮಾಡುವ, ಎದೆಗೆ ಉಜ್ಜಿಕೊಂಡು ಹೋಗುತ್ತಲೇ “ಅಕಸ್ಮಾತ್ ಹಾಗೆ ಆಯಿತು’ ಎಂದು ನಟಿಸುತ್ತಾ ವಿಕೃತ ಸುಖ ಅನುಭವಿಸುವ, ಕತ್ತಲಲ್ಲಿ ಅವಳ ಹಿಂಬಾಲಿಸಿ ಬಂದು ಅವಳ ಎದೆಯ ಮೇಲೆ ಕೈ ಹಾಕುವ, ಸಿನಿಮಾದಲ್ಲಿ ಕೂತು ಮೈ ಉಜ್ಜಲು ಅವಕಾಶ ಹುಡುಕುವ – ಹೀಗೆ ಅಸಹ್ಯಕ್ಕೆ ನಾನಾ ರೂಪ ಇದೆ. ಹೆಸರು ಒಂದೇ ಇದೆ. ಅದು ಈ ದೇಶಕ್ಕೆ ದೇಶವೇ ಹಂಬಲಿಸಿ ಪಡೆಯುವ -ಗಂಡು ಸಂತಾನ. ಇದರ ಅರ್ಥ, ಎಲ್ಲಾ ಗಂಡಸರೂ ಶೋಷಣೆ ಮಾಡುತ್ತಾರೆ ಅಂತ ಅಲ್ಲ. ಆದರೆ ಲೈಂಗಿಕ ಶೋಷಣೆ ಮಾಡುವವರ ಸಂಖ್ಯೆಯಲ್ಲಿ ಗಂಡಸರದ್ದೇ ಸಿಂಹಪಾಲು ಅಂದಮೇಲೆ, ಬೇಡ ಅಂದರೂ ಅದಕ್ಕೊಂದು ಸಾರ್ವಕಾಲಿಕತೆ ಬಂದುಬಿಡುತ್ತದೆ.
ಇವೆಲ್ಲವೂ ಎಂದೂ ಬದಲಾಗುವುದಿಲ್ಲ ಅಂತ ಒಮ್ಮೊಮ್ಮೆ ಅನ್ನಿಸುತ್ತೆ. ಭಂವರಿ ದೇವಿಯ ಬಗ್ಗೆ ಕೇಳಿದಾಗ ಹೋರಾಟಕ್ಕೆ ಅವಳು ತೆತ್ತ ಬೆಲೆ ಕಂಡು ಗಾಬರಿ ಆಗುತ್ತದೆ. ನಿರ್ಭಯಾ ಘಟನೆ ನಡೆದಾಗ, ನಗರಗಳಲ್ಲಿ ವಾಸಿಸುವ ಹೆಣ್ಣು ಮಕ್ಕಳ ಸರಳ ಆಸೆಗಳೂ ಕೂಡ ಹೀಗೆ ಅತ್ಯಾಚಾರ ಮತ್ತು ಅಪಾಯಕ್ಕೆ ಅವಕಾಶ ಮಾಡಿಕೊಡುತ್ತಿರುವ ಬಗ್ಗೆ ಚಿಂತೆ ಆಗುತ್ತದೆ. ಅದನ್ನು ಮರೆಯೋಣ ಅನ್ನುವಾಗಲೇ ಹೈದರಾಬಾದಿನಲ್ಲಿ ಎಳೆ ಹರೆಯದ ಹುಡುಗಿಯೊಬ್ಬಳನ್ನು ಅವಳ ತಮ್ಮನ ವಯಸ್ಸಿನ ಎಳೆ ಹುಡುಗರು ಹರಿದು ತಿಂದು ಸುಟ್ಟು ಹಾಕಿದ ಸುದ್ದಿ ಕಿವಿಗೆ ಬೀಳುತ್ತದೆ!
ಆಗ ಮನೆಮನೆಗಳಲ್ಲಿ ಹೆಣ್ಣು ಮಕ್ಕಳಿಗೆ ನಿರ್ಬಂಧಗಳು ಹೆಚ್ಚಾಗುತ್ತವೆ. “ಕತ್ತಲಾಗುವ ಮುನ್ನ ಬಾ’, “ಹುಡುಗರ ಜೊತೆ ಏನು ಸುತ್ತಾಟ ನಿಂದು?’, “ಟೀಮ್ ವಕೂì ಬೇಡ ಏನೂ ಬೇಡ. ಸುಮ್ಮನೆ ಕೂತ್ಕೊ, ಅದೇನಿದ್ದರೂ ಇಂಟರ್ನೆಟ್ಟಿನಲ್ಲಿ ಮಾಡಿಕೋ…’ ಹೀಗೆ ಬೇಲಿಗೆ ಒಂದೊಂದೇ ಮುಳ್ಳು ತಂತಿ ಏರುತ್ತಾ ಹೋಗುತ್ತದೆ.
ಹಾಗಂತ ಹೆಣ್ಣು ಮಕ್ಕಳೇನೂ ಮನೆಯಲ್ಲಿ ಕೂರುತ್ತಿಲ್ಲ. ಹೊರಗೆ ಹೋಗುತ್ತಲೇ ಇದ್ದಾರೆ, ಬ್ಯಾಗು-ಬಟ್ಟೆಬರೆ-ದುಡ್ಡು-ಕಾಸು- ಫೋನು ಅಂತ ಪ್ಯಾಕ್ ಮಾಡಿಕೊಂಡು ಮನೆಯಿಂದ ಹೊರಡುತ್ತಲೇ ಇದ್ದಾರೆ. ತಮಗೆ ಬೇಕಾದದ್ದನ್ನ ಸಾಧಿಸಿ ತಣ್ಣಗೆ ತಮ್ಮ ಸ್ಥಾನವನ್ನು ಅಷ್ಟಷ್ಟೇ ಇಂಚಿಂಚಾಗಿ ಭದ್ರಗೊಳಿಸಿಕೊಳ್ಳುತ್ತಲೇ ಇ¨ªಾರೆ. ಯಾಕೆ ಅಂದರೆ, ಅದೊಂಥರಾ ಬದುಕುವ ಹಟ ತಲೆ ಎತ್ತಿ ನಿಲ್ಲುತ್ತದೆ. ಸಾತ್ವಿಕ ಅನ್ನಿ, ಅಥವಾ ಕಠಿಣ ಅನ್ನಿ. ಮನೆಯಲ್ಲಿ ಇದ್ದರೂ ಅಷ್ಟೇ, ಹೊರಗೆ ಹೋದರೂ ಅಷ್ಟೇ ಹಣೆಬರಹ ಅನ್ನುವಾಗ, ಎಲ್ಲಿದ್ದರೇನು ಎನ್ನುವ ಒಂದು ಆಲೋಚನೆ ಇದ್ದರೂ ಇರಬಹುದು.
ಉದಾಹರಣೆಗೆ ಹೇಳುವುದಾದರೆ, ರಾತ್ರಿಯ ಬಸ್ ಪ್ರಯಾಣ ಗಂಡಸರಿಗೆ ತೀರಾ ಸರಳವಾದ ಮಾತಾದರೆ, ಒಬ್ಬಂಟಿ ಪ್ರಯಾಣಿಸುವ ಹೆಣ್ಣು ಮಕ್ಕಳಿಗೆ ಇದು ತೀರಾ ಅಧೀರರನ್ನಾಗಿಸುವ ವಿಷಯ. ಬಸ್ಸಿನ ಸೀಟು, ಸ್ಪೀಡು, ನೋಟ, ವಾಸನೆ ಎಲ್ಲವೂ ಒಂದು ಬಗೆಯ ವಾತಾವರಣವನ್ನು ಸೃಷ್ಟಿ ಮಾಡುತ್ತವೆ.
ಕತ್ತಲಾದರೆ ಸಾಕು…
ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್ ಲೈಟ್ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ “ವಾಸನಾ’ ವ್ಯಕ್ತಿತ್ವದ ಅನಾವರಣ ಆಗುತ್ತದೆ. ಮೆಲ್ಲಗೆ ಅತ್ತಿತ್ತ ಇರುವ ಮಹಿಳಾ ಪ್ರಯಾಣಿಕರ ಮೇಲೆ ಕೈ ಹಾಕಲು ಪ್ರಯತ್ನ ಮಾಡುವುದು. ಅವರು ಅಕಸ್ಮಾತ್ ಮಲಗಿಬಿಟ್ಟಿದ್ದು, ಈ ಸ್ಪರ್ಶ ಅವರ ಗಮನಕ್ಕೆ ಬರಲಿಲ್ಲ ಅಂತಾದರೆ ಇನ್ನೂ ಮುಂದುವರೆಯುವುದು… ಹೀಗೆ. ಈ ವಿಕೃತಿಗೆ ವಯಸ್ಸಿನ ಮಿತಿ ಇಲ್ಲ. ಹಾಗೆ ನೋಡಿದರೆ, ಲೈಂಗಿಕ ಅನುಭವಕ್ಕೆ ಇನ್ನೂ ಮುಖಾಮುಖೀಯಾಗದೆ ಇರುವ ಎಳೆ ಹುಡುಗರಿಗಿಂತ, ಮದುವೆ ಆಗಿ ಹೆಂಡತಿಯ ಸಾಮೀಪ್ಯವನ್ನು ಅನುಭವಿಸಿರುವ ನಾಲ್ಕು ಕತ್ತೆ ವಯಸ್ಸಿನ ಎಳೆ ಮುದುಕರೇ ಹೆಚ್ಚು ಕಾಟ ಕೊಡುವುದು. ಇವರನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದರೂ ಈ ರೀತಿಯ ಅನುಭವಗಳನ್ನು ದಕ್ಕಿಸಿಕೊಳ್ಳುವಲ್ಲಿ ಸಿದ್ಧಹಸ್ತರು.
ಅಕಸ್ಮಾತ್ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಗಲಾಟೆ ಮಾಡಿದರೆ, “ಅಯ್ಯೋ, ಇಲ್ಲಮ್ಮಾ. ನಿನ್ನ ವಯಸ್ಸಿನ ಮಗಳಿ¨ªಾಳೆ ನನಗೆ’ ಅಂದು ಹುಡುಗಿಯಲ್ಲೇ ಅಪರಾಧೀ ಪ್ರಜ್ಞೆ ಹುಟ್ಟುವಂತೆ ಹೇಳಿಬಿಡುತ್ತಾರೆ. ಒಂದು ಪಕ್ಷ ಸ್ವಲ್ಪ ವಯಸ್ಕ ಹೆಣ್ಣುಮಗಳಾಗಿದ್ದರೆ “ನೋಡಿ, ಮೇಡಂ, ಬಸ್ಸಿನ ಕುಲುಕಾಟಕ್ಕೆ ಅಕಸ್ಮಾತ್ ಕೈ ಬಡಿದಿರಬೇಕು. ಅದಕ್ಕೆ ಯಾಕಿಷ್ಟು ಅಪ್‌ಸೆಟ್ ಆಗ್ತಿರಿ’ ಅಂತ ಮುಗ್ಧತೆ ನಟಿಸುತ್ತಾರೆ. ಇದರಿಂದ ಅದ್ಯಾವ ತೃಷೆ ನೀಗುತ್ತದೋ, ದೇವರೇ ಬಲ್ಲ. ಇದರಿಂದ ಗಂಡಸರಿಗೆ ಏನು ಲಾಭ ಅಥವಾ ಅವರ ಯಾವ ಅವಶ್ಯಕತೆ ನೀಗುತ್ತದೆ ಎನ್ನುವುದನ್ನು ಒತ್ತಟ್ಟಿಗೆ ಇಡೋಣ. ಇದರಿಂದ ಹೆಣ್ಣು ಮಕ್ಕಳಿಗೆ ಏನಾಗುತ್ತದೆ ಗೊತ್ತಾ?
ಅಚ್ಚೊತ್ತುವ ಕಹಿ ನೆನಪು
ಈ ಅನುಭವ ಅವರ ಮನಸ್ಸಿನಲ್ಲಿ ಒಂದು ಭಯದ ರೂಪ ಪಡೆದು ಅಚ್ಚೊತ್ತಿಬಿಡುತ್ತದೆ. ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಿರುವಂತೆ ಅವರೊಳಗೊಂದು ಉದ್ವಿಗ್ನತೆಯ ಭಾವ ಹುಟ್ಟಿ ಎಲ್ಲಾ ಗಂಡಸರ ಬಗ್ಗೆ ದ್ವೇಷ ಹುಟ್ಟುತ್ತದೆ. ಇದನ್ನು ಯಾರ ಮುಂದಾದರೂ ಹೇಳಿಕೊಂಡರೆ ಸ್ವತಂತ್ರವಾಗಿ ಓಡಾಡುವ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಯಾರ ಮುಂದೂ ಹೇಳಿಕೊಳ್ಳಲಾಗದೆ ಬಹಳ ನೋವು, ಅಸಹಾಯಕತೆ, ಸಿಟ್ಟು ಎಲ್ಲವನ್ನೂ ಭರಿಸುತ್ತಾರೆ. ಇಂತಹ ಸಮಸ್ಯೆ ಎಲ್ಲಿಯವರೆಗೆ ಹೋಗಿ ಮುಟ್ಟುತ್ತದೆ ಎಂದರೆ, ಯಾರಾದರೂ ಗಂಡಸರು ಸಕಾರಣವಾಗಿಯೇ ಗೌರವಯುತವಾಗಿಯೇ ಹತ್ತಿರವಾಗಲು ಪ್ರಯತ್ನ ಪಟ್ಟರೆ ಆ ಹೆಣ್ಣುಮಗಳು ಅದನ್ನು ಸ್ವೀಕರಿಸುವ ಮನಃಸ್ಥಿತಿಯಲ್ಲೇ ಇರುವುದಿಲ್ಲ. ಈ ನಡವಳಿಕೆಗೆ ಇನ್ನೊಂದು ಆಯಾಮ ಇರಬಹುದು ಎಂದು ಗಂಡಿಗೂ ಅನ್ನಿಸುವುದಿಲ್ಲ. ಯಾಕೆಂದರೆ, ಅವರಿಗೆ ಈ ಬಗ್ಗೆ ಯಾರೂ ಮಾಹಿತಿ ಕೂಡ ಕೊಟ್ಟಿರುವುದಿಲ್ಲ. ಹಾಗಾಗಿ ಹೆಣ್ಣು ಮಕ್ಕಳನ್ನ ಅರ್ಥ ಮಾಡಿಕೊಳ್ಳೋದು ಕಷ್ಟ ಕಣ್ರೀ ಎನ್ನುವ, ಸಾಕಷ್ಟು ಲಘುವಾದ ಅಥವಾ ವಾಸ್ತವ ಕೂಡ ಎನ್ನಿಸುವ ಹೇಳಿಕೆಗಳು ಹುಟ್ಟುತ್ತವೆ.
ನಾವು ಮಾಡಬೇಕಿರುವುದು ಇಷ್ಟೇ. ಸರ್ಕಾರಗಳಿಂದ, ವ್ಯವಸ್ಥೆಯಿಂದ ಹೆಣ್ಣಿನ ರಕ್ಷಣೆಗೆ ಉತ್ತಮ ಕಾನೂನುಗಳನ್ನು ಹಕ್ಕಿನಿಂದ ಪಡೆಯಬೇಕಿದೆ. ಅದಕ್ಕೆ ಮಾಧ್ಯಮ, ನ್ಯಾಯಾಲಯ, ಪೊಲೀಸ್ ಇಲಾಖೆ ಎಲ್ಲರನ್ನೂ ಹೊಣೆಯಾಗಿಸಬೇಕಿದೆ. ಸಮಾಜವನ್ನು ಆರೋಗ್ಯದಿಂದ ಇಡುವಲ್ಲಿ ಎಲ್ಲರ ಕರ್ತವ್ಯ ಕೂಡ ಮುಖ್ಯ ಎನ್ನುವುದನ್ನು ಮನಗಂಡು, ನಮ್ಮ ಸುತ್ತಲಿನ ಎಲ್ಲಾ ಗಂಡು, ಹೆಣ್ಣು, ಭಿನ್ನ ಲಿಂಗೀಯರ ಜೊತೆ ಗೌರವದಿಂದ ನಡೆದುಕೊಳ್ಳಬೇಕಿದೆ.
ಏನಾದರೂ ಮಾಡಿ, ಸುಮ್ಮನಿರಬೇಡಿ…
ಹೆಣ್ಣು ಮಕ್ಕಳಲ್ಲಿ ಒಂದು ವಿನಂತಿ: ನಿಮಗೆ ಪುರುಷರಿಂದ ಕಿರಿಕಿರಿ ಆಗುವಂಥ ಅನುಭವವಾದರೆ, ಈ ಕೆಲಸ ಮಾಡಿದವರಿಗೆ ಅಲ್ಲೇ ಉಗಿದು ಛೀಮಾರಿ ಹಾಕಿ. ಬಸ್ಸಿನಲ್ಲಿರುವ ಇತರರೂ ನಿಮ್ಮ ಬೆಂಬಲಕ್ಕೆ ಬರಬಹುದು ಅಥವಾ ಬರದೇ ಇರಬಹುದು, ಆದರೆ ನಿಮ್ಮನ್ನು ಯಾರೂ ಪ್ರಶ್ನಿಸಲಾರರು. ಕಂಡಕ್ಟರ್ ಹತ್ತಿರ ದೂರು ಕೊಡಿ, ಸೀಟ್ ಬದಲಾಯಿಸಿಕೊಳ್ಳಿ. ಏನಾದರೂ ಮಾಡಿ, ಆದರೆ ಈ ಅನುಭವ ನಿಮ್ಮ ಮನಸ್ಸಿನಲ್ಲಿ ಭಯವಾಗಿ ಮಾರ್ಪಾಡಾಗದಂತೆ ನೋಡಿಕೊಳ್ಳಿ. ನಾಚಿಕೆ ಆಗಬೇಕಿರುವುದು ಮಾನಗೆಟ್ಟವರಿಗೇ ಹೊರತು ನಿಮಗಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.
ಬದಲಾವಣೆಗೆ ಮುಂದಾಗಿ….
ಗಂಡು ಮಕ್ಕಳಲ್ಲಿ ನನ್ನ ಪ್ರಾರ್ಥನೆ: ನಿಮ್ಮ ಕಣ್ಣಿಗೆ ಕಾಣಿಸದ ಎಷ್ಟೋ ನೋವು, ಕಷ್ಟಗಳು ಹೆಣ್ಣು ಮಕ್ಕಳಿಗೆ ಆಗಿರುತ್ತವೆ ಎನ್ನುವುದನ್ನು ದಯಮಾಡಿ ಅರಿತುಕೊಳ್ಳಿ. ನಿಮ್ಮ ಮನೆಯಲ್ಲಿ, ಸ್ನೇಹಿತರ ಬಳಗದಲ್ಲಿ ಯಾರೇ ಗಂಡಸರು ಹೆಂಗಸಿನೊಂದಿಗೆ ಅಶ್ಲೀಲವಾಗಿ, ಅಸಭ್ಯವಾಗಿ ನಡೆದುಕೊಂಡರೆ ದಯವಿಟ್ಟು ಖಂಡಿಸಿ. ಅಂತಹ ಗುಂಪಿನಿಂದ ದೂರವಾಗಿ. ಇದರಿಂದ ಮಾತ್ರ ಬದಲಾವಣೆ ಸಾಧ್ಯವೇ ಹೊರತು, ಎಲ್ಲಾ ಗಂಡಸರೂ ಹಾಗೇ ಇರಲ್ಲ ಕಣ್ರೀ, ನಾನಂತೂ ಎಂದೂ ಹಾಗೆ ಮಾಡಿಲ್ಲ ಎನ್ನುವ ವಾದದಿಂದ ಅಲ್ಲ. ಸಮಾಜಕ್ಕೆ ಎಲ್ಲಾ ಬಗೆಯ ಔಷಧಿಯ ಅವಶ್ಯಕತೆ ಇದೆ. ವ್ಯಾಧಿ ಕಂಡೂ ಸುಮ್ಮನಿದ್ದರೆ ಕೊಳಕು ಮನಸ್ಸಿನ, ನಡವಳಿಕೆಯಲ್ಲಿ ನಿಮ್ಮ ಪಾಲೂ ಸೇರಿ ಬಿಡುತ್ತದೆ. ಆಗ ಬಹುತೇಕ ಎಲ್ಲರೂ ಕೊಳಕರಂತೆಯೇ ಕಾಣಿಸುತ್ತಾರೆ. ಆಗ ನಾನು ಮುಗ್ಧ, ಒಳ್ಳೆಯವನು’ ಎಂದು ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲ.
-ಪ್ರೀತಿ ನಾಗರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.