ಸಾಮೆ ಅಕ್ಕಿಗೆ ಸಾಟಿಯಿಲ್ಲ!
Team Udayavani, Oct 24, 2018, 6:00 AM IST
ಸಾಮೆ ಅಕ್ಕಿ ಅಥವಾ ಲಿಟಲ್ ಮಿಲ್ಲೆಟ್, ಆರೋಗ್ಯಕಾರಿ ಸಿರಿಧಾನ್ಯಗಳಲ್ಲೊಂದು. ದೇಹದ ಕೆಟ್ಟ ಕೊಬ್ಬನ್ನು ತೆಗೆಯಲು, ತೂಕ ಕಡಿಮೆ ಮಾಡಲು, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಈ ಧಾನ್ಯ ಸಹಕಾರಿ. ಸಾಮೆ ಅಕ್ಕಿಯಿಂದ ಮಾಡಬಹುದಾದ ರುಚಿಕಟ್ಟಾದ ಕೆಲವು ರೆಸಿಪಿಗಳು ಇಲ್ಲಿವೆ.
1. ಸಾಮೆ ಅಕ್ಕಿ ಗೂಡಾನ್ನ (ಬೆಲ್ಲದ ಅನ್ನ)
ಬೇಕಾಗುವ ಸಾಮಗ್ರಿ: ಸಾಮೆ ಅಕ್ಕಿ-1 ಲೋಟ, ನೀರು- 2 ಲೋಟ, ಬೆಲ್ಲ- 1/2 ಲೋಟ, ತುಪ್ಪ- 1/2 ಲೋಟ, ಹಾಲು- 1/2 ಲೋಟ, ತೆಂಗಿನ ತುರಿ- 1/2 ಲೋಟ, ಏಲಕ್ಕಿ, ಗೋಡಂಬಿ, ಒಣ ದ್ರಾಕ್ಷಿ, ಉಪ್ಪು-ರುಚಿಗೆ.
ಮಾಡುವ ವಿಧಾನ: ಸಾಮೆ ಅಕ್ಕಿಯನ್ನು ತೊಳೆದು, 1 ಲೋಟ ಹಾಲು ಮತ್ತು 1ಲೋಟ ನೀರು ಹಾಕಿ ಬೇಯಿಸಿ. ಒಂದು ಪಾತ್ರೆಗೆ ಬೆಲ್ಲ ಹಾಗೂ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ. ಅದು ಕರಗಿ, ಕುದಿಯುವಾಗ ಬೇಯಿಸಿದ ಸಾಮೆ ಅಕ್ಕಿ ಹಾಕಿ, ಮತ್ತೂಮ್ಮೆ ಚೆನ್ನಾಗಿ ಕುದಿಸಿ. (ಆಗಾಗ ಸೌಟಿನಿಂದ ತಿರುವದಿದ್ದರೆ, ತಳ ಹಿಡಿಯುವ ಸಾಧ್ಯತೆ ಇರುತ್ತದೆ) ಈ ಮಿಶ್ರಣ ಗಟ್ಟಿಯಾಗುತ್ತಾ ಬಂದಂತೆ, ತುಪ್ಪ ಹಾಕಿ ಕೆಳಗಿಳಿಸಿ. ನಂತರ, ತೆಂಗಿನ ತುರಿ, ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ ಮಾತ್ತು ಗೋಡಂಬಿ ಹಾಕಿ ಅಲಂಕರಿಸಿ.
2. ಸಾಮೆ ಅಕ್ಕಿ ಪಾಯಸ
ಬೇಕಾಗುವ ಸಾಮಗ್ರಿ: ಸಾಮೆ ಅಕ್ಕಿ- 1/2 ಕಪ್, ಬೆಲ್ಲ-1/2 ಕಪ್, ತೆಂಗಿನ ತುರಿ- 1 ಕಪ್, ಏಲಕ್ಕಿ, ಗೋಡಂಬಿ ತುಣುಕು- 1 ದೊಡ್ಡ ಚಮಚ, ಒಣ ದ್ರಾಕ್ಷಿ- 1 ಮುಷ್ಟಿ, ತುಪ್ಪ- 1 ಚಮಚ.
ಮಾಡುವ ವಿಧಾನ: ಸಾಮೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ಬೇಯಿಸಿ. ಅದಕ್ಕೆ ಬೆಲ್ಲ ಸೇರಿಸಿ ಕುದಿಯಲು ಇಡಿ. ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ಹಾಕಿ ಅರೆದು, ಹಾಲನ್ನು ಹಿಂಡಿ ತೆಗೆದಿಟ್ಟುಕೊಳ್ಳಿ (ಎರಡು ಬಾರಿ ಅರೆದು, ಹಾಲು ಹಿಂಡಿ ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ). ಏಲಕ್ಕಿ ಪುಡಿ ಮಾಡಿ, ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ಈಗ ಬೆಲ್ಲದಲ್ಲಿ ಕುದಿಯುತ್ತಿರುವ ಸಾಮೆ ಅಕ್ಕಿಗೆ ಕಾಯಿ ಹಾಲು ಬೆರೆಸಿ, ಕುದಿಸಿ. 2 ನಿಮಿಷ ಕುದ್ದ ನಂತರ ಪಾಯಸ ಕೆಳಗಿಟ್ಟು, ಹುರಿದ ಗೋಡಂಬಿ, ದ್ರಾಕ್ಷಿ, ಏಲ್ಲಕ್ಕಿ ಪುಡಿ ಬೆರೆಸಿದರೆ, ಸಾಮೆ ಪಾಯಸ ಸಿದ್ಧ.
3. ಸಾಮೆ ಅಕ್ಕಿ ಖಾರದ ಕಿಚಡಿ
ಬೇಕಾಗುವ ಸಾಮಗ್ರಿ: ಸಾಮೆ ಅಕ್ಕಿ-1 ಕಪ್, ಹೆಸರು ಬೇಳೆ-1/2 ಕಪ್, ಸಾರಿನ ಪುಡಿ- 1 ದೊಡ್ಡ ಚಮಚ, ಹುಣಸೆ ರಸ- 1 ಚಮಚ, ಉಪ್ಪು- ರುಚಿಗೆ, ಕ್ಯಾರೆಟ್- 1, ದೊಡ್ಡ ಮೆಣಸಿನಕಾಯಿ- 1, ಬಟಾಣಿ-1/2 ಕಪ್, ತೆಂಗಿನ ತುರಿ- 1/4 ಕಪ್ (ಬೇಕಾದಲ್ಲಿ ಮಾತ್ರ), ತುಪ್ಪ-2 ಚಮಚ, ಎಣ್ಣೆ-1 ಚಮಚ, ಒಗ್ಗರಣೆಗೆ: ಸಾಸಿವೆ, ಉದ್ದಿನ ಬೇಳೆ, ಇಂಗು, ಅರಿಶಿನ ಪುಡಿ, ಕರಿಬೇವು.
ಮಾಡುವ ವಿಧಾನ: ಸಾಮೆ ಅಕ್ಕಿ ಹಾಗೂ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು, ಬೇರೆಬೇರೆಯಾಗಿ ಬೇಯಿಸಿಕೊಳ್ಳಿ. ಕ್ಯಾರೆಟ್, ಬಟಾಣಿ ಹಾಗೂ ದೊಡ್ಡ ಮೆಣಸಿನ ಕಾಯಿಯನ್ನು ಹೆಚ್ಚಿ ಹದವಾಗಿ ಬೇಯಿಸಿ. ಈಗ ಒಂದು ಪಾತ್ರೆಯಲ್ಲಿ, ಬೆಂದ ಸಾಮೆ ಅಕ್ಕಿ, ಹೆಸರು ಬೇಳೆ ಹಾಗೂ ತರಕಾರಿಗಳನ್ನು ಹಾಕಿ, ಅದಕ್ಕೆ ಉಪ್ಪು, ನೀರು, ಅರಿಶಿನ ಸೇರಿಸಿ ಕುದಿಸಿ. ನಂತರ ಹುಣಸೆ ರಸ ಹಾಗೂ ಸಾರಿನ ಪುಡಿ ಹಾಕಿ ಪುನಃ 3 ನಿಮಿಷ ಕುದಿಸಿ. ಸಾಸಿವೆ, ಉದ್ದಿನ ಬೇಳೆ, ಇಂಗು, ಕರಿಬೇವಿನ ಒಗ್ಗರಣೆ ಹಾಕಿ, ಕುದಿಯುತ್ತಿರುವ ಕಿಚಡಿಗೆ ಸೇರಿಸಿ. ತುಪ್ಪ ಹಾಗೂ ತೆಂಗಿನ ತುರಿ ಹಾಕಿ ಕೆಳಗಿಳಿಸಿ.
4. ಸಾಮೆ ಅಕ್ಕಿ ತೆಂಗಿನಕಾಯಿ ಅನ್ನ
ಬೇಕಾಗುವ ಸಾಮಗ್ರಿ: ಸಾಮೆ ಅಕ್ಕಿ-1 ಕಪ್, ನೀರು- 2 ಕಪ್, ತೆಂಗಿನ ತುರಿ- 1 ಕಪ್, ಕೆಂಪು ಮೆಣಸು-3, ಗೋಡಂಬಿ, ತುಪ್ಪ- 3 ಚಮಚ, ಉಪ್ಪು- ರುಚಿಗೆ, ಒಗ್ಗರಣೆಗೆ: ಸಾಸಿವೆ, ಉದ್ದಿನ ಬೇಳೆ, ಕರಿಬೇವು.
ಮಾಡುವ ವಿಧಾನ : ಸಾಮೆ ಅಕ್ಕಿಯನ್ನು ಚೆನ್ನಾಗಿ ತೊಳೆದು, 2 ಕಪ್ ನೀರು ಹಾಕಿ ಬೇಯಿಸಿ, ತಣ್ಣಗಾಗಲು ಬಿಡಿ. ಒಂದು ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ ಒಲೆಯ ಮೇಲಿಟ್ಟು, ಸಾಸಿವೆ, ಉದ್ದಿನ ಬೇಳೆ ಹಾಕಿ. ಸಾಸಿವೆ ಸಿಡಿದ ನಂತರ ಕೆಂಪು ಮೆಣಸಿನ ಕಾಯಿ ಹಾಕಿ ಹುರಿಯಿರಿ. ಅದಕ್ಕೆ ಗೋಡಂಬಿ, ಕರಿಬೇವಿನ ಎಸಳು ಸೇರಿಸಿ, ಮೆಲ್ಲಗೆ ಕೈಯಾಡಿಸಿ. ಅದಕ್ಕೆ ತಣ್ಣಗಾದ ಸಾಮೆ ಅನ್ನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲೆಸಿ. ಸಣ್ಣ ಉರಿಯಿರಲಿ. ಈಗ ತೆಂಗಿನ ತುರಿ ಸೇರಿಸಿ, ಉಳಿದ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ಪೌಷ್ಟಿಕವಾದ ಸಾಮೆ ಅಕ್ಕಿ ತೆಂಗಿನ ಕಾಯಿ ಅನ್ನ ರೆಡಿ.
ನಳಿನಿ ಸೋಮಯಾಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.