ಸ್ವಲ್ಪ ಬಾಯಿ ಖಾರ ಮಾಡಿಕೊಳ್ಳಿ!
Team Udayavani, Aug 14, 2019, 5:00 AM IST
“ಯಾವ ತರಕಾರಿ ಬೇಕಾದ್ರೂ ತಿನ್ನಬಹುದು. ಆದರೆ, ಆ ಎಲೆಕೋಸು ಮಾತ್ರ ಇಷ್ಟವಾಗೋದಿಲ್ಲ’ ಅಂತ ಹೇಳುವವರಿದ್ದಾರೆ. ಎಲೆಕೋಸಿನ ಸಾಂಬಾರು, ಪಲ್ಯ ಅವರಿಗೆ ಇಷ್ಟವಾಗದಿರಬಹುದು. ಆದ್ರೆ, ಎಲೆಕೋಸಿನಿಂದ ಬಜ್ಜಿ, ವಡೆ ಮಾಡಿದರೆ, ಬೊಂಬಾಟಾಗಿರುತ್ತದೆ. ಇನ್ನು, ಕಹಿ ಕಹಿ ರುಚಿಯ ಹಾಗಲಕಾಯಿಯಿಂದಲೂ ಬಜ್ಜಿ ತಯಾರಿಸಬಹುದು. ಈ ಶ್ರಾವಣದಲ್ಲಿ, ಹೇಳದೇ ಕೇಳದೇ ಸುರಿಯುವ ಮಳೆ ಮತ್ತು ಚಳಿಯನ್ನೂ ಹಿತ ಅನ್ನಿಸುವಂತೆ ಮಾಡಲು, ಮನೆಯಲ್ಲಿಯೇ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಖಾರದ ತಿನಿಸುಗಳು ಇಲ್ಲಿವೆ.
1. ಎಲೆಕೋಸು ಬಜ್ಜಿ
ಬೇಕಾಗುವ ಸಾಮಗ್ರಿ: ಎಲೆಕೋಸಿನ ಪದರಗಳು- ಐದಾರು, ಒಂದು ಕಪ್ ಕಡಲೆ ಹಿಟ್ಟು, ಒಂದು ದೊಡ್ಡ ಚಮಚ ಅಕ್ಕಿಹಿಟ್ಟು, ಅಚ್ಚ ಮೆಣಸಿನ ಪುಡಿ, ಓಂ ಕಾಳು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲಿಗೆ ಎಲೆಕೋಸನ್ನು ಪದರ ಪದರವಾಗಿ ಬಿಡಿಸಿ, ನೀರಿನಲ್ಲಿ ಚೆನ್ನಾಗಿ ತೊಳೆದು, ಒರೆಸಿ, ಗಂಟಿನ ಆಚೀಚೆಯ ಪದರಗಳನ್ನು ಆಯತಾಕಾರದ ಭಾಗಗಳನ್ನಾಗಿ ಕತ್ತರಿಸಿಟ್ಟುಕೊಳ್ಳಿ. ನಂತರ, ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನೂ ನೀರು ಹಾಕಿ ಗಟ್ಟಿಯಾಗಿ ಕಲಸಿ. ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಕಾಯಲು ಇಡಿ. ಎಣ್ಣೆ ಬಿಸಿಯಾಗುತ್ತಲೇ, ಕತ್ತರಿಸಿದ ಪದರಗಳನ್ನು ಒಂದೊಂದಾಗಿ ಖಾರದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ, ಕೆಂಬಣ್ಣಕ್ಕೆ ಬರುವವರೆಗೆ ಕರಿಯಿರಿ.
2. ಕ್ಯಾಬೇಜ್ ಸ್ಟಿಕ್ಸ್
ಬೇಕಾಗುವ ಸಾಮಗ್ರಿ: ಎಲೆಕೋಸಿನ ಪದರಗಳು- ಐದಾರು, ಒಂದು ಕಪ್ ಕಡಲೆಹಿಟ್ಟು, ಅಚ್ಚ ಮೆಣಸಿನ ಪುಡಿ, ಇಂಗು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲಿಗೆ ಎಲೆಕೋಸಿದ ಪದರಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಒರೆಸಿ, ಎಳೆಯ ಪದರಗಳನ್ನು ಸಣ್ಣಗೆ ಉದ್ದನೆ ಕಡ್ಡಿಗಳಂತೆ ಕತ್ತರಿಸಿಟ್ಟುಕೊಳ್ಳಿ. ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ನೀರು ಹಾಕಿ ಗಟ್ಟಿಯಾಗಿ ಕಲಸಿ. ಬಾಣಲೆಯಲ್ಲಿ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಕಾಯಲು ಇಡಿ. ಎಣ್ಣೆ ಬಿಸಿಯಾಗುತ್ತಲೇ, ಕಡ್ಡಿ ಪದರಗಳನ್ನು ಒಂದೊಂದಾಗಿ ಖಾರದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ, ಕೆಂಬಣ್ಣಕ್ಕೆ ಬರುವವರೆಗೆ ಕರಿದರೆ, ಗರಿಗರಿಯಾದ ಕ್ಯಾಬೇಜ್ ಸ್ಟಿಕ್ಸ್ ಸವಿಯಲು ಸಿದ್ಧ.
3. ಕ್ಯಾಬೇಜ್ ಖಾರದ ವಡೆ (ಶಾಲೋ ಫ್ರೈ )
ಬೇಕಾಗುವ ಸಾಮಗ್ರಿ: ಹೆಸರುಕಾಳು- 1 ಕಪ್, ಕಡಲೇ ಕಾಳು- 1/2 ಕಪ್, ಸಣ್ಣಗೆ ಹೆಚ್ಚಿದ ಹೂಕೋಸು- ಅರ್ಧ ಕಪ್, ಶುಂಠಿ- ಒಂದಿಂಚು, ಹಸಿರುಮೆಣಸಿನಕಾಯಿ- 5, ಇಂಗು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಹೆಸರುಕಾಳು ಹಾಗೂ ಕಡಲೆಕಾಳನ್ನು ಚೆನ್ನಾಗಿ ತೊಳೆದು, ನೀರಲ್ಲಿ ನೆನೆಸಿ ಮೊಳಕೆಯೊಡೆಸಿ. ನಂತರ, ನೀರು ಹಾಕದೆಯೇ ಕುಕ್ಕರ್‌ನಲ್ಲಿ ಒಂದು ಸೀಟಿ ಕೂಗಿಸಿ. ತಣಿದ ನಂತರ, ಅದರ ಜೊತೆಗೆ ಶುಂಠಿ, ಹಸಿರುಮೆಣಸಿನಕಾಯಿ, ಉಪ್ಪು, ಸ್ವಲ್ಪ ಇಂಗು ಸೇರಿಸಿ ನೀರು ಹಾಕದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಹೂಕೋಸನ್ನು ಸೇರಿಸಿ ಚೆನ್ನಾಗಿ ಕಲೆಸಿ. ಸಣ್ಣ ಸಣ್ಣ ವಡೆಯಾಕಾರದಲ್ಲಿ ತಟ್ಟಿ, ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಎರಡು ಬದಿ ಕೆಂಪಾಗುವವರೆಗೆ ಬೇಯಿಸಿದರೆ ಕ್ಯಾಬೇಜ್ ಖಾರದ ಉಂಡೆ ಸಿದ್ಧ. ಇದನ್ನು ಸಾಸ್ ಅಥವಾ ಕಾಯಿ ಚಟ್ನಿಯೊಂದಿಗೆ ಸವಿಯಬಹುದು.
4. ಹಾಗಲಕಾಯಿ ಬಜ್ಜಿ
ಬೇಕಾಗುವ ಸಾಮಗ್ರಿ: ಎಳೆಯ ಹಾಗಲಕಾಯಿ- ಐದಾರು, ಒಂದು ಕಪ್ ಕಡಲೆಹಿಟ್ಟು, ಒಂದು ದೊಡ್ಡ ಚಮಚ ಅಕ್ಕಿಹಿಟ್ಟು, ಅಚ್ಚ ಮೆಣಸಿನ ಪುಡಿ, ಓಂ ಕಾಳು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು, ಒರೆಸಿ ವೃತ್ತಾಕಾರದ ಬಿಲ್ಲೆಗಳಾಗಿ ಕತ್ತರಿಸಿ. ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ನೀರು ಹಾಕಿ, ಗಟ್ಟಿಯಾಗಿ ಕಲಸಿಡಿ. ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಕಾಯಲಿಟ್ಟು, ಎಣ್ಣೆ ಬಿಸಿಯಾಗುತ್ತಲೇ, ಹಾಗಲಕಾಯಿ ಬಿಲ್ಲೆಗಳನ್ನು ಖಾರದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ, ಕೆಂಬಣ್ಣಕ್ಕೆ ಬರುವವರೆಗೆ ಕರಿಯಿರಿ.
5. ಮೆಂತ್ಯೆ ಸೊಪ್ಪಿನ ಖಾರದುಂಡೆ
ಬೇಕಾಗುವ ಸಾಮಗ್ರಿ: ಕಡಲೆಬೇಳೆ- ಒಂದು ಕಪ್, ತೆಂಗಿನತುರಿ- ಕಾಲು ಕಪ್, ಮೆಂತ್ಯೆ ಸೊಪ್ಪು, ಶುಂಠಿ, ಹಸಿರು ಮೆಣಸಿನಕಾಯಿ, ಇಂಗು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ನೀರಲ್ಲಿ 2-3 ಗಂಟೆಗಳ ಕಾಲ ನೆನೆಸಿ. ನೆನೆದ ಬೇಳೆಯ ಜೊತೆಗೆ ತೆಂಗಿನ ತುರಿ, ಮೆಂತ್ಯೆ ಸೊಪ್ಪು, ಶುಂಠಿ, ಹಸಿರುಮೆಣಸಿನಕಾಯಿ, ಸ್ವಲ್ಪ ಇಂಗು, ಉಪ್ಪು, ಸೇರಿಸಿ ನೀರು ಹಾಕದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಇಡ್ಲಿ ತಟ್ಟೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿದರೆ ಮೆಂತ್ಯೆ ಸೊಪ್ಪಿನ ಖಾರದ ಉಂಡೆ ಸಿದ್ಧ.
-ಕೆ.ವಿ.ರಾಜಲಕ್ಷ್ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.