ಚಳಿಗಾಲಕ್ಕೆ ಆರೋಗ್ಯಕರ ಖಾದ್ಯಗಳು
Team Udayavani, Nov 17, 2017, 7:10 PM IST
ನವಂಬರ್-ದಶಂಬರ್ ತಿಂಗಳ ಚಳಿಗಾಲದಲ್ಲಿ ನೆಲಗಡಲೆ, ನೆಲ್ಲಿಕಾಯಿ, ಗೆಣಸು, ಅಮಟೆಕಾಯಿ, ಬಾಳೆಕಾಯಿ, ಬಾಳೆದಿಂಡು, ಆಲೂಗಡ್ಡೆ, ಸುವರ್ಣಗಡ್ಡೆ, ಕಡಲೆ ಕಾಳು, ಬೂದುಗುಂಬಳ ಇತ್ಯಾದಿಗಳ ಖಾದ್ಯ ಸೇವನೆಯಿಂದ ಆರೋಗ್ಯ ಕಾಪಾಡಬಹುದು. ಇಲ್ಲಿವೆ ಕೆಲವು ಖಾದ್ಯಗಳನ್ನು ತಯಾರಿಸುವ ವಿಧಾನ.
ಬೂದುಗುಂಬಳಕಾಯಿ ಸಾಸಿವೆ
ಬೇಕಾಗುವ ಸಾಮಗ್ರಿ: ಸಿಪ್ಪೆ ತೆಗೆದ ಬೂದುಕುಂಬಳ ಹೋಳು- 3 ಕಪ್, ತೆಂಗಿನ ತುರಿ-2 ಕಪ್, ಸಾಸಿವೆ- 2 ಚಮಚ, ಹಸಿಮೆಣಸಿನ ಕಾಯಿ-3, ಎಣ್ಣೆ ಒಗ್ಗರಣೆಗೆ- 2 ಚಮಚ, ಕರಿಬೇವಿನ ಎಸಳು-2, ರುಚಿಗೆ ಉಪ್ಪು , ಜೀರಿಗೆ-1 ಚಮಚ, ಹುಣಸೆಹಣ್ಣು ಗೋಲಿಗಾತ್ರ.
ತಯಾರಿಸುವ ವಿಧಾನ: ಬೂದುಗುಂಬಳಕ್ಕೆ ಸ್ವಲ್ಪ ನೀರು ಹಾಕಿ ಉಪ್ಪು ಹಾಕಿ ಬೇಯಿಸಿಡಿ. ಎಣ್ಣೆಯಲ್ಲಿ ಹಸಿಮೆಣಸಿನ ಕಾಯಿ ಹುರಿದು ತೆಗೆಯಿರಿ. ತೆಂಗಿನತುರಿ, ಹಸಿಮೆಣಸಿನಕಾಯಿ, ಹುಣಸೆಹಣ್ಣು ಹಾಕಿ ರುಬ್ಬಿ ತೆಗೆಯುವ ಮೊದಲು ಒಂದು ಚಮಚ ಸಾಸಿಸೆ ಹಾಕಿ ತಿರುವಿ ಬೇಯಿಸಿದ ಬೂದುಗುಂಬಳಕ್ಕೆ ಹಾಕಿ ಕುದಿಸಿ. ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನ ಸೊಪ್ಪು , ಜೀರಿಗೆ ಒಗ್ಗರಣೆ ಮಾಡಿ ಕುಂಬಳಕ್ಕೆ ಹಾಕಿ ಮುಚ್ಚಿರಿ. (ಬೇಕಾದರೆ ಅರಸಿನ ಹುಡಿ ಹಾಕಬಹುದು). ಊಟಕ್ಕೆ, ದೋಸೆಯೊಂದಿಗೆ ಸವಿಯಬಹುದು.
ಬೂದುಗುಂಬಳ ಸಿಪ್ಪೆಯ ತಾಳು (ಪಲ್ಯ)
ಬೇಕಾಗುವ ಸಾಮಗ್ರಿ: ಬೂದುಗುಂಬಳ ಸಿಪ್ಪೆ ಸ್ವಲ್ಪ , ಆಲೂಗಡ್ಡೆ- 2, ತೆಂಗಿನ ತುರಿ-1/4 ಕಪ್, ಉಪ್ಪು ರುಚಿಗೆ, ಎಣ್ಣೆ, ಸಾಸಿವೆ, ಒಗ್ಗರಣೆ ಸೊಪ್ಪು, ಒಣಮೆಣಸಿನ ಕಾಯಿ-2.
ತಯಾರಿಸುವ ವಿಧಾನ: ಬೂದುಗುಂಬಳ ಸಿಪ್ಪೆ , ಆಲೂಗಡ್ಡೆ ಸಪೂರ ತುಂಡರಿಸಿ ತೊಳೆದಿಡಿ. ಬಾಣಲೆಯಲ್ಲಿ ಇಲ್ಲವೆ ಕುಕ್ಕರ್‌ನಲ್ಲಿ ಎಣ್ಣೆ ಹಾಕಿ ಸಾಸಿವೆ, ಒಗ್ಗರಣೆ ಸೊಪ್ಪು ಹಾಕಿ ಒಣಮೆಣಸಿನ ಕಾಯಿ ಚೂರು ಹಾಕಿ ಒಗ್ಗರಣೆ ಮಾಡಿ ತುಂಡರಿಸಿಟ್ಟ ಕುಂಬಳ ಸಿಪ್ಪೆ, ಆಲೂಗಡ್ಡೆ , ಉಪ್ಪು, ತೆಂಗಿನತುರಿ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ. ಆರೋಗ್ಯಕರ ಪಲ್ಯ ತಯಾರು.
ಅಲಸಂಡೆ, ಶೇಂಗಾ ಬೀಜದ ತಾಳು (ಪಲ್ಯ)
ಬೇಕಾಗುವ ಸಾಮಗ್ರಿ: ಅಲಸಂಡೆ- 250 ಗ್ರಾಂ, ಶೇಂಗಾ ಬೀಜ-50 ಗ್ರಾಂ, ಎಣ್ಣೆ- 2 ಚಮಚ, ಸಾಸಿವೆ-1 ಚಮಚ, ಒಣಮೆಣಸಿನಕಾಯಿ- 3, ತೆಂಗಿನತುರಿ- 2 ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಶೇಂಗಾ ಬೀಜ ನೀರಿನಲ್ಲಿ ಎರಡು ಗಂಟೆ ನೆನೆಸಿಡಿ. ಅಲಸಂಡೆಕಾಯಿ ಚಿಕ್ಕ ಚಿಕ್ಕದಾಗಿ ತುಂಡರಿಸಿಡಿ. ಕುಕ್ಕರ್‌ನಲ್ಲಿ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಒಗ್ಗರಣೆ ಮಾಡಿ ಅಲಸಂಡೆ, ಶೇಂಗಾ ಬೀಜ, ತೆಂಗಿನ ತುರಿ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಮುಚ್ಚಿ ಎರಡು ಸೀಟಿ ತೆಗೆಯಿರಿ. ಊಟಕ್ಕೆ, ದೋಸೆ, ಚಪಾತಿಯೊಂದಿಗೆ ರುಚಿಕರ ತಾಳು ಸಿದ್ಧ.
ಬಾಳೆದಿಂಡಿನ ಮೊಸರು ಬಜ್ಜಿ
ಬೇಕಾಗುವ ಸಾಮಗ್ರಿ: ತುಂಡರಿಸಿದ ಬಾಳೆದಿಂಡು- 2 ಕಪ್, ಹಸಿಮೆಣಸಿನ ಕಾಯಿ- 2, ದಪ್ಪ ಮೊಸರು- 1 ಕಪ್, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಬಾಳೆದಿಂಡಿಗೆ ಉಪ್ಪು ಹಾಕಿ ಬೇಯಿಸಿಡಿ. ತಣಿದ ನಂತರ ಮೊಸರು, ಹಸಿಮೆಣಸಿನಕಾಯಿ ಚೂರು ಹಾಕಿ ಚೆನ್ನಾಗಿ ಬೆರೆಸಿ ಫ್ರಿಜ್‌ನಲ್ಲಿಡಿ. ಊಟದ ಹೊತ್ತಿಗೆ ತೆಗೆದು ಸವಿಯಿರಿ. ಮೂತ್ರಕೋಶದ ಕಲ್ಲು ನಿವಾರಣೆಗೆ ಉತ್ತಮ ಆಹಾರ.
ಕಡಲೆಕಾಳಿನ ಸುಕ್ಕ
ಬೇಕಾಗುವ ಸಾಮಗ್ರಿ: ಕಡಲೆಕಾಳು- 1 ಕಪ್, ನೀರುಳ್ಳಿ ಚೂರು- 1 ಕಪ್, ಒಣಮೆಣಸಿನಕಾಯಿ 5-6, ತೆಂಗಿನ ತುರಿ- 2 ಕಪ್, ಕೊತ್ತಂಬರಿ- 2 ಚಮಚ, ಜೀರಿಗೆ-1 ಚಮಚ, ಲವಂಗ- 1, ಚೆಕ್ಕೆ- 1 ಇಂಚು, ಉಪ್ಪು ರುಚಿಗೆ, ಹುಣಸೆಹಣ್ಣು ಗೋಲಿಗಾತ್ರ.
ತಯಾರಿಸುವ ವಿಧಾನ: ಕಡಲೆಕಾಳನ್ನು ಹಿಂದಿನ ದಿನ ನೆನೆಸಿಡಿ. ಮರುದಿನ ತೆಂಗಿನತುರಿ ಪರಿಮಳ ಬರುವವರೆಗೆ ಹುರಿದಿಡಿ. ಕೊತ್ತಂಬರಿ, ಜೀರಿಗೆ, ಲವಂಗ, ಚಕ್ಕೆ ಸ್ವಲ್ಪ ಹುರಿಯಿರಿ. ಒಣಮೆಣಸಿನ ಕಾಯಿ ಹುರಿದು ತೆಗೆಯಿರಿ. ತೆಂಗಿನ ತುರಿ, ಹುಣಸೆಹಣ್ಣು, ಒಣಮೆಣಸಿನಕಾಯಿ, ಸಾಂಬಾರ ಜೀನಸು ಸ್ವಲ್ಪ ದರಗಾಗಿ ರುಬ್ಬಿರಿ. ಬೇಯಿಸಿಟ್ಟ ಕಡಲೆಕಾಳಿಗೆ ರುಬ್ಬಿದ ಮಸಾಲೆ, ಉಪ್ಪುಹಾಕಿ ಕುದಿಸಿರಿ. ಸ್ವಲ್ಪ ನೀರುಳ್ಳಿಯ ಒಗ್ಗರಣೆ ಮಾಡಿ ಕಡಲೆಕಾಳಿಗೆ ಹಾಕಿ ಮುಚ್ಚಿಡಿ. ಅನ್ನದೊಂದಿಗೆ, ಚಪಾತಿ, ಪೂರಿ, ದೋಸೆಯೊಂದಿಗೆ ಆರೋಗ್ಯದಾಯಕ, ಸ್ವಾದಿಷ್ಟ ಕಡಲೆಕಾಳು ಸವಿಯಿರಿ.
ಎಸ್. ಜಯಶ್ರೀ ಶೆಣೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.