ಕೃಷ್ಣಾವತಾರ ತಂದ ಫಜೀತಿ
ಅಮ್ಮನ ಲಿಪ್‌ಸ್ಟಿಕ್ ದ್ವೇಷ
Team Udayavani, Sep 25, 2019, 5:04 AM IST
ತಮ್ಮ ಲಿಪ್‌ಸ್ಟಿಕ್ ಬಳಿದುಕೊಂಡು ನಿಂತಿರಲು, ನಾನು ಒಳಬರಲು, ಅಮ್ಮ ಬಾಗಿಲು ತಟ್ಟಲೂ ಸರಿ ಹೋಯ್ತು. ತಮ್ಮನನ್ನು ಗಮನಿಸದ ನಾನು ಸಡನ್ನಾಗಿ ಬಾಗಿಲು ತೆರೆದೆ. ಅಮ್ಮ, ತಮ್ಮನನ್ನು ನೋಡಿದವಳೇ ಬೆಚ್ಚಿಬಿದ್ದು, ಅವನತ್ತ ಧಾವಿಸಿ ಆತನನ್ನು ಮುಟ್ಟಿ ನೋಡಿ, ಏನು ಮಾಡಿಕೊಂಡಿ? ಏನಿದು? ಅಂತ ಕಿರುಚಿದಳು.
ಆಗ ನಾನು 6ನೇ ತರಗತಿಯಲ್ಲಿದ್ದೆ. ತಮ್ಮ 1ನೇ ತರಗತಿಯಲ್ಲಿದ್ದ. ಆಗಿಂದಲೂ ನನಗೆ ಕೃಷ್ಣನ ವೇಷ ತೊಡುವ ಸ್ಪರ್ಧೆ ಎಂದರೆ ಭಾರೀ ಇಷ್ಟ. ಸ್ಪರ್ಧೆ ನೋಡಲು ಹೋಗುವುದಲ್ಲದೆ, ಅಲ್ಲಿ ಬಂದಿರುವ ಕೃಷ್ಣ ವೇಷಧಾರಿ ಮಕ್ಕಳನ್ನು ಮುದ್ದಿಸಿ ಬರುತ್ತಿದ್ದೆ. ನೋಡಲು ಬೆಣ್ಣೆ ಕೃಷ್ಣನಂತೆಯೇ ಇದ್ದ ತಮ್ಮನಿಗೂ ಕೃಷ್ಣನ ವೇಷ ಹಾಕೋಣ ಎಂದು ಅಮ್ಮನಿಗೆ ಅದೆಷ್ಟು ಬಾರಿ ದುಂಬಾಲು ಬಿದ್ದಿದ್ದೇನೋ. ಆದರೆ, ಅಮ್ಮ ಒಮ್ಮೆಯೂ ಆ ಕುರಿತು ಮನಸ್ಸೇ ಮಾಡಿರಲಿಲ್ಲ. ಕೊನೆಗೊಂದಿನ, ನಾನೇ ಅವನಿಗೆ ಕೃಷ್ಣನ ವೇಷ ಹಾಕುತ್ತೇನೆ ಅಂತ ತೀರ್ಮಾನಿಸಿದೆ.
ಸಂತೆಗೆ ಹೋಗುವಾಗ ಅಮ್ಮ ನಮ್ಮಿಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದಳು. ಆ ಸಮಯಕ್ಕಾಗಿ ಹೊಂಚು ಹಾಕಿದ್ದೆ. ಅದಕ್ಕೂ ಮುನ್ನ, ಕೃಷ್ಣ ವೇಷ ಹಾಕಿಸಿಕೊಳ್ಳುವಂತೆ ತಮ್ಮನಿಗೆ ಬ್ರೈನ್‌ವಾಶ್ ಮಾಡಿದ್ದೆ. ಕಡೆಗೂ ಗುರುವಾರ ಬಂತು. ಅಮ್ಮ ಸಂತೆಗೆ ಹೋದಳು. ಅವಳು ವಾಪಸ್ ಬರುವುದರೊಳಗೆ ತಮ್ಮನಿಗೆ ಕೃಷ್ಣನ ವೇಷ ಹಾಕಿ, “ನಿನ್ನಿಂದ ಆಗದ್ದನ್ನು ನಾನು ಮಾಡಿದೆ’ ಅಂತ ಅಮ್ಮನಿಗೆ ಸರ್‌ಪ್ರೈಸ್ ಕೊಡಬೇಕಿತ್ತು.
ಅಮ್ಮ ಹೊರಗೆ ಹೊರಟಿದ್ದೇ ತಡ, ನೋಟ್‌ಬುಕ್‌ನ ರಟ್ಟನ್ನೇ ಕಿರೀಟ, ತೋಳುಬಂದಿ ಆಕಾರಕ್ಕೆ ಕತ್ತರಿಸಿ, ಅದಕ್ಕೆ ಚಿನರಿ ಪೇಪರ್ ಮೆತ್ತಿ, ದಾರ ಕಟ್ಟಿ ಹೇಗೋ ಒಟ್ರಾಸಿ ತೋಳುಬಂದಿ, ಕಿರೀಟ ತಯಾರಿಸಿದೆ. ಮುಂದಿನ ಕಾರ್ಯಕ್ರಮ, ಅಲಂಕಾರ! ಅವನ ಚಡ್ಡಿಗೆ ಬಿಳಿ ಟವೆಲ್ ಸುತ್ತಿದೆ. ನನ್ನ ಬಳಿ ಶಾಲೆ ವಾರ್ಷಿಕೋತ್ಸವಕ್ಕೆಂದು ತಂದಿದ್ದ ಸರ, ಸೊಂಟದ ಪಟ್ಟಿ, ಬೈತಲೆ ಬೊಟ್ಟು, ಗೆಜ್ಜೆ…ಅಂತ ಏನೆಲ್ಲ ಇತ್ತೋ, ಎಲ್ಲವನ್ನೂ ಒಂದೊಂದಾಗಿ ಹಾಕುತ್ತಾ ಹೋದೆ. ಅಕ್ಕ ಏನೋ ಘನಕಾರ್ಯ ಮಾಡುತ್ತಿದ್ದಾಳೆ ಅಂತ ಅವನೂ ಶಾಂತಚಿತ್ತನಾಗಿ ಸಹಕರಿಸುತ್ತಿದ್ದ. ವಸ್ತ್ರಾಭರಣ ಹಾಕಿ, ಕೈಗೆ ಸಿಕ್ಕಷ್ಟು ಕೂದಲು ಸೇರಿಸಿ ಜುಟ್ಟು ಕಟ್ಟಿ, ನಾನೇ ತಯಾರಿಸಿದ ಕಿರೀಟ, ತೋಳುಬಂದಿಯನ್ನು ಪ್ರಯಾಸದಿಂದ ಅವನಿಗೆ ಕಟ್ಟಿದೆ. ನವಿಲುಗರಿಯೊಂದೇ ಮಿಸ್ಸಿಂಗು! ನವಿಲುಗರಿ ಬದಲು ಗರಿಯಂತೆ ಕಾಣುವ ಎಲೆ/ ಹೂವನ್ನು ಸಿಕ್ಕಿಸುವುದು ಅಂತ ಮೊದಲೇ ಪ್ಲಾನ್ ಮಾಡಿದ್ದೆ.
“ಸ್ವಲ್ಪವೂ ಅಲಗಾಡಬೇಡ, ಹೀಗೇ ನಿಂತಿರು…’ ಅಂತ ತಮ್ಮನಿಗೆ ಸೂಚಿಸಿ, ಹೂವು ಕೀಳಲು ಹಿತ್ತಲಿಗೆ ಹೋದೆ. ಆಗಬಾರದ ಕೆಲಸವಾಗಿದ್ದು ಆಗಲೇ!. ಸರ, ಬಳೆ ಇಟ್ಟಿದ್ದ ಡಬ್ಬಿಯಲ್ಲಿ ಅಮ್ಮನಿಗೆ ಕಾಣದಂತೆ ಒಂದು ಕಡುಗೆಂಪು ಬಣ್ಣದ ಲಿಪ್‌ಸ್ಟಿಕ್ ಇರಿಸಿದ್ದೆ. ಅದು ಹೇಗೋ ತಮ್ಮನ ಕಣ್ಣಿಗೆ ಬಿದ್ದು, ಅದನ್ನೆತ್ತಿಕೊಂಡು ಮೈಕೈಗೆಲ್ಲಾ ಬಳಿದುಕೊಂಡಿದ್ದ.
ನನ್ನಮ್ಮ ಮಹಾನ್ ಲಿಪ್‌ಸ್ಟಿಕ್ ದ್ವೇಷಿ! ಲಿಪ್‌ಸ್ಟಿಕ್ ಹಚ್ಚುವ ಮಕ್ಕಳು ಜೀವನದಲ್ಲಿ ಮುಂದೆ ಬರುವುದಿಲ್ಲ ಅಂತ ಆಕೆ ಸ್ಟ್ರಾಂಗ್ ಆಗಿ ನಂಬಿದ್ದಳು. ಡ್ಯಾನ್ಸು, ಹಾಡು, ನಾಟಕ ಅಂತ ಚೂಟಿಯಾಗಿದ್ದ ನನಗೆ ಒಮ್ಮೆಯೂ ಲಿಪ್‌ಸ್ಟಿಕ್ ಹಚ್ಚುತ್ತಿರಲಿಲ್ಲ. ಆದರೂ ನನ್ನ ಬಳಿ ಲಿಪ್‌ಸ್ಟಿಕ್ ಹೇಗೆ ಬಂತು ಅಂತಾನ? ಇಂಥದ್ದೇ ಪರಿಸ್ಥಿತಿ ನನ್ನ ಕಸಿನ್ ಮನೆಯಲ್ಲಿಯೂ ಇದ್ದಿದ್ದರಿಂದ ಆಕೆ ಅವಳ ಲಿಪ್‌ಸ್ಟಿಕ್ ಅನ್ನು ನನಗೆ ಕೊಟ್ಟಿದ್ದಳು. ಅದನ್ನು ಅಮ್ಮನ ಕಣ್ಣಿಗೆ ಕಾಣದಂತೆ ಕಾಪಾಡಿದ್ದೆ.
ಹಾಂ, ತಮ್ಮ ಲಿಪ್‌ಸ್ಟಿಕ್ ಬಳಿದುಕೊಂಡು ನಿಂತಿರಲು, ನಾನು ಒಳಬರಲು, ಅಮ್ಮ ಬಾಗಿಲು ತಟ್ಟಲೂ ಸರಿ ಹೋಯ್ತು. ತಮ್ಮನನ್ನು ಗಮನಿಸದ ನಾನು ಸಡನ್ನಾಗಿ ಬಾಗಿಲು ತೆರೆದೆ. ಅಮ್ಮ, ತಮ್ಮನನ್ನು ನೋಡಿದವಳೇ ಬೆಚ್ಚಿಬಿದ್ದು, ಅವನತ್ತ ಧಾವಿಸಿ ಆತನನ್ನು ಮುಟ್ಟಿ ನೋಡಿ, ಏನು ಮಾಡಿಕೊಂಡಿ? ಏನಿದು? ಅಂತ ಕಿರುಚಿದಳು. ನೆಲದ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕತ್ತರಿ, ರಟ್ಟು ನೋಡಿ ನಾನೇ ಏನೋ ಮಾಡಿದ್ದೀನಿ ಎಂದು ನನ್ನತ್ತ ತಿರುಗಿ, ಪ್ರಶ್ನೆಗಳ ಸುರಿಮಳೆಗೈದಳು. ಅಮ್ಮನ ಗಾಬರಿ ನೋಡಿ, ತಾನೇನೋ ತಪ್ಪು ಮಾಡಿದ್ದೀನಿ ಅಂತ ತಮ್ಮನೂ ಅಳಲು ಶುರುಮಾಡಿದ. ಅಯ್ಯೋ… ಲಿಪ್‌ಸ್ಟಿಕ್ ತಿಪ್ಪೆ ಸೇರುತ್ತಲ್ಲಾ ಅಂತ ನಾನೂ ಅಳಲು ಶುರುಮಾಡಿದೆ. ಅಮ್ಮ ಕುಸಿದು ಹೋದಳು. ಕಡೆಗೂ ನಾನು ಅಳುತ್ತಲೇ “ಲಿಪ್‌ಸ್ಟಿಕ್ ಬಿಸಾಡಬೇಡಮ್ಮಾ’ ಅಂತ ಅಂಗಲಾಚಿದೆ. ಒಂದೇ ಕ್ಷಣಕ್ಕೆ ಇಲ್ಲಿ ನಡೆದಿರುವ ಎಲ್ಲಾ ಸೀನ್‌ಗಳೂ ತಿಳಿದವಳಂತೆ ಅಮ್ಮ “ಏನು ಗಾಬರಿಪಡಿಸಿದಿರೋ ನೀವು’ ಅಂತ ಗದರುತ್ತಾ, ಇಬ್ಬರಿಗೂ ಲಘುವಾಗಿ ಏಟು ಕೊಟ್ಟಳು. ಲಿಪ್‌ಸ್ಟಿಕ್ ಎಲ್ಲಿಂದ ಸಿಕ್ತು ಅಂತ ಪೂರ್ವಾಪರ ವಿಚಾರಿಸಿ, “ಕೊಡಿಲ್ಲಿ ನಾನೇ ಎತ್ತಿಡ್ತೀನಿ ‘ ಅಂತ ಅದನ್ನು ತೆಗೆದುಕೊಂಡಳು. ಕೊನೆಗೂ ಅದು ಯಾವ ತಿಪ್ಪೆಗೆ ಸೇರಿತು ಅನ್ನೋ ಸುಳಿವೂ ನನಗೆ ಸಿಗಲಿಲ್ಲ.
-ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.