ಅವಳ ಮಳೆ ಹಾಡು
ಬದಲಾದ ಅವಳು, ಬದಲಾಗದ ಕಾಲ...
Team Udayavani, Aug 6, 2019, 5:35 AM IST
ಬೆಳಗ್ಗೆ ಉಂಡ ಹಬೆಯಾಡುವ ಗಂಜಿ ಊಟ, ಗಟ್ಟಿ ಚಟ್ನಿ, ಕೆನೆಹಾಲಿಗೆ ಹೆಪ್ಪು ಹಾಕಿದ ಮೊಸರಿನಿಂದ ಬಂದ ತಾಕತ್ ಪೂರ್ತಿ ಕೊಡೆ ಹಾರದಂತೆ ಗಟ್ಟಿ ಮಾಡುವಲ್ಲೇ ಖಾಲಿಯಾಗುತ್ತಿತ್ತು. ಪಾಠದ ಚೀಲವನ್ನು ಕಂಕುಳಲ್ಲಿರಿಸಿ, ಕೈಗಳನ್ನು ಹತ್ತಿರ ತಂದು, ತನ್ನನ್ನು ಹಾಗೂ ಚೀಲವನ್ನು ರಕ್ಷಿಸುವ ಬಗೆ ಒಂಥರಾ ಆತ್ಮರಕ್ಷಣೆಗೆ ಪೀಠಿಕೆ ಬರೆದಂತಿರುತ್ತಿತ್ತು!
ಹೊರಗೆ ಧೋ ಎಂದು ಸುರಿವ ಮಳೆ. ಒಳಗೆ ಚಳಿಯ ತಲ್ಲಣ. ಡಬ್ಬದಲ್ಲಿ ಬೆಚ್ಚಗೆ ಇರಿಸಿದ ಹಪ್ಪಳ ತೆಗೆದು, ಹುರಿದು ಕುರುಕುರನೆ ತಿನ್ನುವ ತವಕ.. ಮುಂಗಾರು ಮಳೆ ಹಾಡಿನ ಗುನುಗುವಿಕೆಯೊಂದಿಗೆ ಅವಳದೇ ಕತೆಗಳು ನೆನಪಾಗುತ್ತಿವೆ, ಮತ್ತೆ ಮತ್ತೆ ಬಾಲ್ಯದ ಪಾಡುಗಳು ನೆನಪಾಗುತ್ತಿವೆ..
ಅಕ್ಕ ಪಕ್ಕದ ಮಕ್ಕಳೊಂದಿಗೆ ಶಾಲೆಗೆ ಹೋಗುವಾಗ ಅಮ್ಮ ಜಾಗ್ರತೆ ಹೇಳುತ್ತಾ ಹೇಳುತ್ತಾ ಶಾಲೆಯ ಅರ್ಧ ದಾರಿಯವರೆಗೆ ಬರುತ್ತಿದ್ದಳು. ಎಚ್ಚರಿಕೆ ಮಾತುಗಳ ಪೈಕಿ, “ನೀರಿನಲ್ಲಿ ಆಡಬೇಡ..ಜಾಗ್ರತೆ’ ಅನ್ನುವುದನ್ನೇ ಅಮ್ಮ ಮತ್ತೆ ಮತ್ತೆ ಹೇಳುತ್ತಿದ್ದಳು. ಅಮ್ಮ, ತಿರುಗಿ ಮನೆಗೆ ಹೋಗುವಾಗ ಅವಳು, “ಅಮ್ಮಾ, ಹೋಗುತ್ತಾ ಜಾಗ್ರತೆ’ ಅಂತ ಹೇಳುತ್ತಾ, ಅಮ್ಮನ ಬಗ್ಗೆ ಅಕ್ಕರೆಯ ಕಾಳಜಿ ತೋರಿಸುತ್ತಿದ್ದಳು.
ಶಾಲೆ ತಲುಪುವುದು ತಡವಾದರೂ ಅಡ್ಡಿ ಇಲ್ಲ, ಹೆಚ್ಚು ಮಳೆ ಬಿದ್ದು ಬಟ್ಟೆ ಒದ್ದೆ ಆದರೆ ಸಾಕು, ಮೇಷ್ಟ್ರು ಮನೆಗೆ ನಡೆಯಲು ಹೇಳುತ್ತಾರೆ. ಒದ್ದೆ ಚೀಲದ ರಫ್ ಪುಸ್ತಕದ ಹಾಳೆಯೊಂದನ್ನು ಹರಿದು ದೋಣಿ ಮಾಡಿ, ಬಂಡೆಯ ಮೇಲಿನಿಂದ ಹರಿದು ಕೆಳ ಜಾರುವ, ಸ್ಫಟಿಕದಂಥ ನೀರಿನಲ್ಲಿ ಹಾಕಿ, ಕೈಯಿಂದ ಹುಟ್ಟು ಹಾಕಿ ನೂಕುತ್ತಿದ್ದಂತೆ, ಕೆಳಕೆಳಗೆ ಹರಿವಿನೊಂದಿಗೆ ಹೋಗುವ ದೋಣಿ ಯಾನವನ್ನು ನೋಡಿ ಮತ್ತೂಂದು ದೋಣಿ ತಯಾರಾಗುತ್ತಿತ್ತು. ರಫ್ ಬುಕ್‌ನ ಕೊನೆ ಹಾಳೆ ಮುಗಿಯುವಷ್ಟರಲ್ಲಿ ಹಾಯಿ ದೋಣಿಗಳು ಹಾಯಾಗಿ ನೀರಿನಲ್ಲಿ ನಲಿದಾಡುತ್ತಿದ್ದವು.
ನಾಲ್ಕನೆಯ ತರಗತಿಯವರೆಗಿನ ಬಯಲಿನ ಶಾಲೆಯ ಆ ಏರಿಯಾದಲ್ಲಿ ಶಾಲೆ ಬಿಟ್ಟರೆ, ರೊಯ್ಯನೆ ಬೀಸುವ ಮಳೆ ಗಾಳಿ ಮತ್ತು ಕೊಡೆ ಹಿಡಿದ ಅವಳು ಮಾತ್ರ.. ಗಾಳಿಗೆ ಹಾರಿ ಹೋಗುವ ಕೊಡೆಯನ್ನು ಹಿಡಿದುಕೊಳ್ಳಲು ಪಟ್ಟ ಪಾಡು ಅವಳಿಗೇ ಗೊತ್ತು.. ಬೆಳಗ್ಗೆ ಉಂಡ ಹಬೆಯಾಡುವ ಗಂಜಿ ಊಟ, ಗಟ್ಟಿ ಚಟ್ನಿ, ಕೆನೆಹಾಲಿಗೆ ಹೆಪ್ಪು ಹಾಕಿದ ಮೊಸರಿನಿಂದ ಬಂದ ತಾಕತ್ ಪೂರ್ತಿ ಕೊಡೆ ಹಾರದಂತೆ ಗಟ್ಟಿ ಮಾಡುವಲ್ಲೇ ಖಾಲಿಯಾಗುತ್ತಿತ್ತು. ಪಾಠದ ಚೀಲವನ್ನು ಕಂಕುಳಲ್ಲಿರಿಸಿ, ಕೈಗಳನ್ನು ಹತ್ತಿರ ತಂದು, ತನ್ನನ್ನು ಹಾಗೂ ಚೀಲವನ್ನು ರಕ್ಷಿಸುವ ಬಗೆ ಒಂಥರಾ ಆತ್ಮರಕ್ಷಣೆಗೆ ಪೀಠಿಕೆ ಬರೆದಂತಿರುತ್ತಿತ್ತು!
ಮನೆಯ ಹುಲ್ಲಿನ ಮಾಡಿನಿಂದ ಕೈ ತುಂಬ ಬಳೆ ಹಾಕಿದ್ದ ಮುಂಗೈಯನ್ನು ಮಳೆಹನಿಗಳಿಗೆ ಹಿಡಿದಾಗ ಒಂಥರಾ ಕಚಗುಳಿಯಿಡುವ ಅನುಭವದ ಅನುಭೂತಿಯನ್ನು ವಿವರಿಸಲಾಗದು. ಅರೆ ಕ್ಷಣ ಕಣ್ಣುಮುಚ್ಚಿ ಆ ಅನುಭೂತಿಯನ್ನು ಅಸ್ವಾದಿಸುವಾಗ, ಮೈಗೊಮ್ಮೆ ಕುಳಿರ್ಗಾಳಿ ಸೋಕಿದಂಥ ರೋಮಾಂಚನ.. ಕೈ ಹೊರಗೆಯೇ ಇರಿಸಿ, ಮಳೆ ಹನಿಗಳ ಲಾಸ್ಯವನ್ನು ಸವಿಯುತ್ತಲೇ ಇರುವುದೆಂದರೆ ಒಂಥರಾ ಖುಷಿ ಅವಳಿಗೆ..
ಸ್ಟೀಲ್ ಗ್ಲಾಸನ್ನು ತಂದು ಹುಲ್ಲಿನ ಕಡ್ಡಿಗಳಿಂದ ಇಳಿಯುವ ಧಾರೆ ನೀರಿಗೆ ಹಿಡಿದರೆ, ಹುಲ್ಲಿನ ಕಂದು ಮಿಶ್ರಿತ ಬಣ್ಣವೂ ಸೇರಿದ ಆ ನೀರು ಅವಳ ಪಾಲಿನ ಆಟಕ್ಕೆ ಹಾಲು ಹಾಕದ ಕಾಫಿಯಿದ್ದಂತೆ. ಅಪ್ಪ ಅಮ್ಮನಿಗೆ ಅದನ್ನೇ “ಕಾಫಿ ಕುಡಿಯಿರಿ’ ಅಂತ ಕೊಡುತ್ತಿದ್ದದ್ದು, ಅವರೂ ಸಂಭ್ರಮದಿಂದ ಅದನ್ನು ಕುಡಿದಂತೆ ಮಾಡುತ್ತಿದ್ದುದೆಲ್ಲವೂ ಅವಳ ಪಾಲಿಗೆ ಮರೆಯಲಾಗದ ನೆನಪುಗಳು…
ಜತೆಯವರೊಂದಿಗೆ ಮಳೆಯಲ್ಲಿ ನಡೆಯುವಾಗ ಕೊಡೆ ತಿರುಗಿಸುತ್ತಾ ಅದರ ನೀರನ್ನು ಬೇರೆಯವರಿಗೆ ಸಿಡಿಸಿ, ಅವರಿಂದ ಗದರಿಸಿಕೊಂಡರೂ ಸುಮ್ಮನಾಗದೆ ಮತ್ತೆ ನೀರು ಚಿಮುಕಿಸುವುದು, ಗುಡ್ಡ ಬೆಟ್ಟದಿಂದ ನೀರು ಸಣ್ಣ ಸಣ್ಣ ಝರಿಗಳಾಗಿ ಬರುವಲ್ಲಿ ಪುಟ್ಟ ಪಾದಗಳನ್ನು ಹಿಡಿದು ಚಪ್ಪಲಿ ಅದರಲ್ಲಿ ಹೋಗುವಂತೆ ಮಾಡುವುದು, ಒಂಟಿ ಚಪ್ಪಲಿಯಲ್ಲೇ ನಡೆ ಇನ್ನು ಅಂತ ಕೇಳಿಸಿಕೊಳ್ಳುವುದು… ಅವಳ ಕಿತಾಪತಿಗಳು ಒಂದೇ ಎರಡೇ?
ತೋಟದ ಬದಿಯಲ್ಲಿ ಹಬ್ಬಿದ ಹಸಿರು ಹುಲ್ಲಿನ ಬುಡದಲ್ಲಿ ಇಳಿದು ನಿಂತ ಕಡ್ಡಿಗಳಲ್ಲಿ ಕಾಣುವ ಸ್ಪಟಿಕದಂತೆ ಶುಭ್ರವಾಗಿರುವ ಕಣ್ ಕಡ್ಡಿ. ಅದನ್ನು ಕಿತ್ತು ಕಣ್ಣಿಗಿರಿಸುವಾಗ ಸಿಗುವ ಆ ಕ್ಷಣದ ಸುಖ… ಉಫ್, ಪದಗಳಲ್ಲಿ ಹೇಗೆ ಹೇಳುವುದು?.. ಸ್ಲೇಟು ಉಜ್ಜಲು ನೀರುಕಡ್ಡಿಗಳನ್ನು ಶೇಖರಿಸುತ್ತಿದ್ದುದು, ಗುಡ್ಡ ಗುಡ್ಡ ಓಡಿ ಮಳೆಗಾಲದಲ್ಲಿ ಬಿಡುವ ಕುಂಟಂಗಲಿ (ನೇರಳೆ) ಹಣ್ಣುಗಳನ್ನು ಊಟದ ಬಾಕ್ಸ್‌ನಲ್ಲಿ ತುಂಬಿಸಿ ತರುತ್ತಿದ್ದುದು, “ಕುಂಟಂಗಿಲ ಹಣ್ಣು ತಿಂದ್ಯಾ? ನಾಳೆ ಜ್ವರ ಹಿಡ್ಕೊಳ್ಳುತ್ತೆ’ ಅಂತ ಅಮ್ಮ ರೇಗಿದ್ರೆ, ಆ ಅಂತ ಬಾಯಿ ತೆರೆದು, ನೇರಳೆ ಬಣ್ಣದ ನಾಲಿಗೆ ಹೊರಚಾಚಿ ತೋರಿಸುತ್ತಿದ್ದುದು…
ಈಗ, ಅದೇ ಹುಡುಗಿ ಬೆಳೆದು, ದೊಡ್ಡವಳಾಗಿದ್ದಾಳೆ. ಮದುವೆಯಾಗಿ, ಮಕ್ಕಳಾಗಿವೆ. ಮಳೆಗಾಲದಲ್ಲಿ ಮಗನ ಕೈ ಹಿಡಿದು, ಶಾಲೆಗೆ ತಂದು ಬಿಡುತ್ತಾಳೆ. ಅವನೇನಾದರೂ ನೀರಿಗಿಳಿದ್ರೆ ಭಯಪಡ್ತಾಳೆ, ಗಾಳಿಗೆ ಕೊಡೆ ಹಾರಿ ಹೋಗಿ ಮಗನ ಮೈ ಒದ್ದೆಯಾದರೆ ಅಂತ ರೇನ್‌ಕೋಟ್ ಕೊಡಿಸಿದ್ದಾಳೆ… ತನ್ನ ಮಕ್ಕಳ ಬಗ್ಗೆ ಅತಿ ಜಾಗ್ರತೆ ಮಾಡುತ್ತಾಳೆ. ಕಂಡು ಕೇಳದ ಜ್ವರಕ್ಕೆ ಭಯಪಡುತ್ತಾಳೆ, ಮುಂಜಾಗ್ರತೆ ವಹಿಸುತ್ತಾಳೆ… ಕೊನೆಗೆ, ತನಗೆ ಸಿಕ್ಕಿದ್ಯಾವುದೂ ಈ ಕಾಲದವರಿಗೆ ಸಿಗುವುದಿಲ್ಲ ಅಂತ ವ್ಯಥೆಯನ್ನೂ ಪಡ್ತಾಳೆ. ಬದಲಾಗಿದ್ದು ತಾನಾ, ಕಾಲವಾ ಅಂತ ಅರ್ಥವಾಗದೆ, ತಾರಸಿಯಲ್ಲಿ ಮೈ ನೆನೆಯದಂತೆ ನಿಂತು ಸುರಿವ ಮಳೆಯನ್ನು ದಿಟ್ಟಿಸುತ್ತಾಳೆ.
– ರಜನಿ ಭಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.