ನವರಾತ್ರಿಯ ನವ ಸಂಭ್ರಮ
ಹಬ್ಬಕ್ಕೂ ಸಿಕ್ಕಿತು ಹೈಟೆಕ್ ಸ್ಪರ್ಶ...
Team Udayavani, Sep 25, 2019, 5:31 AM IST
ನವರಾತ್ರಿಯ ಸಡಗರಕ್ಕೆ ಉಳಿದಿರುವುದು ನಾಲ್ಕೇ ದಿನ. ಈಗಾಗಲೇ ಮನೆಮನೆಗಳಲ್ಲೂ ಹಬ್ಬದ ತಯಾರಿ ಶುರುವಾಗಿದೆ. ದೇವಿಯನ್ನು ಅಲಂಕರಿಸುವುದು, ಗೊಂಬೆಗಳನ್ನು ಕೂರಿಸುವುದು, ಹೊಸಬಟ್ಟೆ ಧರಿಸಿ ಸಂಭ್ರಮಿಸುವುದು, ಕಡೆಗೆ- ಎಲ್ಲ ಸಂದರ್ಭದ ಫೋಟೊ ತೆಗೆದು, ಅದನ್ನು ಫೇಸ್‌ಬುಕ್‌ಗೆ ಹಾಕಿ ಸಂಭ್ರಮಿಸುವುದು…ಹಬ್ಬದ ಆಚರಣೆಯಲ್ಲಾಗಿರುವ ಬದಲಾವಣೆ ಇಷ್ಟೇ…
ಹಬ್ಬವೆಂದರೆ ಸಂಭ್ರಮ. ಬದುಕನ್ನು ಸಂಭ್ರಮಿಸಲೆಂದೇ ಮನುಷ್ಯ ಹಬ್ಬಗಳನ್ನು ಹುಟ್ಟು ಹಾಕಿರಬೇಕು. ಹಬ್ಬಗಳಿಲ್ಲದಿದ್ದರೆ ಬದುಕು ನೀರಸ. ಭಾರತೀಯರು ಬದುಕನ್ನು ಸಂಭ್ರಮಿಸಿದಷ್ಟು ಬೇರೆ ದೇಶದವರು ಸಂಭ್ರಮಿಸುವುದಿಲ್ಲ. ಹಾಗಾಗಿಯೇ ತಿಂಗಳಿಗೆ ಒಂದಾದರೂ ಹಬ್ಬಗಳಿರುತ್ತವೆ ನಮಗೆ.
ಲಕ್ಷ್ಮಿಯ ರೂಪದಲ್ಲಿರುವ ನವದುರ್ಗೆಯರನ್ನು ಪೂಜಿಸುವ ಹಬ್ಬವೇ ನವರಾತ್ರಿ. ಪುರಾಣದಲ್ಲಿ ಅಸುರ ಶಕ್ತಿಗಳನ್ನು ಹುಟ್ಟಡಗಿಸಿದ, ಅನ್ಯಾಯದ ವಿರುದ್ಧ ನ್ಯಾಯಕ್ಕೆ ಜಯ ಸಿಕ್ಕಿ ವಿಜೃಂಭಿಸಿದ ಸಮಯವಿದು. ಮನುಷ್ಯನ ಒಳಗೆ ಅಡಗಿ ಕುಳಿತು, ಮನುಷ್ಯತ್ವವನ್ನೇ ನಾಶ ಮಾಡುತ್ತಿರುವ ಕಾಮ, ಕ್ರೋಧ, ಮದ, ಲೋಭ, ಮತ್ಸರ, ವೈರತ್ವ, ಮುಂತಾದವುಗಳನ್ನು ಮೀರಿ ಬೆಳೆಯಬೇಕು ಅಂತ ನೆನಪಿಸುವ ದಿನಗಳಿವು.
ಹಬ್ಬದ ತಿರುಳು ಒಂದೇ ಆದರೂ, ಭಾರತದ ಉದ್ದಗಲದಲ್ಲಿ ನವರಾತ್ರಿ ಆಚರಣೆಯಲ್ಲಿ ಭಿನ್ನತೆಯಿದೆ. ನನ್ನೂರಾದ ಕುಂದಾಪುರದಲ್ಲಿ ನವರಾತ್ರಿಯೆಂದರೆ, ಊರಿಗೆ ಊರೇ ರಂಗಮಂದಿರವಾಗಿ, ವೇಷಗಳ ಒಡ್ಡೋಲಗ ನಡೆವ ಸಂಭ್ರಮದ ಸಮಯ. ಬೀದಿ, ಪೇಟೆ, ಬಸ್ ನಿಲ್ದಾಣ, ಗದ್ದೆ, ಮನೆ ಎಲ್ಲೇ ತಿರುಗಿದರೂ ವೇಷಗಳು ಎದುರಾಗುತ್ತವೆ. ಹುಲಿ, ಕರಡಿ, ಸಿಂಹ, ಹಾಲು ಮಾರುವವ, ಪೇಪರ್ ಹಾಕುವ ಹುಡುಗ, ಡಾಕ್ಟರ್… ಹೀಗೆ ಹತ್ತು ಹಲವು ವೇಷಗಳು. ಕೆಲವರು ದುಡ್ಡಿಗಾಗಿ ವೇಷ ಹಾಕಿದರೆ, ಕೆಲವರಿಗೆ ಬಣ್ಣ ಹಚ್ಚುವುದು ವಂಶ ಪಾರಂಪರ್ಯ ಕಲೆ. ಹರಕೆ ತೀರಿಸಲೆಂದು ಬಣ್ಣ ಹಚ್ಚುವವರೂ ಇದ್ದಾರೆ. ಬಾಲ್ಯದಲ್ಲಿ ನಾನು ಈ ವೇಷಗಳಿಗೆ ಎಷ್ಟು ಮಾರು ಹೋಗಿದ್ದೆನೆಂದರೆ “ನಮ್ಮ ಮನೆಗೆ ಬನ್ನಿ ದುಡ್ಡು ಕೊಡೊ¤, ದುಡ್ಡು ಒಟ್ಟ ಮಾಡಿ ಇಟ್ಟಿತ್ತ’ ಎನ್ನುತ್ತಾ ರಸ್ತೆಯ ತುದಿಯಲ್ಲಿ ನಿಂತು ಕರೆಯುತ್ತಿದ್ದೆ.
ನಮ್ಮೂರಿನಲ್ಲಿ ನವರಾತ್ರಿಯನ್ನು ಸಾರ್ವಜನಿಕ ಹಬ್ಬವಾಗಿ ಆಚರಿಸಲಾಗುತ್ತಿತ್ತು. ಹಬ್ಬಕ್ಕೆ ಒಂದು ವಾರವಿರುವಾಗಲೇ ಊರಿನ ಮಧ್ಯದಲ್ಲಿ ದೇವಿಗಾಗಿ ಹಸಿ ಮಡಲಿನ ಚಪ್ಪರ ಹಾಕಿ, ಒಳಗೆ ಹಬ್ಬದ ತಯಾರಿ ಶುರು. ನವರಾತ್ರಿಯ ಮೊದಲ ದಿನ ವಾದ್ಯಗಳೊಂದಿಗೆ ಚಪ್ಪರಕ್ಕೆ ದೇವಿಯ ಆಗಮನ. ಹುಲಿಯೊಂದಿಗೆ ಪ್ರತಿಷ್ಠಾಪನೆಗೊಂಡ ದೇವಿಗೆ ಗೊರಟೆ, ಸುಗಂಧಿ, ಮುತ್ತುಮಲ್ಲಿಗೆ, ಜಾಜಿ, ಮಲ್ಲಿಗೆ ಹೂವುಗಳ ಮತ್ತು ಹಸಿ ತೆಂಗಿನ ಗರಿಗಳ ಅಲಂಕಾರ. ದೇವಿಗೆ ನಾನೇ ಹೆಚ್ಚು ಹೂವು ಕೊಯ್ದು ಕೊಡಬೇಕೆಂಬ ಛಲದಲ್ಲಿ ಬೇಲಿ ಹತ್ತಿ, ಹಾರಿ ಕೈ, ಕಾಲು ತರಚಿಕೊಳ್ಳುವುದು, ಮುಳ್ಳು ಚುಚ್ಚಿಸಿಕೊಳ್ಳುವುದು ಸಾಮಾನ್ಯವಾಗಿತ್ತು.
ಮನೆಯಲ್ಲಿ ಆಚರಣೆ ಇಲ್ಲವೆಂದಲ್ಲ; ಡಬ್ಬಿಗಟ್ಟಲೆ ಕಜ್ಜಾಯ ಮಾಡುತ್ತಿದ್ದರು. ಕೈಗೆ ಕೆಂಪು, ಹಸಿರಿನ ಗಾಜಿನ ಬಳೆ, ಕಾಲಿಗೆ ಗೆಜ್ಜೆ, ಹೊಸ ಬಟ್ಟೆ, ರಿಬ್ಬನ್ ಸಿಗುತ್ತಿತ್ತು. ವಿಜಯದಶಮಿಯ ದಿನ ದೇವಿಯೊಂದಿಗೆ ವೇಷಗಳೂ ಮೆರವಣಿಗೆ ಹೊರಟಾಗ ಅದನ್ನು ನೋಡಲು ನಮ್ಮ ಮೆರವಣಿಗೆಯೂ ಹೊರಡುತ್ತಿತ್ತು.
ಬೆಳೆದಿದ್ದು ಕರಾವಳಿಯಲ್ಲಾದರೆ ಮದುವೆಯಾಗಿ ಹೋದದ್ದು ಗಲ್ಫ್ ದೇಶಕ್ಕೆ. ಮರಳುಗಾಡಿನ ದೇಶದಲ್ಲಿ ಹೂವು, ಗಿಡ, ಎಲೆಗಳಿಗೆ ಬರಗಾಲ. ಸಾರ್ವಜನಿಕವಾಗಿ ಹಬ್ಬ ಆಚರಿಸುವಂತಿರಲಿಲ್ಲ. ಹಬ್ಬ ರಜಾದಿನವಾದ ಶುಕ್ರವಾರ ಬಂದರೆ ಸರಿ; ಇಲ್ಲದಿದ್ದರೆ ಹಬ್ಬವೇ ಮುಂದಿನ ಶುಕ್ರವಾರಕ್ಕೆ ಮುಂದೂಡಲ್ಪಡುತ್ತಿತ್ತು. ಶಾರದಾ ಪೂಜೆ, ಆಯುಧ ಪೂಜೆ, ವಿಜಯದಶಮಿ ಎಲ್ಲಾ ಒಂದೇ ದಿನ. ಕನ್ನಡ ಸಂಘ, ತುಳು ಸಂಘ, ಗುಜರಾತಿ ಸಂಘಗಳು ಹಬ್ಬಗಳನ್ನು ಆಚರಿಸುತ್ತಿದ್ದವು. ಕನ್ನಡ ಸಂಘ ಹಾಡುಗಾರರನ್ನು, ಮಿಮಿಕ್ರಿ ಮಾಡುವವರನ್ನು ಕರೆಸಿ ಸಂಭ್ರಮಿಸಿದರೆ; ಗುಜರಾತಿ ಸಂಘದವರು ಒಂಬತ್ತು ದಿನಗಳೂ ಗರ್ಭಾ ನೃತ್ಯ ಆಯೋಜಿಸುತ್ತಿದ್ದರು.
ಈ ನಡುವೆ ಜೀವನದಲ್ಲಿ ಬದಲಾವಣೆಗಳಾಗಿ ಬೆಂಗಳೂರಿನಲ್ಲಿ ಸ್ಥಿರವಾಗಿ ನೆಲೆಸಬೇಕಾಯ್ತು. ಅಷ್ಟರಲ್ಲಿ ಹಬ್ಬಗಳಿಗೂ ಹೊಸ ರಂಗು ಬಂದಿತ್ತು. ಬೆಂಗಳೂರಿನಲ್ಲಿ ಹಬ್ಬಗಳ ಆಡಂಬರ ಸ್ವಲ್ಪ ಜಾಸ್ತಿಯೇ ಅಲ್ಲವೇ? ಬೀದಿ, ಬೀದಿಗಳಲ್ಲಿ ಬಾಳೆಗಿಡ, ಮಾವಿನ ಎಲೆ, ಮಲ್ಲಿಗೆ, ಸೇವಂತಿಗೆಯೆಂದು ಹತ್ತಾರು ಬಗೆಯ ಹೂವುಗಳು, ಸುತ್ತಮುತ್ತಲಲ್ಲಿ ಸಿಗುವ ಹಣ್ಣುಗಳನ್ನು ಬಿಡಿ; ದೂರದ ರಾಜ್ಯಗಳ ಹಣ್ಣುಗಳೂ ಸಿಗುತ್ತವೆ. ವಿವಿಧ ಸೈಜಿನ ತೆಂಗಿನ ಕಾಯಿಗಳ ರಾಶಿ, ತಾಂಬೂಲ, ಬಾಗಿನದ ಸಾಮಗ್ರಿಗಳು… ನವರಾತ್ರಿಯ ಸಡಗರಕ್ಕೆ ಕೊರತೆಯೆಲ್ಲಿ?
ಅಕ್ಕಪಕ್ಕದವರ, ಸ್ನೇಹಿತೆಯರ ಮನೆಗಳಿಂದ ಲಲಿತ ಸಹಸ್ರನಾಮ ಓದಲು, ಅರಿಶಿನ ಕುಂಕುಮಕ್ಕೆ, ಬೊಂಬೆ ನೋಡಲು ಕರೆ ಬರುತ್ತದೆ. ಅಲ್ಲಿಗೆ ಹೋದಾಗ ತೆಂಗಿನ ಕಾಯಿ, ಹಣ್ಣು, ತಾಂಬೂಲವೆಂದು ಬಗಲಲ್ಲಿ ಸಿಕ್ಕಿಸಿಕೊಂಡ ದೊಡ್ಡ ಚೀಲ ತುಂಬುವುದಷ್ಟೇ ಅಲ್ಲ; ಕೋಸುಂಬರಿ, ಪಂಚಕಜ್ಜಾಯ, ಪುಳಿಯೋಗರೆ, ಸಿಹಿತಿಂಡಿ ಅಂತ ಹೊಟ್ಟೆಯಲ್ಲೂ ಜಾಗ ಉಳಿಯುವುದಿಲ್ಲ.
ಫೇಸ್‌ಬುಕ್, ವಾಟ್ಸಾಪ್‌ನ ಈ ಕಾಲದಲ್ಲೂ, ಹಬ್ಬಗಳು ಹಿಂದಿನ ಗೌಜು-ಗದ್ದಲವನ್ನು ಉಳಿಸಿಕೊಂಡಿವೆ. ಹಬ್ಬಗಳ ಆಚರಣೆಯಲ್ಲಿಯೂ ಈ ಸಾಮಾಜಿಕ ಮಾಧ್ಯಮಗಳು ಕೈಯಾಡಿಸುತ್ತಿವೆ. ಹಬ್ಬದ ದಿನ ಇನ್‌ಬಾಕ್ಸ್‌ಗೆ ಬಂದು ಬೀಳುವ ಶುಭಾಶಯಗಳಿಗೆ, ದೇವರ ಫೋಟೊ, ಸಿಹಿತಿಂಡಿಯ ಫೋಟೊಗಳನ್ನು ಲೆಕ್ಕವಿಡಲು ಸಾಧ್ಯವೇ? ದೇವರಿಗೆ ಮಾಡಿದ ಅಲಂಕಾರದ ಫೋಟೊ ತೆಗೆದು ವಾಟ್ಸಾéಪ್‌ನಲ್ಲಿ ಹರಿ ಬಿಡುವ ಪರಿ, ಹಬ್ಬದ ಅಡಿಗೆ ಮಾಡಿ, ಚೆನ್ನಾಗಿ ಜೋಡಿಸಿಟ್ಟು ಫೋಟೋ ತೆಗೆದು ಫೇಸ್ ಬುಕ್‌ನಲ್ಲಿ ಅಪಲೋಡ್ ಮಾಡುವವರ ಗಡಿಬಿಡಿ…ಇವು ಹಬ್ಬದ ರಿವಾಜಿನಲ್ಲಾಗಿರುವ ಈಚಿನ ಬದಲಾವಣೆಗಳು…
ಮೊನ್ನೆ ಗಣೇಶನ ಹಬ್ಬದ ಹಿಂದಿನ ದಿನ ಗೆಳತಿ ಪೂರ್ಣಿಮಾ, ಕಣಗಿಲೆ ಹೂವನ್ನು ಹುಡುಕುತ್ತಿದ್ದಳು. “ಇಷ್ಟೊಂದು ಹೂವಿದೆಯಲ್ಲ; ಕಣಗಿಲೆ ಸಿಗದಿದ್ದರೆ ಬೇಡ ಬಿಡು’ ಎಂದರೆ, “ಹಾಗಲ್ಲ ಕಣೇ, ಮಲ್ಲಿಗೆಯೊಡನೆ ಕಣಗಿಲೆಯ ಹಾರ ಹಾಕಿದರೆ ಫೋಟೊದಲ್ಲಿ ಚೆನ್ನಾಗಿ ಕಾಣುತ್ತದೆ’ ಎಂದಳು. ಅಬ್ಟಾ, ಅನ್ನಿಸಿತು. ಹಬ್ಬದ ಸಂಭ್ರಮಕ್ಕೆ ಸಿಕ್ಕಿರುವ ಹೊಸ ರೂಪ ನೋಡಿ ಖುಷಿಯೂ ಆಯ್ತು.
-ಗೀತಾ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.