ತವರು ಮನೆ ನೋಡಿ ಬಂದೆ…
Team Udayavani, Feb 28, 2018, 5:35 PM IST
ಹೆಣ್ಣಿನ ಪಾಲಿಗೆ ನನ್ನದು ಎಂಬ ಎಲ್ಲ ಭಾವಗಳೂ ತವರಿನಲ್ಲಿಯೇ ಬೆಚ್ಚಗೆ ಕುಳಿತಿವೆ. ಮದುವೆಯಾಗಿ ಎಷ್ಟೇ ವರ್ಷಗಳು ಕಳೆದರೂ, ಇಂದಿಗೂ ತವರೆಂದರೆ ಆಕೆಗೆ ಪುಳಕ. ಅಲ್ಲಿಗೆ ಹೋಗುವುದೆಂದರೆ, ಮೂಟೆಯಷ್ಟು ಸಂಭ್ರಮ. ತವರೂರಿನ ಆ ಮಣ್ಣಲ್ಲಿ ಆಕೆಯ ಮೊದಲ ಹೆಜ್ಜೆ ಗುರುತಿದೆ, ಗೆಜ್ಜೆ ನಾದವಿದೆ, ಕುಣಿದಾಡಿದ ಖುಷಿಯಿದೆ, ಬಿದ್ದ ಅಳುವಿದೆ, ಕಿಲಕಿಲ ನಗುವಿದೆ. ಅದನ್ನೆಲ್ಲ ನೆನಪಿಸಿಕೊಂಡು, ತವರಿನ ಸೆಳೆತವನ್ನು ಕಣ್ಮುಂದೆ ತರುವ ಉದ್ದೇಶ ಈ ಲೇಖನದ್ದು…
“ತವರೂರ ಮನೆ ನೋಡ ಬಂದೆ, ತಾಯ ನೆನಪಾಗಿ ಕಣ್ಣೀರ ತಂದೆ’ ಹಾಡು ಕೇಳುತ್ತಿದ್ದಂತೆ ಯಾಕೋ ಥಟ್ಟನೆ ತವರು ಮನೆ ನೆನಪಾಗಿ ಕಣ್ಣುಗಳು ಮಂಜಾಗುತ್ತವೆ. ಹೆಣ್ಣಿಗೆ ತವರು ಮನೆ ಎಂದರೆ ಸ್ವರ್ಗವಿದ್ದಂತೆ. ತವರೂರ ಮನೆಯ ನೆನಪು ಹೆಣ್ಣಿನ ಮನಸ್ಸಿನಲ್ಲಿ ನಿರಂತರ. ತವರೆಂದರೆ ಏನೋ ಒಂದು ಭಾವನಾತ್ಮಕ ಸೆಳೆತ. ತವರು ಮನೆ ದೂರವಿದ್ದಷ್ಟೂ ಈ ಸೆಳೆತ ಇನ್ನೂ ಬೆಟ್ಟದಷ್ಟು. ಅಪ್ಪಟವಾದ ಆತ್ಮ ಬಂಧುತ್ವವೇ ಈ ಭಾವನಾತ್ಮಕ ಸಂಬಂಧದ ಜೀವಾಳ.
ಹುಟ್ಟಿದ, ಆಡಿದ ಮನೆ, ನಕ್ಕು ನಲಿದಾಡಿದ ಮನೆ, ಅಪ್ಪ- ಅಮ್ಮರೊಡನೆ ಬಾಳಿದ ಮನೆಯ ಸಂಬಂಧದ ಬಳ್ಳಿ, ಹೆಣ್ಣಿನ ಬದುಕಿನುದ್ದಕ್ಕೂ ಅಂಟಿಕೊಂಡೇ ಇರುತ್ತದೆ. ಅಪ್ಪ- ಅಮ್ಮ, ಅಕ್ಕ- ತಂಗಿ, ಅಣ್ಣ- ತಮ್ಮ, ಅಕ್ಕ- ಪಕ್ಕದವರು… ಹೀಗೆ ತನ್ನ ಸುತ್ತಮುತ್ತಲಿನ ಎಲ್ಲ ಬಂಧಗಳನ್ನೂ ಗಂಡಿಗಿಂತ ಹೆಣ್ಣೇ ಗಟ್ಟಿಯಾಗಿ ಬೆಳೆಸಿಕೊಳ್ಳುತ್ತಾಳೆ. ಹುಟ್ಟಿದ ಮನೆಯಾಗಲಿ, ಸೇರಿದ ಮನೆಯಾಗಲಿ ಹೆಣ್ಣಿನ ಅಕ್ಕರೆಯ ಧಾರೆಗೆ ಅಡೆತಡೆಗಳಿಲ್ಲ. ತವರು ಮನೆಯನ್ನು ಬಿಟ್ಟು ಗಂಡನ ಮನೆ ಸೇರುವ ಹೆಣ್ಣಿಗೆ ತಾಳ್ಮೆ, ಧೈರ್ಯದಿಂದ ಹೊಂದಿಕೊಳ್ಳುವ ಗುಣ ಅಂತರಾಳದಲ್ಲಿಯೇ ಅಡಗಿದೆ.
ನನ್ನ ತವರೂರು ಗೋಕರ್ಣ, ಪ್ರಾಕೃತಿಕ ಸೌಂದರ್ಯದಿಂದ ಸಂಪದ್ಭರಿತವಾಗಿರುವ ಕರಾವಳಿ ತೀರ. ಕಣ್ಮನ ಸೆಳೆಯುವ ವಿಶಾಲ ಕಡಲು, ಅಲೆಗಳು ಹೊರಳಿ ಮರಳಿ ದಡವನ್ನೇ ಪ್ರೀತಿಸುವ ಪರಿ, ಕಣ್ಣು ಹಾಯುವಷ್ಟು ದೂರವೂ ಬಿಳಿ ಮರಳು… ನಿಜಕ್ಕೂ ನನ್ನ ತವರೂರು ಬಹಳ ಸುಂದರ. ಕಡಲ ತೀರದಲ್ಲಿ ಸಾಲು ಸಾಲು ತೆಂಗಿನ ಮರಗಳಿವೆ. ಊರಿನ ಒಳನಾಡ ಪ್ರದೇಶ ಬತ್ತದ ಗ¨ªೆಗಳಿಂದ, ಮಾವಿನ ತೋಪುಗಳಿಂದ, ಗೇರು, ಹಲಸು ಮತ್ತು ಇತರ ಮರಗಳ ತಂಗಾಳಿಯಿಂದ ಆವೃತ್ತವಾಗಿದೆ. ಅದನ್ನು ನಿತ್ಯ ನೆನೆಯುತ್ತಾ, ನಾನು ತಂಪಾಗುವೆ. ಅಧುನಿಕತೆಯ ಸೋಂಕು ಅಷ್ಟಾಗಿ ಸೋಕದ ನನ್ನ ತವರೂರು ಹಿಂದೆ ಹೇಗಿತ್ತೋ ಈಗಲೂ ಹಾಗೇ ಇದೆ.
ತವರೂರಿನ ಮಣ್ಣಿಗೂ ಹೆಣ್ಣಿಗೂ ಬಿಡಿಸಲಾರದ ನಂಟಿದೆ. ನನ್ನ ಮೊದಲ ಹೆಜ್ಜೆಗಳನ್ನು ಮೂಡಿಸಿದ ಆ ತವರೂರ ಮಣ್ಣೆಂದರೆ ನನಗೆ ಅತೀವ ಮೋಹ. ನನ್ನೂರ ಮಣ್ಣಿಗೆ ನವಿರಾದ, ಹಿತವಾದ ಸುಗಂಧವಿದೆ. ಆ ಮಣ್ಣಲ್ಲಿ ನನ್ನ ಮೊದಲ ಹೆಜ್ಜೆ ಗುರುತಿದೆ, ಗೆಜ್ಜೆ ನಾದವಿದೆ, ಕುಣಿದಾಡಿದ ಖುಷಿಯಿದೆ, ಬಿದ್ದ ಅಳುವಿದೆ, ಕಿಲಕಿಲ ನಗುವಿದೆ. ಆ ಮಣ್ಣು ನನಗೆ ಏನೇನೆಲ್ಲಾ ಆಗಿತ್ತು? ನನ್ನ ಮೊದಲ ಆಟಿಕೆಯಾಗಿತ್ತು, ನನ್ನಾಟದ ಅಡುಗೆಮನೆಯ ಅನ್ನ, ಸಾರು, ಸಿಹಿತಿಂಡಿ ಎಲ್ಲವೂ ಆ ಮಣ್ಣೇ ಆಗಿತ್ತು. ಆ ಮಣ್ಣನ್ನೇ ಕಲಸಿ ಲಡ್ಡುವಿನಂತೆ ಕಟ್ಟಿ, ಎಲ್ಲರಿಗೂ ಉಂಡೆ ಹಂಚಿ ಖುಷಿಪಟ್ಟಿದ್ದೆ. ನನ್ನ ಬಾಲ್ಯದ ಗೆರೆಗಳಿಗೆ, ಅಮ್ಮ ಕಲಿಸಿದ ಅಕ್ಷರಗಳಿಗೆ ಮೊದಲ ಸ್ಲೇಟ್ ಆಗಿದ್ದು ಕೂಡ ತವರಿನ ಮಣ್ಣೇ. ಅರೆಬರೆ ಅಕ್ಷರ ಗೀಚುತ್ತಾ, ಚಿತ್ತ ಚಿತ್ತಾರ ಬಿಡಿಸುತ್ತಾ ನಗುತ ಮೈ ಮರೆತ ಕ್ಷಣಗಳನ್ನು ಹೇಗೆ ಮರೆಯಲಿ?
ಮಣ್ಣ ಅಗೆದು ನನ್ನ ಪುಟ್ಟ ಕೈಯಾರೆ ಮೊದಲ ಬೀಜವನ್ನು ಅಡಗಿಸಿ, ಮೊಳಕೆಗಾಗಿ ಕಾಯುವಾಗ ಎಷ್ಟೆಲ್ಲ ಕಾತುರವಿತ್ತು ನನ್ನಲ್ಲಿ. ನಸುಕಿನಲ್ಲೇ ಓಡೋಡಿ ಬಂದು ಬೀಜ ಮೊಳಕೆಯೊಡೆದಿದೆಯೇ ಎಂದು ಇಣುಕಿ ನೋಡುವ ಕುತೂಹಲ, ನೆಲದಿಂದ ಪುಟ್ಟ ಗಿಡವೊಂದು ಮೇಲೆದ್ದು ಬಂದಾಗ ಆದ ಪುಳಕ, ಇದು ನನ್ನ ಗಿಡವೆಂದು ಕೊಂಚ ಗತ್ತು, ತುಂಬು ಕಾಳಜಿಯಿಂದ ಸುತ್ತ ಕಟ್ಟಿದ ಬೇಲಿಯನ್ನು ತನ್ನೊಳಗೆ ಭದ್ರವಾಗಿರಿಸಿಕೊಂಡಿದ್ದೂ ಅದೇ ಮಣ್ಣು. ಊರು ಬಿಟ್ಟು ಹೊರಡುವಾಗ ಬೆಳೆದು ನಿಂತ ನನ್ನ ಗಿಡವನ್ನು ತಬ್ಬಿ ನಾ ಚೆಲ್ಲಿದ ಕಣ್ಣೀರು ಸೇರಿದ್ದೂ ಅದೇ ಮಣ್ಣಿನಲ್ಲಿ.
ಸಮುದ್ರ ತೀರದ ಮಣ್ಣು ಮಿಶ್ರಿತ ಮರಳಿನಲ್ಲಿ ಮನೆ ಕಟ್ಟಿ, ಅದನ್ನು ಅಬ್ಬರದ ಅಲೆಯೊಂದು ಕೊಚ್ಚಿಕೊಂಡು ಹೋದಾಗ ಆದ ದುಃಖವಿದೆಯಲ್ಲ… ನನ್ನ ಮನೆಯಿಂದ ನನ್ನನ್ನು ದೂರ ಮಾಡಿದ ಅಲೆಗಳ ಮೇಲೆ ಮೊದಲ ಬಾರಿಗೆ ಕೋಪವುಕ್ಕಿತ್ತು. (ಮುಂದೆ ಮದುವೆಯೆಂಬ ಬದಲಾವಣೆಯ ಅಲೆ ನನ್ನನ್ನು ಮತ್ತೂಮ್ಮೆ ಮನೆಯಿಂದ ದೂರ ಮಾಡಿಬಿಟ್ಟಿತು)
ಬಾಲ್ಯ ಮುಗಿದ ನಂತರದ ಹಂತವೇ ಬಣ್ಣಬಣ್ಣದ ಹರೆಯ. ಪ್ರಾಯಕ್ಕೆ ಬಂದ ಆ ಸುಂದರ ದಿನಗಳ ಹೊಳಪಿನಲ್ಲಿಯೂ ನನ್ನೂರಿಗೆ ದೊಡ್ಡ ಪಾಲಿದೆ. ಹೃದಯದೊಳಗೆ ಕನಸಿನರಮನೆ ಕಟ್ಟಿ, ಕನಸಿನ ಲೋಕದಲ್ಲಿ ಈಜುತ್ತ ನನ್ನ ರಾಜಕುಮಾರ ಕುದುರೆಯ ಮೇಲೆ ಬಂದು ನನ್ನನ್ನು ಕರೆದುಕೊಂಡು ಹೋಗುವಾಗ ಕಣ್ಣಿನಲ್ಲಿದ್ದ ಸಂಭ್ರಮವನ್ನು ತವರಿನೊಂದಿಗೆ ಹಂಚಿಕೊಳ್ಳಲಿಲ್ಲವೇ? ಹದಿಹರೆಯದ ಆ ದಿನಗಳಲ್ಲಿ ಸಮುದ್ರ ತೀರದ ಮರಳು ಮಣ್ಣಿನ ಮೇಲೆ ಕುಳಿತು, ಇನಿಯನ ಓಲೆಗಳ ಓದಿದೆ, ಓಲೆಗಳ ಬರೆದೆ, ನಮ್ಮಿಬ್ಬರ ಹೆಸರನ್ನು ಅದೆಷ್ಟೋ ಸಲ ಮರಳಿನ ಮೇಲೆ ಬರೆದು ಮನದೊಳಗೇ ನಗುತ ನಾಚಿದೆ. ನನ್ನೆಲ್ಲ ಸಂತೋಷ, ಸಂಕೋಚ, ದುಗುಡ, ದುಃಖಗಳಿಗೆ ನನ್ನೂರ ನೆಲ, ಮುಗಿಲು, ಗಾಳಿ ಸಾಕ್ಷಿಯಾಯಿತು.
ಕೊನೆಗೂ ಆ ದಿನ ಬಂದೇ ಬಿಟ್ಟಿತು! ನನ್ನನ್ನು ತವರಿನಿಂದ ದೂರ ಮಾಡಿದ ದಿನ, ಬದುಕಿನ ಹೊಸ ಬದಲಾವಣೆಗೆ ತೆರೆದುಕೊಂಡ ಆ ದಿನ, ಮದುವೆ! ಕರುಳಿನ ಒಂದು ಭಾಗವನ್ನು ಕತ್ತರಿಸಿ ತವರೂರಿನ ನೆಲದಲ್ಲಿಟ್ಟು ನಾನು ಮದುವೆಯೆಂಬ ಬಂಡಿಯನೇರಿದೆ. ಆ ಬಂಡಿ ನನ್ನನ್ನು ತಂದು ನಿಲ್ಲಿಸಿದ್ದು ಬಹುದೂರದ ಮುಂಬೈ ನಗರಿಗೆ.
******
ಇಲ್ಲಿ ಕಣ್ಣು ಹಾಯಿಸಿದಷ್ಟು ದೂರ ಮತ್ತು ಎತ್ತರಕ್ಕೆ ಕಾಣಿಸುವುದು ಬೃಹದಾಕಾರದ ಕಟ್ಟಡಗಳೇ. ನೆಲ ಹೋಗಲಿ, ಆಕಾಶವೂ ಕಾಣಿಸದಷ್ಟು ಕಿಕ್ಕಿರಿಯುವಂತೆ ಕಟ್ಟಡಗಳು ತಲೆ ಎತ್ತಿವೆ. ಟಾರು ರಸ್ತೆಗಳು, ಮೇಲ್ಸೇತುವೆಗಳು, ಎಕ್ಸ್‌ಪ್ರೆಸ್ ಕಾರಿಡಾರುಗಳು, ಮೆಟ್ರೋ ರೈಲುಗಳು… ಇದು ಮಹಲುಗಳ ಸಂಸ್ಕೃತಿಯ ಮಾಯಾನಗರಿ. ಎಲ್ಲಿ ಹೆಜ್ಜೆ ಇಟ್ಟರೂ ಮಣ್ಣಿನ ಸ್ಪರ್ಶವೇ ಇಲ್ಲ. ಇಲ್ಲಿ ನನ್ನ ಹೆಜ್ಜೆ ಗುರುತುಗಳು ಮೂಡುವುದಿಲ್ಲ, ಆತ್ಮೀಯ ಓಣಿಗಳಿಲ್ಲ, ಉಸಿರಾಡುವ ಗಾಳಿಯಲ್ಲಿ ಮಣ್ಣಿನ ಘಮವಿಲ್ಲ, ಬೀಜ ಬಿತ್ತಲು ಮುಷ್ಟಿ ಮಣ್ಣೂ ಇಲ್ಲ, ದೂರ ದೂರ ಕಣ್ಣು ಹಾಯಿಸಿದರೂ ನನ್ನದೆಂಬುದು ಇಲ್ಲಿ ಏನೇನೂ ಇಲ್ಲ.
ನನ್ನದು ಎಂಬ ಎಲ್ಲ ಭಾವನೆಗಳೂ ತವರಿನಲ್ಲಿಯೇ ಬೆಚ್ಚಗೆ ಕುಳಿತಿವೆ. ಮದುವೆಯಾಗಿ ಎಷ್ಟೇ ವರ್ಷಗಳು ಕಳೆದಿದ್ದರೂ, ಇಂದಿಗೂ ತವರೂರಿಗೆ ಹೋಗುವುದು ಎಂದರೆ ಮೂಟೆಯಷ್ಟು ಸಂಭ್ರಮ. ತವರೂರ ಮಣ್ಣಿನಲ್ಲಿ ನಾ ನಡೆದ ಹೆಜ್ಜೆಗುರುತುಗಳನ್ನು ನೆನಪಿಸಿಕೊಳ್ಳುತ್ತಲೇ ಪ್ರತೀ ಬಾರಿ ಹುಟ್ಟೂರಿಗೆ ಪಯಣಿಸುತ್ತೇನೆ.
ಅಲ್ಲಿಂದ ಮರಳುವಾಗ, ಯಾರಿಗೂ ಕಾಣದಂತೆ ಹಿತ್ತಲ ಗಿಡಗಳ ಮರೆಯಲ್ಲಿ ನಿಂತು ಭಾವುಕಳಾಗುತ್ತೇನೆ. ಆ ಮಣ್ಣಿಗೆ ನಮಸ್ಕರಿಸಿ, “ನಿನ್ನಲ್ಲಿ ಮೂಡಿರುವ ನನ್ನ ಹೆಜ್ಜೆ ಗುರುತುಗಳು ಅಳಿಸದಂತೆ ಜತನದಿಂದ ನೋಡಿಕೋ’ ಎಂದು ಕೋರಿಕೊಳ್ಳುತ್ತೇನೆ. “ಬೇಗ ಮರಳಿ ಬಾ ಮಗಳೆ’ ಎನ್ನುವ ಆ ಮಣ್ಣಿನ ಪಿಸುದನಿಯನ್ನು ಕಿವಿಗಳಲ್ಲಿ ತುಂಬಿಕೊಂಡು ಭಾರವಾದ ಹೆಜ್ಜೆಗಳನ್ನಿಡುತ್ತ ನನ್ನದಲ್ಲದ ನನ್ನೂರಿಗೆ ಪ್ರಯಾಣ ಬೆಳೆಸುತ್ತೇನೆ, ಆದಷ್ಟು ಬೇಗ ಮತ್ತೆ ಬರುವ ಕನಸಿನೊಂದಿಗೆ.
– – –
ಅಣ್ಣ- ತಮ್ಮಂದಿರು ತವರಿನಲ್ಲಿಲ್ಲ…
ಭಾರತೀಯ ಸಂಸ್ಕೃತಿಯಲ್ಲಿ ತವರು ಮನೆಗೆ ವಿಶೇಷ ಸ್ಥಾನಮಾನ. ಕಾಲ ಎಷ್ಟೇ ಮುಂದುವರಿದರೂ ಹೆಣ್ಣಿಗೆ ತವರಿನ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ತವರಿಂದ ದೂರವಿದ್ದರೂ ಆಕೆ ಅಲ್ಲಿನ ಬಾಂಧವ್ಯಗಳನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾಳೆ. ತವರು ಮನೆಯ ಅಂಥ ಆಪ್ತ ನಂಟು ಇಂದು ಕಾಣುತ್ತಲೇ ಇಲ್ಲ. ಹಿಂದೆ ಅಪ್ಪ- ಅಮ್ಮ, ಅಣ್ಣ- ಅತ್ತಿಗೆ, ತಮ್ಮ, ಅಕ್ಕ, ತಂಗಿ ಅಜ್ಜ- ಅಜ್ಜಿ ಮುಂತಾದ ಸಂಬಂಧಗಳು ಒಂದೇ ಮನೆಯಲ್ಲಿ ಇದ್ದು, ಕಷ್ಟಗಳನ್ನು ಮರೆತು ಹೊಂದಾಣಿಕೆಯಿಂದ ಬದುಕುತ್ತಿದ್ದರು. ಆದರೆ, ಇಂದು ಅಧುನಿಕತೆಯ ಹೊಡೆತ ಹಾಗೂ ಕೆಲಸಕ್ಕಾಗಿ ಪಟ್ಟಣಕ್ಕೆ ವಲಸೆ ಬರುವ ಕಾರಣದಿಂದ ನಮ್ಮ ಸಂಸ್ಕೃತಿ ನಲುಗಿದೆ. ತವರಿನಲ್ಲಿ ಉಳಿದಿರುವುದು ಅಪ್ಪ- ಅಮ್ಮ ಮಾತ್ರ. ಅವರು ದಿನವೂ ಪಟ್ಟಣದಲ್ಲಿರುವ ಮಗ ಊರಿಗೆ ಬರುವನೇನೋ ಎಂದು ದಾರಿ ಕಾಯುತ್ತ ಸಂಕಟಪಡುವ ಸ್ಥಿತಿ ಎಲ್ಲೆಡೆಯೂ ಸಾಮಾನ್ಯ. ಅಕ್ಕ- ತಂಗಿಯರನ್ನು ತವರಿಗೆ ಕರೆದು, ಆದರಿಸುವ ಪ್ರೀತಿಯ ಅಣ್ಣ- ತಮ್ಮಂದಿರೂ ಈಗ ತವರಿನಲ್ಲಿಲ್ಲ. ಅದೇನೇ ಇದ್ದರೂ, ಅಪ್ಪ- ಅಮ್ಮ ಇರುವವರೆಗೆ ಹೆಣ್ಣಿಗೆ ತವರಿನ ನಂಟು ಬಿಡದು.
ತವರನ್ನು ನೆನಪಿಸುವ ಚಿತ್ರಗಳು
ತವರು ಮನೆಯು ಪ್ರತಿ ಹೆಣ್ಣಿಗೂ ಗಾಢವಾಗಿ ಕಾಡುವಂಥ ಗೂಡು. ಅಲ್ಲಿನ ಅಕ್ಕರೆಯನ್ನು ನೆನೆಯುತ್ತಲೇ, ಗಂಡನ ಮನೆಯಲ್ಲಿ ನಿತ್ಯದ ಸಿಹಿ-ಕಹಿಗಳ ತೇರನ್ನು ಎಳೆಯುವ ಹೆಣ್ಣಿನ ಅಂತರಂಗದಲ್ಲಿ ತವರುಮನೆಯೆಂಬ ಟಾಕೀಸೂ ಇದೆ. ಹುಟ್ಟಿದ ಮನೆಯ ಆ ನಂಟನ್ನೇ ವಸ್ತುವಾಗಿಟ್ಟುಕೊಂಡ ಸಿನಿಮಾಗಳದ್ದು ಅಲ್ಲಿ ಮುಗಿಯದ ಆಟ.
ಹಾಲುಂಡ ತವರು, ಹೆತ್ತ ಕರುಳು, ತವರಿಗೆ ಬಾ ತಂಗಿ, ಅಣ್ಣ-ತಂಗಿ, ತವರಿನ ಸಿರಿ, ತಾಯಿ ಕೊಟ್ಟ ಸೀರೆ, ತವರುಮನೆ ಉಡುಗೊರೆ, ತಾಯಿಯ ಮಡಿಲಲ್ಲಿ, ತಾಯಿಯ ಹೊಣೆ, ತಾಯಿಯೇ ದೇವರು, ತವರಿನ ತೊಟ್ಟಿಲು, ಕರ್ಪೂರದ ಗೊಂಬೆ- ಇವು ಒಂದು ಕಾಲದಲ್ಲಿ ತವರಿನ ಪ್ರೀತಿಯನ್ನು, ಋಣವನ್ನು, ಸಂಕಟವನ್ನು ಚಿತ್ರಿಸಿದ ದೃಶ್ಯಕಾವ್ಯಗಳು.
– ಸೌಮ್ಯ ಪ್ರಕಾಶ ತದಡಿಕರ, ನವೀ ಮುಂಬೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.