ಪತಿತೆಯರೂ ಪಾವನರು
Team Udayavani, Nov 10, 2017, 6:45 AM IST
ಪ್ರಿಯ ಮೃಣ್ಮಯಿ,
ಸೀತಾ ಕಲ್ಯಾಣದ ಸಂಭ್ರಮದ ಜೊತೆಯಲ್ಲಿ, ಮಿಥಿಲೆಗೆ ಸೀತಾ ವಿಯೋಗದ ಗಳಿಗೆಯೂ ಕೂಡಿಬಂದಿತ್ತು. “ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’! ನೀನು ನಿನ್ನ ತವರಿನ ನಂಟನ್ನು ಕಡಿದುಕೊಂಡು ಅಯೋಧ್ಯೆಗೆ ಹೊರಡುವ ಆ ಹೊತ್ತು ದುಃಖ ತಡೆಯಲಾರದ ಜನಕ ಮಹಾರಾಜ, ಮಿಥಿಲೆಯ ಮಣ್ಣನ್ನು ಪುಟ್ಟ ಪೆಟ್ಟಿಗೆಯಲ್ಲಿಟ್ಟು ನಿನಗೆ ಉಡುಗೊರೆಯಾಗಿ ಕೊಟ್ಟನಂತೆ! ನೀನು ಹುಟ್ಟಿ, ಬೆಳೆಯುತ್ತ ನಲಿದಾಡಿದ್ದು ಈ ಮಣ್ಣಲ್ಲೇ, ಅದರೊಂದಿ ಗಿನ ಬಾಂಧವ್ಯವನ್ನು ಪೆಟ್ಟಿಗೆಯಲ್ಲಿ ಮುಚ್ಚಿಟ್ಟು ಕಾಯ್ದುಕೊಳ್ಳುವ ಈ ಪರಿಸ್ಥಿತಿ ತುಸು ವಿಚಿತ್ರವಲ್ಲವೇ? “ಕನ್ಯಾದಾನ ಮಾಡಿ’ ಮಗಳನ್ನು “ಕೊಡುವುದಂತೆ’, ಸೊಸೆಯನ್ನು “ತಂದುಕೊಳ್ಳುವುದಂತೆ’! ಈ ಕೊಡು ವವರು ಮತ್ತು ತೆಗೆದುಕೊಳ್ಳುವವರ ನಡುವೆ “ಅವಳು’ ನಿಜಕ್ಕೂ ಯಾರು?ಇನ್ನೂ ಒಂದು ತಮಾಷೆಯ ಸಂಗತಿ ಹೇಳುತ್ತೇನೆ, ಕೇಳು.
ನಿನ್ನ ಗಂಡ ತನ್ನ ಹೆಂಡತಿಯ ಹೆಸರನ್ನು ಮೊದಲಲ್ಲೇ ಧರಿಸಿ “ಸೀತಾರಾಮ’ನಾದರೆ, ನನ್ನ ಕಾಲದ ಯಾವ ಗಂಡೂ ಹೆಂಡತಿಯ ಹೆಸರಿನಿಂದ ತನ್ನನ್ನು ಗುರುತಿಸಿಕೊಳ್ಳುವುದನ್ನು ಬಯಸಲಾರ, ಸರಿ. ಆದರೆ, ಆತನ ಹೆಂಡತಿ ತನ್ನ ಹೆಸರಿನ ಜೊತೆ ಗಂಡನನ್ನೋ ಅಥವಾ ಅವನ ಮನೆತನವನ್ನೊ ಸಿಕ್ಕಿಸಿಕೊಂಡರೆ ಆತ ಸಮಾಧಾನ ಪಟ್ಟುಕೊಳ್ಳುತ್ತಾನೆ! ಹೀಗೆ, ಮದುವೆಗೆ ಮೊದಲಿದ್ದ ತಂದೆಯ ಮನೆಯ ಗುರುತನ್ನು ಮದುವೆಯ ನಂತರ ಅಳಿಸಿ ಹಾಕಿ ಗಂಡನ ಮನೆಯ ಗುರುತನ್ನು ಅವಳು ಪಡೆಯಬೇಕು. ಈ “ಗುರುತಿನ’ ರಗಳೆ ಒತ್ತಿಟ್ಟಿಗಿರಲಿ, ಈ ಎರಡೂ ಮನೆಯ ಬಾಂಧವ್ಯದಿಂದಲೇ ಕಡಿಯಲ್ಪಟ್ಟು ಯಾವ “ಗುರುತ’ನ್ನೂ ಪಡೆಯಲಾರದ ಹೆಣ್ಣುಗಳೂ ನಮ್ಮ ನಡುವೆ ಸುಳಿದಾಡುತ್ತಿದ್ದಾರೆ ಎಂಬುದು ತಿಳಿದಿದೆಯೇ ನಿನಗೆ?
ನನ್ನ ಬಾಲ್ಯದಲ್ಲಿ ನನಗೊಬ್ಬಳು ಅಚ್ಚುಮೆಚ್ಚಿನ ಶಾಲಾ ಸಂಗಾತಿಯಿದ್ದಳು. ಹಾಗೆಂದು ಅವಳು ನನಗೆ ತುಂಬಾ ಹತ್ತಿರವಾಗಿದ್ದಳು ಎಂದು ಎಲ್ಲರೆದುರೂ ಹೇಳಿಕೊಳ್ಳುವಂತಿರಲಿಲ್ಲ. ಅವಳೊಂದಿಗಿನ ಸ್ನೇಹ ಸರಿಯಲ್ಲ ಎಂಬ ಅಘೋಷಿತ ಕಾನೂನನ್ನು ಹೇಗೋ ನಮಗೆ ನಾವೇ ಹೇರಿಕೊಂಡಿದ್ದೆವು. ಇದಕ್ಕೆ ಮುಖ್ಯ ಕಾರಣ ಅವಳು ನಮ್ಮ ಹಾಗಲ್ಲ, “ಅಜ್ಜಿ ಸಾಕುತ್ತಿದ್ದ, ಅಪ್ಪನಿಲ್ಲದ ಬರೇ ಅಮ್ಮನ’ ಮಗಳಾಗಿದ್ದಳು. ಅವಳಮ್ಮ “ಬೊಂಬಾಯಿ’ಯಲ್ಲಿ ಕಸುಬು ಮಾಡುವ ಕೀಳು ಹೆಂಗಸು ಎಂಬ ಊರವರ ಹಗುರಾದ ಮಾತುಗಳು ನಮ್ಮ ಕಣ್ಣಮುಂದೆ ಏನೇನೋ ಅಸ್ಪಷ್ಟವಾದ ಚಿತ್ರಗಳನ್ನು ತೇಲಿಸಿ ಬಿಡುತ್ತಿದ್ದವು. ಅವಳ ಬಗೆಗೆ, ನಾವು ಗೆಳತಿಯರಿಗೆ ಒಂದು ಉತ್ಕಟವಾದ ಕುತೂಹಲ ಮತ್ತು ಸಣ್ಣ ಅಸೂಯೆ. ಏಕೆಂದರೆ, ಉಳಿದವರ್ಯಾರೂ ಕಣ್ಣಲ್ಲೂ ಕಾಣದ ಬಣ್ಣದ ಕ್ಲಿಪ್ಪುಗಳು, ಪರಿಮಳದ ಪೌಡರ್ ಇನ್ನೂ ಏನೇನೋ ಅವಳಲ್ಲಿದ್ದವು.
ಅಪರೂಪಕ್ಕೆ ಊರಿಗೆ ಬರುತ್ತಿದ್ದ ಅವಳಮ್ಮನ ವಿಶೇಷವಾದ ಶೃಂಗಾರ, ಮಾತುಕತೆಯ ಠೇಂಕಾರ, ಕಾರಿನ ಓಡಾಟ ಇವೆಲ್ಲವೂ ಆ ಕಾಲಕ್ಕೆ ನಮಗೆ ಬೆರಗು ಹುಟ್ಟಿಸುತ್ತಿದ್ದವು.ದೂರದ ಮುಂಬಯಿಯಲ್ಲಿ ಮೈಸುಖ ಹಂಚುವ ದಂಧೆಯಲ್ಲಿ ಭಾಗಿಯಾಗಿ, ಬರುವ ಸಂಪಾದನೆಯಿಂದ, ಊರಲ್ಲಿರುವ ತನ್ನ ಕುಟುಂಬಕ್ಕೆ ಅನ್ನ-ಬಟ್ಟೆ , ಅಣ್ಣ-ತಮ್ಮಂದಿರಿಗೆ ವಿದ್ಯೆ, ಅಕ್ಕ-ತಂಗಿಯಂದಿರಿಗೆ ಮದುವೆ, ಒಟ್ಟಾರೆ ಎಲ್ಲರ ಬದುಕನ್ನು ರೂಪಿಸುವ ಇಂತಹ ಅದೆಷ್ಟೋ ಹೆಣ್ಣುಗಳು ಎಂದಿನಿಂದಲೂ ನಮ್ಮೂರಲ್ಲಿದ್ದಾರೆ.
ಕಡು ಬಡತನ, ಹಣವೆಂಬ ಮಾಯಾಮೃಗದ ಬೆನ್ನಟ್ಟಿ, ತನ್ನ ಮನೆಯ ಹೆಣ್ಣುಗಳನ್ನು ಇಂತಹ ಕೆಲಸಕ್ಕೆ ಕೊಟ್ಟುಕೊಂಡು ಮೌನವಾಗಿ ಬಿಡುತ್ತದೆ. ಗುಟ್ಟಿನಲ್ಲಿಯೇ ನಡೆಯುವ ಈ ವ್ಯವಹಾರ ಆ ಹೆಣ್ಣುಮಕ್ಕಳನ್ನು ಕೂಡಾ ಶಾಶ್ವತವಾಗಿ ಅಜ್ಞಾತದಲ್ಲಿಟ್ಟು ಬಿಡುತ್ತದೆ. ಪತಿತೆಯರೆಂದೇ ಪರಿಗಣಿತರಾಗುವ ಈ ಸ್ತ್ರೀಯರಿಗೆ, ಊರಿನ ಅತ್ಯಂತ ಕೆಡುಕರಿಗೆ ಸಿಗಬಹುದಾದ ಸ್ಥಾನಮಾನವೂ ದಕ್ಕುವುದಿಲ್ಲ. ದೇಹವೇ ಸರಕಾಗಿರುವ ಈ ವ್ಯಾಪಾರವನ್ನೂ, ಅದಕ್ಕೆ ಮಾರುಕಟ್ಟೆ ತಯಾರಿಸುವ ಸೂತ್ರಧಾರರನ್ನೂ, “ಗುಸುಗುಸು’ ಮಾಡುತ್ತಲೇ ಊರಿಗೆ ಊರೇ ಒಪ್ಪಿಕೊಂಡು ಬಿಡುತ್ತದೆ. ವಿಪರ್ಯಾಸವೆಂದರೆ, ಇದರ ಮುಖ್ಯಪಾತ್ರಧಾರಿಗಳಾದ ಹೆಣ್ಣುಗಳಿಗೆ ಮಾತ್ರ ಮುಖ್ಯವಾಹಿನಿಯ ಬದುಕನ್ನು ನಿರಾಕರಿಸಿಬಿಡುತ್ತದೆ!
ಗಂಡುಲೋಕ ತನ್ನ ಕಾಮುಕತೆಯನ್ನು ತಣಿಸಲೋಸುಗ ಇಂತಹದ್ದೊಂದು ವ್ಯವಸ್ಥೆಯನ್ನು ತಲೆತಲಾಂತರದಿಂದ ಪೋಷಿಸಿಕೊಂಡೇ ಬಂದಿದೆ. ಧಾರ್ಮಿಕತೆಯ ಹೆಸರಿನಲ್ಲಿ ಆ ಕಾಯಕಕ್ಕೊಂದು ಅಧಿಕೃತತೆಯನ್ನು ಒದಗಿಸುವ ಹುನ್ನಾರವನ್ನು ಮಾಡುತ್ತಲೇ “ದೇವದಾಸಿ’ಯರನ್ನೂ ಸೃಷ್ಟಿಸಿಬಿಟ್ಟಿದೆ. ಆ ವಂಶದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಊರವರ ಲೈಂಗಿಕ ತೃಷೆಯನ್ನು ನೀಗಿಸಿಯೇ ತಮ್ಮ ಹೊಟ್ಟೆ ಹೊರೆದುಕೊಳ್ಳಬೇಕೆಂಬ ಅಲಿಖೀತ ನಿಯಮವನ್ನು ಲಾಗಾಯ್ತಿನಿಂದಲೂ ಗಟ್ಟಿಗೊಳಿಸುತ್ತಲೇ ಬಂದ ಗಂಡುಕುಲದ ಕ್ರೂರ ಜಾಣ್ಮೆಗೆ ಏನೆಂದು ಹೇಳಲಿ? ಹಾಲುಗಲ್ಲದ ಹೆಣ್ಣು ಹಸುಳೆಗಳಿಗೆ “ಮುತ್ತುಕಟ್ಟಿ’ ದೇವರಿಗೆ ಬಿಟ್ಟು ಬಿಡುವ ಸಂಪ್ರದಾಯ ಇವರದ್ದು. ಆದರೆ ವಾಸ್ತವದಲ್ಲಿ ಅವಳು ದಾಸಿಯಾಗುವುದು ಗುಡಿ ಹೊರಗಿನ ಧನಿಕ ಕಾಮುಕರಿಗೇ ಹೊರತು ಗುಡಿಯೊಳಗಿನ ದೇವರಿಗಲ್ಲ. ಎಷ್ಟೋ ಕಾಲದಿಂದ ಇದನ್ನೊಂದು “ಕಾಯಕ’ವೆಂಬಂತೆ ಈ ಲೋಕ ಪರಿಗಣಿಸಿದೆ; ಆ ಸಮುದಾಯದವರನ್ನೂ ನಂಬಿಸಿದೆ.
ಇದೊಂದು “ಕಾಯಕವೇ’ ಹೌದು ಎನ್ನುವಿರಾದರೆ, ಅದೇ “ಕೈಲಾಸ’ವಾಗಬೇಕಲ್ಲವೇ? ಅದನ್ನೇಕೆ ಅಸಹ್ಯವಾಗಿ ತಿರಸ್ಕಾರದಿಂದ ಕಾಣಬೇಕು? ಅವಳು ಎಲ್ಲರೊಳಗೊಂದಾಗಿ ಬದುಕುವ ಹಕ್ಕನ್ನೇಕೆ ಕಸಿದುಕೊಳ್ಳಬೇಕು? ಇದು ಅವಳಿಗೂ ಸಮ್ಮತ ಎಂತಾದರೆ, ಅನ್ನ ಸಂಪಾದನೆಯ ಇತರ ಕಾಯಕಗಳಂತೆ ಇದಕ್ಕೂ ಮಾನ್ಯತೆ ಕೊಡಬಾರದೇಕೆ?
ಅದೇನು ಅಷ್ಟು ಸರಳವಾದ ಕಾಯಕವೆ? ಮನಗಳೊಂದಾಗದೇ ಮೈಗಳೊಂದಾಗುವುದು ಎಂದರೆ, ಸುಲಭದ ಮಾತಲ್ಲ. ದಿನಕ್ಕದೆಷ್ಟು ಬಾರಿ ಜೀವ ಕಳೆದುಕೊಂಡು ಮರಗಟ್ಟಿದ ಮೈಯನ್ನು ಯಂತ್ರವಾಗಿಸಬೇಕವಳು! ಸಜೀವ-ನಿರ್ಜೀವಗಳನ್ನು ಮೀರಿದ ಇನ್ನೊಂದೇ ಸ್ಥಿತಿ ತಲುಪಲು ಆಕೆಗಲ್ಲದೇ ಇನ್ನಾರಿಗೂ ಸಾಧ್ಯವಾಗದು.
ಮೊನ್ನೆ ನಮ್ಮೂರ ಪಂಚಾಯಿತಿ ಕಟ್ಟಡದ ಬದಿಯಲ್ಲಿ ಬೇಡುತ್ತಿದ್ದ ಹೆಂಗಸೊಬ್ಬಳನ್ನು ಕಂಡೆ. ದಾರಿಹೋಕರು ಅವಳ ಬಗೆಗೆ ನಿರ್ಲಕ್ಷ್ಯದಿಂದ ಮಾತಾಡುತ್ತಿದ್ದರು. “ಬೊಂಬಾಯಿಗೆ ಈಗ ಬೇಡವಾದ ಇವಳು ಇಲ್ಲಿ ಬೇಡುತ್ತಾ ಬಿದ್ದಿದ್ದಾಳೆ, ಬೇಡಿದ ಹಣದಿಂದ ಉಂಡಾದರೂ ಹೊಟ್ಟೆ ತುಂಬಿಸಿಕೊಳ್ಳುತ್ತಾಳಾ? ಅದೂ ಇಲ್ಲ, ಆ ದುಡೂx ಸಾರಾಯಿಗೆ ಅಂಗಡಿಗೇ ಹೋಗುವುದು, ಕುಲಗೆಟ್ಟ ಹೆಂಗಸು, ಕುಡಿದು ರಸ್ತೆ ಮಧ್ಯೆ ಬಿದ್ದಿರುತ್ತಾಳೆ’ಇವಳು ನನ್ನ ಗೆಳತಿಯ ಅಮ್ಮನೇ ಆಗಿದ್ದರೆ, ಎಂದು ಒಮ್ಮೆ ಅನ್ನಿಸಿ ಎದೆ ಧಸಕ್ಕೆಂದಿತು. ಪ್ರಾಯ ಕಾಲದಲ್ಲಿ ತನ್ನ ಮನೆಯವರನ್ನೆಲ್ಲ ಪೊರೆದಿರಬಹುದಾದ ಆ ತಾಯಿ ಪ್ರಾಯ ಕಳೆಯುತ್ತಲೇ ಕೈ ಬರಿದಾಗಿ ಕಾಯಿಲೆಯನ್ನು ಮಾತ್ರ ಹೊತ್ತು ಊರಿಗೆ ಬಂದರೆ, ಅವಳು ಯಾರಿಗೂ ಬೇಕಿಲ್ಲ. ಯಾರೋ ಪುಣ್ಯಾತ್ಮರು ಅವಳನ್ನು ಆಶ್ರಮಕ್ಕೆ ಸೇರಿಸಲು ಪ್ರಯತ್ನಿಸಿದರೂ ಅವಳದಕ್ಕೆ ತಯಾರೇ ಇರಲಿಲ್ಲವಂತೆ. ಈ ಅತಂತ್ರ ಬದುಕಿನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಬಹುಶಃ ಅವಳಿಗೆ ಬೇಕಿರಲಿಲ್ಲ.
ಸೀತೆ, ಯಾವುದೋ ಕಾರಣಕ್ಕೆ ಗೂಡಿನಿಂದ ಹೊರಬಿದ್ದ ಪುಟ್ಟ ಮರಿಯನ್ನು, ಅದರ ತಾಯಿ ಮತ್ತೆ ತನ್ನ ಗೂಡಿಗೆ ಸೇರಿಸಿಕೊಳ್ಳುವುದಿಲ್ಲ. ಕತ್ತಲ ಜಗತ್ತಲ್ಲಿ ಅರಳುವ ಈ “ಪಾಪದ ಹೂಗಳು’ ಮತ್ತೆಂದೂ ಬೆಳಕನ್ನು ಕಾಣುವುದಿಲ್ಲ. ಇದು ಕೊನೆಯಾಗಬೇಕಾದರೆ, ಹೆಣ್ಣಿನ ಅಸ್ಮಿತೆಯನ್ನು ಅವಳ ದೇಹದಲ್ಲಷ್ಟೇ ಕಾಣುವ ಕೆಟ್ಟ ಮನಸ್ಸುಗಳು ಬದಲಾಗಬೇಕು.
ಇದು ಸಾಧ್ಯವೇ ಸೀತಾ?
– ಅಭಿಲಾಷಾ ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.