ರೀ… ಏನ್ ಗೊತ್ತಾ?
ಆ ಗುಟ್ಟನ್ನು ಗಂಡನ ಕಿವಿಗೆ ಮುಟ್ಟಿಸಿ...
Team Udayavani, Apr 17, 2019, 6:15 AM IST
ಗಂಡನಿಗೆ ಹೇಳದೆ, ಯಾವುದೋ ನಿರ್ಧಾರ ತೆಗೆದುಕೊಂಡು, ಮುಂದೆ ಅದರಿಂದ ತೊಂದರೆ ಅನುಭವಿಸುವಂತಾದರೆ, ಆ ಕಷ್ಟವನ್ನೂ ಗಂಡನೊಂದಿಗೆ ಹಂಚಿಕೊಳ್ಳಲಾಗದು. ಆ ವಿಷಯ ಮೂರನೇ ವ್ಯಕ್ತಿಯಿಂದ ಗಂಡನಿಗೆ ಗೊತ್ತಾದರೆ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಆಗಬಹುದು…
“ಅಕ್ಕಾ, ನಿನಗಾದರೆ ಸರ್ಕಾರಿ ಕೆಲಸ ಇದೆ. ಯಾರ ಬಳಿಯೂ ದುಡ್ಡು ಕೇಳುವ ಪ್ರಸಂಗ ಬರುವುದಿಲ್ಲ. ನನ್ನ ಕಷ್ಟ ಯಾರ ಹತ್ರ ಹೇಳಿಕೊಳ್ಳಲಿ? ಗಂಡನಿಗೂ ನಿರ್ದಿಷ್ಟ ಸಂಬಳ ಇಲ್ಲ. ಅರ್ಜೆಂಟಾಗಿ ದುಡ್ಡು ಬೇಕು. 25 ಸಾವಿರ ಇದ್ರೆ ಕೊಟ್ಟಿರು. ಆದಷ್ಟು ಬೇಗ ವಾಪಸ್ ಕೊಡ್ತೀನಿ’ ಅಂತ ತಂಗಿ ಫೋನ್ ಮಾಡಿ ಕೇಳಿದಾಗ, ಉಷಾಳಿಗೆ ಏನು ಮಾಡುವುದು ಅಂತ ತೋಚಲಿಲ್ಲ.
ಮದುವೆಗಿಂತ ಮುಂಚೆ ಇದೇ ತಂಗಿ, ಉಷಾಳ ಎರಡೂ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಉಷಾ, ಕೆಲಸಕ್ಕೆ ಹೋಗಬೇಕಾದಾಗ, ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದಾಗ ಸಹಾಯಕ್ಕೆ ಬಂದವಳೇ ತಂಗಿ. ಆ ಚಿಕ್ಕ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದಳು. ತಂಗಿಯ ಸಹಕಾರದಿಂದ ಉಷಾ ನಿರಾತಂಕವಾಗಿ ನೌಕರಿ, ಮನೆ ಎರಡನ್ನೂ ನಿಭಾಯಿಸುತ್ತಿದ್ದಳು. ಈಗ ತಂಗಿಯ ಕಷ್ಟಕಾಲದಲ್ಲಿ ಆಕೆಗೆ ನೆರವಾಗುವುದು ತನ್ನ ಕರ್ತವ್ಯ ಅಂತ ಉಷಾಳಿಗೂ ಗೊತ್ತಿತ್ತು.
ಆದರೆ, ಆಕೆಯದ್ದು ಸಂದಿಗ್ಧ ಪರಿಸ್ಥಿತಿ. ಮದುವೆಗೆ ಮುಂಚೆ ಸರ್ಕಾರಿ ನೌಕರಿ ಸಿಕ್ಕಿದ್ದಂತೂ ನಿಜ. ಆದರೆ, ಮದುವೆಯ ನಂತರ ಹಣಕಾಸಿನ ವ್ಯವಹಾರದಲ್ಲಿ ಮೊದಲಿನ ಸಡಿಲಿಕೆ ಇರಲಿಲ್ಲ. 25 ಸಾವಿರ ಆಕೆಯ ಪಾಲಿಗೂ ದೊಡ್ಡ ಮೊತ್ತವೇ. ಕಷ್ಟಕಾಲವೆಂದು ಗೋಗರೆದಾಗ ಕೊಟ್ಟ ಹಣ ವಾಪಸ್ ಬರುತ್ತದೆಂಬ ಖಾತ್ರಿ ಉಷಾಗೆ ಇಲ್ಲ. ಜೊತೆಗೆ ಅದರ ಆಸೆಯನ್ನೂ ಉಷಾ ಇಟ್ಟುಕೊಂಡಿರಲಿಲ್ಲ. ಆದರೆ, ಇದನ್ನೆಲ್ಲ ಗಂಡನಿಗೆ ಹೇಗೆ ಹೇಳ್ಳೋದು? ಅವರು ಒಪ್ಪುವರಾ? ದುಡ್ಡು ವಾಪಸ್ ಬರದಿದ್ದರೂ ಸುಮ್ಮನಿರಬಹುದಾ? ನನ್ನ ಹಣವನ್ನು ನಾನು ಯಾರಿಗಾದರೂ ಕೊಡುತ್ತೇನೆಂದು ಹೇಳದೇ ಕೊಟ್ಟು ಬಿಡಲಾ ಅಥವಾ ಒಂದು ಮಾತು ಕೇಳಬೇಕಾ?ಅವರೇನಾದ್ರೂ ಬೇಡ ಅಂದುಬಿಟ್ಟರೆ? ಎಂಬ ಪ್ರಶ್ನೆಗಳು ಉಷಾಳನ್ನು ಕಾಡತೊಡಗಿದವು.
ಪಕ್ಕದ ಮನೆಯಾಕೆಯ ಮಾತು ಕೇಳಿ ಸುಷ್ಮಾ ಚೀಟಿ ಹಣ ಕಟ್ಟಲು ಶುರುಮಾಡಿದ್ದಳು. ಗಂಡ ಕೊಡುವ ಹಣದಲ್ಲೇ ಅಲ್ಪಸ್ವಲ್ಪ ಉಳಿಸಿ ಪ್ರತಿ ತಿಂಗಳು ಹಣ ಕಟ್ಟುತ್ತಿದ್ದಳು. ಆದರೆ, ವಿಷಯ ಗಂಡನಿಗೆ ಗೊತ್ತಿರಲಿಲ್ಲ. ಆಕೆಯ ದುರದೃಷ್ಟಕ್ಕೆ, ಚೀಟಿ ನಡೆಸುತ್ತಿದ್ದ ವ್ಯಕ್ತಿ ಹಣವನ್ನೆಲ್ಲ ಎತ್ತಿಕೊಂಡು ಪರಾರಿ. ಈಗ ವಿಷಯವನ್ನು ಗಂಡನಿಗೆ ಹೇಳುವಂತಿಲ್ಲ, ಬಿಡುವಂತಿಲ್ಲ ಎಂಬ ಸಂದಿಗ್ಧ ಸ್ಥಿತಿ ಸುಷ್ಮಾಳದ್ದು.
ಹೆಣ್ಮಕ್ಕಳ ಜೀವನದಲ್ಲಿ ಇಂಥ ಸಾಕಷ್ಟು ಸಂದರ್ಭಗಳು ಬರುತ್ತವೆ. ಇಲ್ಲಿ ಕೇವಲ ಹಣಕಾಸಿನ ವ್ಯವಹಾರದ ಬಗ್ಗೆ ಹೇಳಲಾಗಿದೆ. ಆದರೆ, ಜೀವನದುದ್ದಕ್ಕೂ ಬಹಳಷ್ಟು ವಿಷಯಗಳಲ್ಲಿ, ಹೆಣ್ಣು ಗಂಡನಿಗೆ ಹೇಳಿಯೇ ಮುಂದಡಿ ಇಡಬೇಕಾದ ನೈತಿಕತೆ ಎದುರಾಗುತ್ತದೆ. (ಈ ಮಾತು ಗಂಡಿಗೂ ಅನ್ವಯಿಸುತ್ತದೆ) ಗಂಡನಿಗೆ ಹೇಳಿದರೆ ಅವರು ಬೈಯಬಹುದೇನೋ, ಬೇಡ ಅನ್ನಬಹುದೇನೋ ಅಂತ, ವಿಷಯವನ್ನು ಮುಚ್ಚಿಟ್ಟು, ಮುಂದೆ ತೊಂದರೆಗೆ ಈಡಾಗುವವರನ್ನು ನೋಡಿದ್ದೇವೆ. ಗಂಡನಿಗೆ ಹೇಳದೆ, ಯಾವುದೋ ನಿರ್ಧಾರ ತೆಗೆದುಕೊಂಡು, ಮುಂದೆ ಅದರಿಂದ ತೊಂದರೆ ಅನುಭವಿಸುವಂತಾದರೆ, ಆ ಕಷ್ಟವನ್ನೂ ಗಂಡನೊಂದಿಗೆ ಹಂಚಿಕೊಳ್ಳಲಾಗದು. ಆ ವಿಷಯ ಮೂರನೇ ವ್ಯಕ್ತಿಯಿಂದ ಗಂಡನಿಗೆ ಗೊತ್ತಾದರೆ ಸಂಸಾರದಲ್ಲಿ ಅಲ್ಲೋಲ ಕಲ್ಲೋಲವಾಗಬಹುದು.
ಸ್ವಂತದವರಿಗೆ ಹಣಕಾಸಿನ ಸಹಾಯ ಮಾಡುವುದಾಗಲಿ, ಯಾರಧ್ದೋ ಮಾತು ಕೇಳಿ ಹಣ ಹೂಡಿಕೆ ಮಾಡುವುದಾಗಲಿ ಅಥವಾ ಬೇರೆ ಯಾವುದೇ ವಿಚಾರವಾಗಲಿ, ಗಂಡನಿಗೆ ಮೊದಲೇ ತಿಳಿಸಿದರೆ ಉತ್ತಮ. ಇದು ಅನುಮತಿಯ ಪ್ರಶ್ನೆ ಮಾತ್ರವೇ ಅಲ್ಲ. ನಿಮ್ಮ ನಿರ್ಧಾರದ ಬಗ್ಗೆ ಗಂಡನ ಅನಿಸಿಕೆ, ತಿಳಿವಳಿಕೆ ಪಡೆಯುವುದು ಜಾಣತನ.
ಇಂಥದ್ದೇ ಸಂದರ್ಭದಲ್ಲಿ ಸಿಲುಕಿದ ಉಷಾ, ಸುಷ್ಮಾಳಂತೆ ಕದ್ದು ಮುಚ್ಚಿ ವ್ಯವಹಾರ ನಡೆಸಲಿಲ್ಲ. ಇದ್ದ ಸಂಗತಿಯನ್ನು ಗಂಡನಿಗೆ ತಿಳಿಸಿದಳು. ತನ್ನ ಮಕ್ಕಳ ಪಾಲನೆಯ ವಿಷಯದಲ್ಲಿ ನಾದಿನಿ ತೋರಿದ ಪ್ರೀತಿ, ವಾತ್ಸಲ್ಯ ಕಾಳಜಿ ಆತನಿಗೂ ಗೊತ್ತಿತ್ತು. ಮರುಮಾತಾಡದೆ ಸಹಾಯ ಮಾಡಲು ಒಪ್ಪಿಕೊಂಡ. “ಅವಳು ನಮಗೆ ಕಷ್ಟ ಕಾಲದಲ್ಲಿ ನೆರವಾಗಿದ್ದಾಳೆ. ಯಾವ ದುಡ್ಡೂ ಆಕೆ ತೋರಿದ ಪ್ರೀತಿಗೆ ಸಮವಲ್ಲ. ಆಕೆ ವಾಪಸ್ ಕೊಟ್ಟರೂ ನೀನು ಹಣ ತಗೋಬೇಡ’ ಅಂದಾಗ ಉಷಾಳಿಗಾದ ನೆಮ್ಮದಿ ಅಷ್ಟಿಷ್ಟಲ್ಲ.
ಗಂಡನಿಗೂ ಅನ್ವಯ
ಇದು ಬರೀ ಗಂಡ ಹೆಂಡತಿಗೆ ಸಂಬಂಧಿಸಿದ್ದಲ್ಲ. ಇದರ ವಿಸ್ತಾರ ಮದುವೆಯಾಗದ ಹೆಣ್ಣು ಮಗಳಿಗೂ ಅನ್ವಯ. ನಿಮ್ಮ ನಿರ್ಧಾರವನ್ನು ಅಪ್ಪ- ಅಮ್ಮ, ಅಣ್ಣ, ಅಕ್ಕ, ತಮ್ಮ ಅಥವಾ ನಿಮ್ಮ ಜವಾಬ್ದಾರಿಯನ್ನು ಹೊರುವ ಕುಟುಂಬದ ಸದಸ್ಯರಿಗೆ ತಿಳಿಸಿಬಿಡಿ. ಇಲ್ಲವಾದರೆ ನೀವು ಕಷ್ಟದಲ್ಲಿ ಸಿಕ್ಕಾಗ ಅವರ ಸಹಾಯವನ್ನು ಅಪೇಕ್ಷಿಸುವುದು ತಪ್ಪಾಗುತ್ತದೆ. ನಮಗೆ ಗೊತ್ತೇ ಇರಲಿಲ್ಲ ಎಂಬ ನೆಪವೊಡ್ಡಿ ನಿಮ್ಮ ಸಹಾಯಕ್ಕೆ ಅವರು ಬರದೇ ಇರಬಹುದು ಅಥವಾ ನೀವು ಸಿಲುಕಿಕೊಂಡ ಸುಳಿ ದುರ್ಗಮವಾಗಿ ಅವರು ಅಸಹಾಯಕರಾಗಬಹುದು.
— ಮಾಲಾ ಮ. ಅಕ್ಕಿಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.