ನಾನು ಸೀತೆ, ನಿಮ್ಮ ಮಗಳು…


Team Udayavani, Mar 21, 2018, 5:14 PM IST

nanu-seethe.jpg

ಸಾಧ್ವಿ ಸ್ತ್ರೀಯರನ್ನು ನಾವು ಕರೆಯೋದು ಸೀತೆ ಅಂತಲೇ. ಕಾರಣ, ಸೀತೆ ಸಮಸ್ತ ಸ್ತ್ರೀ ಕುಲಕ್ಕೇ ಮಾದರಿ. ಆದರೆ, ಲಕ್ಷ್ಮಿಯ ಅವತಾರ, ಪತಿವ್ರತಾ ಶಿರೋಮಣಿ, ಸಹನಾಶೀಲೆ, ಆದರ್ಶ ಪತ್ನಿಯೆಂದು ಗೌರವಿಸಲ್ಪಟ್ಟ ಸೀತೆಯ ಅಂತರಂಗವೇನಾಗಿತ್ತು ಎಂದು ಕೇಳಿದವರು ಕಡಿಮೆ. ಇಲ್ಲಿ ಸೀತೆಯ ಮಾತೊಂದು ಕೇಳುತಿದೆ, ಸ್ವಗತವಾಗಿ, ಹೆಣ್ಣೊಬ್ಬಳ ಬಾಳಿನ ಹಾಡಾಗಿ. ತನಗೆ ಸಿಕ್ಕಿದ ದೈವಸ್ವರೂಪಿ ಪಟ್ಟದ ಬಗ್ಗೆ ಅಚ್ಚರಿಪಡುವ ಆಕೆ, ಬದುಕೆಂದರೆ ಹೀಗೆ ಎಂದು ಸಣ್ಣ ಜೀವನಪಾಠವನ್ನೂ ಮಾಡಿದ್ದಾಳೆ. ಸೀತೆಯ ಈ ಸ್ವಗತ, ನಮ್ಮ ನಡುವಿನ ಸೀತೆಯರ ಸ್ವಗತವೂ ಹೌದು. ರಾಮನವಮಿಯ (ಮಾ.25) ಗುಂಗಿನಲ್ಲಿರುವ ನಮಗೆಲ್ಲ ಸೀತೆಯ ಮಾತುಗಳು ಪಾನಕದಷ್ಟೇ ಸಿಹಿಯಾಗಿ ತಂಪೆರೆಯಬಹುದು…

ನಾನು ನಿಮ್ಮ ಸೀತಮ್ಮ, ಸೀತೆ, ಸೀತಾದೇವಿ. ನನ್ನ ಹುಟ್ಟೊಂದು ವಿಚಿತ್ರ. ಬೆಳವಣಿಗೆಯೂ ವಿಚಿತ್ರ. ಒಟ್ಟಿನಲ್ಲಿ ನಾನು ಮಣ್ಣಿನ ಮಗಳು ಎಂಬುದು ಜನಜನಿತ. ನನ್ನ ಹುಟ್ಟು- ಬೆಳವಣಿಗೆಯ ಭೌತಿಕಾಭೌತಿಕ, ಇಲ್ಲವೆ ದೈವಿಕತೆಯನ್ನು ಹೇಳುವುದು ನನ್ನ ಉದ್ದೇಶವಲ್ಲ. ಬದುಕನ್ನು ನಾನು ಹೇಗೆ ಸ್ವೀಕರಿಸಿದೆ, ಏಕೆ ಹಾಗೆಯೇ ಸ್ವೀಕರಿಸಿದೆ ಎಂಬುದನ್ನು ವಿವರಿಸುತ್ತಿದ್ದೇನಷ್ಟೆ. ನಾನು ನಿಮಗೆ ಎಷ್ಟು ಪ್ರಸ್ತುತಳ್ಳೋ ಗೊತ್ತಿಲ್ಲ. ಆದರೂ ನಿಮ್ಮೆದುರು ನನ್ನನ್ನು ತೆರೆದುಕೊಳ್ಳಬೇಕೆನಿಸುತ್ತಿದೆ.

ನಾನು ಬದುಕಿನಲ್ಲಿ ಪರರಿಂದ ಬೇಕಾದಷ್ಟು ಅನುಮಾನ, ಅವಮಾನಗಳನ್ನು ಅನುಭವಿಸಿದ್ದೇನೆ. ಇದೇ ಜಗತ್ತಿನಲ್ಲಿ ನಾನು ಬೇಕಾದಷ್ಟು ಮಾನ- ಸನ್ಮಾನಗಳಿಗೂ ಪಾತ್ರಳಾಗಿದ್ದೇನೆ. ಪ್ರಪಂಚದಲ್ಲೇ ಯಾವೊಬ್ಬ ಮಹಿಳೆಯೂ ಕಂಡಿರದಷ್ಟು ದುಷ್ಟರನ್ನು,  ಕ್ರೂರಿಗಳನ್ನು ಕಂಡಿದ್ದೇನೆ. ಹಾಗೆಯೇ ಅಷ್ಟೇ ಸಜ್ಜನರನ್ನೂ ನೋಡಿದ್ದೇನೆ. ಒಂದು ಕಡೆ ದುರ್ದೈವ, ಮತ್ತೂಂದು ಕಡೆ ಸುದೈವ. ನಾನು ಪುಣ್ಯವಂತೆಯೋ? ಪಾಪಿಯೋ ಗೊತ್ತಿಲ್ಲ.

ಈ ಜಗತ್ತು ನನ್ನನ್ನು ಮಾದರಿಯಾಗಿ ಕಂಡಿದ್ದಿದೆ. ಇವಳೆಂಥ ಮಾದರಿ ಎಂದು ಹಂಗಿಸಿ, ಭಂಗಿಸಿದವರಿಗೂ ಕೊರತೆಯಿಲ್ಲ. ಅಂತೆಯೇ ನನ್ನನ್ನು ಅವತಾರಿಣಿಯಾಗಿ, ಭವತಾರಿಣಿಯಾಗಿ ಕಂಡವರಿದ್ದಾರೆ. ನನ್ನಲ್ಲಿ ನಿಗ್ರಹಾನುಗ್ರಹ ಶಕ್ತಿ ಇದೆಯೆಂದು ನಾನೆಂದೂ ಭಾವಿಸಿಲ್ಲ. ಇದ್ದರೆ ತಾನೇ ಭಾವಿಸುವುದು! (ಅದನ್ನೆಲ್ಲ ನನ್ನ ಪತಿದೇವರಿಗೇ ಬಿಟ್ಟಿದ್ದೇನೆ) ನನ್ನನ್ನು ಮಹಾಲಕ್ಷ್ಮಿ ಎಂದವರಿಗೆ ಯಾವ ಲಕ್ಷ್ಮಿಕೃಪೆಯನ್ನು ಕರುಣಿಸಿದ್ದೂ ನೆನಪಿಲ್ಲ!

ಈ ಅವತಾರದ ವಿಷಯ ಬಹಳ ಕಷ್ಟದ್ದು. ಒಂದು ಸಾರಿ ಜನರ ಬಾಯಿಂದ ಇಂಥ ಸೊಲ್ಲು (ಅವತಾರತ್ವ) ಗಟ್ಟಿಗೊಂಡಿತೆಂದರೆ ಮುಗೀತು. ಯುಗಯುಗಾಂತರಗಳವರೆಗೂ ಅದನ್ನು ಮುರಿಯಲಾಗದು. ಜನರ ನಂಬಿಕೆಯ ಬೇರು ಬಹಳ ಭದ್ರ. ಯಾರನ್ನು, ಯಾವುದನ್ನು ಎಷ್ಟು ನಂಬಬೇಕು? ಏಕೆ ನಂಬಬೇಕೆಂಬ ಚಿಂತೆಯ ಗೊಡವೆಯೇ ಅವರಿಗಿಲ್ಲ. ಈ ನಂಬಿಕೆಯಿಂದಲೇ ಬೆಳಗಾಗುವಷ್ಟರಲ್ಲಿ ಮುಗಿಲು ಮುಟ್ಟಿದವರಿದ್ದಾರೆ. ಹಾಗೆ ಮುಟ್ಟಿಸಿದ್ದಾರೆ ಜನರು. ಅದು ಜನರದ್ದೂ ತಪ್ಪಲ್ಲ. ಅವರನ್ನು ಹಾಗೆ ಮಾಡಿದವರದ್ದೇ ತಪ್ಪು.

ಆರಾಧನೆ ತಪ್ಪಲ್ಲ, ಏನನ್ನು ಆರಾಧಿಸಬೇಕೆಂಬುದು ಮುಖ್ಯ. ಯಾರೂ ಅಂತರಂಗಕ್ಕಿಳಿದು ನೋಡುವುದಿಲ್ಲ, ತಣ್ತೀಚಿಂತನೆ ಕೇಳಲೇಬೇಡಿ. ಎಲ್ಲ ಕಡೆ ಗುಣಗಳ ಆರಾಧನೆಯಾಗಬೇಕು. ಶ್ರೇಷ್ಠತೆಯ ಆರಾಧನೆಯಾಗಬೇಕು. ಅದು ಯಾರಲ್ಲೇ ಇರಲಿ. ಪೂರ್ವದೃಷ್ಟಿಯಿಂದ ನೋಡದೇ ಆರಾಧಿಸಿದರೆ ಅದು ಸತ್ಯಾರಾಧನೆಯಾದೀತು. ಏಕೆಂದರೆ ಸತ್ಯ ಒಂದೇ. ಅದು ಬದಲಾಗದ್ದು. ಸತ್ಯವೇ ದೇವರು.
 
ಇದೇ ಹಿನ್ನೆಲೆಯಲ್ಲಿಯೇ ನಾನು ಶ್ರೀರಾಮನೆಂಬ ನನ್ನ ಪಾಲಿನ ಸತ್ಯವನ್ನು ನಂಬಿದೆ. ಆ ಸತ್ಯ ನನ್ನನ್ನು ಎಲ್ಲೆಲ್ಲಿಗೆ ಕರೆದೊಯ್ಯಿತೋ ಅಲ್ಲೆಲ್ಲಾ ಹೋದೆ. ನಾನು ನಂಬಿದ ದೈವವೇ ನನ್ನನ್ನು ಹತ್ತು ಹಲವು ಪರೀಕ್ಷೆಗೆ ಒಡ್ಡಿತು. ಪರೀಕ್ಷೆಗಳು ಬರುವುದೇ ನಮ್ಮ ಶಕ್ತಿ – ಸಹನೆಗಳನ್ನು ಪರೀಕ್ಷಿಸುವುದಕ್ಕೆ. ಪ್ರಾಮಾಣಿಕವಾಗಿ ಪರೀಕ್ಷೆಗಳನ್ನು ಎದುರಿಸಿ ಅನುತ್ತೀರ್ಣರಾದರೂ ಅದು ಸೋಲಲ್ಲ, ಅವಮಾನವಲ್ಲ ಎಂದು ಭಾವಿಸಿರುವವಳು ನಾನು. ಪಾಲಿಗೆ ಬಂದದ್ದೇ ಪಂಚಾಮೃತ ಎಂದುಕೊಂಡೆ. 

ಹಾಗೆ ಪರೀಕ್ಷೆಗೆ ಒಡ್ಡಿಕೊಳ್ಳುವ ಪ್ರಸಂಗ ಬಂದಾಗಲೆಲ್ಲಾ ನನ್ನವರನ್ನು ದೂಷಿಸಲಿಲ್ಲ. ದೂಷಣೆಗೆ ಕಾರಣರಾದವರನ್ನೂ ದೂಷಿಸಲಿಲ್ಲ. ನನ್ನ ಅದೃಷ್ಟವೇ ಇದಕ್ಕೆ ಕಾರಣವೆಂದು ಭಾವಿಸಿ ಸಮಾಧಾನಪಟ್ಟೆ. ಹಿಂದೆ ಹೇಳಿದಂತೆ ಭಗವತಿಯ ಅಪರಾವತಾರವೆಂದು ನಾನೆಂದೂ ಭಾವಿಸಿದ್ದಿಲ್ಲ. ಅಂತೆಯೇ ನನ್ನವರೂ ತಮ್ಮನ್ನು ಅವತಾರಪುರುಷರೆಂದು ಹೇಳಿಕೊಂಡ ನೆನಪೂ ಇಲ್ಲ. “ಆತ್ಮಾನಂ ಮಾನುಷಂ ಮನ್ಯೆà’ ಎಂದೇ ಹೇಳುತ್ತಿದ್ದರು. ನಮ್ಮ, ಅಂದರೆ ಅಯೋಧ್ಯೆಯ ಸಮಸ್ತ ಹಿಂದು- ಮುಂದನ್ನು ಚಿತ್ರಿಸಿದ ನನಗೆ ಪಿತೃಸ್ವರೂಪರಾಗಿದ್ದ ವಾಲ್ಮೀಕಿಗಳೂ ಕೂಡ ಜಗತ್ತಿಗೆ ಮಾದರಿಯಾದ ಒಬ್ಬ ಪುರುಷನ ಕಥೆಯನ್ನೇ ಹೇಳಿದ್ದೆಂದು ನಾನೂ ಭಾವಿಸಿದ್ದೇನೆ.

ಮಗಳೇ, ನಾನು ಬರೆದದ್ದು ರಾಮನ ಕಥೆಯೂ ಹೌದು, ನಿನ್ನ ಕಥೆಯೂ ಹೌದು ಎಂದು ಅವರು ಒಮ್ಮೆ ಹೇಳಿದ ನೆನಪು. ಸೀತಾಯಾಶ್ಚರಿತಂ ಮಹತ್‌ ಎಂದು ನೇರವಾಗಿ ಹೇಳಿದ್ದಿದೆ. ಆಗೆಲ್ಲ ನನಗೆ ಬಹಳ ಮುಜುಗುರವಾಗುತ್ತಿತ್ತು. ನನ್ನ ಪಾಡಿಗೆ ನಾನು ಇರುತ್ತಿದ್ದೆ, ಯಾಕಪ್ಪ ಈ ತಾತ ನನ್ನನ್ನು ಹೊರಜಗತ್ತಿನೆದುರು ನಿಲ್ಲಿಸುತ್ತಿದ್ದಾರಪ್ಪ ಎನ್ನಿಸದಿರಲಿಲ್ಲ. ನನಗೆ ಚಿಕ್ಕಂದಿನಿಂದಲೂ ಹೊರ ಜಗತ್ತಿಗಿಂತಲೂ ಒಳ ಜಗತ್ತಿನಲ್ಲಿ ವಿಹರಿಸುವುದೇ ಬಹಳ ಇಷ್ಟವಾಗಿತ್ತು.

ಇದು ಒತ್ತಟ್ಟಿಗಿರಲಿ, ಪುರುಷನೊಬ್ಬ ಹೇಗೆ ಸ್ವಶಕ್ತಿಯಿಂದ ಪುರುಷೋತ್ತಮನಾಗಿ ಬೆಳೆಯಬಲ್ಲ ಎಂಬುದಕ್ಕೆ ಜ್ವಲಂತ ಉದಾಹರಣೆಯನ್ನು ಕೊಡುವುದೇ ತಾತನ ಮಹಾಕಾವ್ಯದ ತಾತ್ಪರ್ಯವೆಂದು ನನ್ನ ಗ್ರಹಿಕೆ. ನನ್ನ ಗ್ರಹಿಕೆಯೇ ಅಂತಿಮವೆಂದೇನೂ ಅಲ್ಲ. ಅಂತಿಮವಾಗಬೇಕಾಗಿಯೂ ಇಲ್ಲ. ಅವರವರ ದೃಷ್ಟಿ ಅವರವರಿಗೆ. ದೃಷ್ಟಿಯಂತೆ ಸೃಷ್ಟಿ. 

ಇಷ್ಟೆಲ್ಲಾ ಹೇಳುವುದಕ್ಕೆ ಮುಖ್ಯ ಕಾರಣ, ನಾನೂ ನಿಮ್ಮಂತೆಯೇ ಒಬ್ಬ ಸಾಮಾನ್ಯ ಸ್ತ್ರೀ ಎಂಬುದನ್ನು ತಿಳಿಸುವ ಉದ್ದೇಶವಷ್ಟೇ. ಆದರೆ, ಬದುಕಿನಲ್ಲಿ ಅಷ್ಟೇ ಅಸಾಮಾನ್ಯ ಸಂದರ್ಭಗಳನ್ನು ಎದುರಿಸಬೇಕಾಯಿತೆಂಬುದೂ ಸತ್ಯ. ಅವುಗಳೆಲ್ಲ ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿದವು. ನನ್ನನ್ನು ಪರಿಪಕ್ವತೆಯ ಕಡೆಗೊಯ್ದವು. ನಾನು ನಿಜವಾಗಿಯೂ ಮನುಷ್ಯಳಾಗಲು ಪ್ರೇರೇಪಣೆ ನೀಡಿದವು. ನನ್ನಂತೆ ವಿಭಿನ್ನ ಸ್ವರೂಪದ ಅನಿರೀಕ್ಷಿತ ಅಸಾಮಾನ್ಯ ಘಟನೆಗಳಿಗೆ ಸಾಕ್ಷಿಗಳಾದ ಬೇಕಾದಷ್ಟು ಮಂದಿ ಇರಬಹುದು.

ಆದರೆ, ನನ್ನ ಬಗ್ಗೆ ಅದೇಕೋ ಎಲ್ಲರಿಗೂ ಹೆಚ್ಚು ಪ್ರೀತಿ, ಅನುಕಂಪ, ಅನಿರ್ವಚನೀಯ ಆತ್ಮೀಯತೆ. ಬಹುಶಃ ನಾನು ವ್ಯಕ್ತಳಾದೆ. ಅವರು ಅವ್ಯಕ್ತರಾಗಿ ಉಳಿದರು. ನನ್ನ ಹುಟ್ಟೂ ದುರಂತದ್ದು. ಅಂತ್ಯವೂ ದುರಂತದ್ದು. ಹುಟ್ಟು- ಸಾವುಗಳ ಮಧ್ಯೆ ಅಪ್ಪಿದ ಕಷ್ಟಕಾರ್ಪಣ್ಯಗಳೆಷ್ಟೋ? ಆದರೆ, ನಾವು ಹುಟ್ಟುವುದೇ ಕಷ್ಟಪಡುವುದಕ್ಕೆ ಅಂತ ಯೋಚಿಸಬಾರದು. ಕೊರಗುತ್ತಾ ಕೂರಬಾರದು. ಹಾಗೆ ಯೋಚಿಸಿದರೆ ಬದುಕನ್ನು ಅವಮಾನಿಸಿದಂತೆ. ಬಂದಿದ್ದನ್ನು ಬಂದಂತೆಯೇ ಸ್ವೀಕರಿಸುತ್ತಾ ಸಾಗಬೇಕು. ಇದು ನಾನು ಜೀವನದಲ್ಲಿ ಕಲಿತ ಪಾಠ. ನನಗೆ ಈ ಧೀಶಕ್ತಿ ಎಲ್ಲಿಂದ ಬಂತೆಂದು ವಿಸ್ಮಯವಾದದ್ದಿದೆ.

ಆಗೆಲ್ಲ ನನಗೆ ನೆನಪಾಗುತ್ತಿದ್ದದ್ದು ನನ್ನಪ್ಪ ಜನಕ ಮಹಾರಾಜ. ಅವರು ನನಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರ, ತದನಂತರ ಒಳ್ಳೆಯ ಶಿಕ್ಷಣ, ಎಷ್ಟೇ ಕಷ್ಟ ಬಂದರೂ ಧರ್ಮದ ದಾರಿಯನ್ನು ಎಂದೂ ಬಿಡಬಾರದೆಂದು ಉಪದೇಶಿಸಿದ್ದು,  ನೈತಿಕ ನೆಲೆಗಟ್ಟಿನಲ್ಲಿಯೇ ಬದುಕಬೇಕೆಂದು ಆದೇಶಿಸಿದ್ದು ಬಾಳಿನುದ್ದಕ್ಕೂ ಬುತ್ತಿಯಾಯಿತು. ಅವರು ಕೊಟ್ಟ ಒಂದೊಂದು  ಮಾತೂ ನನಗೆ ಉಪದೇಶವೂ ಹೌದು, ಆದೇಶವೂ ಹೌದು. ಈ ಪೂರ್ವಪೀಠಿಕೆಯ ತಳಹದಿಯ ಮೇಲೆ ಸಂಕ್ಷಿಪ್ತವಾಗಿ ನನ್ನ ಬದುಕನ್ನು ತೆರೆದಿಡುವ ಪ್ರಯತ್ನ ನನ್ನದು…

(ಮುಂದುವರಿಯುತ್ತದೆ)

* ಸಿ.ಎ. ಭಾಸ್ಕರ ಭಟ್ಟ

ಟಾಪ್ ನ್ಯೂಸ್

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.