“ವಿಶಾಲಾ’ ಪ್ರಪಂಚ
Team Udayavani, Jul 25, 2018, 6:00 AM IST
ಹೀರೋ ಪತ್ನಿ ಅಂದಾಕ್ಷಣ, ಆಕೆ ಪ್ಯಾಲೇಸ್‌ನಂಥ ಲಕ್ಷುರಿ ಮನೆಯಲ್ಲಿ ಬೆಚ್ಚನೆ ರಾಣಿಯ ಹಾಗೆ ಕೂತಿರುತ್ತಾಳೆ ಎನ್ನುವುದು ಸಾಮಾನ್ಯ ಕಲ್ಪನೆ. ಆದರೆ, ಬಹುಭಾಷಾ ನಟ ಕಿಶೋರ್ ಅವರ ಪತ್ನಿ ವಿಶಾಲಾ ಅವರನ್ನು ನೋಡಿದರೆ, ಈ ಕಲ್ಪನೆಯೇ ಶುದ್ಧ ಸುಳ್ಳಾಗುತ್ತೆ. ಕಾರಣ, ವಿಶಾಲಾ ಅವರು ರೆಡ್‌ಕಾರ್ಪೆಟ್ ಮೇಲೆ ನಡೆದು, “ಪೇಜ್ 3′ ಪುಟಗಳಿಗೆ ಗ್ಲ್ಯಾಮರ್ ಸರಕಾಗುವವರಲ್ಲ. ಒಬ್ಬ ರೈತನ ಪತ್ನಿ ಹೇಗಿರಬೇಕೋ ಹಾಗೆ, ಅಷ್ಟು ಸರಳವಾಗಿದ್ದಾರೆ, ವಿಶಾಲಾ. ಅಪ್ಪಟ ದೇಸಿತನ ಇವರ ಉಸಿರು. ಮಣ್ಣಿನ ಸಂಸ್ಕೃತಿಯೇ ಇವರ ಜೀವಾಳ. ಸಾವಯವ ಕೃಷಿಯಲ್ಲಿ ತೊಡಗಿ, ಆ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲೂ ತೊಡಗಿದ್ದಾರೆ…
ನೀವು ಕೃಷಿ ಕುಟುಂಬದ ಹಿನ್ನೆಲೆಯವರಾ? ಈ ಹಸಿರು ಪ್ರೀತಿ ಹೇಗೆ ಹುಟ್ಟಿತು?
ನಾನು ಅಪ್ಪಟ ಸಿಟಿ ಹುಡುಗಿ. ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ನನ್ನ ಅಪ್ಪ, ತಾತ ಸರ್ಕಾರಿ ನೌಕರಿಯಲ್ಲಿದ್ದವರು. ಹಾಗಾಗಿ, ಬಾಲ್ಯದಲ್ಲಿ ನನಗೆ ವ್ಯವಸಾಯದ ಪರಿಚಯವೇ ಇದ್ದಿರಲಿಲ್ಲ. ಕಿಶೋರ್ ಅವರನ್ನು ಕಟ್ಟಿಕೊಂಡ ಮೇಲೆಯೇ ನನಗೆ ವ್ಯವಸಾಯದ ಬಗ್ಗೆ ಅರಿವು ಮೂಡಿದ್ದು. ಅದು ಕೂಡ ಸಂಪೂರ್ಣವಾಗಿ ಅಲ್ಲ. ಕಿಶೋರ್ ಅವರ ಚಿಕ್ಕಮ್ಮ ಒಬ್ಬರು ಕನಕಪುರದ ಬಳಿ ಹಳ್ಳಿಯೊಂದರಲ್ಲಿದ್ದರು. ಅವರಿಗೆ ಜಮೀನಿತ್ತು. ಆಗಾಗ್ಗೆ ನಾನು ಮತ್ತು ಕಿಶೋರ್ ಹೋಗಿ, ಅವರಿಗೆ ಜಮೀನಿನ ಕೆಲಸದಲ್ಲಿ ಕೈಲಾದ ಸಹಾಯ ಮಾಡುತ್ತಿದ್ದೆವು. ನಾವೇ ಸ್ವತಃ ಕೃಷಿಕರಾಗುವ ಮೊದಲು ಇದಿಷ್ಟೇ ನಮಗೆ ವ್ಯವಸಾಯದಲ್ಲಿದ್ದ ಅನುಭವ. ನಾವು ವ್ಯವಸಾಯ ಆರಂಭಿಸಿ, 9 ವರ್ಷಗಳೇ ಆದವು.
ಸಂಪೂರ್ಣವಾಗಿ ವ್ಯವಸಾಯಕ್ಕೆ ಇಳಿಯಬೇಕೆಂಬ ಯೋಚನೆ ಮೊಳೆತಿದ್ದು ಯಾವಾಗ?
ನನಗೆ ಮೊದಲಿನಿಂದಲೂ ಪ್ರಾಣಿಗಳನ್ನು ಸಾಕುವ, ಗಿಡಗಳನ್ನು ಬೆಳೆಸುವ ಆಸಕ್ತಿ ಇತ್ತು. ನಾನು 10ನೇ ತರಗತಿಯಲ್ಲಿದ್ದಾಗ ಶಾಲೆಯಿಂದ ಬನ್ನೇರುಘಟ್ಟಕ್ಕೆ ಪ್ರವಾಸ ಹೋಗಿದ್ದೆವು. ಇಂದಿನ ಬೆಂಗಳೂರಿನ ಜೊತೆ ಅಂದಿನ ಬೆಂಗಳೂರನ್ನು ಹೋಲಿಸಲೂ ಸಾಧ್ಯವಿರಲಿಲ್ಲ. ಜೆ.ಡಿ.ಹಳ್ಳಿ ದಾಟುತ್ತಿದ್ದಂತೆ ಆಗ ನಮಗೆ ಹಳ್ಳಿಗಳು, ಕಾಡು, ಕೆರೆಕಟ್ಟೆಯೇ ಕಾಣಿಸುತ್ತಿತ್ತು. ರಾಗಿ ಹೊಲಗಳೇ ಹೆಚ್ಚಾಗಿ ಇರುತ್ತಿದ್ದವು. ನನಗೆ ಅಂದಿನಿಂದ ಬನ್ನೇರುಘಟ್ಟದ ಸೆಳೆತ ಶುರುವಾಯಿತು. ಬನ್ನೇರುಘಟ್ಟದ ಬಳಿಯೇ ಇರಬೇಕು, ಪ್ರಕೃತಿಗೆ ಹತ್ತಿರವಾಗಿ ಜೀವನ ನಡೆಸಬೇಕು ಅಂತೆಲ್ಲಾ ಕನಸು ಕಟ್ಟಲು ಆರಂಭಿಸಿದೆ. ವ್ಯವಸಾಯ ಆರಂಭಿಸಬೇಕು ಎಂದು ತೀರ್ಮಾನಿಸಿದಾಗಲೂ ನಾವು ಜಮೀನು ಕೊಂಡಿದ್ದು ಬನ್ನೇರುಘಟ್ಟದ ಬಳಿಯ ರಾಗಿಹಳ್ಳಿಯಲ್ಲಿಯೇ. ಇವೆಲ್ಲದರ ನಡುವೆ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪರಿಸರ ವಿಜ್ಞಾನ ಓದಬೇಕು ಅಂತಿದ್ದವಳು ಸಿ.ಎ. ಮಾಡಿದೆ. ಕೆಲ ವರ್ಷಗಳ ಕಾಲ ಒಂದೊಳ್ಳೆಯ ಕಂಪನಿಯಲ್ಲಿ ಉದ್ಯೋಗ ಮಾಡಿದೆ. ಆ ಸಮಯದಲ್ಲಿ ಕೊಳ್ಳುಬಾಕ ಸಂಸ್ಕೃತಿಗೆ ಸ್ವಲ್ಪಮಟ್ಟಿಗೆ ಶರಣಾದೆ. ಮತ್ತೆ ಎಚ್ಚೆತ್ತು ರೈತ ಮಹಿಳೆಯಾದೆ.
ಕೃಷಿ ಅತ್ಯಂತ ಶ್ರಮದಾಯಕ ಕೆಲಸ. ನಿಮ್ಮ ಮೊದಮೊದಲ ಅನುಭವಗಳು ಹೇಗಿದ್ದವು?
ಮೊದಲಿಗೆ ವ್ಯವಸಾಯ ಅಷ್ಟು ಸುಲಭವಾಗಿರಲಿಲ್ಲ. ವ್ಯವಸಾಯದ ಜೊತೆಗೆ ವಾಯುಗುಣ ಬದಲಾವಣೆ, ಒಣಭೂಮಿ ಬೇಸಾಯ, ಮಳೆಯಾಧಾರಿತ ಕೃಷಿ- ಇವೆಲ್ಲದರ ಬಗ್ಗೆ ತಿಳಿಯುವುದು ಅಗತ್ಯವಿತ್ತು. ನಾವು ಮೊದಲಿಗೆ ಮಳೆಯಾಧಾರಿತ ಕೃಷಿ ಆರಂಭಿಸಿದೆವು. ನಾನು ಆದಷ್ಟು ನನ್ನ ಸಮಯವನ್ನು ಹೊಲದಲ್ಲೇ ಕಳೆಯುತ್ತಿದ್ದೆ. ನಾವು ಸಾಂಪ್ರದಾಯಿಕ ಕೃಷಿಯನ್ನೇ ಕೈಗೆತ್ತಿಕೊಂಡೆವು. ಆದರೆ, ಇಲ್ಲಿದ್ದ ಬೇರೆಲ್ಲಾ ಜಮೀನಿನವರು ಕೆಲಸ ಕಮ್ಮಿ ಎಂದು ರೇಷ್ಮೆ ಕೃಷಿ ಆರಂಭಿಸಿದ್ದರು. ಅವರೆಲ್ಲ ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನೇ ಬೆಳೆಯುತ್ತಿದ್ದರು. ಹೇರಳವಾಗಿ ಕಳೆನಾಶಕದಂಥ ರಾಸಾಯನಿಕಗಳನ್ನು ಬಳಸುತ್ತಿದ್ದರು. ನಾವು ಮಾತ್ರ ಸಾಂಪ್ರದಾಯಿಕ ಕೃಷಿಯನ್ನು ನೆಚ್ಚಿಕೊಂಡಿದ್ದು, ಅಕ್ಕಪಕ್ಕದವರಿಗೆ ತಮಾಷೆಯಾಗಿ ಕಾಣುತ್ತಿತ್ತು. ಕೃಷಿ ಅನುಭವಗಳು ನಮಗೆ ಸಾಕಷ್ಟು ಪಾಠ ಹೇಳಿಕೊಟ್ಟಿವೆ. ಸಾವಯವ ಕೃಷಿ ಮಾಡುವ ನಮ್ಮ ಧ್ಯೇಯದ ಜೊತೆ ರಾಜಿ ಮಾಡಿಕೊಳ್ಳಲೇ ಇಲ್ಲ. ಈಗ ನಾವು ಯಶಸ್ವೀ ಕೃಷಿಕರು.
ಅಪ್ಪಟ ದೇಸಿ ಜೀವನಶೈಲಿ ಅಳವಡಿಸಿಕೊಂಡಿದ್ದೀರಿ. ನಗರದಲ್ಲಿ ಈ ಜೀವನಶೈಲಿ ಪಾಲನೆ ಕಷ್ಟವಾಗಿಲ್ಲವೇ?
ಮಣ್ಣಿನ ಜೊತೆ ನಂಟು ಹೆಚ್ಚಿದಂತೆಲ್ಲಾ ಜೀವನ ವಿಧಾನವೂ ಬದಲಾಯಿತು. ನಾವು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು. ಶಾಲೆಗೆ ಧರಿಸುತ್ತಿದ್ದ ಶೂ ಜೊತೆಗೆ ಮತ್ತೂಂದು ಜೊತೆ ಚಪ್ಪಲಿ ಮಾತ್ರ ಇರುತ್ತಿತ್ತು. ಯೂನಿಫಾರಂ ಜೊತೆ 2-3 ಬಟ್ಟೆಗಳು ಇರುತ್ತಿದ್ದವು. ಸರಳವಾದ, ಆರೋಗ್ಯಕರ ಆಹಾರವನ್ನೇ ತಿನ್ನುತ್ತಿದ್ದೆವು. ಕೊಳ್ಳುಬಾಕ ಸಂಸ್ಕೃತಿ ಎಂದರೇನೆಂದು ಗೊತ್ತೇ ಇರಲಿಲ್ಲ. ಮತ್ತೆ ಅದೇ ಜೀವನವನ್ನು ಅನುಸರಿಸಲು ಆರಂಭಿಸಿದೆವು. ನಾವೇ ಬೆಳೆದ ತರಕಾರಿ, ಧಾನ್ಯಗಳನ್ನೇ ಹೆಚ್ಚು ಸೇವನೆ ಮಾಡುವುದು ಗ್ರಾಮೀಣ ಬದುಕಿನ ಅಭ್ಯಾಸ. ಹೊರಗಿನ ಆಹಾರ ಖರೀದಿ ನಿಲ್ಲಿಸಿ, ನಾವೇ ಬೆಳೆದ ತರಕಾರಿ, ಧಾನ್ಯ, ಹಣ್ಣು- ಹಂಪಲನ್ನೇ ಹೆಚ್ಚು ಸೇವಿಸಲಾರಂಭಿಸಿದೆವು. ಮನೆಯಲ್ಲಿ ಸಕ್ಕರೆ, ಸಂಸ್ಕರಿಸಿದ ಪದಾರ್ಥಗಳ ಬಳಕೆಯನ್ನು ಸಂಪೂರ್ಣ ನಿಲ್ಲಿಸಿದೆವು.
ಸರಳ ಜೀವನ ಶೈಲಿಯಲ್ಲಿ ಆಗುವಂಥ ಒಂದು ಪುಟ್ಟ ತಲ್ಲಣ ಹೇಳುವಿರಾ?
ಹೌದು, ಸರಳ ಜೀವನದ ಪಾವಿತ್ರ್ಯತೆ ಉಳಿಸಿಕೊಳ್ಳುವುದೇ ಒಂದು ಸವಾಲು. ಹೊರಗಿನ ವಾತಾವರಣ ನಾನಾ ಒತ್ತಡ ಹಾಕುತ್ತಲೇ ಇರುತ್ತದೆ. ನಾವು ಅಂಥ ಒತ್ತಡಗಳಿಗೆ ಒಳಗಾಗುವ ಮನಃಸ್ಥಿತಿಯಿಂದ ದೂರ ಉಳಿದಿದ್ದೇವೆ. ಕೆಲವೊಮ್ಮೆ ಆ ಒತ್ತಡ ನಮ್ಮ ಮಕ್ಕಳ ಮೇಲೂ ಬೀಳುತ್ತೆ. ಅದು ನಮ್ಮ ಗಮನಕ್ಕೂ ಬರುತ್ತದೆ. ಸಾಧ್ಯವಾದಷ್ಟು ಅಂಥ ಒತ್ತಡಗಳಿಂದ ಅವರನ್ನು ಪಾರು ಮಾಡಲು ಪ್ರಯತ್ನಿಸುತ್ತೇವೆ. ನಮ್ಮ ಮನೆಯಲ್ಲಿ ಟಿ.ವಿ. ಇಲ್ಲ. ಅವರು ಕೆಲವೊಮ್ಮೆ ಆ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ. ಮೊನ್ನೆ ಫುಟ್‌ಬಾಲ್ ಫೈನಲ್ ಮ್ಯಾಚ್ ನೋಡಲು ಆಸೆಪಟ್ಟರು. ನಾನು ಅಣ್ಣನ ಮನೆಗೆ ಅವರನ್ನು ಕರಕೊಂಡು ಹೋದೆ. ಸುಮಾರು 15 ಜನ ಸೇರಿ ಖುಷಿಯಾಗಿ ಮ್ಯಾಚ್ ನೋಡಿದೆವು. ಒಟ್ಟಿಗೇ ಕುಳಿತು ನೋಡುವಾಗ ಸಿಕ್ಕ ಸಂಭ್ರಮವು, ನಮ್ಮ ಮನೆಯಲ್ಲಿ ಟಿ.ವಿ. ಇಲ್ಲ ಎಂಬ ಅವರ ಬೇಸರವನ್ನು ದೂರಮಾಡಿತು. ಅವರು ಶಾಲೆಯಿಂದ ಬಂದಮೇಲೆ ನಾವು ಅವರೊಂದಿಗೆ ಸಾಕಷ್ಟು ಸಮಯ ಕಳೆಯುತ್ತೇವೆ. ನಮ್ಮ ಚಟುವಟಿಕೆಗಳಲ್ಲಿ ಅವರನ್ನೂ ಸೇರಿಸಿಕೊಳ್ಳುತ್ತೇವೆ. ಹೊರಗಿನ ಸಮಾಜದ ಒತ್ತಡಕ್ಕಿಂತ, ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುವುದು ಪೋಷಕರ ಅಭಿರುಚಿಗಳು.
ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೂ ಕೆಲಸ ಮಾಡುತ್ತೀದ್ದೀರಲ್ವಾ?
ಹೌದು. ಹಳ್ಳಿಗಳಲ್ಲಿ ಮಹಿಳೆಯರ ಸ್ವಸಹಾಯ ಗುಂಪು, ಸಮುದಾಯಗಳು ಇರುತ್ತವೆ. ಆದರೆ, ಅವು ಸಾಲ ಕೊಡಲು, ಪಡೆದುಕೊಳ್ಳಲು ಮಾತ್ರ ಸೀಮಿತವಾಗಿವೆ. ಮೊದಲು ನಾನು ಅಂಥ ಗುಂಪುಗಳನ್ನು ಬಲಪಡಿಸಿದೆ. ನಾನು ಗಮನಿಸಿದಂತೆ ಇಂದಿನ ಗ್ರಾಮೀಣ ಮಹಿಳೆಯರ ಜೀವನ ಶೈಲಿಗೂ, ನಗರದ ಮಹಿಳೆಯರ ಜೀವನ ಶೈಲಿಗೂ ಅಂಥ ವ್ಯತ್ಯಾಸವೇನಿಲ್ಲ. ಹಳ್ಳಿಯ ಮಹಿಳೆಯರು ಈಗ ಮುದ್ದೆ ಮಾಡುವುದನ್ನು ಕಡಿಮೆ ಮಾಡಿ, ಬಿಳಿ ಅನ್ನಪ್ರಿಯರಾಗಿರುವರು. ಸಕ್ಕರೆ ಇಲ್ಲದೇ ಟೀ, ಕಾಫಿ ಮಾಡುವುದೇ ಇಲ್ಲ. ಮೊದಲಿನಂತೆ ಹೊಲ-ಗದ್ದೆ ಸುತ್ತಾಡಿ, ಎಸರು ಮಾಡುವುದಿಲ್ಲ. ಅವರೂ ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಅವರಿಗೆ ಅವರ ಅಜ್ಜಿ, ಅಮ್ಮಂದಿರ ಜೀವನಶೈಲಿಯನ್ನು ನೆನೆಸಿಕೊಡುತ್ತಾ ಮತ್ತೆ ಅವರಿಗೆ ಆ ಜೀವನ ಶೈಲಿಯನ್ನು ಅನುಕರಿಸಲು ಪ್ರೇರೇಪಿಸುತ್ತಿದ್ದೆ. ಅವರ ತಂಡ ಕಟ್ಟಿಕೊಂಡು ಸಾವಯವ ಕೃಷಿ ಅಧ್ಯಯನಕ್ಕೆ, ಕಾರ್ಯಾಗಾರಗಳಿಗೆ ಕರೆದುಕೊಂಡು ಹೋಗುತ್ತೇನೆ. ಈ ಕೆಲಸದಲ್ಲಿ ನಮಗೆ ಸಾಕಷ್ಟು ಯುವಕರು ನೆರವಾಗಿದ್ದಾರೆ. ಅವರು ಸಾವಯವ ಮಳಿಗೆಗಳಿಗೆ ಧಾನ್ಯ ಪೂರೈಸುತ್ತಾರೆ. ಇದರಿಂದ ಮಹಿಳೆಯರಿಗೆ ನೇರ ಆದಾಯ ಸಿಗುತ್ತದೆ. ತಿಂಗಳಿಗೊಮ್ಮೆ ಪೌಷ್ಟಿಕಾಂಶಗಳ ಕುರಿತು ಚರ್ಚೆಗಳನ್ನು ನಡೆಸುತ್ತೇವೆ. ಕೊಟ್ಟಿಗೆ ಗೊಬ್ಬರದಂಥ ನೈಸರ್ಗಿಕ ಗೊಬ್ಬರಗಳ ಕುರಿತು ಮಾಹಿತಿ ನೀಡುತ್ತೇವೆ.
ಮಕ್ಕಳ ತರಲೆಗಳನ್ನು ಹೇಗೆ ಸಂಭಾಳಿಸುತ್ತೀರಿ?
ಇಬ್ಬರೂ ಗಂಡು ಮಕ್ಕಳೇ ಆದ್ದರಿಂದ ಸಹಜವಾಗಿ ತರಲೆ, ಕಿತಾಪತಿ ಜಾಸ್ತಿ. ದೊಡ್ಡ ಮಗನಿಗೆ ಈಗ 13 ವರ್ಷ. ಆತನಿಗೆ ಅಪ್ಪ ಒಬ್ಬ ನಟ ಎಂದು ತಿಳಿದಿದೆ. ಆತ ನನ್ನ ಹಾಗೆಯೇ ಪ್ರಾಣಿಪ್ರೇಮಿ. ಅಪಾಯದಲ್ಲಿರುವ ಪ್ರಾಣಿಗಳನ್ನು ಮನೆಗೆ ತಂದುಬಿಡುತ್ತಾನೆ. ಇಬ್ಬರೂ ಸೇರಿ ಅದರ ಶುಶ್ರೂಷೆ ಮಾಡುತ್ತೇವೆ. ಕಿಶೋರ್ ಒಂಥರಾ ಆಲ್‌ರೌಂಡರ್. ಅವರು ಮರಗೆಲಸ, ಪ್ಲಂಬಿಂಗ್ ಎಲ್ಲವನ್ನೂ ಮಾಡುತ್ತಾರೆ. ಮಕ್ಕಳೂ ಅವರ ಜೊತೆ ಕೈ ಜೋಡಿಸುತ್ತಾರೆ. ಮಕ್ಕಳಿಗೆ ಅವರು ಮನೆಯಲ್ಲಿದ್ದರೆ ಬಹಳ ಖುಷಿ.
ಮಕ್ಕಳ ಬಾಲ್ಯಕ್ಕೂ ಗ್ಯಾಜೆಟ್, ಟೀವಿಗಳು ಪ್ರವೇಶಿಸಿವೆ. ಈ ಅಪಾಯ ತಗ್ಗಿಸಲು ನೀವು ಕಂಡುಕೊಂಡ ಪರಿಹಾರ?
ನಾನು ಮಕ್ಕಳನ್ನು “ಹೋಗಿ ಆಟ ಆಡ್ಕೊಂಡು ಬನ್ನಿ’ ಎಂದು ಹೊರಗೆ ಅಟ್ಟುತ್ತೇನೆ. ಪಾಪ, ಇಲ್ಲಿ ಅವರಿಗೆ ಆಡಲು ಮಕ್ಕಳೇ ಸಿಗುವುದಿಲ್ಲ. ಮೈದಾನಕ್ಕೆ ಹೋಗಿ ಆಡುವುದಾದರೆ ಯಾವುದಾದರೂ ಕ್ರೀಡಾ ತರಬೇತಿ ಪಡೆಯಬೇಕು. ಈಗ ಮೈದಾನದಲ್ಲಿ ಓಡುವುದಾದರೂ ಅದಕ್ಕೆ ಕೋಚಿಂಗ್‌ಗೆ ಸೇರಲೇಬೇಕು. ಎಲ್ಲಾ ಮಕ್ಕಳು ಗ್ಯಾಜೆಟ್‌ಗಳಲ್ಲಿ ಮುಳುಗಿದ್ದಾಗ ಅವರಿಗೂ ಅದರ ಮೇಲೆ ಒಲವಾಗುತ್ತದೆ. ನಾನು ಗ್ಯಾಜೆಟ್ ಬಳಸುವಾಗಲೆಲ್ಲಾ “ನೀನು ಮಾತ್ರ ಮೊಬೈಲ್ ಬಳಸಬಹುದಾ?’ ಎಂದೆಲ್ಲಾ ನನ್ನ ಮಗ ಪ್ರಶ್ನಿಸುತ್ತಾನೆ. ಆಗ ಅವನಿಗೆ, ನಾನು ಯಾಕಾಗಿ ಮೊಬೈಲ್ ಬಳಸುತ್ತಿದ್ದೇನೆ? ಅದರಲ್ಲಿ ಏನು ಮಾಡುತ್ತಿದ್ದೇನೆ? ಎಂಬುದನ್ನು ವಿವರಿಸಿ, ತಿಳಿಹೇಳುತ್ತೇನೆ. ಇವತ್ತಿನ ದಿನದಲ್ಲಿ ಒಂದು ಡಾಕ್ಯುಮೆಂಟ್ ತಯಾರಿ ಮಾಡಬೇಕೆಂದರೂ ಗ್ಯಾಜೆಟ್ ಬಳಸಲೇಬೇಕು. ಅನಿವಾರ್ಯ ಕೆಲಸಕ್ಕೆ ಮಾತ್ರ ಇದನ್ನು ಅಪ್ಪಿಕೊಳ್ಳಬೇಕು ಎಂದು ಅವರಿಗೆ ಹೇಳುತ್ತೇನೆ.
ಕಿಶೋರ್ ಅವರನ್ನು ವರಿಸಿದ ಕತೆ ಹೇಳ್ತೀರಾ?
ಕಾಲೇಜಿನಲ್ಲಿದ್ದಾಗಲೇ ನಾವು ಪರಸ್ಪರ ಪರಿಚಿತರಾದೆವು. ನಾನು ಕೂಡ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಆಗ ಕಿಶೋರ್ ಮತ್ತು ನಾನು ಇಬ್ಬರೂ ಹಲವಾರು ನಾಟಕಗಳಲ್ಲಿ ಒಟ್ಟಿಗೇ ಅಭಿನಯಿಸಿದ್ದೆವು. ಕಾಲೇಜು ಓದುವಾಗಲೇ ಇಬ್ಬರೂ ಮನೆಯವರನ್ನು ಎದುರು ಹಾಕಿಕೊಂಡು ಮದುವೆಯಾದೆವು. 1999ರಲ್ಲಿ ನಮ್ಮ ಮದುವೆ ನಡೆಯಿತು.
ಮದುವೆಯಾದಾಗ ನಿಮ್ಮ ಆರಂಭಿಕ ಜೀವನ ಹೇಗಿತ್ತು?
ಇಬ್ಬರೂ ತುಂಬಾ ಕಷ್ಟಪಟ್ಟಿದ್ದೇವೆ. ದಿನಸಿ ಅಂಗಡಿಯಲ್ಲಿ ಲೆಕ್ಕ ಬರೆದಿದ್ದೇವೆ. ಕಿಶೋರ್, ಮನೆಮನೆಗೆ ನ್ಯೂಸ್ ಪೇಪರ್ ಹಾಕಿದ್ದಾರೆ. ಸಿಕ್ಕ ಸಿಕ್ಕ ಕೆಲಸಗಳನ್ನೆಲ್ಲಾ ಮಾಡಿಕೊಂಡು ಹಣ ಸಂಪಾದಿಸಿದ್ದೇವೆ. ಚಿಕ್ಕ ರೂಮ್ ಅನ್ನು ಬಾಡಿಗೆ ತೆಗೆದುಕೊಂಡು ಸಂಸಾರ ಮಾಡಿದ್ದೇವೆ. ಆ ಪುಟ್ಟ ರೂಮ್‌ನಲ್ಲೇ ನಾಯಿ, ಬೆಕ್ಕನ್ನು ಸಾಕಿದ್ದೇವೆ. ನಾನು ಸಿಎ ಮಾಡಿದ್ದೇ ಒಳ್ಳೆಯ ಕೆಲಸ ಪಡೆದು ಹಣ ಸಂಪಾದಿಸಲು.
– ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.