ವಿದೇಶಿ ನೆಲದಲ್ಲಿ ಕಥಕ್ ಕಲರವ
Team Udayavani, Jul 3, 2019, 5:00 AM IST
ಕಲಾವಿದನಿಗೆ ಇಡೀ ಜಗತ್ತೇ ವೇದಿಕೆ ಎಂಬ ಮಾತಿದೆ. ಹೃದಯದಲ್ಲಿ ಕಲೆಯ ಬೇರುಗಳು ಆಳವಾಗಿದ್ದರೆ, ಕಲಾವಿದ ಎಲ್ಲಿ ಬೇಕಾದರೂ ಚಿಗುರಬಹುದು, ಅರಳಬಹುದು ಎಂಬುದಕ್ಕೆ ಸೊನಾಲಿ ಲೂಂಬ ಅವರೇ ಸಾಕ್ಷಿ. ಮದುವೆಯಾಗಿ ಗಂಡನ ಜೊತೆಗೆ ವಿದೇಶಕ್ಕೆ ಹಾರಿದ ಸೊನಾಲಿ, ಯುಎಸ್‌ನ ಯೂಟದಲ್ಲಿ ಕಥಕ್ ಶಾಲೆ ತೆರೆದಿದ್ದಾರೆ. ಆ ಮೂಲಕ ವಿದೇಶಿ ನೆಲದಲ್ಲಿ ಕಥಕ್‌ನ ಕಂಪನ್ನು ಪಸರಿಸುತ್ತಿದ್ದಾರೆ…
ಅದೆಷ್ಟೋ ಹುಡುಗಿಯರು, ಮದುವೆಯ ನಂತರ ಗಂಡನೊಂದಿಗೆ ವಿದೇಶಕ್ಕೆ ಹೋಗುತ್ತಾರೆ. ಕೆಲವರು ತಮ್ಮ ಓದಿಗೆ ತಕ್ಕಂತೆ ಅಲ್ಲಿ ಉದ್ಯೋಗ ಗಿಟ್ಟಿಸಿಕೊಂಡರೆ, ಇನ್ನೂ ಕೆಲವರು ಮನೆಯಲ್ಲೇ ಉಳಿದು ಬಿಡುತ್ತಾರೆ. ಆದರೆ, ಕೆಲವೇ ಕೆಲವರು ಮಾತ್ರ ತಮ್ಮ ಪ್ರತಿಭೆಯನ್ನು ಬಳಸಿಕೊಂಡು ವಿದೇಶಿ ಮಣ್ಣಿನಲ್ಲೂ ಭಾರತೀಯ ಹೆಜ್ಜೆಗಳನ್ನು ಮೂಡಿಸುತ್ತಾರೆ. ಕಥಕ್ ನೃತ್ಯಗಾತಿ ಸೊನಾಲಿ ಲೂಂಬ ಅಂಥವರ ಸಾಲಿಗೆ ಸೇರುತ್ತಾರೆ.
ಪಂಜಾಬ್ ಮೂಲದವರಾದ ಸೊನಾಲಿ ಲೂಂಬ, ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಖ್ಯಾತ ಕಥಕ್ ಗುರುಗಳಾದ ಹರಿ ಮತ್ತು ಚೇತನಾ ಅವರಿಂದ ಹದಿನೈದು ವರ್ಷ ಕಾಲ ಕಥಕ್ ಕಲಿತ ಸೊನಾಲಿ, ಎಂಎನ್‌ಸಿ ಉದ್ಯೋಗಿಯೂ ಆಗಿದ್ದರು. ನಿತ್ಯವೂ ಗೆಜ್ಜೆ ಕಟ್ಟಿ ಕುಣಿದು, ನಲಿಯುತ್ತಿದ್ದ ಸೊನಾಲಿಗೆ ಮೂರು ವರ್ಷಗಳ ಹಿಂದೆ ಮದುವೆಯಾಯ್ತು. ಉದ್ಯೋಗ ನಿಮಿತ್ತ ಗಂಡ ನೆಲೆಸಿದ್ದುದು ಅಮೆರಿಕದ ಯೂಟದ, ಸಾಲ್ಟ್ ಲೇಕ್ ಸಿಟಿ ಪ್ರಾಂತ್ಯದಲ್ಲಿ. ಅನಿವಾರ್ಯವಾಗಿ ಅಲ್ಲಿಗೆ ಹೊರಟ ಸೊನಾಲಿಯನ್ನು ಕಾಡಿದ ಮೊದಲ ಪ್ರಶ್ನೆ, “ಮುಂದೆ ಕಥಕ್‌ನ ಕಥೆ ಏನು?’
ಆದರೆ, “ಇಷ್ಟು ದಿನ ಕಲಿತಿದ್ದು ಸಾಕು’ ಅನ್ನುವ ಜಾಯಮಾನ ಆಕೆಯದ್ದಾಗಿರಲಿಲ್ಲ. ಹೊರದೇಶದಲ್ಲಿದ್ದುಕೊಂಡೇ ಬೆಂಗಳೂರಿನ ಗುರುಗಳಿಂದ ಸ್ಕೈಪ್ ಮೂಲಕ ನೃತ್ಯ ಕಲಿಕೆಯನ್ನು ಮುಂದುವರಿಸಿದರು. ಒಂದೆರಡು ತಿಂಗಳಲ್ಲೇ, ಯೂಟದಲ್ಲಿ ನೆಲೆಸಿದ್ದ ಭಾರತೀಯರು ನಡೆಸುವ ಕಾರ್ಯಕ್ರಮವೊಂದರಲ್ಲಿ ಕಥಕ್ ನೃತ್ಯ ಪ್ರದರ್ಶನ ನೀಡುವ ಅವಕಾಶ ಸೊನಾಲಿಗೆ ಸಿಕ್ಕಿತು. ಅಲ್ಲಿ ನೆಲೆಸಿದ್ದ ಭಾರತೀಯರಿಗೆ ಕಥಕ್‌ನ ಗಂಧಗಾಳಿಯೂ ಗೊತ್ತಿರಲಿಲ್ಲ. ಕೆಲವರಿಗೆ ಭರತನಾಟ್ಯದ ಬಗ್ಗೆ ಅರಿವಿತ್ತಷ್ಟೇ. ಸೊನಾಲಿಯ ಕಥಕ್‌ನ ಭಾವಭಂಗಿ, ವರ್ಣರಂಜಿತ ವೇಷಭೂಷಣ, ಕೈಯ ಮುದ್ರೆಗಳು, ಕಾಲ್ಗೆಜ್ಜೆಯ ನಾದಕ್ಕೆ ಪ್ರೇಕ್ಷಕರು ಮನ ಸೋತರು. ಪ್ರದರ್ಶನದ ನಂತರ, ಪ್ರಶಂಸೆಯ ಮಹಾಪೂರವೇ ಹರಿದುಬಂತು.
“ಕಲಾಧಾರ’ ಕಥಕ್ ಶಾಲೆ
ಕಥಕ್ ಅನ್ನು ಯೂಟದ ಜನ ಸ್ವಾಗತಿಸಿದ ರೀತಿ ನೋಡಿ ಖುಷಿಯಾದ ಸೊನಾಲಿ, ಆಸಕ್ತರಿಗೆ ಕಥಕ್ ಕಲಿಸಲು ನಿರ್ಧರಿಸಿದರು. ಅದೇ ಸಮಯದಲ್ಲಿ, ರಷ್ಯಾದ ಜೂಲಿಯಾ ಎಂಬ ಮಹಿಳೆ, ಕಥಕ್ ಕಲಿಯಲು ಮುಂದೆ ಬಂದರು. ಆಕೆಯೇ ಸೊನಾಲಿಯ ಮೊದಲ ಶಿಷ್ಯೆ. ಹಾಗೆ ಶುರುವಾಗಿದ್ದು, ಯೂಟದ ಸಾಲ್ಟ್ ಲೇಕ್ ಸಿಟಿಯ ಪ್ರಪ್ರಥಮ ಕಥಕ್ ಶಾಲೆ- “ಕಲಾಧಾರ ಡ್ಯಾನ್ಸ್ ಸ್ಕೂಲ್’. ಕಳೆದ ಮೂರು ವರ್ಷಗಳಲ್ಲಿ, 6-60ರ ವಯೋಮಾನದ ಮೂವತ್ತು ವಿದ್ಯಾರ್ಥಿಗಳು “ಕಲಾಧಾರ’ದಲ್ಲಿ ಕಥಕ್ ಕಲಿಯುತ್ತಿದ್ದಾರೆ. ಅವರಲ್ಲಿ ಭಾರತೀಯರಷ್ಟೇ ಅಲ್ಲದೆ, ರಷ್ಯಾ, ಇರಾನ್, ಅಮೆರಿಕ, ಟರ್ಕಿ ದೇಶದವರೂ ಇದ್ದಾರೆ. 63 ವರ್ಷದ ಹಿರಿಯ ಮಹಿಳೆಯೂ ಕಥಕ್ ಕಲಿಯುತ್ತಿರುವುದು ವಿಶೇಷ.
ನೃತ್ಯವೇ ದಿನಚರಿ
ದಿನಕ್ಕೆ 10-12 ಗಂಟೆಗಳನ್ನು ಕಥಕ್‌ಗಾಗಿಯೇ ಮೀಸಲಿಟ್ಟಿರುವ ಸೊನಾಲಿ, ಮಕ್ಕಳಿಗೆ, ಮಹಿಳೆಯರಿಗೆ ಪ್ರತ್ಯೇಕ ತರಗತಿಗಳನ್ನು ನಡೆಸುತ್ತಾರೆ. ಯಾವುದೇ ಶಾಸ್ತ್ರೀಯ ಕಲೆಯಾಗಲಿ, ಜೀವನ ಪೂರ್ತಿ ಕಲಿತರೂ ಇನ್ನೂ ಕಲಿಯುವುದಕ್ಕೆ ಉಳಿದಿರುತ್ತದೆ ಅನ್ನುವ ಅವರು, ಕಥಕ್ ಕಲಿಕೆಯ ಜೊತೆಜೊತೆಗೆ ಹಾರ್ಮೋನಿಯಂ ಮತ್ತು ತಬಲಾ ಕಲಿಕೆಯನ್ನೂ ಪ್ರಾರಂಭಿಸಿದ್ದಾರೆ. ಮೈಸೂರಿನಲ್ಲಿ ಯೋಗ ಶಿಕ್ಷಕರ ತರಬೇತಿಯನ್ನೂ ಪಡೆದಿರುವ ಸೊನಾಲಿ, ಮೊದಲು ಯೂಟದಲ್ಲಿ ಯೋಗ ತರಗತಿಗಳನ್ನೂ ನಡೆಸುತ್ತಿದ್ದರು.
ಮಿಸೆಸ್ ಏಷ್ಯಾ ಯೂಟ
ಯೂಟದಲ್ಲಿ ನಡೆದ “ಮಿಸೆಸ್ ಏಷ್ಯಾ 2017 ಮತ್ತು 2018′ ಸೌಂದರ್ಯ ಸ್ಪರ್ಧೆಯನ್ನು ಕಥಕ್ ಮೂಲಕವೇ ಗೆದ್ದಿರುವ ಸೊನಾಲಿ, ಈ ಸಾಲಿನ “ಬೆಸ್ಟ್ ಇನ್ ಸ್ಟೇಟ್’ (ಯೂಟ) ಮತ್ತು ಜಯದೇವ ರಾಷ್ಟ್ರೀಯ ಯುವ ಪ್ರತಿಭಾ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ಯೂಟ ಸರ್ಕಾರದ ನೆರವಿನಿಂದ ಇತ್ತೀಚೆಗೆ “ಆರಂಭ್’ ಹೆಸರಿನ ಕಥಕ್ ಕಾರ್ಯಕ್ರಮವನ್ನು ಆಯೋಜಿಸಿದ್ದ ಇವರು, ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿರುವ ಸಹೋದರಿ ನಿಧಿಕಾ ಲೂಂಬ ಜೊತೆ ಸೇರಿ ಕಥಕ್ ಪ್ರದರ್ಶನ ನೀಡಿದ್ದರು.
ಸೊನಾಲಿ ಹೆಜ್ಜೆಗಳು…
ಹಂಪಿ ಉತ್ಸವ (ಹಂಪಿ), ಬ್ರಹ್ಮೋತ್ಸವ (ತಿರುಪತಿ), ಶ್ರೀ ಜಯದೇವ ರಾಷ್ಟ್ರೀಯ ಸಮಾರೋಹ (ಭುವನೇಶ್ವರ), ನಾರ್ಥ್ ಅಮೆರಿಕನ್ ಫೆಸ್ಟಿವಲ್ ಆಫ್ ಕಲರ್ (ಯುಟಾ ಮತ್ತು ವೇಗಸ್) ಲಿವಿಂಗ್ ಟ್ರೆಡಿಷನ್ಸ್ (ಯೂಟ) ವರ್ಲ್ಡ್ ಫೋಕ್ ಫೆಸ್ಟ್ (ಯೂಟ) ಯೂಟ ಆರ್ಟ್ಸ್ ಫೆಸ್ಟ್ ಮುಂತಾದ ವೇದಿಕೆಗಳಲ್ಲಿ ಕಥಕ್ ಪ್ರದರ್ಶನ ನೀಡಿರುವ ಸೊನಾಲಿ, ಇದೇ ಸೆಪ್ಟೆಂಬರ್‌ನಲ್ಲಿ ಪ್ರತಿಷ್ಠಿತ “ಟೆಡ್‌ಎಕ್ಸ್ ಸಾಲ್ಟ್ ಲೇಕ್ ಸಿಟಿ’ ವೇದಿಕೆಯಲ್ಲಿ ಪ್ರದರ್ಶನ ನೀಡಲು ಆಯ್ಕೆಯಾಗಿದ್ದಾರೆ. ಯುಟಾದ ಟೆಡ್‌ಎಕ್ಸ್ ವೇದಿಕೆಯಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರದರ್ಶಿಸಲು ಅವಕಾಶ ಸಿಕ್ಕಿರುವುದು ಇದೇ ಮೊದಲು. ಅಷ್ಟೇ ಅಲ್ಲದೆ, ವಿಶ್ವದ ಬೇರೆ ಬೇರೆ ಭಾಗಗಳ ಕಲಾವಿದರನ್ನು ಒಂದೆಡೆ ಸೇರಿಸುವ, ಫಿನ್‌ಲ್ಯಾಂಡ್ ನ ಲಹಿ ಫ್ರಿಂಜ್ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
“ವಿದೇಶಿಯರು ಶೂಸ್ ಧರಿಸಿ ಟ್ಯಾಪ್ ಡ್ಯಾನ್ಸ್ ಮಾಡ್ತಾರೆ. ಆದರೆ ಕಥಕ್‌ನಲ್ಲಿ ನಾವು ಬರೀ ಕಾಲಿನಲ್ಲಿ ಸದ್ದುಗಳನ್ನು ಹೊರಡಿಸುತ್ತಾ ನೃತ್ಯ ಮಾಡುತ್ತೇವೆ. ಅದು ವಿದೇಶಿಯರಿಗೆ ಅಚ್ಚರಿಯ ವಿಷಯ. ಒಮ್ಮೆ ನನ್ನ ನೃತ್ಯ ನೋಡಿದ ಹಿರಿಯ ಮಹಿಳೆಯೊಬ್ಬರು ಹತ್ತಿರ ಬಂದು, ಇವತ್ತು ನೀನು ನಮಗೆ ತೋರಿಸಿದ್ದು ಅತ್ಯುತ್ತಮ ನೃತ್ಯಕ್ಕೆ ಉದಾಹರಣೆ. ಇದಕ್ಕಾಗಿ ನೀನು ಎಷ್ಟು ವರ್ಷ ಶ್ರಮಪಟ್ಟಿದ್ದೀಯ ಅಂತ ನಾನು ಊಹಿಸಬಲ್ಲೆ ಅಂತ ಹೇಳಿದ್ದರು. ಅವತ್ತು ನನಗೆ ಬಹಳ ಖುಷಿಯಾಗಿತ್ತು’
-ಸೊನಾಲಿ ಲೂಂಬಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.