ಬದುಕಿನ ಸಿಹಿ ಹೆಚ್ಚಿಸಿದ ಖೋವಾ
ಮಿಲ್ಕಿ ವೇನಲ್ಲಿ ಶೋಭಾ ಯಾನ
Team Udayavani, Dec 18, 2019, 6:00 AM IST
ಹೈನುಗಾರಿಕೆ, ಗ್ರಾಮೀಣ ಪ್ರದೇಶದ ಬಹುತೇಕ ಕುಟುಂಬಗಳ ಆದಾಯದ ಮೂಲ. ಡೇರಿ ಉತ್ಪನ್ನಗಳ ಮೂಲಕ ಗ್ರಾಮೀಣ ಮಹಿಳೆಯೊಬ್ಬರು ಹೈನುಗಾರಿಕೆ ಉದ್ಯಮದ ಚಿತ್ರಣವನ್ನೇ ಬದಲಿಸಿ ಯಶಸ್ಸು ಕಂಡಿದ್ದಾರೆ. ಅವರೇ ಶೋಭಾ ಅಂಗಡಿ.
ಈಕೆ, ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರು. ಎಸ್.ಎಸ್.ಎಲ್.ಸಿ ನಂತರ ಕೃಷಿ ಕುಟುಂಬದ ಶಿವಾನಂದ ಅವರನ್ನು ಮದುವೆಯಾಗಿ ಮಲ್ಲೂರ ಗ್ರಾಮಕ್ಕೆ ಬಂದರು. ಕೃಷಿ ಚಟುವಟಿಕೆಗಳಲ್ಲಿ ಗಂಡನಿಗೆ ನೆರವಾಗುತ್ತಿದ್ದ ಶೋಭಾ, ಕೆಲ ವರ್ಷಗಳ ನಂತರ ಬೇರೆ ಏನಾದರೂ ಮಾಡಬೇಕು ಅಂತ ಯೋಚಿಸಿದರು. ಆಗ ಅವರಿಗೆ ಹೊಳೆದಿದ್ದು ಹೈನುಗಾರಿಕೆ.
ಡೇರಿ ತೆಗೆದರು
2005ರಲ್ಲಿ ಪತಿಯ ಸಹಕಾರದಿಂದ ಹಾಲಿನ ಡೇರಿ ತೆಗೆದರು. ಪ್ರಾರಂಭದಲ್ಲಿ ದಿನಕ್ಕೆ 100 ಲೀಟರ್ ಸಂಗ್ರಹವಾಗುತ್ತಿದ್ದ ಹಾಲು, ಐದು ವರ್ಷಗಳಲ್ಲಿ ನಾನೂರು ಲೀಟರ್ ದಾಟಿತು. ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ದರ ನೀಡುತ್ತಿದ್ದುದರಿಂದ, ರೈತರು ತಾವಾಗಿಯೇ ಬಂದು ಹಾಲು ಹಾಕತೊಡಗಿದರು. ಡೇರಿಯ ಬೆಳವಣಿಗೆಯಿಂದ ತೃಪ್ತರಾಗದ ಶೋಭಾ, ಮಾವನ ಸಲಹೆಯಂತೆ ಖೋವಾ ತಯಾರಿಕೆಗೆ ಕೈ ಹಾಕಿದರು.
ಗುಣಮಟ್ಟದ ಖೋವಾ ತಯಾರಿಸಿ, ಧಾರವಾಡದ ಪ್ರಸಿದ್ಧ ಪೇಡಾ ಉದ್ದಿಮೆದಾರರಿಗೆ ರವಾನಿಸತೊಡಗಿದರು. ಹೀಗೆಯೇ ನಾಲ್ಕೈದು ವರ್ಷಗಳ ಕಾಲ, ಪ್ರತಿ ಕೆ.ಜಿಗೆ ರೂ. 100 ರಂತೆ ಖೋವಾ ಮಾರುತ್ತಿದ್ದ ಶೋಭಾ, ಮುಂದೆ ಪೇಡೆ ಮತ್ತು ಇನ್ನಿತರ ಸಿಹಿ ತಿನಿಸುಗಳನ್ನೂ ತಯಾರಿಸತೊಡಗಿದರು.
ಮಿಲ್ಕ್ ಕೇಕ್ ತಯಾರಿಕೆ
2015ರಷ್ಟರ ವೇಳೆಗೆ ವಿವಿಧ ಬಗೆಯ ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಪಳಗಿದ್ದ ಶೋಭಾ ಅವರ ಮುಂದಿನ ಗುರಿ, ಮಿಲ್ಕ್ ಕೇಕ್ ತಯಾರಿಕೆ. ಕಟ್ಟಿಗೆ ಒಲೆಯಲ್ಲಿಯೇ ಹಾಲು ಕುದಿಸಿ, ಉತ್ಕೃಷ್ಟ ಸಕ್ಕರೆ ಸೇರಿಸಿ, ಬಾಯಲಿಟ್ಟರೆ ಕರಗುವಂತೆ ತಯಾರಿಸಿದ ಮಿಲ್ಕ್ ಕೇಕ್, ಈಗ ಎಲ್ಲರ ಮನ ಗೆದ್ದಿದೆ. ಜೊತೆಗೆ ಪೇಡಾ, ಕಲಾಕಂದ ಮತ್ತು ಖೋವಾ ಕೂಡಾ ಜನಪ್ರಿಯವಾಗಿದ್ದು, ಗ್ರಾಹಕರು ಚಿಕ್ಕ ಗ್ರಾಮವಾದ ಮಲ್ಲೂರಕ್ಕೇ ಬಂದು ಖರೀದಿಸುವುದು ವಿಶೇಷ. ಒಂದು ಕೆ.ಜಿ. ಮಿಲ್ಕ್ ಕೇಕ್‌ಗೆ 220 ರೂ.ಗಳಂತೆ ಮಾರಾಟ ಮಾಡುವ ಶೋಭಾ, ದಿನಕ್ಕೆ ಕ್ವಿಂಟಲ್‌ನಷ್ಟು ಮಿಲ್ಕ್ ಕೇಕ್ ತಯಾರಿಸಿ ಮಾರಾಟ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಹೊರ ರಾಜ್ಯಗಳಿಗೆ ರವಾನೆ
ಈ ಉತ್ಪನ್ನಗಳನ್ನು ಬೆಳಗಾವಿ, ಹುಬ್ಬಳ್ಳಿ, ಜಮಖಂಡಿ, ಗೋಕಾಕ, ರಾಮದುರ್ಗ ಮುಂತಾದ ಕಡೆಗಷ್ಟೇ ಅಲ್ಲ, ಹೈದರಾಬಾದ್, ಗೋವಾಗಳಿಗೂ ಕಳಿಸುತ್ತಾರೆ. ಬೇಡಿಕೆಗೆ ಅನುಗುಣವಾಗಿ ನಿತ್ಯವೂ ಮಿಲ್ಕ್ ಕೇಕ್ ತಯಾರಿಸಲಾಗುತ್ತಿದೆ. ಇದನ್ನು ಒಂದು ವಾರದವರೆಗೂ ಉಪಯೋಗಿಸಬಹುದು. ದಸರಾ, ದೀಪಾವಳಿ ಮತ್ತು ಮದುವೆ ಸಮಾರಂಭಗಳಲ್ಲಿ ಮಿಲ್ಕ್ ಕೇಕ್‌ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಶೋಭಾರವರ ತಯಾರಿಕಾ ಘಟಕದಲ್ಲಿ ಸದ್ಯ 10 ಮಹಿಳೆಯರು ಕೆಲಸ ಪಡೆದಿದ್ದಾರೆ.
-ಸುರೇಶ ಗುದಗನವರ