ಬಟ್ಟಲಿನಿಂದ ಹಾರಿದ ವಡೆ ನೆಲಕ್ಕೆ ಬಿತ್ತು…
Team Udayavani, Apr 1, 2020, 12:46 PM IST
ನಮ್ಮ ಮನೆಯಲ್ಲಿ ಆಗ ದೂರವಾಣಿ ಇರಲಿಲ್ಲ. ಹಾಗಾಗಿ, ಮಾತುಕತೆ ಎÇÉಾ ಅಂಚೆ ಕಾಗದಗಳ ಮೂಲಕವೇ ನಡೆಯುತ್ತಿತ್ತು. ಹೀಗಿದ್ದಾಗಲೇ, ನಮ್ಮ ಅತ್ತೆ ಬರೆದ ಕಾಗದ, ನಮ್ಮಪ್ಪ ಬಿ.ವಿ. ಶೆಣೈಗೆ ತಲುಪುವ ಬದಲು, ಅದೇ ಊರಿನ ಪಿ.ಡಿ. ಶೆಣೈ ಅವರ ಮನೆಗೆ ತಲುಪಿತ್ತು…
ಇದು 1996ರ ಮಾತು. ನಾನಾಗ ಬಿ.ಎಡ್. ಮಾಡುತ್ತಿದ್ದೆ. ಅವತ್ತೂಂದಿನ, ಅಪ್ಪನ ಆಪ್ತ ಮಿತ್ರರು ಮನೆಗೆ ಬಂದಿದ್ದರು. ಹಜಾರದಲ್ಲಿ ಕೂತು ಬರೆಯುತ್ತಿದ್ದ ನನ್ನನ್ನು ನೋಡಿ, ಬೆಂಗಳೂರಿನಲ್ಲಿ ಇರುವ ಮೊಮ್ಮಗನ ಬಗ್ಗೆ ಹೇಳಿ ನನ್ನ ಮದುವೆಯ ಪ್ರಸ್ತಾಪ ಎತ್ತಿದರು. ಅಷ್ಟು ಬೇಗ ನನಗೆ ಮದುವೆ ಮಾಡುವುದು ಅಪ್ಪನಿಗೆ ಇಷ್ಟ ಇರಲಿಲ್ಲ. ಮಗಳನ್ನು ಚೆನ್ನಾಗಿ ಓದಿಸಿ, ಕೆಲಸಕ್ಕೆ ಕಳುಹಿಸುವ ಆಸೆ ಅವರಿಗೆ. ಆದರೆ ಅಮ್ಮ- “ಒಳ್ಳೆಯ ಹುಡುಗ ಸಿಕ್ಕರೆ ಮದುವೆ ಮಾಡೋಣ’ ಎನ್ನುತ್ತಿದ್ದರು. ನನ್ನನ್ನು ಕೆಲಸಕ್ಕೆ ಕಳುಹಿಸಲು ಅಮ್ಮನಿಗೆ ಇಷ್ಟವಿರಲಿಲ್ಲ.
ಆ ಹುಡುಗನ ಜಾತಕ ಹೊಂದಾಣಿಕೆ ಆಗಿ, ಹುಡುಗನ ಅಕ್ಕ-ಭಾವ ಅಚಾನಕ್ಕಾಗಿ ಮನೆಗೆ ಬಂದು ಹೋದ ನಂತರವೇ ನನಗೆ ಗೊತ್ತಾಗಿದ್ದು: ಅದು ನನ್ನದೇ ವಧುಪರೀಕ್ಷೆ ಎಂದು. ಆ ದಿನಗಳಲ್ಲಿ ನಮ್ಮ ಮನೆಯಲ್ಲಿ ದೂರವಾಣಿ ಇರಲಿಲ್ಲ. ಹಾಗಾಗಿ, ಮಾತುಕತೆ ಎಲ್ಲಾ ಅಂಚೆಯ ಮೂಲಕ ನಡೆಯುತ್ತಿತ್ತು. ನಮ್ಮ ಅತ್ತೆ ಬರೆದ ಕಾಗದ, ನಮ್ಮಪ್ಪ ಬಿ.ವಿ. ಶೆಣೈಗೆ ತಲುಪುವ ಬದಲು, ಅದೇ ಊರಿನ ಪಿ.ಡಿ. ಶೆಣೈ ಅವರ ಮನೆಗೆ ತಲುಪಿತ್ತು.
ಇವೆಲ್ಲದರ ಮಧ್ಯೆ ನನ್ನ ಓದು ಭರಾಟೆಯಿಂದ ಸಾಗಿತ್ತು. ವಾಕಿಂಗ್ ಹೋದಾಗ ಸಿಕ್ಕ ಪಿ.ಡಿ. ಶೆಣೈ ಅವರು ಕಾಗದ ಕೊಟ್ಟರು. ಅದರಲ್ಲಿ ನಮ್ಮತ್ತೆ, “ನೆಂಟಸ್ತಿಕೆ ಕೂಡಿ ಬಂದಿದೆ. ನಿಮ್ಮ ಅಭಿಪ್ರಾಯ ತಿಳಿಸಿ’ ಎಂದು ಬರೆದಿದ್ದರು. ಅಪ್ಪ ಅಮ್ಮನ ಮಾತು ಮೀರದ ನಾನು “ಹೂಂ’ ಅಂದೆ. ದಿನವೊಂದನ್ನು ನಿಗದಿ ಮಾಡಿ, ಬೆಂಗಳೂರಿನ ಕಾಮತ್ ಯಾತ್ರಿ ನಿವಾಸದಲ್ಲಿ, ವಧು ಪರೀಕ್ಷೆ ಅಂತ ಗೊತ್ತು ಮಾಡಲಾಯ್ತು. ಆ ದಿನ, ಅಪ್ಪ, ಅಮ್ಮ, ತಂಗಿ, ತಮ್ಮ ಮತ್ತು ನಾನು ಉಡುಪಿಯಿಂದ ಬೆಂಗಳೂರಿಗೆ ಬಂದಿಳಿದೆವು.
ಹೋಟೆಲ್ ರೂಂನಲ್ಲಿ ಎಲ್ಲ ಕೆಲಸ ಮುಗಿಸಿ ಕಾಮತ್ ಯಾತ್ರಿ ನಿವಾಸಕ್ಕೆ ಬಂದೆವು. ನಾನಂತೂ ಆತಂಕದಲ್ಲಿ ಕುಳಿತಿದ್ದೆ. ಕೊನೆಗೆ, ಹುಡುಗ ಹುಡುಗಿ ಮಾತನಾಡಲಿ ಎಂದು ಹೇಳಿದರು. ನಮ್ಮಿಬ್ಬರಿಗೂ ಒಪ್ಪಿಗೆ ಎಂದಾದ ಮೇಲೆ, ಎಲ್ಲರೂ ತಿಂಡಿಗೆ ಇಡ್ಲಿ- ವಡೆ ಮತ್ತು ಕೇಸರಿಬಾತ್ ಆರ್ಡರ್ ಮಾಡಿದರು. ಎಲ್ಲರೂ ಚಮಚದಿಂದ ತಿನ್ನಲು ಆರಂಭಿಸಿದರು.
ನನಗೋ ಬಹಳ ಮುಜುಗರ. ಯಾಕೆಂದರೆ, ನನಗೆ ಚಮಚದಲ್ಲಿ ಊಟ- ತಿಂಡಿ ತಿಂದು ಅಭ್ಯಾಸ ಇರಲಿಲ್ಲ. ಪಕ್ಕದಲ್ಲಿ ಕೂತಿದ್ದ ತಂಗಿಯ ಮೇಲೂ ಸಿಟ್ಟು ನನಗೆ. ಯಾಕೆ ಗೊತ್ತಾ? ಎಣ್ಣೆಗಪ್ಪು ಬಣ್ಣದ ನನ್ನ ಪಕ್ಕ ಕೂತಿದ್ದ ಆಕೆ, ಹಾಲು ಬಣ್ಣದವಳು. ಅವಳಿಂದಾಗಿ ನಾನು ಇನ್ನೂ ಕಪ್ಪು ಕಾಣಿಸುತ್ತೇನೆ ಅಂತ ಬೇಜಾರು ನನಗೆ. ಇದೇನನ್ನೂ ಯೋಚಿಸದ ಅವಳು ಆರಾಮಾಗಿ ಚಮಚದಲ್ಲಿ ತಿನ್ನುತ್ತಿದ್ದಳು. ನಾನೀಗ ಕೈಯಲ್ಲಿ ತಿಂದರೆ ಎಲ್ಲಾ ಏನೆಂದುಕೊಳ್ಳುತ್ತಾರೆ ಎಂದುಕೊಂಡು, ನಾನೂ ಧೈರ್ಯ ಮಾಡಿ ಎರಡು ಕೈಯಲ್ಲಿ ಎರಡು ಚಮಚ ಹಿಡಿದೆ. ಇಡ್ಲಿ ತುಂಡು ಮಾಡಿ, ಎತ್ತಿ ಸಾಂಬಾರ್‌ನಲ್ಲಿ ಮುಳುಗಿಸಿ, ಕಷ್ಟ ಪಟ್ಟು ಬಾಯಿಯ ಬಳಿ ತಂದು ತಿಂದೆ. ನನ್ನ ಹರಸಾಹಸವನ್ನು ಯಾರಾದರೂ ಗಮನಿಸಿದರಾ ಅಂತ ತಲೆ ಎತ್ತಿ ನೋಡಿದೆ.
60ರ ಹರೆಯದ ಭಾವೀ ಅತ್ತೆ ಆರಾ ಮಾಗಿ ಚಮಚದಲ್ಲಿ ತಿನ್ನುತ್ತಿದ್ದರು. ನನ್ನಿಂದೇಕೆ ಆಗುವುದಿಲ್ಲ, ನಾನೂ ಚಮಚದಲ್ಲಿ ತಿನ್ನಲು ಕಲಿಯುತ್ತೇನೆ ಎಂದುಕೊಂಡೆ. ಅನಾಹುತ ನಡೆದಿದ್ದು ಆಗಲೇ. ಎರಡೂ ಚಮಚ ಹಿಡಿದು ವಡೆ ತುಂಡರಿ ಸಲು ಹೋದಾಗ, ಆ ತುಂಡು ಬಟ್ಟಲಿನಿಂದ ಹಾರಿ ನೆಲಕ್ಕೆ ಬಿತ್ತು. ನನ್ನ ಪ್ರಾಣವೇ ಹೋದಂತೆ ಆಯಿತು. ಕೂಡಲೇ ತಲೆ ಎತ್ತಿ ನೋಡಿದೆ. ಸದ್ಯ, ಯಾರೂ ನೋಡಿರಲಿಲ್ಲ! ಇಲ್ಲಾ ಅಂದರೆ ಹುಡುಗಿಗೆ ತಿಂಡಿ ತಿನ್ನಲು ಬರುವುದಿಲ್ಲ ಎಂದಾಗುತ್ತಿತ್ತು. ಮೇಜಿನ ಅಡಿ ಹಾರಿದ ವಡೆಯ ತುಂಡನ್ನು ಕಾಲಿ ನಿಂದ ಮೆಲ್ಲಗೆ ತಳ್ಳಿದೆ. ಹರಸಾಹಸ ಮಾಡಿ ಇಡ್ಲಿ- ವಡೆ ತಿಂದು ಮುಗಿಸಿದೆ. ವಧು ಪರೀಕ್ಷೆ ಯಲ್ಲೂ ಪಾಸಾದೆ.
–ಸಹನಾ ಎಸ್. ಭಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.