ಕೇಳಿ ಕೇಶ ಪ್ರೇಮಿಗಳೇ…
Team Udayavani, Feb 27, 2019, 12:30 AM IST
ತಲೆಗೂದಲು ಫಳಫಳ ಹೊಳೆಯಲಿ, ಕೂದಲು ಒತ್ತಾಗಿ ಬೆಳೆಯಲಿ, ತಲೆಹೊಟ್ಟು ಕಾಡದೇ ಇರಲಿ ಎಂಬ ಉದ್ದೇಶದಿಂದ ಪ್ರತಿ ತಿಂಗಳೂ ಸಾವಿರಾರು ರೂಪಾಯಿ ಖರ್ಚು ಮಾಡಿ ಎಣ್ಣೆ ಖರೀದಿಸುತ್ತೇವೆ. ಕೆಲವೇ ನೂರು ರೂಪಾಯಿ ಖರ್ಚು ಮಾಡಿ ಅತ್ಯುತ್ತಮ ಗುಣಮಟ್ಟದ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಬಹುದು, ಗೊತ್ತಾ?
ಮನೆಯಲ್ಲಿಯೇ ದೊರೆಯುವ ಮೂಲಿಕೆಗಳಿಂದ, ಅಡುಗೆ ಮನೆಯಲ್ಲಿಯೇ ವಿಧವಿಧದ ಕೇಶತೈಲಗಳನ್ನು ತಯಾರಿಸಬಹುದು. ಇವುಗಳನ್ನು ತಯಾರಿಸುವುದೂ ಸುಲಭ. ವೆಚ್ಚವೂ ಕಡಿಮೆ. ಜೊತೆಗೆ, ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಎರಡೂ ವೃದ್ಧಿಯಾಗುತ್ತದೆ.
1. ದಾಸವಾಳದ ತೈಲ
ಸಾಮಗ್ರಿ: 20 ದಾಸವಾಳದ ಹೂಗಳು (ಬಿಳಿ ದಾಸವಾಳವಾದರೆ ಶ್ರೇಷ್ಠ), 15 ದಾಸವಾಳದ ಎಲೆಗಳು, 150 ಗ್ರಾಂ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ.
ವಿಧಾನ: ದಾಸವಾಳದ ಹೂವು ಹಾಗೂ ಎಲೆಗಳನ್ನು ಮಿಕ್ಸಿಯಲ್ಲಿ ತಿರುವಿ ಪೇಸ್ಟ್ ತಯಾರಿಸಬೇಕು. ಅಗಲ ಬಾಯಿಯ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಬೇಕು. ಎಣ್ಣೆ ಬಿಸಿಯಾಗುತ್ತ ಬಂದಾಗ ದಾಸವಾಳದ ಪೇಸ್ಟ್ ಬೆರೆಸಿ, ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಎಣ್ಣೆ ತಣ್ಣಗಾದ ನಂತರ ಸೋಸಿ ಗಾಜಿನ ಬಾಟಲಿಗೆ ಹಾಕಿಡಿ. ನಿತ್ಯವೂ ಈ ಎಣ್ಣೆಯನ್ನು ಕೂದಲಿಗೆ ಬಳಸಿದರೆ, ದಾಸವಾಳದಲ್ಲಿ ಹೇರಳವಾಗಿರುವ ಅಮೈನೋ ಆಮ್ಲ, ವಿಟಮಿನ್ ‘ಸಿ’ ಮೊದಲಾದ ಪೋಷಕಾಂಶಗಳಿಂದ ಕೂದಲಿಗೆ ಪೋಷಣೆ ಸಿಗುತ್ತದೆ.
2. ಕಿತ್ತಳೆ ಸಿಪ್ಪೆಯ ತೈಲ
ಕಿತ್ತಳೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ, ನುಣ್ಣಗೆ ಪುಡಿ ಮಾಡಬೇಕು. 5 ಚಮಚ ಕಿತ್ತಳೆಯ ಸಿಪ್ಪೆಯ ಹುಡಿಯನ್ನು 1 ಕಪ್ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಬೆರೆಸಿ, ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಎಣ್ಣೆ ಹೊಗೆಯಾಡಿದ ಬಳಿಕ, ಒಲೆಯಿಂದ ಕೆಳಗಿಳಿಸಿ, ಆರಿದ ಬಳಿಕ ಸೋಸಿ, ಗಾಳಿಯಾಡದ ಬಾಟಲಲ್ಲಿ ಹಾಕಿ. ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ಲೇಪಿಸಿ, ಚೆನ್ನಾಗಿ ಮಾಲೀಶು ಮಾಡಿ, ಒಂದು ಗಂಟೆಯ ಬಳಿಕ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ. ಕಿತ್ತಳೆಯಲ್ಲಿರುವ ಸಿಟ್ರಸ್ ಆಮ್ಲದ ಅಂಶ ಹಾಗೂ ‘ಸಿ’ ಜೀವಸತ್ವವು ತುರಿಕೆ, ಹೊಟ್ಟು ನಿವಾರಣೆಗೆ ಸಹಕಾರಿ. ವಾರಕ್ಕೆ 2-3 ಸಾರಿ ಈ ತೈಲ ಬಳಸಿ.
3. ಮದರಂಗಿ ತೈಲ
1 ಕಪ್ ಮದರಂಗಿ ಸೊಪ್ಪನ್ನು 3 ಕಪ್ ಎಳ್ಳೆಣ್ಣೆಗೆ ಬೆರೆಸಿ, ಅಗಲಬಾಯಿ ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಹೀಗೆ ಬಿಸಿ ಮಾಡುವಾಗ ಮದರಂಗಿ ಸೊಪ್ಪು ಸಿಡಿಯುವುದುಂಟು. ಆದ್ದರಿಂದ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿ. ಎಣ್ಣೆ ಕಂದು ಬಣ್ಣಕ್ಕೆ ತಿರುಗುವವರೆಗೆ ಬಿಸಿ ಮಾಡಿ, ಗಾಜಿನ ಬಾಟಲಿಗೆ ಹಾಕಿ. ಈ ಎಣ್ಣೆಯನ್ನು ನಿತ್ಯವೂ ಕೂದಲಿಗೆ ಲೇಪಿಸಿದರೆ ಬಿಳಿಕೂದಲು ಕ್ರಮೇಣ ಕಪ್ಪಾಗುತ್ತದೆ. ಮದರಂಗಿ ಎಲೆಗಳೊಂದಿಗೆ ಕರಿಬೇವು, ನೆಲ್ಲಿಚೆಟ್ಟು ಬಳಸಿಯೂ ಎಣ್ಣೆ ತಯಾರಿಸಬಹುದು.
4. ತುಳಸಿ-ಮೆಂತ್ಯೆ ತೈಲ
ಸಾಮಗ್ರಿ: 1/4 ಕಪ್ ತುಳಸಿ ಎಲೆ, 2 ಚಮಚ ಮೆಂತ್ಯೆ, 2 ಕಪ್ ಕೊಬ್ಬರಿ ಎಣ್ಣೆ.
ವಿಧಾನ: ತುಳಸಿ ಎಲೆಯನ್ನು ಅರೆದು ಪೇಸ್ಟ್ ತಯಾರಿಸಿ. ಮೆಂತ್ಯೆಯನ್ನು ಹುರಿದು ಪುಡಿ ಮಾಡಿ. ಎಣ್ಣೆಯ ಜೊತೆಗೆ, ತುಳಸಿ ಪೇಸ್ಟ್ ಹಾಗೂ ಮೆಂತ್ಯೆ ಪುಡಿ ಸೇರಿಸಿ, ಸಣ್ಣ ಉರಿಯಲ್ಲಿ ಚೆನ್ನಾಗಿ ಬಿಸಿ ಮಾಡಿ. ಆರಿದ ಬಳಿಕ ಸೋಸಿ ಬಾಟಲಿಗೆ ಹಾಕಿಡಿ. ನಿತ್ಯ ಈ ತೈಲವನ್ನು ಬಳಸಿದರೆ, ತಲೆಹೊಟ್ಟು , ತುರಿಕೆ, ಕಜ್ಜಿ ನಿವಾರಣೆಯಾಗುತ್ತದೆ.
5. ಕರಿಬೇವು-ಈರುಳ್ಳಿ ಎಣ್ಣೆ
ಸಾಮಗ್ರಿ: 1/4 ಕಪ್ ಕರಿಬೇವಿನ ಸೊಪ್ಪು, 1/4 ಕಪ್ ಹೆಚ್ಚಿದ ಈರುಳ್ಳಿ, ಒಂದೂವರೆ ಕಪ್ ಕೊಬ್ಬರಿ ಎಣ್ಣೆ.
ವಿಧಾನ: ಕೊಬ್ಬರಿ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಎಣ್ಣ ಬಿಸಿಯಾಗುತ್ತಿದ್ದಂತೆ ಈರುಳ್ಳಿ ಹಾಗೂ ಕರಿಬೇವಿನ ಸೊಪ್ಪು ಹಾಕಿ ಕುದಿಸಿ. ತಣ್ಣಗಾದ ಬಳಿಕ ಸೋಸಿ, ಎಣ್ಣೆಯನ್ನು ಸಂಗ್ರಹಿಸಿ. ನಮ್ಮ ಕೂದಲು ಕೆರ್ಯಾಟಿನ್ ಅಂಶದಿಂದ ಉತ್ಪತ್ತಿಯಾಗಿದ್ದು, ಕೆರ್ಯಾಟಿನ್‌ನಲ್ಲಿ ಗಂಧಕವು ಹೆಚ್ಚಾಗಿರುತ್ತದೆ. ಈರುಳ್ಳಿಯಲ್ಲಿ ಗಂಧಕದ ಅಂಶ ಅಧಿಕವಾಗಿದ್ದು, ಕೂದಲಿನ ಬೆಳವಣಿಗೆಗೆ ಸಹಕಾರಿ. ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣ ಇರುವುದರಿಂದ ತಲೆಹೊಟ್ಟು, ತುರಿಕೆ ಕಜ್ಜಿ ನಿವಾರಣೆಯಾಗುತ್ತವೆ.
5. ಬೆಳ್ಳುಳ್ಳಿ ತೈಲ
3-4 ಬೆಳ್ಳುಳ್ಳಿ ಎಸಳನ್ನು ಜಜ್ಜಿ 1 ಕಪ್ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಹಾಕಿ. ಸಣ್ಣ ಉರಿಯಲ್ಲಿ ಎಣ್ಣೆಯನ್ನು ಕುದಿಸಿ, ನಂತರ ಎಣ್ಣೆಯನ್ನು ಸೋಸಿ ಸಂಗ್ರಹಿಸಿ. ಬೆಳ್ಳುಳ್ಳಿಯಲ್ಲಿ ಜೀವಾಣು ನಿರೋಧಕ ಗುಣ ಇರುವುದರಿಂದ ತಲೆಹೊಟ್ಟು, ತುರಿಕೆ ನಿವಾರಣೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ.
ಡಾ. ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.