ಸ್ವಲ್ಪ ದಿನವಾದ್ರೂ ನನ್ನಿಷ್ಟದಂತೆ ಬದುಕ್ತೇನೆ…
Team Udayavani, May 15, 2019, 6:00 AM IST
ಮದುವೆಯಾದ ಮೇಲೆ ಗಂಡನ ಮನೆಯವರು ಹೇಳಿದಂತೆಯೇ ಬದುಕಬೇಕು. ಅಲ್ಲಿ ನಮ್ಮಿಷ್ಟದಂತೆ ಬದುಕುವ, ಹರಟುವ, ಆಡುವ, ಹಾಡುವ ಸ್ವಾತಂತ್ರ್ಯ ಇರುವುದಿಲ್ಲ. ಹಾಗಾಗಿ, ಮದುವೆಗೆ ಮುಂಚಿನ ದಿನಗಳಲ್ಲೇ ನನ್ನಿಷ್ಟದಂತೆ ಬದುಕಿಬಿಡಬೇಕು ಎಂದೇ ಅದೆಷ್ಟೋ ಹೆಣ್ಣುಮಕ್ಕಳು ಯೋಚಿಸುತ್ತಾರೆ…
ಮೀರಾ ಆಗ ತಾನೇ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದ್ದಳು. ಆಫೀಸಿನ ಕೆಲಸವೇ ಹಾಸಿ ಹೊದ್ದುಕೊಳ್ಳುವಷ್ಟಿದ್ದರೂ ಪಾರ್ಟ್‌ಟೈಮ್ ಜಾಬ್ ಅಂತ ಎಫ್ಎಂ ರೇಡಿಯೋನಲ್ಲಿ ಕೆಲಸ, ಕೆಲವೊಮ್ಮೆ ಆ್ಯಂಕರಿಂಗ್ ಅಂತ ಕಾರ್ಯಕ್ರಮ ನಡೆಸಿಕೊಡುವುದು, ಡ್ಯಾನ್ಸ್ ಪ್ರೋಗ್ರಾಮ್… ಹೀಗೆ ಹಲವಾರು ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಳು. ಕೈ ತುಂಬಾ ಸಂಪಾದಿಸಬೇಕು, ನಾಲ್ಕು ಜನ ತನ್ನನ್ನು ಗುರುತಿಸಬೇಕು ಎಂದು ಯಾರು ಯಾವ ಕೆಲಸ ಹೇಳಿದರೂ ಇಲ್ಲ ಎನ್ನದೆ ಮಾಡುತ್ತಿದ್ದಳು. ಬದುಕಿನ ಕುರಿತು ಇವಳಿಗಿದ್ದ ಆತುರವ ಕಂಡು ಒಂದು ದಿನ ಕೇಳೇ ಬಿಟ್ಟೆ- “ಯಾಕಿಷ್ಟು ಧಾವಂತ? ಆರಾಮಾಗಿ ಒಂದಾದ ಮೇಲೊಂದು ಕೆಲಸ ಮಾಡುವುದಕ್ಕೇನು?’
ಆಗ ಅವಳು- “ನನ್ನ ಹತ್ತಿರ ಮುಂದಿನ ವರ್ಷದವರೆಗೆ ಮಾತ್ರ ಸಮಯ ಇದೆ ಕಣೆ. ಅಪ್ಪ-ಅಮ್ಮ ಮುಂದಿನ ವರ್ಷದಿಂದ ಮದುವೆಗೆ ಹುಡುಗನನ್ನು ಹುಡುಕಲು ಶುರು ಮಾಡ್ತಾರೆ. ಅಷ್ಟರೊಳಗೆ ನನ್ನೆಲ್ಲ ಆಸೆ, ಕನಸುಗಳನ್ನು ಈಡೇರಿಸಿಕೊಳ್ಳಬೇಕು. ಅಂದುಕೊಂಡ ಎತ್ತರವ ಏರಿಬಿಡಬೇಕು. ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ನನ್ನೆಲ್ಲ ಆಸೆಗಳೊಟ್ಟಿಗೆ ಕೆಲ ದಿನಗಳಾದರೂ ಜೀವಿಸಿದೆ ಅನ್ನುವ ಖುಷಿ ನನ್ನದಾಗುತ್ತದೆ. ಮನೆಯಿಂದ ಹೊರಗೆ ಹೊರಟಾಗ ಅಪ್ಪ-ಅಮ್ಮನೇ ನೂರೊಂದು ನಿಯಮ ಹಾಕ್ತಾರೆ. ಇನ್ನು ಗಂಡ ಮತ್ತು ಅವನ ಮನೆಯವರ ಕಾಯ್ದೆ-ಕಟ್ಟಪ್ಪಣೆಗಳೆಷ್ಟೋ? ಹೆಣ್ಣುಮಗಳನ್ನು “ಭಾರ’ವೆಂದು ತಿಳಿಯುವ ಹೆತ್ತವರು, ಕೆಲಸ ಮಾಡುವವಳು, ಮಕ್ಕಳ ಹೆರುವವಳು ಒಟ್ಟಾಗಿಯೇ ಸಿಗುತ್ತಾಳೆ ಎನ್ನುವ ಗಂಡನ ಮನೆಯವರು ಇರುವವರೆಗೂ ಕನಸುಗಳನ್ನು ಹೊತ್ತು ಬದುಕುವ ಹೆಣ್ಣಿಗೆ ಉಳಿಗಾಲವಿಲ್ಲ. ಅದಕ್ಕೇ, ಅಪ್ಪ-ಅಮ್ಮನ ಹತ್ತಿರ ನನ್ನಂತೆ ನಾನಂದುಕೊಂಡ ಜೀವನ ನಡೆಸಲು ಸ್ವಲ್ಪ ದಿನ ಸಮಯ ಕೊಡಿ ಅಂದಿದ್ದಕ್ಕೆ ಮುಂದಿನ ವರ್ಷದವರೆಗೆ ವಾಯಿದೆ ನೀಡಿ¨ªಾರೆ. ಅದರ ನಂತರ ಅವರು ಹೇಳಿದಂತೆ ನಡೆದುಕೊಳ್ಳಬೇಕು. ಪಂಜರದ ಹಕ್ಕಿಯಾದರೂ ಸರಿಯೇ’ ಎಂದು ವ್ಯಂಗ್ಯ ನಗೆ ಬೀರಿದಳು.
ಸಾವಿರ ಕೊಂಕು ಮಾತಿನ ನಡುವೆ…
ಹೌದಲ್ವಾ ? ಬದುಕಿನಲ್ಲಿ ಅದು ಮಾಡಬೇಕು, ಇದು ಮಾಡಬೇಕು, ಮತ್ತಿನ್ಯಾವುದೋ ಗರಿ ತನ್ನ ಮುಡಿಯನೇರಬೇಕು, ನನ್ನನ್ನು ನನ್ನ ಹೆಸರಿನಿಂದಲೇ ಎಲ್ಲರೂ ಗುರುತಿಸಬೇಕು- ಹೀಗೆ ಹೆಣ್ಣಾದವಳಿಗೆ ಹಲವು ಬಗೆಯ ತುಡಿತ. ಅದಕ್ಕಾಗಿ ಛಲಬಿಡದೆ ತನ್ನ ಗುರಿಯ ಬೆನ್ನಟ್ಟಿ ಹೋಗುತ್ತಾಳೆ. ಇಂಥವರನ್ನು ಕಂಡರೆ ಈಗಿನ ಕಾಲದಲ್ಲೂ ಬಹಳಷ್ಟು ಮಂದಿ, ಇವೆಲ್ಲಾ ಯಾಕೆ ಬೇಕು? ಮುಂದೆ ಮುಸುರೆ ತಿಕ್ಕುವ, ಮಕ್ಕಳ ಅಂಡು ತೊಳೆಯುವುದಿದ್ದೇ ಇದೆ ಎಂದು ಕೊಂಕನಾಡುತ್ತಾರೆ. ಸಾವಿರ ಕೊಂಕು ಮಾತುಗಳನ್ನು ಕೇಳಿಸಿಕೊಂಡೂ ಕೆಲವರು ತಾವಂದುಕೊಂಡ ಶಿಖರವನೇರಿ ಅಲ್ಲಿ ತಮ್ಮದೇ ಆದ ಬಾವುಟವ ನೆಟ್ಟು ಮುಗುಳು ನಗುತ್ತಾರೆ.
ಬ್ಯೂಟಿ ವಿತ್ ಬ್ರೈನ್
ಹಿಂದೊಂದು ಕಾಲವಿತ್ತು. ಅದು, ಹೆಣ್ಣೆಂದರೆ ಕೇವಲ ಸೌಂದರ್ಯದ ಪ್ರತೀಕ ಎಂದು ತಿಳಿದಿದ್ದ ಕಾಲ. ದಿನಗಳು ಉರುಳಿದಂತೆ ಅವಳ ಆಂತರಿಕ ಸೌಂದರ್ಯಕ್ಕೂ, ಅವಳ ಚಾಕಚಕ್ಯತೆಗೂ, ಅವಳ ಬುದ್ಧಿವಂತಿಕೆಗೂ ಬೆಲೆ ಬರುವ ಕಾಲ ಬಂದಿದೆ. ಈಗೀಗ ಅದೆಷ್ಟೋ ಜನ ಹುಡುಗರು, ಅವಳ ಮಾತಿನ ಶೈಲಿ, ಅವಳ ಜಾಣ್ಮೆ, ಅವಳ ಹಾವಭಾವಕ್ಕೆ ಮನಸೋಲುತ್ತಿದ್ದಾರೆ. ಸೌಂದರ್ಯವೆನ್ನುವುದು ನಾಮಕಾವಸ್ಥೆಗೆ ಮಾತ್ರ ಉಳಿದಿರುವ ಕಾಲ ಇದು.
ಈ ರೀತಿ ಯೋಚಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ, ಎಲ್ಲರೂ ಸಂಪೂರ್ಣವಾಗಿ ಹೀಗೆಯೇ ಯೋಚಿಸುವುದಿಲ್ಲ. ಅವಳ ಬಣ್ಣ, ಎತ್ತರ, ನಡವಳಿಕೆ ಹೀಗೆ ಹೆಣ್ಣನ್ನು ಅಳೆಯುವ ಮಾನದಂಡಗಳ ಪಟ್ಟಿಯೇ ಇದೆ. ಎಲ್ಲರಿಗೂ ಓದಿರುವ ಹುಡುಗಿಯೇ ಬೇಕು. ಕೈ ತುಂಬಾ ಸಂಬಳ ತರಬೇಕು. ಮನೆ, ಮಕ್ಕಳು, ಅತ್ತೆ-ಮಾವ, ಗಂಡ ಎಲ್ಲರನ್ನೂ ಚಾಚೂತಪ್ಪದೆ ಪಾಲಿಸಬೇಕು. ಅದೆಷ್ಟೇ ತ್ರಾಸವಾದರೂ ನಗುನಗುತ್ತಲೇ ಎಲ್ಲವ-ಎಲ್ಲರ ನಿಭಾಯಿಸಬೇಕು. ಇದೇ ಕಾರಣಕ್ಕೆ ಹುಡುಗಿಯರು ಮದುವೆಯನ್ನು ಈಗೀಗ ಮುಂದೂಡುತ್ತಿ ದ್ದಾರೆ. ಜೀವನದ ಕೆಲ ಭಾಗವನ್ನಾದರೂ ತಮ್ಮಿಷ್ಟದಂತೆ ಜೀಕಿ ಖುಷಿಪಡಲು ಬಯಸುತ್ತಿದ್ದಾರೆ. ಇನ್ನೊಬ್ಬರಿಗೆ ಮಾದರಿಯಾಗುವಂತೆ ಏನಾದರೂ ಸಾಧಿಸಿ ತೋರಿಸುತ್ತಾರೆ.
ಪ್ರತಿಯೊಂದು ನಾಗರಿಕತೆಯೂ ಮದುವೆಗೆ ವಿಶಿಷ್ಟ ಮಾನ್ಯತೆ ನೀಡಿದೆ. ಅದಕ್ಕೆ ಗೌರವಾನ್ವಿತ ಸ್ಥಾನ ಕೊಟ್ಟಿದೆ. ಮದುವೆಗೆ ಒಂದು ಸಾಂಸ್ಥಿಕ ಸ್ವರೂಪ ಇದೆ. ಕೌಟುಂಬಿಕ ಬೆಸುಗೆಯ ಜೊತೆಗೆ ಸಾಮಾಜಿಕ ಮನ್ನಣೆ ಇದೆ. ಭವಿಷ್ಯದ ತಲೆಮಾರನ್ನು ರೂಪಿಸುವ ಪರೋಕ್ಷ ಹೊಣೆಗಾರಿಕೆ ದಂಪತಿಗಳಿಗಿರುತ್ತದೆ. ಅಲ್ಲಿಯವರೆಗೆ ತಂತಮ್ಮ ಪಾಡಿಗಿದ್ದ ಇಬ್ಬರು ವಿಭಿನ್ನ ವ್ಯಕ್ತಿಗಳು, ಮದುವೆಯ ಮೂಲಕ ಒಂದಾಗುತ್ತಾರೆ. ತಂತಮ್ಮ ವಿಭಿನ್ನ ವ್ಯಕ್ತಿತ್ವಗಳ ಜೊತೆಗೇ ಒಂದಾಗಿ ಬದುಕಲು ಶುರು ಮಾಡುತ್ತಾರೆ.
ಹೆಣ್ಣು ಬದಲಾಗಿದ್ದಾಳೆ
ಪತಿಯೇ ಪರದೈವ ಎಂಬ ಕಾಲ ಬದಲಾಗಿ ಕಾಲು ಶತಮಾನವೇ ಆಗಿಹೋಯ್ತು. ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಮಹಿಳಾ ಶಿಕ್ಷಣ, ಮಹಿಳೆಯ ಹಕ್ಕುಗಳ ಅರಿವು ಪರಿಸ್ಥಿತಿಯನ್ನು ತುಂಬ ಬದಲಾಯಿಸಿದೆ. ಈಗ ಹೆಣ್ಣು, ತನ್ನ ಗಂಡನ ಅಥವಾ ಅತ್ತೆಮನೆಯ ದೌರ್ಜನ್ಯವನ್ನು ಮೌನವಾಗಿ ಸಹಿಸಲು ಸಿದ್ಧಳಿಲ್ಲ. ಏಕೆಂದರೆ, ಆಕೆ ಆರ್ಥಿಕವಾಗಿ ಅವಲಂಬಿತಳಾಗಿಲ್ಲ. ತನ್ನ ಹಕ್ಕುಗಳ ಬಗ್ಗೆ ಆಕೆಗೆ ಸ್ಪಷ್ಟತೆ ಇದೆ. ಆಧುನಿಕ ಉದ್ಯೋಗಾವಕಾಶಗಳು ಮಹಿಳೆಗೂ ಆದ್ಯತೆ ನೀಡಿವೆ. ಇವೆಲ್ಲ ಕಾರಣಗಳಿಂದಾಗಿ, ಮಹಿಳೆ ಈಗ ಮೊದಲಿಗಿಂತ ಹೆಚ್ಚು ಸಶಕ್ತೆ ಹಾಗೂ ಸ್ವಾವಲಂಬಿ. ಹೆಚ್ಚಿನ ಮಹತ್ವಾಕಾಂಕ್ಷೆ, ಹಕ್ಕು ಚಲಾಯಿಸುವ ಅತ್ಯುತ್ಸಾಹ, ಮುಕ್ತ ವಾತಾವರಣ ಹೆಣ್ಣಿನಲ್ಲಿ ಹೊಸ ಕನಸುಗಳನ್ನು ಹುಟ್ಟು ಹಾಕಿವೆ.
ಈಗಿನ ಹೆಣ್ಣುಮಕ್ಕಳಿಗೆ ಗೃಹಿಣಿ ಎನ್ನುವ ಸ್ಥಾನವನ್ನು ಸ್ವೀಕರಿಸುವ ಮನಃಸ್ಥಿತಿ ಮಾಯವಾಗಿದೆ. ಹುಡುಗ ಕೂಡ, ಕೆಲಸ ಮಾಡುವ ಹುಡುಗಿಯೇ ಬೇಕು ಎನ್ನುತ್ತಾನೆ. ಆದರೆ, ಹೆಚ್ಚಿನ ಹುಡುಗರಿಗೆ ಹುಡುಗಿಯ ಸಂಬಳ ಬೇಕೇ ಹೊರತು, ಆಕೆಗೆ ಮನೆಯ ಜವಾಬ್ದಾರಿಗಳಲ್ಲಿ ವಿನಾಯಿತಿ ನೀಡುವ ಯೋಚನೆ ಮಾತ್ರ ಬಾರದು. ಹೀಗಾಗಿ ತಿಕ್ಕಾಟ ಶುರುವಾಗುತ್ತದೆ. ಒಳಗೂ ದುಡಿ, ಹೊರಗೂ ದುಡಿ ಎಂದರೆ ಹೇಗೆ? ನಾನೇನು ಗಾಣದೆತ್ತೆ? ಎಂದು ಅವಳು ಜಗಳ ಶುರು ಮಾಡುತ್ತಾಳೆ. ಆಗ, ಕೆಲಸ ಬಿಟ್ಟುಬಿಡು ಎಂಬ ಸಲಹೆ ಬರುತ್ತದೆ. ಹೆಣ್ಣು ಅದನ್ನು ಒಪ್ಪಿಕೊಳ್ಳುವುದಿಲ್ಲ. ಈಗಿನ ಕಾಲದ ಹೆಣ್ಣುಮಕ್ಕಳು ಓದಿನಂತೆ ಕೆಲಸ ಕೂಡ ತನ್ನ ವ್ಯಕ್ತಿತ್ವದ ಮುಖ್ಯ ಭಾಗ ಎಂದುಕೊಳ್ಳುವುದರಿಂದ, ಆಕೆ ತನ್ನ ವ್ಯಕ್ತಿತ್ವಕ್ಕೆ ಪೂರಕವಾದ ಅಂಶಗಳನ್ನು ಉಳಿಸಿಕೊಳ್ಳಲು ಒತ್ತು ಕೊಡುತ್ತಾಳೆಯೇ ವಿನಾ ವೈವಾಹಿಕ ಸಂಬಂಧಕ್ಕಲ್ಲ.
ಸಂಸಾರದ ಸಾರೋಟಿಗೆ ಅಂಟಿಕೊಂಡಿರುವ ಪ್ರೀತಿಯೊಟ್ಟಿಗೆ ಬರುವ ಜವಾಬ್ದಾರಿಗಳನ್ನು ಇಬ್ಬರೂ ಸೇರಿ ನಿರ್ವಹಿಸಿದರೆ ಮೀರಾಳಂಥ ಅನೇಕ ಹೆಣ್ಣುಮಕ್ಕಳು ಕಂಡ ಕನಸುಗಳು ಸಾಕಾರಗೊಳ್ಳುತ್ತವೆ. ಆಗ ಮದುವೆ ಎನ್ನುವುದು ಬಂಧನವಾಗದೆ, ಸುಮಧುರ ಬಾಂಧವ್ಯವಾಗಿ ಮುಂದುವರಿಯುತ್ತದೆ.
ದಾಂಪತ್ಯವೆಂಬುದು ಜೋಡೆತ್ತಿನ ಬಂಡಿ
ದಾಂಪತ್ಯವೆನ್ನುವುದು ಜೋಡೆತ್ತು ಎಳೆಯುವ ಬಂಡಿ. ಅಲ್ಲಿ ಎರಡೆತ್ತುಗಳೂ ಸಮಾನವಾಗಿ ಭಾರವನ್ನು ಹೊತ್ತು ಬಂಡಿಯನ್ನು ಮುನ್ನಡೆಸುತ್ತಾ ಸಾಗಬೇಕು. ಇಬ್ಬರಲ್ಲಿ ಒಬ್ಬರು ಮೊಂಡುತನಕ್ಕೋ, ನಾನೆಂಬ ದರ್ಪಕ್ಕೋ ಬಿದ್ದರೆ ಮುಗೀತು, ಸಂಸಾರದ ಬಂಡಿ ನಿಂತು ಬಿಡುತ್ತದೆ. ಇಬ್ಬರ ನೆಮ್ಮದಿ, ಬದುಕು ಎರಡೂ ಹಾಳಾಗುತ್ತದೆ. ಸಂಸಾರದ ಬುನಾದಿ ಪ್ರೀತಿ, ಸಹಬಾಳ್ವೆ, ನಂಬಿಕೆ, ಹಂಚಿಕೆ, ಹೊಂದಾಣಿಕೆ. ಆದರೆ, ಹಿಂದಿನಿಂದಲೂ ನಡೆದು ಬಂದಿರುವುದು ಹೆಣ್ಣು ಸಂಸಾರದ ಜವಾಬ್ದಾರಿಯನ್ನು ಹೊರಬೇಕು, ಗಂಡು ದುಡಿಯಬೇಕು ಎಂದು. ಆದರೆ, ಈಗಿನ ಕಾಲಘಟ್ಟದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ.
-ಜಮುನಾರಾಣಿ ಎಚ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.