ಪ್ರೀತಿ ಪ್ರೇಮ ಪ್ರಣಯ
Team Udayavani, Jan 3, 2018, 3:16 PM IST
ನಮ್ಮ ಕಾಲವೇ ಚೆನ್ನಾಗಿತ್ತು ಎಂದು ವಾದಿಸುವ ಅಜ್ಜಿ, ಈ ದಿನಗಳ ಲೈಫೇ ಬ್ಯೂಟಿಫುಲ್ ಎಂದು ವಿವರಿಸುವ ಮೊಮ್ಮಗಳು… ಹಳೆ ಬೇರು-ಹೊಸ ಚಿಗುರಿನ ನಡುವೆ ಅದೊಮ್ಮೆ ಮಾತಿಗೆ ಮಾತು ಬೆಳೆಯಿತು. ಸವಾಲ್-ಜವಾಬ್ ಮಾದರಿಯಲ್ಲಿ ನಡೆದ ಈ ಚರ್ಚೆಯಲ್ಲಿ ಗೆದ್ದವರ್ಯಾರು, ಸೋತವರ್ಯಾರು ಎಂಬುದನ್ನು ತಿಳಿಯಲು ಈ ಲೇಖನ ಓದಿ…
ಮೊನ್ನೆ ಒಂದು ಮದುವೆಗೆ ಹೋಗಿದ್ದೆ. ಅಂತರ್ಜಾತಿಯ ವಿವಾಹ. ಅಂತರ್ಜಾತಿ ಎಂದ ಮೇಲೆ ಅದು ಪ್ರೇಮ ವಿವಾಹವೇ ತಾನೆ? ಹುಡುಗ-ಹುಡುಗಿ ತಮ್ಮ ಪ್ರೀತಿ ಫಲಿಸಿದ ಖುಷಿಯಲ್ಲಿ ಮೈಮರೆತಿದ್ದರು. ನಾನೂ ಹೋಗಿ ಶುಭ ಹಾರೈಸಿ ಉಡುಗೊರೆ ಕೊಟ್ಟು ಊಟದ ಹಾಲಿನ ಕಡೆ ನಡೆದೆ. ನನ್ನ ಪಕ್ಕದಲ್ಲೇ ಇಬ್ಬರು ಹೆಂಗಸರು ಊಟಕ್ಕೆ ಕುಳಿತಿದ್ದರು. ನೋಡಲು ಆಧುನಿಕತೆಯೇ ಮೈವೆತ್ತಂತೆ ಕಾಣುತ್ತಿದ್ದರು. ಅವರ ಬಟ್ಟೆಬರೆ, ಅಲಂಕಾರ ಆಧುನಿಕತೆಯನ್ನು ಎತ್ತಿ ತೋರಿಸುತ್ತಿತ್ತು. ಅವರ ಮಾತುಗಳು ಬೇಡವೆಂದರೂ ನನ್ನ ಕಿವಿ ಮೇಲೆ ಬೀಳುತ್ತಿದ್ದವು.
ಅವೆಲ್ಲದರ ಸಾರಾಂಶ ಇಷ್ಟೆ: ಹುಡುಗಿಯ ಮನೆಯವರು ಮಡಿ ಮೈಲಿಗೆ ಎನ್ನುವ ಆಚಾರವಂತರು. ಹುಡುಗನ ಮನೆಯವರು ಮಾಂಸಾಹಾರಿಗಳು. ಅಂಥ ಹುಡುಗನನ್ನು ವರಿಸಿದ್ದು ಹುಡುಗಿಯ ಕರ್ಮ. ಇಂಥ ಸಂಪ್ರದಾಯಸ್ಥ ಕುಟುಂಬದ ಹುಡುಗಿ ಸಿಕ್ಕಿದ್ದು ಹುಡುಗನ ಅದೃಷ್ಟ… ಹೀಗೆ ಸಾಗಿದ್ದವು ಮಾತುಗಳು.
ನನಗೆ ಆ ಇಬ್ಬರ ಸಂಭಾಷಣೆ, ನಗುವಿನ ಜೊತೆ ಅಚ್ಚರಿಯನ್ನೂ ತಂದಿತ್ತು. ಅಲ್ಲಾ, ನೋಡಲಿಕ್ಕೆ ಅವರ ದಿರಿಸು-ಅಲಂಕಾರ ನವನಾಗರೀಕತೆಯ ಉತ್ತುಂಗದಲ್ಲಿವೆ. ಆದರೆ ಮಾತುಗಳು ಹನ್ನೆರಡನೇ ಶತಮಾನಕ್ಕೆ ತಕ್ಕಹಾಗಿದೆ. ಯಾರು ಯಾರನ್ನು ಮದುವೆಯಾದರೆ ಇವರಿಗೇನು ಎನ್ನಿಸಿತು. ಹೀಗೆ ಯೋಚಿಸುತ್ತಲೇ ಮನೆಗೆ ಬಂದೆ.
“ಮದುವೆಯೆಲ್ಲಾ ಚೆನ್ನಾಗಾಯೆ¤àನೇ’ ಎಂದು ಕೇಳಿದಳು ಅಮ್ಮ. “ಹೂಂ’ ಎಂದು ಸೋಫಾ ಮೇಲೆ ಕುಳಿತೆ. “ಏನು ಚೆಂದವೋ ಬಿಡೇ, ಜಾತಿಯಲ್ಲದ ಜಾತಿಯವರನ್ನು ಮಾಡಿಕೊಂಡು ಅದೇನು ಸುಖ ಪಡ್ತಾಳ್ಳೋ ಆ ಹುಡುಗಿ. ಅವಳೇನೋ ಚಿಕ್ಕವಳು, ಬುದ್ಧಿಯಿಲ್ಲ ಅಂದ್ರೆ ಅವಳ ಅಪ್ಪ ಅಮ್ಮನೂ ಮಗಳ ತಾಳಕ್ಕೆ ಕುಣಿಯೋದಾ? ನಮ್ಮ ಜಾತಿ ಹುಡುಗನ್ನೇ ಮದುವೆಯಾಗಬೇಕು ಅಂತ ಕಡ್ಡಾಯ ಮಾಡಬಾರದಿತ್ತಾ? ಹೋಗಲಿ, ಆ ಹಾಳು ಹುಡುಗಿಗೇನು ಬಂದಿತ್ತು? ಇವನು ನಮ್ಮ ಜಾತಿ ಅಲ್ಲ ಅಂತ ಗೊತ್ತಾದ ಮೇಲೂ ಹೇಗೇ ಪ್ರೀತಿಸಿದಳು? ಏನೋ ಒಟ್ಟಿನಲ್ಲಿ ಕಾಲ ಕೆಟ್ಟುಹೋಯ್ತು ಎಂದು ಗೊಣಗಿದಳು ಅಮ್ಮ. ನಾನು ಮಾತಾಡದೆ ಅಲ್ಲೇ ಸೋಫಾದ ದಿಂಬಿಗೆ ತಲೆಯೊರಗಿಸಿ ಕಣ್ಣುಮುಚ್ಚಿದ್ದೆ.
ಪಕ್ಕದಲ್ಲಿ, ಆಗ ತಾನೇ ಕಾಲೇಜಿನಿಂದ ಬಂದಿದ್ದ ಮಗಳು ಕುಳಿತು ಮೊಬೈಲಿನಲ್ಲಿ ಏನೋ ನೋಡುತ್ತಿದ್ದವಳು ಅಜ್ಜಿಯ ಮಾತಿಗೆ ಕನಲಿ ತಲೆ ಎತ್ತಿದ್ದಳು. “ಅಲ್ಲಾ ಅಜ್ಜಿ, ನಿಂದು ಯಾವ ಜಾತಿ? ನೀನು ಏನು ತಿಂತೀಯ? ನಿಮ್ಮ ಮನೇಲಿ ಎಲ್ಲರೂ ಹೇಗೆ ಹೇಗೆ ಬಿಹೇವ್ ಮಾಡ್ತಾರೆ? ನೀನು ವೆಜ್ಜಾ, ಅಲ್ವಾ?.. ಅಂತೆಲ್ಲಾ ವಿಚಾರಿಸಿಕೊಂಡು ಆಮೇಲೆ ಪ್ರೀತಿ ಮಾಡ್ಬೇಕಾ? ಅಸಲು ಈ ಪ್ರೀತಿ ಹೇಗೆ ಹುಟ್ಟತ್ತೆ ಅಂತ ನಿಂಗೆ ಗೊತ್ತಿದೆಯಾ? ನೀನು ತಾತನ್ನ ಪ್ರೀತಿ ಮಾಡಿ ಮದುವೆಯಾಗಿದ್ದರೆ ನಿಂಗೆ ಗೊತ್ತಾಗಿರೋದು! ನಿಮ್ಮಪ್ಪ, ಅಮ್ಮ ಹೇಳಿದ್ರು. ನೀನೂ ಕುರಿ ತರಾ ತಾಳಿ ಕಟ್ಟಿಸಿಕೊಂಡೆ’ ಎಂದಳು! ನಾನು ಕಣ್ಣು ಮುಚ್ಚಿಯೇ, ಅಮ್ಮಾ ಈಗ ಯಾವ ಥರ ಬಾಂಬ್ ಹಾಕಬಹುದು ಮೊಮ್ಮಗಳ ಮೇಲೆ ಎಂದು ನಿರೀಕ್ಷಿಸುತ್ತಾ ಮೈಯೆಲ್ಲಾ ಕಿವಿಯಾದೆ.
ಅಮ್ಮನಿಂದ ತಕ್ಷಣ ಬುಲೆಟ್‌ನಂತೆ ಬಂತು ಉತ್ತರ: “ಏನು, ನಾನು ಪ್ರೀತಿ ಮಾಡೋದಾ? ಅಯ್ಯಯ್ಯೋ ಬಿಡು¤ ಅನ್ನೂ. ನಮಗೆಲ್ಲಾ ಅಷ್ಟು ಸ್ವಾತಂತ್ರ್ಯ ಕೊಟ್ಟು ಬೆಳೆಸಿರಲಿಲ್ಲಮ್ಮ. ದೊಡ್ಡೋರು ಚಿಕ್ಕೋರು ಅಂತ ಭಯ-ಭಕ್ತಿ ಇಟ್ಟು ಬೆಳೆಸಿದ್ದರು. ನಿಮ್ಮ ಹಾಗೆ ನಾವು ಕಾಲೇಜಿಗೆ ಹೋಗಿದ್ದರೆ ತಾನೇ ಪ್ರೀತಿ ಪ್ರೇಮ ಅಂತ ಕೆಟ್ಟ ಬುದ್ಧಿ ಕಲಿಯಕ್ಕೆ’ ಎಂದಿದ್ದಳು. ಮಗಳ ಬಾಣ ರೆಡಿಯಾಗಿತ್ತು- “ಅಂದ್ರೆ ನೀನು ಹೇಳ್ಳೋದೇನು? ಕಾಲೇಜಿಗೆ ಹೋದವರೆಲ್ಲಾ ಕೆಟ್ಟ ಬುದ್ಧಿ ಕಲೀತಾರೆ ಅಂತಾನಾ ಅಥವಾ ಪ್ರೀತಿ ಪ್ರೇಮ ಮಾಡಿ ಅವರವರ ಸಂಗಾತಿಗಳನ್ನು ಅವರೇ ಹುಡುಕಿಕೊಳ್ಳೋದು ಕೆಟ್ಟದು ಅಂತಾನಾ?’ ಎಂದು ಕೇಳಿದಳು. ಅಮ್ಮನಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. “ನೋಡೇ ನಿನ್ನ ಮಗಳು ಎಷ್ಟು ಬಾಯಿ ಮಾಡ್ತಾಳೆ. ಹಾಗೇ ಬಿಟ್ರೆ ಇವಳೂ ನಾಳೆ ಯಾರನ್ನಾದರೂ ಹುಡುಕಿಕೊಂಡು ನಿನ್ನ ಕೈಗೆ ಚಿಪ್ಪೇ ಕೊಡೋದು’ ಎಂದು ನನ್ನನ್ನು ಚುಚ್ಚುತ್ತಾ ಸಹಾಯ ಯಾಚಿಸಿದ್ದಳು.
ನಾನು ಕಣ್ಣು ಬಿಟ್ಟೆ. ಮಗಳು, ಏನೂ ಮಾತಾಡಬೇಡ ನೀನು ಎಂಬಂತೆ ಕಣ್ಣು ಮಿಟುಕಿಸಿದ್ದಳು. “ಏನಮ್ಮಾ ಅದು ನಿನ್ನ ಕತೆ? ಅವಳಿಗೆ ಈಗಲೇ ಅದೆಲ್ಲಾ ಯಾಕೆ ತಲೇಲಿ ತುಂಬಿ¤àಯ? ಅವಳು ಯಾರನ್ನು ಇಷ್ಟ ಪಡ್ತಾಳೊ ಅವರಿಗೆ ಕೊಟ್ಟು ಮದುವೆ ಮಾಡಿದರಾಯ್ತು. ಅವಳು ಸುಖವಾಗಿದ್ರೆ ಸಾಕಲ್ವಾ’ ಎಂದೆ. “ಅಂದ್ರೆ ಅವಳು ನಮ್ಮ ಜಾತಿಯಲ್ಲದ ಹುಡುಗನ್ನ ಇಷ್ಟಪಟ್ಟರೂ ಮದುವೆ ಮಾಡಿ ಕೊಡ್ತೀಯಾ’ ಅಮ್ಮ ದಿಗಿಲಿನಿಂದ ಕೇಳಿದ್ದಳು. ನನಗೆ ಪಾಪ ಎನಿಸಿತು. “ವಿಚಾರಿಸಿಯೇ ಕೊಡೋಣಂತೆ ಈಗ ಸುಮ್ಮನಾಗಮ್ಮಾ’ ಎಂದೆ.
“ಹೌದಜ್ಜೀ, ನೀನು ಯಾವ ಜಾತಿ? ನಿಮ್ಮನೇಲಿ ಮಾಂಸ ತಿಂತೀರಾ? ಎಗ್ಗೂ ತಿನ್ನಲ್ವಾ? ದೇವರ ಪೂಜೆ ಮಾಡ್ತೀರಾ? ಅಂತೆಲ್ಲಾ ಕೇಳಿ ನಮ್ಮನೇಗೆ ಸೂಟ್ ಆಗುವ ಹಾಗಿದ್ರೆ ಲವ್ ಮಾಡ್ತೀನಿ ಇಲ್ಲಾಂದ್ರೆ ಇಲ್ಲ’ ಎನ್ನುತ್ತಾ “ಹೋಗಜ್ಜಿ ಸಾಕು. ನಿನಗೆ ಪ್ರೀತಿ ಮಾಡೋದೇ ಗೊತ್ತಿಲ್ಲ’ ಎಂದಳು ಮಗಳು.
ಐದು ನಿಮಿಷದ ನಂತರ ಅಜ್ಜಿಯ ಪಕ್ಕ ಕುಳಿತು ಅವಳ ಕೈಬೆರಳಿನೊಂದಿಗೆ ಆಟವಾಡುತ್ತಾ- ಪ್ರೀತಿ ಒಂದು ಡಿವೈನ್ ಅನುಭೂತಿ ಅಜ್ಜೀ. ಅದು ಹೇಗೆ, ಯಾವಾಗ ಹುಟ್ಟುತ್ತೆ ಅಂತ ಹೇಗೆ ಗೊತ್ತಾಗುತ್ತೆ? ಹುಡುಗನಿಗೆ ಹುಡುಗಿಯ, ಹುಡುಗಿಗೆ ಹುಡುಗನ ಯಾವುದೋ ಒಂದು ಮಾತು, ನಗು, ಆಲೋಚನೆ, ಹಾವಭಾವ ನಡವಳಿಕೆ ಒಂದೇ ಕ್ಷಣದಲ್ಲಿ ಇಷ್ಟವಾಗಿಬಿಡತ್ತೆ. ಆ ಕ್ಷಣದಲ್ಲಿ ಇವಳೇ/ಇವನೇ ನನ್ನ ಐಡಿಯಲ್ ಪಾರ್ಟ್‌ನರ್ ಅನಿಸಿ ಬಿಡತ್ತೆ. ಆಗ ನಿನ್ನ ಜಾತಿ ಯಾವುದು ಅಂತ ಕೇಳಕ್ಕೆ ಆಗತ್ತಾ ಅಜ್ಜೀ? ಪ್ರೀತಿ ಅನ್ನೋದು, ಇಟ್ ಜಸ್ಟ್ ಹ್ಯಾಪನ್ಸ್ ಅಷ್ಟೆ! ಯಾರ ಅನುಮತಿಗೂ ಕಾಯದೆ ಹೃದಯದೊಳಗೆ ಜಾಗ ಮಾಡಿಕೊಂಡು ಬೆಚ್ಚನೆಯ ಭಾವ ಮೂಡಿಸುವುದೇ ಪ್ರೀತಿ ಅಜ್ಜೀ’ ಎಂದು ಮುದ್ದುಗರೆಯುತ್ತಾ ಅಜ್ಜಿಗೆ ಪೂಸಿ ಹೊಡೆಯುತ್ತಿದ್ದರೆ ನಾನು ಅವಾಕ್ಕಾಗಿ ಮಗಳನ್ನೆ ನೋಡುತ್ತಿದ್ದೆ. ನಮ್ಮ ಪುಟ್ಟಿ ಇಷ್ಟು ಬೆಳೆದದ್ದು ಯಾವಾಗ ಎಂದು!
ಮಗಳು ನೀಡಿದ ಪ್ರೀತಿಯ ವ್ಯಾಖ್ಯೆಯನ್ನು ಕೇಳುತ್ತಾ ನನಗೂ ಅರೆ! ಹೌದಲ್ಲಾ! ಎನಿಸಿತ್ತು. “ನಾವಿಬ್ಬರು ಯಾವ ಜಾತಿಯಾಗಿದ್ದರೂ, ಹೊಂದಿಕೊಂಡು ಖುಷಿಯಾಗಿ ಬಾಳುವುದು ಮುಖ್ಯಾನೋ, ಮನಸ್ಸುಗಳ ಹೊಂದಾಣಿಕೆಯಿಲ್ಲದೆ ಒಂದೇ ವರ್ಷಕ್ಕೆ ನಾನೊಂದು ತೀರ ನೀನೊಂದು ತೀರ ಆಗೋದು ಸರೀನೋ?’ ಎಂದು ಅಜ್ಜಿಗೇ ಸವಾಲೆಸೆದಳು ಮೊಮ್ಮಗಳು. ಅಮ್ಮನೂ ಕೊನೆಗೆ ಮೊಮ್ಮಗಳ ಮಾತಿಗೆ ಮನಸೋತು, “ಮೊದಲು ನೀನು ಓದು ಮುಗಿಸು ಚಿನ್ನಾ. ಒಳ್ಳೆ ಗಂಡನ್ನೇ ಮದುವೆಯಾಗೂವಂತೆ, ನನ್ನಮ್ಮಾ ಎಷ್ಟು ತಿಳಿದುಕೊಂಡಿದೀಯೇ ತಾಯಿ’ ಎಂದು ಆಕೆಯ ಗಲ್ಲಕ್ಕೆ ಲೊಚ್ಚನೆ ಮುದ್ದಿಟ್ಟಳು. ನಾನು ನೆಮ್ಮದಿಯಾಗಿ ನಿದ್ರೆಗೆ ಜಾರಿದೆ.
ವೀಣಾ ರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.