ಅಕ್ಕಿ ಮೇಲೆ ಆಸೆ ತಿಂಡಿ ಮೇಲೆ ಪ್ರೀತಿ!
Team Udayavani, Jul 31, 2019, 5:00 AM IST
ದಕ್ಷಿಣ ಭಾರತದಲ್ಲಿ ಕಡ್ಡಾಯವಾಗಿ ಬಳಸುವ ಧಾನ್ಯಗಳಲ್ಲಿ ಅಕ್ಕಿಗೆ ಅಗ್ರ ಸ್ಥಾನ. ಅಕ್ಕಿಯ ಹಿಟ್ಟಿನಿಂದ ರುಚಿರುಚಿಯಾದ ತಿನಿಸುಗಳನ್ನು ಮಾಡಬಹುದು. ಬೆಳಗ್ಗಿನ ತಿಂಡಿಯಾಗಿ, ಸಂಜೆ ಹೊತ್ತು ಸವಿಯುವ ತಿನಿಸಾಗಿ ತಯಾರಿಸಬಹುದಾದ ಕೆಲವು ಖಾದ್ಯಗಳ ರೆಸಿಪಿ ಇಲ್ಲಿದೆ. ಇವು ಮಲೆನಾಡಿನಲ್ಲಿ ಮನೆಮಾತಾಗಿರುವ ತಿನಿಸುಗಳು.
ಉಂಡೆ ಕಡುಬು
ಬೇಕಾಗುವ ಸಾಮಗ್ರಿ: ಅಕ್ಕಿ ರವೆ -1 ಕಪ್, ತೆಂಗಿನ ತುರಿ- ಅರ್ಧ ಕಪ್, ನೀರು -2 ಕಪ್, ಹಸಿ ಮೆಣಸು- 2, ಹೆಚ್ಚಿದ ಈರುಳ್ಳಿ-1 ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಜೀರಿಗೆ-1 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕರಿಬೇವು ಸ್ವಲ್ಪ, ಕೊಬ್ಬರಿ ಎಣ್ಣೆ ಸ್ವಲ್ಪ.
ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ನೀರು ಕುದಿಯಲು ಇಟ್ಟು, ನಂತರ ತೆಂಗಿನ ತುರಿ, ಹಸಿಮೆಣಸು ಮತ್ತು ಉಪ್ಪನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ, ಜೀರಿಗೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕರಿಬೇವು, ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಕುದಿಯುವ ನೀರಿಗೆ ಹಾಕಿ. ತಕ್ಷಣವೇ ಅಕ್ಕಿ ರವೆಯನ್ನು ಹಾಕುತ್ತಾ ಸೌಟಲ್ಲಿ ಚೆನ್ನಾಗಿ ತಿರುಗಿಸಿ. ಮಿಶ್ರಣವು ಉಂಡೆ ಕಟ್ಟುವ ಹದಕ್ಕೆ ಬಂದ ನಂತರ, ಕೈಗೆ ನೀರು ಅಥವಾ ಕೊಬ್ಬರಿ ಎಣ್ಣೆ ಸವರಿಕೊಂಡು,ಉಂಡೆ ಕಟ್ಟಿ. ನಂತರ ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ 20 ನಿಮಿಷ ಬೇಯಿಸಬೇಕು.
ಬಾಳೆ ಎಲೆ ಕೊಟ್ಟೆ ಕಡುಬು
ಬೇಕಾಗುವ ಸಾಮಗ್ರಿ: ಅಕ್ಕಿ -2 ಕಪ್, ಉದ್ದಿನಬೇಳೆ-1 ಕಪ್, ಉಪ್ಪು- ರುಚಿಗೆ, ಬಾಳೆ ಎಲೆ.
ಮಾಡುವ ವಿಧಾನ: ಅಕ್ಕಿ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಐದಾರು ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಇಡಿ. ಉದ್ದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅಕ್ಕಿಯನ್ನು ಚಿರೋಟಿ ರವೆ ಗಾತ್ರಕ್ಕೆ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ, ರುಬ್ಬಿದ ಎರಡೂ ಹಿಟ್ಟನ್ನು ಇಡ್ಲಿ ಹಿಟ್ಟಿನ ಹದಕ್ಕೆ ಮಿಶ್ರಮಾಡಿ ಉಪ್ಪು ಬೆರೆಸಿ, ಚೆನ್ನಾಗಿ ಕಲಕಿ. ಬಾಳೆ ಎಲೆ ಹರಿಯದಂತೆ ಬೆಂಕಿ ಶಾಖದಲ್ಲಿ ಬಾಡಿಸಿ, ನಂತರ ಸುರುಳಿಯಾಕಾರದಲ್ಲಿ ಮಡಚಿ ಒಂದು ಕಡೆ ಹಗ್ಗದಿಂದ ಗಂಟುಕಟ್ಟಿ. ಒಳಗಡೆ ಹಿಟ್ಟು ಹೊಯ್ದು ಪುನಃ ಹಿಟ್ಟು ಚೆಲ್ಲದಂತೆ ಮೇಲ್ಗಡೆಯೂ ಗಂಟು ಕಟ್ಟಿ ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ 25 ನಿಮಿಷ ಬೇಯಿಸಿ.
ಅಕ್ಕಿಹಿಟ್ಟಿನ ಖಾರ ಕಡುಬು
ಬೇಕಾಗುವ ಸಾಮಗ್ರಿ: ಅಕ್ಕಿಹಿಟ್ಟು-1 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ನೀರು-2 ಕಪ್, ಹೂರಣಕ್ಕೆ- ನೆನೆಸಿದ ಕಡಲೆಬೇಳೆ -1 ಕಪ್, ಹೆಚ್ಚಿದ ಸಬ್ಬಸಿಗೆ ಸೊಪ್ಪು- ಅರ್ಧ ಕಪ್, ಹಸಿಮೆಣಸು-2, ಶುಂಠಿ-1 ಇಂಚು ಗಾತ್ರದ್ದು, ಹೆಚ್ಚಿದ ಕೊತ್ತಂಬರಿ ಸೊಪ್ಪು-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮಿಕ್ಸಿಜಾರಿಗೆ ನೆನೆಸಿದ ಕಡಲೆಬೇಳೆಗೆ, ಹಸಿಮೆಣಸು, ಶುಂಠಿ ಹಾಕಿ ನೀರು ಬೆರೆಸದೆ ತರಿತರಿಯಾಗಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಸಬ್ಬಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಬೆರೆಸಿ ಚೆನ್ನಾಗಿ ಕಲಸಿ ಹೂರಣ ರೆಡಿ ಮಾಡಿಕೊಳ್ಳಿ.
ಇನ್ನೊಂದೆಡೆ ಇಡ್ಲಿಅಟ್ಟಿಗೆ ನೀರು ಹಾಕಿ ಬಿಸಿಗಿಟ್ಟುಕೊಳ್ಳಿ. ಒಂದು ಕಡಾಯಿಗೆ ನೀರು, ಸ್ವಲ್ಪ ಉಪ್ಪು ಹಾಕಿ ನೀರು ಕುದಿ ಬಂದನಂತರ ಅಕ್ಕಿಹಿಟ್ಟು ಬೆರೆಸಿ ಗಂಟಾಗದಂತೆ ಮಗುಚಿ. ನೀರು ಆರಿ, ಮಿಶ್ರಣ ಗಟ್ಟಿಯಾದ ನಂತರ ಅದನ್ನು ಒಂದು ಬಟ್ಟಲಲ್ಲಿ ಹಾಕಿ ಚೆನ್ನಾಗಿ ಚಪಾತಿ ಮುದ್ದೆಯಂತೆ ನಾದಿ. ನಂತರ ಕೈಗೆ ನೀರು ಅಥವಾ ಎಣ್ಣೆ ಸವರಿಕೊಂಡು ದೊಡ್ಡ ಉಂಡೆ ಮಾಡಿ ಪುರಿ ಗಾತ್ರಕ್ಕೆ ಲಟ್ಟಿಸಿ. ನಂತರ ಅದರೊಳಗೆ ರುಬ್ಬಿದ ಕಡಲೆಬೇಳೆ ಮಿಶ್ರಣ ಹಾಕಿ ಎರಡೂ ತುದಿ ಒಡೆಯದಂತೆ ನಾಜೂಕಾಗಿ ಸೇರಿಸಿ. ನಂತರ ಇಡ್ಲಿ ಅಟ್ಟಿನಲ್ಲಿಟ್ಟು, ಹಬೆಯಲ್ಲಿ 20 ನಿಮಿಷ ಬೇಯಿಸಿ.
ಅಕ್ಕಿ ಹಿಟ್ಟಿನ ಸಿಹಿ ಕಡುಬು
ಬೇಕಾಗುವ ಸಾಮಗ್ರಿ: ಅಕ್ಕಿ ಹಿಟ್ಟು-1 ಕಪ್, ನೀರು- 1ಕಪ್, ಉಪ್ಪು, ಎಣ್ಣೆ-2 ಚಮಚ, ಹೂರಣಕ್ಕೆ- ಕಾಯಿತುರಿ- 1ಕಪ್, ಬೆಲ್ಲ- ಅರ್ಧ ಕಪ್, ಏಲಕ್ಕಿ ಪುಡಿ-ಚಿಟಿಕೆ.
ಮಾಡುವ ವಿಧಾನ: ಬಾಣಲೆಯಲ್ಲಿ ಬೆಲ್ಲ ಕರಗಿಸಿ, ಕಾಯಿತುರಿ ಹಾಕಿ ನೀರು ಆರುವವರೆಗೂ ಮಗುಚಿ, ಏಲಕ್ಕಿಪುಡಿ ಸೇರಿಸಿ ಹೂರಣ ತಯಾರಿಸಿಕೊಳ್ಳಿ. ನಂತರ ಒಂದು ಪಾತ್ರೆಗೆ ಚಿಟಿಕೆ ಉಪ್ಪು, ನೀರು ಹಾಕಿ. ನೀರು ಕುದಿಯಲು ಶುರುವಾದಾಗ ಅಕ್ಕಿ ಹಿಟ್ಟು ಹಾಕಿ ಮಗುಚಿ, ಗಟ್ಟಿಯಾಗಿ ಕಲಸಿ. ಆ ಮು¨ªೆ ಬಿಸಿಯಿರುವಾಗಲೇ ಚಪಾತಿ ಹಿಟ್ಟಿನಂತೆ ಚೆನ್ನಾಗಿ ನಾದಿಕೊಳ್ಳಿ. ನಂತರ ಉಂಡೆ ಮಾಡಿಕೊಂಡು, ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಕವರ್‌ಗೆ ಎಣ್ಣೆ ಹಚ್ಚಿ ಉಂಡೆಯನ್ನಿಟ್ಟು ಲಟ್ಟಿಸಿ. ಅದರೊಳಗೆ ಕಾಯಿಬೆಲ್ಲದ ಹೂರಣ ತುಂಬಿ ಅಂಚನ್ನು ಸೇರಿಸಿ. ನಂತರ ಹಬೆಯಲ್ಲಿ 15 ನಿಮಿಷ ಬೇಯಿಸಿ.
(ಈ ತಿನಿಸುಗಳನ್ನು ಚಟ್ನಿ ಅಥವಾ ಕಾಯಿಹಾಲಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ)
-ಗೀತಾ ಎಸ್. ಭಟ್, ಭಟ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.