ಮನೋರಥ
Team Udayavani, Oct 2, 2019, 3:05 AM IST
ನನ್ನ ತಮ್ಮನಿಗೆ ಮದುವೆಯಾಗಿ ಹದಿನೈದು ವರ್ಷಗಳಾಗಿವೆ. ಮೊದಲೆಲ್ಲ ಗಂಡ-ಹೆಂಡತಿ ಚೆನ್ನಾಗೇ ಇದ್ದರು. ಅವರಿಗೆ ಹೈಸ್ಕೂಲಿಗೆ ಹೋಗುವ ಒಬ್ಬ ಮಗಳೂ ಇದ್ದಾಳೆ. ಅವನ ಪತ್ನಿ ಅವನೊಂದಿಗೆ, ನಮ್ಮೊಂದಿಗೆ ಮೊದಲು ಅನ್ಯೋನ್ಯದಿಂದ ಇದ್ದಳು. ಆದರೆ, ಈಚೆಗೆ ಒಂದೆರಡು ವರ್ಷದಿಂದ ಅವಳಲ್ಲಿ ಕೆಲವು ವಿಚಿತ್ರ ಬದಲಾವಣೆಗಳು ಕಂಡು ಬಂದಿವೆ. ಈಗೀಗಂತೂ ನಾವ್ಯಾರೂ ಅವರ ಮನೆಗೆ ಹೋಗದಿರುವಷ್ಟು ಅವಳು ನಮ್ಮನ್ನು ದೂರವಿರಿಸಿದ್ದಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅವಳದು ಸಂಶಯದ ಸಮಸ್ಯೆ. ನನ್ನ ತಮ್ಮ ಯಾರೊಡನೆ ಮಾತಾಡಿದರೂ, ತನ್ನ ಬಗ್ಗೆಯೇ ಮಾತಾಡಿದ್ದು ಎಂದು ವಾದ ಮಾಡಿ ಜಗಳವಾಡುತ್ತಾಳೆ. ಮಗಳನ್ನು ಕೂಡ ನಂಬುವುದಿಲ್ಲ. ಬೇರೆಯವರು ತನ್ನ ಊಟದಲ್ಲಿ ಏನೋ ಬೆರೆಸಿಕೊಡುತ್ತಾರೆ ಅಂತ ತನಗೆ ಮಾತ್ರ ಬೇರೆ ಗಂಜಿ ಬೇಯಿಸಿಕೊಂಡು ತಿನ್ನುತ್ತಾಳೆ! ರಾತ್ರಿ ಹೊತ್ತು ಕಂಬಳಿ ಹೊದ್ದುಕೊಂಡು ಮುಖ್ಯಬಾಗಿಲ ಪಕ್ಕದಲ್ಲೇ ಮಲಗುತ್ತಾಳೆ. ಕೇಳಿದರೆ, ಪೊಲೀಸರು ಮತ್ತು ನಕ್ಸಲರು ಇವಳನ್ನು ಹಿಡಿಯಲು ಯಾವ ಸಮಯದಲ್ಲೂ ಬಂದುಬಿಡಬಹುದು. ತಾನು ಎಚ್ಚರದಿಂದ ಇರದಿದ್ದರೆ ತಪ್ಪಿಸಿಕೊಳ್ಳಲು ಅಸಾಧ್ಯ ಎನ್ನುತ್ತಾಳೆ! ಎಷ್ಟೋ ದಿನ ಅಡುಗೆ, ಮನೆಗೆಲಸವನ್ನೂ ಮಾಡುವುದಿಲ್ಲ. ಸ್ನಾನ-ಊಟ ಕೂಡ ಮಾಡದೆ ಇರುತ್ತಾಳೆ. ತನ್ನಷ್ಟಕ್ಕೇ ಮಣಮಣ ಹೇಳುತ್ತಾ ನಗುತ್ತಾಳೆ ಕೂಡ. ಕೆದಕಿ ಕೇಳಿದರೆ, “ನಂಗೆ ರಷ್ಯಾ ಮತ್ತು ಚೀನಾದ ಜನರ ಬೆಂಬಲ ಇದೆ. ಅವರು ನನಗೆ ಮನಸ್ಸಿನ ಮೂಲಕವೇ ಸಂದೇಶ ಕಳಿಸ್ತಾರೆ. ನಾನು ನಿಮಗೆಲ್ಲಾ ಪಾಠ ಕಲಿಸಿ, ಇಲ್ಲಿಂದ ತಪ್ಪಿಸಿಕೊಳ್ತೀನಿ. ನೋಡ್ತಾ ಇರಿ’ ಅಂತೆಲ್ಲಾ ಏನೇನೋ ಅಸಂಬದ್ಧವಾಗಿ ಮಾತಾಡುತ್ತಾಳೆ. ನಾವೆಲ್ಲಾ ಹೋದರೆ ಮನೆಯ ಬಾಗಿಲೇ ತೆರೆಯೋದಿಲ್ಲ. ನೀವು ಪೊಲೀಸರ ಜನ. ನಂಗೆ ಗೊತ್ತು ಅಂತ ಹೇಳಿ ಬಾಗಿಲು ಮುಚ್ಚುತ್ತಾಳೆ. ತಮ್ಮನ ಸಂಸಾರದ ಪಾಡು ನೋಡಲು ಆಗುತ್ತಿಲ್ಲ. ಈ ರೀತಿಯ ರೋಗದ ಬಗ್ಗೆ ಮಾಹಿತಿ ಸಿಗಬಹುದೇ?
-ಶರ್ಮಿಳಾ, ಕುಂದಾಪುರ
ಶರ್ಮಿಳಾರವರೇ, ನೀವು ಹೇಳುವ ಮಾಹಿತಿಯನ್ನಷ್ಟೇ ಆಧರಿಸಿ ಹೇಳುವುದಾದರೆ, ನಿಮ್ಮ ತಮ್ಮನ ಹೆಂಡತಿಗೆ ತೀವ್ರತರವಾದ ಮಾನಸಿಕ ಕಾಯಿಲೆಗಳಲ್ಲಿ ಒಂದಾದ ಸ್ಕಿಜೋಫ್ರೆನಿಯಾ ಅಥವಾ ಮತಿಭ್ರಾಂತಿ/ಚಿತ್ತಭ್ರಾಂತಿ ಕಾಯಿಲೆಯ ಗುಣಲಕ್ಷಣಗಳು ನಿಚ್ಚಳವಾಗಿವೆ. ಈ ಕಾಯಿಲೆ ಸಾಮಾನ್ಯವಾಗಿ 20-35 ವರ್ಷದವರಲ್ಲಿ ಮೊದಲು ಕಂಡುಬರುತ್ತದೆ. ಸರಿಯಾಗಿ ಚಿಕಿತ್ಸೆ ಕೊಡಿಸದಿದ್ದರೆ, ನಿರಂತರವಾಗಿ ಉಳಿದುಕೊಳ್ಳುವ, ಇಲ್ಲವೇ ಉಲ್ಬಣಗೊಳ್ಳುವ ಸಾಧ್ಯತೆಗಳೂ ಇರುತ್ತವೆ. ಇನ್ನು ಅವರಿಗೆ ಇದೇ ಕಾಯಿಲೆ ಇರುವುದು ಹೌದೋ ಅಲ್ಲವೋ ಅನ್ನಲು, ಬೇರೆ ಕಾಯಿಲೆ ಇದೆ ಅಥವಾ ಇಲ್ಲ ಎನ್ನಲು, ಒಮ್ಮೆಯಾದರೂ ತಜ್ಞವೈದ್ಯರ ಬಳಿ ಮುಖತಃ ತಪಾಸಣೆ ಅಗತ್ಯ. ಆದ್ದರಿಂದ ಇವರನ್ನು ಆದಷ್ಟು ಬೇಗ ಮನೋರೋಗ ತಜ್ಞರಲ್ಲಿಗೆ ಕರೆದುಕೊಂಡು ಹೋಗುವುದು ಅತ್ಯಗತ್ಯ. ಈ ಕಾಯಿಲೆಯ ಗುಣಲಕ್ಷಣಗಳಲ್ಲಿ ಮುಖ್ಯವಾದದ್ದು ಅವರ ಯೋಚನೆಗಳ ವಿಲಕ್ಷಣತೆ. ತಮ್ಮ ಯೋಚನೆಗಳನ್ನು ಯಾರೋ ತೆಗೆಯುತ್ತಿದ್ದಾರೆ ಎಂಬೆಲ್ಲಾ ಆರೋಪ ಸಾಮಾನ್ಯ. ಬೇರೆಯವರು ತನ್ನನ್ನು ನಿಯಂತ್ರಿಸುತ್ತಿದ್ದಾರೆ, ಹಿಂಸಿಸುತ್ತಿದ್ದಾರೆ, ಸತಾಯಿಸಿ ಕೊಲ್ಲಲು ನೋಡುತ್ತಿದ್ದಾರೆ ಅಂತೆಲ್ಲಾ ಸಂಶಯ ಹುಟ್ಟಿ, ಅದಕ್ಕೆ ಬಲವಾದ ಆಧಾರವಿಲ್ಲದಿದ್ದರೂ, ಈ ರೋಗಿಗಳು ಅವನ್ನೇ ಬಲವಾಗಿ ನಂಬಿರುತ್ತಾರೆ. ಇದರ ಜೊತೆಗೆ, ಅಶರೀರವಾಣಿಗಳೂ ಇವರಿಗೆ ಕೇಳಿಸುತ್ತವೆ, ಬೇರೆಯವರಿಗೆ ಕಾಣದ್ದು ಕಾಣಿಸುತ್ತದೆ, ಕೆಲವೊಮ್ಮೆ ಇಲ್ಲದ ವಾಸನೆ ಬಡಿಯುತ್ತದೆ ಇತ್ಯಾದಿ… ಈ ರೀತಿಯ ಗುಣಲಕ್ಷಣಗಳು ಉಂಟಾದಾಗ ರೋಗಿಗೆ ಸಹಜವಾಗೇ ಬೇರೆಯವರ ಮೇಲೆ ನಂಬಿಕೆ ಇರದು. ಹಾಗಾಗಿ ಅವರು ತಮ್ಮ ಆಪ್ತರಿಂದ, ಬಂಧುಮಿತ್ರರಿಂದ ದೂರ ಸರಿಯುತ್ತಾ ಬರುತ್ತಾರೆ. ಅವರನ್ನು ಶತ್ರುಗಳಂತೆ ನೋಡಿ, ತಮ್ಮದೇ ಭ್ರಮೆ-ಭ್ರಾಂತುವಿನ ಲೋಕದಲ್ಲಿ ವಿಹರಿಸುತ್ತಾರೆ. ಕಿವಿಯಲ್ಲಿ ಕೇಳಿಸುವ ಧ್ವನಿಗಳಿಗೆ ಉತ್ತರ ಕೊಡುತ್ತಾರೆ,
ನಗುತ್ತಾರೆ; ತಮ್ಮ ಸುತ್ತಲಿನ ಲೋಕದ ಪರಿವೆ ಇಲ್ಲದೆ, ತಮ್ಮನ್ನು ತಾವು ನೋಡಿಕೊಳ್ಳಲೂ ಆಗದೆ, ಸ್ನಾನ, ಊಟವಿಲ್ಲದೆ ತಿರುಗುತ್ತಾರೆ. ಬೇರೆ ಜವಾಬ್ದಾರಿಗಳಿಂದ, ಸಾಮಾಜಿಕ ಸಂಬಂಧಗಳಿಂದಲೂ ದೂರ ಸರಿಯುತ್ತಾರೆ. ವಿಮುಖರಾಗುತ್ತಾರೆ. ಅವರ ವ್ಯಕ್ತಿತ್ವದಲ್ಲೇ ಅವನತಿ ಕಾಣುತ್ತಾ ಹೋಗುತ್ತದೆ. ತಮಗೆ ಇಂಥದ್ದೊಂದು ಕಾಯಿಲೆ ಇದೆ ಎಂಬ ಅರಿವು ಕೂಡಾ ಅವರಿಗೆ ಇರುವುದಿಲ್ಲ. ಆದ್ದರಿಂದ ಅವರಾಗೇ, ಮನೆಯವರಲ್ಲಿ ಅಥವಾ ವೈದ್ಯರಲ್ಲಿ ಬಂದು, ತಮಗೆ ಕಾಯಿಲೆ ಇದೆ, ಮದ್ದು ಕೊಡಿ ಎಂದು ಕೇಳುವುದಿಲ್ಲ. ಅವರ ಸ್ವಭಾವದಲ್ಲಿನ ವೈಪರೀತ್ಯ ನೋಡಿ, ಮನೆಯವರೇ ಎಷ್ಟೋ ಸಲ ಬಲವಂತವಾಗಿ, ನಾಲ್ಕೈದು ಜನರ ಸಹಾಯ ಪಡೆದಾದರೂ, ಅಥವಾ ಏನೇನೋ ಸುಳ್ಳು ಸಬೂಬು ಹೇಳಿಯಾದರೂ ರೋಗಿಯನ್ನು ವೈದ್ಯರ ಬಳಿ ಕರೆ ತರುತ್ತಾರೆ. ನಿಮ್ಮ ತಮ್ಮನ ಹೆಂಡತಿಗೂ ಇದೇ ರೀತಿ ಮಾಡಬೇಕಾಗಬಹುದು. ಇಂಥವರಿಗೆ ಒಳರೋಗಿಗಳ ವಾರ್ಡ್‌ನಲ್ಲಿ ದಾಖಲು ಮಾಡುವುದು ಅಗತ್ಯವೂ ಇರುತ್ತದೆ. ಯಾಕೆಂದರೆ, ಈಗಾಗಲೇ ಚಿಕಿತ್ಸೆ ಇಲ್ಲದೆ ಎರಡು ವರ್ಷ ಕಳೆದುಹೋಗಿದೆ. ಜಾಸ್ತಿ ಸಮಯ ಆದಂತೆಲ್ಲಾ ಚಿಕಿತ್ಸೆ ಕಷ್ಟವಾಗುತ್ತಾ ಹೋಗುತ್ತದೆ. ಮತ್ತೆ ಅವರಾಗೇ ಮದ್ದು ತೆಗೆದುಕೊಳ್ಳುವಷ್ಟು ಅರಿವು ಅವರಲ್ಲಿ ಇಲ್ಲದೇ ಇರುವ ಕಾರಣ, ಬಲವಂತಯಾಗಿಯಾದರೂ ಇಂಥವರಿಗೆ ಔಷಧಿ ಕೊಡಲು, ಆಸ್ಪತ್ರೆಗೆ ದಾಖಲು ಮಾಡಲೇಬೇಕು. ನಂತರ ಔಷಧೀಯ ಚಿಕಿತ್ಸೆಯ ಜೊತೆಗೆ, ಕುಟುಂಬ ದವರಿಗೆ ಹಾಗೂ ರೋಗಿಗೆ, ರೋಗದ ಬಗ್ಗೆ ಮಾಹಿತಿ, ಭಾವನೆಗಳನ್ನು ನಿಯಂತ್ರಣದಲ್ಲಿಡುವ ಬಗೆ, ಔಷಧಿ ಸೇವನೆ, ನಿಯಮಿತ ವೈದ್ಯ ತಪಾಸಣೆಯ ಮಹತ್ವ , ಪುನಃ ಸಮಾಜ ಹಾಗೂ ಕೆಲಸದಲ್ಲಿ ವ್ಯಸ್ತವಾಗುವುದರ ಪ್ರಯೋಜನದ ಬಗ್ಗೆ ಸಮಾಲೋಚನೆ ನೀಡಬೇಕಾಗುತ್ತದೆ.
* ಡಾ. ಅರುಣಾ ಯಡಿಯಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.