ಚಂದಿರ ನೀ ಬಾರೋ…
ಮಳೆ ಮೋಡ ತಂದ ಚೆಂದದ ದುಗುಡ
Team Udayavani, May 29, 2019, 6:11 AM IST
ಊಟ ಮಾಡುವಾಗ ಚಂದ್ರನನ್ನು ನೋಡುತ್ತಲೇ ಬೆಳೆಯುವ ಮಕ್ಕಳು ಈಗೀಗ ಅಪರೂಪ. ಈಗ ಮೊಬೈಲೇ ಇಂದ್ರ- ಚಂದ್ರ. ಅದೇನೋ ಗೊತ್ತಿಲ್ಲ. ಇಲ್ಲೊಂದು ಪುಟಾಣಿ, ಚಂದ್ರನನ್ನು ಅತಿಯಾಗಿ ಹಚ್ಚಿಕೊಂಡಿದೆ. ಊಟದ ಹೊತ್ತಿನಲ್ಲಿ ತೆರೆದುಕೊಳ್ಳುವ ಅದರ ತುಂಟಲೋಕ ಹೇಗಿದೆ ನೋಡುವಿರಾ?
ಮದುವೆ ಚಪ್ಪರ ಹಾಕಿದಂತೆ, ಮೋಡವು ಆಕಾಶಕ್ಕೆ ಮರೆಯಾಗಿ ನಿಂತಾಗಲೆಲ್ಲ, ಒಂದು ಚಿಂತೆ ನನ್ನನ್ನು ತಬ್ಬುತ್ತದೆ. ಜೋರು ಮಳೆ ಹೊಯ್ದು, ಎಲ್ಲೋ ಏನೋ ಕೊಚೊRಂಡ್ ಹೋಗುತ್ತೆ, ಏನೋ ಅವಾಂತರ ಆಗುತ್ತೆ ಎನ್ನುವ ಕಳವಳಗಳು ನನ್ನವಲ್ಲ. ಟೆರೇಸಿನ ಮೇಲೆ ಹಾಕಿದ ಬಟ್ಟೆ, ಮಳೆ-ಗಾಳಿಗೆ ಹಾರಿ ಪಕ್ಕದ್ಮನೆ ಕಾಂಪೌಂಡೊಳಗೆ ಬೀಳುತ್ತೆ ಎನ್ನುವ ಚಿಂತೆಯೂ ಇಲ್ಲ. ಬಿಳುಪಾದ ಕಾಲಿಗೆ ಕೊಚ್ಚೆ ಮೆತ್ಕೊಂಡ್ರೆ ಕತೆಯೇನಪ್ಪಾ ಎಂಬ ಆತಂಕವೂ ಅಲ್ಲ. “ಬಾ ಮಳೆಯೇ ಬಾ…’ ಎನ್ನುವ ಹಾಡಿಗೆ ತಲೆದೂಗುವ ನನಗೆ, ಮಳೆ ಅಂಥ ಭಯವನ್ನೇ ಹುಟ್ಟಿಸಿಲ್ಲ. ನಾನು ಹೆದರಿ, ಕಂಪಿಸುವುದು, ನನ್ನ ಮೂರು ವರುಷದ ಮಗನನ್ನು ನೋಡಿ. ಮೋಡ ಕವಿದು, ಚಂದಿರ ಕಾಣದ ದಿನ, ಅವನು ಆಚರಿಸುವ ಏಕಾದಶಿ ಇದೆಯಲ್ಲ, ಅದು ನಮ್ಮ ಕ್ಯಾಲೆಂಡರಿನಲ್ಲಿ ತಿಥಿ-ನಕ್ಷತ್ರ ನೋಡಿ ಬರುವುದೇ ಇಲ್ಲ. ಮೋಡ ಕವಿದ ದಿನಗಳಲ್ಲಿ ಆತ ಒಂದು ತುತ್ತನ್ನೂ ಬಾಯಿಗಿಳಿಸದೇ, ಕೃಷ್ಣನಂತೆ ಅವನು ಓಡಿಹೋದಾಗ, ಯಶೋಧೆಯಂತೆ ಪೇಚಿಗೆ ಸಿಲುಕುತ್ತೇನೆ.
ಮೊನ್ನೆ ಅದೇನೋ ಫನಿ ಚಂಡಮಾರುತ ಬಂದಾಗಲೂ ಅವನು ಸೀರಿಯಸ್ಸಾಗಿಬಿಟ್ಟಿದ್ದ. ಆ ಮೂರು ದಿನ ನನ್ನ ಸಂಕಟ ಅದೇನು ಕೇಳ್ತೀರಾ? “ಮಮ್ಮಿ, ಚಂದಮಾಮ ಯಾಕೆ ಕಾಣಿಸ್ತಿಲ್ಲ?’ ಅಂತ ಮೊದಲ ದಿನವೇ ತಗಾದೆ ತೆಗೆದಿದ್ದ. “ಇಲ್ಲಾ ಪುಟ್ಟಾ, ಚಂದಮಾಮ ಬರಿ¤ದ್ದ. ಪಾಪ, ಬಸ್ಸು ತಪ್ಪಿ ಹೋಯ್ತಂತೆ… ನಾಳೆ ಬರೀ¤ನಿ ಅಂತ ಪುಟ್ಟನಿಗೆ ಹೇಳಿ, ನನ್ನ ಕಾಯೋದ್ ಬೇಡ, ಬೇಗ ಊಟ ಮಾಡ್ಲಿ ಅಂತ ಫೋನು ಮಾಡಿದ್ದ’ ಎಂದು ಹೇಳಿ, ಪುಸಲಾಯಿಸಿದ್ದೆ. ಐಡಿಯಾ ವಕೌìಟ್ ಆಗಿತ್ತು. ಮರುದಿನ ಮತ್ತೆ ಅದೇ ಪ್ರಶ್ನೆಗೆ, ನನ್ನ ಅದೇ ಉತ್ತರಕ್ಕೆ ಅಂವ ತೃಪ್ತನಾಗಲಿಲ್ಲ. ಸಿಟ್ಟಿನಿಂದಲೇ, ಏಕಾದಶಿ ಆಚರಿಸಿದ್ದ.
ಅದೇ ದಿನ ರಾತ್ರಿ, ಅವನು ನಡುನಿದ್ದೆಯಲ್ಲೇ ಎದ್ದು, ನಿದ್ದೆಗಣ್ಣಿನಲ್ಲಿ ಬೀರು, ವಾರ್ಡ್‌ರೋಬ್‌ಗಳನ್ನೆಲ್ಲ ತಡಕಾಡಿದ. ಆ ಸದ್ದಿಗೆ ಎಚ್ಚರವಾಗಿ, “ಏನೋ… ಈ ರಾತ್ರೀಲಿ ನಿಂಗೇನೋ ಬಂತು…?’ ಅಂತ ಗದರಿದ್ದೆ. “ತಾಳು, ನಿನ್ನ ಪೊಲೀಸ್ರಿಗೆ ಹಿಡ್ಕೊಡ್ತೀನಿ’ ಅಂದ. ಇದ್ಯಾಕೆ ಹಿಂಗಾಡ್ತಿದೆ, ಅದೂ ಈ ಹೊತ್ತಲ್ಲಿ ಅಂತ ಭಯವಾಗಿ, ಗೊರಕೆ ಹೊಡೆಯುತ್ತಿದ್ದ ಯಜಮಾನರನ್ನೂ ತಟ್ಟಿ ಎಬ್ಬಿಸಿದ್ದೆ. ಅವನಿಗೆ ಸಮಾಧಾನ ಮಾಡಿ ಕೇಳಿದರು. ನಿದ್ದೆಗಣ್ಣಲ್ಲೇ ಏನೋ ಗುನುಗುಟ್ಟಿದ. ಆಮೇಲೆ ಗೊತ್ತಾಯ್ತು. ಅವನಿಗೆ ಚಂದಮಾಮನ ಕನಸು ಬಿದ್ದಿತ್ತಂತೆ. ಅಮ್ಮ, ಚಂದಮಾಮನನ್ನು ಕದ್ದು, ಬಚ್ಚಿಟ್ಟಿದ್ದಾಳೆ ಅನ್ನೋ ಅನುಮಾನ ಬಂದು, ಹಿಂಗೆಲ್ಲ ಆಡಿದ್ದ.
ಸಾಮಾನ್ಯವಾಗಿ ಗಂಡು ಮಕ್ಕಳಿಗೆ ಭಾವನೆಗಳು ಕಡಿಮೆ. ಅವು ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳುವುದಿಲ್ಲ. ಬೈಕು, ಕಾರಿನಂಥ ಆಟಿಕೆಗಳಿದ್ದರೆ ಯಾವ ಚಂದ್ರನೂ ಅವಕ್ಕೆ ಬೇಡ. ಓದುವ ಹೊತ್ತಿನಲ್ಲಿ ಚಂದಿರ, ಕಲ್ಲು- ಮಣ್ಣಿನ ಉಂಡೆಯಾಗಿ, ಮದುವೆಯಾದ ಹೊಸತರಲ್ಲಿ ಹೆಂಡತಿಯ ಮುದ್ದುಮುಖ ಪೂರ್ಣಚಂದ್ರನಂತೆ ಕಾಣಿಸುವುದು ಬಿಟ್ಟರೆ, ಮಿಕ್ಕಂತೆ ಆ ಶಶಿಯ ಮೇಲೆ ಅವಕ್ಕೆ ಅಂಥ ಸೆಂಟಿಮೆಂಟೇನೂ ಉಕ್ಕುವುದಿಲ್ಲ. ಮುಂದೆ ಅಪ್ಪಿತಪ್ಪಿ ಕವಿಯಾಗಿಬಿಟ್ಟರೆ, ನಾಲ್ಕು ಕವನ ಗೀಚುತ್ತಾನಷ್ಟೇ. ದೇವರನ್ನು, ಜಾತಕವನ್ನು ನಂಬುವವನಾದರೆ, ಚಂದ್ರ ಯಾವ ಮನೆಗೆ ಜಿಗಿದ ಎಂಬುದನ್ನು ಕಿವಿಗೊಟ್ಟು ಕೇಳುತ್ತಾರಷ್ಟೇ. ಆದರೆ, ನನ್ನ ಮಗನಿಗೆ ಈ ಚಂದ್ರ ಯಾಕೋ ಬೆನ್ನು ಹಿಡಿದ ಬೇತಾಳನಂತೆಯೇ ಕಾಡುತ್ತಿದ್ದಾನಲ್ಲ ಅನ್ನೋದೇ ಒಂದು ಚಿಂತೆಯಾಗಿದೆ.
ಟೆರೇಸಿಗೆ ಹೋಗಿ, ಚಂದ್ರನಿಗೆ ಅವನು ತನ್ನ ರೈಮ್ಸ್ ಅನ್ನು ಒಪ್ಪಿಸುವಾಗ, ನಾನು ಥರ್ಮಾಮೀಟರ್ ಹಿಡಿದು, ಅವನ ಟೆಂಪರೇಚರ್ ಚೆಕ್ ಮಾಡಿದ್ದೂ ಇದೆ.
ಮೊನ್ನೆ ಇದ್ದಕ್ಕಿದ್ದಂತೆ ಆಕಾಶ ಗುಡುಗುತ್ತಿತ್ತು. “ಕೆಳಗೆ ಬಾರೋ ಪುಟ್ಟಾ, ಗುಡುಗುಡು ಗುಮ್ಮ ಬಂತು. ಚಂದಮಾಮ ಇವತ್ ಬರೋಲ್ಲ’ ಅಂತ ತಟ್ಟೆಯಲ್ಲಿ ಮ್ಯಾಗಿ ಇಟ್ಕೊಂಡು ಕರೆದೆ. “ಇಲ್ಲ ನಾ ಬರೋಲ್ಲ… ಆಕಾಶ ಫೋಟೋ ಹೊಡೀತಿದೆ. ಚಂದಮಾಮನಿಗೆ ಹೇಳಿದ್ದೀನಿ, ಒಟ್ಟಿಗೆ ಫೋಟೋ ಹೊಡೆಸ್ಕೊಳ್ಳೋಣ ಅಂತ’ ಅಂದ. ಅದನ್ನು ಕೇಳಿ, ನನ್ನ ಹೊಟ್ಟೆಯಲ್ಲೇ ಗುಡುಗಲು ಶುರುವಾಗಿತ್ತು.
ಹುಣ್ಣಿಮೆ ದಿನ ಹುಟ್ಟಿದ ಮಗನಿಗೆ, ಚಂದ್ರ ಬೇರೆ ರೀತಿಯ ಪ್ರಭಾವ ಬೀರಿದ್ದಾನಾ ಅಂತ ಒಬ್ಬರು ಜ್ಯೋತಿಷಿ ಬಳಿಯೂ ಕೇಳಿಸಿದೆವು. ಅಂಥದ್ದೇನೂ ಇಲ್ಲವೆಂದು ಕೇಳಿತಿಳಿದಾಗ, ನಿಟ್ಟುಸಿರುಬಿಟ್ಟೆವು. ಈ ನನ್ನ ಮಗ ಮುಂದೆ ಏನಾಗಬಹುದು ಅಂತ ಕೇಳಬಾರದ ಪ್ರಶ್ನೆಯನ್ನೇ ಕೇಳಿದೆವು. ಅವರು, “ನಾಲ್ಕನೇ ಮನೇಲಿ ಚಂದ್ರ ಇರೋದ್ರಿಂದ…’ ಅಂತ ಮುಂದುವರಿಸಿದ್ದನ್ನು ಕೇಳಿ, ಮತ್ತೆ ನನ್ನ ಮನೆಯವರ ಮುಖ ನೋಡಿದ್ದೆ.
ಇನ್ನೇನು ಮಳೆಗಾಲ ಶುರುವಾಗುತಿದೆ. ನನ್ನ ಮಗನನ್ನು ಹೇಗೆ ಸಂಭಾಳಿಸಲಿ ಎನ್ನುವ ಚಿಂತೆ ಕಾಡುತ್ತಿದೆ. ಯೂಟ್ಯೂಬ್ ಹಾಕಿಕೊಟ್ಟರೆ, ಮೊಬೈಲ್ ಹುಚ್ಚು ಹಿಡಿಯುತ್ತೆ ಎನ್ನುವ ತಲೆಬಿಸಿ. ಪ್ರತಿದಿನ ರಾತ್ರಿ ಚಂದ್ರ ನಕ್ಕರಷ್ಟೇ ನನ್ನ ಗಮನ ಹೊಟ್ಟೆ ತಂಪು. ಜೋರು ಮಳೆಯಲ್ಲಿ ಆ ಚಂದ್ರನನ್ನು ಹುಡುಕುತ್ತಾ, ಎಲ್ಲಿಗೆ ಓಡಿಹೋಗಲಿ? ಚಂದ್ರಲೋಕ ಬಿಟ್ಟು ಬೇರೆ ಜಾಗವಿದ್ದರೆ, ಹೇಳಿ…
– ಚಾಂದನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.