ಆಟೋ ಡ್ರೈವರ್‌ನ ಮಗಳು ಪ್ರಶಸ್ತಿ ಗೆದ್ದಳು
ಮನೆ ಬಿಟ್ಟು ಓಡಿ ಬಂದವಳು ಮಿಸ್ ಇಂಡಿಯಾ ರನ್ನರ್ ಅಪ್!
Team Udayavani, Feb 17, 2021, 7:50 PM IST
ಕನಸು ಕಾಣುವುದಕ್ಕೂ ಯೋಗ್ಯತೆ ಇರಬೇಕೆ? ಎಂಬ ಪ್ರಶ್ನೆ ಬಂದರೆ, ಖಂಡಿತ ಇಲ್ಲ ಎನ್ನುವ ಉತ್ತರ ನಮಗೆ ಮಾನ್ಯಾ ಸಿಂಗ್ ರನ್ನು ನೋಡಿದಾಗ ತಿಳಿಯುತ್ತದೆ. ಯಾರು ಈ ಮಾನ್ಯಾ ಸಿಂಗ್? ಏನು ಇವರ ಕಥೆ ಎಂದು ಹುಡುಕುತ್ತ ಹೋದರೆ, ನಮಗೆ ಸಿಗುವುದು ಬರೀ ಸಾಧಾರಣ ಕಥೆಯಲ್ಲ, ಬದಲಾಗಿ ಪರಿಶ್ರಮದಿಂದ ಅಸಾಮಾನ್ಯ ಸಾಧನೆ ಮಾಡಿರುವ ಹೆಣ್ಣುಮಗಳೊಬ್ಬಳ ಯಶೋಗಾಥೆ.
“ಒಬ್ಬ ಆಟೋ ಡ್ರೈವರ್ ಮಗಳು ನೀನು. ನಮ್ಮ ಯೋಗ್ಯತೆಗೆ ತಕ್ಕಂತೆ ಕನಸು ಕಾಣಲು ಕಲಿ. ಈ ಫ್ಯಾಷನ್ ಶೋ, ಮಾಡೆಲಿಂಗ್, ಮಿಸ್ ಇಂಡಿಯಾ ಸ್ಪರ್ಧೆ…ಇವೆಲ್ಲಾ ನಮಗೆ ಆಗಿ ಬರುವಂಥದ್ದಲ್ಲ ಮಗಳೇ, ಎಂದು ತಾಯಿ ಹೇಳಿದಾಗ- “ಅಮ್ಮಾ, ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲಬೇಕು ಅನ್ನುವುದೇ ನನ್ನ ಕನಸು, ಇವತ್ತಲ್ಲ ನಾಳೆ ನಾನು ಇದನ್ನು ಸಾಧಿಸಿಯೇ ತೀರುತ್ತೇನೆ’ ಎಂದಿದ್ದಳಂತೆ ಮಾನ್ಯಾ. ಆಟೋ ಡ್ರೈವರ್‌ನ ಈ ಮಗಳು. 2020ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 2ನೇ ರನ್ನರ್ ಅಪ್ ಆಗಿ ಆಯ್ಕೆಯಾಗುವ ಮೂಲಕ ಕಡೆಗೂ ಅಂದುಕೊಂಡಿದ್ದನ್ನು ಸಾಧಿಸಿಬಿಟ್ಟಳು!
ಯೋಗ್ಯತೆಗೆ ತಕ್ಕಂತೆ ಕನಸು ಕಾಣು!: ಮಾನ್ಯಾ ಸಿಂಗ್‌ಳ ಪೋಷಕರು ಉತ್ತರ ಪ್ರದೇಶ ರಾಜ್ಯದ ಒಂದು ಹಳ್ಳಿಯವರು. ಆಟೋ ಡ್ರೈವರ್ ಆಗಿದ್ದ ಮಾನ್ಯಾಳ ತಂದೆಗೆ ಒಳ್ಳೆಯ ಸಂಪಾದನೆ ಇರಲಿಲ್ಲ. ಪರಿಣಾಮ, ಈ ಕುಟುಂಬಕ್ಕೆ ಮೂರು ಹೊತ್ತಿನ ಊಟಕ್ಕೂ ಕಷ್ಟವಿತ್ತು. ಹೀಗಾಗಿ ಪಿಜ್ಜಾ ಡೆಲಿವೆರಿ ಕೇಂದ್ರದಲ್ಲಿ ಕೆಲಸ ಮಾಡುತ್ತ, ಹೋಟೆಲ್‌ನಲ್ಲಿ ಪಾತ್ರೆ ತೊಳೆದು ನಾಲ್ಕು ಕಾಸು ಸಂಪಾದಿಸುವುದು ಮಾನ್ಯಾಗೆ ಬಾಲ್ಯದಲ್ಲಿಯೇ ಅಭ್ಯಾಸವಾಯಿತು. ಎಷ್ಟೋ ಬಾರಿ, 4 ಕಾಸು ಹೆಚ್ಚು ದುಡಿಯಬೇಕಾಗಿ ಬಂದು, ಶಾಲೆಗೆ ಹಾಜರಾಗಲೂ ಈಕೆಗೆ ಸಾಧ್ಯವಾಗಲಿಲ್ಲ.
ಆದರೆ ಪರೀಕ್ಷೆಗೆ ತಪ್ಪದೇ ಹಾಜರಾದ ಈಕೆ, ಎಲ್ಲಾ ತರಗತಿಗಳಲ್ಲೂ ಶೇ. 80ಕ್ಕೂ ಹೆಚ್ಚು ಅಂಕ ಪಡೆದಳು. ಹೆಚ್ಚು ಓದಿದರೆ ಏನನ್ನಾದರೂ ಸಾಧಿಸಬಹುದು ಎಂಬುದು ಮಾನ್ಯಾಗೆ ಅರ್ಥವಾಗಿತ್ತು. ಫ್ಯಾಷನ್ ಶೋ ಹಾಗೂ ಮಾಡೆಲಿಂಗ್‌ನಿಂದ ಹೆಚ್ಚು ಹಣ ಸಂಪಾದಿಸಬಹುದು ಎಂದೂ ತಿಳಿದಿತ್ತು. ಯಾವುದೇ ಔಪಚಾರಿಕ ತರಬೇತಿ ಇಲ್ಲದಿದ್ದರೂ ಸ್ವಂತ ಪರಿಶ್ರಮದಿಂದಲೇ ಈಕೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದಳು. ಆಗಲೇ ಅಮ್ಮ ಹೇಳಿದ್ದು: “ನಾವು ಬಡವರು. ನಮ್ಮ ಯೋಗ್ಯತೆಗೆ ತಕ್ಕಂಥ ಕನಸುಗಳನ್ನು ಮಾತ್ರ ಕಾಣು ಮಗಳೇ…’
ಕಾಲ್ ಸೆಂಟರ್ ಸೇರಿ ಇಂಗ್ಲಿಷ್ ಕಲಿತೆ! :
ತಮ್ಮ ಮಿಸ್ ಇಂಡಿಯಾ ಪಯಣದ ಬಗ್ಗೆ ಮಾನ್ಯಾ ಹೀಗೆನ್ನುತ್ತಾರೆ: 10ನೇ ತರಗತಿ ಪರೀಕ್ಷೆ ನಂತರ, ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ತರ ಪ್ರದೇಶದಿಂದ ಮುಂಬೈಗೆ ಮನೆ ಬಿಟ್ಟು ಓಡಿ ಬಂದೆ. 2 ದಿನದ ನಂತರ ತಂದೆಗೆ ಫೋನ್ ಮಾಡಿ, ನಾನು ಇಲ್ಲಿಗೆ ಬಂದಿರುವ ವಿಷಯ, ಮನೆಬಿಟ್ಟು ಬಂದಿದ್ದರ ಹಿಂದಿನ ಕಾರಣ ತಿಳಿಸಿದೆ.
ಅಪ್ಪ ಸಿಟ್ಟಾಗಲಿಲ್ಲ. “ಆಗಿದ್ದು ಆಗಿ ಹೋಗಿದೆ. ಹೆದರಬೇಡ, ಆರಾಮಾಗಿ ಇರು. ಇಷ್ಟರಲ್ಲೇ ನಾವೂ ಬರ್ತೇವೆ’ ಅಂದವರು. ಕುಟುಂಬ ಸಮೇತ ಬಂದೇ ಬಿಟ್ಟರು. ಮುಂಬೈನಲ್ಲೂ ಅಪ್ಪ ಆಟೋ ಡ್ರೈವರ್ ಆದರು. ನಾನು ಸಿಕ್ಕಿದ ಕೆಲಸ ಮಾಡುತ್ತ, ಕಾಲೇಜು ಕಲಿತೆ. ತಮ್ಮನ ಶಿಕ್ಷಣಕ್ಕೂ ಹಣ ಹೊಂದಿಸಿದೆ. ಜತೆಗೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಕನಸನ್ನೂ ಉಳಿಸಿಕೊಂಡಿದ್ದೆ. ಅದಕ್ಕೂ ಮೊದಲು ಆಪದ್ಧನ ರೂಪದಲ್ಲಿ ಒಂದಷ್ಟು ಹಣ ಕೂಡಿಸಲು ಯೋಚಿಸಿದೆ. ಹಣ ಉಳಿಸಲು ಎಷ್ಟೋ ದಿನಗಳನ್ನು ಅರೆ ಹೊಟ್ಟೆಯಲ್ಲಿ ಕಳೆದೆ. ಆಟೋಗೆ ಕೊಡುವ ದುಡ್ಡು ಉಳಿಸಲು, ಕಿಲೋಮೀಟರ್ ಗಟ್ಟಲೆ ನಡೆದೇ ದಾರಿ ಸವೆಸಿದೆ. ಈ ಮಧ್ಯೆ, ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕೆಂದರೆ, ಇಂಗ್ಲಿಷ್ ಮೇಲೆ ಹಿಡಿತವಿರಬೇಕು ಎಂದು ಗೊತ್ತಾಯಿತು. ಅದಕ್ಕಾಗಿ ಕಾಲ್ ಸೆಂಟರ್ ನಲ್ಲಿ ರಾತ್ರಿ ಪಾಳಿಯ ಕೆಲಸ ಮಾಡಿ, ಬೆಳಗ್ಗೆ ಕಾಲೇಜಿಗೆ ಹೋಗುತ್ತಿದ್ದೆ. ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದಾಗ, ಅಲ್ಲಿಗೆ ಬರುವ ಜನ, ಅವರು ಮಾತಾಡುತ್ತಿದ್ದ ರೀತಿ, ಹಾವ-ಭಾವಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವರಂತೆಯೇ ಮಾತನಾಡಲು ಪ್ರಯತ್ನಿಸುತ್ತಿದ್ದೆ.
ಬೆಳ್ಳಗಿದ್ದವರಿಗೆ ಮಾತ್ರ ಅಂದಿದ್ದರು!: “ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುವುದು ಮತ್ತು ಅಲ್ಲಿ ಗೆಲುವು ದಕ್ಕುವುದು ಬಿಳಿ ಬಣ್ಣದವರಿಗೆ ಮಾತ್ರ. “ನಿನ್ನದು ಕಂದು ಮೈ ಬಣ್ಣ. ನಿನಗೆ ಅಲ್ಲಿ ಪ್ರವೇಶ ಸಿಗುವುದೇ ಅನುಮಾನ’ ಎಂದು ಕೆಲವರು ಹೇಳಿದರು. ಅಂಥಮಾತುಗಳಿಗೆ ಕಿವಿಗೊಡದೆ, ನನ್ನ ಪ್ರಯತ್ನಮುಂದುವರಿಸಿದೆ. ಸ್ಪರ್ಧೆ ಕುರಿತಂತೆ ನನ್ನ ತಯಾರಿ,ಅಕಸ್ಮಾತ್ ಗೆದ್ದರೆ ಮತ್ತು ಸೋತು ಹೋದರೆ, ಅದೇಕಾರಣಕ್ಕೆ ನನ್ನ ಬದುಕಿನಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ಅಪ್ಪ, ಅಮ್ಮ ಮತ್ತು ತಮ್ಮನಿಗೆ ವಿವರಿಸಿ ಹೇಳಿದೆ. ಆ ಮೂಲಕ, ಅವರೂ ನನ್ನ ಸ್ಪರ್ಧೆಗೆ ಸಮ್ಮತಿ ಮತ್ತು ಪ್ರೋತ್ಸಾಹಕೊಡುವಂತೆ ಮಾಡುವಲ್ಲಿ ಯಶ ಕಂಡೆ. ಕಡೆಗೊಮ್ಮೆ ನನ್ನ ಕನಸಿನ ಆ ಸ್ಪರ್ಧೆ ಆರಂಭವಾಗಿಯೇಬಿಟ್ಟಿತು. ಕೊನೆಗೊಂದು ದಿನ 2020 ನೇ ಸಾಲಿನ ಮಿಸ್ ಇಂಡಿಯಾ ಸ್ಪರ್ಧೆಯ ರನ್ನರ್ ಅಪ್ ಕಿರೀಟ ನನ್ನ ಮುಡಿಯೇರಿತು. ಆ ಮೂಲಕ, ಯಾರು ಬೇಕಾದರೂ,ಯಾವ ಕನಸನ್ನಾದರೂ ಕಾಣಬಹುದು. ಪರಿಶ್ರಮವೊಂದಿದ್ದರೆ, ಯಶಸ್ಸು ಖಂಡಿತ ನಮ್ಮ ಕೈ ಹಿಡಿಯುತ್ತದೆ ಎಂಬ ಮಾತಿಗೆ ನನ್ನ ಬಾಳ ಕಥೆಯೇ ಸಾಕ್ಷಿಯಾಯಿತು’ ಅನ್ನುತ್ತಾಳೆ ಮಾನ್ಯಾ ಸಿಂಗ್.
–ರೋಹಿಣಿ ರಾಮ್ ಶಶಿಧರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.