ಅದಮ್ಯ ತಾನ್ ಅನಂತವಾಗಿ…
Team Udayavani, Jan 24, 2018, 3:09 PM IST
ಪತಿ ಪ್ರಭಾವಿ ರಾಜಕಾರಣಿ, ಎರಡನೇ ಅವಧಿಗೆ ಕೇಂದ್ರ ಸಚಿವರಾಗಿರುವವರು. ಆದರೆ ತೇಜಸ್ವಿನಿ ಅನಂತ್‌ಕುಮಾರ್ ಅವರು ಪತಿಯ ಪ್ರಭಾವವನ್ನೂ ಮೀರಿ ಸಾಧನೆ ಮಾಡಿರುವವರು. ರಾಜಕಾರಣದ ಹೊರತಾಗಿಯೂ ಹೇಗೆ ಸಮಾಜ ಸೇವೆ ಮಾಡಬಹುದು ಎಂಬುದಕ್ಕೆ ಇವರು ನಿದರ್ಶನ. ಇವರು 1997ರಲ್ಲಿ ಕಟ್ಟಿದ ಸಂಸ್ಥೆ “ಅದಮ್ಯ ಚೇತನ’ ಈಗ 2 ಲಕ್ಷ ಮಕ್ಕಳಿಗೆ ಉಚಿತವಾಗಿ ಬಿಸಿಯೂಟ ನೀಡುತ್ತಿದೆ. ಲಕ್ಷಾಂತರ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿ¤ದೆ. ಸಾವಿರಾರು ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಿದೆ. ಪರಿಸರ ಕುರಿತಾದ ಇವರ ಕಾಳಜಿ ಕೂಡ ಅನನ್ಯ. ಕೆಲಸಗಾರರು, ಶ್ರೀಮಂತರು ಎಂಬ ಬೇಧ ತೋರದೆ ಎಲ್ಲರನ್ನು ನಗುಮೊಗದಲ್ಲೇ ಮಾತನಾಡಿಸುವ ಸಹೃದಯಿ. ಇಷ್ಟೆಲ್ಲಾ ಉತ್ತಮ ಕೆಲಸಗಳು ಇವರಿಂದ ಆಗಿದ್ದರೂ “ನಾನು’ ಎಂಬ ಪದ ಇವರ ಬಾಯಿಂದ ಬರುವುದೇ ಇಲ್ಲ. “ನಾವು ಮಾಡಿದೆವು’ ಎಂದೇ ಇವರು ಹೇಳುವುದು.
ಬಡ ಮಕ್ಕಳಿಗೂ ಎಲ್ಲ ಸೌಲಭ್ಯ ದೊರಕಬೇಕು…
ನನ್ನ ಅತ್ತೆ ಗಿರಿಜಾ ಶಾಸ್ತ್ರಿ ಮಹಿಳೆಯರ ಸಬಕಲೀಕರಣಕ್ಕೆ ಶ್ರಮಿಸುತ್ತಿದ್ದವರು. ಅವರು ನಿಧನರಾದಾಗ ಅವರ ಸ್ಮರಣಾರ್ಥವಾಗಿ ಏನಾದರೂ ಮಾಡಬೇಕು ಎಂದು ಮಹಿಳೆಯರಿಗಾಗಿ ಹೊಲಿಗೆ ತರಗತಿಗಳನ್ನು. ಅವರಿಗೆ ನಾವೇ ಬಟ್ಟೆ ಕೊಟ್ಟು ಹೊಲಿಗೆ ಕಲಿಸಿದ್ದೆವು. ತರಬೇತಿ ಮುಗಿಯುವುದರೊಳಗೆ, ಅವರು ಹೊಲಿದಿದ್ದ ಒಂದು ರಾಶಿ ವಸ್ತ್ರಗಳಿದ್ದವು. ಇವುಗಳನ್ನು ಮಕ್ಕಳಿಗೆ ಹಂಚುವ ಸಲುವಾಗಿ ಸರ್ಕಾರಿ ಶಾಲೆಗಳನ್ನು ಹುಡುಕಿಕೊಂಡು ಹೋದೆವು. ಅಲ್ಲಿ ಹೋದಾಗ ನನ್ನ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯಗಳಿಗೂ, ಆ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯಗಳಿಗೂ ಇರುವ ವ್ಯತ್ಯಾಸ ನನ್ನನ್ನು ತೀವ್ರವಾಗಿ ಕಾಡಿತು. ಮಕ್ಕಳು ಬಡ ಕುಟುಂಬದವರಾಗಿರಲಿ ಅಥವಾ ಶ್ರೀಮಂತ ಕುಟುಂಬದವರಾಗಿರಲಿ ಅವರಿಗೆ ದೊರೆಯುವ ಅನ್ನ, ಆರೋಗ್ಯ, ಅಕ್ಷರದಲ್ಲಿ ಭೇದ ಇರಬಾರದು ಎಂಬ ಸದಾಶಯದಿಂದಲೇ ಮಕ್ಕಳಿಗೆ ಕ್ರಿಯಾತ್ಮಕ ಶಿಕ್ಷಣ ಯೋಜನೆ ರೂಪಿಸಿದೆವು.
ಎಂಜಿನಿಯರ್ ವೃತ್ತಿಯಲ್ಲೇ ಇದ್ದಿದ್ದರೆ “ಅದಮ್ಯ ಚೇತನ’ ಕನಸಾಗಿಯೇ ಉಳಿಯುತ್ತಿತ್ತು…
ನಾನು ಏರೊನಾಟಿಕಲ್ ಡೆವೆಲಪ್‌ಮೆಂಟ್ ಏಜನ್ಸಿಯಲ್ಲಿ ವಿಜ್ಞಾನಿಯಾಗಿದ್ದೆ. ಒಳ್ಳೆಯ ವೃತ್ತಿ, ಉತ್ತಮ ಸಂಬಳ ಇತ್ತು. ತಾಯಿಯಾಗಿ, ಮಹಿಳೆಯಾಗಿ, ಗೃಹಿಣಿಯಾಗಿ ವೃತ್ತಿ ಬಿಡುವ ಅನಿವಾರ್ಯತೆ ಹಲವಾರು ಮಹಿಳೆಯರಿಗೆ ಬರುತ್ತದೆ. ನನಗೂ ಅಂಥ ಅನಿವಾರ್ಯತೆ ಬಂದಿತು. ಅನಂತ್ ಕುಮಾರ್ ಅವರು ಸಂಸದರಾಗಿದ್ದರು. ಮನೆ ಕಡೆ ಜವಾಬ್ದಾರಿ ಹೆಚ್ಚಿತು. ಸಂತೋಷದಿಂದಲೇ ವೃತ್ತಿ ತೊರೆದೆ. ವೃತ್ತಿ ತೊರೆದಿದ್ದಕ್ಕೇ ಅದಮ್ಯ ಚೇತನ ಆರಂಭಿಸಿ, ಇಷ್ಟೊಂದು ಸಮಾಜಮುಖೀಯಾಗಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಸಾಧ್ಯವಾಗಿದ್ದು. ನಾನು ಎಂಜಿನಿಯರಿಂಗ್ ಆಗಿ ಏನೆಲ್ಲಾ ಕಲಿತಿದ್ದೆನೋ ಅದೆಲ್ಲವನ್ನೂ ಅದಮ್ಯ ಚೇತನದ ವಿವಿಧ ಚಟುವಟಿಕೆಗಳಿಗೆ ಅನ್ವಯಿಸಿದ್ದೇನೆ.
ಸಂಪಾದನೆಯೇ ಮುಖ್ಯ ಅನ್ನಿಸಲಿಲ್ಲ…
ನಾನು ಎಂಜಿನಿಯರಿಂಗ್‌ನಲ್ಲಿದ್ದಾಗ ಎಬಿವಿಪಿಗೆ ಸೇರಿದೆ. ಆಗಲೇ ನನಗೆ ಅನಂತ್‌ಕುಮಾರ್‌ರ ಪರಿಚಯವಾಗಿದ್ದು. ಡಿಗ್ರಿ ಮುಗಿಸಿದ ಬಳಿಕ ಧಾರವಾಡದ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾನು ಅಧ್ಯಾಪಕಿಯಾಗಿದ್ದೆ. ಅನಂತ್ ಕುಮಾರ್ ಆಗಷ್ಟೇ ಬಿಜೆಪಿ ಸೇರಿ ರಾಜ್ಯ ಕಾರ್ಯದರ್ಶಿಯಾಗಿ ಹುಬ್ಬಳ್ಳಿಯಲ್ಲಿದ್ದರು. ಆಗಲೂ ಅವರು ಬಹಳ ಚುರುಕು ಮತ್ತು ಡೈನಾಮಿಕ್ ಆಗಿದ್ದರು. ಆಗಲೇ ನಾವು ಮದುವೆಯಾಗಲು ನಿರ್ಧರಿಸಿದ್ದು. ಅವರಿಗೆ ಅಗ ಸಂಪಾದನೆ ಇರಲಿಲ್ಲ. “ನಾನು ಕೆಲಸ ಮಾಡಿ ಮನೆ ನಿರ್ವಹಿಸುವುದು ಮತ್ತು ಅವರು ರಾಜಕೀಯದಲ್ಲಿ ಮುಂದುವರಿಯುವುದು’ ಎಂಬ ಒಪ್ಪಂದ ಮಾಡಿಕೊಂಡಿದ್ದೆವು. ನಮ್ಮಿಬ್ಬರದ್ದೂ ಒಂದೇ ರೀತಿಯ ಆಲೋಚನೆಗಳಿದ್ದರಿಂದ ನಮಗೆ ಸಂಪಾದನೆ ದೊಡ್ಡ ವಿಷಯ ಅಂತನ್ನಿಸಲಿಲ್ಲ. ಆದರೆ, ನಮ್ಮ ಮನೆಯಲ್ಲಿ ಅದೇ ಕಾರಣಕ್ಕೇ ಮದುವೆಯನ್ನು ವಿರೋಧಿಸಿದ್ದರು. ಬಳಿಕ ಎಲ್ಲರನ್ನೂ ಒಪ್ಪಿಸಿ ಮದುವೆಯಾದೆವು. ಅವರು ಎಂಪಿ ಆದಾಗಲೇ ಅವರು ಮೊದಲ ಬಾರಿಗೆ ಬ್ಯಾಂಕ್ ಖಾತೆ ತೆರೆದಿದ್ದು.
ಸಿಂಪಲ್ ಆಗಿರಿ, ಅರ್ಧ ಟೆನ್ಸ್ನ್ ಕಡಿಮೆಯಾಗುತ್ತದೆ!
ನನ್ನ ಕುಟುಂಬದಲ್ಲಿ ಎಲ್ಲರೂ ಸರಳವಾಗಿರುವುದನ್ನೇ ಇಷ್ಟಪಡುವವರು. ನನಗೂ ಅದೇ ಅಭ್ಯಾಸವಾಗಿದೆ. ಎಲ್ಲಿಯಾದರೂ ಪ್ರಯಾಣ ಮಾಡುವುದಿದ್ದರೆ 5 ನಿಮಿಷದಲ್ಲಿ ಲಗೇಜು ರೆಡಿ ಮಾಡಿಕೊಳೆ¤àನೆ. ಇದೇ ಸೀರೆ ಬೇಕು. ಇದಕ್ಕೆ ಇಂಥದ್ದೇ ಮ್ಯಾಚಿಂಗ್ ಚಪ್ಪಲಿ, ಬಳೆ ಬೇಕು ಅಂತೆಲ್ಲಾ ತೆಲೆಕೆಡಿಸಿಕೊಳ್ಳುವುದಿಲ್ಲ. ಯಾವುದಾದರೂ ಸಮಾರಂಭಗಳಿಗೆ ಹೋಗುವಾಗ ಸೇರೆ ಮಾತ್ರ ಬದಲಾಯಿಸುತ್ತೇನೆ. ಆಭರಣ ಬದಲಿಸುವುದು, ಮೇಕಪ್ ಮಾಡಿಕೊಳ್ಳುವುದನ್ನಲ್ಲಾ ಮಾಡುವುದೇ ಇಲ್ಲ. ಇದರಿಂದ ತುಂಬಾ ಸಮಯ ಉಳಿಯುತ್ತದೆ. ನನ್ನ ಮಕ್ಕಳೂ ಸರಳವಾಗಿರುವುದನ್ನೇ ಇಷ್ಟಪಡುತ್ತಾರೆ. ಅಗತ್ಯ ಇದ್ದಾಗ ಮಾತ್ರ ಶಾಪಿಂಗ್ ಮಾಡುತ್ತೇವೆ.
ಸಂಸದನ ಪತ್ನಿ ರೀತಿ ಯಾವತ್ತೂ ನಡೆದುಕೊಂಡಿಲ್ಲ…
ನಾನು ಒಂದೇ ಬಾರಿ ಎತ್ತರಕ್ಕೆ ಏರಿದವಳಲ್ಲ. ನನ್ನದು ಹಂತ ಹಂತದ ಬೆಳವಣಿಗೆ. 1997ರಲ್ಲಿ ಅದಮ್ಯ ಚೇತನ ಆರಂಭಿಸಿ, ಅಧ್ಯಕ್ಷೆಯಾದಾಗ ನನಗೆ 32 ವರ್ಷ ವಯಸ್ಸು. ಅಧ್ಯಕ್ಷೆಯಾಗಿ ಹೇಗೆ ಸಭೆ ನಡೆಸಬೇಕು. ಕಾರ್ಯಕರ್ತರನ್ನು ಹೇಗೆ ಕೆಲಸದಲ್ಲಿ ತೊಡಗಿಸಬೇಕು ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ನಾನು ಸಂಸದನ ಹೆಂಡತಿ ಎಂಬುದನ್ನು ಪಕ್ಕಕ್ಕಿಟ್ಟು ಸಂಸ್ಥೆಯ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಾ ಬಂದೆ. ಅನಂತ್ ಕುಮಾರ್ 98ರಲ್ಲಿ ಕೇಂದ್ರ ಸಚಿವರಾಗಿದ್ದರು. ಆಗಲೂ ನನಗೆ ಯಾವತ್ತೂ ನಾನು ಸಚಿವರ ಪತ್ನಿ ಅಂತ ಅನ್ನಿಸುತ್ತಲೇ ಇರಲಿಲ್ಲ. ಬಹಳ ಸರಳವಾಗಿಯೇ ಎಲ್ಲರನ್ನೂ ಎದುರುಗೊಳ್ಳುತ್ತಿದ್ದೆ. ನಾನು ಎದುರೇ ಇದ್ದರೂ, ಬಂದವರು ಸಚಿವರ ಪತ್ನಿ ಎಲ್ಲಿ ಅಂತ ಹುಡುಕಾಡುತ್ತಿದ್ದರು. ನನ್ನನ್ನು ನೋಡಿ ಇವರೇನಾ? ಅಂತ ಆಶ್ಚರ್ಯಪಡುತ್ತಿದ್ದರು.
ರಾಜಕಾರಣಿಯ ಪತ್ನಿ ಆಗಿದ್ದರಿಂದ ಅನುಕೂಲವೇ ಹೆಚ್ಚಾಗಿದೆ…
ಪ್ರಭಾವಿ ರಾಜಕಾರಣಿ ಪತ್ನಿಯಾಗಿರುವುದರಿಂದ ನನಗೆ ಜನರನ್ನು ತಲುಪುವುದು ಸುಲಭ. ಸಾಮಾನ್ಯರಿಗೆ ದೊರಕುವ ಬೆಂಬಲಕ್ಕಿಂತ ನನಗೆ ಹಚ್ಚೇ ಬೆಂಬಲ ದೊರಕುತ್ತದೆ. ಅದಲ್ಲದೇ ಅದಮ್ಯ ಚೇತನಕ್ಕೆ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಆರ್‌ಎಸ್‌ಎಸ್ ಕಾರ್ಯಕರ್ತರೂ ಸಹಕರಿಸುತ್ತಾರೆ. ನಾನು ಅನಂತ ಕುಮಾರ್ ಅವರ ಪತ್ನಿ ಆಗಿರುವುದರಂದಲೇ ಇವರ ಸಹಕಾರ ಸಿಗುವುದು. ಆದರೆ ರಾಜಕಾರಣಿ ಪತ್ನಿಯಾಗಿ ಸದಾ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಲೋಪಗಳಾದರೂ ಅದನ್ನೇ ದೊಡ್ಡದು ಮಾಡಲು ಕಾದುಕೊಂಡಿರುವವರೂ ನಮ್ಮ ಸುತ್ತ ಇರುತ್ತಾರೆ.
ನಮ್ಮ ಮನೆಯಲ್ಲೂ ಡಸ್ಟ್‌ಬಿನ್ ಇಲ್ಲ…
ಮನೆ ಕಸವನ್ನು ನಾನು ಅದಮ್ಯ ಚೇತನಕ್ಕೆ ತಂದು ಮರುಬಳಕೆ ಮಾಡಬಹುದು, ಆದರೆ ನಾನು ಹಾಗೆ ಮಾಡುವುದಿಲ್ಲ. ಮನೆಯ ತಾರಸಿ ಮೇಲೆ ಕೈತೋಟವಿದೆ. ಅದಕ್ಕೆ ಗೊಬ್ಬರವಾಗಿ ಬಳಸುತ್ತೇನೆ. ಗಾರ್ಡನ್‌ಗೆ ಕುಂಡಗಳನ್ನು ಹೊರಗಿನಿಂದ ತಂದಿಲ್ಲ. ಬೇಡದ ಬಕೆಟ್, ಡಬ್ಬಿಗಳೇ ಇಲ್ಲಿ ಕುಂಡಗಳಾಗಿವೆ. ಪರಿಸರ ಕಾಪಾಡಲು ಹೇಳಿದರೆ ಸಾಲದು. ಮೊದಲು ನಾವು ಅದನ್ನು ಮಾಡಿ ತೋರಿಸಬೇಕು.
ಮೊದಲ ಬಾರಿಗೆ ಬೆಂಚ್, ಶಾಲೆ ಗಂಟೆ ನೋಡಿದ್ದೇ 7ನೇ ತರಗತಿಯಲ್ಲಿ!
ನನ್ನ ತಂದೆ ನೀರಾವರಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ನಾನು ಓದಿದ್ದೆಲ್ಲಾ ಹಳ್ಳಿ ಶಾಲೆಗಳಲ್ಲಿ, ಕನ್ನಡ ಮೀಡಿಯಂನಲ್ಲೇ. ಮೊದಲೆಲ್ಲಾ ನೆಲದ ಮೇಲೆಯೇ ಕುಳಿತು ಪಾಠ ಕೇಳಿದ್ದು. ನಾನು ಬೆಲ್, ಬೆಂಚು ನೋಡಿದ್ದೇ 7ನೇ ತರಗತಿಗೆ ಬಂದಾಗ. ಸರ್ಕಾರಿ ಶಾಲೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತವೆ. ಮಕ್ಕಳಿಗೆ ಎಷ್ಟು ಸ್ವಾತಂತ್ರ ಸಿಗುತ್ತದೋ ಅಷ್ಟು ಅವರು ಸೃಜನಾತ್ಮಕವಾದ ಅಭಿವೃದ್ಧಿ ಹೊಂದುತ್ತಾರೆ. ಆದರೆ ಈಗ ಏನಾಗುತ್ತಿದೆ ಎಂದರೆ ಮಕ್ಕಳಿಗೆ ರಿಸ್ಟ್ರಿಕ್ಷನ್ಸ್ ಜಾಸ್ತಿ. ಅವರಿಗೆ ಸ್ವಂತವಾಗಿ ಯೋಚಿಸಲು ಬಿಡುವುದೇ ಇಲ್ಲ. ಎಲ್ಲವನ್ನೂ ಸ್ಪೂನ್ ಫೀಡಿಂಗ್ ಮಾಡುತ್ತೇವೆ. ಅದಕ್ಕೇ ನಮ್ಮ “ನೇಚರ್ ಸೈನ್ಸ್ ಕಾರ್ಯಾಗಾರದಲ್ಲಿ ಪೋಷಕರಿಗೂ ಬರಲು ಹೇಳುತ್ತೇವೆ. ಅವರ ಮಕ್ಕಳು ಎಷ್ಟು ರಚನಾತ್ಮಕವಾಗಿ ಚಿಂತಿಸುತ್ತಾರೆ ಎಂದು ಅವರಿಗೆ ತಿಳಿಯಲು ಅನುವು ಮಾಡುತ್ತೇವೆ.
ಅದಮ್ಯ ಚೇತನದ ಹಿಂದಿನ ಕತೆ
ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ, ಆರೋಗ್ಯ, ಪರಿಸರ ಕಾಳಜಿ ಕ್ಷೇತ್ರಗಳಲ್ಲಿ 1997ರಿಂದ ಕೆಲಸ ಮಾಡುತ್ತಿರುವ ಸಂಸ್ಥೆ ಅದಮ್ಯ ಚೇತನ. ಇದರ ರೂವಾರಿ ಡಾ. ತೇಜಸ್ವಿನಿ ಅನಂತಕುಮಾರ್. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಕೇಂದ್ರ ಸಚಿವ ಅನಂತಕುಮಾರ್ ಅವರ ತಾಯಿಯ ಸ್ಮರಣಾರ್ಥವಾಗಿ ತೇಜಸ್ವಿನಿ ಹುಟ್ಟು ಹಾಕಿದ ಸಂಸ್ಥೆ ಇದು. ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುವುದರ ಮೂಲಕ ತನ್ನ ಚಟುವಟಿಕೆ ಆರಂಭಿಸಿದ ಈ ಸಂಸ್ಥೆ, ಅನ್ನಪೂರ್ಣ- ಮಧ್ಯಾಹ್ನದ ಬಿಸಿಯೂಟ ಯೋಜನೆ, ಸರ್ಕಾರಿ ಶಾಲೆ ಮಕ್ಕಳಿಗಾಗಿ ಆಟಪಾಠ, ಸಂಚಾರಿ ಶೈಕ್ಷಣಿಕ ಸಂಪನ್ಮೂಲ ಸೌಲಭ್ಯ, ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ “ಆರೋಗ್ಯ ಚೇತನ’. 1,000 ಶಾಲೆಗಳಿಗೆ ಗೋಡೆ ಪತ್ರಿಕೆ “ಚಿಣ್ಣರ ಚೇತನ’, ಗ್ರಾಮ ಅಭಿವೃದ್ಧಿ ಸುಭಿಕ್ಷ ಗ್ರಾಮ ಯೋಜನೆ’ ಕಾರ್ಯಕ್ರಮಗಳನ್ನು ಉಚಿತವಾಗಿ ಒದಗಿಸುತ್ತಿದೆ.
ಕಸ ರಹಿತ ಅಡುಗೆಮನೆ…
“ಅದಮ್ಯ ಚೇತನ’ದ ಅಡುಗೆ ಮನೆಯಲ್ಲಿ ದಿನವೊಂದಕ್ಕೆ 300 ಕೆ.ಜಿ ಕಸ ಉತ್ಪತ್ತಿಯಾಗುತ್ತಿತ್ತು. ಈಗದು “ಸೊನ್ನೆ’ಗೆ ಇಳಿದಿದೆ. ಇಲ್ಲಿ ಕಸವನ್ನು ಜೈವಿಕ ಇಂಧನವನ್ನಾಗಿ ಮರುಬಳಸಲಾಗುತ್ತದೆ. ಹಸಿ ಕಸದಿಂದ ಬಯೋಗ್ಯಾಸ್ ತಯಾರಿಸಿದರೆ, ಒಣ ಕಸವನ್ನು ಬಿಸಿಲಿನಲ್ಲಿ ಒಣಗಿಸಿ ನೇರವಾಗಿ ಬಾಯ್ಲರ್‌ಗಳಿಗೆ ಬಳಸುತ್ತಾರೆ. ಬಾಯ್ಲರ್‌ಗಳಿಗೆ ಕಪ್ಪು ಹೊಗೆಯನ್ನು ಹೊರಹಾಕದಂಥ ತಂತ್ರಜ್ಞಾನ ಅಳವಡಿಸಲಾಗಿದೆ. ಇದರ ಹೊರತಾಗಿ ಉಪಯೋಗಿಸಿ ಬಿಸಾಡಿದ ವಸ್ತುಗಳಲ್ಲಿ ತಯಾರಿಸಿದ ಬ್ರಿಕ್ವೆಟ್‌ಗಳನ್ನು ಬಳಸಲಾಗುತ್ತದೆ. ನಿರುಪಯುಕ್ತ ಪ್ಲಾಸ್ಟಿಕ್‌ಅನ್ನು ಮರುಬಳಕೆಗೆ ನೀಡಲಾಗುತ್ತದೆ. ಮೊದಲು ಇಲ್ಲಿ ದಿನಕ್ಕೆ 60 ಎಲ್‌ಪಿಜಿ ಸಿಲಿಂಡರ್‌ಗಳು ಬಳಕೆಯಾಗುತ್ತಿದ್ದವು. ಈಗ ಇಡೀ ಅಡುಗೆ ಮನೆಯಲ್ಲಿ ಒಂದೂ ಎಲ್‌ಪಿಜಿ ಸ್ಟವ್ ಇಲ್ಲ. ಇಲ್ಲಿ ಬಳಕೆಯಾದ ನೀರೂ ಕೂಡ ಮರುಬಳಕೆಯಾಗುತ್ತದೆ. ಅಕ್ಕಿ ತೊಳೆದ ನೀರನ್ನು ಹಸಿರು ಭಾನುವಾರ ಯೋಜನೆಯಲ್ಲಿ ನೆಟ್ಟಿರುವ ಗಿಡಗಳಿಗೆ ಬಳಸಲಾಗುತ್ತದೆ. ಅಷ್ಟಲ್ಲದೇ ಇದು ಸಂಪೂರ್ಣ ಸೌರಶಕ್ತಿ ಬಳಸಿಕೊಳ್ಳುವ ಸಂಸ್ಥೆ. ಬಳಸಿ ಉಳಿದ ಪ್ಯಾಂಪ್ಲೆಟ್‌ಗಳಲ್ಲಿ ಮಕ್ಕಳ ಆಟಿಕೆ ತಯಾರಾಗುತ್ತದೆ. ಒಟ್ಟಿನಲ್ಲಿ ಇಲ್ಲ ಕಸ ಎಂಬ ಪರಿಕಲ್ಪನೆಯೇ ಇಲ್ಲ.
ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.