ರಾಗಿಮುದ್ದೆ ಗಾತ್ರದ ಗುಲಾಬ್ ಜಾಮೂನ್!
ಅಮ್ಮನ ಬರ್ತ್‌ಡೇ ಸ್ಪೆಷಲ್...
Team Udayavani, Sep 18, 2019, 5:00 AM IST
ಸಂಜೆಯಾಯ್ತು. ಅಮ್ಮನ ಗೆಳತಿಯರೆಲ್ಲ ಬಂದಿದ್ದರು. ಅಕ್ಕ, ತಂಗಿಯಂದಿರು ಹಾಗೂ ಅಪ್ಪ ತಾವು ತಂದ ಗಿಫ್ಟ್ಗಳನ್ನು ಅಮ್ಮನಿಗೆ ಕೊಟ್ಟರು. ನಾನೇನು ಕೊಡುತ್ತಿದ್ದೇನೆ ಅಂತ ಅದುವರೆಗೂ ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ, ಎಲ್ಲರೂ ಕುತೂಹಲದಿಂದ ನನ್ನತ್ತ ನೋಡುತ್ತಿದ್ದರು. ನಾನು ರೂಮ್‌ಗೆ ಹೋಗಿ, ಮಂಚದ ಅಡಿಯಲ್ಲಿದ್ದ ದೊಡ್ಡ ಸ್ಟೀಲ್ ಡಬ್ಬವನ್ನು ತಂದು, ಅಮ್ಮನ ಎದುರು ಇಟ್ಟೆ.
ಅಮ್ಮನ ನಲವತ್ತೈದನೇ ಹುಟ್ಟುಹಬ್ಬಕ್ಕಾಗಿ ವಾರಕ್ಕೂ ಮೊದಲೇ ಭರ್ಜರಿ ತಯಾರಿ ನಡೆದಿತ್ತು. ಅಮ್ಮನಿಗೆ ನಾವು ಐವರು ಹೆಣ್ಣು ಮಕ್ಕಳು. ಐದು ಜನಕ್ಕೂ ಯಾವುದೇ ಕೊರತೆಯಾಗದಂತೆ ನೋಡಿಕೊಂಡ ಅಮ್ಮನಿಗೆ ಈ ಬಾರಿ ಏನಾದರೂ ಸ್ಪೆಷಲ್ ಗಿಫ್ಟ್ ಕೊಡಬೇಕೆಂದು ನಾವೆಲ್ಲಾ ನಿರ್ಧರಿಸಿದ್ದೆವು.
ಅಮ್ಮನಿಗೆ ಇಷ್ಟವಾದ ಬಣ್ಣ, ಸ್ಥಳ, ಗಿಫ್ಟ್ ಯಾವುದು ಅಂತೆಲ್ಲಾ ದೀರ್ಘ ಚರ್ಚೆಗಳು ನಡೆದ ನಂತರ, ಅಪ್ಪ ಕೆಂಪು ಬಣ್ಣದ ಸೀರೆ ಹಾಗೂ ಸ್ಮಾರ್ಟ್‌ಫೋನ್ ಕೊಡಿಸುತ್ತೇನೆಂದು ಹೇಳಿದರು. ಬರ್ತ್‌ಡೇ ದಿನ ಅಮ್ಮ ಮತ್ತು ಆಕೆಯ ಗೆಳತಿಯರಿಗಾಗಿ ವಿಶೇಷ ಭೋಜನ ತಯಾರಿಸುವ ಜವಾಬ್ದಾರಿಯನ್ನು ಅಕ್ಕ ಹೊತ್ತಳು. ಒಬ್ಬ ತಂಗಿ, ಅಮ್ಮನಿಗೆ ಇಷ್ಟವಾದ ಪುಸ್ತಕ ತೆಗೆದುಕೊಂಡರೆ, ಇನ್ನುಳಿದ ಇಬ್ಬರು ಫಿಲ್ಮ್ ಟಿಕೆಟ್ ಮತ್ತು ಅಣ್ಣಾವ್ರು ಹಾಡಿರುವ ಅಮ್ಮನ ಇಷ್ಟದ ಹಾಡುಗಳ ಡಿವಿಡಿ ನೀಡುವುದಾಗಿ ಹೇಳಿದರು. ಬಾಕಿ ಉಳಿದವಳು ನಾನೊಬ್ಬಳೇ! ಎಲ್ಲರಿಗಿಂತ ಡಿಫರೆಂಟ್ ಆಗಿ ಏನಾದ್ರೂ ಮಾಡಬೇಕಲ್ಲ… ಅಮ್ಮನಿಗೆ ಇಷ್ಟವಾಗಿದ್ದೆಲ್ಲವನ್ನು ಉಳಿದವರು ಕೊಡುತ್ತಿದ್ದಾರೆ. ಉಳಿದಿರುವುದೇನು ಅಂತ ಯೋಚಿಸಿದಾಗ, ಅಮ್ಮ ಎಂದೋ ಹೇಳಿದ ಮಾತು ನೆನಪಾಯಿತು. ಆಕೆಯ ಸ್ನೇಹಿತೆಯರ ಗುಂಪಿನಲ್ಲಿ ಯಾರದ್ದೇ ಹುಟ್ಟುಹಬ್ಬವಿದ್ದರೂ ಅವತ್ತು ಎಲ್ಲರೂ ಹೊಟ್ಟೆ ತುಂಬೋವರೆಗೂ ಗುಲಾಬ್ ಜಾಮೂನ್ ತಿನ್ನುತ್ತಿದ್ದರಂತೆ. ಯಾಕಂದ್ರೆ, ಎಲ್ಲ ಸ್ನೇಹಿತೆಯರಿಗೂ ಗುಲಾಬ್ ಜಾಮೂನ್ ಅಂದ್ರೆ ಪಂಚಪ್ರಾಣ ಅಂತ ಅಮ್ಮ ಅವತ್ತೂಮ್ಮೆ ಹೇಳಿದ್ದರು. ಸರಿ, ಅಮ್ಮನಿಗಷ್ಟೇ ಅಲ್ಲ, ಆಕೆಯ ಸ್ನೇಹಿತೆಯರಿಗೂ ಇಷ್ಟವಾಗುವಂತೆ ಗುಲಾಬ್ ಜಾಮೂನ್ ಮಾಡುತ್ತೇನೆ ಅಂತ ನಿರ್ಧರಿಸಿದೆ. ಆ ವಿಷಯವನ್ನು ಯಾರಿಗೂ ಹೇಳದೆ ಗುಟ್ಟಾಗಿ ಇಟ್ಟೆ!
ಕೋವಾ, ಮೈದಾಹಿಟ್ಟು, ಸಕ್ಕರೆ, ಏಲಕ್ಕಿ, ಬೇಕಿಂಗ್ ಸೋಡ ಅಂತ ಜಾಮೂನ್ ಮಾಡಲು ಬೇಕಾದ ಸಾಮಗ್ರಿಗಳನ್ನು ಲಿಸ್ಟ್ ಮಾಡಿ, ಎಲ್ಲವನ್ನೂ ಮುನ್ನಾದಿನವೇ ತೆಗೆದುಕೊಂಡು ಬಂದೆ. ಬರ್ಥ್ಡೇ ಪಾರ್ಟಿಗೂ ಕೆಲ ಸಮಯ ಮುಂಚೆ ಕೋವಾ, ಬೇಕಿಂಗ್ ಸೋಡಾ ಸೇರಿಸಿ ನಾದಿ, ರೆಡಿ ಮಾಡಿಟ್ಟುಕೊಂಡೆ. ಸಕ್ಕರೆ, ಏಲಕ್ಕಿ ಹಾಕಿ ಕುದಿಸಿ ಪಾಕ ತಯಾರಿಸಿದೆ. ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿ, ಎಣ್ಣೆಯಲ್ಲಿ ಕರಿದೆ. ಚಿಕ್ಕ ಉಂಡೆಯನ್ನೇ ಮಾಡಿದ್ದರೂ, ಎಣ್ಣೆಯಿಂದ ತೆಗೆಯುವಾಗ ಅವು ಲಿಂಬೆಹಣ್ಣಿನಷ್ಟು ದೊಡ್ಡವಾದವು. ಇರಲಿ, ಪರವಾಗಿಲ್ಲ. ದೊಡ್ಡದಾಗಿರುವುದೇ ಚೆಂದ ಎಂದು, ಉಂಡೆಗಳನ್ನು ಪಾಕದಲ್ಲಿ ಮುಳುಗಿಸಿ, ಪಾತ್ರೆಯ ಮುಚ್ಚಳ ಹಾಕಿದೆ. ಸಂಜೆ ಹೊತ್ತಿಗೆ ಉಂಡೆಗಳೆಲ್ಲ ಪಾಕ ಹೀರಿಕೊಂಡು, ಪಾರ್ಟಿಗೆ ಸಜ್ಜಾಗಿರುತ್ತವೆ. ಅಮ್ಮ ಎಲ್ಲರಿಗಿಂತ ನನ್ನ ಗಿಫ್ಟ್ ಅನ್ನೇ ಹೊಗಳುತ್ತಾಳೆ ಅಂತ ಹಿಗ್ಗುತ್ತಾ, ಪಾಕದ ಪಾತೆಯನ್ನು ಮಂಚದ ಕೆಳಗೆ ಮುಚ್ಚಿಟ್ಟೆ.
ಸಂಜೆಯಾಯ್ತು. ಅಮ್ಮನ ಗೆಳತಿಯರೆಲ್ಲ ಬಂದಿದ್ದರು. ಅಕ್ಕ,ತಂಗಿಯಂದಿರು ಹಾಗೂ ಅಪ್ಪ ತಾವು ತಂದ ಗಿಫ್ಟ್ಗಳನ್ನು ಅಮ್ಮನಿಗೆ ಕೊಟ್ಟರು. ನಾನೇನು ಕೊಡುತ್ತಿದ್ದೇನೆ ಅಂತ ಅದುವರೆಗೂ ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ, ಎಲ್ಲರೂ ಕುತೂಹಲದಿಂದ ನನ್ನತ್ತ ನೋಡುತ್ತಿದ್ದರು. ನಾನು ರೂಮ್‌ಗೆ ಹೋಗಿ, ಮಂಚದ ಅಡಿಯಲ್ಲಿದ್ದ ದೊಡ್ಡ ಸ್ಟೀಲ್ ಡಬ್ಬವನ್ನು ತಂದು, ಅಮ್ಮನ ಎದುರು ಇಟ್ಟೆ. ಕುತೂಹಲದಿಂದ ಡಬ್ಬಿ ತೆಗೆದು ನೋಡಿದ ಅಮ್ಮನ ಮುಖದಲ್ಲಿ ಆಶ್ಚರ್ಯ. ಉಳಿದವರೂ ಡಬ್ಬಿಯೊಳಗೆ ಇಣುಕಿ, ಪ್ರಶ್ನಾರ್ಥಕವಾಗಿ ನನ್ನತ್ತ ನೋಡಿದರು. ಯಾಕೆ, ಏನಾಯ್ತು ಅಂತ ನಾನೂ ಡಬ್ಬಿಯೊಳಗೆ ಇಣುಕಿದೆ!
ಲಿಂಬೆಹಣ್ಣಿನಂತಿದ್ದ ಜಾಮೂನುಗಳು ಮೂಸುಂಬಿ, ಕಿತ್ತಳೆ ಹಣ್ಣಿನಷ್ಟು ದೊಡ್ಡದಾಗಿದ್ದವು. ಪಾಕ ಹೀರಿಕೊಂಡು ರಾಗಿಮುದ್ದೆಯ ಗಾತ್ರಕ್ಕೆ ತಿರುಗಿದ್ದ ಅದು ಜಾಮೂನು ಅಂತ ಅಮ್ಮನಿಗೆ ಗೊತ್ತಾಯ್ತು. ಅವಳಿಗೂ ಜೋರು ನಗು! ಇಷ್ಟು ದೊಡ್ಡ ಜಾಮೂನನ್ನು ನಾನು ಇದುವರೆಗೆ ನೋಡೇ ಇರಲಿಲ್ಲ ಅಂತ ಹಾಸ್ಯ ಮಾಡಿ, ಉಂಡೆ ದೊಡ್ಡದಾಗಲು ಕಾರಣ ಏನಂತ ಗೊತ್ತಾಯ್ತಾ? ಎಂದು ಕೇಳಿದರು. ಗೊತ್ತಿಲ್ಲ ಅಂತ ತಲೆಯಾಡಿಸಿದೆ. ಬೇಕಿಂಗ್ ಸೋಡಾ ಎಷ್ಟು ಹಾಕಿದ್ದೆ? ಅಂತ ಕೇಳಿದರು. ನಾನು ಎರಡು ಚಮಚ ಅಂದೆ! ಅದಕ್ಕೇ ಜಾಮೂನು ಊದಿಕೊಂಡಿರುವುದು ಅಂದರು. ನನಗೆ ಅಳು ಬರುವುದೊಂದು ಬಾಕಿ.
ನನ್ನ ಪೆಚ್ಚುಮೋರೆ ನೋಡಿದ ಅಮ್ಮ, ಇರಲಿ ಬಿಡು. ಆದ್ರೂ, ನಂಗೋಸ್ಕರ ಇಷ್ಟು ಕಷ್ಟಪಟ್ಟಿದ್ದೀಯಲ್ಲ ಅಂತ ಬೆನ್ನು ತಟ್ಟಿದರು. ಜೊತೆಗೆ, ವಾಚ್ ತಗೋ ಅಂತ ದುಡ್ಡನ್ನೂ ಕೊಟ್ಟರು. ಕೊನೆಗೆ ಅಪ್ಪ, ಹೊರಗಿನಿಂದ ಜಾಮೂನು ತಂದು ಎಲ್ಲರ ಬಾಯಿ ಸಿಹಿ ಮಾಡಿದರು.
-ವಿದ್ಯಾಶ್ರೀ ವಿಜಯಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.