ಜೇಬಿನ ತುಂಬಾ ದುಡ್ಡಿರಬೇಕು ಬ್ಯಾಗಿನ ತುಂಬಾ ಡ್ರೆಸ್ಸಿರಬೇಕು!
Team Udayavani, Mar 29, 2017, 3:45 AM IST
ಇವ್ಳು ಮೈಸೂರು ಹುಡುಗಿ ಅರ್ಚನಾ!
ಪೂರ್ತಿ ಹೆಸರು ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ. ಹೀಗೆಂದು ಹೇಳಿದರೆ ಯಾರಿಗೂ ಇವರ ಗುರುತು ಪತ್ತೆಯಾಗುವುದಿಲ್ಲವೇನೋ, ಅದೇ “ಮನೆದೇವ್ರು ಜಾನಕಿ’ ಎನ್ನಿ. ಥಟ್ ಅಂತ ನೆನಪಾಗುತ್ತಾರೆ. “ಮಧುಬಾಲ’ ಧಾರಾವಾಹಿಯಲ್ಲಿ ಖಳನಟಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಇವರು “ಮನೆದೇವ್ರು’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿ¤ದ್ದಾರೆ. ಚಿತ್ರರಂಗದಲ್ಲೂ ಕೂಡ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.
ಧಾರಾವಾಹಿಯಲ್ಲಿ ನಟಿಸುವುದರಿಂದ ಹೆಸರು ಗಳಿಸುತ್ತೇವೆ. ಆದರೆ ಧಾರಾವಾಹಿಯ ನಟನಾ ವೃತ್ತಿ ಜನರು ತಿಳಿದಷ್ಟು ಸುಲಭವಲ್ಲ. ಇಲ್ಲಿ ಖಾಸಗಿ ಜೀವನಕ್ಕೆ ಪುರುಸೊತ್ತೇ ಇರುವುದಿಲ್ಲ. ಇನ್ನು ಪ್ರಮುಖ ಪಾತ್ರಧಾರಿಯಾದರೆ ಮುಗಿದೇ ಹೋಯಿತು ಬೆಳಗ್ಗೆ ಶೂಟಿಂಗ್ ಆರಂಭವಾದಾಗಿನಿಂದ ರಾತ್ರಿ ಪ್ಯಾಕಪ್ ಆಗುವವರೆಗೆ ಸೆಟ್‌ನಲ್ಲೇ ಇರಬೇಕು. ರಾತ್ರಿ ಮನೆಗೆ ಬಂದ ಕೂಡಲೆ ಮಲಗಿದರೆ ಸಾಕಪ್ಪ ಎನ್ನುವಷ್ಟು ಸುಸ್ತಾಗಿರುತ್ತದೆ.
ಜೇಬಿನ ತುಂಬ ದುಡ್ಡಿರಬೇಕು, ಬ್ಯಾಗಿನಲ್ಲಿ ಒಳ್ಳೊಳ್ಳೆ ಬಟ್ಟೆಗಳಿರಬೇಕು. ಮನಸ್ಸಿನಲ್ಲಿ ಯಾವ ಒತ್ತಡ, ಆತಂಕವೂ ಇಲ್ಲದೇ, ಇಡೀ ಪ್ರಪಂಚ ಸುತ್ತಿ ಬರಬೇಕು. ಇದು ನನ್ನ ಜೀವನದ ಅತ್ಯಂತ ದೊಡ್ಡ ಕನಸು.
ನನಗೆ ಎತ್ತರ ಇರುವ ಹುಡುಗರು ಇಷ್ಟ ಆಗ್ತಾರೆ. ನನ್ನ ಹುಡುಗ 6 ಅಡಿ ಎತ್ತರ ಇರಲೇಬೇಕು. ನೋಡಲು ಸ್ವಲ್ಪ ಚನ್ನಾಗಿದ್ದರೂ ಸಾಕು, ಆದರೆ ತುಂಬಾ ಓದಿರಬೇಕು. ಆತನ ಕುಟುಂಬದವರ ಜೊತೆ ನನ್ನ ಕುಟುಂಬದವರನ್ನೂ ತುಂಬಾ ಗೌರವದಿಂದ ಕಾಣಬೇಕು.
– ನಿಮ್ಮ ಊರು?
ಮೈಸೂರು. ನಾನು ಹುಟ್ಟಿ ಬೆಳೆದಿದ್ದು ಓದಿದ್ದು ಎಲ್ಲಾ ಮೈಸೂರಿನಲ್ಲೇ. ಇತ್ತೀಚೆಗಷ್ಟೇ ನಮ್ಮ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಯಿತು.
– ನಟಿಯಾಗುವ ಇಚ್ಛೆ ಮೊದಲಿನಿಂದಲೂ ಇತ್ತೇ?
ಇಲ್ಲ. ನಾನು ನಟಿಯಾಗುತ್ತೇನೆ ಎಂದು ಯಾವತ್ತೂ ಊಹಿಸಿರಲಿಲ್ಲ. ಪದವಿ ಮುಗಿಸಿ ಎಂಎನ್‌ಸಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದೆ. ಆಗೀಗ ಮಾಡೆಲಿಂಗ್ ಮಾಡುತ್ತಿದ್ದೆ. 2013ರಲ್ಲಿ ನಿರ್ದೇಶಕಿ ರೂಪಾ ಐಯ್ಯರ್ ತಂಡ ಆಯೋಜಿಸುವ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ, ಮಿಸ್ ಕರ್ನಾಟಕ ಕಿರೀಟ ಗೆದ್ದೆ. ಆಗ ನನಗೆ “ಮಧುಬಾಲ’ ದಾರಾವಾಹಿಯಲ್ಲಿ ನಟಿಸಲು ನಿರ್ದೇಶಕ ಹಯವದನ ಆಫರ್ ನೀಡಿದರು. ಕೆಲಸಕ್ಕೆ ರಾಜೀನಾಮೆ ನೀಡಿ ನಟಿಸಲು ಹೋದೆ.
– ಮೊದಲ ಧಾರಾವಾಹಿ ಅನುಭವದ ಬಗ್ಗೆ ಹೇಳಿ.
ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ “ಮಧುಬಾಲ’ದಲ್ಲಿ ನನ್ನದು ನೆಗೆಟಿವ್ ಪಾತ್ರ. ನಟನೆಯ ಗಂಧಗಾಳಿ ಗೊತ್ತಿರಲಿಲ್ಲ. ಮೊದಲ ದಿನವಂತೂ ತುಂಬಾ ಹೆದರಿದ್ದೆ. ನಟಿಸಲು ನಾನು ಹೇಳಿ ಕೊಡುತ್ತೇನೆ. ನೀನು ಧೈರ್ಯವಾಗಿ ನಟಿಸು ಎಂದು ಹಯವದನ ಸರ್ ಧೈರ್ಯ ತುಂಬುತ್ತಿದ್ದರು. ಆಗಾಗ ಬೈಯುತ್ತಿದ್ದರು ಕೂಡ. ಖಳನಟಿ ಪಾತ್ರ ನಿರ್ವಹಿಸುವುದು ಕಷ್ಟ. ಮೊದಲ ಧಾರಾವಾಹಿಯಲ್ಲೇ ನನಗೆ ಖಳನಟಿ ಪಾತ್ರ ಸಿಕ್ಕಿದ್ದರಿಂದ ನನಗೆ ನಟನೆ ಕಲಿಯಲು ಸಹಾಯವಾಯಿತು.
– “ಮನೆದೇವ್ರು’ ಧಾರಾವಾಹಿಯಲ್ಲಿ ಮುಗೆœಯ ಪಾತ್ರದಲ್ಲಿ ಸೈ ಎನಿಸಿಕೊಂಡಿರುವುದರ ಬಗ್ಗೆ ಏನೆನಿಸುತ್ತದೆ?
ನಾನು ತುಂಬಾ ಲಕ್ಕಿ ಅಂತಲೇ ಹೇಳಬಹುದು. ಮೊದಲು ಖಳನಟಿಯಾದೆ. ಆದರೂ 2ನೇ ಧಾರಾವಾಹಿಯಲ್ಲಿ ನಾಯಕಿ ಪಾತ್ರ ಸಿಕ್ಕಿತು. ಮೊದಲಿಗೇ ನೆಗೆಟಿವ್ ಪಾತ್ರ ನಿರ್ವಹಿಸಿದ್ದರಿಂದ ಇದನ್ನು ಸಲೀಸಾಗಿ ಮಾಡುತ್ತಿದ್ದೇನೆ. ಆದರೆ ವಿಶೇಷ ಅನುಭವ ಎಂದರೆ. ಮಧುಬಾಲ ಪ್ರದರ್ಶನವಾಗುತ್ತಿದ್ದಾಗ ತುಂಬಾ ಜನ ಯಾಕೆ ನೀವು ಅಷ್ಟೊಂದು ಕ್ರೂರಿ? ಇಂಥ ಪಾತ್ರ ಏಕೆ ಮಾಡಿದಿರಿ? ನಾಯಕಿಯನ್ನು ಯಾಕೆ ಅಷ್ಟೊಂದು ಅಳಿಸುತ್ತೀರಿ? ಎಂದು ಕೇಳುತ್ತಿದ್ದರು. ಮನೆದೇವ್ರು ಪಾತ್ರದಿಂದಾಗಿ ಎಲ್ಲರೂ ನನ್ನನ್ನು ಅನುಕಂಪದಿಂದ ಮಾತನಾಡಿಸುತ್ತಾರೆ.
– ನೆಗೆಟಿವ್ ಪಾತ್ರಕ್ಕಾಗಿ ಜನರಿಂದ ಬಯ್ಯಿಸಿಕೊಳ್ಳುವಾಗ “ನನಗೆ ಈ ಪಾತ್ರ ಬೇಡವಾಗಿತ್ತು’ ಎನಿಸಿದೆಯೇ?
ನೆಗೆಟಿವ್ ಪಾತ್ರ ನೋಡಿ ಜನ ಎಷ್ಟು ಬಯ್ಯುತ್ತಾರೊ ಅಷ್ಟು ನೀವು ಚೆನ್ನಾಗಿ ಆಭಿನಯಿಸುತ್ತಿದ್ದೀರಿ ಎಂದು ಅರ್ಥ. ಅದೊಂಥರಾ ಹೊಗಳಿಕೆ. ಒಳ್ಳೆ ಹುಡುಗಿ ಪಾತ್ರ ಮಾಡುವಾಗ ಜನರನ್ನು ಪಾತ್ರವೇ ಅರ್ಧ ಪ್ರಭಾವಿಸಿರುತ್ತವೆ. ನೆಗೆಟಿವ್ ಪಾತ್ರದಲ್ಲಿ ನಮ್ಮ ಅಭಿನಯವೇ ಅವರನ್ನು ಕನ್ವಿನ್ಸ್ ಮಾಡಬೇಕು.
– ನೀವೀಗ ಸಿನಿಮಾ ಕ್ಷೇತ್ರಕ್ಕೂ ಜಿಗಿದ್ದಿದೀರಂತೆ?
ಹೌದು, ಸದ್ಯ ಎರಡು ಚಿತ್ರಗಳು ಕೈಯಲ್ಲಿವೆ. ಚೇತನ್ ಅಭಿನಯದ “ನೂರೊಂದು ನೆನಪು’ ಚಿತ್ರದಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಂಪೂರ್ಣ ಹೊಸಬರೇ ತಯಾರಿಸುರುವ “ಪತ್ತೇದಾರಿ’ ಎಂಬ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿದ್ದೇನೆ. ಎರಡು ಚಿತ್ರದಲ್ಲೂ ಹೋಮ್ಲಿ ಪಾತ್ರ ನನ್ನದು.
ನಿಮ್ಮ ಕಾಲೇಜು ದಿನಗಳ ಬಗ್ಗೆ ಹೇಳಿ?
ಕಾಲೇಜು ದಿನಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನಾನು ಓದಿದ್ದು ಮೈಸೂರಿನ ಮಹಾಜನ ಕಾಲೇಜಿನಲ್ಲಿ. ಕಾಲೇಜು ತುಂಬಾ ಸ್ಟ್ರಿಕ್ಟ್ ಇತ್ತು. ಆದರೂ ನಮ್ಮ ಮಸ್ತಿಗೇನೂ ಕಡಿಮೆ ಇರಲಿಲ್ಲ. ಮೊದಲ ವರ್ಷದಲ್ಲಿ ಫುಲ್ ಅಟೆಂಡೆನ್ಸ್ ಇತ್ತು. ಅಂತಿಮ ವರ್ಷಕ್ಕೆ ಬರುವಷ್ಟರಲ್ಲಿ ಸೀರಿಯಸ್‌ನೆಸ್ ಕಮ್ಮಿ ಆಗಿತ್ತು. ಬರೀ ಬಂಕ್ ಮಾಡುತ್ತಾ ಕಾಲ ಕಳೆದೆ. ಆದರೂ ಡಿಸ್ಟಿಂಕ್ಷನ್‌ನಲ್ಲಿ ಪದವಿ ಮುಗಿಸಿದೆ. ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಜಾಸ್ತಿ. ಕಾಲೇಜು ಫೆಸ್ಟ್‌ಗಳಲ್ಲಿ ರ್‍ಯಾಂಪ್ ವಾಕ್ ಮಾಡುವುದನ್ನು ತುಂಬಾ ಇಷ್ಟಪಡುತ್ತಿದ್ದೆ. ಜೊತೆಗೆ ನಾನು ರೋಟರಿ ಕ್ಲಬ್ ಅಧ್ಯಕ್ಷೆ ಆಗಿದ್ದೆ.
ಕಾಲೇಜು ದಿನಗಳಲ್ಲಿ ಮರೆಯಲು ಸಾಧ್ಯವೇ ಇಲ್ಲ ಎಂಬ ಘಟನೆ ಇದ್ದರೆ ಹೇಳಿ?
ಕಾಲೇಜು ದಿನಗಳೇ ಚಂದ ಕಣಿÅ. ಏನನ್ನೂ ಮರೆಯಲು ಸಾಧ್ಯವೇ ಇಲ್ಲ. ಕೆ.ಡಿ ರೋಡ್‌ನಲ್ಲಿ ಸ್ಕೂಟಿ ಮೇಲೆ ತ್ರಿಬಲ್ ರೈಡಿಂಗ್ ಹೋಗ್ತಾ ಇದ್ವಿ. ನಾನು ನನ್ನ ಫ್ರೆಂಡ್ಸ್ ಎಲ್ಲ ಟ್ಯೂಷನ್‌ಗೆ ಹೋಗುತ್ತೀವಿ ಅಂತ ಮನೆಯಲ್ಲಿ ದುಡ್ಡು ಇಸ್ಕೊಂಡು ಬಾರಿಸ್ತಾ, ಕಾಫಿ ಡೇಗೆ ಹೋಗಿ ಚನ್ನಾಗಿ ತಿಂದು ಮಜಾ ಮಾಡ್ತಿದ್ವಿ. “ಕಬ್ಸ್’ ನಮ್ಮ ನೆಚ್ಚಿನ ಅಡ್ಡವಾಗಿತ್ತು. ಮಜ ಮಾಡಲು ಮೈಸೂರೆ ಚಂದ.
-ಹಾಗಾದರೆ ಈಗಲೂ ಕಾಲೇಜು ಗೆಳತಿಯರೆಲ್ಲ ಭೇಟಿ ಮಾಡಿ ಮಜ ಮಾಡ್ತೀರಾ? ಭೇಟಿಯಾಗುವ ಸ್ಥಳ ಯಾವುದು?
ಎಲ್ಲರೂ ಅವರವರ ವೃತ್ತಿ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಅಪರೂಪಕ್ಕೊಮ್ಮೆ ಭೇಟಿ ಮಾಡ್ತಾ ಇರ್ತೇವೆ. ಕೋರಮಂಗಲದಲ್ಲಿ ಹಚ್ಚಾಗಿ ಭೇಟಿ ಮಾಡುತ್ತೇವೆ. ಯಾವುದಾದರೂ ರೆಸ್ಟೊರೆಂಟ್‌ಗೆ ಹೋಗುತ್ತೇವೆ. ಆದರೆ ಮೈಸೂರಿನಲ್ಲಿ ತ್ರಿಬಲ್ ರೈಡಿಂಗ್ ಹೋಗ್ತಾ ಇದ್ದಾಗ ಸಿಗುತ್ತಾ ಇದ್ದ ಖುಷಿ ಈಗ ಸಿಗಲ್ಲ.
– ನಿಮ್ಮ ಫ್ರೆಂಡ್ಸ್ ನಿಮ್ಮನ್ನು ಇಡ್ಲಿ ಅಂತ ಕರೆಯುತ್ತಾರಂತೆ, ಹೌದಾ?
ನನಗೆ ಇಡ್ಲಿ ಮೇಲಿರುವ ಪ್ರೀತಿ ನೋಡಿ ಹಾಗೆ ಹೆಸರಿಟ್ಟಿದ್ದಾರೆ. ನನಗೆ ಇಡ್ಲಿ ಎಂದರೆ ಪ್ರಾಣ. ಇಡ್ಲಿ ತಿನ್ನದೇ ಇದ್ದರೆ ಸಮಾಧಾನವೇ ಇರುವುದಿಲ್ಲ. ಕೆಲವು ತಿಂಗಳ ಹಿಂದೆ 4 ದಿನಗಳ ಗೋವಾ ಪ್ರವಾಸಕ್ಕೆ ಹೋಗಿದ್ದೆ. 2ನೇ ದಿನಕ್ಕೇ ನನಗೆ ಇಡ್ಲಿ ತಿನ್ನುವ ಬಯಕೆಯಾಯಿತು. ಇಡ್ಲಿ ಹುಡುಕಿಕೊಂಡು ಇಡೀ ಗೋವಾ ಅಲೆದಾಡಿದ್ದೇನೆ. ಎಲ್ಲೂ ಚೆನ್ನಾಗಿರುವ ಇಡ್ಲಿ ಸಿಗಲಿಲ್ಲ. ಆಗ ಎಷ್ಟು ಹೊತ್ತಿಗೆ ಬೆಂಗಳೂರಿಗೆ ವಾಪಸ್ಸಾಗುತ್ತೇನೋ ಎನಿಸಿತ್ತು.
– ಮನೆಯಲ್ಲಿ ನೀವು ಅಡುಗೆ ಮಾಡ್ತೀರ?
ಯಾರು ಇಲ್ಲ ಅಂದ್ರೆ ಮಾಡ್ತೀನಿ, ರೊಟ್ಟಿ, ದೋಸೆ, ಗೊಜ್ಜುಗಳು ಇಂಥದ್ದನ್ನು ಮಾತ್ರ ಮಾಡ್ತೇನೆ.
-ಶೂಟಿಂಗ್ ವೇಳೆ ಡಯಟ್ ಹೇಗೆ ನಿಭಾಯಿಸುತ್ತೀರ?
ನನಗೆ ಹಸಿವೆಯೇ ಆಗುವುದಿಲ್ಲ. ಹಸಿವಾಗಲು ಪ್ರತಿದಿನ ಔಷಧಿ ಕುಡಿಯುತ್ತೇನೆ. ನಾನು ಎಷ್ಟು ತಿಂದರೂ ದಪ್ಪ ಆಗಲ್ಲ ಅಂದ ಮೇಲೆ ಯಾಕಾಗಿ ಡಯಟ್ ಮಾಡಲಿ? ಮನೆಯಿಂದ ಶೂಟಿಂಗ್ ಹೊರಡುವಾಗ ಅಮ್ಮ ಏನಾದರೂ ತಿಂಡಿ ಮಾಡಿ ಡಬ್ಬಿಗೆ ಹಾಕಿ ಕೊಡ್ತಾರೆ. ಆದರೆ ನಟಿಯಾದ ಮೇಲೆ ಚರ್ಮದ ಒಳಿತಿಗಾಗಿ ಕೆಲವು ಆಹಾರಗಳನ್ನು ತ್ಯಾಗಗಳನ್ನು ಮಾಡಿದ್ದೇನೆ.
– ತ್ವಚೆಗಾಗಿ ಮಾಡಿರುವ ತ್ಯಾಗಗಳ ಬಗ್ಗೆ ಹೇಳಿ?
ಖಾರ, ಮಸಾಲೆಯುಕ್ತ ಅಡುಗೆ ಎಂದರೆ ನನಗೆ ಪ್ರಾಣ. ಮಸಾಲಪುರಿ ಹೆಚ್ಚು ತಿನ್ನುತ್ತಿದ್ದೆ ಅದೂ ಹೆಚ್ಚು ಖಾರ ಹಾಕಿಸಿಕೊಂಡು. ಈಗ ತುಂಬಾ ಕಡಿಮೆ ಮಾಡಿದ್ದೇನೆ. ಎಲ್ಲಾ ಪದಾರ್ಥದಲ್ಲೂ ಮಸಾಲೆ ಕಡಿಮೆ ಇರುವಂತೆ ಎಚ್ಚರ ವಹಿಸುತ್ತೇನೆ. ಪ್ರತಿದಿನ ಖಾಲಿ ಹೊಟ್ಟೆಗೆ ಆಲೊವೆರಾ ಜ್ಯೂಸ್ ಕುಡಿಯುತ್ತೇನೆ. ಶೂಟಿಂಗ್ ಸೆಟ್‌ನಲ್ಲಿ ಇರುವಾಗ ಮಜ್ಜಿಗೆ ಹೆಚ್ಚು ಕುಡಿಯುತ್ತೇನೆ. ದಿನಕ್ಕೆ 6 ಬಾಟಲಿ ನೀರು ಕುಡಿಯುತ್ತೇನೆ.
ವನ್ ವರ್ಡ್ ಆ್ಯನ್ಸರ್
– ನಿಮ್ಮ ಮುಂದಿನ ಚಿತ್ರಕ್ಕೆ ನಾಯಕನನ್ನು ಆರಿಸುವ ಅವಕಾಶ ನಿಮಗೇ ಕೊಟ್ಟರೆ, ನಿಮ್ಮ ಆಯ್ಕೆಯ ನಾಯಕ ಯಾರು?
: ಸುದೀಪ್
– ನಿಮ್ಮ ಪ್ರಕಾರ ತುಂಬಾ ಒಳ್ಳೆ ನಟಿ ಯಾರು?
: ದೀಪಿಕಾ ಪಡುಕೋಣೆ
– ನಿಮ್ಮ ಹ್ಯಾಂಡ್ ಬ್ಯಾಗ್‌ನಲ್ಲಿ ಯಾವ ಈ ಮೂರು ವಸ್ತುಗಳು ಮಿಸ್ ಆಗುವುದೇ ಇಲ್ಲ?
: ಲಿಪ್‌ಸ್ಟಿಕ್, ಪರ್ಫ್ಯೂಮ್, ಮೊಬೈಲ್ ಚಾರ್ಜರ್
– ಮುಖ್ಯವಾದ ಒಂದು ಬ್ಯೂಟಿ ಟಿಪ್ ಕೊಡುವಿರಾ?
: ಹೆಚ್ಚು ನೀರು ಕುಡಿಯಿರಿ
– ನೆಚ್ಚಿನ ಸ್ಥಳ?
: ಮೈಸೂರು
– ಜೀವನದಲ್ಲೊಮ್ಮೆ ಇಲ್ಲಿಗೆ ಹೋಗಲೇ ಬೇಕು ಅನ್ನಿಸಿದ ಸ್ಥಳ?
: ಕೆನಡ
– ಖುಷಿಯಾಗಿ ಕಳೆಯುವ ಸಮಯ?
: ನನ್ನ ನಾಯಿ ಜೊತೆ ಆಟವಾಡುವಾಗ
– ತುಂಬಾ ಬೇಜಾರಾಗೋದು ಯಾವಾಗ?
: ಇಡೀ ದಿನ ಮೇಕಪ್‌ನಲ್ಲೇ ಇರಬೇಕಾಗಿ ಬಂದಾಗ.
– ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.