ಅಮ್ಮ MBBS
ಅಡುಗೆ ಮನೆಯೇ ಅವಳ ಆಸ್ಪತ್ರೆ...
Team Udayavani, Jul 3, 2019, 5:00 AM IST
ಮೆಡಿಕಲ್ ಓದಿರದಿದ್ದರೂ, ಹಿಂದಿನ ಕಾಲದ ಎಲ್ಲ ಅಮ್ಮಂದಿರೂ ಒಂದರ್ಥದಲ್ಲಿ ವೈದ್ಯರೇ. ಅಡುಗೆಮನೆಯೇ ಅವರ ಪಾಲಿನ ಮೆಡಿಕಲ್ ಶಾಪ್ ಆಗಿರುತ್ತಿತ್ತು. ಮಕ್ಕಳನ್ನು ಕಾಡುವ ರೋಗಗಳಿಗೆ, ಮೆಂತ್ಯೆ, ಬೆಳ್ಳುಳ್ಳಿ, ಜೀರಿಗೆ, ಅರಿಶಿನ, ಶುಂಠಿಯ ರೂಪದಲ್ಲಿ ಅವರು “ಮಾತ್ರೆ’ ಕೊಟ್ಟರೆ ಸಾಕು; ಎಲ್ಲ ರೋಗಗಳೂ ಪೇರಿ ಕೀಳುತ್ತಿದ್ದವು…
ಮೊನ್ನೆ (ಜುಲೈ 1) ವೈದ್ಯರ ದಿನ. ಹಗಲು-ರಾತ್ರಿಯೆನ್ನದೆ ರೋಗಿಗಳ ಸೇವೆ ಮಾಡುವ ಡಾಕ್ಟರುಗಳನ್ನು ಒಂದು ದಿನ ಸ್ಮರಿಸಿದರೆ ಸಾಲದು. ಅವರು ಪ್ರಾತಃಸ್ಮರಣೀಯರು. ಅವರನ್ನೆಲ್ಲ ನೆನೆದ ಮೇಲೆ ನಾನು ನಮ್ಮಮ್ಮನನ್ನೂ ನೆನಪಿಸಿಕೊಳ್ಳಲೇಬೇಕು. ಎಂಬಿಬಿಎಸ್ ಓದದಿದ್ದರೂ, ನನ್ನೆಲ್ಲ ಆರೋಗ್ಯ ಸಮಸ್ಯೆಗಳಿಗೆ ಮೊದಲು ಮದ್ದು ಮಾಡಿದವಳು ಆಕೆಯೇ. ನಮ್ಮಮ್ಮ ಅಂತಲ್ಲ, ಹಿಂದಿನ ಕಾಲದ ಎಲ್ಲ ಅಮ್ಮಂದಿರೂ ಒಂದರ್ಥದಲ್ಲಿ ವೈದ್ಯರೇ. ಅಡುಗೆ ಮನೆಯೇ ಅವರ ಆರೋಗ್ಯಶಾಲೆ. ಮೆಂತ್ಯೆ, ಜೀರಿಗೆ, ಬೆಳ್ಳುಳ್ಳಿ, ಶುಂಠಿಯೇ ಅಮ್ಮಂದಿರು ಕೊಡುವ ಮಾತ್ರೆಗಳು. ಮನೆಮದ್ದಿನ ಜೊತೆಗೆ ಅಮ್ಮನ ಮುದ್ದು ಸೇರಿ, ಅದೆಷ್ಟೋ ರೋಗಗಳು ಎರಡೇ ದಿನಕ್ಕೆ ಮಾಯವಾಗುತ್ತಿದ್ದವು.
ವೈದ್ಯಕೀಯ ಕ್ಷೇತ್ರ ಇಷ್ಟೊಂದು ಮುಂದುವರಿಯದೇ ಇದ್ದ ಆ ಕಾಲದಲ್ಲಿ, ಮನೆಮದ್ದೇ ಕಾಯಿಲೆಗಳನ್ನು ದೂರ ಮಾಡುತ್ತಿದ್ದುದು. ಆಗೆಲ್ಲಾ ಸಣ್ಣಪುಟ್ಟ ಕಾಯಿಲೆಗಳಿಗೆ ಯಾರೂ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಹೋಗುವಷ್ಟು ದೂರದಲ್ಲಿ ಆಸ್ಪತ್ರೆಗಳೂ ಇರುತ್ತಿರಲಿಲ್ಲವೆನ್ನಿ. ಶೀತವಾದರೆ ಶುಂಠಿ ಕಷಾಯ, ಹೊಟ್ಟೆ ನೋವಾದರೆ ಹಾಲು ಹಾಕದ ಕಪ್ಪು ಟೀ, ಕೆಮ್ಮಿಗೆ ಅರಿಶಿಣದ ನೀರು… ಹೀಗೆ ಒಂದೊಂದು ರೋಗಕ್ಕೆ ಒಂದೊಂದು ಔಷಧ ಅಡುಗೆಮನೆಯಲ್ಲೇ ಸಿಗುತ್ತಿತ್ತು.
ನನ್ನನ್ನು ಆಗಾಗ್ಗೆ ಕಾಡುವ ಸಮಸ್ಯೆಯೆಂದರೆ ಬಾಯಿಹುಣ್ಣು. ಕೆಲವೊಮ್ಮೆ ಬಾಯಲ್ಲಿ ಅದೆಷ್ಟು ಹುಣ್ಣುಗಳು ಒಟ್ಟೊಟ್ಟಿಗೇ ಆಗುತ್ತವೆಂದರೆ, ಎಂಜಲು ನುಂಗಲೂ ಆಗುವುದಿಲ್ಲ. ಆಗ ಅಮ್ಮ, ಪೇರಳೆ (ಸೀಬೆ)ಯ ಚಿಗುರನ್ನು ನೀರಿನಲ್ಲಿ ಕುದಿಸಿ, ಕಷಾಯ ಮಾಡಿ ಕೊಡುತ್ತಿದ್ದಳು. ಇಲ್ಲವಾದರೆ, ಬಸಳೆ ಸೊಪ್ಪು ಅಥವಾ ಪೇರಳೆ ಎಲೆಯನ್ನು ಜಗಿದು ನುಂಗಲು ಹೇಳುತ್ತಿದ್ದಳು. ಹಾಗೆ ಮಾಡಿದ, ಎರಡೇ ದಿನದಲ್ಲಿ ಹುಣ್ಣುಗಳು ಮಾಯ! ಅಮ್ಮ ಕೊಡುತ್ತಿದ್ದ ಇನ್ನೊಂದು ಔಷಧವೆಂದರೆ; ಕಾಕಿ ಸೊಪ್ಪು (ಮಲೆನಾಡಿನ ಒಂದು ಸಸ್ಯ) ಕಾಳುಮೆಣಸು, ಜೀರಿಗೆಯ ಕಷಾಯ. ಮಲೆನಾಡಿನ ಬಹುತೇಕರ ಮನೆಯಲ್ಲಿ, ಈ ಕಷಾಯ ತಯಾರಿಸುತ್ತಾರೆ. ಸಣ್ಣವಳಿದ್ದಾಗ ಶೀತ, ನೆಗಡಿ, ಕೆಮ್ಮು ಕಾಡಿದಾಗೆಲ್ಲಾ, ಅಮ್ಮ ಖಾರಖಾರದ ಈ ಕಷಾಯ ಕುಡಿಯಲು ಕೊಡುತ್ತಿದ್ದಳು. ನನಗೆ ನೆನಪಿರುವಂತೆ ನಮ್ಮ ಮನೆಯಲ್ಲಿ ಯಾರೂ ನೆಗಡಿ ಎಂದು ಆಸ್ಪತ್ರೆಗೆ ಹೋಗಿದ್ದೇ ಇಲ್ಲ. ನಾವೆಲ್ಲಾ ಅಮ್ಮನ ಮನೆಮದ್ದನ್ನು ಅಷ್ಟು ನಂಬಿದ್ದೆವು.
ಆದರೆ, ಅಮ್ಮನಿಗಿಂತ ನನಗೇ ಹೆಚ್ಚು ಗೊತ್ತು ಅಂತ ಅನ್ನಿಸುವ ಟೀನೇಜ್ ಹಂತವಿದೆಯಲ್ಲ, ಆ ಘಟ್ಟ ತಲುಪಿದಾಗ ನನಗೆ ಅಮ್ಮನ ಮನೆಮದ್ದಿನ ಮೇಲೆ ಅದೇನೋ ಅಪನಂಬಿಕೆ. ಬಾಯಿ ಹುಣ್ಣಾದಾಗ ಅಮ್ಮ ಪೇರಳೆ ಎಲೆ ತಿನ್ನು ಅಂದರೆ, ಹುಣ್ಣಾಗೋದು ವಿಟಮಿನ್ ಕೊರತೆಯಿಂದ. ಬಿ ಕಾಂಪ್ಲೆಕ್ಸ್ ಮಾತ್ರೆ ತಿಂದರೆ ಸರಿ ಹೋಗುತ್ತೆ ಅಂತ ವಾದಿಸಿ, ದಿನವೂ ಮೂರೂ¾ರು ಮಾತ್ರೆ ನುಂಗುತ್ತಿದ್ದೆ. ತಕ್ಷಣಕ್ಕೆ ಸಮಸ್ಯೆ ಪರಿಹಾರವಾದರೂ, ಮತ್ತೆ ಎರಡೇ ದಿನಕ್ಕೆ ಬಾಯಲ್ಲಿ ಹುಣ್ಣು.
ಅಪ್ಪನಿಗೆ ಜ್ವರ ಬಂದಾಗೊಮ್ಮೆ ಅಮ್ಮ ಕಷಾಯ ಮಾಡ್ತೀನಿ ಅಂದಾಗ ನಾನು, ಮೆಡಿಕಲ್ ಶಾಪ್‌ನಿಂದ ಮಾತ್ರೆ ತಂದುಕೊಟ್ಟಿದ್ದೆ. ನನ್ನ ಒತ್ತಾಯಕ್ಕೆ ಮಾತ್ರೆ ನುಂಗಿದ ಅಪ್ಪ, ಮಾರನೇದಿನ “ನಮಗೆಲ್ಲ ಈ ಇಂಗ್ಲಿಷ್ ಮಾತ್ರೆ ಒಗ್ಗೊàದಿಲ್ಲಪ್ಪ, ಒಂಚೂರು ಖಾರವಾಗಿ ಕಷಾಯ ಮಾಡಿಕೊಡು’ ಅಂತ ಅಮ್ಮನಲ್ಲಿ ಹೇಳಿದಾಗ, ಅಮ್ಮ ನನ್ನನ್ನು ನೋಡಿ ಮುಸಿಮುಸಿ ನಕ್ಕಿದ್ದಳು.
ಆಮೇಲೆ ಶುರುವಾಗಿದ್ದು ಮೊಡವೆ ಪ್ಲಾಬ್ಲಿಮ್ಮು. ದಿನಾ ಕನ್ನಡಿ ಮುಂದೆ ನಿಂತು ಅಳುತ್ತಿದ್ದ ನನ್ನ ನೋಡಿ ಅಮ್ಮ, ಒಂದಷ್ಟು ಪದಾರ್ಥಗಳ ಹೆಸರು ಹೇಳಿ, ಇಂಥದ್ದೆಲ್ಲ ತಿನ್ನಬೇಡ. ಮೊಡವೆ ತಂತಾನೇ ಕಡಿಮೆ ಆಗುತ್ತೆ ಅಂದಿದ್ದಳು. ಕ್ರೀಮು, ಜೆಲ್ಲುಗಳಿಂದಲೇ ಮೊಡವೆ ಹೋಗೋದು ಅಂತ ನಂಬಿದ್ದ ನನ್ನ ಕಿವಿಗದು ಬೀಳಲೇ ಇಲ್ಲ. ಮುಂದೆ, ಸ್ಕಿನ್ ಸ್ಪೆಷಲಿಸ್ಟ್‌ಗಳ ಬಳಿ ಹೋದಾಗಲೂ ಅವರು ಕ್ರೀಮ್, ಮಾತ್ರೆಗಳ ಜೊತೆಗೆ, ಇಂತಿಂಥದ್ದನ್ನು ತಿನ್ನಬೇಡಿ ಅನ್ನೋದನ್ನು ಮರೆಯಲಿಲ್ಲ. ಆಗ “ಅಮ್ಮಾ, ನಿಂಗೆ ಇದನ್ನೆಲ್ಲ ಯಾರು ಹೇಳಿದ್ದು?’ ಅಂತ ಕೇಳಿದಾಗ, “ಇದೇನು ಮಹಾ, ನಮ್ಮ ಅಮ್ಮ-ಅಜ್ಜಿಗೆ ಇನ್ನೂ ಏನೇನೋ ಔಷಧಗಳು ಗೊತ್ತಿದ್ದವು. ಹಿರಿಯರಿಗೆ ತಿಳಿದಷ್ಟು ನಮಗೆಲ್ಲ ಎಲ್ಲಿ ಗೊತ್ತು?’ಅಂದಿದ್ದಳು. ಮನೆಮದ್ದಿನ ಬಗ್ಗೆ ಮತ್ತೆ ನಂಬಿಕೆ ಮೂಡಿದ್ದು ಆಗಲೇ.
ಈಗಲೂ ಅಷ್ಟೆ, ಆರೋಗ್ಯ ಸಮಸ್ಯೆ ಕಾಡಿದಾಗ ಡಾಕ್ಟರ್ ಬಳಿ ಹೋಗುವ ಮುನ್ನ ಅಮ್ಮನಿಗೆ ಫೋನಾಯಿಸುತ್ತೇನೆ. ಹೊಟ್ಟೆ, ತಲೆ, ಕಾಲಿನಲ್ಲಿ ಹೀಗೀಗೆ ಆಗ್ತಾ ಇದೆ ಅಂದರೆ ತಕ್ಷಣ ಅವಳು ಬಾಯಲ್ಲೇ ಔಷಧ ಚೀಟಿ ಕೊಟ್ಟು ಬಿಡುತ್ತಾಳೆ. ನನ್ನ ಪುಣ್ಯಕ್ಕೆ, ಇಲ್ಲಿಯವರೆಗೆ ಬಂದ ಕಾಯಿಲೆಗಳೆಲ್ಲ ಅಮ್ಮನ ಆಸ್ಪತ್ರೆಯಲ್ಲೇ ಗುಣವಾಗಿ ಬಿಡುತ್ತೆ.
ಹಿಂದಿನ ಕಾಲದ ಎಲ್ಲ ಅಮ್ಮಂದಿರೂ ಒಂದರ್ಥದಲ್ಲಿ ವೈದ್ಯರೇ ಅಂತ ನೀವೂ ಒಪ್ಪಿಕೊಳ್ತೀರಲ್ವಾ? ಹಾಗಿದ್ದರೆ, ನಿಮ್ಮಮ್ಮ ಮಾಡುತ್ತಿದ್ದ ಮನೆಮದ್ದುಗಳ ಮಹತ್ವವನ್ನು ಅರಿತುಕೊಳ್ಳಿ, ಸಾಧ್ಯವಾದರೆ ಪುಸ್ತಕದಲ್ಲಿ ಬರೆದಿಡಿ. ಅಜ್ಜಿಯಿಂದ ಅಮ್ಮ ಕಲಿತಳು, ಅಮ್ಮನಿಂದ ನಾವು, ನಮ್ಮಿಂದ ನಮ್ಮ ಮುಂದಿನ ಪೀಳಿಗೆ ಕಲಿತುಕೊಳ್ಳಲಿ. ಯಾಕಂದ್ರೆ, ತಲೆಮಾರಿನಿಂದ ತಲೆಮಾರಿಗೆ ಜ್ಞಾನ ಪ್ರವಹಿಸುವುದು ಮುಖ್ಯ. ಏನಂತೀರಾ?
ಅಡುಗೆಮನೆ ಎಂಬ ಮೆಡಿಕಲ್ ಶಾಪ್
ಅಜೀರ್ಣವಾಗಿ ಹೊಟ್ಟೆನೋವು ಬಂದಿದ್ದರೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕಾಳುಮೆಣಸಿನ ಪುಡಿಯನ್ನು ತುಪ್ಪದಲ್ಲಿ ಹುರಿದು, ಬಿಸಿ ಬಿಸಿ ಅನ್ನದ ಜೊತೆ ಬೆರೆಸಿ ತಿನ್ನುವುದು, ಗ್ಯಾಸ್ಟ್ರಿಕ್ ಹೊಟ್ಟೆನೋವಿಗೆ ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಅರೆದು ಕುಡಿಯುವುದು, ಪಿರಿಯೆಡ್ಸ್ ಹೊಟ್ಟೆನೋವಿಗೆ ಜೀರಿಗೆಯನ್ನು ನೀರಲ್ಲಿ ಕುದಿಸಿ ಕುಡಿಯೋದು, ಉಷ್ಣವಾಗಿ ಕಾಲು ಒಡೆದಿದ್ದರೆ ಅಂಗಾಲು-ನೆತ್ತಿ-ಹೊಕ್ಕಳಿಗೆ ಹರಳೆಣ್ಣೆ ಹಚ್ಚುವುದು, ಅಜೀರ್ಣದ ವಾಂತಿಗೆ ಕೊತ್ತಂಬರಿ ಸೊಪ್ಪನ್ನು ಮಜ್ಜಿಗೆಯಲ್ಲಿ ಅರೆದು ಕುಡಿಯುವುದು…ಹೀಗೆ ನಮ್ಮ ಹಿರಿಯರ ಔಷಧದ ಚೀಟಿಯಲ್ಲಿ ಇನ್ನೂ ಏನೇನೋ ಔಷಧಗಳಿವೆ. ಅಡುಗೆಮನೆ ಎಂಬ ಮೆಡಿಕಲ್ ಶಾಪ್‌ನಲ್ಲಿ ಕಾಸು ಖರ್ಚಿಲ್ಲದೆ ಎಲ್ಲವೂ ಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.