ನಗುತಾ “ನವಿತಾ” ಬಾಳೋ ನೀನು…
Team Udayavani, Nov 22, 2017, 11:26 AM IST
ಕನ್ನಡದ ಬೆಸ್ಟ್ ನ್ಯೂಸ್ ಆ್ಯಂಕರ್‌ಗಳ ಪಟ್ಟಿ ಮಾಡಹೊರಟರೆ ಅದರಲ್ಲಿ ನವಿತಾ ಜೈನ್ ಎಂಬ ಹೆಸರು ಇರಲೇ ಬೇಕು. ನ್ಯೂಸ್ 18 ಚಾನೆಲ್‌ನಲ್ಲಿ ಸುದ್ದಿ ನಿರೂಪಕಿಯಾಗಿರುವ ನವಿತಾ, ತಮ್ಮ ಧ್ವನಿ, ಭಾಷೆ ಮೇಲಿರುವ ಹಿಡಿತ, ಸ್ಪಷ್ಟವಾದ ಸುದ್ದಿ ನಿರೂಪಣೆಯಿಂದ ಹೆಸರು ಮಾಡಿರುವವರು. ನ್ಯೂಸ್ 18ನಲ್ಲಿ ಅತಿಥಿ, ಕನ್ನಡ ನಾಡಿ, ಚರ್ಚೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಈಟೀವಿ ಕನ್ನಡದಿಂದ ವೃತ್ತಿ ಆರಂಭಿಸಿದ ಇವರು ಜನಶ್ರೀ, ಸುವರ್ಣ ನ್ಯೂಸ್‌ಗಳಲ್ಲಿ ಕೂಡ ಆ್ಯಂಕರ್ ಆಗಿ ಕೆಲಸ ಮಾಡಿದ್ದಾರೆ. ಗೆಳೆಯರೊಂದಿಗೆ ಸೇರಿ “ಐಸ್‌ಕ್ರೀಮ್’ ಎಂಬ ತುಳು ಸಿನಿಮಾ ನಿರ್ಮಿಸಿದ್ದರು. ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುತ್ತಾರೆ ಬಂಟ್ವಾಳದ ಪುಟ್ಟ ಗ್ರಾಮದಿಂದ ಈ ಹುಡುಗಿ…
“ಆ್ಯಂಕರಿಂಗ್’ ತುಂಬಾ ಆಕರ್ಷಕವಾಗಿ ಕಾಣುವ ವೃತ್ತಿ. ಇದರಲ್ಲಿರುವ ಸವಾಲುಗಳೇನು?
ಎಲ್ಲರೂ ಭಾವಿಸುವುದೇನೆಂದರೆ, ಆ್ಯಂಕರಿಂಗ್ ಬಹಳಾ ಸುಲಭ. ಯಾರೋ ಬರೆದಿದ್ದನ್ನು ಓದಿದರಾಯಿತು. ಆ್ಯಂಕರ್‌ಗಳ ತಲೇಲಿ ಏನೂ ಇರುವುದಿಲ್ಲ. ಅವರದ್ದೆಲ್ಲಾ ಕೇವಲ ಥಳುಕು ಬಳುಕು ಮಾತ್ರ ಅಂತ’. ಆದರೆ ಯಾರೊ ಬರೆದಿದ್ದನ್ನು ಓದಿದ್ರೆ ಮಾತ್ರ ನಾವು ಆ್ಯಂಕರ್ ಆಗುವುದಿಲ್ಲ. ನಮ್ಮ ಶ್ರಮ ಕೂಡ ಅಷ್ಟೇ ಇರಬೇಕು. ಭಾಷೆಯ ಮೇಲೆ ಹಿಡಿತ ಇರಬೇಕು. ಪ್ರಪಂಚದ ಎಲ್ಲಾ ಭಾಗಗಳ ಸುದ್ದಿ ಬಗ್ಗೆ ಅಪ್‌ಡೇಟ್ ಆಗುತ್ತಿರಬೇಕು. ಎಲ್ಲಾ ವಿಷಯಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಬೇಕು. ಏನೂ ಜ್ಞಾನ ಇಲ್ಲದಿದ್ದರೆ ಲೈವ್‌ನಲ್ಲಿ ಸುದ್ದಿ ನಿರೂಪಣೆ ಅಥವಾ ಕಾರ್ಯಕ್ರಮ ನಿರೂಪಣೆ ಮಾಡುವಾಗ ನಾವು ಎಡವುದುಂಟು. ಎಲ್ಲಾ ಸುದ್ದಿಗಳ ಬಗ್ಗೆ ಮಾಹಿತಿ ಇರಬೇಕು ಇಲ್ಲದಿದ್ದರೆ ತಕ್ಷಣ ಬ್ರೇಕಿಂಗ್ ಬಂದರೆ ನಿಭಾಯಿಸುವುದು ಕಷ್ಟವಾಗುತ್ತದೆ. ಯಾವ ಸುದ್ದಿಗೆ ಯಾವ ರೀತಿ ಧ್ವನಿ ಮಾರ್ಪಾಡು ಮಾಡಬೇಕು ಸ್ಪಷ್ಟ ಕಲ್ಪನೆ ಇರಬೇಕು.
ಆ್ಯಂಕರ್‌ಗಳೆಂದರೆ ಗಂಭೀರ ವ್ಯಕ್ತಿಗಳು ಅಂತ ಜನ ತಿಳಿದಿರ್ತಾರೆ? ನಿಮ್ಮ ವ್ಯಕ್ತಿತ್ವ ಹೇಗಿದೆ?
ಜನರು ನ್ಯೂಸ್ ಚಾನಲ್ ಆ್ಯಂಕರ್‌ಗಳನ್ನು ನೋಡುವ ರೀತಿಯೇ ಬೇರೆ, ಮನರಂಜನೆ ಚಾನಲ್ ಆ್ಯಂಕರ್‌ಗಳನ್ನು ನೋಡುವ ರೀತಿಯೇ ಬೇರೆ. ನ್ಯೂಸ್ ಆ್ಯಂಕರ್‌ಗಳು ಅಂದ್ರೆ ತುಂಬಾ ಗಂಭೀರವಾಗಿ ಇರುವವರು. ಯಾರ ಜೊತೆಯೂ ಬೆರೆಯುವುದಿಲ್ಲ ಎಂದೆಲ್ಲಾ ಭಾವಿಸಿರುತ್ತಾರೆ. ಜೊತೆಗೆ ನಾವು ಹಾಗೇ ಇರಬೇಕು ಅಂತ ಕೂಡ ಬಯಸುತ್ತಾರೆ. ನಾವು ಸಹಜವಾಗಿ ಖುಷಿಯಾಗಿ ಇದ್ದರೆ “ಇವರು ಇಷ್ಟೇನಾ..’ ಅಂತ ಮೂಗು ಮುರಿಯುತ್ತಾರೆ. ಅಂಥ ಅಭಿಪ್ರಾಯಗಳನ್ನು ಕೇಳುವಾಗ ನನಗೆ ನಗು ಬರುತ್ತದೆ. ಕೋಟ್ ಹಾಕಿಕೊಂಡು, ಗಂಭೀರ ಮುಖಭಾವದಲ್ಲಿ ನ್ಯೂಸ್ ಓದಿದ ತಕ್ಷಣ ನಮಗೆ ವೈಯಕ್ತಿಕ ಬದುಕೇ ಇಲ್ಲ ಅಂತ ಅಲ್ಲ ಅಲ್ವಾ? ನಾವೂ ಎಲ್ಲರಂತೆ ನಕ್ಕು ನಲಿಯುತ್ತೇವೆ. ದುಃಖವಾದಾಗ ಸಪ್ಪೆ ಮೋರೆ ಹಾಕುತ್ತೇವೆ. ಎಲ್ಲವೂ ವ್ಯಕ್ತಿ ಸಹಜ ನಡುವಳಿಕೆಯೇ.
ಆರಂಭಿಕ ದಿನಗಳಲ್ಲಿ ನೀವು ಎದುರಿಸಿದ ದೊಡ್ಡ ಸವಾಲು ಯಾವುದು?
ನಾನು ಬಂಟ್ವಾಳ ಬಳಿಯ ಪಂಜಿಕಲ್ಲು ಎಂಬ ಪುಟ್ಟ ಹಳ್ಳಿಯ ಹುಡುಗಿ. ನಾನು “ಈಟೀವಿ ಕನ್ನಡ’ದಲ್ಲಿ ಕೆಲಸಕ್ಕೆ ಸೇರಿದಾಗ ಹೈದರಾಬಾದ್‌ಗೆ ಹೋಗಿ ನೆಲೆಸಬೇಕಿತ್ತು. ದೊಡ್ಡ ಸಿಟಿ, ಅದರಲ್ಲೂ ನನಗೆ ಸ್ವಲ್ಪವೂ ಗೊತ್ತಿಲ್ಲದ ಭಾಷೆ ಮಾತನಾಡುವ ಜನರ ಮಧ್ಯೆ ಬದುಕಬೇಕು. ಅಲ್ಲಿ ತೆಲುಗು, ಹಿಂದಿ ಮಾತನಾಡಬೇಕು. ನನಗೆ ಆ ಎರಡೂ ಭಾಷೆಗಳೂ ಗೊತ್ತಿರಲಿಲ್ಲ. ಯಾವುದೋ ಸ್ಟಾಪ್‌ನಲ್ಲಿ ಇಳಿಯಲು ಹೋಗಿ ನಾನು ಇನ್ಯಾವುದೋ ಸ್ಟಾಪ್‌ನಲ್ಲಿ ಇಳೀತಿದ್ದೆ. ಕೆಲಸ ಬಿಟ್ಟು ವಾಪಸ್ಸು ಊರಿಗೆ ಹೋಗುವ ಯೋಚನೆ ತುಂಬಾ ಬರ್ತಾ ಇತ್ತು. ಆದರೆ ಏನಾದರೂ ಸಾಧಿಸಿ ತೋರಿಸುವ ಹಂಬಲ ನನ್ನನ್ನು ತಡೆದು ಕೆಲಸದಲ್ಲಿ ಗಮನ ವಹಿಸುವಂತೆ ಮಾಡುತ್ತಿತ್ತು.
ಅಷ್ಟೆಲ್ಲಾ ಸಂಪ್ರದಾಯದ ಕುಟುಂಬದಲ್ಲಿ ಬೆಳೆದ ನಿಮಗೆ ಈಗಿನ ನಿಮ್ಮ ಜೀವನದ ಬಗ್ಗೆ ಏನನ್ನಿಸುತ್ತದೆ?
ನಮ್ಮದು ಪುಟ್ಟ ಹಳ್ಳಿ. ನಮ್ಮೂರಿನ ಕಡೆ ಜೈನರು ತುಂಬಾ ಸಂಪ್ರದಾಯಸ್ಥರು. ಅದರಲ್ಲೂ ಹೆಣ್ಣುಮಕ್ಕಳಿಗೆ ಬಹಳ ಕಟ್ಟುಪಾಡುಗಳಿವೆ. ಟೀವಿ, ನಟನೆ, ಸಿನಿಮಾದಲ್ಲಿ ಕಾಣಿಸಿಕೊಂಡರೆ ಕುಟುಂಬದ ಮರ್ಯಾದೆಗೆ ಧಕ್ಕೆ ಅಂತಲೇ ಭಾವಿಸುತ್ತಾರೆ. ನಾನು ತುಂಬಾ ಕಷ್ಟಪಟ್ಟಿದ್ದೀನಿ. ಬಂಟ್ವಾಳದ ಡಿಗ್ರಿ ಕಾಲೇಜಿನಲ್ಲಿ ಬಿ.ಎ. ಓದುವಾಗ ಅಲ್ಲಿ ಯಾರಿಗೂ “ಜರ್ನಲಿಸಂ’ ಅನ್ನೋ ಒಂದು ಕೋರ್ಸ್ ಇದೆ ಅಂತಲೇ ತಿಳಿದಿರಲಿಲ್ಲ. ನಮ್ಮ ಕಾಲೇಜಿನಲ್ಲಿ ಜರ್ನಲಿಸಂ ಓದಿದವರಲ್ಲಿ ನಾನೇ ಮೊದಲಿಗಳು. ಈಗ ನಮ್ಮ ಊರಿನಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ನಮ್ಮ ಊರಿನ ಹಲವು ಹುಡುಗಿಯರು “ನನಗೆ ನೀವೇ ಸ್ಫೂರ್ತಿ’ ಅಂತ ಹೇಳಿದ್ದಾರೆ. ಇನ್ನು ತುಂಬಾ ಜನ “ನಾವೂ ಜರ್ನಲಿಸಂ ಓದ್ತಾ ಇದ್ದೇವೆ. ನಿಮ್ಮಿಂದಲೇ ನಮಗೆ ಈ ಕ್ಷೇತ್ರದ ಬಗ್ಗೆ ತಿಳಿದಿದ್ದು’ ಅಂತ ಹೇಳ್ತಾರೆ. ನಾನು ಇಲ್ಲಿಯವರೆಗೂ ತಲುಪಿದ್ದೀನಾ ಅಂತ ನನಗೇ ಅಶ್ಚರ್ಯ ಆಗತ್ತೆ.
ಬೆಂಗಳೂರು ಲೈಫ್ ಹೇಗನ್ನಿಸುತ್ತೆ? ಊರಿನ ನೆನಪು ಆಗುತ್ತಾ?
ಇಲ್ಲಿ ನಾನು ಮಾವನ ಮನೆಯಲ್ಲಿ ಇದ್ದೀನಿ. ಇಲ್ಲೂ ಮನೆತುಂಬಾ ಜನರಿದ್ದೇವೆ. ನಾನು ನನ್ನ ಕಸಿನ್ಸ್ ಎಲ್ಲಾ ಒಟ್ಟಿಗೇ ಇದ್ದೇವೆ. ಸುಮಾರು 10 ಜನ ಮಕ್ಕಳೇ ಇದ್ದೇವೆ. ಹಾಗಾಗಿ ಮನೆ ನೆನಪು ಅಷ್ಟಾಗಿ ಕಾಡುವುದಿಲ್ಲ. ಕಸಿನ್ಸ್ ಎಲ್ಲಾ ಸೇರಿಕೊಂಡು ನೈಟ್‌ಔಟ್ಸ್ ಹೋಗ್ತಾ ಇರಿ¤àವಿ. ಎಲ್ಲೇ ಹೋದರೂ ಒಟ್ಟಿಗೇ ಹೋಗ್ತಿàವಿ. ವರ್ಷಕ್ಕೆ ಒಮ್ಮೆ ಪ್ರವಾಸ ಹೋಗ್ತಿàವಿ. ಮನೆಯಲ್ಲಿ ಪುಟ್ಟ ಮಕ್ಕಳೂ ಇದ್ದಾರೆ. ಅವರ ಜೊತೆ ಸಮಯ ಕಳೆಯುವುದೇ ಗೊತ್ತಾಗಲ್ಲ. ಜೊತೆಗೆ ಫ್ರೆಂಡ್ಸ್ ಜೊತೇನೂ ತುಂಬಾ ಎಂಜಾಯ್ ಮಾಡ್ತೀನಿ. ಆದ್ದರಿಂದ ಬೆಂಗಳೂರು ನನಗೆ ಯಾವತ್ತೂ ಬೇಜಾರು ಮಾಡಿಲ್ಲ.
ಇಷ್ಟೊಂದು ಸಪೂರ ಇದ್ದೀರಲ್ಲಾ, ಏನೆಲ್ಲಾ ಕಸರತ್ತು ಮಾಡ್ತೀರಾ?
ಅಯ್ಯೋ.. ನಾನು ಸ್ವಲ್ಪ ದಪ್ಪಗಾಗಬೇಕು. ಏನಾದರೂ ಟಿಪ್ಸ್ ಇದ್ರೆ ಹೇಳಿ? ನಾನು ತುಂಬಾ ಕಡಿಮೆ ತಿನ್ನುತ್ತೇನೆ. ಹಸಿವಾದರೆ ಮಾತ್ರ ನನಗೆ ತಿನ್ನಲು ನೆನಪಾಗುತ್ತೆ. ಕಷ್ಟ ಪಟ್ಟರೂ ತುಂಬಾ ತಿನ್ನಲು ಆಗುವುದಿಲ್ಲ. ಜೈನರು ರಾತ್ರಿ ಊಟ ಮಾಡುವುದಿಲ್ಲ. ಸಂಜೆ 6ರ ಒಳಗೆ ಊಟ ಮುಗಿಸುತ್ತೇವೆ. ರಾತ್ರಿ ಹಣ್ಣು ಅಥವಾ ಹಾಲು ಅಷ್ಟೇ ನಾವು ಸೇವಿಸುವುದು. ನನಗೆ ಮಗುವಾಗಿದ್ದಾಗಿನಿಂದ ಅದೇ ಅಭ್ಯಾಸ. ಈಗಲೂ ಅದನ್ನೇ ಮುಂದುವರಿಸಿದ್ದೇನೆ.
ಸಾಮಾನ್ಯವಾಗಿ ನಿಮ್ಮ ಊಟ ಹೇಗಿರುತ್ತದೆ? ನೀವೂ ಅಡುಗೆ ಮಾಡ್ತೀರಾ?
ನನಗೆ ಇಂಥದ್ದೇ ಊಟ ಬೇಕು ಅಂತ ಏನಿಲ್ಲಾ. ಗಂಜಿ ಊಟ ಆದರೂ ಸಾಕು. ಮಂಗಳೂರು ಶೈಲಿಯ ಊಟ ಇಷ್ಟ ಆಗುತ್ತೆ. ಒತ್ತು ಶಾವಿಗೆ ನನ್ನ ಫೇವರಿಟ್ ಖಾದ್ಯ. ಅದನ್ನು ನನ್ನ ಅಕ್ಕ ತುಂಬಾ ಚೆನ್ನಾಗಿ ಮಾಡ್ತಾಳೆ. ಹೈದರಾಬಾದ್‌ನಲ್ಲಿ ಇದ್ದಾಗ ನಾನೇ ಅಡುಗೆ ಮಾಡಿಕೊಳ್ಳುತ್ತದ್ದೆ. ತುಂಬಾ ಬಗೆಯ ಅಡುಗೆ ನಂಗೆ ಬರಲ್ಲ. ನೀರ್‌ದೋಸೆ, ಗಂಜಿ, ಅವಲಕ್ಕಿ ಮಾಡ್ತೀನಿ ಅಷ್ಟೇ.
ಬಿಡುವಿನ ಸಮಯದಲ್ಲಿ ಏನೇನು ಮಾಡ್ತೀರಾ?
ನನ್ನ ಅಕ್ಕನ ಮಕ್ಕಳ ಜೊತೆ ಸಮಯ ಕಳೆಯುತ್ತೇನೆ. ಪುಟ್ಟ ಮಕ್ಕಳ ಜೊತೆ ಸಮಯ ಕಳೆದರೆ ಎಷ್ಟೇ ಬೇಜಾರಿದ್ದರೂ ಮರೆತೇ ಹೋಗುತ್ತದೆ. ಅದು ಬಿಟ್ಟರೆ ಫೋನಿಗೆ ಅಂಟಿಕೊಂಡು ಇರುತ್ತೇನೆ. ಫೋನಿನಲ್ಲೇ ಸುದ್ದಿಗಳನ್ನು ಓದುತ್ತಾ, ಹೊಸ ಮಾಹಿತಿ ಕೆಲೆಹಾಕುತ್ತಾ ಫೋನನ್ನು ಸದುಪಯೋಗ ಮಾಡಿಕೊಳೆ¤àನೆ. ಬೇರೆ ಬೇರೆ ಚಾನಲ್‌ಗಳ ನ್ಯೂಸ್ ನೋಡ್ತೀನಿ.
ಕಾಲೇಜ್ ಲೈಫ್ ಹೇಗಿತ್ತು?
ಡಿಗ್ರಿಯಲ್ಲಿದ್ದಾಗ ಕೆನರಾ ಬ್ಯಾಂಕ್ ವತಿಯಿಂದ ಕೊಡುತ್ತಿದ್ದ ಆಲ್‌ರೌಂಡರ್ ಚಾಂಪಿಯನ್‌ಶಿಪ್ ಪಡೆದಿದ್ದೆ. ಎಲ್ಲಾ ಚಟುವಟಿಕೆಗಳಲ್ಲಿ ನಾನು ಸದಾ ಮುಂದೆ ಇರಿ¤ದ್ದೆ. ಡ್ಯಾನ್ಸ್, ಸ್ಕಿಟ್ಸ್, ಕ್ರೀಡೆ… ಇಂಥದ್ದು ಮಾಡಿಲ್ಲ ಅಂತಲೇ ಇಲ್ಲ. ಅಷ್ಟೊಂದು ಬ್ಯುಸಿ ಹುಡುಗಿಯಾಗಿದ್ದೆ.
ಮೇಕಪ್ ಹೇಗಿರಬೇಕು ಎಂಬ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಮೇಕಪ್ ಬಳಸಿಯೂ ತ್ವಚೆ ರಕ್ಷಣೆ ಮಾಡಿಕೊಳ್ಳುವುದು ಹೇಗೆ?
ಸ್ಟುಡಿಯೋದಲ್ಲಿ ಕ್ಯಾಮೆರಾ ಎದುರು ಹಚ್ಚು ಮೇಕಪ್ ಬೇಕಾಗುತ್ತದೆ. ಆದರೆ ಸಹಜ ಬೆಳಕಿನಲ್ಲಿ ಅಷ್ಟೆಲ್ಲಾ ಮೇಕಪ್ ಬೇಡ. ಎಲ್ಲರಿಗೂ ಹೆಚ್ಚು ಮೇಕಪ್ ಹೊಂದುವುದಿಲ್ಲ. ಆದ್ದರಿಂದ ಸಹಜವಾಗಿ ಇರಬೇಕು. ಮೇಕಪ್ ಹಾಕುವ ಮೊದಲು ನಮ್ಮ ಚರ್ಮಕ್ಕೆ ಹೊಂದುವ ಕ್ರೀಂ ಬಳಸಬೇಕು. ಡಾಕ್ಟರ್ ಬಳಿ ಕೇಳಿ ಪಡೆದರೆ ಒಳ್ಳೆಯದು. ನಾನು ಸೆಟಾಫಿಲ್ ಕ್ರೀಂ ಬಳಸುತ್ತೇನೆ. ಮೇಕಪ್ ತೆಗೆಯುವಾಗ ಆಲಿವ್ ಆಯಿಲ್ ಬಳಸಿದರೆ ಒಳ್ಳೆಯದು. ಹೆಚ್ಚು ಹೆಚ್ಚು ಹಣ್ಣು ತರಕಾರಿ ಸೇವಿಸಿಬೇಕು. ತಾಜಾ ಹಣ್ಣಿನ ರಸ ಸೇವಿಸಬೇಕು. ಒಳ್ಳೆ ಕಂಪನಿಯ ಮೇಕಪ್ ಸಾಧನ ಬಳಸಿದರೆ ತ್ವಚೆ ಮೇಲೆ ಆಗುವ ಹಾನಿ ಕಡಿಮೆ ಇರುತ್ತದೆ.
ನಿಮ್ಮ ಬ್ಯಾಗ್‌ನಲ್ಲಿ ಏನೇನಿರುತ್ತವೆ?
5 ಪುಟ್ಟ ಪುಟ್ಟ ಪರ್ಸ್ ಇರುತ್ತವೆ. ಕಾರ್ಡ್‌ಗಳು ಒಂದರಲ್ಲಿ, ಮನೆ ಕೀ ಒಂದರಲ್ಲಿ ಹೀಗೆ.. ಪರ್ಫ್ಯೂಮ್, ಸನ್‌ಗಾಸ್, ಹಣ್ಣುಗಳು ತಪ್ಪದೇ ಇರುತ್ತವೆ.
ಮಾಧ್ಯಮದಲ್ಲಿ ಕೆಲಸ ಮಾಡಲು ಬಯಸುವವರಿಗೆ ನಿಮ್ಮ ಟಿಪ್ಸ್?
ಮಾಧ್ಯಮ ಕ್ಷೇತ್ರವನ್ನು ಮೊದಲು ಅರ್ಥ ಮಾಡಿಕೊಳಿ. ಆ್ಯಂಕರಿಂಗ್ ಒಂದೇ ಇಲ್ಲಿ ವೃತ್ತಿಯಲ್ಲ. ರಿಪೋರ್ಟಿಂಗ್, ಡೆಸ್ಕ್ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿ. ಆಗ ಮಾತ್ರ ನೀವು ಉತ್ತಮ ಆ್ಯಂಕರ್ ಆಗಲು ಸಾಧ್ಯ. ಯಶಸ್ಸಿಗೆ ಅವಸರ ಬೇಡ. ಪರಿಶ್ರಮ ಇದ್ದರೆ ಯಶಸ್ಸು ಖಂಡಿತಾ ಸಿಗುತ್ತದೆ.
ಮನೆಯಲ್ಲಿ ಸುಳ್ಳು ಹೇಳಿ ಪತ್ರಿಕೋದ್ಯಮಕ್ಕೆ ಸೇರಿದ್ದೆ!
ನಮ್ಮ ಊರಿನಲ್ಲಿ ಯಾರಿಗೂ ಪತ್ರಿಕೋದ್ಯಮ ಅಂತ ಒಂದು ಕೋರ್ಸ್ ಇದೆ ಎಂದೇ ಗೊತ್ತಿರಲಿಲ್ಲ. ನನಗೆ ಈ ಬಗ್ಗೆ ನಮ್ಮ ಲೆಕ್ಚರರ್ ಒಬ್ಬರಿಂದ ಮಾಹಿತಿ ಸಿಕ್ಕಿತು. ನಮ್ಮ ಮನೆಯಲ್ಲಿ ಎಲ್ಲರೂ ಬಹಳ ಸಂಪ್ರದಾಯವಾದಿಗಳು. ಪತ್ರಿಕೆ, ಟೀವಿಯಲ್ಲಿ ಕೆಲಸ ಮಾಡುವುದೆಂದರೆ ಅಪರಾಧ ಅಂತ ಭಾವಿಸುವಂಥವರು. ನಾನೇನಾದರೂ “ಎಂಎ ಜರ್ನಲಿಸಂ’ ಮಾಡುತ್ತೇನೆ ಅಂತ ಹೇಳಿದ್ದರೆ ಖಂಡಿತಾ ಅವರು ಒಪ್ಪುತ್ತಿರಲಿಲ್ಲ. ಅದಕ್ಕೇ “ಎಂ.ಎ ಕನ್ನಡ’ ಕೋರ್ಸ್‌ಗೆ ಸೇರಿಕೊಳ್ಳುತ್ತೇನೆ ಅಂತ ಸುಳ್ಳು ಹೇಳಿದ್ದೆ. ನಾನು ಜರ್ನಲಿಸಂ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ಬರೆದಿದ್ದು, ಮೆರಿಟ್‌ನಲ್ಲಿ ಸೀಟು ಪಡೆದಿದ್ದು ಯಾವುದೂ ಮೊದಲಿಗೆ ನನ್ನ ಕುಟುಂಬದವರಿಗೆ ಗೊತ್ತಿರಲಿಲ್ಲ. ಕಾಲೇಜು ಶುರುವಾಗಿ 1 ಸೆಮಿಸ್ಟರ್ ಮುಗಿದ ಮೇಲೆ ನಾನೇ ಅವರಿಗೆ ಹೇಳಿದೆ. ಆಗ ಎಲ್ಲರಿಗೂ ಬೇಸರವಾಗಿತ್ತು.
ನನ್ನ ಪೋಷಕರು ಟೀವಿಯಲ್ಲಿ ನನ್ನನ್ನು ನೋಡುತ್ತಲೇ ಇರಲಿಲ್ಲ!
“ಎಂಎ ಜರ್ನಲಿಸಂ’ ಓದುವಾಗಲೇ “ಶ್ರೀ ಚಾನಲ್’ನಲ್ಲಿ ಸುದ್ದಿ ಓದುವುದು, ಪತ್ರಿಕೆಗಳಲ್ಲಿ ಲೇಖನ ಬರೆಯುವುದನ್ನು ಮಾಡುತ್ತಿದ್ದೆ. ಅಂತಿಮ ಸೆಮಿಸ್ಟರ್‌ನಲ್ಲಿ “ಈಟಿವಿ ಕನ್ನಡ’ ಕ್ಯಾಂಪಸ್ ಸೆಲೆಕ್ಷನ್‌ಗೆ ಅಂತ ನಮ್ಮ ಯುನಿವರ್ಸಿಟಿಗೆ ಬಂದಿತ್ತು. ನಾನು ಕ್ಯಾಂಪಸ್ ಸೆಲೆಕ್ಷನ್ ಆದೆ. ಜರ್ನಲಿಸಂ ಓದಕ್ಕೆ ವಿರೋಧ ಮಾಡಿದ ಪೋಷಕರು ನನ್ನನ್ನು ಹೈದರಾಬಾದ್‌ಗೆ ಕಳಿಸಲು ಒಪ್ಪುತ್ತಾರಾ..? ನೀನು ಅಷ್ಟು ದೂರ ಹೋಗೋದು ಬೇಡ ಅಂದ್ರು. 2 ತಿಂಗಳು ಅಲ್ಲಿ ಇಂಟರ್ನ್ಶಿಪ್ ಮಾಡಲೇಬೇಕು ಅಂತ ಮತ್ತೆ ಸುಳ್ಳು ಹೇಳಿ ಅಲ್ಲಿಗೆ ಹೋದೆ. ಹೋದಮೇಲೆ ಆ್ಯಂಕರ್ ವೃತ್ತಿಗೆ ಸೆಲೆಕ್ಟ್ ಆದೆ. ನನ್ನಿಂದ ಮನೆಯವರನ್ನು ಕನ್ವಿನ್ಸ್ ಮಾಡಲು ಆಗಲಿಲ್ಲ. ಅಲ್ಲಿದ್ದ ನಮ್ಮ ಮೇಡಂ ಒಬ್ಬರು ನನ್ನ ಪೋಷಕರ ಜೊತೆ ಮಾತನಾಡಿ ಒಪ್ಪಿಸಿದರು. ಅದಾದ ಮೇಲೆ ನಾನು ಟೀವಿಯಲ್ಲಿ ಬಂದರೆ ನನ್ನ ಪೋಷಕರು ನನ್ನನ್ನು ನೋಡುತ್ತಲೇ ಇರಲಿಲ್ಲವಂತೆ. ಆಮೇಲೆ ನೆರೆಹೊರೆಯವರು, ಸಂಬಂಧಿಕರು ನನ್ನನ್ನು ಟೀವಿಯಲ್ಲಿ ನೋಡಿ ನನ್ನ ಪೋಷಕರಿಗೆ ಹೇಳಿದ ಮೇಲೆ ಅವರು ನನ್ನನ್ನು ಟೀವಿಯಲ್ಲಿ ನೋಡಲು ಆರಂಭಿಸಿದರು. ಬಳಿಕವೇ ನನ್ನ ಕೆಲಸದ ಬಗ್ಗೆ ಅವರಿಗೆ ಗೌರವ ಮೂಡಿದ್ದು.
ನಿರ್ಭಯಾ ಪ್ರಕರಣದ ಸುದ್ದಿ ಓದುವಾಗಿ ಪಟ್ಟ ಹಿಂಸೆ ಅಷ್ಟಿಷ್ಟಲ್ಲ
ಆ್ಯಂಕರಿಂಗ್ ವೃತ್ತಿಯಲ್ಲಿ ನಮ್ಮ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಂಡು ಸುದ್ದಿ ನಿರೂಪಣೆ ಮಾಡುವುದು ತುಂಬಾ ಮುಖ್ಯ. ಅಂಥ ಭಾವನಾತ್ಮಕ ತೊಳಲಾಟವನ್ನು ನಿರ್ಭಯಾ ಪ್ರಕರಣದ ಸುದ್ದಿಗಳನ್ನು ಹ್ಯಾಂಡಲ್ ಮಾಡುವಾಗ ನಾನು ಅನುಭವಿಸಿದ್ದೇನೆ. ನಾನು ಪತ್ರಕರ್ತೆ ಇರಬಹುದು, ಯಶಸ್ವೀ ಆ್ಯಂಕರ್ ಇರಬಹುದು ಆದರೆ ನಾನೂ ಒಬ್ಬಳು ಹೆಣ್ಣೇ. ಎಂದಿನ ಆತ್ಮವಿಶ್ವಾಸದಲ್ಲಿ ನಿರ್ಭಯಾ ಪ್ರಕರಣವನ್ನು ನಿರೂಪಣೆ ಮಾಡಲು ನನಗೆ ಆಗಲಿಲ್ಲ. ಅವಳಿಗಾದ ಹಿಂಸೆಯನ್ನು ನೆನಪಿಸಿಕೊಂಡಾಗ ನನಗೆ ಅಳು ಒತ್ತರಿಸಿ ಬರುತ್ತಿತ್ತು. ಆದರೆ ಆನ್‌ಏರ್ ಅದನ್ನು ತೋರಿಸಿಕೊಳ್ಳುವಂತಿಲ್ಲ. ತುಂಬಾ ಕಷ್ಟಪಟ್ಟು ಆ ಪರಿಸ್ಥಿತಿ ನಿಭಾಯಿಸಿದ್ದೇನೆ. ಮಕ್ಕಳಿಗೆ ಏನಾದರೂ ಹಿಂಸೆಯಾದ ಸುದ್ದಿಗಳಿದ್ದರೂ ನಾನು ವಿಚಲಿತಳಾಗುತ್ತೇನೆ. ಪರದೆ ಮೇಲೆ ತೋರಿಸಿಕೊಳ್ಳದೇ ಹ್ಯಾಂಡಲ್ ಮಾಡಬೇಕಾದಂಥ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತೇನೆ.
-ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.