ಸುದ್ದಿಯಾಗದ ಸಾಧಕಿಯರು
Team Udayavani, Mar 4, 2020, 5:44 AM IST
ಕಲ್ಪನಾ ಚಾವ್ಲ, ಪಿ.ವಿ. ಸಿಂಧು, ಮಿಥಾಲಿ ರಾಜ್, ಮೇರಿ ಕೋಮ್, …ಹೀಗೆ, ಸುದ್ದಿ ಮಾಡಿದ ಸಾಧಕಿಯರ ಪಟ್ಟಿ ದೊಡ್ಡದೇ ಇದೆ. ಹಾಗೇ, ನಮ್ಮ ನಡುವೆಯೂ ಸದ್ದಿಲ್ಲದೆ, ಸುದ್ದಿಯಾಗದೆ ಇರುವ ಸಾಧಕಿಯರಿದ್ದಾರೆ. ದೈಹಿಕ ನ್ಯೂನತೆ, ಬಡತನದ ಸವಾಲುಗಳನ್ನು ಎದುರಿಸಿ, ಚಂದದ ಬದುಕು ಕಟ್ಟಿಕೊಂಡವರಿದ್ದಾರೆ. ನಮ್ಮ ನಿತ್ಯ ಬದುಕಿನ “ಇಲ್ಲ’ಗಳನ್ನು, ಜಂಜಾಟಗಳನ್ನು ಎದುರಿಸುವ ಸ್ಫೂರ್ತಿ ಸೆಲೆಯೊಂದು ಇವರಿಂದಲೂ ಸಿಗಬಹುದು…
ಬಡತನ ಮೆಟ್ಟಿ ನಿಂತ ಛಲಗಾತಿ
-ಬಸಮ್ಮ ಭಜಂತ್ರಿ
ಸಾಧನೆಗೆ ಬಡತನ, ಸಿರಿತನ ಎಂಬ ಚೌಕಟ್ಟುಗಳಿಲ್ಲ. ಯಾರು ತಮ್ಮಲ್ಲಿರುವ ಪ್ರತಿಭೆಯನ್ನು ಶ್ರದ್ಧೆಯಿಂದ ಪೋಷಿಸುತ್ತಾರೋ, ಅವರಿಗೆ ಗೆಲುವು ಸಿಗುತ್ತದೆ ಎಂಬ ಮಾತಿಗೆ ಅನ್ವರ್ಥವಾಗಿರುವವರು ನೀಲಮ್ಮ ಮಲ್ಲಿಗವಾಡ. ಗದಗ ತಾಲೂಕಿನ ನೀಲಗುಂದ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ನೀಲಮ್ಮ, ಸೈಕ್ಲಿಸ್ಟ್ ಆಗಲು ಬಹಳಷ್ಟು ಸೈಕಲ್ ಹೊಡೆದಿದ್ದಾರೆ.
8ನೇ ತರಗತಿಯಲ್ಲಿದ್ದಾಗ ನೀಲಗುಂದದಲ್ಲಿ ನಡೆದ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸಿ, ಸೋತ ನೀಲಮ್ಮನಿಗೆ, ಸೈಕಲ್ ಮೇಲೆ ಪ್ರೀತಿಯಾಗಿತ್ತು.
ಜೀತಕ್ಕೆ ಸೇರಿ, ಸೈಕಲ್ ಕೊಡಿಸಿದರು ಆದರೆ, ನೀಲಮ್ಮನಿಗೆ ದುಬಾರಿ ಸೈಕಲ್ ಕೊಡಿಸಿ, ತರಬೇತಿ, ಸ್ಪರ್ಧೆಗಳಿಗೆ ಕಳಿಸುವಷ್ಟು ಆರ್ಥಿಕ ಸಾಮರ್ಥ್ಯ ಆಕೆಯ ಕುಟುಂಬಕ್ಕೆ ಇರಲಿಲ್ಲ. ಐದು ಜನರಿದ್ದ ಕುಟುಂಬಕ್ಕೆ, ತಂದೆ ಮಾರುತಿ, ತಾಯಿ ಕಸ್ತೂರಿ ಸಂಪಾದಿಸುವ ಕೂಲಿ ಹಣವೇ ಆಧಾರ. ಆದರೂ, ಮಗಳಲ್ಲಿನ ಪ್ರತಿಭೆಗೆ ಬಡತನ ಅಡ್ಡಿಯಾಗಬಾರದೆಂದು ಮಾರುತಿ, ಶ್ರೀಮಂತರೊಬ್ಬರ ಮನೆಯಲ್ಲಿ ಜೀತಕ್ಕೆ ಸೇರಿದರು. ಅದರಿಂದ ಸಿಕ್ಕ 10 ಸಾವಿರ ರೂ.ಗಳಿಂದ ಮಗಳಿಗೆ ಸೈಕಲ್ ಕೊಡಿಸಿದರು. ದೈಹಿಕ ಶಿಕ್ಷಕ ಕಣಕೆ ಹಾಗೂ ಉಮ್ಮಣ್ಣವರ ನೆರವಿನಿಂದ, ಮಗಳನ್ನು ಲಕ್ಷ್ಮೇಶ್ವರದ ಸೈಕ್ಲಿಂಗ್ ತರಬೇತಿ ಶಿಬಿರಕ್ಕೆ ಸೇರಿದರು. ತರಬೇತಿಯಲ್ಲೇ ಅಪಾರ ಪ್ರತಿಭೆ ಪ್ರದರ್ಶಿಸಿ, ಎಲ್ಲರ ಗಮನ ಸೆಳೆದ ನೀಲಮ್ಮ, ಅಂತಾರಾಷ್ಟ್ರೀಯ ತರಬೇತುದಾರ ಚಂದ್ರ ಕುರಣಿ ಹಾಗೂ ಶ್ರೀಶೈಲ ಕುರಣಿ ಮಾರ್ಗದರ್ಶನದಂತೆ 1999ರಲ್ಲಿ ವಿಜಯಪುರ ಸೈಕ್ಲಿಂಗ್ ಕ್ರೀಡಾ ವಸತಿ ನಿಲಯಕ್ಕೆ ಸೇರಿದರು.
ಉಪವಾಸ ಇರಬೇಕಾಯ್ತು
ನೀಲಮ್ಮ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ, ಭೋಪಾಲ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ಅವರ ಬದುಕಿನ ಮರೆಯಲಾಗದ ಸ್ಪರ್ಧೆಯಂತೆ. ಯಾಕಂದ್ರೆ, ಭೋಪಾಲ್‌ಗೆ ಮುಂಗಡವಾಗಿ ಬುಕ್ ಮಾಡಿದ್ದ ರೈಲ್ವೆ ಟಿಕೆಟ್ ಕಾರಣಾಂತರಗಳಿಂದ ರದ್ದಾಗಿತ್ತು. ಖರ್ಚಿಗೆಂದು ಅಪ್ಪ ಕೊಟ್ಟ 500 ರೂ. ಬಿಟ್ಟರೆ ಅವರ ಬಳಿ ಬೇರೇನೂ ಇರಲಿಲ್ಲ. ವಿಧಿ ಇಲ್ಲದೆ, ಅದೇ ರೈಲಿನಲ್ಲಿ ಪ್ರಯಾಣ ಮಾಡಿ, 500 ರೂ.ಗಳನ್ನು ಟಿಕೆಟ್ ಚೆಕ್ಕಿಂಗ್ ವೇಳೆ ನೀಡಿದರು. ಉಪವಾಸವೇ ಇದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ, ಅವರಿಗೆ ಎರಡನೇ ಸ್ಥಾನ ಸಿಕ್ಕಿತ್ತು!
ರೈಲ್ವೆಯಲ್ಲಿ ಸೀನಿಯರ್ ಕ್ಲರ್ಕ್
ನೀಲಮ್ಮ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕ್ರೀಡಾ ಕೋಟಾದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ 2 ವರ್ಷ ದುಡಿದು, ಈಗ ರೈಲ್ವೆಯಲ್ಲಿ ಸೀನಿಯರ್ ಕ್ಲರ್ಕ್ ಆಗಿದ್ದಾರೆ. ಜೊತೆಜೊತೆಗೇ ಸೈಕ್ಲಿಂಗ್ ತರಬೇತಿಯೂ ನಡೆಯುತ್ತಿದೆ. ಹೆತ್ತವರು, ಗಂಡ, ಸಹೋದರನ ಪ್ರೋತ್ಸಾಹದಿಂದ ಇದೆಲ್ಲಾ ಸಾಧ್ಯವಾಯಿತು ಎನ್ನುತ್ತಾರೆ ನೀಲಮ್ಮ.
ಅರಸಿ ಬಂದ ಪ್ರಶಸ್ತಿಗಳು:
ಕರ್ನಾಟಕ ಒಲಿಂಪಿಕ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಿತ್ತೂರು ಚನ್ನಮ್ಮ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಸೇರಿಂದ ವಿವಿಧ ಸಂಘ, ಸಂಸ್ಥೆಗಳು ಹಲವು ಪ್ರಶಸ್ತಿಗಳು ನೀಲಮ್ಮ ಅವರಿಗೆ ಸಂದಿವೆ.
ಜೈ ಭುವನೇಶ್ವರಿ
– ಶ್ರೀನಾಥ ಮರಕುಂಬಿ
ಒಂದು ಕ್ಷಣ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಇಡೀ ಜಗತ್ತೇ ಕಪ್ಪು ಕಪ್ಪು ಅನ್ನಿಸುತ್ತೆ ಅಲ್ವಾ? ಅಂಥ ಅಂಧಕಾರದ ಜಗತ್ತನ್ನು ತಲುಪುವ ಕ್ಷೀಣ ಬೆಳಕಿನ ಆಸರೆಯಲ್ಲೇ ಬದುಕುತ್ತಿರುವವರು ಬಳ್ಳಾರಿ ಜಿಲ್ಲೆ, ಹೊಸಪೇಟೆಯ ಭುವನೇಶ್ವರಿ. ಎರಡೂ ಕಣ್ಣುಗಳ ಶೇ.80ರಷ್ಟು ದೃಷ್ಟಿ ಕಳೆದುಕೊಂಡದಿದ್ದರೂ, ನನಗೇನೂ ಕಮ್ಮಿಯಿಲ್ಲ ಎಂಬಂತೆ ಬದುಕುತ್ತಿರುವ ಅವರು ನಮಗೆಲ್ಲ ಮಾದರಿ.
ನಾಲ್ಕನೇ ತರಗತಿಯಲ್ಲಿದ್ದಾಗ, ಅವರ ಕಣ್ಣಿನ ರೆಟಿನಾದಲ್ಲಿ ರಕ್ತ ಸಂಚಾರ ಸ್ಥಗಿತಗೊಂಡಿತು. ವೈದ್ಯರು, “ಮುಕ್ಕಾಲು ಪಾಲು ದೃಷ್ಟಿ ಹೋಗಿದೆ’ ಎಂದುಬಿಟ್ಟರು. ಅಷ್ಟೋ ಇಷ್ಟೋ ಕಂಡ ಬೆಳಕಿನಲ್ಲಿಯೇ, ಕನಸುಗಳನ್ನು ಹೊಸೆಯತೊಡಗಿದರು ಭುವನೇಶ್ವರಿ. ಕಷ್ಟಪಟ್ಟು ಎಂ.ಎ ಕನ್ನಡ, ಯೋಗದಲ್ಲಿ ಎಂಎಸ್ಸಿ ಹಾಗೂ ಬಿ.ಎಡ್ ಪೂರೈಸಿದರು. ಅಷ್ಟೇ ಅಲ್ಲ, ಚಿತ್ರಕಲೆ, ಹಾಡು, ನಟನೆ, ಚರ್ಚೆ, ಮುಂತಾದ ಚಟುವಟಿಕೆಗಳಲ್ಲೂ ಪರಿಣತಿ ಪಡೆದರು.
ಪ್ರಶಸ್ತಿಗಳು ಸಂದಿವೆ
2009ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ನಡೆಸಿದ ರಾಜ್ಯಮಟ್ಟದ ಅಂತರ್ ಕಾಲೇಜು ನಾಟಕ ಸ್ಫರ್ಧೆಯಲ್ಲಿ ಅತ್ಯುತ್ತಮ ಮಹಿಳಾ ತಂಡದ ನಾಯಕಿ ಪ್ರಶಸ್ತಿ, ಶಂಕರ್‌ನಾಗ್ ಪಾರಿತೋಷಕ, 2016ರಲ್ಲಿ ದೆಹಲಿಯಲ್ಲಿ ನಡೆದ ಇಂಡಿಯನ್ ಬ್ಲೆ„ಂಡ್ ಅಸೋಸಿಯೇಷನ್‌ನ ರಾಷ್ಟ್ರೀಯ ಮಟ್ಟದ ಶಾಟ್‌ಪುಟ್ ಎಸೆತ ಹಾಗೂ ಜಾವೆಲಿನ್ ಎಸೆತದಲ್ಲಿ 3ನೇ ಸ್ಥಾನ ಪಡೆದಿದ್ದಾರೆ.
ಕಲಿತೇ ತೀರುವೆ
ಕೆಲ ವರ್ಷಗಳ ಹಿಂದಷ್ಟೇ ತಂದೆಯನ್ನು ಕಳೆದುಕೊಂಡ ಭುನೇಶ್ವರಿ ಅವರಿಗೆ, ಚಿಕ್ಕಪ್ಪ ರಾಮಣ್ಣನವರ ಸಹಕಾರವಿದೆ. ಸದ್ಯ ಬೆಂಗಳೂರು ಚಿತ್ರಕಲಾ ಪರಿಷತ್‌ನ ಪದಾಧಿಕಾರಿ ಶಿವಕುಮಾರ್ ಮಾರ್ಗದರ್ಶನದಲ್ಲಿ, ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದಾರೆ ಇವರು. ಕಣ್ಣಿಲ್ಲದ ಕೊರತೆಯನ್ನೂ ಮೀರಿ, ಬಿಳಿ ಹಾಳೆ ಮೇಲೆ ಬಣ್ಣದ ಚಿತ್ತಾರ ಮೂಡಿಸಬಲ್ಲರು. ಎಲ್ಲಾ ಬಗೆಯ ಡ್ರಾಯಿಂಗ್, ಪೇಂಟಿಂಗ್‌ಗಳನ್ನು ಕಲಿತೇ ತೀರುತ್ತೇನೆ ಎಂಬ ಛಲ ಅವದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.