ಪ್ರಪಂಚಕ್ಕೊಬ್ಳೇ ಪದ್ಮಾವತಿ!
Team Udayavani, Oct 25, 2017, 12:01 PM IST
“ಸಾರೇ ಸಂಸಾರ್ ಮೆ ಹಮಾರೀ ಪದ್ಮಾವತಿ ಜೈಸೀ ರಾಣಿ ಕೋಯೀ ನಹೀ ಹೈ’ ರಾಜಸ್ತಾನಿ ಲಾವಣಿಕಾರ ಪರವಶನಾಗಿ ಹಾಡುತ್ತಿದ್ದ. ಬಣ್ಣದ ಪಗಡಿ ತೊಟ್ಟ ಆತನ ಹಾಡಿನಲ್ಲಿ ಹೆಮ್ಮೆ ಮತ್ತು ವಿಷಾದ ಮಿಳಿತವಾಗಿತ್ತು. ರಾಜಸ್ತಾನದ ಚಿತ್ತೂರಿನಲ್ಲಿ ಪದ್ಮಾವತಿ ಮಹಲ್ ಎಂಬ ಮೂರು ಅಂತಸ್ತಿನ ಕೆರೆ ಮಧ್ಯದ ಬಿಳಿಯ ಪುಟ್ಟ ಅರಮನೆ.
ಅಲ್ಲಿನ ಮೆಟ್ಟಿಲ ಮೇಲೆ ಕುಳಿತು ಮಹಲಿನ ರಾಣಿ ಪದ್ಮಾವತಿಯ ಚರಿತ್ರೆಯನ್ನು ಅಲ್ಲಿಯವರೇ ಆದ ಗೈಡ್ ಮಾಧವ್ ಜೀ ವಿವರಿಸತೊಡಗಿದರು. ರಾಜಸ್ತಾನದ ಮೇವಾಡದ ರಾಜಧಾನಿಯಾಗಿದ್ದ ಚಿತ್ತೂರು, ಅಭೇದ್ಯವಾದ ಕೋಟೆಯಿಂದ ಅಜೇಯವಾಗಿತ್ತು. 13- 14ನೇ ಶತಮಾನದಲ್ಲಿ ಮೇವಾಡದ ರಾಜನಾಗಿದ್ದ ರಾಣಾ ರತ್ನಸಿಂಹನ ರಾಣಿಯೇ ಪದ್ಮಾವತಿ ಅಥವಾ ಪದ್ಮಿನಿ!
ಪದ್ಮಾವತಿ ಎಲ್ಲಿಯವಳು?
ಆ ಬಗ್ಗೆ ಸ್ಪಷ್ಟತೆ ಇಲ್ಲ. ಇಷ್ಟಕ್ಕೂ ಪದ್ಮಾವತಿಯ ಮೊದಲ ಪ್ರಸ್ತಾಪ ಬರುವುದು ಸೂಫಿ ಕವಿ ಮಲ್ಲಿಕ್ ಮುಹಮದ್ ಜಯಾಸಿಯ 1540 “ಪದ್ಮಾವತ’ ಎಂಬ ಅವಧಿ ಭಾಷೆಯ ಕಥನಕಾವ್ಯದಲ್ಲಿ. ಅದಕ್ಕೆ ಮೊದಲು ಎಲ್ಲೂ ಪದ್ಮಾವತಿಯ ಉಲ್ಲೇಖವಿಲ್ಲ. ಒಂದು ವಾದದ ಪ್ರಕಾರ ಆಕೆ ಸಿಂಹಳ ಅಂದರೆ ಈಗಿನ ಶ್ರೀಲಂಕಾದವಳು. ಉತ್ತರಪ್ರದೇಶದವಳು ಎಂದೂ ಕೆಲವರು ಹೇಳುತ್ತಾರೆ.
ಆ ಬಗ್ಗೆ ಇನ್ನೂ ಗೊಂದಲವಿದೆ. ಆ ಬಗ್ಗೆ ಮಾತ್ರವೇನು ಪದ್ಮಾವತಿ ಇದ್ದಳೆ ಎನ್ನುವ ಬಗ್ಗೆಯೇ ಗೊಂದಲವಿದೆ. ಅದೇನೇ ಇರಲಿ. ರಾಜಕುಮಾರಿ ಪದ್ಮಾವತಿಯ ಸೌಂದರ್ಯ ದೇವಲೋಕದ ಅಪ್ಸರೆಯರೂ ನಾಚುವಂತಿತ್ತು. ಆಕೆ ಎಷ್ಟು ಬೆಳ್ಳಗಿದ್ದಳೆಂದರೆ ನೀರು ಕುಡಿದಾಗ ಅದು ಗಂಟಲ ಮೂಲಕ ಚಲಿಸುವುದು ಮತ್ತು ಊಟದ ನಂತರ ಪಾನ್ ತಿಂದರೆ ಆ ರಸದಿಂದ ಕತ್ತಿಡೀ ಕೆಂಪಾಗುತ್ತಿತ್ತು ಎಂದು ಹಾಡಿನಲ್ಲಿದೆಯಂತೆ!
ಟೆಲಿಫೋನು ಇಲ್ಲದ ಕಾಲದಲ್ಲಿ ಪರಿಚಯವಾಗಿದ್ದು ಹೇಗೆ ಗೊತ್ತಾ?
ಎಲ್ಲಿಯ ರಾಣಾ ರತ್ನಸಿಂಹ, ಎಲ್ಲಿಯ ರಾಣಿ ಪದ್ಮಾವತಿ! ಟೆಲಿಫೋನು, ಟಿ.ವಿ ಏನೊಂದೂ ಇಲ್ಲದ ಕಾಲದಲ್ಲಿ ರಾಜನಿಗೆ ಪದ್ಮಾವತಿಯ ಪರಿಚಯವಾಗಿದ್ದು ಹೇಗೆ ಗೊತ್ತಾ? ಒಂದು ಗಿಣಿಯಿಂದ ರಾಜಕುಮಾರಿ ಬಳಿ ಇದ್ದ ಆ ಗಿಣಿಗೆ ಒಂದು ವಿಶೇಷ ಶಕ್ತಿ ಇತ್ತು. ಅದು ಮನುಷ್ಯರಂತೆ ಮಾತನಾಡುತ್ತಿತ್ತು. ಆ ಗಿಣಿ ಬೇಟೆಗಾರನ ಕೈಗೆ ಸಿಕ್ಕು, ಆಮೇಲೆ ವ್ಯಾಪಾರಿ ಕೈಗೆ ಸಿಕ್ಕು ಸಾಗರ ದಾಟಿ ಕೈ ಬದಲಾಗುತ್ತಾ ಅದು ಹೇಗೋ ರಾಜನನ್ನು ತಲುಪಿತು.
ರಾಜನ ಸಾಂಗತ್ಯವನ್ನು ಸಂಪಾದಿಸಿದ ಗಿಣಿ ತನ್ನ ರಾಣಿ ಪದ್ಮಾವತಿಯ ಸೌಂದರ್ಯವನ್ನು ವರ್ಣಿಸಿತು. ಬರೀ ವರ್ಣನೆ ಕೇಳಿಯೇ ರಾಜ ಮನಸೋತುಬಿಟ್ಟಿದ್ದ. ಇದುವರೆಗೆ ತಾನು ಜನ್ಮದಲ್ಲಿ ನೋಡದಿದ್ದ ಪದ್ಮಾವತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಾದ. ಆ ಗಿಣಿಯ ವರ್ಣನೆ ಹೇಗಿದ್ದಿರಬಹುದು ಊಹಿಸಿ! ಆ ಗಿಳಿಯ ಮಾರ್ಗದರ್ಶನದಂತೆ ಏಳು ಸಾಗರ ದಾಟಿ ಸಿಂಹಳ ತಲುಪಿ ಯುದ್ಧ ಮಾಡಿ ಪದ್ಮಾವತಿಯನ್ನು ವರಿಸಿದ. ಅಂತೂ ಪದ್ಮಾವತಿ ಪರಿಣಯದ ಸಾರಥ್ಯ ಗಿಳಿಯದ್ದು!
ಸ್ವಂತದವರಿಂದಲೇ ಮೋಸ
ಪದ್ಮಾವತಿಗೆ ಸವತಿ ನಾಗಮತಿಯ ಕಾಟವಿದ್ದರೂ ರಾಜನ ಪ್ರೀತಿಯಲ್ಲಿ ಸುಖವಾಗಿದ್ದಳು. ಆದರೆ ತೊಂದರೆ ಬಂದದ್ದು ಆಸ್ಥಾನದಲ್ಲಿದ್ದ ರಾಘವ ಚೇತನ ಎಂಬ ಕಲಾವಿದನಿಂದ. ಒಮ್ಮೆ ಆತ ಮಾಟ- ಮಂತ್ರ ಮಾಡಿರುವ ವಿಷಯ ರಾಜನಿಗೆ ಗೊತ್ತಾಗಿ ಆತನನ್ನು ಗಡೀಪಾರು ಮಾಡಿದ. ಅಪಮಾನಿತನಾದ ರಾಘವ ಸೇಡು ತೀರಿಸಿಕೊಳ್ಳಲು ಕಾಮುಕನಾಗಿದ್ದ ದಿಲ್ಲಿಯ ಸುಲ್ತಾನ ಅಲ್ಲಾವುದ್ದೀನ್ ಖೀಲ್ಜಿಯ ಬಳಿ ಹೋಗಿ ಆತನೆದುರು ರಾಣಿ ಪದ್ಮಾವತಿಯನ್ನು ವರ್ಣಿಸಿದ.
ಕೂಡಲೇ ಸುಲ್ತಾನ ಮೇವಾಡಕ್ಕೆ ಮುತ್ತಿಗೆ ಹಾಕಿದ. ಆದರದು ಸುಲಭಸಾಧ್ಯವಾಗಿರಲಿಲ್ಲ. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಉದ್ದೇಶದಿಂದ ಕುತಂತ್ರಿಯಾದ ಸುಲ್ತಾನ, ‘ತಂಗಿ ಪದ್ಮಾವತಿಯನ್ನು ನೋಡುವ ಮನಸ್ಸಾಗಿದೆ. ಅರಮನೆಯಲ್ಲಿ ಭೇಟಿಯಾಗಬಹುದೇ?’ ಎಂಬ ಸಂದೇಶ ಕಳುಹಿಸಿದ. ವೀರ ರಜಪೂತ, ರತ್ನಸಿಂಹ ‘ತಂಗಿಯ ಭೇಟಿಗೆ ಅಣ್ಣನಿಗೆ ಅನುಮತಿಯ ಅಗತ್ಯವಿಲ್ಲ’ ಎಂಬ ಉತ್ತರ ಕಳಿಸಿದ. ಅದೇ ಚಿತ್ತೂರಿಗೆ- ಪದ್ಮಾವತಿಗೆ ಮುಳುವಾಯಿತು.
ತಂಗಿ ಎಂದು ಕರೆದವ ದ್ರೋಹ ಬಗೆದ
ಅಣ್ಣನಂತೆ ನಾಟಕವಾಡಿ ತಂಗಿಯ ಭೇಟಿಯ ನೆಪ ಮಾಡಿ ತನ್ನ ಸೈನಿಕರೊಂದಿಗೆ ಒಳಹೊಕ್ಕ ಸುಲ್ತಾನ ಕೋಟೆಯ ರಹಸ್ಯ ಮಾರ್ಗಗಳನ್ನು ಅರಿತುಕೊಂಡ. ಆದರೆ ಸುಲ್ತಾನನ ಸ್ವಭಾವದ ಬಗ್ಗೆ ಸಂಶಯವಿದ್ದ ಪದ್ಮಾವತಿ ಆತನನ್ನು ಖುದ್ದಾಗಿ ಭೇಟಿಯಾಗಲು ಒಪ್ಪಲಿಲ್ಲ; ಕೇವಲ ಕನ್ನಡಿಯಲ್ಲಿ ಮುಖ ತೋರಿಸುವುದಾಗಿ ತಿಳಿಸಿದಳು. ಕನ್ನಡಿಯಲ್ಲಿ ಕಂಡ ಪದ್ಮಾವತಿಯ ಕ್ಷಣಮಾತ್ರದ ದರ್ಶನದಿಂದ ಸುಲ್ತಾನನಿಗೆ ಕಾಮದಾಸೆ ಕೆರಳಿತು. ಮರಳಿ ಬರುವಾಗ ಬಿಡಲು ಬಂದ ಮುಗ್ಧ ರತ್ನಸಿಂಹನನ್ನು ಸೆರೆಹಿಡಿದ. ರಾಜನನ್ನು ಬಿಡುಗಡೆ ಮಾಡಲು ಪದ್ಮಾವತಿ ತನಗೆ ಸಿಗಬೇಕು ಇಲ್ಲದಿದ್ದಲ್ಲಿ ಆತನನ್ನು ಕೊಲ್ಲಿಸುವುದಾಗಿ ಷರತ್ತು ವಿಧಿಸಿದ.
ಬುದ್ಧಿವಂತೆ ಪದ್ಮಾವತಿ
ಬುದ್ಧಿವಂತೆ ಪದ್ಮಾವತಿ ಸುಲ್ತಾನನ ಷರತ್ತಿಗೆ ಒಪ್ಪಿಗೆ ಸೂಚಿಸಿದಳು. ನಿಗದಿತ ದಿನದಂದು ರಾಣಿ ತನ್ನ 500 ಸಖೀಯರೊಂದಿಗೆ ಪಲ್ಲಕ್ಕಿಯಲ್ಲಿ ಕುಳಿತು ಬರುವುದಾಗಿ ತಿಳಿಸಿದಳು. ವಾಸ್ತವದಲ್ಲಿ ಪಲ್ಲಕ್ಕಿಯಲ್ಲಿದ್ದದ್ದು ಮಾರುವೇಷದ ಸೈನಿಕರು. ಸುಲ್ತಾನನ ಶಿಬಿರ ತಲುಪಿದೊಡನೆ ಸೈನಿಕರು ಆಕ್ರಮಣ ನಡೆಸಿದರು. ಸಾವು- ನೋವು ಸಂಭವಿಸಿದರೂ ರತ್ನಸಿಂಹ ಸುರಕ್ಷಿತವಾಗಿ ಪಾರಾಗಿ ಅರಮನೆ ಸೇರಿದ. ಅನಿರೀಕ್ಷಿತವಾದ ಈ ಘಟನೆಯಿಂದ ಕ್ರೋಧಿತನಾದ ಸುಲ್ತಾನ ಅತಿ ದೊಡ್ಡ ಸೈನ್ಯದೊಡನೆ ಮೇವಾಡದ ಮೇಲೆ ದಾಳಿ ನಡೆಸಿದ. ಏಳು ತಿಂಗಳ ಕಾಲ ಸತತ ದಾಳಿ ನಡೆಯಿತು.
ಸೋಲು ಬಾಗಿಲು ತಟ್ಟಿತ್ತು!
ಚಿತ್ತೂರಿನ ಕೋಟೆಯೊಳಗೆ ಆಹಾರದ ಸರಬರಾಜು ಕಡಿಮೆಯಾಗುತ್ತಾ ಬಂತು. ಸೈನಿಕರ ಸಂಖ್ಯೆಯೂ ಕ್ಷೀಣಿಸಿತು. ಸೋಲಿಗೆ ಸನಿಹದಲ್ಲಿತ್ತು. ಸೋಲು- ಗೆಲುವಿಗೆ ಹೆದರುವವರಲ್ಲ ರಜಪೂತರು, ಆದರೆ ಮಾನಹಾನಿ? ಕೂಡಲೆ ರಾಣಿ ಪದ್ಮಾವತಿ ಜೌಹರ್ ಕೈಗೊಳ್ಳುವ ನಿರ್ಣಯಕ್ಕೆ ಬಂದಳು. ಅರಮನೆಯೊಳಗೆ ಉರಿಯುವ ದೊಡ್ಡ ಕುಂಡ ಸಿದ್ಧವಾಯಿತು. ನವವಧುವಿನ ರೀತಿಯಲ್ಲಿ ಸಾಲಂಕೃತಳಾಗಿ ಗಂಭೀರವದನೆ ರಾಣಿ ಪದ್ಮಾವತಿ ದಿಟ್ಟವಾಗಿ ನಡೆದುಬಂದಳು. ಧಗಧಗಿಸುವ ಅಗ್ನಿಕುಂಡಕ್ಕೆ ಕೈಮುಗಿದು ಹಾರಿದಳು. ಅವಳೊಂದಿಗೇ ಹದಿನಾರು ಸಾವಿರ ಮಹಿಳೆಯರು ಜೌಹರ್ ಕೈಗೊಂಡರು.
ಇತ್ತ ಪ್ರಾಣದ ಹಂಗು ತೊರೆದ ರಜಪೂತ ಯೋಧರು ತಮ್ಮ ಪತ್ನಿಯರ ಅಸ್ಥಿಯ ಬೂದಿಯನ್ನು ಹಣೆಗಿಟ್ಟು ಬಾಯಲ್ಲಿ ತುಳಸಿದಳ ಹಾಕಿ ರಣರಂಗದಲ್ಲಿ ವೀರಾವೇಶದಿಂದ ಹೋರಾಡಿ ವೀರಮರಣವನ್ನಪ್ಪಿದರು. ವಿಜಯೋತ್ಸಾಹದ ಉನ್ಮಾದದಲ್ಲಿ ಕೋಟೆ ಪ್ರವೇಶಿಸಿದ ಸುಲ್ತಾನ ಮತ್ತು ಸೈನಿಕರನ್ನು ಸ್ವಾಗತಿಸಿದ್ದು ಉರಿವ ಬೆಂಕಿ ಮತ್ತು ಬೂದಿ! ಪದ್ಮಾವತಿಯಿಲ್ಲದ ಚಿತ್ತೂರು ಕೋಟೆ 1303ರ ಆಗಸ್ಟ್ 26ರಂದು ದಿಲ್ಲಿ ಸುಲ್ತಾನನ ಕೈವಶವಾಯಿತು.
ಇದಲ್ಲದೇ ಚರಿತ್ರೆಯಲ್ಲಿ ಮೂರು ಸಾಮೂಹಿಕ ಜೌಹರ್‌ಗಳು ನಡೆದು ಕೆಂಪಾದ ಭೂಮಿ ಇದು. ರಾಣಿ ಪದ್ಮಾವತಿಯ ನೇತೃತ್ವದಲ್ಲಿ ನಡೆದದ್ದು ಮೊದಲನೆಯದ್ದು ಎನ್ನುತ್ತಾ ಹನಿಗಣ್ಣಾದರು ಗೈಡ್ ಮಾಧವ್ ಜೀ.ಅಲ್ಲಿಗೆ ಹಾಡು-ಕತೆ ಮುಗಿದಿತ್ತು; ಆದರೆ ಮಹಲಿನ ಜಾಲಂಧ್ರಗಳ ಹಿಂದೆ ಬಿಕ್ಕುವ ಸದ್ದು, ಕಿರಿದಾದ ಸುರಂಗಗಳಲ್ಲಿ ದೀರ್ಘ ನಿಟ್ಟುಸಿರು, ಬಾವಿಯಂಥ ಕುಂಡಗಳಲ್ಲಿ ಹಸಿ ಮೈ- ಮನ ಉರಿವ ಚಟಪಟ ಸದ್ದು ಮಾತ್ರ ಕಿವಿಗೆ ಅಪ್ಪಳಿಸುತ್ತಿತ್ತು. ಯುದ್ಧ, ಕ್ರೌರ್ಯ, ಕಾಮದ ಬೆಂಕಿಯಲ್ಲಿ ಬೆಂದ- ನೊಂದ ಸಾವಿರಾರು ಪದ್ಮಾವತಿಯರು ಕಣ್ಮುಂದೆ ಸುಳಿದರು!
ಊಹಾಪೋಹಗಳು
ಪದ್ಮಾವತಿ ಸಿಂಹಳದವಳಲ್ಲ, ರಾಜಸ್ತಾನದ ಜೈಸಲ್ಮೇರ್ ಪ್ರದೇಶದವಳು.ಇಲ್ಲಿನ ಮಹಿಳೆಯರು ಪದ್ಮಾವತಿಯಂತೆ ಎತ್ತರದ ನಿಲುವು, ಬಿಳಿ ಬಣ್ಣ, ಉದ್ದ ಮೂಗಿನ ಚತುರೆಯರು. ಪದ್ಮಿನಿ ಮತ್ತು ಪದ್ಮಾವತಿ ಇಬ್ಬರೂ ಬೇರೆಯೇ. ಉತ್ತರಪ್ರದೇಶದಲ್ಲೂ ಈ ಹೆಸರಿನ ರಾಣಿ ಇದ್ದಿರುವ ಸಾಧ್ಯತೆ ಇದೆ. ಪದ್ಮಾವತಿ ವಾಸ್ತವದಲ್ಲಿ ತನ್ನ ಮುಖ ಸುಲ್ತಾನನಿಗೆ ತೋರಿಸಲಿಲ್ಲ. ತನ್ನಂತೆಯೇ ಇದ್ದ ಸಹೋದರನಿಗೆ ಹೆಣ್ಣು ವೇಷ ತೊಡಿಸಿ ಕಳಿಸಿದ್ದಳು. ಆತನನ್ನೇ ರಾಣಿ ಎಂದು ಸುಲ್ತಾನ ಭಾವಿಸಿದ್ದ. ಆ ಸಮಯದಲ್ಲಿ ಕನ್ನಡಿಯ ಬಳಕೆ ಇರಲಿಲ್ಲ. ಮಹಲಿನ ಮೆಟ್ಟಿಲ ಮೇಲೆ ಕುಳಿತ ಪದ್ಮಾವತಿಯ ಪ್ರತಿಫಲನವನ್ನು ಕೆರೆಯಲ್ಲಿ ನೋಡಿ ಸುಲ್ತಾನ ಮೋಹಿತನಾಗಿದ್ದ.
ರಾಜಸ್ತಾನದ ಹಳ್ಳಿ ಹಳ್ಳಿಯಲ್ಲೂ ಪದ್ಮಾವತಿ ಕುರಿತ ಕತೆ- ಹಾಡುಗಳಿವೆ. ಪ್ರತಿಯೊಂದರಲ್ಲೂ ವ್ಯತ್ಯಾಸಗಳಿವೆ. ಆದರೆ ಪದ್ಮಾವತಿ ಖಂಡಿತವಾಗಿ ಇದ್ದಳು, ಈಗಲೂ ನಮ್ಮೆಲ್ಲರ ಹೃದಯದಲ್ಲಿದ್ದಾಳೆ.
-ಶ್ರೀಜೈಸಿಂಹ್, ಗೈಡ್, ಉದಯಪುರ
* ಡಾ. ಕೆ. ಎಸ್.ಚೈತ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.