ನಿಮ್ಮ ಮಗು ಪರ್ಫ್ಯೂಮ್! ಘಮ್ಮೆನ್ನುವ ಮಗುವಿಗೆ ಮನಸೋಲುವ ತಾಯಿ
Team Udayavani, Jul 19, 2017, 2:45 AM IST
ಆಗಷ್ಟೇ ಹುಟ್ಟಿದ ಮಗುವಿನ ಪರಿಮಳ, ಸುಗಂಧ ದ್ರವ್ಯದ ಸುವಾಸನೆಗಿಂತ ಸೊಗಸಾಗಿರುತ್ತದೆ. ಆದರೆ, ಈ ಸುವಾಸನೆಗೆ ಬೇಬಿ ಪೌಡರ್, ಸೋಪ್ ಅಥವಾ ಲೋಷನ್, ಮಗುವಿಗೆ ತೀಡಿ ಹಾಕಿದ ಎಣ್ಣೆ, ತೊಟ್ಟಿಲ ಕೆಳಗೆ ಅಜ್ಜಿಯು ಇಡುವ ಲೋಬಾನದ ಧೂಪ… ಇವ್ಯಾವುವೂ ಕಾರಣವಲ್ಲ. ಹಾಗಾದರೆ ಮತ್ತೇನು?
ಮಗುವೊಂದು ಹುಟ್ಟಿದರೆ ಮನೆಯಲ್ಲಿ ಹೂವೊಂದು ಅರಳಿದಂತೆ! “ಕಂದನ ತಲೇನ ಮೂಸಿ ನೋಡು, ಹೇಗೆ ಘಮ್ ಅಂತಿದೆ!’ ಎಂದು ಹೇಳುವ ಅಜ್ಜಿಯರನ್ನು ನೀವು ಕಂಡಿರಬಹುದು. ಇದನ್ನು ಕೇಳಿದ ತಾಯಿ, ಅತ್ಯಂತ ಸುವಾಸನೆಯ ಹೂವೊಂದು ನನ್ನ ಪಕ್ಕ ಇದೆಯೆಂದು ಪುಳಕಿತಳಾಗುತ್ತಾಳೆ. ಪುಟ್ಟ ಮಗುವನ್ನು ಎತ್ತಿಕೊಂಡು ಆಘ್ರಾಣಿಸುವ ಅದೆಷ್ಟೋ ಮಂದಿಯನ್ನು ನೀವು ಗಮನಿಸಿರಬಹುದು. ಶಿಶುವಿಗೆ ಇಂಥ ಸುವಾಸನೆ ಬಂದಿದ್ದಾದರೂ ಹೇಗೆ?
ಅದು ಯಾವುದೇ ಬೇಬಿ ಪೌಡರ್, ಸೋಪ್ ಅಥವಾ ಲೋಷನ್‌ನದ್ದಲ್ಲ! ಮಗುವಿಗೆ ತೀಡಿ ಹಾಕುವ ಎಣ್ಣೆಯದ್ದೂ ಅಲ್ಲ. ಮಗುವಿನ ತೊಟ್ಟಿಲ ಕೆಳಗೆ ಅಜ್ಜಿಯು ಇಡುವ ಲೋಬಾನದ ಧೂಪದ್ದೂ ಅಲ್ಲ. ಹಾಗಾದರೆ ಮತ್ತೇನಿದು?
ಶಿಶುವಿಗೂ, ತಾಯಿಗೂ ಮಧ್ಯೆ ಸುವಾಸನೆಯ ಬಂಧವಿದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆದರೆ, ಶಿಶುವಿನ ಬೆಳವಣೆಗೆಯಾದಂತೆಲ್ಲ ಸುವಾಸನೆಯ ಬಂಧವು ಕಡಿಮೆಯಾಗುತ್ತಾ ಹೋಗುತ್ತದಂತೆ. ಹೀಗೆ ಕಡಿಮೆಯಾಗಲು “ಟೆಸ್ಟೋಸ್ಟೆರಾನ್’ ಎಂಬ ಹಾರ್ಮೋನ್ ಕಾರಣ ಎನ್ನುತ್ತಾರೆ ಪೋಲೆಂಡ್ ಸಂಶೋಧಕರು. ಮಕ್ಕಳು ಪ್ರೌಢಾವಸ್ಥೆಗೆ ಬಂದಂತೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಪ್ರಭಾವ ಬೀರಲು ಆರಂಭಿಸುತ್ತದೆ. ಧರಿಸಿದ ಅಂಗಿ, ಸಾಕ್ಸ್‌ಗಳು ದುರ್ಗಂಧ ಹೊರಹಾಕುತ್ತವೆ.
ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ತನ್ನ ಮಗುವಿನ ಕಂಪು ಮತ್ತು ಬೇರೆ ಮಗುವಿನ ಕಂಪಿನ ವ್ಯತ್ಯಾಸವನ್ನು ತಾಯಿ ಗ್ರಹಿಸಬಲ್ಲಳಂತೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದರಲ್ಲಿ, ಸುಮಾರು 235 ತಾಯಂದಿರನ್ನು ಪ್ರಯೋಗಕ್ಕೆ ಒಳಪಡಿಸಿದಾಗ ಶೇ.93.7ರಷ್ಟು ತಾಯಂದಿರು ಮಗುವಿನಲ್ಲಿ ಅತ್ಯಂತ ಆಹ್ಲಾದಕರ ಸುವಾಸನೆ ಇದೆ ಎಂದು ಒಪ್ಪಿಕೊಂಡಿದ್ದಾರಂತೆ. ಶೇ.75 ತಾಯಂದಿರು ಹದಿನಾಲ್ಕು ವರ್ಷದ ಮಕ್ಕಳ ದೇಹದ ವಾಸನೆಯನ್ನು ಇಷ್ಟಪಟ್ಟರೂ, ಅದರಿಂದ ಆಕರ್ಷಿತರಾಗಿಲ್ಲ. ಆ ತಾಯಂದಿರು ಆನುವಂಶಿಕವಾಗಿ ತಮ್ಮಿಂದ ಬಂದ ರೂಪ, ಗುಣ, ಸ್ವಭಾವಗಳ ಕಾರಣಕ್ಕಾಗಿ ಮಕ್ಕಳಿಂದ ಹೆಚ್ಚು ಆಕರ್ಷಿತರಾಗುತ್ತಾರೆ ಎನ್ನುತ್ತಾರೆ ವಿಜ್ಞಾನಿಗಳು.
ಶಿಶುವಿನ ನರುಗಂಪು ತಾಯಿಯ ಮೆದುಳಿನ “ಡೊಪಮೈನ್’ ಹಾರ್ಮೋನ್‌ನನ್ನು ಪ್ರಚೋದಿಸುತ್ತದೆ. ಇದು ತಾಯಿಯಲ್ಲಿ ಆನಂದ, ಆಹ್ಲಾದವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಡ್ರಗ್‌ಗಿಂತಲೂ ಮಿಗಿಲಾದ ಸಂತೋಷವನ್ನು ನೀಡುತ್ತದಂತೆ! ಯಾವುದೇ ಪರಿಶ್ರಮದ ಕೆಲಸದಿಂದ ದಣಿದಿರಲಿ. ಸುಸ್ತಾಗಿರಲಿ, ಮಗುವಿನತ್ತ ಧಾವಿಸಿ ಬರುವಂತೆ ಪ್ರೇರೇಪಿಸುತ್ತದೆ. ಆದರೆ, ಈ ಸುವಾಸನೆಯು ಆರು ವಾರಗಳ ನಂತರ ಕುಗ್ಗುತ್ತಾ ಹೋಗುತ್ತದೆ. ಇದು ವೈಜಾnನಿಕ ಸತ್ಯ! ಅದೆಷ್ಟೇ ಹೆರಿಗೆ ನೋವು ಅನುಭವಿಸಿದ್ದರೂ, ಸಿಸೇರಿಯನ್ ಆಪರೇಷನ್ ಆಗಿ ದೇಹ ವಿಶ್ರಾಂತಿಯನ್ನು ಬಯಸುತ್ತಿದ್ದರೂ, ಮಗುವನ್ನು ಬಾಚಿ ತಬ್ಬಿಕೊಂಡು ಎದೆಗಾನಿಸಿಕೊಳ್ಳಲು ಮಾತೃಹೃದಯ ಕಾತರಿಸುತ್ತದೆ. ನಿದ್ದೆ, ಹಸಿವು, ಬಳಲಿಕೆ, ನೋವು ಯಾವುದನ್ನೂ ಲೆಕ್ಕಿಸದೆ ತಾಯಿ ಮಗುವನ್ನು ಅಪ್ಪಿಕೊಳ್ಳುತ್ತಾಳೆ; ಮುದ್ದಾಡುತ್ತಾಳೆ; ಆಘ್ರಾಣಿಸುತ್ತಾಳೆ. ಅಪಾರ ನೆಮ್ಮದಿ, ಸಂತೃಪ್ತಿಯನ್ನು ಕಂಡುಕೊಳ್ಳುತ್ತಾಳೆ. ಅನಿರ್ವಚನೀಯ ಆನಂದವನ್ನು ಅನುಭವಿಸುತ್ತಾಳೆ. ಹಾಗೆಯೇ ಶಿಶುವಿಗೂ ತಾಯಿಯ ಸಾಮೀಪ್ಯ, ವಾಸನೆ ಅತ್ಯಂತ ಹಿತವೆನಿಸುತ್ತದೆ.
—-
ಗಂಡಸರಿಗೆ ಪರಿಮಳ ಗೊತ್ತಾಗಲ್ವಾ?
ಮಗು ಹುಟ್ಟಿದ ಸಂದರ್ಭದಲ್ಲಿ ಮಗುವಿನ ಶರೀರದಲ್ಲಿ ಉಳಿದಿರಬಹುದಾದ ಗರ್ಭಪೊರೆಯಲ್ಲಿನ ಅಮ್ನಾಟಿಕ್ ದ್ರವ ಅಥವಾ ವರ್ನಿಕ್ ಕೇಸಿಯೋಸಾ (ಹೊಟ್ಟೆಯಲ್ಲಿದ್ದಾಗ ಮಗುವನ್ನು ಆವರಿಸುವ ಬೆಣ್ಣೆಯಂಥ ವಸ್ತು)ದಿಂದ ಈ ಸುವಾಸನೆ ಹೊರಹೊಮ್ಮುತ್ತದಂತೆ. ತಾಯಿ- ಮಗುವಿನ ಬಾಂಧವ್ಯವು ಗಾಢವಾಗಿದ್ದಾಗ ಮಾತ್ರ ಈ ಸುವಾಸನೆಯ ಅರಿವಾಗಬಲ್ಲದು ಎನ್ನುತ್ತಾರೆ ವಿಜ್ಞಾನಿಗಳು. ತಾಯಿಯಂತೆಯೇ, ತಂದೆಗೂ-ಶಿಶುವಿಗೂ ಸುವಾಸನೆಯ ಬಂಧವಿದೆಯೇ ಎಂಬುದರ ಬಗ್ಗೆಯೂ ವಿಜ್ಞಾನಿಗಳು ಸಂಶೋಧನೆ ಮುಂದುವರಿಸಿದ್ದಾರೆ!
– ರಾಜೇಶ್ವರಿ ಜಯಕೃಷ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.