ತುಂತುರು ನೀರ ಹಾಡು

ಮಳೆಯೆಂದರೆ, ಕನಸುಗಳ ಧ್ಯಾನ

Team Udayavani, Jul 10, 2019, 5:00 AM IST

s-10

ಮಳೆ ಬಂದ ಮರುದಿನ ಮಣ್ಣಿನ ಒಡಲಲ್ಲಿರುವ ತಂಪು ಮತ್ತು ಬಿಸುಪನ್ನು ಮಾತುಗಳಲ್ಲಿ ವಿವರಿಸುವುದು ಸಾಧ್ಯವೇ ಇಲ್ಲ. ಮಳೆಬಿದ್ದ ಮರುದಿನವೇ ಹೀಗೆಯೇ ಹನಿಹನಿ ಸಿಡಿದ ಕಿಟಯ ಗಾಜಿನ ಮೇಲೆ ಬರೆದ ಒಂದು ಅಕ್ಷರದ್ದೂ ನೆನಪಿದೆ… ಮತ್ತೆಷ್ಟು ಮಳೆ ಬೀಳಬೇಕಾಯ್ತು ಆ ಒಂದು ಅಕ್ಷರವನ್ನು ಅಳಿಸಲು! ಮಳೆ ಬೇಕು, ಹೊಸತು ಚಿಗುರಬೇಕಾದರೂ, ಮುಗಿದದ್ದನ್ನು ಅಳಿಸಬೇಕಾದರೂ…

ಆಫೀಸಿನಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಪಕ್ಕದ ಗಾಜುಗಳ ಮೂಲಕ ಬರುತ್ತಿದ್ದ ಬೆಳಕು ಮಂದವಾಯಿತು. ಎ.ಸಿ. ಕೋಟೆಯನ್ನು ದಾಟಿ ಮಣ್ಣಿನ ನರುಗೆಂಪು ಮೂಗನ್ನು ದಾಟಿ ಎದೆಯ ಬಾಗಿಲು ತಟ್ಟಿತು. ಲ್ಯಾಪ್‌ಟಾಪ್‌ ಪರದೆ ಮುಚ್ಚಿಟ್ಟು ಹೊರಗೆದ್ದು ಬಂದು ಕಣ್ಣು ಹಾಯಿಸಿದೆ. ಎದುರು ದಿಕ್ಕಿನಲ್ಲಿ ಮೋಡಗಳು ದಟ್ಟೈಸಿದ ಹಾಗೆ ಕಂಡಿತು. ವಾತಾವರಣ ತಂಪು ತಂಪು. “ಓಹ್‌, ಇಂದು ಮಳೆ ಆಗಿಯೇ ಬಿಡಬಹುದೆ..?’ - ಮನಸ್ಸಿನಲ್ಲಿ ಕಾತರ. ಮತ್ತೆ ಒಳಗೆ ಬಂದು ಕುಳಿತು ಕೆಲಸ ಮುಂದುವರಿಸುವಾಗಲೂ ಒಂದು ಕಣ್ಣು ಆಕಾಶವನ್ನು ಆಗಾಗ ನೋಡುತ್ತಲೇ ಇತ್ತು. ಆದರೆ, ನಿಧಾನವಾಗಿ ಮೋಡವನ್ನು ದಾಟಿ ಸೂರ್ಯ ಹೊರಗೆ ಬಂದೇ ಬಿಟ್ಟ. ಮೋಡ ಈಗ ಮನಸ್ಸಿಗೆ ಕವಿಯಿತು.

ಪ್ರತಿ ವರ್ಷದಂತೆ ಆಗಿದ್ದಿದ್ದರೆ ಈ ಸಮಯದಲ್ಲಿ ನನ್ನೂರಿನ ಬೆಳಗುಗಳು ಚುಮುಚುಮು ಚಳಿಯಲ್ಲಿ ಮಿಂದು, ನೀರು ಜಡೆ ಹಾಕಿಕೊಂಡು ಅಲ್ಲಲ್ಲಿ ನೆಲದ ಮೇಲೆ ಹಾಸಿಟ್ಟ ಕನ್ನಡಿಗಳಲ್ಲಿ ಮುಖ ನೋಡಿಕೊಂಡು ಮುಗುಳ್ನಗುವ ಪುಟ್ಟ ಹುಡುಗಿಯರನ್ನು ನೆನಪು ಮಾಡುತ್ತಿದ್ದವು, ನನ್ನೂರಿನ ಸಂಜೆಗಳಲ್ಲಿ ಎಲ್ಲೆಲ್ಲೂ ಕೊಡೆಗಳು ಹೂವಿನಂತೆ ಅರಳುತ್ತಿದ್ದವು, ಮಡಿಸಿದ ಪ್ಯಾಂಟು, ಮೇಲಕ್ಕೆತ್ತಿಕೊಂಡ ಸಲ್ವಾರ್‌, ಸೀರೆಗಳ ಅಡಿಯಿಂದ ಪಾದಗಳು ನೀರಿನಲ್ಲಿ ನೆಂದ ಹೂವುಗಳಂತೆ ಕಾಣುತ್ತಿದ್ದವು. ಆಕಾಶಕ್ಕೆ ಮುಖವೆತ್ತಿ ಮೊದಲ ಹನಿಗಳ ಮುತ್ತು ಕದಿಯುವ ಎಳೆ ಮುಖಗಳು, ಅದೇ ಹನಿಗೆ ಮೊಗವೊಡ್ಡಿ ಏನನ್ನೋ ನೆನಪು ಮಾಡಿಕೊಂಡು ಮುಖದ ಗೆರೆಗಳನ್ನೂ ಮೀರಿ ಕಣ್ಣು ಮಿನುಗಿಸುತ್ತಿದ್ದ ಪ್ರೌಢ ಮುಖಗಳು, ಇಲ್ಲಿನ ಧಾವಂತದ ಬದುಕಿನ ನಡುವೆಯೂ ಬಿಟ್ಟುಬಂದ ಊರಿಗೆ ಕರೆ ಮಾಡಿ, ಎಷ್ಟು ಮಳೆ ಆಯಿತು ಎಂದು ವಿಚಾರಿಸುತ್ತಿದ್ದ ದನಿಗಳು, ಮೇನ್‌ ರೋಡಿನ ಪಕ್ಕದಲ್ಲಿ, ಒಳಒಳಗೆ ಚಾಚಿಕೊಂಡ ವಸತಿ ಪ್ರದೇಶಗಳಲ್ಲಿ ಮಕ್ಕಳ ಕೆನ್ನೆ ಕಣ್ಣುಗಳಲ್ಲಿ ಮತಾಪು ಜ್ವಲಿಸುತ್ತಿದ್ದವು.

ಆದರೆ, ಈ ಸಲದ ಮುಂಗಾರು ಎಂದಿನಂತಿಲ್ಲ, ಮಳೆರಾಯ ಬೆಂಗಳೂರಿನ ಕಡೆ ಯಾಕೋ ನೋಡುತ್ತಿಲ್ಲ. ಮಳೆಯಿನ್ನೂ ಬರದ ಊರಿನಲ್ಲಿ ಕುಳಿತು, ಮಳೆ ಧೋ ಧೋ ಎಂದು ಸುರಿವ ಊರಿನ ಕಡೆ ಕಣ್ಣಿಟ್ಟು “ಮುಂಗಾರು ಮಳೆಯೆ, ಏನು ನಿನ್ನ ಹನಿಗಳ ಲೀಲೆ’ ಎಂದು ಗುನುಗುನಿಸುವ ಬದಲು, “ಯಾತಕ್ಕೆ ಮಳೆ ಹೋದವೋ ಶಿವಶಿವಾ ಲೋಕ ತಲ್ಲಣಿಸುತಾವೋ’ ಎಂದು ಗುನುಗುತ್ತಿದ್ದೇನೆ. ಇಷ್ಟೊತ್ತಿಗೆ ಇಲ್ಲಿ ನಾಲ್ಕಾರು ಒಳ್ಳೆ ಮಳೆಯಾಗಬೇಕಿತ್ತು, ಪ್ರತಿ ಸಲ ಇಲ್ಲಿ ಮಳೆ ಸುರಿದು ನನ್ನ ಸಂಜೆಯ ವಾಕಿಂಗ್‌ಗೆ ಕಡ್ಡಾಯ ರಜೆ ಕೊಟ್ಟು, ಒಗೆದು ಹರವಿದ ಬಟ್ಟೆಗಳನ್ನು ಓಡೋಡಿ ಒಳಗೆ ತರುವಾಗೆಲ್ಲಾ “ಛೇ, ಊರ ಕಡೆಯಾದರೂ ಈ ಮಳೆ ಸುರಿಯಬಾರದೆ, ಇಲ್ಲಿ ಮಳೆಗೆ ರೋಡು, ಫ‌ುಟ್‌ಪಾತುಗಳು ಮೊಳಕೆ ಒಡೆಯಬೇಕು ಅಷ್ಟೇ’ ಎಂದು ಗೊಣಗಿಕೊಂಡರೂ ಪ್ರತಿಸಲ ನಾನು ಮಳೆಗಾಗಿ ಕಾತರದಿಂದ ಕಾಯುತ್ತೇನೆ. ಕೆಲವರು ಮಳೆಯ ಕಿರಿಕಿರಿ ಬಗ್ಗೆ ಉದ್ದುದ್ದದ ತಕರಾರು ತೆಗೆದಾಗೆಲ್ಲಾ ನಾನು ಮಳೆಯ ಸೊಬಗು ತಾನಾಗೇ ಇರುವುದೋ, ಅಥವಾ ನಾವು ಆರೋಪಿಸುತ್ತೇವೋ ಎಂದು ಯೋಚಿಸುತ್ತೇನೆ. ಆದರೆ, ನನಗಂತೂ ಮಳೆಯೆಂದರೆ ಪ್ರೀತಿ, ಮೋಹ, ಅಭಿಮಾನ, ಅಕ್ಕರೆ. ಚೀನೀಯರು ಜನಗಳ ಮುಖ, ಕೆನ್ನೆ, ಕಣ್ಣುಗಳನ್ನು ನೋಡಿ ಪಂಚಭೂತಗಳಲ್ಲಿ ಅವರು ಯಾವ ವ್ಯಕ್ತಿತ್ವಕ್ಕೆ ಸೇರಿದವರು ಎಂದು ಗುರುತಿಸುತ್ತಾರಂತೆ, ಬಹುಶಃ ನಾನು ನೀರಿನ ಜಾತಕದವಳಿರಬೇಕು. ನೀರಿನ ಎಲ್ಲಾ ರೂಪಗಳನ್ನೂ ನಾನು ಸಂಪೂರ್ಣವಾಗಿ ಅನುಭವಿಸುತ್ತೇನೆ – ನದಿ, ತೊರೆ, ಜಲಪಾತ, ಮಳೆ, ಕಡಲು, ಬೆವರು, ಕಣ್ಣೀರು…

ಮಳೆಗೂ ಮೋಡಕ್ಕೂ ನೆನಪಿಗೂ ಏನೋ ನಂಟಿರಲೇಬೇಕು, ಇಲ್ಲದಿದ್ದರೆ ಪಾರಿವಾಳವನ್ನು ಬಿಟ್ಟು ಕಾಳಿದಾಸ ಮೋಡದ ಮೂಲಕವೇ ಏಕೆ ಸಂದೇಶ ಕಳಿಸುತ್ತಿದ್ದ? ಕರಗಿ ಸುರಿದು ಹನಿಯಾಗುವವರೆಗೂ ತನ್ನೊಡಲಲ್ಲಿ ನೂರುನೂರು ಜೀವಗಳ, ಭಾವಗಳ ಮೊಳಕೆಯನ್ನು ಅದು ಕಾಪಿಡುತ್ತದೆ, ಅದಕ್ಕೆ ಕಾವು ಕೊಡುತ್ತದೆ ಎಂದೇ ಕಾಳಿದಾಸ ಅದನ್ನು ನಂಬಿದನೇ? ಏನೇನೋ ಆಗಬಹುದಾಗಿದ್ದ ಸಾಧ್ಯತೆಗಳು ಎಂದೇ ಮೋಹನ್‌ ರಾಕೇಶರು ಕಾಳಿದಾಸ- ಮಲ್ಲಿಕಾ- ವಿಲೋಮ ಎನ್ನುವ ಪಾತ್ರಗಳನ್ನು ಮೋಡ- ಗಾಳಿ- ಮಳೆಗಳ ನಡುವಿನ ಆಷಾಢದ ಒಂದು ದಿನದಲ್ಲಿ ಎದಿರುಬದಿರಾಗಿಸಿದರೆ? “ಮಳೆಬರಲಿ ಪ್ರೀತಿಯ ಬನಕೆ, ಅರಳಲಿ ಹೂ ಗಿಡ ಲತೆ ಮರಕೆ, ಮಳೆಬರಲಿ, ಮಳೆಬರಲಿ’ ಎಂದು ಲಕ್ಷ್ಮೀ ನಾರಾಯಣ ಭಟ್ಟರು ಕವಿತೆ ಬರೆದರೆ? ಕೇರಳವನ್ನು ದಾಟುತ್ತಿರುವ ಮುಂಗಾರು ಇನ್ನೇನು ಕರ್ನಾಟಕವನ್ನು ಮುಟ್ಟಿತು ಎನ್ನುವಾಗ ಬೀಸಿದ “ವಾಯು’ ನನ್ನೂರಿನ ಮಳೆಯನ್ನೆಲ್ಲಾ ಹೊತ್ತುಕೊಂಡು ಹೋಯಿತು. ಬಂದಹಾಗೆ ಬಂದು ಹಾದು ಹೋದ ಮಳೆಯನ್ನು ನಿಲ್ಲಿಸಿ ಹನಿಹನಿಗಳ ಲೆಕ್ಕ ಕೇಳಬೇಕು.

ಮಳೆಗೂ ಮನಸ್ಸಿಗೂ ಮೊದಲ ನಂಟು ಎಲ್ಲಿ ಶುರುವಾಗುತ್ತದೋ ಬಲ್ಲವರಾರು? ಮಳೆಯಲ್ಲಿ ಗುಂಡಾಗಿ ತಿರುಗುತ್ತಾ “ಹುಯ್ಯೋಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ’ ಎಂದು ಅಪ್ಪಾಲೆ ತಿಪ್ಪಾಲೆ ಆಡಿದ ನೆನಪಿದೆ, ಕಾಗದದ ದೋಣಿ ಮಾಡಿ ತೇಲಿಬಿಟ್ಟು “ತೇಲಲಪ್ಪಾ ದೇವರೆ’ ಎಂದು ಮನಸ್ಸಿನಲ್ಲೇ ಮುಡಿಪು ಕಟ್ಟಿಟ್ಟ ನೆನಪಿದೆ, ಮೂರು ಕಿಲೋಮೀಟರ್‌ ದೂರ ಇದ್ದ ರೈಲ್ವೇ ನಿಲ್ದಾಣದಿಂದ ಸುರಿಮಳೆಯಲ್ಲಿ ಒದ್ದೆ ಮುದ್ದೆಯಾಗಿ ನೆನೆಯುತ್ತಲೇ ನಡೆದು ಬಂದು, ವರ್ಷದ ನೋಟ್ಸ್‌ ಪೂರಾ ಹಾಳಾಗಿದ್ದಕ್ಕೆ ಬೈಸಿಕೊಂಡ ನೆನಪಿದೆ. ಕಿಟಗಿಗೊರಗಿ ಕುಳಿತು, ಹೊರಗೆ ಕೈಚಾಚಿ ಅಂಗೈ ಮೇಲಿನ ಗಿಣಿಯಂತೆ ಮುದ್ದಾಗಿ ಕುಳಿತಿದ್ದ ಮಳೆಯೊಂದಿಗೆ ಮಾತನಾಡುತ್ತಲೇ ಒಂದಿರುಳು ಮಾಡಿದ ಪ್ರಯಾಣದ ನೆನಪಿದೆ. ಅಜ್ಜಿಯ ಊರಿಗೆ ಹೋಗಿದ್ದಾಗ ಮಳೆಬಿದ್ದ ಮರುದಿನವೇ ಹೊಲಕ್ಕೆ ಓಡಿಹೋಗುತ್ತಿದ್ದದ್ದು ನೆನಪಿದೆ. ಮಳೆ ಬಂದ ಮರುದಿನ ಮಣ್ಣಿನ ಒಡಲಲ್ಲಿರುವ ತಂಪು ಮತ್ತು ಬಿಸುಪನ್ನು ಮಾತುಗಳಲ್ಲಿ ವಿವರಿಸುವುದು ಸಾಧ್ಯವೇ ಇಲ್ಲ. ಮಳೆಬಿದ್ದ ಮರುದಿನವೇ ಹೀಗೆಯೇ ಹನಿಹನಿ ಸಿಡಿದ ಕಿಟಯ ಗಾಜಿನ ಮೇಲೆ ಬರೆದ ಒಂದು ಅಕ್ಷರದ್ದೂ ನೆನಪಿದೆ… ಮತ್ತೆಷ್ಟು ಮಳೆ ಬೀಳಬೇಕಾಯ್ತು ಆ ಒಂದು ಅಕ್ಷರವನ್ನು ಅಳಿಸಲು! ಮಳೆ ಬೇಕು, ಹೊಸತು ಚಿಗುರಬೇಕಾದರೂ, ಮುಗಿದದ್ದನ್ನು ಅಳಿಸಬೇಕಾದರೂ. ಯಾವುದೋ ಒಂದು ಗಜಲ್‌ ಸಾಲು ನೆನಪಾಯಿತು, “ಕೆನ್ನೆ ಮೇಲೆ ಕರೆಗಟ್ಟಿದ ಕಣ್ಣೀರ ಕಲೆಯನ್ನು ಅಳಿಸಲು, ಮತ್ತೂಮ್ಮೆ ಕಣ್ಣೀರೇ ಸುರಿಯಬೇಕು…’

ಮಳೆಗೆ ಆಳದಲ್ಲಿ ಹುದುಗಿದ್ದ ಬಿತ್ತಿಯನ್ನು ಮೊಳಕೆಯೊಡಿಸಿ, ತನ್ನ ಸುತ್ತಲೂ ಕಟ್ಟಿದ ಕೋಟೆಯೊಡನೆ ಸೆಣಸಿ, ಚಿಗುರನ್ನು ಮೇಲೆ ತಂದು ನಿಲ್ಲಿಸುವ ಗುಣವಿದೆ. ಅದು ಒಮ್ಮೊಮ್ಮೆ ಸಂತಸದ ನೆನಪು ತಂದರೆ ಒಮ್ಮೊಮ್ಮೆ ನೋವಿನ ನೆನಪು ತರುತ್ತದೆ. ಮಳೆ ಸುರಿಯುವಾಗ ಒಬ್ಬಂಟಿ ದನಿಯೊಂದು “ಮೇಘಾ ಛಾಯೆ ಆಧೀ ರಾತ್‌ ಬೈರನ್‌ ಬನ್‌ ಗಯೆ ನಿಂದಿಯಾ….’- ಅರ್ಧರಾತ್ರಿಯಲ್ಲಿ ಕವಿದ ಈ ಮೋಡ, ನಿ¨ªೆಯನ್ನು ಶತ್ರುವಾಗಿಸಿದೆ ಎಂದು ಹಾಡುತ್ತಲೇ, “ಸಬ್‌ ಕೆ ಆಂಗನ್‌ ದಿಯಾ ಜಲೆರೆ ಮೋರೆ ಆಂಗನ್‌ ಜಿಯಾ…’- ಎಲ್ಲರ ಮನೆಯಂಗಳದಲ್ಲೂ ಹಣತೆ ಬೆಳಗುತ್ತಿದ್ದರೆ ನನ್ನ ಮನೆಯಂಗಳದಲ್ಲಿ ಹೃದಯವೇ ಉರಿಯುತ್ತಿದೆ ಎಂದು ಮೊರೆಯಿಡುವಂತೆ ಮಾಡುತ್ತದೆ. “ಬಾನಿನಲ್ಲಿ ಒಂಟಿ ತಾರೆ, ಸೋನೆ ಸುರಿವ ಇರುಳಾ ಮೋರೆ, ಕತ್ತಲಲ್ಲಿ ಕುಳಿತು ಒಳಗೇ ಬಿಕ್ಕುತಿಹಳು ಯಾರೋ ನೀರೆ…’ ಆದರೆ, ಸಂಗಾತಿ ಜೊತೆಯಲ್ಲಿರುವಾಗ ಅದೇ ಮಳೆಗೆ ಏನು ಸೊಬಗು, ಇಡುವ ಹೆಜ್ಜೆ ಹೆಜ್ಜೆಗೂ ನವಿಲಿನ ಸಂಭ್ರಮ. ಸಾಧಾರಣವಾಗಿ ನೋವಿಗೇ ನೆನಪಾಗುವ ಮುಖೇಶ ಮಳೆಯ ಈ ಒಂದು ಹಾಡಿಗಾಗಿ ಪ್ರೀತಿಯ ಮೋಹಕತೆಗೆ ನೆನಪಾಗುತ್ತಾನೆ. “ಬರ್‌ ಸಾ ರಾಣಿ, ಜರಾ ಜಮ್‌ ಕೆ ಭರಸೋ… ಏ ಅಭೀ ಅಭೀ ಆಯೇ ಹೈ, ಕೆಹತೆ ಹೈ ಅಬ್‌ ಜಾಯೇಂಗೆ, ತೂ ಭರಸ್‌, ಭರಸೋ ಭರಸ್‌’ ಎಂದು, “ಭರಸೋ ಭರಸ್‌’ಗೆ ಎದೆಯಲ್ಲಿನ ಮೋಹವನ್ನೆಲ್ಲಾ ತುಂಬಿ ಹಾಡುತ್ತಿದ್ದರೆ, ಧೋ ಧೋ ಮಳೆಯಲ್ಲಿ ಸುರಿವಾಗ ಭೂಮಿಯಾಗಿ ಅರಳಿದ ನೆನಪಾಗುತ್ತದೆ. ಹಾಗೆ ನೆನಪಾಗುವ ಇನ್ನೊಂದು ಹಾಡು ಚಾಂದಿನಿ ಚಿತ್ರದ್ದು, “ಲಗೀ ಆಜ್‌ ಸಾವನ್‌ ಕಿ ಫಿರ್‌ ಓ ಝಡಿ ಹೈ, ವಹೀ ಆಗ್‌ ಸೀನೆ ಮೆ ಫಿರ್‌ ಜಲ್‌ ರಹೀ ಹೈ’ – ಶ್ರಾವಣದ ಜಡಿ ಮತ್ತೆ ಶುರುವಾಗಿದೆ, ಎದೆಯಲ್ಲಿ ಮತ್ತೆ ಅದೇ ಬೆಂಕಿ ಜ್ವಲಿಸುತ್ತಿದೆ. ಸಂತೋಷಕ್ಕೂ, ಸಂತಾಪಕ್ಕೂ ಒಂದೇ ಬಗೆಯಲ್ಲಿ ಒದಗಿ ಬರುವ ಹಾಡು ಇದು. “ಭೀನಿ ಭೀನಿ ಭೋರ್‌, ಭೋರ್‌ ಆಯೆ, ರೂಪ್‌ ರೂಪ್‌ ಪರ್‌ ಚಿಡೆ ಸೋನ’, ಮಳೆಯ ಬೆಡಗೆಂದರೆ ಅದೇ, ಮುಟ್ಟಿದ್ದೆಲ್ಲವನ್ನೂ ಅದು ಹೊಳೆಯುವಂತೆ ಮಾಡುತ್ತದೆ.

ಕೆಲವು ವರ್ಷಗಳ ಹಿಂದೆ “ವರ್ಷಂ’ ಎಂದು ಒಂದು ತೆಲುಗು ಚಿತ್ರ ಬಂದಿತ್ತು. ಅದರಲ್ಲಿ ಹುಡುಗನಿಗೆ ಹುಡುಗಿ ಮೊದಲ ಸಲ ಸಿಗುವಾಗ ಮಳೆ ಬರುತ್ತಿರುತ್ತದೆ. ಮಳೆ ಎಂದರೆ ಹಾಡಿ ಕುಣಿಯುವ ಹುಡುಗಿಯನ್ನು “ಮತ್ತೆ ಯಾವಾಗ ಸಿಗುವೆ?’ ಎಂದು ಎದೆಯನ್ನು ಅಂಗೈಲಿಟ್ಟುಕೊಂಡು ಕೇಳುವ ಹುಡುಗನಿಗೆ ಹುಡುಗಿ ಹೇಳುವುದು ಅದೇ ಮಾತು, “ಮತ್ತೆ ಮಳೆ ಬಂದಾಗ…’. ಮಳೆ ಎಂದರೆ ಕೇವಲ ಮಳೆ ಅಲ್ಲ, ಅದು ಅನೇಕ ತುತ್ತುಗಳ ಬಸಿರು, ಅನೇಕ ಕನಸುಗಳ ಧ್ಯಾನ, ನೆನಪು ಕನಸುಗಳ ಸಮ್ಮಿಲನ. ಮಳೆಯೊಂದು ಸುರಿದು ಬಿಡಲಿ ಒಮ್ಮೆ, ಮಳೆಗಾಲ ಬಂದು ಬಿಡಲಿ ಮತ್ತೂಮ್ಮೆ.

– ಸಂಧ್ಯಾ ರಾಣಿ

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.