“ಸುರಕ್ಷಾ” ಬಂಧನ
ಅಣ್ಣ ಜೊತೆಗಿರುವಾಗ ಅಂಜಿಕೆ ಏಕೆ?
Team Udayavani, Aug 14, 2019, 5:48 AM IST
ಅದೆಷ್ಟೋ ಬಂಧನಗಳು, ಬೇಡಿಗಳು ಹೆಣ್ಣಿನ ಬಾಳನ್ನು ಕಟ್ಟಿ ಹಾಕಿವೆ. ಅದನ್ನು ಮಾಡ್ಬೇಡ, ಇದನ್ನು ಮಾಡು, ಈ ಥರ ಇರಬೇಡ, ಹೀಗೇ ಬಾಳು ಎಂದೆಲ್ಲ ಹೇಳುತ್ತ, ಹಾರುವ ಹಕ್ಕಿಯನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಲೇ ಇರುತ್ತೆ. ಇವೆಲ್ಲ ಕಟ್ಟುಪಾಡುಗಳ ನಡುವೆ- “ಜೊತೆಗೆ ನಾನಿದ್ದೇನೆ, ಹೆದರಬೇಡ’ ಅನ್ನುವ ಜೀವವೊಂದಿರುತ್ತದೆ. ಅದು ಅಪ್ಪ, ಅಮ್ಮ, ಸೋದರ, ಗಂಡ ಹೀಗೆ ಯಾರೂ ಆಗಿರಬಹುದು. ಮನೆಯವರಿಂದ ಈ ಬಗೆಯ ಸ್ವಾತಂತ್ರ್ಯ ಮತ್ತು ಸುರಕ್ಷೆ ದೊರಕಿದಾಗ ಆದ ಸಡಗರವನ್ನು, ಅಣ್ಣನಿಂದ ಅಮೂಲ್ಯ ಉಡುಗೊರೆಯೊಂದು ಸಿಕ್ಕಾಗ ಆದ ಖುಷಿಯನ್ನು ಹಲವರು ಇಲ್ಲಿ ಹೇಳಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನದ ಸಡಗರಕ್ಕೆ ಅವಳು ಸಾಕ್ಷಿಯಾಗಿರುವುದು ಹೀಗೆ…
1. ಗುಬ್ಬಿಯ ಕನಸಿಗೆ ಅಪ್ಪನೇ ರೆಕ್ಕೆ
ಮಕ್ಕಳ ಶಿಕ್ಷಣದ ವಿಷಯದಲ್ಲಿ ಹೆತ್ತವರು ತುಂಬಾ ಚಿಂತೆ ಮಾಡುತ್ತಾರೆ. ಯಾವ ಕೋರ್ಸ್‌ಗೆ ಸ್ಕೋಪ್ ಜಾಸ್ತಿ, ಯಾವ ಕೆಲಸಕ್ಕೆ ಸೇರಿದರೆ ಸಂಬಳ ಜಾಸ್ತಿ ಸಿಗುತ್ತೆ ಅಂತೆಲ್ಲಾ ಲೆಕ್ಕ ಹಾಕಿ, ಕುರಿಮಂದೆಗೆ ತಮ್ಮ ಮಕ್ಕಳನ್ನೂ ತಳ್ಳಿಬಿಡ್ತಾರೆ. ಇಂಥ ಪರಿಸ್ಥಿತಿಯಲ್ಲಿ, ಕೃಷಿಯಲ್ಲಿ ಪದವಿ ಗಳಿಸೋದು ನನ್ನ ಕನಸು ಅಂದಾಗ, ಹಿಂದೆಮುಂದೆ ಯೋಚಿಸದೆ “ನಿನ್ಗೆ ಏನಿಷ್ಟಾನೋ, ಅದೇ ಮಾಡು’ ಅಂದಿದ್ದು ನಮ್ಮಪ್ಪ. ಪದವಿ ಮುಗಿಸಿ, ನಾನಿನ್ನೂ ಓದಬೇಕು (ಎಂ.ಎಸ್ಸಿ ಅಗ್ರಿ) ಅಂದಾಗ್ಲೂ, “ದುಡ್ಡಿನ ಬಗ್ಗೆ ಯೋಚಿಸ್ಬೇಡ. ನಾನು ಹೇಗಾದ್ರೂ ಓದಿಸ್ತೀನಿ’ ಅಂತ ಹೇಳಿದ್ದು ನನ್ನಪ್ಪ. ಮೊದಲೇ ಮನೇಲಿ ಕಷ್ಟ. ಇಬ್ಬರೂ ಹೆಣ್ಣುಮಕ್ಕಳೇ ಇರೋದು. ಅವರನ್ಯಾಕೆ ಇಷ್ಟು ಓದಿಸ್ತಾ ಇದ್ಯಾ ಅಂತ ನನ್ನಪ್ಪನ್ನ ಕೇಳಿದವರಿದ್ದಾರೆ. ಯಾರನ್ನೂ ಕೇಳದೆ, ಅದ್ಯಾವುದೋ ಕೋರ್ಸ್ ಸೇರಿಕೊಂಡಿದ್ಯಲ್ಲ, ಅದ್ರಲ್ಲೇನಿದೆ ಮಣ್ಣು ಎಂದವರಿದ್ದಾರೆ. ಆದರೆ, ನಾನಿವತ್ತು ಕುರಿಮಂದೆಯ ಕುರಿಯಲ್ಲ. ನನ್ನಪ್ಪನಂಥ ಹಲವು ರೈತರಿಗೆ ನೆರವಾಗುವ ಕೃಷಿ ಇಲಾಖೆಯಲ್ಲಿನ ಅಧಿಕಾರಿ. ಈಗ ತಂಗಿಯ ಸಿ.ಎ. ಮಾಡುವ ಕನಸಿಗೂ ಅಪ್ಪ ಅಸ್ತು ಎಂದಿದ್ದಾರೆ. “ನಾನು ನೂಕಿದ ದಿಕ್ಕಿಗಿಂತ ನೀವು ಆರಿಸಿಕೊಂಡ ದಿಕ್ಕಿನಲ್ಲಿ ನಡೆವಾಗಲೇ ನೀವು ಹೆಚ್ಚು ಜವಾಬ್ದಾರಿಯಿಂದ ಇರ್ತೀರಿ’ ಎಂಬುದು ಅಪ್ಪನ ನಿಲುವು. ನನಗೆ ಸ್ವಾತಂತ್ರ್ಯ ನೀಡಿ, ನನ್ನದೇ ಆಯ್ಕೆಯ ದಿಕ್ಕಿನಲ್ಲಿ ಹಾರಲು ಬಿಟ್ಟು, ಕೆಳ ನಿಂತು ನೋಡುವ ಅಪ್ಪನಿಗೆ ಈ ಹಕ್ಕಿ ಚಿರಋಣಿ.
– ಬೃಂದಾ ಕಂಚಿತೋಟ
2. ಅವನ ನಂಬಿಕೆಯ ಪ್ರತಿರೂಪ ನಾನು
ಪ್ರತಿ ನಿತ್ಯ ಓಡಾಡ್ತಾ ಇದ್ದ ಬಸ್ಸಿಗೆ ಬಂದಿದ್ದ ಅಪರಿಚಿತನೊಬ್ಬ ಆವತ್ತು ಗ್ರಹಚಾರ ಕೆಟ್ಟು ನನ್ನನ್ನು ಕೆಣಕುತ್ತಿದ್ದ. ಸಹಿಸುವಷ್ಟು ಸಹಿಸಿ, ಕಡೆಗೆ ಅದೇ ಬಸ್ಸಿನಲ್ಲಿದ್ದ ಅಣ್ಣನಿಗೆ ಸನ್ನೆಯಲ್ಲೇ ವಿಷಯ ಒಪ್ಪಿಸಿದ್ದೆ. ನನ್ನಣ್ಣ ಅವನಿಗೆ ತೆಗೆದುಕೊಂಡ ಕ್ಲಾಸಿನಲ್ಲಿ, ಬೇರೆಲ್ಲದಕ್ಕಿಂತ ನನ್ನ ಕಿವಿ ನೆಟ್ಟಗಾಗಿಸಿದ್ದು ಒಂದೇ ಮಾತು – “ನನ್ನ ತಂಗಿ ಸುದ್ದಿಗೆ ಬಬೇìಡ’… ಆ ಮಾತು ನನ್ನ ತೂಕ ಜಾಸ್ತಿ ಮಾಡಿಬಿಟ್ಟಿತ್ತು!
ಆವತ್ತಿಂದ ಅದೇನೋ ಹೆಚ್ಚಿನ ಆತ್ಮವಿಶ್ವಾಸ. ಅಲ್ಲಿ ತನಕ ಅವನ ಪ್ರೀತಿ ಮಾತ್ರ ನೋಡಿದ್ದ ನಂಗೆ, ಆವತ್ತು ಅವನ ಕೋಪದ ರೂಪ ನೋಡಿ ಭದ್ರತೆಯ ಭಾವ. ಹಾಗೆ ನೋಡಿದ್ರೆ ಅಣ್ಣ ಮೊದ್ಲಿಂದನೂ ನನ್ನೆಲ್ಲ ಕನಸುಗಳಿಗೆ ಬಲ, ಬೆಂಬಲ, ಬಣ್ಣಗಳನ್ನ ತುಂಬಿ, “ಪುಟ್ಟಿ, ನಾನಿದೀನಿ’ ಅಂತ ಹುರಿದುಂಬಿಸುತ್ತಿದ್ದ. ಯಾರಾದ್ರೂ, “ನೀನು ತುಂಬಾ ಬೋಲ್ಡ್, ಭಯಾನೇ ಇಲ್ಲ ಅಲ್ವಾ ನಿಂಗೆ?’ ಅಂತೆಲ್ಲ ಹೇಳಿದ್ರೆ ನಂಗೆ ಮೊದಲು ನೆನಪಾಗೋದು ಅವನೇ! ನನ್ನ ಮೇಲೆ ಅವನಿಟ್ಟ ನಂಬಿಕೆಯ ಪ್ರತಿರೂಪ ನಾನು. ಎದುರುಗಡೆ ಬರೀ ಕೋಳಿ ಜಗಳವಾಡೋ ನಾನು ಇದುವರೆಗೂ ಅವನಿಗೆ ಹೇಳಿಲ್ಲ, ಈ ಸ್ವಾಭಿಮಾನಿ ಹುಡುಗಿಯ ಹಿಂದಿನ ಪ್ರೇರಕ ಶಕ್ತಿ ನೀನೇ ಅಂತ. ಅಣ್ಣಾ, ನೀ ಕೊಟ್ಟ ಸಹಕಾರ, ಸ್ವಾತಂತ್ರ್ಯ, ನಾನೀದೀನಿ ಅನ್ನೋ ಧೈರ್ಯ ಸಾಕು ಈ ಜನ್ಮಕೆ. ಮುಂದಿನ ಜನ್ಮ ಅಂತ ಇದ್ರೆ, ನೀನೇ ನನ್ನ ಅಣ್ಣ ಆಗ್ಬೇಕು. ಥ್ಯಾಂಕ್ಯೂ ಮತ್ತೆ ಲವ್ಯೂ ಅಣ್ಣ..
-ಸಂಧ್ಯಾ ಭಾರತಿ
3. ಎಲ್ಲದಕ್ಕೂ ಸೈ, ಅಪ್ಪ ಜೊತೆಗಿದ್ದರೆ…
ಹಕ್ಕಿಯನ್ನು ಪಂಜರದಿಂದ ಹೊರ ಬಿಟ್ಟರೆ ತಾನೇ ಅದು ಆಕಾಶ ಮುಟ್ಟಿ ಬರಲು ಸಾಧ್ಯ.. ಹಾಗೇ ವ್ಯಕ್ತಿಯೊಬ್ಬನ ಗೆಲುವಿಗೆ ವ್ಯಕ್ತಿ ಸ್ವಾತಂತ್ರ್ಯ ಅನ್ನೋದು ತುಂಬಾ ಮುಖ್ಯ. ಆದ್ರೆ, ಭಾರತದ ಬಹುತೇಕ ಹೆಣ್ಣು ಮಕ್ಕಳಿಗೆ ಆ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಈ ವಿಷಯದಲ್ಲಿ ನಾನು ತುಂಬಾ ಲಕ್ಕಿ! ಬಾಲ್ಯದಿಂದಲೂ, ನನಗೆ ಸೂಕ್ತವೆನಿಸಿದ್ದನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವನ್ನು ನನ್ನಪ್ಪ ನಂಗೆ ಕೊಟ್ಟಿದ್ದಾರೆ. ಕಾಳಜಿಯಿಂದ ಸಲಹೆ ಕೊಡುತ್ತಾರೆಯೇ ವಿನಃ, ಯಾವತ್ತೂ ಅವರ ಇಷ್ಟಗಳನ್ನು ನನ್ನ ಮೇಲೆ ಹೇರುವುದಿಲ್ಲ.
ನಾನೇ ದುಡಿದ ದುಡ್ಡಿನಲ್ಲಿ ಸ್ನಾತಕೋತ್ತರ ಪದವಿ ಓದೋಕೆ ಹೊರಟಾಗ, ಇಡೀ ಕುಟುಂಬವೇ ಬೇಡ ಅಂದಿತ್ತು. ಆಗ ಬೆನ್ನೆಲುಬಾಗಿ ನಿಂತಿದ್ದು ಅಪ್ಪ. ಇಡೀ ಕುಟುಂಬದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದಾಕೆ ನನ್ನ ಮಗಳು, ಅನ್ನುವ ಹೆಮ್ಮೆ ಅವರಿಗಿದೆ. ಗೆಳೆಯರ ಜೊತೆ ಪ್ರವಾಸ ಹೋಗುವುದಿರಲಿ, ನನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವುದಿರಲಿ ಯಾವುದಕ್ಕೂ ಅಪ್ಪ ನನ್ನನ್ನು ತಡೆದಿಲ್ಲ. ನಾನು ಮಾಡುವ ಕೆಲಸದಲ್ಲಿ ನನ್ನಷ್ಟೇ ನಂಬಿಕೆ, ಅವರಿಗೆ. ಯಾವುದೇ ಹೊಸ ಸಾಹಸಕ್ಕೆ ಕೈ ಹಾಕುವುದಕ್ಕೂ ನಾನು ತಯಾರಿದ್ದೀನಿ ಅಂದ್ರೆ ಅದಕ್ಕೆ, ಅಪ್ಪ ಜೊತೆಗಿದ್ದಾರೆಂಬ ಧೈರ್ಯವೇ ಕಾರಣ. ಅಪ್ಪ ನನ್ನನ್ನು ಬೆಳೆಸಿದ ರೀತಿಯಿಂದಾಗಿ, ಪ್ರಪಂಚದ ಯಾವ ಮೂಲೆಗೆ ಹೋದರೂ ಬದುಕು ಕಟ್ಟಿಕೊಳ್ಳಬಲ್ಲೆ, ಎಂಥ ಪರಿಸ್ಥಿತಿ ಬಂದರೂ ಎದುರಿಸಬಲ್ಲೆ ಅನ್ನೋ ಧೈರ್ಯ ನನಗಿದೆ. ಇಂಥ ಧೈರ್ಯ ಎಲ್ಲ ಹೆಣ್ಣು ಮಗಳಲ್ಲೂ ಬರಲಿ…ಅಪ್ಪನಂಥ ಅಪ್ಪ ಎಲ್ಲರಿಗೂ ಸಿಗಲಿ..
– ಮಂದಾರ ಭಟ್
4. ಆಸಕ್ತಿ, ಆದ್ಯತೆಗಳಲ್ಲಿ ಎಂದಿಗೂ ಸ್ವತಂತ್ರಳು
ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ವ್ಯತ್ಯಾಸವನ್ನು ಬಾಲ್ಯದಿಂದಲೇ ಹೆತ್ತವರು ಅರ್ಥ ಮಾಡಿಸಿದ್ದರು. ಆಗಿನ ಕಾಲದಲ್ಲೇ ಮನೆಯ ಎಲ್ಲ ಹೆಣ್ಮಕ್ಕಳಿಗೂ, ಹಳ್ಳಿಯಿಂದ ಬಸ್ಸಿನಲ್ಲಿ ಒಬ್ಬರೇ ಪೇಟೆಗೆ ಹೋಗಿ, ಅಗತ್ಯ ವಸ್ತುಗಳನ್ನು ಸ್ವತಃ ಖರೀದಿಸಿ ತರುವಷ್ಟು ಸ್ವಾತಂತ್ರ್ಯವಿತ್ತು. ಅಂಥ ವಾತಾವರಣದಲ್ಲಿ ಬೆಳೆದ ನನಗೆ ಮದುವೆಯಾಗಿ ಮಕ್ಕಳಾದ ಮೇಲೂ, ಹವ್ಯಾಸವನ್ನು ಮುಂದುವರಿಸಲು, ಕನಸನ್ನು ಬೆಂಬತ್ತಲು ಅವಕಾಶ, ಪ್ರೋತ್ಸಾಹ ಸಿಕ್ಕಿದೆ. ಗಂಡನಿಂದಾಗಲಿ, ಪುಟ್ಟ ಮಕ್ಕಳಿಂದಾಗಲಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ ಅಂತ ಅನ್ನಿಸಿದ್ದೇ ಇಲ್ಲ. ಕಾದಂಬರಿ ಬರೆದು ಪ್ರಕಟಿಸಲು, ಯೋಗದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುವ ಹಲವು ವರ್ಷಗಳ ಕನಸನ್ನು ನನಸು ಮಾಡಲು ಕುಟುಂಬದಿಂದ ಎಲ್ಲ ರೀತಿಯ ಸಹಕಾರ ದೊರೆತಿದೆ. ಭಾನುವಾರ ತರಗತಿಗಳು ಇರುವುದರಿಂದ, ಆ ದಿನ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಗಂಡ ವಹಿಸಿಕೊಂಡಿದ್ದಾರೆ. ಹಿಡಿದ ಕೆಲಸವನ್ನು ಮಾಡಿ ಮುಗಿಸಲು ಇಚ್ಛಾಶಕ್ತಿಯ ಕೊರತೆಯಾಗದಂಥ ವಾತಾವರಣವನ್ನು ಕಲ್ಪಿಸಿದ್ದಾರೆ. ವಿಶಾಲವಾದ ಜಗತ್ತಿನೊಳಗೆ ನನ್ನದೇ ಪುಟ್ಟಪ್ರಪಂಚದಲ್ಲಿ ಖುಷಿಯಾಗಿ, ಸ್ವತಂತ್ರವಾಗಿ ಬದುಕಲು ನೂರಾರು ದಾರಿಗಳಿವೆ ಎಂಬ ಸತ್ಯದ ಅರಿವು ಇರುವುದರಿಂದ ನನ್ನ ಆಸಕ್ತಿ, ಆದ್ಯತೆ ಮತ್ತು ನಿರ್ಧಾರಗಳ ವಿಷಯಗಳಲ್ಲಿ ನಾನು ಯಾವತ್ತೂ ಸ್ವತಂತ್ರಳು.
-ವಿದ್ಯಾ ದತ್ತಾತ್ರಿ ಹೊಸಕೊಪ್ಪ
1. ಅಣ್ಣ ಹೊಲಿದು ಕೊಟ್ಟ ಬ್ಯಾಗು!
ನಾನಾಗ 4ನೇ ತರಗತಿಯಲ್ಲಿದ್ದೆ. ಆ ದಿನಗಳಲ್ಲಿ ಶಾಲೆ ಬ್ಯಾಗು ರಿಪೇರಿ ಮಾಡಿದರೆ, ಊಟದ ಬ್ಯಾಗು ಹರಿದಿರುತ್ತಿತ್ತು. ಆಗ ಮನೆಯಲ್ಲಿ ಗಟ್ಟಿ ಪ್ಲಾಸ್ಟಿಕ್‌ನಂಥ ವಸ್ತುವಿನ ಕ್ಯಾಲೆಂಡರ್ ಇತ್ತು. ಬಾಲಕೃಷ್ಣನ ಚಂದದ ಫೋಟೊ ಇದ್ದ ಕ್ಯಾಲೆಂಡರ್ ಅದು. ನಾನದನ್ನು ಬ್ಯಾಗ್‌ನಲ್ಲಿ ಇರಿಸಿ ಪುಸ್ತಕಗಳು ನೆನೆಯದಂತೆ ವ್ಯವಸ್ಥೆ ಮಾಡಿದ್ದೆ. ಅದು ಹೇಗೋ ಸುನಿಲಣ್ಣನ ಕಣ್ಣಿಗೆ ಬಿತ್ತು. ಅದರಲ್ಲಿ ಊಟದ ಬ್ಯಾಗ್ ಹೊಲಿದುಕೊಟ್ಟರೆ ಕನಿಷ್ಠ 6 ತಿಂಗಳವರೆಗೆ ಊಟದ ಬ್ಯಾಗ್ ಪಿರಿಪಿರಿ ಇರುವುದಿಲ್ಲ ಎಂದು, ಅಣ್ಣ ಅದರಲ್ಲಿ ಊಟದ ಬ್ಯಾಗ್ ಹೊಲಿದು ಕೊಟ್ಟ. ಮರುದಿನದಿಂದ ನಾನದರಲ್ಲಿ ಊಟದ ಡಬ್ಬಿ ಒಯ್ಯಬೇಕು. ಇಂಥ ಬ್ಯಾಗ್‌ನಲ್ಲಿ ಒಯ್ದರೆ ಮಕ್ಕಳು, ಟೀಚರ್ ನಗಲ್ವಾ? ದಾರಿಯಲ್ಲಿ ಎಲ್ಲರೂ ವಿಚಿತ್ರವಾಗಿ ನೋಡಲ್ವಾ? ಅಂತ ಬೇಜಾರಾಗಿತ್ತು. ಆದರೆ, ವಿಧಿ ಇಲ್ಲದೇ ಮುಜುಗರದಿಂದಲೇ ಅದನ್ನು ಒಯ್ದೆ. ಶಾಲೆಗೆ ಹೋದ ಎರಡೇ ಗಂಟೆಗಳಲ್ಲಿ ನನ್ನ ಮುಜುಗರ ಹೆಮ್ಮೆಯಾಗಿ ಬದಲಾಯಿತು.
ಮೂಲೆಯಲ್ಲಿ ಅಡಗಿಸಿಟ್ಟಿದ್ದ ಬ್ಯಾಗ್ ಟೀಚರ್ ಕಣ್ಣಿಗೆ ಬಿದ್ದು, ಅದನ್ನೆತ್ತಿ ಹಿಡಿದು ಯಾರದೆಂದು ಕೇಳಿದರು. ನಾನು, “ಅದು ನಂದು, ಅಣ್ಣ ಹೊಲಿದುಕೊಟ್ಟಿದ್ದು’ ಅಂತ ಹೇಳಲು, ಅವರಿಗೆ ಆಶ್ಚರ್ಯ! ಅವತ್ತು ಶಾಲೆ ಮುಗಿಯುವಷ್ಟರಲ್ಲಿ ನನ್ನ ಬ್ಯಾಗ್ ಫುಲ್ ಫೇಮಸ್ ಆಗಿತ್ತು. ದಾರಿಯಲ್ಲಿ ಹೋಗುವಾಗ ಕಾಲೇಜು ಹುಡುಗಿಯರು ನನ್ನ ಬ್ಯಾಗ್ ಕಡೆ ಕಣ್ಣು ಹಾಯಿಸುತ್ತಿದ್ದರು. ಮನೆ ರಸ್ತೆಯ ದಾರಿಯಲ್ಲಿ ಆಂಟಿಯರೆಲ್ಲ ಕರೆದು ಬ್ಯಾಗ್ ನೋಡುತ್ತಿದ್ದರು. ಆ ಬ್ಯಾಗ್ ಹರಿದು ಮೂಲೆ ಸೇರುವವರೆಗೂ ನಾನದನ್ನು ಹೆಮ್ಮೆಯಿಂದ ಬಳಸಿದ್ದೇನೆ. ಅಣ್ಣಂದಿರು, ತಮ್ಮಂದಿರು ಕೊಟ್ಟಿರುವ ಹಲವಾರು ದುಬಾರಿ ಗಿಫ್ಟ್ಗಳು ನನ್ನ ಬಳಿ ಇವೆ. ಆದರೆ ಈ ಬ್ಯಾಗ್ ಕೊಟ್ಟ ಖುಷಿಯ ತೂಕವೇ ಬೇರೆ.
-ಚೇತನ ಜೆ.ಕೆ
2. ಮಾತಿಲ್ಲ ಕಥೆಯಿಲ್ಲ..
ನನ್ನ ಉದ್ದ ಜಡೆಯನ್ನು ಅಣ್ಣ ಎಳೆದು ಕಿತ್ತಿದ್ದ. ನಾನವನ ಮುಖ ಪರಚಿದ್ದೆ. ಜಗಳ ಶುರುವಾದ ಕಾರಣ ಗೊತ್ತಿಲ್ಲ. ನಾನು ಉಪ್ಪರಿಗೆಯಲ್ಲಿ ಟಿ.ವಿ. ನೋಡುತ್ತಿದ್ದರೆ ಅಣ್ಣ ಗುಡ್ಡೆಯ ಮೇಲಿದ್ದ ಡಿಶ್ ಅನ್ನು ಅಡ್ಡಾದಿಡ್ಡಿ ತಿರುಗಿಸಿ ನನಗೆ ಬುದ್ಧಿ ಕಲಿಸಿದ ಖುಷಿಯಲ್ಲಿದ್ದ. ಮುಖವೆಲ್ಲ ಕೆಂಪಡರಿ, “ಏಯ್.. ನಿನ್ನನ್ನು ಇವತ್ತು ಬಿಡದಿಲ್ಲೆ’ ಎಂದು ರುದ್ರಕಾಳಿಯಂತೆ ಕಿರುಚುತ್ತಾ ಕೈಗೆ ಸಿಕ್ಕ ದಪ್ಪ ಬ್ಯಾಟ್ ಹಿಡಿದು ಅವನ ಕಾಲಿಗೆ ರಪ್ಪನೆ ಬೀಸಿ ಒಗೆದಿದ್ದೆ. ನೋವು ಅವನಿಗಾಗಿದ್ದರೆ ನಾನು “ರೊಂಯ್ಯೋ…’ ಎನ್ನುತ್ತಾ ಆಕಾಶ ಕಿತ್ತೇಳುವಷ್ಟು ಅಳುತ್ತಾ ಕೂತೆ. ಅವನಾಗ ಡಿಗ್ರಿ, ನಾನು ಪಿಯುಸಿ. ಅಣ್ಣನ ಜೊತೆ ಲೈಫಿಡೀ ಮಾತನಾಡುವುದಿಲ್ಲ ಎಂದು ನಿರ್ಧರಿಸಿದ್ದೆ!
ಮಾತಿಲ್ಲದೆ ವಾರ ಕಳೆದಿತ್ತು. ಥಿಯೇಟರ್‌ಗೆ ಹೋಗಿ ಬಂದರೆ ನನಗೆ ಸಿನಿಮಾ ಕಥೆ ಹೇಳುತ್ತಿರಲಿಲ್ಲ. ಕ್ಲಾಸಿನ ರಸವತ್ತಾದ ಸಮಾಚಾರಗಳನ್ನೂ ಹೇಳುತ್ತಿರಲಿಲ್ಲ. ತಾನೊಬ್ಬನೇ ಡಿಶ್ ತಿರುಗಿಸಿಕೊಂಡು ಫಿಲ್ಮ್ ನೋಡುತ್ತಿದ್ದರೆ, ಬಿಂಕದಿಂದಲೇ ದೂರದಲ್ಲಿ ಕೂರುತ್ತಿದ್ದೆ. ಹೀಗೆ ಮೂರು ತಿಂಗಳೇ ಕಳೆಯಿತು! ಅವನು ಒಂದು ವಾರ ದೆಹಲಿ ಟ್ರಿಪ್ ಹೊರಟ. ಮಾತಿಲ್ಲದೆ ಇರುವುದರ ಸಂಕಟ ಈಗ ಅಸಹನೀಯವಾಗಿತ್ತು. ಟ್ರಿಪ್ ಮುಗಿಸಿ ಬಂದು ಮಲಗಿದ್ದ ಅಣ್ಣನನ್ನು ಊಟಕ್ಕೆಬ್ಬಿಸುವ ನೆಪದಲ್ಲಿ, “ಅಣ್ಣಾ, ಬಾ’ ಎಂದೆ. ಅವನಿಗೂ ಅದೇ ಬೇಕಾಗಿತ್ತೇನೋ ಎಂಬಂತೆ ಶುರುವಾದ ಮಾತು ನಿಲ್ಲಲೇ ಇಲ್ಲ. ಲವಲವಿಕೆಯ ಮಾತಿನಿಂದಲೇ ಪ್ರೇರೇಪಿಸುತ್ತಿದ್ದ, ಇದ್ದಬದ್ದ ಗುಟ್ಟುಗಳನ್ನೆಲ್ಲಾ ಹಂಚಿಕೊಳ್ಳುತ್ತಿದ್ದ, ಇಂಥಾ ಪುಸ್ತಕ ಓದು ಎಂದು ಕೈಯಲ್ಲಿ ಹಿಡಿಸುತ್ತಿದ್ದವನ ಮಾತುಗಳಿಲ್ಲದೆ ಮೂರು ತಿಂಗಳು ಹೇಗಿದ್ದೆನೋ? ಅವನ ಮಾತೇ ಉಡುಗೊರೆಯಾದ ಆ ದಿನವನ್ನು ಮರೆಯಲೇ ಸಾಧ್ಯವಿಲ್ಲ.
-ಶ್ರೀಕಲಾ ಡಿ.ಎಸ್.
3. ಕಾಳಜಿಗೊಬ್ಬ, ರಕ್ಷಣೆಗೊಬ್ಬ
ಒಬ್ಬ ಅಣ್ಣ ಅಥವಾ ತಮ್ಮ ಇದ್ದರೆ ಅದೇ ಅದೃಷ್ಟ ಅಂತಾರೆ. ಇನ್ನು ಇಬ್ಬರಿದ್ದರೆ ಕೇಳಬೇಕೆ? ಹಾಸ್ಟೆಲ್‌ನಲ್ಲಿದ್ದು ಪಿ.ಯು.ಸಿ ಓದುತ್ತಿದ್ದೆ. ಪ್ರತಿದಿನ ಬರೀ ಐದು ನಾಣ್ಯದಲ್ಲಿ ಮನೆಯವರೊಂದಿಗೆ ಮಾತು ಮುಗಿಸಬೇಕಿತ್ತು. ಮನ ಬಿಚ್ಚಿ ಅಷ್ಟೂ ಸಮಾಚಾರಗಳನ್ನು ಹಂಚಿಕೊಳ್ಳಲಾಗದೆ ಚಡಪಡಿಸುತ್ತಿದ್ದಾಗ ನನ್ನ ಹೆಸರಿಗೊಂದು ಪತ್ರ ಬಂದಿತ್ತು.
ಹೇಳದೆ ಉಳಿಯುತ್ತಿದ್ದ ಮಾತು ಅಣ್ಣನಿಗಲ್ಲದೆ ಬೇರಾರಿಗೆ ಅರ್ಥವಾದೀತು? ನನ್ನ ಹೆಸರಲ್ಲಿ ಬಂದ ಮೊದಲ ಪತ್ರ ಅದು. ಕೊನೆಯಲ್ಲಿ ಅವನು ಬರೆದಿದ್ದ- ನೀನೂ ಪತ್ರ ಬರೆಯೋದಾದ್ರೆ, ಎನ್ವಲಪ್ ಮತ್ತು ಸ್ಟಾಂಪ್ ಇಟ್ಟಿದ್ದೇನೆ ನೋಡು. ಎಲ್ಲವನ್ನೂ ತುಂಬಿ ಕಳಿಸಿದ್ದ ನನ್ನ ದೊಡ್ಡಣ್ಣ. ಇಲ್ಲಿಯವರೆಗೆ ಅವನು ಅದೆಷ್ಟೋ ಉಡುಗೊರೆ ನೀಡಿದ್ದರೂ, ಆ ಪತ್ರವನ್ನು ಮೀರಿದ್ದು ಯಾವುದೂ ಇಲ್ಲ.
ಇನ್ನೊಮ್ಮೆ, ಮೂರನೇ ತರಗತಿಯಲ್ಲಿದ್ದ ನನ್ನನ್ನು, ಸಹಪಾಠಿಯೊಬ್ಬ ಚುಡಾಯಿಸಿ ಅಳಿಸಿದಾಗ, “ಏನೋ ನನ್ನ ತಂಗಿಗೆ ಹೋಡೀತ್ಯ?’ ಅಂತ ಚಿಕ್ಕಣ್ಣ ನನ್ನ ಅಳು ನಿಲ್ಲೋವರೆಗೂ, ಆತನಿಗೆ ಹೊಡೆದಿದ್ದ. ಅಂದೇ ನನಗೆ ರಕ್ಷಾಬಂಧನದ ಅರ್ಥ ಸಿಕ್ಕಿತ್ತು. ಕಾಳಜಿಗೊಬ್ಬ, ರಕ್ಷಣೆಗೊಬ್ಬ ಇರುವಾಗ, ಇವರಿಗೆ ಬೇರೆ ಹೆಸರು ಬೇಕೆ? ಅಣ್ಣ ಎಂದರೆ ಅಷ್ಟೇ ಸಾಕೇ?
– ಸಹನಾ ಕಾರಂತ್
4. ಅವನೇ ಉಡುಗೊರೆ
ಅಣ್ಣ ಅಪ್ಪನ ಪ್ರತಿರೂಪ ಅಂತಾರೆ. ಆ ಮಾತಿಗೆ, ಕಳೆದ ವರ್ಷ ನಡೆದ ಘಟನೆಯೇ ಸಾಕ್ಷಿ. ಅವತ್ತು ಜ್ವರವಿದ್ದರೂ ಪರೀಕ್ಷೆ ಬರೆಯೋಕೆ ಹೊರಟಿದ್ದೆ. ಟೈಮ್ ಆಯ್ತು ಅಂತ, ತಿಂಡಿಯನ್ನೂ ತಿನ್ನದೆ ಗಡಿಬಿಡಿಯಲ್ಲಿ ಹೊರಟೆ. ಪರೀಕ್ಷೆ ಕೊಠಡಿಗೆ ಹೋಗಿ ನೋಡಿದರೆ, ಐಡಿ ಕಾರ್ಡ್ ಇಲ್ಲ! ಗಾಬರಿಯಿಂದ ಬ್ಯಾಗೆಲ್ಲಾ ಹುಡುಕಿದೆ, ಸಿಗಲಿಲ್ಲ. ಐಡಿ ಕಾರ್ಡ್ ಇಲ್ಲದೆ ಪರೀಕ್ಷೆ ಹ್ಯಾಗೆ ಬರೆಯೋದು? ಏನು ಮಾಡಲೂ ತೋಚದೆ ನಿಂತಿದ್ದಾಗ ಅಣ್ಣ ಪ್ರತ್ಯಕ್ಷ! ಅವನ ಕೈಯಲ್ಲಿ ಐಡಿ ಕಾರ್ಡ್! ಹೋದ ಜೀವ ಮರಳಿ ಬಂದಿತ್ತು. ಅದರ ಜೊತೆಗೆ ಪೆನ್ನನ್ನೂ ನನ್ನ ಕೈಗಿತ್ತ. ಪೆನ್ ನನ್ನ ಹತ್ರ ಇದೆ ಎಂದು ಬ್ಯಾಗ್ ನೋಡಿದಾಗಲೇ ಗೊತ್ತಾಗಿದ್ದು; ಅದನ್ನೂ ಮರೆತು ಬಂದಿದ್ದೇನೆಂದು!
ಚೂರೂ ಭಯವಿಲ್ಲದೆ ಪರೀಕ್ಷೆ ಬರೆದು ಹೊರಗೆ ಬಂದರೆ, 3 ಗಂಟೆಯಿಂದ ಅಣ್ಣ ನನಗಾಗಿ ಹೊರಗೆ ಕಾಯುತ್ತಿದ್ದ. ಹುಷಾರಿಲ್ಲದ ನನಗೆ ಗ್ಲೂಕೋಸ್ ನೀರು ಕುಡಿಸಿ, ಮನೆಗೆ ಕರೆದೊಯ್ದ. ಆಗ ಅವನು “ಅಪ್ಪ-ಅಮ್ಮ’ನಂತೆ ಕಾಳಜಿ ವಹಿಸಿದ್ದ! ಮರುದಿನದ ಪರೀಕ್ಷೆಗೆ, ಜೊತೆಯಲ್ಲೇ ಕುಳಿತು ಓದಿಸಿದ. ಆ ದಿನ ಅವನು ನನ್ನ ಪಾಲಿನ “ಗುರು’ವಾಗಿದ್ದ! ಎಲ್ಲಾ ಪರೀಕ್ಷೆ ಮುಗಿಯಿತೆಂದು ಹಾರಾಡುತ್ತಾ ಮನೆಗೆ ಬಂದಾಗ, ನನ್ನನ್ನು ಹೊರಗೆ ಸುತ್ತಾಡಲು ಕರೆದುಕೊಂಡು ಹೋದ. ಆಗ ಅವನು “ಸ್ನೇಹಿತ’ನಾಗಿದ್ದ! ಒಬ್ಬನಲ್ಲೇ ಎಲ್ಲರನ್ನೂ ಕಾಣುವ ಪುಣ್ಯ ನನಗೆ. ಇನ್ನೇನು ಉಡುಗೊರೆ ಕೇಳಲಿ ಅವನಲ್ಲಿ, ಅವನೇ ನನಗೆ ಉಡುಗೊರೆಯಾಗಿ ಸಿಕ್ಕಾಗ!
-ಮೇದಿನಿ ಎಚ್.ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.