ಹಣದಿಂದ ಸಂಬಂಧ ಗಟ್ಟಿ ಆಗಲ್ಲ…
Team Udayavani, Sep 2, 2020, 1:17 PM IST
ಸಾಂದರ್ಭಿಕ ಚಿತ್ರ
ಮೂವತ್ತು ವರ್ಷದ ಗೀತಾ, ಕಳೆದ ಎಂಟು ವರ್ಷಗಳಿಂದ ತನ್ನ ಕಾಲೇಜು ಗೆಳೆಯನಾದ ಶೇಖರ್ ಜೊತೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಇದ್ದಾಳೆ. ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ವೇರ್ ಎಂಜಿನಿಯರ್‌ಗಳು. ಇತ್ತೀಚೆಗೆ ಶೇಖರ್, ಊರಿನಲ್ಲಿ ಮನೆ ಕಟ್ಟುತ್ತಿದ್ದು, ಅದಕ್ಕೆ ಹಣ ಸಾಲಲಿಲ್ಲವೆಂದು ಗೀತಾಳ ಬಳಿ ಸಹಾಯ ಕೇಳಿದ. ಜೊತೆಗಾರನಿಗೆ ಸಹಾಯ ಮಾಡದಿದ್ದರೆ ಹೇಗೆ ಅಂದುಕೊಂಡ ಗೀತಾ, ಬ್ಯಾಂಕ್‌ನಲ್ಲಿ ಹನ್ನೆರಡು ಲಕ್ಷ ರೂಪಾಯಿ ಗಳ ಸಾಲ ಪಡೆದು, ಅದನ್ನು ಶೇಖರ್‌ನ ಬ್ಯಾಂಕ್ ಖಾತೆಗೆ ಜಮಾ ಮಾಡಿದಳು. ಹಣ ಜಮಾ ಆದಮೇಲೆ, ಶೇಖರ್‌ನ ವರ್ತನೆಯಲ್ಲಿ ಬಹಳ ಬದಲಾವಣೆಗಳಾದವು. ಒಂದು ಭಾನು ವಾರ, ಗೀತಾ ಮದುವೆಯ ಬಗ್ಗೆ ಮಾತನಾಡಿದಾಗ, ಹಣ ಕೊಟ್ಟು ನೀನು ನನ್ನನ್ನು ಖರೀದಿ ಮಾಡಿಲ್ಲ ಎಂದು ಜಗಳ ಆರಂಭಿಸಿ ಹೊಡೆ ದು- ಬೈದು ಮಾಡಿದ್ದಾನೆ.
ಶೇಖರನ ಬದಲಾದ ವರ್ತನೆಯಿಂದ ಮನನೊಂದು, ಗೀತಾ ನನ್ನ ಬಳಿ ಸಲಹೆಗಾಗಿ ಬಂದಿದ್ದಳು. ಆತ್ಮಹತ್ಯೆಯ ಆಲೋಚನೆಗಳು ಅವಳನ್ನು ಕಾಡುತ್ತಿದ್ದವು. ಹತ್ತು ವರ್ಷಗಳ ಗೆಳೆತನದಲ್ಲಿ ಯಾವಾಗಲೂ ಇಷ್ಟೊಂದು ಜಗಳವಾಗಿರಲಿಲ್ಲ. ತಂದೆ- ತಾಯಿಗೆ ಪಿ.ಜಿ. ವಾಸ್ತವ್ಯದಲ್ಲಿ ಇರುವುದಾಗಿ ಸುಳ್ಳು ಹೇಳಿ, ಶೇಖರ್ ಜೊತೆ ಸಂಸಾರ ಹೂಡಿದ್ದಳು ಗೀತಾ. ಈ ಬಗ್ಗೆ ಅವಳಿಗೆ, ಅಪರಾಧಿ ಮನೋಭಾವ ಜೊತೆಯಾಗಿತ್ತು. ಶೇಖರ್ ಜೊತೆ ಇದನ್ನೆಲ್ಲಾ ಹೇಳಿಕೊಂಡು, ಮದುವೆ ಆಗೋಣವಾ ಎಂದು ಕೇಳಿದಾಗೆಲ್ಲಾ ಆತ- ಮದುವೆಯಾದವರಿಗಿಂತ ಅನ್ಯೋನ್ಯವಾಗಿದ್ದೇವಲ್ಲಾ ಎಂದು ಮಾತು ಹಾರಿಸುತ್ತಿದ್ದ.
ಗೆಳೆತನ ಹಳೆಯಾದಷ್ಟೂ ನಂಬಿಕೆ ಜಾಸ್ತಿಯಾಗಬೇಕು, ಅಲ್ಲಿ ಅನುಮಾನಕ್ಕೆ ಆಸ್ಪದವಿರಬಾರದು ಎಂದು ವೇದಾಂತ ನುಡಿಯುತ್ತಿದ್ದ. ದೊಡ್ಡ ಮೊತ್ತದ ಸಾಲ ಕೊಟ್ಟರೆ, ಮದುವೆಗೆ ಕಮಿಟ್ ಆಗಬಹುದು ಎಂದು ಯೋಚಿಸಿದ ಗೀತಾ, ಹನ್ನೆರಡು ಲಕ್ಷ ಸಾಲ ಮಾಡಿದಳು. ಈಗ ಶೇಖರ್‌ನ ಒರಟು ಮಾತು ಕೇಳಿ, ಪ್ರೀತಿಯಲ್ಲಿ ನಂಬಿಕೆ ಕಳೆದುಕೊಂಡಿದ್ದಾಳೆ. ಮೊದಲಿಗೆ ಗೀತಾಗೆ ಧೈರ್ಯ ಹೇಳಬೇಕಿತ್ತು. ಆತ್ಮಹತ್ಯೆಯ ಆಲೋ ಚನೆಗಳು ಆಕೆಯ ಜೊತೆಯಾಗ ದಂತೆ ತಡೆಯಬೇಕಾ ಗಿತ್ತು. ಖನ್ನತೆಯಿಂದ ಕಳೆದುಕೊಂಡ ಜೀವ ಮತ್ತೆ ಬರುವುದಿಲ್ಲ ಎಂದು ಆಕೆಗೆ ಮನದಟ್ಟು ಮಾಡಿದೆ. ಹಣದ ಬಗ್ಗೆ ಚಿಂತಿಸಬೇಡವೆಂದು ಧೈರ್ಯ ತುಂಬಿದೆ.
ಗೀತಾಳ ತಂದೆತಾಯಿಗೆ ಈ ವಿಚಾರವನ್ನು ತಿಳಿಸಲು ನೆರವಾದೆ. ಅವರು ಸಮಸ್ಯೆಯನ್ನು ಪ್ರೌಢಿಮೆ ಯಿಂದ ಸ್ವೀಕರಿಸಿದರು. ಇದೇ ಸಮಯಕ್ಕೆ, ಗೀತಾಗೆ ದೆಹಲಿಯ ಶಾಖೆಗೆ ವರ್ಗವಾಯಿತು. ಗೀತಾ, ಇದೀಗ ದೆಹಲಿಯಲ್ಲಿ ತಂದೆ- ತಾಯಿಯ ರಕ್ಷೆಯಲ್ಲಿ ಲವಲವಿಕೆ ಹೊಂದಿದ್ದಾಳೆ. ಶೇಖರನ ಮನಸ್ಸು ಇನ್ನೂ ಗಡುಸಾಗಿದೆ. ಸಾಲಕ್ಕೆ ದಾಖಲೆ ಇರಬಹುದು, ಆದರೆ ಕೆಲವರಿಗೆ ಹಣ ವಾಪಸ್ ಕೊಡಲು ಸಂಕಟವಾಗುತ್ತದೆ. ಅವಳ ತಂದೆ ದುಷ್ಟ ಮನಸ್ಸಿನ ಶೇಖರನಿಗೆ ಮಗಳನ್ನು ಕೊಡಬೇಕಾ ಮೇಡಂ ಎಂದು ಕೇಳುತ್ತಾರೆ. ಸಂಬಂಧದಲ್ಲಿ ಒತ್ತಾಯ ಬೇಡ. ಅತೃಪ್ತ ಸಂಬಂಧವು ನಿದ್ದೆ, ಊಟ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೈಹಿಕ ಸಾಮೀಪ್ಯದಿಂದ ಅಥವಾ ಹಣಕಾಸಿನ ಸಹಾಯದಿಂದ ಬದ್ದತೆಯ ನ್ನಾಗಲೀ, ನಿಷ್ಠೆಯನ್ನಾಗಲೀ, ಸಂಬಂಧದಲ್ಲಿ ಹುಟ್ಟುಹಾಕಲು ಸಾಧ್ಯವಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸಂಬಂಧವನ್ನು ಸಾಕ್ಷಿಯ ಜೊತೆ ನೋಂದಣಿ ಮಾಡಿಸುವುದು ನಂಬಿಕೆ ಮತ್ತು ಸ್ಥಿರತೆಗಾಗಿಯೇ. ಇಲ್ಲದಿದ್ದರೆ ಚಂಚಲ ಮನಸ್ಸು ಸಂಗಾತಿಯ ಆಯ್ಕೆಯ ಬಗ್ಗೆ ಹೊಯ್ದಾಡುತ್ತದೆ. ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಮೋಸವೆನಿ ಸಿದರೆ, ಧೈರ್ಯಗೆಡಬೇಡಿ. ಆ ಬಾಂಧವ್ಯದಿಂದ ಎದ್ದು ಆಚೆ ಬನ್ನಿ. ಸಂತೆಯಲ್ಲಿ ಕಳೆದುಹೋದವರನ್ನು ಹುಡುಕಬಹುದು. ಬದಲಾದ ವರನ್ನು ಹುಡುಕಲು ಸಾಧ್ಯವಿಲ್ಲ.
-ಡಾ. ಶುಭಾ ಮಧುಸೂದನ್ ಚಿಕಿತ್ಸಾ ಮನೋವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.