ತಾರಾಮಂಡಲದಲ್ಲಿ…ಚಂದದ ಚೆಲುವಿನ ತಾರೆ
Team Udayavani, Dec 27, 2017, 6:15 AM IST
12ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟು, ಪೋಷಕ ಪಾತ್ರ, ನಾಯಕಿಯ ಪಾತ್ರ, ಕಲಾತ್ಮಕ ಚಿತ್ರಗಳಲ್ಲಿ ನಟನೆ ಹೀಗೆ ಚಿತ್ರರಂಗದಲ್ಲಿ ನಾನಾ ಪ್ರಯೋಗಗಳಿಗೆ ಒಗ್ಗಿಕೊಳ್ಳುತ್ತಾ ಕರ್ನಾಟಕದ ಹೆಂಗೆಳೆಯರ ಮತ್ತು ಚಿತ್ರ ರಸಿಕರ ಮನಸ್ಸಿನಲ್ಲಿ ಸ್ಥಾನ ಪಡೆದ ನಟಿ ತಾರಾ. 80- 90ರ ದಶಕದಲ್ಲಿ ಕನ್ನಡದ ಬಹುತೇಕ ಸೂಪರ್‌ಸ್ಟಾರ್ ನಟರ ಜೊತೆ ಕೀರ್ತಿ ಅವರದ್ದು.
ಒಂದೇ ತೆರನಾದ ಪಾತ್ರಕ್ಕೆ ಜೋತು ಬೀಳದೆ, ಸಣ್ಣ ಪಾತ್ರವಾದರೂ ಮನಸ್ಸಿನಲ್ಲಿ ಉಳಿಯುವಂತೆ ಅಭಿನಯಿಸುವ ಕಲೆ ಅವರಿಗೆ ಕರಗತ. ಗಿರೀಶ್ ಕಾಸರವಳ್ಳಿ ನಿರ್ದೇಶನದ “ಹಸೀನಾ’ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ, ಮತ್ತು ನಾಲ್ಕು ಬಾರಿ ರಾಜ್ಯ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ ತಾರಾ. ಸದ್ಯ, “ನೀವು ಕರೆ ಮಾಡಿರುವ ಚಂದಾದಾರರು ಬಿಝಿಯಾಗಿದ್ದಾರೆ’ ಸಿನಿಮಾದಲ್ಲಿ ತಾರಾ ಮಾಡರ್ನ್ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2005ರಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ತಾರಾ ಸಿನಿಮಾ ಛಾಯಾಗ್ರಾಹಕ ವೇಣು ಅವರ ಕೈಹಿಡಿದಿದ್ದರು. ಇವರಿಗೆ ಕೃಷ್ಣ ಎಂಬ ಹೆಸರಿನ 4 ವರ್ಷದ ಮುದ್ದಾದ ಮಗ ಇದ್ದಾನೆ. ಬಾಕ್ಸ್ ಪೇಪರ್ ಓದುವಾಗಲೆಲ್ಲಾ ಶಂಕರ್‌ನಾಗ್ ಸರ್ ಕಣ್ಮುಂದೆ ಸುಳಿದು ಹೋಗ್ತಾರೆ.
ನನಗೆ ಪೇಪರ್ ಓದುವ ಅಭ್ಯಾಸ ಮಾಡಿಸಿದ್ದೇ ಶಂಕರ್‌ನಾಗ್. ಅವರು ಸೆಟ್‌ಗೆ ಬರುವಾಗ 5-6 ನ್ಯೂಸ್ ಪೇಪರ್‌ಗಳನ್ನು ತರುತ್ತಾ ಇದ್ದರು. ಅವಷ್ಟನ್ನೂ ಓದುತ್ತಿದ್ದರು. ಬಿಡುವಿದ್ದರೆ ಪದಬಂಧ ಬಿಡಿಸುವುದೋ ಅಥವಾ ರಸ ಪ್ರಶ್ನೆಗಳಿಗೆ ಉತ್ತರಿಸುವುದನ್ನೋ ಮಾಡುತ್ತಿದ್ದರು. ನಾನು ಕೇವಲ ಸಿನಿಮಾ ಪುಟವನ್ನು ಮಾತ್ರ ತೆಗೆದುಕೊಂಡು ಓದುತ್ತಿದ್ದೆ. ಕ್ರಮೇಣ ಅವರಿಗೆ ಗೊತ್ತಾಯ್ತು ನನಗೆ ಸಿನಿಮಾ ರಂಗ ಬಿಟ್ಟರೆ ಬೇರಾವ ವಿಷಯದಲ್ಲೂ ಆಸಕ್ತಿ ಇಲ್ಲ ಅಂತ. ಬಳಿಕ ಇಡೀ ಪೇಪರನ್ನು ಕಡೇ ಪುಟದ ಇಂಪ್ರಿಂಟ್‌ವರೆಗೂ ಓದಲು ಹಚ್ಚುತ್ತಿದ್ದರು. ಚಿತ್ರೀಕರಣದ ನಡುನಡುವೆ ಯಾವುದಾದರೂ ಪತ್ರಿಕೆ ಹೆಸರು ಹೇಳಿ, ಆ ಪತ್ರಿಕೆಯಲ್ಲಿ ಬಂದ ಸುದ್ದಿ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಇವತ್ತಿಗೂ ಪೇಪರ್ ಓದುವಾಗ ಶಂಕರ್ ನಾಗ್ ಸರ್ ನೆನಪಾಗುತ್ತಾರೆ.
ಒಂದೇ ಒಂದು ದಿನವೂ ಕಲಾಪ ತಪ್ಪಿಸಿಲ್ಲ.
2008ರಲ್ಲಿ ರಾಜಕೀಯಕ್ಕೆ ಬಂದೆ. ನಾನು ರಾಜಕೀಯಕ್ಕೆ ಕಾಲಿಟ್ಟಿದ್ದು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ. ವಿಧಾನ ಪರಿಷತ್ ಸದಸ್ಯೆಯಾಗಿ ನಾಮ ನಿರ್ದೇಶನಗೊಂಡೆ. ಅಂದಿನಿಂದ ಇಲ್ಲಿಯವರೆಗೂ ಒಂದೇ ಒಂದು ಕಲಾಪವನ್ನೂ ನಾನು ತಪ್ಪಿಸಿಲ್ಲ. ಹಾಗಂತ ಸುಮ್ಮನೆ ವಿಧಾನ ಸೌಧದ ಒಳಗೆ ಕುಳಿತು ಬಂದಿಲ್ಲ. ಪ್ರತಿ ಬಾರಿಯೂ ಏನಾದರೊಂದು ಸಮಸ್ಯೆಯ ಕುರಿತು ಚರ್ಚಿಸುವುದೋ, ಪ್ರಶ್ನಿಸುವುದನ್ನೋ ಮಾಡಿದ್ದೇನೆ. ನನ್ನ ಮಗ ಹಾಲು ಕುಡಿಯುವಾಗ ಆತನನ್ನು ಕರೆದುಕೊಂಡು ಹೋಗಿ ಮಹಿಳಾ ಕೋಣೆಯಲ್ಲಿ ಬಿಟ್ಟು ಕಲಾಪಕ್ಕೆ ಹಾಜರಾಗಿದ್ದೇನೆ. ಇಡೀ ಕರ್ನಾಟಕದಲ್ಲಿ ವಿಧಾನ ಪರಿಷತ್ ಸದಸ್ಯರಾಗುವ ಅದೃಷ್ಟ ಇರುವುದು ಕೇವಲ 72- 75 ಜನರಿಗೆ ಮಾತ್ರ. ಹೀಗಿರುವಾಗ ನಾವು ನಮ್ಮ ಜವಾಬ್ದಾರಿ ಅರಿತು ನಡೆಯಬೇಕಲ್ವಾ.
ರಾಜ್ ಕುಟುಂಬದ ನಾಲ್ವರು ಸ್ಟಾರ್‌ಗಳ ಜೊತೆ ನಟಿಸಿದ ಹೆಮ್ಮೆ ನನ್ನದು.
ರಾಜ್ ಕುಮಾರ್ ಅಣ್ಣ ಜೊತೆ “ಗುರಿ’ ಚಿತ್ರದಲ್ಲಿ ನಟಿಸಿದಾಗ ನನಗೆ 16 ವರ್ಷ. ಸೆಟ್‌ನಲ್ಲಿ ಅವರು ನನ್ನನ್ನು ಮಗಳ ರೀತಿ ನೋಡಿಕೊಂಡಿದ್ದರು. ಬಳಿಕ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಜೊತೆಯೂ ನಟಿಸಿದ್ದೇನೆ. ಬಹುಷಃ ರಾಜ್ ಕುಟುಂಬದ ನಾಲ್ವರು ಸ್ಟಾರ್‌ಗಳ ಜೊತೆ ನಟಿಸುವ ಅವಕಾಶ ಬೇರೆ ಯಾವ ನಟಿಯರಿಗೂ ಸಿಕ್ಕಿಲ್ಲ.
– ನಿಮ್ಮ ಯಾವ ಚಿತ್ರಗಳು ನಿಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿವೆ?
ಚಿತ್ರರಂಗದ ದಂತಕಥೆ ಕೆ.ಬಾಲಚಂದರ್ ನಿರ್ದೇಶನದ “ಸುಂದರ ಸ್ವಪ್ನಗಳು’, ವಿಷ್ಣುವರ್ಧನ್ ಸರ್‌ಗೆ ಹೀರೊಯಿನ್ ಆಗಿ ಜೊತೆ ನಟಿಸಿದ “ಡಾ.ಕೃಷ್ಣ’. ರಾಜ್ ಕುಮಾರ್‌ರ ತಂಗಿಯಾಗಿ ನಟಿಸಿದ್ದ “ಗುರಿ’.
– ಸಾಕಷ್ಟು ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಿದ್ದೀರಾ. ಪುಸ್ತಕ ಓದುವ ಅಭ್ಯಾಸ ಇದೆಯಾ?
1999ರಲ್ಲಿ “ಕಾನೂರು ಹೆಗ್ಗಡತಿ’ ಚಿತ್ರ ಒಪ್ಪಿಕೊಂಡಾಗಲೇ ನಾನು ಮೊದಲ ಬಾರಿಗೆ ಕಾದಂಬರಿಯೊಂದನ್ನು ಕೈಯಲ್ಲಿ ಹಿಡಿದಿದ್ದು. ಅಷ್ಟು ದೊಡ್ಡ ಪುಸ್ತಕವನ್ನು ಅದೇ ಮೊದಲ ಬಾರಿಗೆ ನಾನು ಓದಿದ್ದು. ಆಮೇಲೆ ಓದಿನ ರುಚಿ ಹಿಡಿಯಿತು. ನನಗನ್ನಿಸುವಂತೆ ನನ್ನ ಜೀವನದಲ್ಲಿ ಹವ್ಯಾಸ ಅಂತ ಆರಂಭವಾಗಿದ್ದೇ ಆಗ. ಪೂರ್ಣಚಂದ್ರ ತೇಜಸ್ವಿ ಅವರ “ಕಿರಗೂರಿನ ಗಯ್ನಾಳಿಗಳು’ ನಾನು ಬಹಳಾ ಎಂಜಾಯ್ ಮಾಡಿದ ಪುಸ್ತಕ. ತೇಜಸ್ವಿ ಅವರ “ಅಣ್ಣನ ನೆನಪು’ ಓದುವಾಗ ನನ್ನ ತಂದೆಯ ನೆನಪೇ ನನ್ನನ್ನು ಆವರಿಸಿ ಅವರ ಬಗ್ಗೆ ಹೆಮ್ಮೆ ಎನಿಸುತ್ತಿತ್ತು. ತ್ರಿವೇಣಿ ನನ್ನ ಮೆಚ್ಚಿನ ಕಾದಂಬರಿಕಾರ್ತಿ.
– ವೇಣು ಅವರ ಜೊತೆಗಿನ ನಿಮ್ಮ 16 ವರ್ಷಗಳ ಸುದೀರ್ಘ ಪ್ರೀತಿ ಬಗ್ಗೆ ಹೇಳ್ತೀರಾ?
1989ರಲ್ಲಿ ನಮ್ಮಿಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ವೇಣು ಆಗ ಪ್ರಸ್ ಫೋಟೊಗ್ರಾಫರ್ ಆಗಿದ್ದರು. ಸಿನಿಮಾ ಪುರವಣೆಗಳಿಗಾಗಿ ನನ್ನ ಹಲವಾರು ಫೋಟೊ ತೆಗೆದಿದ್ದರು. ಆಗ ನಾನು ಮೇಜರ್ ಕೂಡ ಆಗಿರಲಿಲ್ಲ. ಪ್ರೀತಿ ಮಾಡೊವಾಗ ಒಟ್ಟಿಗೆ ಓಡಾಡಿದ್ದೇ ಇಲ್ಲ. ನಮ್ಮ ಮನೆಯಲ್ಲಿದ್ದ ಲ್ಯಾಂಡ್‌ಲೈನ್ ಫೋನ್‌ಗೆ ಕರೆ ಮಾಡುತ್ತಿದ್ದರು. ಆದರೆ ಫೋನನ್ನು ಯಾರಾದರೂ ದೊಡ್ಡವರು ಎತ್ತುತ್ತಿದ್ದರು. ನಮ್ಮ ಮಧ್ಯ ಸಂವಹನವೇ ಇರಲಿಲ್ಲ. ಬಳಿಕ ವೇಣು ಕೆಲಸ ಬದಲಿಸಿದರು. ಆದರೆ ಅವರು ಯಾವ ಕೆಲಸಕ್ಕೆ ಸೇರಿದ್ದಾರೆ, ಎಲ್ಲಿದ್ದಾರೆ ಎಂಬ ಸುಳಿವೇ ನನಗೆ ಇರಲಿಲ್ಲ. ಈ ಗ್ಯಾಪ್‌ನಲ್ಲಿ ಅವರಿಗೆ ಮದುವೆ ಆಗಿದೆ ಎಂತ ನಾನು ತಿಳಿದಿದ್ದೆ. ಮತ್ತೆ ನಮ್ಮಿಬ್ಬರ ಭೇಟಿ ಆಗಿದ್ದು 2004ರಲ್ಲಿ “ಈಶ’ ಚಿತ್ರದ ಸೆಟ್‌ನಲ್ಲಿ. ಆಗ ಗೊತ್ತಾಯ್ತು ಅವರಿಗೆ ಇನ್ನೂ ಮದುವೆ ಆಗಿಲ್ಲ ಅಂತ. 2004 ಡಿಸೆಂಬರ್‌ನಲ್ಲಿ ಅವರ ಮನೆಯವರು ಹೆಣ್ಣು ಕೇಳಲು ನಮ್ಮ ಮನೆಗೆ ಬಂದರು. 2005ರ ಮಾರ್ಚ್‌ನಲ್ಲಿ ನಮ್ಮ ಮದುವೆ ಆಯಿತು.
– ಈಗಿನ ನಾಯಕಿಯರಿಗೂ ನಿಮ್ಮ ಸಮಯದ ನಾಯಕಿಯರಿಗೂ ಏನಾದರೂ ವ್ಯತ್ಯಾಸ ಇದೆಯಾ?
ನಾನು, ಮಾಲಾಶ್ರಿ, ಸುಧಾ, ಯಾರಿಗೂ ನಾಯಕಿಯಾಗಬೇಕು ಎಂಬ ಕನಸು ಇರಲಿಲ್ಲ. ನಾವೆಲ್ಲಾ 15 ವರ್ಷ ತುಂಬುವ ಮೊದಲೇ ಚಿತ್ರರಂಗಕ್ಕೆ ಬಂದ್ವಿ. ನಾನು ಚಿತ್ರರಂಗಕ್ಕೆ ಬಂದಾಗ 6ನೇ ತರಗತಿಯಲ್ಲಿದ್ದೆ. ನಾವೆಲ್ಲಾ ಅನುಭವದಿಂದಲೇ ಕಲಿಯುತ್ತಾ ಹೋದೆವು. ಆದರೆ ಈಗಿನ ಹುಡುಗಿಯರು ಹೀರೊಯಿನ್ ಆಗುವ ಕನಸು ಹೊತ್ತು, ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡೇ ಬಂದಿರುತ್ತಾರೆ. ನಮ್ಮ ಕಾಲದಲ್ಲಿ ನಟಿಯರಿಗೆ ಸಂಭಾವನೆ ಬಹಳ ಕಡಿಮೆ ಇತ್ತು. ನಾನು 1 ಲಕ್ಷ ಸಂಭಾವನೆ ಪಡೆದಿದ್ದು 20 ವರ್ಷ ಇಲ್ಲಿ ಅನುಭವ ಪಡೆದ ಮೇಲೆ. ಹಾಗೆ ನೋಡಿದರೆ ಮಾಲಾಶ್ರೀ ಮಾತ್ರ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ. ಅವರಿಗೂ ಮೊದಲು ಮಂಜುಳಾ ಪಡೆಯುತ್ತಿದ್ದರು. ಆದರೆ ಉಳಿದವರೆಲ್ಲಾ ಸಂಭಾವನೆ ವಿಷಯದಲ್ಲಿ ಕಷ್ಟ ಪಟ್ಟವರೆ. ಈಗ ಪರಿಸ್ಥಿತಿ ಬದಲಾಗಿದೆ.
– ಚಿತ್ರರಂಗದಿಂದ ನೀವೇನು ಪಡೆದುಕೊಂಡಿದ್ದೀರಾ?
ಜೀವನಪೂರ್ತಿ ಅನುಭವಿಸಿದರೂ ಮುಗಿಯದಷ್ಟು ಪ್ರೀತಿ ಸಿಕ್ಕಿದೆ. ನಾನು ಬಹುತೇಕ ಹಿರಿಯ ಕಲಾವಿದರು, ನಿರ್ದೇಶಕರ ಜೊತೆ ಕೆಲಸ ಮಾಡಿದ್ದೀನಿ. ಆಗಲೂ ಎಲ್ಲರೂ ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಹೆಣ್ಣು ಮಗಳು ಅಂತ ಬಹಳ ಕೇರ್ ಮಾಡುತ್ತಿದ್ದರು. ಈ ಸೌಜನ್ಯವನ್ನು ಈಗಿನ ಜನರೇಶನ್‌ನ ಸ್ಟಾರ್‌ಗಳಾದ ಪುನೀತ್, ಸುದೀಪ್, ಯಶ್ ಮುಂತಾದವರೂ ಮುಂದುವರೆಸಿದ್ದಾರೆ. ಬಹಳ ಅಕ್ಕರೆಯಿಂದ ಮಾತಾಡಿಸುತ್ತಾರೆ. ಅವರ ಸೌಜನ್ಯ, ಪ್ರೀತಿ ಮನಸ್ಸು ತುಂಬುತ್ತದೆ.
– ಚೇತನ ಜೆ.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.