ಸೀರೆ ಆರಿಸುವ ಧ್ಯಾನ
Team Udayavani, Oct 17, 2018, 6:00 AM IST
ಶೋಕೇಸ್‌ನಲ್ಲಿ ಇಟ್ಟ ಸೀರೆ ನಮಗೆ ಚಂದ ಕಾಣಿಸುತ್ತದೆ. ಅದೇ ಸೀರೆಯನ್ನು ಖರೀದಿಸಿ, ಉಟ್ಟಾಗ ಅಷ್ಟೊಂದು ಚೆನ್ನಾಗಿದೆ ಎಂಬ ಭಾವ ಹುಟ್ಟುವುದಿಲ್ಲ. ಬಟ್ಟೆಯಂಗಡಿಯಲ್ಲಿ ನಮ್ಮ ಪಕ್ಕದವಳು ಹಿಡಿದುಕೊಂಡ ಸೀರೆ ಅದ್ಭುತವಾಗಿ ಕಾಣುತ್ತದೆ. ಅದೇ ಸೀರೆ ನಾವು ಹಿಡಿದುಕೊಂಡರೆ, ಉಟ್ಟು ಕೊಂಡರೆ ತುಸುವೂ ಸಂತೋಷವಿಲ್ಲ! ಏನಿದು ವೈಚಿತ್ರ್ಯ!
ಏನೋ ಸಮಾರಂಭ. ಚೆಂದದ ಸೀರೆಯುಟ್ಟ ಹೆಂಗಳೆಯರೆಲ್ಲ ಕಿಲಕಿಲನೆ ನಗುತ್ತಿದ್ದಾರೆ. ಒಬ್ಬರ ಸೀರೆಯ ಸೆರಗಿನ ಅಂಚನ್ನು, ಮತ್ತೂಬ್ಬರು ಕೈಯಲ್ಲಿ ಹಿಡಿದು, “ಏನ್ ಸೂಪರ್ ಆಗಿದೆ ಅಲ್ವಾ?’ ಎಂದು ಹೊಗಳುತ್ತಿದ್ದಾರೆ. ಹೆಂಗಸರು ನಿರೀಕ್ಷಿಸುವುದೇ ಇಂಥ ಹೊಗಳಿಕೆಗಳನ್ನು. ತಾವು ಉಟ್ಟ ಸೀರೆಯನ್ನು ಜಗತ್ತು ಮೆಚ್ಚಿಕೊಳ್ಳಲೆಂದೇ, ಬಟ್ಟೆಯಂಗಡಿಯಲ್ಲಿ ಅವರು ಗಂಟೆಗಟ್ಟಲೆ “ಗೋಷ್ಠಿ’ ನಡೆಸುತ್ತಾರೆ. ನೂರಾರು ಆಯ್ಕೆಗಳನ್ನು ಎದುರಿನಲ್ಲಿ ಹರವಿಕೊಂಡು, ಒಂದನ್ನಷ್ಟೇ ಗಿಣಿ ಎತ್ತಿಕೊಂಡ ಹಾಗೆ ಎತ್ತಿಕೊಳ್ತಾರೆ. ಅಷ್ಟರಲ್ಲಿ ಅಂಗಡಿಯಲ್ಲಿ ಸೀರೆ ತೋರಿಸುವ ಕೆಲಸದ ಹುಡುಗ ಹೈರಾಣು.
ಬಟ್ಟೆಯಂಗಡಿಯಲ್ಲಿ ಬಟ್ಟೆ ಆರಿಸುವವರು ಸಾಮಾನ್ಯವಾಗಿ ನಾಲ್ಕು ರೀತಿಯವರು. ಅಂಗಡಿ ಪ್ರವೇಶಿಸಿದ ಕೂಡಲೇ ಆಯ್ಕೆಯಲ್ಲಿ ಹೆಚ್ಚು ಗೊಂದಲಗಳಿಲ್ಲದೇ ಕೂಡಲೇ ಬಟ್ಟೆ ಆರಿಸುವವರು ಒಂದು ವರ್ಗ. ಮಹಿಳೆಯರಲ್ಲಿ ಇಂಥವರು ಸಿಗುವುದು ಬಹಳ ಅಪರೂಪ. ಒಂದಿಷ್ಟು ವಸ್ತ್ರಗಳನ್ನು ಮೇಲೆ- ಕೆಳಗೆ, ಆಚೆ- ಈಚೆ, ಅಡ್ಡಾದಿಡ್ಡಿ ನೋಡಿ ತೆಗೆದುಕೊಳ್ಳುವವರು ಇನ್ನೊಂದು ವರ್ಗ. ಸಾವಧಾನವಾಗಿ ನೋಡುತ್ತಾ, ಗಡಿಬಿಡಿಯಿಲ್ಲದೇ ಶಾಂತ ಚಿತ್ತದಿಂದ ಖರೀದಿಸುವವರು ಮೂರನೇ ವರ್ಗದವರು. ಇಂಥವರು ಆ ದಿನ ಮನೆಯಲ್ಲಿ ಅಡುಗೆ ಮಾಡುವುದಿಲ್ಲ! ನೂರಾರು ಬಗೆಯ ಬಟ್ಟೆಗಳನ್ನು ರಾಶಿ ಹಾಕಿಕೊಂಡು ಸಾಧ್ಯತೆಗಳನ್ನು ಹುಡುಕಿಕೊಂಡು, ನಂತರ ಖರೀದಿಸಿ, ಮನೆಗೆ ಬಂದು ಆಯ್ಕೆಯ ಕುರಿತು ಅತೃಪ್ತಿ ಹೊರಹಾಕುವವರು ಕೊನೆಯ ವರ್ಗದವರು.
ವಿನಯಪೂರ್ವಕ ತುಚ್ಚೀಕರಣ
ಬಟ್ಟೆ ಹಿಡಿಸಲಿಲ್ಲವೇ? ಈಗ ವಾಪಸು ಕೊಡಬೇಕೋ, ಬದಲಿ ತರಬೇಕೋ? ಗೊಂದಲ! ಹಾಗೆ ಮಾಡುವುದು ಅತ್ಯಂತ ಕಷ್ಟದ ಕೆಲಸ. ಏನೋ ಅಪರಾಧ ಮಾಡಿದವರಂತೆ, ಮಾಲು ಸಮೇತ ಸಿಕ್ಕಿಬಿದ್ದ ಕಳ್ಳನಂತೆ ಅಂಗಡಿಯೊಳಗೆ ಹೆಜ್ಜೆಯಿಡುತ್ತೇವೆ. ಮೊದಲು ಬಟ್ಟೆ ಖರೀದಿಸಲು ಅಂಗಡಿಯೊಳಗೆ ಹೋದಾಗ “ಬನ್ನಿ, ಬನ್ನಿ, ಇದು ಕುಂಕುಮ ಭಾಗ್ಯ ಸೀರೆ. ಇದು ಆಪ್ತಮಿತ್ರ ಸೀರೆ, ಇದು ಪುಟ್ಟಗೌರಿ ಸೀರೆ, ಇದು ನಾಗಿಣಿ ಸೀರೆ… ನೋಡಿ ಮೇಡಂ, ನೋಡೋಕೇನು ದುಡ್ಡು ಕೊಡಬೇಕಾ?’ ಎಂದು ಮೂವತ್ತಾರು ಹಲ್ಲು ತೋರಿಸುತ್ತ ಹಲ್ಲುಗಿಂಜಿದವನು, ಈಗ ಸಾಲ ಕೊಟ್ಟವನ ಹಾಗೇ ನಮ್ಮನ್ನು ಕಡೆಗಣಿಸುತ್ತಾನೆ. ನಮ್ಮನ್ನು ಕಂಡೂ ಕಾಣದವರ ಹಾಗೇ ವರ್ತಿಸುತ್ತಾನೆ. ಪೆಚ್ಚುಮೋರೆ ಹಾಕಿ ನಿಂತ ನಮ್ಮನ್ನು ಉಳಿದ ಗಿರಾಕಿಗಳ ನಡುವೆ ಉಪೇಕ್ಷಿಸುತ್ತಾನೆ. ವಿನಯಪೂರ್ವಕ ತುಚ್ಚೀಕರಣ ಅಂದರೆ ಇದೇ ಇರಬೇಕು. ಮರು ಆಯ್ಕೆ ಸಿಗುವುದು ಇನ್ನೂ ಅಧ್ವಾನ. ಮೊದಲು ಖರೀದಿಸಿದ ಸೀರೆ ಏಳುನೂರು ರೂ. ಆಗಿದ್ದರೆ, ಎರಡನೇ ಬಾರಿಯ ಆಯ್ಕೆಯಲ್ಲಿ ಇಷ್ಟವಾಗುವುದು 600 ರೂ.ಗಳದ್ದು. ಉಳಿದ ನೂರು ರೂಪಾಯಿ ವಾಪಸು ಕೊಡುವುದಿಲ್ಲ… ಇದು ಮಾರಾಟ ನೀತಿಯಂತೆ. ಜೊತೆಗೆ ಅಂಗಡಿಯವನೂ ಮೊದಲು ಕೊಂಡುಕೊಂಡ ಸೀರೆಗಿಂತ ತುಸು ಹೆಚ್ಚಿನ ಬೆಲೆಯ ಸೀರೆಗಳನ್ನೇ ತೋರಿಸುತ್ತಾನೆ. ಒಮ್ಮೆ ಖರೀದಿಸಿದ ವಸ್ತ್ರ ಬದಲಾಯಿಸುವುದಕ್ಕೆ ಹೋದ ತಪ್ಪಿಗೆ ಅನಿವಾರ್ಯವಾಗಿ ಹೆಚ್ಚು ಬೆಲೆತೆತ್ತು ಮನಸ್ಸಿಗೆ ಹಿತ ಕೊಡದ ವಸ್ತ್ರವನ್ನು ಖರೀದಿಸಿ ತರುತ್ತೇವೆ. ಆದ್ದರಿಂದಲೇ ಒಮ್ಮೆಯೇ ಮದುವೆಯಾಗಬೇಕು, ಒಮ್ಮೆಯೇ ವಸ್ತ್ರ ಖರೀದಿಸಬೇಕು!
ಅದೇನೋ ವೈಚಿತ್ರ್ಯ…
ಶೋಕೇಸ್‌ನಲ್ಲಿ ಇಟ್ಟ ಸೀರೆ ನಮಗೆ ಚಂದ ಕಾಣಿಸುತ್ತದೆ. ಅದೇ ಸೀರೆಯನ್ನು ಖರೀದಿಸಿ, ಉಟ್ಟಾಗ ಅಷ್ಟೊಂದು ಚೆನ್ನಾಗಿದೆ ಎಂಬ ಭಾವ ಹುಟ್ಟುವುದಿಲ್ಲ. ಬಟ್ಟೆಯಂಗಡಿಯಲ್ಲಿ ನಮ್ಮ ಪಕ್ಕದವಳು ಹಿಡಿದುಕೊಂಡ ಸೀರೆ ಅದ್ಭುತವಾಗಿ ಕಾಣುತ್ತದೆ. ಅದೇ ಸೀರೆ ನಾವು ಹಿಡಿದುಕೊಂಡರೆ, ಉಟ್ಟು ಕೊಂಡರೆ ತುಸುವೂ ಸಂತೋಷವಿಲ್ಲ! ಏನಿದು ವೈಚಿತ್ರÂ! ಒಂದೇ ಅಂಗಡಿ, ಒಂದೇ ಸೀರೆ, ಒಂದೇ ಗಳಿಗೆಯಲ್ಲಿ ಭಿನ್ನಭಿನ್ನವಾಗಿ ಕಾಣಿಸುವುದು ಬಟ್ಟೆಯಂಗಡಿಯಲ್ಲಿ ಮಾತ್ರ. ಹಿತವೆನಿಸಿದ ಬಟ್ಟೆ ಕಡಿಮೆ ಕ್ರಯದಾಗಿದ್ದರೆ ಏನೋ ಗುಮಾನಿ… ವರದಕ್ಷಿಣೆ ಬೇಡ ಎಂಬ ವರನಂತೆ, ಏನಾದರೂ ಐಬು ಇರಬಹುದೇ ಎಂಬ ಸಂಶಯ. ಹೆಚ್ಚು ದುಡ್ಡು ಕೊಟ್ಟು ತಂದರೆ ಏನೋ ಸಂಭ್ರಮ, ತೃಪ್ತಿ. ಸ್ವಂತಕ್ಕೆ ಬಟ್ಟೆ ಖರೀದಿಸಲು ತೆರಳುವಾಗ ಜೊತೆಗೆ ಯಾರನ್ನೂ ಕರೆದೊಯ್ಯಬಾರದು ಇದು ನನ್ನ ಅನುಭವ. ನಮ್ಮ ಮೆದುಳಿಗೆ ಕೈ ಹಾಕುವಂತೆ ಜೊತೆಗಾರರು ಸೀರೆಯನ್ನು ಹೊಗಳುವಾಗ, ಲೋಕೋಭಿನ್ನ ರುಚಿ ಎಂಬುದನ್ನು ಮರೆತು ಸ್ನೇಹದ ಒತ್ತಡಕ್ಕೊ, ಮುಲಾಜಿಗೊ ಒಳಗಾಗಿ ಖರೀದಿಸುತ್ತೇವೆ. ಖರೀದಿಯ ನಂತರ ಏನೋ ಅಸಮಾಧಾನ, ಅತೃಪ್ತಿ.
ಲೆಕ್ಕಾಚಾರದ ಬದುಕು…
ಇಷ್ಟಪಟ್ಟು ಖರೀದಿಸಿದ ಸೀರೆ ಧರಿಸಿ ಕನ್ನಡಿಯ ಎದುರು ಮಾರ್ಜಾಲ ನಡಿಗೆಯಲ್ಲಿ ಸಿಂಹಾವಲೋಕನ ಮಾಡುತ್ತಾ ಒಮ್ಮೆ ಹೆಗಲ ಮೇಲೆ ಬಾರ್ಡರ್ ಬರುವಂತೆ, ಇನ್ನೊಮ್ಮೆ ನೆರಿಗೆ ಬದಿಗೆ ಸರಿಸುವಂತೆ, ಮಗದೊಮ್ಮೆ ಸಿಂಗಲ್ ಸೆರಗು ಹಿಡಿದು, ಮತ್ತೂಮ್ಮೆ ಸೆರಗು ಪೋಣಿಸಿ ಪಿನ್ ಮಾಡಿಕೊಂಡಂತೆ ಅರುವತ್ತು, ತೊಂಬತ್ತು, ನೂರೆಂಬತ್ತು, ಮುನ್ನೂರರವತ್ತು ಕೋನದಲ್ಲಿ ನಿಂತು ಪರೀಕ್ಷಿಸಿಯೂ ತೃಪ್ತಿಯಾಗದು. ಸೀರೆಯ ಬಣ್ಣ ಟೊಮೇಟೊ ರೆಡ್ ಬದಲಿಗೆ ಈರುಳ್ಳಿ ಪಿಂಕ್ ಆಗಿದ್ದರೆ, ಅಂಚು ಮಾವಿನಹಣ್ಣು ಡಿಸೈನ್ ಬದಲಿಗೆ ಸೇಬಿನ ಹಣ್ಣು ಆಗಿದಿದ್ದರೆ, ಸೆರಗಿನಲ್ಲಿ ಗರಿ ಬಿಚ್ಚಿದ ನವಿಲಿನ ಡಿಸೈನ್ ಬದಲಿಗೆ ಗರಿ ಮುಚ್ಚಿದ ನವಿಲು ಇರಬಾರದಿತ್ತೆ ಎಂದು ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುತ್ತ ಕಲ್ಪಿಸಿಕೊಳ್ಳುತ್ತಾ, ನೊಂದುಕೊಳ್ಳುತ್ತಾ ಖರೀದಿಯ ಖುಷಿಯನ್ನು ಕಳೆದುಕೊಳ್ಳುತ್ತೇವೆ. ಬಾಲ್ಯದಲ್ಲಿ ಮುಗ್ಧತೆಯ ಆವರಣದೊಳಗೆ ಹೊಸವಸ್ತ್ರ ನೀಡುತ್ತಿದ್ದ ಸಂಭ್ರಮ ಆಯ್ಕೆಗಳ ಸಾಧ್ಯತೆಗಳು, ಅರಿವು ಹೆಚ್ಚಾದಂತೆ ಕಡಿಮೆಯಾಗಿದೆ. ಬಾಲ್ಯದಲ್ಲಿ ಹೊಸ ವಸ್ತ್ರ ಧರಿಸಿದಾಗ ಮತ್ತೆ ಬಿಚ್ಚುವುದಕ್ಕೆ ಕೇಳುತ್ತಿರಲಿಲ್ಲ. ಧೂಳು- ಕೂಳು, ಕೆಸರು- ಮೊಸರು, ಮಳೆ- ಗಾಳಿ, ಕಸ- ಕಲೆ ಯಾವುದರ ಬಗ್ಗೆಯೂ ತಲೆಕಡಿಸಿಕೊಳ್ಳುತ್ತಿರಲಿಲ್ಲ. ಈಗ ಧರಿಸಿದ ಹೊಸ ಬಟ್ಟೆ ಅದಷ್ಟು ಬೇಗ ಬಿಚ್ಚಿ ಇಡುವುದಕ್ಕೆ, ಮಡಚಿ ಇಡುವುದಕ್ಕೆ, ತುಸು ಹಾನಿಯಾಗದಂತೆ ಒಪ್ಪವಾಗಿಡುವುದಕ್ಕೆ ಹೆಣಗುತ್ತೇವೆ. ಈಗ ಎಲ್ಲವೂ ಲೆಕ್ಕಾಚಾರದ ಬದುಕು.
ಅವನ ಮಾತನ್ನು ನಂಬುವೆವು…
ಎಂಥ ಸ್ಥಿರ ಮನಸ್ಸನ್ನೂ ತಟಪಟ ಮಾಡಬಲ್ಲ ಚಾಣಾಕ್ಷ ಸೇಲ್ಸ್‌ಮ್ಯಾನ್‌ಗಳೂ ಅಲ್ಲಲ್ಲಿ ಕಾಣಿಸುತ್ತಾರೆ. ಸೀರೆಗಳನ್ನು ನಮ್ಮ ಮುಂದೆ ಹರಡಿ, “ರೀಸೆಂಟ್ ಟ್ರೆಂಡ್, ನ್ಯೂ ಡಿಸೈನ್, ಗ್ರಾಂಡ್ ಲುಕ್, ಫಾಸ್ಟ್ ಮೂವಿಂಗ್, ವಾಶ್ ಈಝಿ, ಲೈಟ್‌ವೇಟ್, ಪ್ರಟ್ಟಿ ಕಲರ್, ಗ್ರೇಟ್ ಟೆಕ್ಚರ್, ಸಿಂಗಲ್ ಫೀಸ್, ರೇರ್ ಕಲೆಕ್ಷನ್, ವೆರಿ ಸಾಫ್ಟ್, ನೈಸ್ ಬಾರ್ಡರ್, ಸೂಪರ್ ಮಾಡೆಲ್, ರಿಚ್ ಪಲ್ಲು, ಬೆಸ್ಟ್ ಕ್ವಾಲಿಟಿ…’ ಅಂತ ಹೋಟೆಲ್ ಮಾಣಿ, ಮೆನುವನ್ನು ಕಂಠಪಾಠ ಮಾಡಿರುತ್ತಾನಲ್ಲ, ಹಾಗೆಯೇ ಇರುತ್ತೆ ಇವರ ಮಾತಿನ ಧಾಟಿ. ಅವನು ಹೇಳಿದ್ದೇ ಸತ್ಯ ಎಂದು ನಂಬುವವರೇ ಹೆಚ್ಚು. ಯಾರೂ ಕ್ರಾಸ್ ಚೆಕ್ ಮಾಡಲು ಹೋಗುವುದಿಲ್ಲ. ಇದು ಹೆಣ್ಮಕ್ಕಳ ಪ್ರಾಮಾಣಿಕತೆಗಳಲ್ಲಿ ಒಂದು!
ಒಟ್ಟಿನಲ್ಲಿ ಹೆಣ್ಣುಮಕ್ಕಳಿಗೆ ಸೀರೆ ಆರಿಸುವುದು ಒಂದು ಧ್ಯಾನ. ಪಕ್ಕದಲ್ಲಿನ ಗಂಡಸರಿಗೆ, ಸೀರೆ ತೋರಿಸುವ ಹುಡುಗನಿಗೆ ಅದು ಕಿರಿಕಿರಿಯೇ ಆದರೂ, ಆಕೆಗೇನೂ ಅದು ಕಿರಿಕಿರಿ ಅಲ್ಲ. ಅವಳಿಗೇನೋ ಹೇಳತೀರದ ಖುಷಿ. ಅದಕ್ಕಾಗಿ ಅವಳು ಸೀರೆ ಆರಿಸುವ ಧ್ಯಾನದಲ್ಲಿ ಹೆಚ್ಚು ಹೊತ್ತು ಕಳೆಯುವಳು.
ಸ್ತ್ರೀಯರ ಶಾಪಿಂಗ್ ಅನ್ನು ಜನ ಆಡಿಕೊಳ್ತಾರೆ!
ಬಟ್ಟೆ ಶಾಪಿಂಗ್ ಕುರಿತಂತೆ ಹೆಣ್ಮಕ್ಕಳನ್ನು ಸದಾ ಹೀಯಾಳಿಕೆಯಿಂದ, ಕಾಣುವುದು ಸಾಮಾನ್ಯ. ಸ್ತ್ರೀಯರು ಶಾಪಿಂಗ್‌ಗೆ ಹೆಚ್ಚು ಟೈಮ್ ತಗೋತಾರೆ ಅನ್ನೋದು ಬೆಂಗಳೂರಿನಲ್ಲಿ ಎಷ್ಟು ಸತ್ಯವೋ, ಜಗತ್ತಿನ ಬೇರೆಲ್ಲ ನಗರಗಳಲ್ಲೂ ಅದು ಅಷ್ಟೇ ಸತ್ಯ. ಆಕೆಯ ವ್ಯಕ್ತಿತ್ವವನ್ನು ಹೀಗಳೆಯುವುದಕ್ಕೆ ಇನ್ನಿಲ್ಲದಂತೆ ಗಾದೆಗಳೂ ಹುಟ್ಟಿಕೊಂಡಿವೆ. “ಎಮ್ಮೆ ನೀರಿಗೆ ಬಿದ್ರೆ ಮೇಲೆ ಬರಲ್ಲ, ಹೆಣ್ಮಕ್ಕಳು ಸೀರೆ ಅಂಗಡಿಗೆ ಹೋದ್ರೆ ಹೊರಗೆ ಬರಲ್ಲ’, “ಗಂಡಸು ಬಾರ್‌ನಿಂದಾದರೂ ಬೇಗ ಹೊರಗೆ ಬರಬಹುದು, ಹೆಂಗಸು ಸೀರೆ ಅಂಗಡಿಯಿಂದ ಬೇಗ ಹೊರಗೆ ಬರಲಾರಳು’ ಎಂಬ ಮಾತುಗಳೇ ಇದಕ್ಕೆ ಸಾಕ್ಷಿ.
ಸುಧಾರಾಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.