ಮೀಸೆಯೇ ದುಃಖಕ್ಕೆ ಮೂಲ!
Team Udayavani, Oct 3, 2018, 3:09 PM IST
“ಹೆಣ್ಣಿಗೆ ಹೆರಳು, ಗಂಡಿಗೆ ಮೀಸೆ ಶೋಭೆ’ ಎನ್ನುವ ಮಾತಿದೆ. ಮೀಸೆ ಪುರುಷಲೋಕದ ಪ್ರತಿನಿಧಿ. ಹೆಣ್ಣು ಮೊದಲು ಮನ ಸೋಲುವುದೂ ಅದೇ ಮೀಸೆಗೆ. ಆದರೆ, ಈ ಲೇಖಕಿಗೆ ಮೀಸೆ ಮೇಲೊಂದು ವಿಚಿತ್ರ ಭಯವಿತ್ತು. ಸಾಲದ್ದಕ್ಕೆ ಮೀಸೆ ಇರುವ ಗಂಡಸೇ ಸಿಕ್ಕಿಬಿಟ್ಟ. ನಂತರ ಆಗಿದ್ದೇನು? ಮುಂದೆ ಓದಿ…
ಬಹಳ ದಿನಗಳ ಮೇಲೆ ಅಕಸ್ಮಾತ್ ಆಗಿ ಹೀಗೇ ಗೆಳತಿಯರ ಜೊತೆ ಮಾತಾಡುತ್ತಾ ಇರುವಾಗ ಮೀಸೆಯ ವಿಚಾರ ಬಂತು. ಹೇಳಿಕೇಳಿ ಹೆಣ್ಣು ಮಕ್ಕಳಿಗೆ ಮೀಸೆ ಬಗ್ಗೆ ಒಂಥರಾ ಆಸಕ್ತಿ. ಅದು ತಮಗಿಲ್ಲವಲ್ಲ ಎಂಬ ಕಾರಣಕ್ಕಿರಬಹುದು. ಹಾಗೆ ಮೀಸೆ ಇರುವ ಕೆಲವು ಹೆಂಗಳೆಯರೂ ಇರುವರೆನ್ನಿ. ಅದು ಹಾರ್ಮೋನುಗಳ ಏರುಪೇರಿನಿಂದ ಆಗುವ ಇರಿಸುಮುರಿಸು ಎಂದು ಓದಿದ ನೆನಪು. ಅಂದಿನಿಂದ, ಅಂದರೆ ಈ ಮೀಸೆಯ ವಿಚಾರ ತಲೆಗೆ ಬಂದಾಗಿನಿಂದ ನನ್ನ ತಲೆಯಲ್ಲಿ ಅದೊಂದೇ ಹುಳು ಕೊರೆಯಲಾರಂಭಿಸಿದೆ. ಹೇಳಿಕೇಳಿ ಮೀಸೆ ಗಂಡಸ್ತನದ ಬಹುದೊಡ್ಡ ಸಂಕೇತ. ಯಾವ ಗಂಡಿಗೆ ಆದ್ರೂ, ಯಾರಾದ್ರೂ ಆತನ ಮೀಸೆಯ ವಿಚಾರಕ್ಕೆ ಬಂದ್ರೆ ಸಾಕು, ಅದನ್ನು ಹೀಯಾಳಿಸುವುದೋ ಕೆಣಕುವುದೋ ಮಾಡಿದರೆ ಸಾಕು; ಸಖತ್ ಕೋಪ ಬರುತ್ತೆ ಅಂತಲೂ ಕೇಳಿದ್ದೆ. ಅಂಥ ದೃಶ್ಯಗಳನ್ನು ಕಂಡಿದ್ದೆ ಕೂಡಾ.
ಹದಿನಾರು ಹದಿನೇಳರ ಪ್ರಾಯ ಉಕ್ಕುತ್ತಲೇ ಎಳೆತರುಣರಲ್ಲಿ ತುಟಿಮೇಲಿನ ಸಣ್ಣ ರೋಮಗಳು ನಿಧಾನಕ್ಕೆ ಬೆಳೆಯುತ್ತ “ಮೀಸೆ’ ಎಂಬ ಗರ್ವದ ಗತ್ತಿನ ಹಗ್ಗ ಅವರನ್ನು ಜಗ್ಗತೊಡಗುವುದೇನೋ? ಆದರೂ, ಚಿಗುರು ಮೀಸೆ ಮೂಡುವ ಹೊತ್ತಿನಲ್ಲಿ ಆ ಮುಖದಲ್ಲಿ ಅದೆಂಥ ಮಾರ್ದವತೆ! ಆದರೆ, ಕ್ರಮೇಣ ಆ ಮುಖ ಗಡುಸಾಗುತ್ತ, ಮುಖದ ಮೀಸೆಯ ಗಾತ್ರ ಮತ್ತು ಉದ್ದ ಹೆಚ್ಚುತ್ತ ಆ ಮೀಸೆ ತೊಟ್ಟವನು ಬದಲಾಗುತ್ತಾ ಹೋಗುತ್ತಾನೆ. ಅದೇ ಬೇಜಾರು. ಹೀಗಾಗಿ ಆಹಾ! ಮೀಸೆಯೇ ನಿನ್ನದೆಂಥ ಪ್ರಭಾವವೇ ಎನ್ನಿಸಿದ್ದೂª ಉಂಟು.
“ಹೆಣ್ಣಿಗೆ ಹೆರಳು, ಗಂಡಿಗೆ ಮೀಸೆ ಶೋಭೆ’ ಎನ್ನುವ ಮಾತಿದೆ. ಹೆಣ್ಣು ಹೆರಳನ್ನು ವಿವಿಧ ವಿನ್ಯಾಸಗಳಲ್ಲಿ ಪ್ರದರ್ಶಿಸುವಂತೆ ಗಂಡಿನ ಮೀಸೆಯ ವಿನ್ಯಾಸವೂ ಆಗಾಗ ಬದಲಾಗುತ್ತಿರುತ್ತದೆ. ಮೀಸೆಯಲ್ಲಿ ಕಿರು ಮೀಸೆ, ಕುರುಚಲು ಮೀಸೆ, ಪೊದೆ ಮೀಸೆ, ಗುರ್ಬಾಣಕ್ಕಿ ಮೀಸೆ, ತಲವಾರು ಮೀಸೆ, ಚಾರ್ಲಿ ಚಾಪ್ಲಿನ್ ಮೀಸೆ, ಮುಖಕ್ಕಿಂತ ದೊಡ್ಡ ಮೀಸೆ, ಕಿವಿಯವರೆಗೂ ಹಬ್ಬಿದ ಮೀಸೆ… ಹೀಗೆ ಎಷ್ಟೊಂದು ಪ್ರಕಾರಗಳು. ಮೀಸೆ ತೊಟ್ಟವರಿಗೂ ಒಂದೊಂದು ನಮೂನೆಯ ಹೆಸರುಗಳು ಸೇರಿಕೊಂಡಿವೆ. ಮೀಸೆ ಮಾವ, ಮೀಸೆ ದೊಡ್ಡಪ್ಪ, ಮೀಸೆ ಮಾಸ್ತರ, ಮೀಸೆ ರಾಮಣ್ಣ… ಹೀಗೆ. ಪೊಗದಸ್ತಾದ ಮೀಸೆಯಿಂದಲೇ ಸಮಾಜದಲ್ಲಿ ಗುರುತಿಸಿಕೊಂಡ ಜನರಿದ್ದಾರೆ. ಇನ್ನು ಮೀಸೆಯ ಮೇಲೆ ಬೆರಳಾಡಿಸಿಯೇ ಮಾತನಾಡುವ ಶೈಲಿ ಕೆಲವರದ್ದಾದರೆ, ದಪ್ಪ ಮೀಸೆಯಡಿಯಲ್ಲಿ ನಕ್ಕೂ ನಗದಂತೆ ನಟಿಸುವವರು ಇನ್ನು ಕೆಲವರು.
ಮೀಸೆಗೆ ಹಗ್ಗ ಕಟ್ಟಿ ಮೋಟಾರ್ ಬೈಕು, ಆಟೋರಿûಾ, ಜೀಪು, ಕಾರು, ಅಷ್ಟೇ ಅಲ್ಲ ಹತ್ತು ಗಾಲಿಯ ಟ್ರಕ್ಕನ್ನು ಜಗ್ಗಿ ಎಳೆದ ಭೀಮಬಲದ ಮೀಸೆ ಜಟ್ಟಿಗಳಿದ್ದಾರೆ. ಅದಕ್ಕೇನನ್ನೋಣ? ಮೀಸೆಯ ಕುರಿತು ಹೇಳುವಾಗ ರಾಮಾಯಣದ ರಾವಣನನ್ನು ನೆನೆಯಲೇಬೇಕು. ಆ ಮಹರಾಯ, ತನ್ನ ಅಗಾಧವಾದ ಮೀಸೆಯಿಂದಲೇ ಎದುರಾಳಿಗಳನ್ನು ಸುತ್ತಿ ಗರಗರನೇ ತಿರುಗಿಸಿ ಎಸೆದೇಬಿಡುತ್ತಿದ್ದನಂತೆ. ಇನ್ನು ಆಧುನಿಕ ಕಾಲಕ್ಕೆ ಜಾರಿದರೆ, ಯಕ್ಷಗಾನದ ಪಾತ್ರಧಾರಿಗಳ ವಿವಿಧ ಪ್ರಕಾರದ ಮೀಸೆಗಳು ಕರಾವಳಿಯ ಜನರಿಗೆ ಸದಾ ಆಕರ್ಷಣೆ. ಅದರಲ್ಲೂ ಆ ಮೀಸೆ ಮೊದಲು ಆಕರ್ಷಿಸುವುದು ಹೆಂಗಳೆಯರನ್ನು ಎಂಬುದರಲ್ಲಿ ಎರಡು ಮಾತಿಲ್ಲ. ಆ ಪಾತ್ರಧಾರಿಯ ಕೆಣಕು ನಗು, ವ್ಯಂಗ್ಯ ನಗು, ಶಾಂತ ನಗು, ಕೆಲವೊಮ್ಮೆ ಭೀಬತ್ಸ ನಗು… ಇದೆಲ್ಲವೂ ಮೀಸೆಯಡಿಯಲ್ಲಿಯೇ ಮೂಡಿಬಂದು ಗಂಡಸ್ತನದ ಗಂಡು ದನಿಗೆ ಇನ್ನಷ್ಟು ಮೆರಗು ನೀಡುವುದಂತೂ ಸುಳ್ಳಲ್ಲ.
ಬಾಲ್ಯದಲ್ಲಿ ನನ್ನ ಮೇಲೆ ತಂದೆಯ ಪ್ರಭಾವ ಬಹಳ ಇತ್ತೆನ್ನಿ. ಗರಿಗರಿಯ ಇಸಿŒ ಹಾಕಿದ ಬಟ್ಟೆಯನ್ನೇ ಸದಾ ತೊಡುತ್ತಿದ್ದ ನನ್ನಪ್ಪ ಫ್ಯಾಶನ್‌ಪ್ರಿಯರಾಗಿದ್ದರು. ಅವರು ಹೆಚ್ಚಿನ ಸಮಯವೆಲ್ಲ ದಪ್ಪ ಮೀಸೆಯನ್ನೇ ಬಿಡುತ್ತಿದ್ದರೂ, ಆಗೊಮ್ಮೆ ಈಗೊಮ್ಮೆ ಆ ಕಾಲದ ಪ್ರಸಿದ್ಧ ಹೀರೋ ರಾಜ್ ಕಪೂರ್‌ನಂತೆ ಗುರ್ಬಾಣಕ್ಕಿ ಮೀಸೆಯನ್ನು ಬಿಡುತ್ತಿದ್ದರು. ಮತ್ತೆ ಕೆಲವೊಮ್ಮೆ ಮೀಸೆಯನ್ನೆಲ್ಲಾ ಬೋಳಿಸಿ, ನಾರದನಂತೆ ಕಾಣುತ್ತಿದ್ದರು.
ಆದರೆ, ಅದ್ಯಾಕೋ ನನಗೆ ಮೀಸೆಯಿಲ್ಲದ ನನ್ನಪ್ಪನ ಮುಖವೇ ಚಂದ ಕಾಣುತ್ತಿತ್ತು. ನಾವು ಬೆಳೆದು ದೊಡ್ಡವರಾಗುವ ಕಾಲಕ್ಕೆ ಮೀಸೆಯಿಲ್ಲದ ಮುಖದ ಹೀರೋಗಳೇ ಸಿನಿಮಾ ರಂಗದ ಓಡುವ ಕುದುರೆಗಳಾಗಿದ್ದರು. ಹಿಂದಿ ಚಲನಚಿತ್ರದಲ್ಲಿ ಆಗಷ್ಟೇ ಯುವ ನಾಯಕರು, ಒಬ್ಬರಾದ ಮೇಲೊಬ್ಬರಂತೆ ನಾರದನ ಮುಖದಲ್ಲಿಯೇ ಪ್ರಸಿದ್ಧರಾಗಿದ್ದರು. ಒಂದಿಷ್ಟು ಹಳೆ ತಲೆಮಾರಿನ ಅಮಿತಾಭ್ ಬಚ್ಚನ್‌ರಿಂದ ಹಿಡಿದು, ನಂತರದ ಮಿಥುನ್ ಚಕ್ರವರ್ತಿ, ಸುನಿಲ್ ದತ್, ಆನಂತರ ಬಂದ ಶಾರುಖ್ ಖಾನ್, ಆಮೀರ್ ಖಾನ್ , ಸಲ್ಮಾನ್ ಖಾನ್, ಅಕ್ಷಯ್‌ಕುಮಾರ್… ಹೀಗೆ ಮೀಸೆ ಇಲ್ಲದೆಯೇ ಮನಸ್ಸು ಗೆದ್ದ ಹೀರೋಗಳ ಪಟ್ಟಿ ಬೆಳೆಯುತ್ತದೆ. ಕನ್ನಡದಲ್ಲೂ ಇದಕ್ಕೆ ಪೈಪೋಟಿ ಎಂಬಂತೆ ರಾಜಕುಮಾರ್‌ರ ಮೂರು ಮಕ್ಕಳೂ ಮೀಸೆಯಿಲ್ಲದೇ ಪ್ರಸಿದ್ಧರಾಗಿದ್ದರು. ಇದರ ಪ್ರಭಾವವೋ ಏನೋ, ಮೀಸೆ ಇದ್ದವರಿಗಿಂತ ಮೀಸೆ ಇಲ್ಲದ ನಾಯಕರೇ ನನಗೆ ಹೆಚ್ಚು ಇಷ್ಟವಾಗುತ್ತಿದ್ದರು.
ಮೀಸೆ ಎಂದರೆ ಅಂಥ ಆಕರ್ಷಣೆ ಇಲ್ಲದ ಕಾರಣ, ನಾನು ಬಯಸುತ್ತಿದ್ದುದು ಮೀಸೆ ಇಲ್ಲದ ಮಾರ್ದವ ಮುಖಕ್ಕಾಗಿ. ಆದರೆ, ನನ್ನ ದುರಾದೃಷ್ಟಕ್ಕೆ ಮೀಸೆ ಹೊಂದಿದ್ದ, ಅದೂ ಏನು? ಮೀಸೆಯ ಕುರಿತು ಅತಿಯಾದ ಮೋಹವಿದ್ದ ಗಂಡನೇ ಸಿಗಬೇಕೆ? ಪತಿ ಮಹಾಶಯ ದಪ್ಪ ಮೀಸೆಯಲ್ಲಿ ಮೋಹಕವಾಗೇ ಕಾಣುತ್ತಿದ್ದರು. ಆದರೆ, ಅದರಿಂದಾಗುವ ಕಿರಿಕಿರಿ ಏನೆಂದು ಆನಂತರವೇ ತಿಳಿದಿದ್ದು. ಮದುವೆಯಾದ ಮೇಲೆ ಏನೂ ಮಾಡಲಾಗದೇ, ಮೀಸೆ ತೆಗೆದರೆ ಒಳ್ಳೆಯದೆಂದು, ನಾಚುತ್ತಾ ಸಲಹೆ ನೀಡಿದೆ. ಆ ಮೀಸೆಯ ಉಪಟಳವ ನೆನೆದು. ಅದು ಚುಚ್ಚಿದರೆ ಎಂಬ ಭಯಕ್ಕೆ ಹೆದರಿ. ಆದರೆ, ಆ ಪುಣ್ಯಾತ್ಮ ಪ್ರಥಮ ಚುಂಬನಂ ದಂತಭಗ್ನಂ ಎನ್ನುವಂತೆ, ನಿನ್ನನ್ನು ಮದುವೆಯಾದದ್ದಕ್ಕೆ ಪ್ರಥಮ ಚುಂಬನಂ ಮೀಸೆ ಭಗ್ನಂ ಮಾಡಿಕೊಳ್ಳೋಕೆ ನಾನೊಲ್ಲೆ ಎಂದುಬಿಟ್ಟ. ಈಗಲೂ ಅವನಿಗೆ ಮೀಸೆ ಎಂದರೆ ಬಹು ಹೆಮ್ಮೆ. ಆದರೆ, ಅದು ಮೊದಲಿಗಿಂತ ಹೆಚ್ಚು ದಪ್ಪಗಾಗಿದೆ. ಅಲ್ಲಲ್ಲಿ ಇಣುಕುವ ಬಿಳಿ ಕೂದಲುಗಳೂ ಅವರ ನಿದ್ದೆಗೆಡಿಸುತ್ತವೆ. ಆಗಾಗ ಬಣ್ಣ ಸವರಿಕೊಂಡರೂ ಮೂರೇ ದಿನಕ್ಕೆ ತಮ್ಮ ಉಪಸ್ಥಿತಿ ತೋರುವ ಅವುಗಳನ್ನು ಸಣ್ಣ ಕನ್ನಡಿ ಹಿಡಿದು ಕತ್ತರಿಸಿಕೊಳ್ಳುತ್ತಲೋ, ಒಂದೊಂದನ್ನೇ ಹಿಡಿದು ಜಗ್ಗಿ ಕಿತ್ತು ಹಾಕುತ್ತಲೋ ಇರುವುದನ್ನು ನೋಡಿ ನನಗೋ ತಮಾಷೆ. ಸುಮ್ಮನೇ ನಾ ಹೇಳಿದಂತೆ ಕೇಳಿದ್ದಿದ್ದರೆ ಈ ಅವಸ್ಥೆ ಬರಿ¤ತ್ತಾ?
ಮಹಿಳಾ ಮಣಿಗಳೆಗೆಲ್ಲಾ ಗೊತ್ತು ಮೀಸೆಯ ಕಿರಿಕಿರಿಯ ಬಗ್ಗೆ. ಇನ್ನು ಚಿಕ್ಕ ಮಕ್ಕಳು ಕೂಡಾ ಹೆಂಗಳೆಯರು ಲೊಚಲೊಚನೆ ಮುತ್ತಿಟ್ಟರೂ ಖುಷಿಯಿಂದ ಕೇಕೆ ಹಾಕಿದರೆ, ಮೀಸೆ ಮಾಮನ ಒಂದೇ ಮುತ್ತಿಗೆ ಗೋಳ್ಳೋ ಎಂದು ಅಳುತ್ತವೆ. ಈಗ ನೀವೇ ಹೇಳಿ, ಗಂಡಸ್ತನದ ಒಂದೇ ಕಾರಣಕ್ಕೆ ಈ ಮೀಸೆ ಮುಖದಲ್ಲಿರಬೇಕಾ ಅಥವಾ ಮಕ್ಕಳೂ ಅಪ್ಪನ ಮುದ್ದನ್ನು ಬಯಸುವಂತೆ, ಹೆಂಡತಿಯೂ ಗಂಡನ ಮಾರ್ದವ ಮುಖವನ್ನು ಮೆಚ್ಚುವಂತೆ ಲಕಲಕನೆ ಹೊಳೆವ ಮೀಸೆಯಿಲ್ಲದ ಮುಖವಿರಬೇಕಾ?
ಮೀಸೆಯು ಮೂಗಿನ ಕೆಳಗಿನ ರೆಕ್ಕೆಗಳಂತೆ. ಅದಕ್ಕೇ ಗಂಡಸು ಅಷ್ಟೊಂದು ಹಾರಾಡೋದು!
ಅನೇಕ ಸಲ ಗಂಡಸಿಗೆ ಗೌರವ ಸಿಗೋದು, ಅವನ ಮೀಸೆಯ ಕಾರಣಕ್ಕೆ!
ಗಂಡ ಬುದ್ಧಿಮಾತನ್ನು ಕೇಳದೇ ಇದ್ರೆ, ಮೀಸೆ ಹಿಡಿದು ಜಗ್ಗಿ. ಆಮೇಲೆ ನೋಡಿ… ಇದು ಯಶಸ್ವಿ ಮನೆಮದ್ದು!
ಎರಡು ಜಡೆ ಸೇರಿದ್ರೆ ಜಗಳ, ಎರಡು ಮೀಸೆ ಸೇರಿದ್ರೆ ಪಾರ್ಟಿ!
ಆಗತಾನೆ ಮದುವೆಯಾದವಳ ಮುಖ ಕೆಂಪಾಗಿದ್ದರೆ, ಆಕೆಯ ಗಂಡನಿಗೆ ಮೀಸೆ ಇದೆಯೆಂದು ಅರ್ಥ.
ನಾಗರೇಖಾ ಗಾಂವಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.