ಅವಳ ಜಗತ್ತಿನಲ್ಲಿ ಅವನಿಲ್ಲ!
Team Udayavani, Aug 8, 2018, 6:00 AM IST
ಅವನು ದುಡಿಯುತ್ತಿರುವುದೇ ಇವಳಿಗಾಗಿ, ಮಗುವಿಗಾಗಿ, ಬದುಕು ಅಡೆತಡೆಗಳಿಲ್ಲದೆ ಸಾಗಲಿಕ್ಕಾಗಿ. ಆದರೆ ಅವಳೊಂದಿಗಿನ ಭಾವಲೋಕದ ನಿರಂತರ ಪಯಣವನ್ನು ಅವನು ನಿಲ್ಲಿಸಿ ಎಷ್ಟೋ ದಿನಗಳಾಗಿವೆ. ಅವಳ ಒಲವಿನ ಜಗತ್ತಿನಲ್ಲಿ ಅವನಿಲ್ಲ. ಈಗಿರುವುದು ಬರೀ ಕಮಿಟ್‌ಮೆಂಟು, ಜವಾಬ್ದಾರಿ ಅಷ್ಟೆ.
“ಹಲೋ, ಬೇಗ ಹೇಳು. ಮುಖ್ಯವಾದ ಮೀಟಿಂಗ್‌ನಲ್ಲಿದ್ದೀನಿ. ಅರ್ಜೆಂಟಾ? ಏನಾದ್ರು ಇದ್ರೆ ಮೆಸೇಜ್ ಮಾಡು. ಆಮೇಲೆ ಫೋನ್ ಮಾಡ್ತೀನಿ’.. ಎಂದು, ಇವಳು ಬಾಯ್ಬಿಡುವ ಮುನ್ನವೇ ಫೋನ್ ಕಟ್ ಮಾಡಿ ಬಿಡುತ್ತಾನೆ. ಬೆಳಗ್ಗಿನಿಂದ ಆರು ಬಾರಿ ಫೋನ್ ಮಾಡಿದರೂ ಮಾತನಾಡದ ಗಂಡ, ಸದ್ಯ ಈಗಲಾದರೂ ರಿಸೀವ್ ಮಾಡಿದನಲ್ಲ ಅಂತ ಅಂದುಕೊಳ್ಳುವುದರೊಳಗೆ ಕಾಲ್ ಕಟ್ ಮಾಡಿದಾಗ ಇವಳು ಇಲ್ಲಿ ಕೆಂಡಾಮಂಡಲ. ಮಗುವಿಗೆ ಹುಷಾರಿಲ್ಲ. ಬೆಳಗಿನಿಂದ ನೀರಿನಂಗೆ ವಾಂತಿ-ಭೇದಿ ಮಾಡುತ್ತಿದೆ. ಡಾಕ್ಟರ್ ಹತ್ತಿರ ಹೋಗಬೇಕು. ಒಬ್ಬಳೇ ಮ್ಯಾನೇಜ್ ಮಾಡೋದು ಕಷ್ಟ, ನೀನೂ ಬಾ ಎಂದು ಹೇಳಲು ಫೋನ್ ಮಾಡಿದ್ದಳು. ಇದನ್ನೆಲ್ಲಾ ಟೈಪ್ ಮಾಡಿ ಮೆಸೇಜ್ ಮಾಡಲು ಮಗು ಕೈಬಿಡುತ್ತಿಲ್ಲ. ಮತ್ತೆ ಕಾಲ್ ಮಾಡಿದರೆ ಮನೆಯಲ್ಲಿ ಇವತ್ತು ಯುದ್ಧ ಗ್ಯಾರಂಟಿ.
ಇರಲಿ, ತಾನೊಬ್ಬಳೇ ಆಸ್ಪತ್ರೆಗೆ ಹೋದರಾಯಿತು ಎಂದು ಒಂದು ಕೈಯಲ್ಲಿ ಬ್ಯಾಗು, ಇನ್ನೊಂದು ಕೈಯಲ್ಲಿ ಒಂದೂವರೆ ವರ್ಷದ ಮಗುವನ್ನು ಎತ್ತಿಕೊಂಡಾಗ ಮನೆಗೆ ಬೀಗ ಹಾಕಲು ಕೂಡ ಕಷ್ಟ. ಅಂಥದ್ದರಲ್ಲಿ ಹೇಗೋ ಆಟೋ ಹಿಡಿದು ಕ್ಲಿನಿಕ್‌ಗೆ ಹೋಗಿ ಬರುವುದರೊಳಗೆ ಮತ್ತೆರಡು ಬಾರಿ ವಾಂತಿ ಭೇದಿ. ಮನೆ ಸೇರಿದಾಗ ಔಷಧಿಯ ಪ್ರಭಾವದಿಂದ ಮಗು ಮಲಗಿತು. ಉಸ್ಸಪ್ಪಾ, ಎಂದು ಸೋಫಾದ ಮೆಲೆ ಕುಳಿತಾಗ ಅವನು ಫೋನ್ ಮಾಡಿದ. ಕಟ್ ಮಾಡಿದರೂ ಯಾಕೆ ಪದೇಪದೆ ಫೋನ್ ಮಾಡ್ತೀಯ? ನಿನಗೇನು ತಿಳಿಯಲ್ವಾ? ಎಷ್ಟು ಕಿರಿಕಿರಿ ಮಾಡ್ತೀಯಾ ..’ಎಂದು ಒಂದೇ ಸಮನೆ ಬೈಯತೊಡಗಿದ. “ಹೇಳು, ಏನು ನಿನ್ನ ಸಮಸ್ಯೆ?’ ಎಂದು ಯಾವುದೇ ಭಾವನೆಗಳ ಏರಿಳಿತಗಳಿಲ್ಲದೆ ಕೇಳಿದಾಗ, ಅವನೊಂದಿಗೆ ಹೇಳುವಂಥದ್ದು ಏನೂ ಇಲ್ಲ ಅನ್ನಿಸಿಬಿಡುತ್ತದೆ ಇವಳಿಗೆ. ಏನೂ ಇಲ್ಲ ಎಂದು ಕಾಲ್ ಕಟ್ ಮಾಡುತ್ತಾಳೆ. ವಾಸ್ತವದಲ್ಲಿ ಇವಳಿಗೆ ಬಹಳಷ್ಟು ಹೇಳುವುದಕ್ಕಿದೆ. ಅದು ಬರೀ ಮಗುವಿನ ಅನಾರೋಗ್ಯದ ಬಗ್ಗೆ ಅಲ್ಲ, ಅವನಿಲ್ಲದೆ ಮಗುವನ್ನು ಸಂಭಾಳಿಸಲು ಅದೆಷ್ಟು ಕಷ್ಟ ಎನ್ನಿಸಿತ್ತು ಎಂಬುದರ ಬಗ್ಗೆ, ದಿನದ ಆಗುಹೋಗುಗಳ ಬಗ್ಗೆ, ಗೆಳತಿಯ ಪ್ರಮೋಷನ್ ಬಗ್ಗೆ, ಮನೆಯಲ್ಲಿ ಕಾಡುವ ಒಂಟಿತನದ ಬಗ್ಗೆ, ತಾನು ಓದಿದ ಹೊಸ ಕಾದಂಬರಿಯ ಬಗ್ಗೆ… ಎಲ್ಲವನ್ನೂ ಅವನಿಗೆ ಹೇಳುವ ತವಕ. ಆದರೆ, ಅವನ ಹತ್ತಿರ ಸಮಯವೆಲ್ಲಿದೆ? ಇದ್ದರೂ ಕೇಳುವ ವ್ಯವಧಾನವಾಗಲಿ, ಪ್ರತಿಕ್ರಿಯಿಸುವ ಸಂಯಮವಾಗಲಿ ಅವನಿಗಿಲ್ಲ. ಅವನಿಗೆ ಸಮಯವಿದ್ದಾಗ ಇವಳು ಮಗು-ಮನೆಯ ಕೆಲಸಗಳಲ್ಲಿ ಮಿಂದು ಹೋಗಿರುತ್ತಾಳೆ. ಮೊದಲ ಹಾಗೆ ಸರಾಗವಾಗಿ ಹರಟಲು ಇಬ್ಬರಿಗೂ ಸಾಧ್ಯವಾಗುತ್ತಿಲ್ಲ… ಹೀಗಾಗಿಯೇ ಅವಳ ಮನಸ್ಸಿನ ಏರಿಳಿತ ಇವನಿಗೆ ಗೊತ್ತಾಗುತ್ತಿಲ್ಲ, ಇವನದು ಅವಳಿಗೆ ಅರ್ಥವಾಗುತ್ತಿಲ್ಲ.
ಪ್ರಯತ್ನಪೂರ್ವಕವಾಗಿ ಹೊಂದಿಕೊಳ್ಳಲು ಅದೆಷ್ಟು ಪ್ರಯತ್ನಿಸಿದರೂ ಅದು ಕೇವಲ ಯಂತ್ರಗಳೊಂದಿಗಿನ ಗುದ್ದಾಟ ಅಷ್ಟೆ. ಪರಸ್ಪರರ ಮಧ್ಯೆ ಮಾತಾಡಲು ವಿಷಯಗಳೇ ಇಲ್ಲ. ಹೆಚ್ಚು ಮಾತಿಲ್ಲದೆ, ಭಾವನೆಗಳ ಬಂಧವಿಲ್ಲದೆ ಕೇವಲ ಮದುವೆ ಎಂಬ ಸಂಬಂಧ ಇವರಿಬ್ಬರನ್ನು ಒಂದಾಗಿಸಿದ್ದಕ್ಕೆ ಒಂದೇ ಸೂರಿನಡಿ ಜೀವಿಸುತ್ತಿದ್ದಾರೆ.
ಅವರಿಬ್ಬರ ನಡುವೆ ಮಾತಿಗೆ ವಿಷಯವಿಲ್ಲವೆಂದಲ್ಲ. ಆದರೆ, ಫ್ಲಾಷ್‌ಬ್ಯಾಕ್ ಬಿಟ್ಟರೆ ಇಂದಿನ ವಿಷಯಗಳಿಗೆ ಅವರು ಅಪ್ಡೆàಟ್ ಆಗಿಯೇ ಇಲ್ಲ. ಇಬ್ಬರೂ ನಿತ್ಯದ ಬದುಕಿನ ಒಡನಾಡಿಗಳಲ್ಲ. ಬೆಳಗ್ಗೆ ಒಮ್ಮೆ ಬಾಯ್ ಹೇಳಿ ಹೊರಟರೆ ಮತ್ತೆ ಇವನಿಗೆ ಅವಳ ಬಳಿ ಮಾತಾಡುವ ತುರ್ತು ಕಾಣುವುದಿಲ್ಲ. ಹಾಗಂತ ಅವಳ ಬಗ್ಗೆ ಇವನು ಯೋಚಿಸುವುದಿಲ್ಲ ಎಂದಲ್ಲ. ಅವನು ದುಡಿಯುತ್ತಿರುವುದೇ ಇವಳಿಗಾಗಿ, ಮಗುವಿಗಾಗಿ, ಬದುಕು ಅಡೆತಡೆಗಳಿಲ್ಲದೆ ಸಾಗಲಿಕ್ಕಾಗಿ. ಆದರೆ ಅವಳೊಂದಿಗಿನ ಭಾವಲೋಕದ ನಿರಂತರ ಪಯಣವನ್ನು ಅವನು ನಿಲ್ಲಿಸಿ ಎಷ್ಟೋ ದಿನಗಳಾಗಿವೆ. ಅವಳ ಒಲವಿನ ಜಗತ್ತಿನಲ್ಲಿ ಅವನಿಲ್ಲ. ಈಗಿರುವುದು ಬರೀ ಕಮಿಟ್‌ಮೆಂಟು, ಜವಾಬ್ದಾರಿ ಅಷ್ಟೆ. ಅದಕ್ಕೇ, ಗಂಡನೆಂಬ ಬಂಧದ ಹೊರತಾಗಿ ಹೆಚ್ಚಿನ ಅಟ್ಯಾಚ್ಮೆಂಟ್ ಇಲ್ಲವಾಗುತ್ತಿದೆಯೇನೋ ಅನ್ನುವ ತಳಮಳ ಅವಳಿಗೆ.
ಹಾಗಂತ ಅವನಿಗೇನೋ ಬೇರೆಯ ಆಸಕ್ತಿ ಇದೆ ಎಂದಲ್ಲ. ನಮ್ಮ ಸುತ್ತಲಿನ ಜಗತ್ತು ದಿನದಿಂದ ದಿನಕ್ಕೆ ಬದಲಾಗುವ ಹಾಗೆಯೇ ಅವರ ಬದುಕು, ಪರಿಸ್ಥಿತಿ ಎಲ್ಲವೂ ಬದಲಾಗಿದೆ. ಇದನ್ನು ನಿತ್ಯವೂ ಬಲ್ಲವರಷ್ಟೇ ಅನುದಿನದ ಭಾವ ಸಾಂಗತ್ಯವನ್ನು ಒದಗಿಸಬಲ್ಲರು. ಆದ್ದರಿಂದಲೇ, ಸಂಬಂಧದಲ್ಲಿ ಸಮಯದ ಅಂತರ ಕಾಣಿಸಿದರೆ ಅದನ್ನು ಮತ್ತೆ ಸಾಣೆ ಹಿಡಿದು ನವೀಕರಿಸಿಕೊಳ್ಳಲೇಬೇಕು. ಇಲ್ಲವಾದರೆ ಅಲ್ಲೊಂದು ಗ್ಯಾಪ್ ಸೃಷ್ಟಿಯಾಗಿಬಿಡುತ್ತದೆ. ಆಗ ಭಾವಗಳ ಸರಾಗ ಸಂವಹನ ಸಾಧ್ಯವಾಗದು. ನಮ್ಮ ಮೊಬೈಲ್‌ನ ಆ್ಯಪ್‌ಗ್ಳೆಲ್ಲ ವಾರಕ್ಕೋ, ಹದಿನೈದು ದಿನಕ್ಕೋ ಅಪ್ಡೆàಟ್ ಕೇಳುತ್ತವಲ್ಲ, ಹಾಗೆಯೇ ಸಂಬಂಧಗಳು ಕೂಡ! ಆಪ್ತ ಸಂಬಂಧವೊಂದರಲ್ಲಿ ನಿತ್ಯದ ಆಗುಹೋಗುಗಳನ್ನು ಪರಸ್ಪರ ಹೇಳಿಕೊಳ್ಳುತ್ತಿದ್ದರೆ ಮಾತ್ರ ಅಲ್ಲೊಂದು ಅಟ್ಯಾಚ್ಮೆಂಟ್ ಉಳಿಯಬಲ್ಲುದು. ಇಲ್ಲವಾದರೆ ಸಂಬಂಧದಲ್ಲಿನ ಬಂಧ ಮಾಯವಾಗಿ ಜಡವಸ್ತುಗಳಂತಾಗಿಬಿಡುತ್ತದೆ ನಮ್ಮ ಬದುಕು.
ಜೀವನವೂ ನಾವು ಉಪಯೋಗಿಸುವ ಮಿಕ್ಸಿ, ಟಿವಿ, ಫ್ರಿಡ್ಜ್ನ ಹಾಗೆ. ದಿನವೂ ಚಾಲನೆ ನೀಡದಿದ್ದರೆ ಕೆಟ್ಟು ಹೋಗಿರುವುದೂ ಕೂಡ ನಮಗೆ ತಿಳಿಯುವುದಿಲ್ಲ. ಹಾಗಂತ ಅವನಿಗೆ ಅದು ತಿಳಿಯುವುದಿಲ್ಲ ಎಂದಲ್ಲ. ತಿಳಿದೋ, ತಿಳಿಯದೆಯೋ ಅಥವಾ ತಿಳಿಯುವ ಹೊತ್ತಿಗಾಗಲೇ ಬದುಕಿನ ದಾರಿಯನ್ನು ಬಹಳಷ್ಟು ಸವೆಸಿಯಾಗಿರುತ್ತದೆ. ಸಂಬಂಧಗಳು ಸಡಿಲಗೊಳ್ಳುವುದು ವಿಷಯಗಳ ವಿನಿಮಯ ಇಲ್ಲದೇ ಹೋದಾಗ. ಇದೆಲ್ಲಾ ಅವಳಿಗೇಕೆ, ಅವಳಿಗೇನು ಅರ್ಥವಾಗುತ್ತದೆಯೇ ಅಥವಾ ಅವಳಿಂದೇನು ಸಹಾಯವಾಗುತ್ತದೆಯೇ, ಇಲ್ಲಾ ಅವಳಿಗೇಕೆ ಇವೆಲ್ಲಾ ಟೆನ್ಸ್ನ್ನು. ಆರಾಮಾಗಿ ಇರಲಿ… ಎಂದು ಇವನು ಸುಮ್ಮನಾದಾಗ ನಿಧಾನವಾಗಿ ಅವರ ಜೀವನದಲ್ಲಿ ಮಾತುಗಳಿಗೆ ಕೊರತೆಯುಂಟಾಗುತ್ತದೆ. ಅದು ಭಾವನೆಗಳ ಕೊರತೆಯತ್ತ ಮುಖ ಮಾಡಲು ಹೆಚ್ಚು ಹೊತ್ತು ಬೇಕಿಲ್ಲ.
ಯಾವುದೇ ಸಂಬಂಧ ನವನವೀನವಾಗಿರಲು ಅದರಲ್ಲಿ ಬೆಸುಗೆ ಹಾಕಿಕೊಂಡಿರುವ ಇಬ್ಬರ ಪ್ರಯತ್ನವೂ ಬೇಕು. ಇಬ್ಬರ ಆಸಕ್ತಿಗಳು, ವೃತ್ತಿ ಕ್ಷೇತ್ರ ಬೇರೆಯಾದಾಕ್ಷಣ ಹೇಳಿಕೊಳ್ಳುವಿಕೆ ನಿಲ್ಲಬೇಕೆಂದೇನೂ ಇಲ್ಲ. ತನ್ನ ಜಗತ್ತಿನ ಆಗುಹೋಗುಗಳನ್ನು ಇವಳು ತೆರೆದಿಟ್ಟ ಹಾಗೇ ಅವನೂ ತೆರೆದಿಟ್ಟುಕೊಳ್ಳಬೇಕು. ಅವಳ ಬೇಸರಕ್ಕೆ ಇವನು ಕಿವಿಯಾಗಬೇಕು. ಖುಷಿಗೆ ಸಾಥಿಯಾಗಬೇಕು. ಏನೂ ಇಲ್ಲದೆ ಸುಮ್ಮನೆ ತಬ್ಬಿ ಮೌನವಾಗಬೇಕು. ಆಗಲೇ ಬಂಧ ಮತ್ತೆ ಮತ್ತೆ ಹೊಸ ಸ್ವಾದ ಪಡೆದುಕೊಳ್ಳುವುದು. ಅದೇ ಆಪ್ತತೆಯನ್ನು ಉಳಿಸಿಕೊಳ್ಳವುದು. ಭಾವಗಳಿಗೆ ಬೆಸುಗೆ ಹಾಕುವ ಈ ಪ್ರಕ್ರಿಯೆ ನಡೆಯದೇ ಇದ್ದಲ್ಲಿ ಗಂಡ-ಹೆಂಡತಿಯು ಜತೆಜತೆಯಲ್ಲಿದ್ದರೂ ಅಪರಿಚಿತರೇ ಆಗುವುದು ಸುಳ್ಳಲ್ಲ. ಅದಕ್ಕಾಗಿ ದಿನದಲ್ಲಿ ಹದಿನೈದು ನಿಮಿಷವನ್ನಾದರೂ ಒಬ್ಬರಿಗೊಬ್ಬರು ಮೀಸಲಿಟ್ಟರೆ ಸಾಕು. ಅದೆಷ್ಟೋ ಸಂಬಂಧಗಳು ಬದುಕಿನ ದಡ ಸೇರಿಬಿಡುತ್ತವೆ.
ಜಮುನಾ ರಾಣಿ ಹೆಚ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!
Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!
BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.