ಬೆನ್ನ ಹಿಂದೆ ಶೆರ್ಲಾಕ್ ಹೋಮ್ಸ್!
Team Udayavani, Sep 6, 2017, 12:02 PM IST
ಹಿಂದೆಲ್ಲಾ ಟಾಪ್ ಸೀಕ್ರೆಟ್ ಕಾರ್ಯಗಳಿಗೆ ಮಾತ್ರ ಬಳಕೆಯಾಗುತ್ತಿದ್ದ, ನಾವು ಹೆಚ್ಚಾಗಿ ಸಿನಿಮಾಗಳಲ್ಲಷ್ಟೇ ನೋಡುತ್ತಿದ್ದ ಪ್ರೈವೇಟ್ ಡಿಟೆಕ್ಟಿವ್‌ಗಳು ಇಂದು ನಮ್ಮ ಮನೆಯೊಳಕ್ಕೇ ಬಂದುಬಿಟ್ಟಿದ್ದಾರೆ. ಅವರ ಪತ್ತೇದಾರಿಕೆ, ಈಗ ದೊಡ್ಡ ದೊಡ್ಡ ಕಂಪನಿಗಳಿಗೆ, ಹೈ ಪ್ರೊಫೈಲ್ ರಾಜಕಾರಣಿಗಳಿಗೆ, ಬ್ಯಾಂಕು ವ್ಯವಹಾರಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಜನಸಾಮಾನ್ಯರೂ ತಮ್ಮ ದೈನಂದಿನ ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಬಳಿಗೆ ತೆರಳುತ್ತಿದ್ದಾರೆ. ಬದಲಾಗಿರುವ ಇಂದಿನ ಸನ್ನಿವೇಶದಲ್ಲಿ ಜನರು ಎಂಥೆಂಥ ಕೇಸ್‌ಗಳನ್ನು ಹೊತ್ತು ಅವರಲ್ಲಿಗೆ ಹೋಗುತ್ತಿದ್ದಾರೆ ಎನ್ನುವುದು ಅಧ್ಯಯನ ಯೋಗ್ಯ ವಿಷಯ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದಕ್ಕೆ ಇದು ಕನ್ನಡಿ ಹಿಡಿಯಬಲ್ಲುದು. ನಾವೆಲ್ಲರೂ ಬದುಕುತ್ತಿರುವ ಸೋ ಕಾಲ್ಡ್ ರಿಯಲ್ ಜಗತ್ತಿನ ಒಳಗೇ ಜಾಗ ಕಂಡುಕೊಂಡಿರುವ ಈ ವಿಕ್ಷಿಪ್ತ, ಅನುಮಾನಾಸ್ಪದ ಲೋಕದಲ್ಲೊಂದು ಸುತ್ತು. ಗಂಡ ಮೋಸ ಮಾಡುತ್ತಿರಬಹುದು ಎಂದು ಅನುಮಾನಿಸುವ ಪತ್ನಿ, ಹುಡುಗಿಯ ಕನ್ಯತ್ವದ ಬಗ್ಗೆ ವಿಚಾರಿಸುವ ವರ, ಸಿಟಿಯಲ್ಲಿ ಓದುತ್ತಿರುವ ಮಗಳ ನೈಟ್ ಲೈಫ್ ಬಗ್ಗೆ ತಿಳಿಯಲಿಚ್ಛಿಸುವ ಅಮ್ಮ, ಎಲ್ಲರೂ ಇಲ್ಲಿದ್ದಾರೆ…
ಘಟನೆ 1
ಇಷ್ಟು ದಿನ ಮದುವೆ ವಿಷಯ ಎತ್ತಿದರೆ ಮೂಗು ಮುರಿಯುತ್ತಿದ್ದ ಮಗ ಅಂತೂ ಇಂತೂ ಮದುವೆಗೆ ಒಪ್ಪಿಕೊಂಡಿದ್ದಾನೆ ಅನ್ನೋದೇ ಖುಷಿ ಅಪ್ಪ ಅಮ್ಮನಿಗೆ. ಅದಕ್ಕೇ ಅವನು ಲವ್ ಮ್ಯಾರೇಜ್ ಆಗುತ್ತಿದ್ದರೂ ತಕರಾರು ಎತ್ತಿಲ್ಲ. ಒಂದೇ ಸಮಸ್ಯೆಯೆಂದರೆ, ಮಗ ಹುಡುಗಿಯನ್ನು ಮೊದಲ ಬಾರಿ ನೋಡಿದ್ದು ಫೇಸ್‌ಬುಕ್‌ನಲ್ಲಿ. ನಂತರ ಅವರು ಮುಖತಃ ಭೇಟಿಯಾಗಿ ಪಾರ್ಕು, ಸಿನಿಮಾ ಅಂತ ಸುತ್ತಾಡಿದ್ದಾರೆ, ಕಷ್ಟ ಸುಖ ಹಂಚಿಕೊಂಡಿದ್ದಾರೆ. ಆದರೂ ಹುಡುಗಿಯ ಫೇಸ್‌ಬುಕ್ ಪ್ರೊಫೈಲ್ ನೋಡಿ ಮಗ ಮರುಳಾಗಿದ್ದು ಹೆತ್ತವರ ಚಿಂತೆಗೆ ಕಾರಣ. ಅದಕ್ಕೆ ಅವರು ಹುಡುಗಿಯ ಇತ್ಯೋಪರಿ ವಿಚಾರಿಸಲು ಡಿಟೆಕ್ಟಿವ್ ಸಂಸ್ಥೆಯ ಮೊರೆ ಹೋಗಿದ್ದಾರೆ. ಆವಾಗ ಗೊತ್ತಾದ ವಿಷಯ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಆ ಹುಡುಗಿಯ ತಂದೆ ಬಿಝಿನೆಸ್‌ನಲ್ಲಿ ಲಾಸ್ ಮಾಡಿಕೊಂಡು ಊರೆಲ್ಲಾ ಸಾಲ ಮಾಡಿ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಈ ಹುಡುಗಿ ಆ ಸಮಯದಲ್ಲಿ ಶ್ರೀಮಂತ ಮುದುಕನೊಬ್ಬನನ್ನು ಹಣದಾಸೆಗೆ ಮದುವೆಯೂ ಆಗಿ ಕಾರ್ಯ ಸಾಧನೆಯಾದ ಮೇಲೆ ಕೈ ಕೊಟ್ಟಿದ್ದಳು. ಅಲ್ಲಿಂದ ಶ್ರೀಮಂತ ಹುಡುಗರ ಜೊತೆಗೆ ಮದುವೆಯ ನಾಟಕವಾಡಿ ವರನ ಕಡೆಯಿಂದ ಸಿಗುವ ಚಿನ್ನಾಭರಣವನ್ನು ಲಪಟಾಯಿಸುವುದನ್ನೇ ಆ ಕುಟುಂಬ ಕಾಯಕವನ್ನಾಗಿಸಿಕೊಂಡಿತ್ತು.
ಘಟನೆ 2
ಪ್ರೀತಿಸಿ ಮದುವೆಯಾದರೂ ಅವರ ದಾಂಪತ್ಯದಲ್ಲಿ ಸಂತಸವಿರಲಿಲ್ಲ. ಪತಿ ಯಾವಾಗಲೂ ಕೆಲಸ ಕೆಲಸ ಎಂದುಕೊಂಡು ಊರೂರು ಓಡಾಡುತ್ತಾ, ಮನೆಯಿಂದ ಹೊರಗೇ ಇರುತ್ತಿದ್ದರು. ಅಲ್ಲದೇ, ಪತಿಯ ನಡವಳಿಕೆ ಪತ್ನಿಗೆ ವಿಚಿತ್ರವಾಗಿ ಕಂಡಿತ್ತು. ಒಮ್ಮೆ ಆ ಕುರಿತು ಕೇಳಿಯೂ ಬಿಟ್ಟಿದ್ದಳು. ಆಗ
ಪತಿರಾಯ “ಕೆಲಸದೊತ್ತಡದಿಂದ ಹಾಗಾಗಿರಬಹುದು’ ಎಂದು ಹೇಳಿ ಜಾರಿಕೊಂಡಿದ್ದ. ಇವೆಲ್ಲದರ ಪರಿಣಾಮವೇನಾಯೆ¤ಂದರೆ, ಪತ್ನಿಯ ಮನಸ್ಸಿನಲ್ಲಿ ತನ್ನ ಗಂಡ ಅಫೇರ್ ಇಟ್ಟುಕೊಂಡಿದ್ದಾನೆ ಎಂಬ ಡೌಟು ಬಲವಾಯಿತು. ಅವಳಿಗೆ ಸುಮ್ಮನಿರಲಾಗಲಿಲ್ಲ, ಸಾಕ್ಷಿ ಸಮೇತ ಪತ್ತೆ ಹಚ್ಚಲೇಬೇಕಿತ್ತು. ಆವಾಗ ಆಕೆಗೆ ನೆನಪಾಗಿದ್ದು ಡಿಟೆಕ್ಟಿವ್ ಏಜೆನ್ಸಿ. ಪತ್ನಿ, ತನ್ನ ಪತಿಯ ಆಗುಹೋಗುಗಳ ವಿವರಗಳನ್ನು ಕೊಟ್ಟ ಮೇಲೆ ಸಂಸ್ಥೆಯವರು ತನಿಖೆ ಶುರುಮಾಡಿದರು. ರಿಸಲ್ಟ್ ಬಂದಾಗ ನಿರಾಸೆಯಾಗುವ ಸರದಿ ಪತ್ನಿಯದಾಗಿತ್ತು. ಗಂಡನನ್ನು ಸಾಕ್ಷಿ ಸಮೇತ ಹಿಡಿದು, ರಾದ್ಧಾಂತ ಮಾಡುವ ಹವಣಿಕೆಯಲ್ಲಿದ್ದವಳಿಗೆ ತನ್ನ ಪತಿ ನಿಜಕ್ಕೂ ಸಾಚಾ, ಸಾಧು, ಶ್ರೀರಾಮಚಂದ್ರ ಎಂದು ತಿಳಿದು ಅತೀವ ನೆಮ್ಮದಿಯಾಯಿತು. ಅವರ ಮೇಲೆ ಪ್ರೀತಿ ಹೆಚ್ಚಿತು.
ಘಟನೆ 3
ಮಗಳು ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಓದುವುದರಲ್ಲಿ ಯಾವುದೇ ತೊಂದರೆಯಿಲ್ಲದಿದ್ದರೂ, ಅಮ್ಮನಿಗೆ ತನ್ನ ಮಗಳು ಎಲ್ಲಿ ಹಾಳಾಗಿಬಿಡುತ್ತಾಳ್ಳೋ ಅನ್ನೋ ಹೆದರಿಕೆ. ಅಕ್ಕಪಕ್ಕದ ಮನೆಯವರು ಮಾತಾಡೋದನ್ನು, ಟಿ.ವಿ ನ್ಯೂಸ್ ಚಾನಲ್ಲುಗಳಲ್ಲಿ ಹದಿಹರೆಯದವರ ಚಟುವಟಿಕೆಗಳನ್ನು ತೋರಿಸಿದಾಗಲೆಲ್ಲಾ ಈ ತಾಯಿಯ ಚಿಂತೆ ಇಮ್ಮಡಿಯಾಗುತ್ತಿರುತ್ತೆ. ಮಗಳು ರಾತ್ರಿ ಪೋನ್ ಎತ್ತಿಕೊಳ್ಳದಿರುವುದು, ತಡರಾತ್ರಿಯವರೆಗೂ ಹಾಸ್ಟೆಲ್ಲಿನಿಂದ ಹೊರಗೆ ಇರೋದು, ಅವರ ಚಿಂತೆಯ ಬೆಂಕಿಗೆ ತುಪ್ಪ ಹಚ್ಚಿರುತ್ತೆ. ಪತಿಯಲ್ಲಿ ಹೇಳಿಕೊಂಡರೆ ಅವರು ಮಗಳ ಪರ ವಹಿಸಿಕೊಂಡು ಸುಮ್ಮನಾಗಿಬಿಡುತ್ತಾರೆ. ಅಕ್ಕಪಕ್ಕದವರ ಬಳಿ ಮಾತಾಡುವಂತೆಯೇ ಇಲ್ಲ. ಏಕೆಂದರೆ ಗಾಳಿಸುದ್ದಿ ಹಬ್ಬಿಸುವ ಅಪಾಯ. ಅದಕ್ಕೆ ಈ ಮಹಾತಾಯಿ ಮಗಳ ನೈಟ್‌ಲೆçಫ್ ಕುರಿತು ತಿಳಿಯೋಕೆ ಖಾಸಗಿ ಪತ್ತೇದಾರರನ್ನು ನೇಮಿಸಿಕೊಳ್ಳುತ್ತಾಳೆ. ರಿಪೋರ್ಟ್ ನೋಡಿ ತಾನು ಅಂದುಕೊಂಡಂತೆ ಏನೂ ಆಗಿಲ್ಲವೆಂದು ಸಮಾಧಾನದ ಉಸಿರುಬಿಡುತ್ತಾಳೆ.
ಕನ್ಯತ್ವ ತಿಳಿಯಲು
ಪುರಾಣಗಳಲ್ಲಿ ಕನ್ಯತ್ವ ಪರೀಕ್ಷೆ, ಹೆಣ್ಣು ಅಗ್ನಿಕುಂಡದಲ್ಲಿ ಬೀಳುವ ಮೂಲಕ ನೆರವೇರುತ್ತಿತ್ತು. ಈಗ ಕನ್ಯತ್ವ ಪರೀಕ್ಷಿಸಲು ಗಂಡಿನ ಕಡೆಯವರು ಡಿಟೆಕ್ಟಿವ್ ಏಜೆನ್ಸಿಯ ಮೊರೆ ಹೋಗುತ್ತಿದ್ದಾರೆ. ಈ ಮನೋಭಾವದ ಹುಡುಗರ ತಳಿ ಈ ಜಮಾನದಲ್ಲೂ ಇದೆ ಎನ್ನುವುದೇ ಆಶ್ಚರ್ಯ ಮತ್ತು ವಿಪರ್ಯಾಸ. ಕೆಲ ಡಿಟೆಕ್ಟಿವ್ ಏಜೆನ್ಸಿಯವರು ಇಂಥ ಕೇಸುಗಳನ್ನು ತಿರಸ್ಕರಿಸಿದ ಉದಾಹರಣೆಗಳೂ ಇವೆ.
ಪತ್ತೇದಾರಿಕೆಯಲ್ಲಿ ಹತ್ತು ಹಲವು ವಿಭಾಗಗಳೇ ಹುಟ್ಟಿಕೊಂಡಿವೆ. ಕಾಣೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚೋದು, ಡೈವೋರ್ಸ್ ಕೇಸು, ಮದುವೆ ಮುನ್ನದ ತನಿಖೆ, ಸಾಲಗಾರ ವ್ಯಕ್ತಿಯ ಪತ್ತೆ, ಕಿರಿಕ್ ಮಾಡದ ಮನೆ ಬಾಡಿಗೆದಾರರ ಪತ್ತೆ, ಆಸ್ತಿ ಖರೀದಿ, ಮಕ್ಕಳ ಶೈಕ್ಷಣಿಕ ಮಾಹಿತಿ ಮತ್ತು ಖಾಸಗಿ ಬದುಕು… ಹೀಗೆ ಖಾಸಗಿ ಪತ್ತೇದಾರಿಕೆಯ ವ್ಯಾಪ್ತಿ ಹಿಗ್ಗುತ್ತಲೇ ಹೋಗುತ್ತದೆ. ಒಟ್ಟು ಕೇಸುಗಳಲ್ಲಿ, ವೈವಾಹಿಕ, ಸಾಂಸಾರಿಕ ಕೇಸುಗಳೇ ಹೆಚ್ಚು. ಇದರಿಂದ ನಾವು, ಮನುಷ್ಯ ಸಂಬಂಧಗಳ ಬೆಲೆಯನ್ನೇ ಕಳೆದು ಕೊಂಡಿದ್ದೇವೆಯೇ ಎಂದೆನಿಸದೇ ಇರದು.
ಹೀಗ್ಯಾಕೆ?
ಒಂದು ಕಾರಣವನ್ನು ಹೇಳಬಹುದಾದರೆ-ಒಡೆದು ಹೋಗುತ್ತಿರುವ ಕುಟುಂಬಗಳು. ಹಿಂದಿದ್ದ ಕೂಡು ಕುಟುಂಬಗಳು ಇಂದು ತುಂಬಾ ಅಪರೂಪ. ಮಗ ದುಡಿಯಲೆಂದು ಪಟ್ಟಣ ಸೇರಿದ್ದಾನೆ. ಮಗಳು ಗಂಡನ ಮನೆ ಸೇರಿದ್ದಾಳೆ. ಮನೆಯಲ್ಲಿ ಅಪ್ಪ, ಅಮ್ಮ ಇಬ್ಬರೇ. ಇನ್ನು ನೆಂಟರಿಷ್ಟರ ಸಂಬಂಧ ಕಾಪಾಡಿಕೊಳ್ಳುವುದು ದೂರದ ಮಾತೇ ಆಗಿದೆ. ಪ್ರತಿಯೊಬ್ಬರೂ ದ್ವೀಪಗಳಾಗಿ ಬಿಟ್ಟಿದ್ದೇವೆ. ಒಂದೇ ಮನೆಯಲ್ಲಿದ್ದರೂ ಪೋನ್‌ನಲ್ಲಿ ಸಂವಹಿಸುವ ಕಾಲದಲ್ಲಿದ್ದೇವೆ. ಇವೆಲ್ಲದರಿಂದಾಗಿಯೇ ಜನರು ಖಾಸಗಿ ಪತ್ತೇದಾರರ ಬಳಿ ಹೋಗುತ್ತಿರುವುದು. ಹಿಂದೆಲ್ಲಾ ಮದುವೆ ಎಂದರೆ ಒಂದಿಡೀ ಕುಟುಂಬವೇ ಭಾಗಿಯಾಗುತ್ತಿತ್ತು. ಅವರಿವರಿಂದ ಮಾಹಿತಿ, ವಿಚಾರ ರವಾನೆಯಾಗುತ್ತಿತ್ತು. ಪ್ರತಿಯೊಬ್ಬರ ಕಷ್ಟ ಸುಖದಲ್ಲಿ ನೆಂಟರಿಷ್ಟರು ಭಾಗಿ ಯಾಗುತ್ತಿದ್ದರು. ಸಂಬಂಧಗಳೇ ಇಲ್ಲದಿರುವ ಈಗಿನ ಬಿಝಿ ಜಗತ್ತಿನಲ್ಲಿ ಹಾಗಾಗುತ್ತಿಲ್ಲ.
ಆದರೆ ಒಂದಂತೂ ಸತ್ಯ. ನಿಜವನ್ನು ತಿಳಿಯುವ, ಅನುಮಾನವನ್ನು ಪರಿಹರಿಸಿಕೊಳ್ಳುವ ಭರದಲ್ಲಿ ನಾವು ನಂಬಿಕೆಯನ್ನು ಕಳೆದುಕೊಳ್ಳಬಾರದು.
ವಿದ್ಯಾರ್ಥಿ ದೆಸೆಯಲ್ಲಿ, ರಿಪೋರ್ಟ್ ಕಾರ್ಡು “ಫೇಲ್’ ಎಂದು ಬಂದಾಗ “ಮಾರ್ಕುಗಳಾಚೆಗೂ ಒಂದು ಬದುಕಿದೆ’ ಎಂದು ಯಾವ ರೀತಿ ಧೈರ್ಯ ತಂದು
ಕೊಳ್ಳುತ್ತಿದ್ದೆವೋ, ಅದೇ ಪಾಲಿಸಿಯನ್ನು ಬದುಕಿನ ಉದ್ದಕ್ಕೂ ರೂಢಿಸಿಕೊಂಡರೆ ನಾವು ಬದುಕಲು ಕಲಿತಂತೆಯೇ ಸರಿ.
ಅಘಾತ !
ಫೈಟರ್ ವಿಮಾನ ಚಾಲಕನಾಗಿದ್ದ ಗಂಡ, ಮದುವೆಯಾದ ಕೆಲ ವರ್ಷಗಳಲ್ಲೇ ತನ್ನ ಪತ್ನಿ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡಿದ್ದ. ದಾಂಪತ್ಯದಲ್ಲಿ ಸಾಮರಸ್ಯವಿರಲಿಲ್ಲ. ಅವನಿಗೆ ಬೇರೆ ಯಾರೋ ಇಷ್ಟವಾಗಿದ್ದಳು. ಇನ್ನೇನು ಪತ್ನಿಗೆ ಡೈವೊರ್ಸ್ ಕೊಡುವುದರಲ್ಲಿದ್ದ. ಅಷ್ಟರಲ್ಲೊಂದು ದಿನ ಪತ್ನಿ ಏಕಾಏಕಿ ನಾಪತ್ತೆ! ಪತ್ನಿ ಸೆಲಬ್ರಿಟಿಯಾಗಿದ್ದರಿಂದ ಜಗತ್ತಿನಾದ್ಯಂತ ನಾನಾ ಥರದ ಸುದ್ದಿಗಳು ಹರಿದಾಡಿದವು. 15,000 ಸ್ವಯಂಸೇವಕರು ಪತ್ನಿಯ ಹುಡುಕಾಟದಲ್ಲಿ ತೊಡಗಿದರು. ಅಫೇರ್ ಇಟ್ಟುಕೊಂಡಿದ್ದ ಗಂಡನ ಮೇಲೆ ಎಲ್ಲರ ಗಮನ ಬಿದ್ದಿತ್ತು. ಎಲ್ಲರ ಮನದಲ್ಲೂ, ಆತನೇ ಏನೋ ಮಾಡಿದ್ದಾನೆ ಎಂಬ ಗುಮಾನಿ. ಇವೆಲ್ಲದರಿಂದಾಗಿ ಗಂಡ ತತ್ತರಿಸಿ ಹೋಗಿದ್ದ. ಕ್ಷಣ ಕ್ಷಣವೂ ಅವನು ನರಳಿದ. ಅವನಿಗೆ ನೆಮ್ಮದಿಯೇ ಇಲ್ಲವಾಯಿತು. ನಾಪತ್ತೆಯಾದ 11ನೇ ದಿನ ಪತ್ನಿ ಪತ್ತೆಯಾದಳು. ಆಗ ಅವಳು ಐಷಾರಾಮಿ ಹೋಟೆಲ್ ನಲ್ಲಿ ಬೇರೆ ಹೆಸರಿನಲ್ಲಿ, ಮಾರುವೇಷದಲ್ಲಿದ್ದಳು. ಗಂಡನನ್ನು ಚಿತ್ರಹಿಂಸೆಗೆ ಗುರಿಪಡಿಸಲು ಇಂಥದ್ದೊಂದು ಖತರ್‌ನಾಕ್ ಉಪಾಯವನ್ನು ಹುಡುಕಿಕೊಂಡ ಆ ಪತ್ನಿ ಬೇರೆ ಯಾರೂ ಅಲ್ಲ, ಖ್ಯಾತ ಪತ್ತೇದಾರಿ, ಕ್ರೈಂ ಕಾದಂಬರಿಕಾರ್ತಿ ಅಗಾಥಾ ಕ್ರಿಸ್ಟೀ!
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.