ಮನೋರಥ
Team Udayavani, Apr 17, 2019, 6:10 AM IST
ಡಾಕ್ಟ್ರೇ, ನಿಮ್ಮಲ್ಲಿ ಒಂದು ಪ್ರಶ್ನೆ ಕೇಳುವುದಿತ್ತು. ನಾನು ಯಾವಾಗಲೂ ತಾವು ಬರೆದ ಅಂಕಣವನ್ನು ಓದುತ್ತೇನೆ. ಜನರು ತಮ್ಮ ಬೇರೆ ಬೇರೆ ಸಮಸ್ಯೆಗಳನ್ನು ತಮ್ಮಲ್ಲಿ ದಿನಾಲೂ ಹೇಳಿಕೊಳ್ಳುತ್ತಿರಬಹುದು. ಅವರ ಸಮಸ್ಯೆಗಳೆಲ್ಲವೂ ತೀರಾ ವೈಯಕ್ತಿಕವಾದದ್ದು ಆಗಿರುತ್ತದೆ. ತಮ್ಮಲ್ಲಿ ನನಗೆ ಗೊತ್ತಿದ್ದವರೊಬ್ಬರನ್ನು ಕಳಿಸಲು ನೋಡಿದಾಗಲೂ ಅವರದೂ ಇದೇ ಸಮಸ್ಯೆ ಎನಿಸಿತು. ಅದಕ್ಕೇ ಇದರ ಬಗ್ಗೆ ಕೇಳುತ್ತಿದ್ದೇನೆ. ಅನ್ಯಥಾ ಭಾವಿಸದಿರಿ. ರೋಗಿಗಳಾದವರು, ಅದರಲ್ಲೂ ಮಾನಸಿಕ ರೋಗಿಗಳಾದವರಿಗೆ, ತಮ್ಮ ಬಗ್ಗೆ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅದೆಷ್ಟೋ ವಿಷಯಗಳನ್ನು ವೈದ್ಯರಲ್ಲಿ ಹೇಳಿಕೊಳ್ಳುವುದು ಇರುತ್ತದೆ. ಹಾಗೆ ಹೇಳಿಕೊಂಡರೇನೇ ವೈದ್ಯರಿಗೂ ಅವರಿಗೆ ಚಿಕಿತ್ಸೆ ಕೊಡಲು ಅನುಕೂಲವಾಗುತ್ತದೆ. ಆದರೆ ಅವರು ಹೇಳಿದ್ದನ್ನೆಲ್ಲಾ ವೈದ್ಯರು ಬರೆದಿಟ್ಟುಕೊಳ್ಳುತ್ತಾರೆ… ಬರೆದಿಟ್ಟುಕೊಳ್ಳದಿದ್ದರೂ, ಅವರ ವಿಚಾರವೆಲ್ಲ ವೈದ್ಯರಿಗೆ ಗೊತ್ತೇ ಆಗುತ್ತದೆ. ಈ ವಿಚಾರಗಳನ್ನು ಅವರು ಬೇರೆಯವರೊಡನೆ ಹಂಚಿಕೊಂಡುಬಿಟ್ಟರೆ, ಎಂಬ ಭಯ ಹಲವಾರು ರೋಗಿಗಳಿಗೆ ಇರೋದಿಲ್ಲವೆ? ಅದು ಅವರ ಬಗೆಗಿನ ವೈಯಕ್ತಿಕ ವಿಚಾರಗಳಾಗಿರುವುದರಿಂದ, ಅವನ್ನು ಅವರದೇ ಮನೆಯವರೊಡನೆ ಚರ್ಚಿಸಿದರೂ, ಅದು ಅವರಿಗೆ ನೋವು, ಮುಜುಗರ ಉಂಟು ಮಾಡಬಹುದಲ್ಲವೆ? ಈ ರೀತಿಯ ಇಬ್ಬಂದಿತನದಿಂದ ವೈದ್ಯರಾಗಲಿ, ರೋಗಿಯಾಗಲಿ ಪರಿಹಾರ ಕಂಡುಕೊಳ್ಳುವುದು ಹೇಗೆ?
– ವಾಸುದೇವ, ಮಂಗಳೂರು
ವಾಸುದೇವರವರೇ, ತಾವು ಬಹಳ ಬುದ್ಧಿವಂತ ಪ್ರಶ್ನೆಯನ್ನೇ ಕೇಳಿರುವಿರಿ. ನಿಮ್ಮ ತಲೆ ವಕೀಲರಂತೆ ಓಡುತ್ತದೆ ಎಂದರೆ ತಪ್ಪಾಗಲಾರದು. ಹೌದು! ನಮ್ಮಲ್ಲಿ ರೋಗಿಗಳು ಬರುವಾಗ, ಬಹಳಷ್ಟು ಹಿಂಜರಿದುಕೊಂಡೇ ಬರುವರು. ನಮ್ಮಲ್ಲಿ ಅವರು ಹಂಚಿಕೊಂಡ ವಿಚಾರ ಎಲ್ಲಿ ಹರಡಿಬಿಡುತ್ತದೋ ಎಂಬ ಭಯ ಸಹಜವೇ! ಇಲ್ಲಿ ನೀವು ಹಾಗೂ ಜನರು ಒಂದು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ರೋಗಿಯ ಬಗ್ಗೆ ಎಲ್ಲ ಮಾಹಿತಿ ತಿಳಿದುಕೊಂಡರೇನೇ ವೈದ್ಯರಾದವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಸಾಧ್ಯ. ಅದಕ್ಕೇ ಯಾರೋ ಬುದ್ಧಿವಂತರು ಹೇಳಿರುವುದು ವಕೀಲರಲ್ಲಿ ಹಾಗೂ ವೈದ್ಯರಲ್ಲಿ ಏನನ್ನೂ ಮುಚ್ಚಿಡಲು ಹೋಗದಿರಿ ಎಂದು. ಯಾಕೆಂದರೆ, ಅರ್ಧಂಬರ್ಧ ಅಥವಾ ತಪ್ಪು ಮಾಹಿತಿ ನೀಡಿದ್ದಲ್ಲಿ, ಪರಿಣಾಮವೂ ಅರ್ಧಂಬರ್ಧ ಹಾಗೂ ತಪ್ಪಾಗಬಹುದಲ್ಲವೆ ಇದರಿಂದ ರೋಗಿಗೇ ತೊಂದರೆ!
ಆದ್ದರಿಂದ, ವೈದ್ಯರನ್ನು ಪೂರ್ತಿಯಾಗಿ ನಂಬಿಯೇ, ಅವರಲ್ಲಿ ಹೋಗಬೇಕಾಗಿ ಬರುವ ಅನಿವಾರ್ಯ ಧರ್ಮ ರೋಗಿಯದ್ದಾಗಿರುತ್ತದೆ. ಹೀಗೆ ಅವರು ಹಂಚಿಕೊಂಡದ್ದನ್ನು ವೈದ್ಯರು ಕೇಳಿಸಿಕೊಂಡರೂ, ಬರೆದಿಟ್ಟುಕೊಂಡರೂ, ಅವರ ಅನುಮತಿ ಇಲ್ಲದೆ, ಯಾರಲ್ಲೂ ಹಂಚಿಕೊಳ್ಳದೆ, ಗೌಪ್ಯ ಕಾಪಾಡಿಕೊಳ್ಳಬೇಕಾದದ್ದು ವೈದ್ಯರ ವೃತ್ತಿಪರ ಹಾಗೂ ನೈತಿಕ ಹೊಣೆಗಳಲ್ಲಿ ಒಂದಾಗಿರುತ್ತದೆ. ಇದು ಎಲ್ಲಾ ವೈದ್ಯರಿಗೆ ಅನ್ವಯವಾಗುವ ವಿಚಾರವಾದರೂ, ಮಾನಸಿಕ ರೋಗದ ತಜ್ಞವೈದ್ಯರಿಗೆ ಹೆಚ್ಚಾಗಿ ಅನ್ವಯವಾಗುತ್ತದೆ.
ಯಾಕೆಂದರೆ, ಇಂದಿಗೂ ನಮ್ಮ ಸಮಾಜ ಮಾನಸಿಕ ರೋಗಿಯೊಬ್ಬನನ್ನು ಕಳಂಕಿತ, ಪೂರ್ವಾಗ್ರಹ ಪೀಡಿತ ದೃಷ್ಟಿಯಿಂದ ನೋಡುವುದರಿಂದ, ಆ ವ್ಯಕ್ತಿಗಿರುವ ಕಾಯಿಲೆಯ ಬಗ್ಗೆ ಯಾರಲ್ಲೂ ವೈದ್ಯರಾದವರು ಚರ್ಚಿಸುವಂತಿಲ್ಲ. ಮನೆಮಂದಿಗೆ ತಿಳಿಸುವಾಗ ರೋಗಿಯ ಅನುಮತಿ ಪಡೆದು ಮುಂದುವರಿಯಬಹುದು. ಕೆಲವೊಮ್ಮೆ ಮಾನಸಿಕ ರೋಗಿಯ ಮನಸ್ಸು ಸ್ಥಿಮಿತದಲ್ಲೇ ಇಲ್ಲದಿರುವಾಗ, ಅವರನ್ನು ವೈದ್ಯರಲ್ಲಿ ಕರೆದುಕೊಂಡು ಬಂದವರ ಬಳಿ ಇಲ್ಲಾ ಆಪ್ತವಲಯದಲ್ಲಿರುವ ಕುಟುಂಬದವರ ಬಳಿ, ವೈದ್ಯರು, ಕಾಯಿಲೆ ಬಗ್ಗೆ, ಅದರ ಗುಣಲಕ್ಷಣಗಳ ಬಗ್ಗೆ, ಚಿಕಿತ್ಸೆಯ ಬಗ್ಗೆ, ಮುಂದಿನ ಪಥದ ಬಗ್ಗೆ ಚರ್ಚಿಸಲೇಬೇಕಾಗುತ್ತದೆ. ಇದು ರೋಗಿಯ ಒಳಿತಿಗಾಗಿಯೇ ಮಾಡಲಾಗುತ್ತದೆ ವಿನಃ ಅವರನ್ನು ನೋಯಿಸಲು ಅಥವಾ ಹಿಂಸಿಸಲು ಅಲ್ಲ.
ರೋಗಿಯ ಬಗ್ಗೆ ವಿಚಾರ ಸಂಕಿರಣಗಳಲ್ಲಿ, ಇಂಥಾ ಅಂಕಣಗಳಲ್ಲಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಸಲು ಇರುವ ಸಂದರ್ಭಗಳಲ್ಲಿ, ರೋಗಿ ಹಾಗೂ ರೋಗದ ಬಗ್ಗೆ ಚರ್ಚೆ ಮಾಡಬೇಕಾಗಿ ಬಂದಾಗ, ವೈದ್ಯರಾದವರು ರೋಗಿ ಅಥವಾ ಅವರ ಕುಟುಂಬದವರ ಅನುಮತಿ ಪಡೆದೇ ಮುಂದುವರಿಯಬೇಕು. ಆಗಲೂ ಹೆಸರು, ವಿಳಾಸ, ಸಂದರ್ಭಗಳನ್ನು ಬದಲಿಸಿ ಮರೆಮಾಡಿ, ಚರ್ಚಿಸುವುದು ಗೌಪ್ಯದ ನಿಯಮಗಳಲ್ಲಿ ಒಂದು. ರೋಗಿಯ ಬಗ್ಗೆ ಬರೆದಿಟ್ಟುಕೊಳ್ಳುವುದು ಒಂದು ಒಳ್ಳೆಯ ಪರಿಪಾಲನೆಯೇ ಆಗಿರುತ್ತದೆ. ಆದರೆ, ಅದು ಸಂಬಂಧಪಡದವರ ಪಾಲಿಗೆ ಎಂದೂ ಸಿಗದಂತೆ, ರೋಗಿಯ ಗೌಪ್ಯತೆ ಕಾಪಾಡುವ ಜವಾಬ್ದಾರಿ ವೈದ್ಯರದ್ದೇ ಆಗಿರುತ್ತದೆ.
ರೋಗಿಯ ಬಗೆಗಿನ ಮಾಹಿತಿಯನ್ನು ವೈದ್ಯರು ತಮ್ಮ ಸ್ನೇಹಿತರಲ್ಲೋ, ಸಹೋದ್ಯೋಗಿಗಳ ಮಧ್ಯೆಯೋ, ಸಹಜ ಹರಟೆಯ ರೂಪದಲ್ಲೋ ಚರ್ಚಿಸುವಂತಿಲ್ಲ. ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ, ಈ ಗೌಪ್ಯವನ್ನು ಮುರಿಯಬೇಕಾಗಿಬರಬಹುದು. ಉದಾಹರಣೆಗೆ, ಬೇರೆ ವೈದ್ಯರಲ್ಲಿ ಈ ರೋಗಿಯ ತಪಾಸಣೆ ಮಾಡಿಸಬೇಕಾಗಿಬಂದಾಗ, ಮಾಹಿತಿ ಸಂಗ್ರಹಿಸುವಾಗ ಅಪ್ರಾಪ್ತ ವಯಸ್ಸಿನ ಬಾಲಕ/ಬಾಲಕಿಯ ಶೋಷಣೆ ನಡೆದ ಘಟನೆ ಹೊರಬಂದರೆ ಇನ್ಯಾವುದೋ ಶಿಕ್ಷಾರ್ಹ ದುಷ್ಕಾರ್ಯ ಅಥವಾ ಅಪರಾಧ ನಡೆದ ಘಟನೆ ಬಯಲಾದರೆ, ರೋಗಿಯಿಂದ ಅಥವಾ ಅವರ ಯೋಚನೆ/ಯೋಜನೆಗಳಿಂದ ಅವರಿಗಾಗಲಿ ಅಥವಾ ಬೇರೆಯವರಿಗಾಗಲಿ ಹಾನಿ, ತೊಂದರೆ ಇಲ್ಲವೇ ಅಪಾಯವಾಗುವ ಸಂಭವವಿದ್ದರೆ, ನ್ಯಾಯಾಲಯದಿಂದ ಆಜ್ಞಾಪತ್ರ ಬಂದರೆ ವೈದ್ಯರು ತಮ್ಮ ಗೌಪ್ಯದ ನಿಯಮವನ್ನು ಮುರಿದು, ಸಂಬಂಧಪಟ್ಟವರಿಗೆ ಇಲ್ಲಾ ಕಾನೂನು ಸಿಬ್ಬಂದಿ ಅಥವಾ ಆರಕ್ಷಕರಿಗೆ ವಿಚಾರ ತಿಳಿಸಬೇಕಾಗುತ್ತದೆ. ಈ ರೀತಿಯ ವೈಪರೀತ್ಯದ ಸಂದರ್ಭವನ್ನು ಹೊರತುಪಡಿಸಿ ವೈದ್ಯರು ರೋಗಿಯ ಗೌಪ್ಯತೆಯನ್ನು ಕಾಪಾಡುತ್ತಾರೆ; ಕಾಪಾಡಬೇಕು! ಇದೇ ನಂಬಿಕೆಯ ಆಧಾರದ ಮೇಲೆ ವೈದ್ಯ-ರೋಗಿಯ ಸಂಬಂಧದ ಕಂಬವೂ ನಿಂತಿದೆ !
— ಡಾ. ಅರುಣಾ ಯಡಿಯಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.