ಲೇಡಿ, ಒನ್ ಟು ಥ್ರೀ… ಈ ಶತಮಾನದ ಸಾಹಸಿ ಹೆಣ್ಣು
Team Udayavani, Apr 24, 2019, 6:00 AM IST
ಹೆಣ್ಣಿನ ಬದುಕೇ ಭೂಮಿ ಮೇಲಿನ ಒಂದು ಸಾಹಸ. ನಾನಾ ಸವಾಲುಗಳನ್ನು ದಾಟುತ್ತಲೇ ಬದುಕನ್ನು ಸುಂದರಗೊಳಿಸುವಂಥ ಆರ್ಟಿಸ್ಟ್ ಕೂಡ ಅವಳು ಹೌದು. ಸಂಸಾರ, ಕೆಲಸಗಳ ಚೌಕಟ್ಟಿನೊಳಗೇ ಇದ್ದು, ಎಲ್ಲೋ ಪುಟ್ಟ ವಿರಾಮ ಸಿಕ್ಕಾಗ, ಆಕೆಯ ಮನಸ್ಸು ಮುಕ್ತವಾಗಿ ಜಿಗಿಯಲು ಕಾತರಿಸುವುದನ್ನು ಕಾಣುತ್ತೇವೆ. ಸಂಸಾರದೊಂದಿಗೆ ಪ್ರವಾಸ ಹೊರಟಾಗಲೂ, ತಾನು ಕೈಗೊಳ್ಳುವ ಸಾಹಸದಲ್ಲಿ ಆಕೆ ಯಾವತ್ತೂ ಹಿಂದುಳಿಯುವುದಿಲ್ಲ ಎನ್ನುವುದೂ ನಿಜವೇ. ಅಂಥ ಸಾಹಸ ಚಟುವಟಿಕೆಯಲ್ಲಿ ಪಾಲ್ಗೊಂಡವರ ಚೊಚ್ಚಲ ಅನುಭವ ಹೇಗಿತ್ತು? ಇಲ್ಲಿ ಕೆಲವು ಸಾಹಸೀ ನಾರಿಯರ ಅನುಭವ ನಿಮ್ಮೊಳಗೂ ಸ್ಫೂರ್ತಿಯ ದೀಪ ಹಚ್ಚಬಲ್ಲುದು…
ಹದಿನೈದು ಸೆಕೆಂಡಿನ ಸ್ವರ್ಗ
ಜಿಪ್ ಲೈನಿಂಗ್
ಎತ್ತರ: 250 ಮೀಟರ್
ತಾಣ: ಬೆಂಗಳೂರು
ಕಳೆದ ಒಂದೂವರೆ- ಎರಡು ವರ್ಷದಿಂದ ಅಂದರೆ ಬಸುರಿಯಾಗಿದ್ದಾಗಿಂದ ಮಗ ಒಂದು ವರ್ಷದವನಾಗುವವರೆಗೂ ಎಲ್ಲೂ ದೂರ ಹೋದದ್ದೇ ಇಲ್ಲ. ಆಫೀಸು- ಮನೆ- ಆಫೀಸು ಅಷ್ಟೇ. ಮಗ ಹುಟ್ಟಿದ ಮೇಲೆ ಊರಿಂದ-ಬೆಂಗಳೂರು- ಊರು ಅಷ್ಟೇ. ಚಿಕ್ಕಂದಿನಿಂದಲೂ ಹೊರಾಂಗಣ ಕ್ರೀಡೆ, ಚಟುವಟಿಕೆ/ ಸಾಹಸಗಳಲ್ಲಿ ಕುತೂಹಲವಿದ್ದ ನನಗೆ ಈ ದಿನಚರಿ ಉಸಿರುಕಟ್ಟಿಸುವಂತಾಗಿತ್ತು. ಹೋದವರ್ಷದ ಬೇಸಿಗೆ ರಜೆಯಲ್ಲಿ ಹೀಗೆ ಒಂದು ರೆಸಾರ್ಟ್‌ಗೆ ಹೋದಾಗ ಆದದ್ದೇ ಬೇರೆ.
ಕಡೆಗೂ ಒಂದೆರಡು ತಾಸು ಮಗನನ್ನು ಅವರಪ್ಪನ ಸುಪರ್ದಿಗೆ ಒಪ್ಪಿಸಿ ನಾನು ಹೈಕಿಂಗ್ ಮತ್ತು ಜಿಪ್ ಲೈನಿಂಗ್ (ಎರಡು ಅಸಮತೋಲನ ಬೆಟ್ಟಗಳ ಮಧ್ಯೆ ತುಂಬಾ ಗಟ್ಟಿಯಾದ ಕಬ್ಬಿಣದ ಹಗ್ಗವಿರುತ್ತದೆ. ಇದಕ್ಕೆ ಸವಾರರು ಪುಲ್ಲಿ ಮೂಲಕ ಅಟ್ಯಾಚ್ ಆಗಿ ಒಂದು ಗುಡ್ಡದ ತುದಿಯಿಂದ ಇನ್ನೊಂದು ಗುಡ್ಡದ ತುದಿಗೆ ಗುರುತ್ವಾಕರ್ಷಣ ಬಲದಿಂದ ತಲುಪುವುದು) ಅಡ್ವೆಂಚರ್ ಕೈಗೊಳ್ಳಲು ಹೊರಟೆ. ನನ್ನ ಪತಿ ಸ್ವಲ್ಪ ಕಾಳಜಿಯಿಂದಾಗಿ ಹೆದರಿ “ಆಂ, ಊಂ’ ಅನ್ನುವಷ್ಟರಲ್ಲಿ ನಾನು ಗುಡ್ಡದ ಬುಡಕ್ಕೆ ಹೈಕಿಂಗ್ ಮಾಡಲು ಸಜ್ಜಾಗಿ ನಿಂತಿದ್ದೆ. ಹೈಕಿಂಗ್ ಮಾಡುವ ಮುನ್ನ, ಹೈಕಿಂಗ್ ಮಾಡಲು ಬೇಕಾದ ಶೂಗಳನ್ನು ಧರಿಸಿದೆ. ಚಿಕ್ಕಂದಿನಲ್ಲಿ ಇಂಥ ಸಣ್ಣಪುಟ್ಟ ಬೆಟ್ಟಗಳನ್ನು ತುಂಬಾ ಸಲೀಸಾಗಿ ಹತ್ತಿ ಇಳಿಯುತ್ತಿದ್ದ ನಾನು, ಈಗ ಏದುಸಿರು ಬಿಡುವಂತಾಗಿತ್ತು. ಇದಕ್ಕೆ ಕಾರಣ, ಬದಲಾದ ಜೀವನ ಕ್ರಮ ಹಾಗೂ ಹೆರಿಗೆ ಬಳಿಕ ಹೆಚ್ಚಾದ ದೇಹ ತೂಕವೂ ಕಾರಣವಾಗಿತ್ತು. ಆದರೆ, ಸಾಹಸ ಮಾಡುವ ಹುಚ್ಚು ಮನಸ್ಸಿಗೆ ಇದೆಲ್ಲ ಹೇಗೆ ಗೊತ್ತಾಗಲು ಸಾಧ್ಯ?
ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡು ನಡುನಡುವೆ ಸುಧಾರಿಸಿಕೊಂಡು ಬೆಟ್ಟ ಹತ್ತಿದ್ದಾಯಿತು. ಅದೂ ಅಲ್ಲದೇ, ಜಿಪ್ ಲೈನಿಂಗ್ ಮಾಡಬೇಕಾದರೆ ಗುಡ್ಡ ಹತ್ತಲೇಬೇಕು. ಏಕೆಂದರೆ, ಜಿಪ್ ಲೈನಿಂಗ್ ಮಾಡುವುದು ಒಂದು ಬೆಟ್ಟದ ತುದಿಯಿಂದ ಇನ್ನೊಂದು ಬೆಟ್ಟದ ತುದಿಗೆ ಹಗ್ಗದ ಮೂಲಕ ಜೋತು ಬಿದ್ದು ತಲುಪುವುದು. ಇಲ್ಲಿ ಹಗ್ಗ ಕಬ್ಬಿಣದಿಂದ ಮಾಡಲ್ಪಟ್ಟಿದ್ದು ಇದನ್ನು ಪುಲ್ಲಿ ಮುಖಾಂತರ ಸವಾರರಿಗೆ ಗಟ್ಟಿಯಾಗಿ ಲಾಕ್ ಮಾಡಿರುತ್ತಾರೆ. ನಂತರ ಕಬ್ಬಿಣದ ಕೇಬಲ್‌ಗಳು ಎರಡೂ ಬೆಟ್ಟದ ಮಧ್ಯೆ ಇರುವುದರಿಂದ ಸವಾರರು ಇದರ ಮೂಲಕ ಇನ್ನೊಂದು ಬೆಟ್ಟ ತಲುಪುವುದು.
ಬೆಟ್ಟದ ತುದಿ ತಲುಪಿದ ಮೇಲೆ ಅಲ್ಲಿ ಎತ್ತರದ ಒಂದು ಚಿಕ್ಕ ಗುಡಿಸಲು ತರಹ ಇತ್ತು. ಅದ್ರಲ್ಲಿ ಒಬ್ಬ ಗೈಡ್ ಇದ್ದ. ಈತ ಸವಾರರಿಗೆ ಅಗತ್ಯವಿರುವ ಪುಲ್ಲಿ ಇರುವ ಹಗ್ಗವನ್ನು ಸವಾರರ ದೇಹಕ್ಕೆ ಗಟ್ಟಿಯಾಗಿ ಬಿಗಿಯುತ್ತಾನೆ. ಚಿಕ್ಕಂದಿನಲ್ಲಿ ಅಂಗನವಾಡಿಯ ಮಕ್ಕಳ ತೂಕ ನೋಡಲು ಒಂದು ತರಹ ವಿಶೇಷ ಬೆಲ್ಟ್ ನಿಂದ ವೆಯಿಂಗ್ ಮಷಿನ್‌ಗೆ ಹಾಕಿ ತೂಗು ಬಿಡುತ್ತಿರಲಿಲ್ಲವೇ? ಅದೇ ಥರ ಇಲ್ಲೂ ಭದ್ರವಾದ ಬೆಲ್ಟ್ ಹಾಕುತ್ತಾರೆ. ಇದು, ದೇಹದ ತೂಕ ಸಮ ಪ್ರಮಾಣದಲ್ಲಿ ಹಂಚಿ ಹೋಗಲಿ ಎಂಬ ಕಾರಣಕ್ಕೆ. ಇಷ್ಟೆಲ್ಲಾ ಆದ ಬಳಿಕವೇ ನಾನು ಜಿಪ್ ಲೈನಿಂಗ್ ಮಾಡಲು ಸಜ್ಜಾಗಿ ನಿಂತಿದ್ದೆ.
ಕೊನೆಗೂ ಹಕ್ಕಿಯಂತಾಗಿದ್ದೆ. ಮೇಲಿನಿಂದ ಕೆಳಗಡೆ ಕಣ್ಣು ಹಾಯಿಸಿದಾಗ, ಜನರು ಇರುವೆಗಳಂತೆ ಕಾಣುತ್ತಿದ್ದರು. ದೊಡ್ಡದಾದ ವಿಶಾಲ ಮರಗಳು ಹುಲ್ಲು ಕಡ್ಡಿಯಂತೆ ಕಾಣುತ್ತಿದ್ದವು. ಒಂದು ಸಲ ಭಯವಾಯಿತು. ಹೃದಯದ ಬಡಿತ ಹೆಚ್ಚಾಯಿತು.
ಸಾಹಸವೆಂದರೆ ಇದೇ ಅಲ್ಲವೇ ಅಂತಂದುಕೊಂಡು ಜಿಪ್ ಲೈನಿಂಗ್ ಮಾಡಲು ಧುಮುಕಿದೆ. ಒಂದು ಕ್ಷಣ ಎದೆ ಝಲ್ ಎಂದಿತು. ಗಾಳಿ ವಿಪರೀತ ಸುಳಿಯುತ್ತಿತ್ತು. ಗಾಳಿಯನ್ನು ಸೀಳಿಕೊಂಡು ಹೋಗುವ ನಾನು ಕಬ್ಬಿಣದ ಕೇಬಲ್, “ಸರ್ರ’ ಎಂಬ ಮಾಡುತ್ತಿದ್ದ ಸದ್ದು. ಹೃದಯ ಬಡಿತ ಇನ್ನೂ ಹೆಚ್ಚಾಗಿಯೇ ಇತ್ತು. ನಾನು ಭದ್ರವಾಗಿ ಕೇಬಲ್‌ಗೆ ಅಟ್ಯಾಚ್ ಆಗಿದ್ದೇನೆ ಎಂದು ಗೊತ್ತಿದ್ದರೂ, ನನ್ನ ದೇಹ ಸ್ವಾಭಾವಿಕ ರಿಫ್ಲೆಕ್ಸ್ ನಿಂದಾಗಿ ಅಲುಗಾಡದೆ, ಎರಡೂ ಕೈಗಳನ್ನು ಪುಲ್ಲಿಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ಕೆಲವು ಕ್ಷಣಗಳಾದ ಮೇಲೆ ನಾನು ನಿಜವಾಗಿಯೂ ಗಾಳಿಯಲ್ಲಿ ತೇಲುತ್ತಿದ್ದೇನೆ ಎಂದೆನಿಸಿತು.
ಆಗ ನಿಧಾನವಾಗಿ ನನ್ನೆರಡೂ ಕೈಗಳನ್ನು ಬಿಚ್ಚಿ ಆಕಾಶದಲ್ಲಿ ಹಾರುವ ಹಾಗೆ ಅಗಲ ಮಾಡಿದೆ. ಅದು ತುಂಬಾ ರೋಮಾಂಚನಕಾರಿಯಾದ ಕ್ಷಣವಾಗಿತ್ತು. ಕೆಳಗಿನಿಂದ ಜೋರಾದ ಸದ್ದು ಗದ್ದಲ ಕೇಳಿಸುತ್ತಿತ್ತು. ಬಹುಶಃ ನನ್ನ ಗೆಳೆಯರ ಬಳಗ ನನ್ನನ್ನು ಪ್ರೋತ್ಸಾಹಿಸುತ್ತಿದ್ದಿರಬೇಕು. ನನ್ನ ಮಗ ಇದ್ದ ಕಡೆ ಸುಮ್ಮನೆ ಕೈ ಬೀಸಿದೆ. ನಿಜಕ್ಕೂ ಹೆಮ್ಮೆಯೆನಿಸಿತು.
“ವ್ಹಾವ್… ಎಷ್ಟು ಮಜವಾಗಿದೆ’ ಎಂದು ಒಂದೆರಡು ಕೂಗು ಹಾಕುವ ಹೊತ್ತಿಗೆ ನಾನು ಇನ್ನೊಂದು ಬೆಟ್ಟದ ತುದಿ ತಲುಪಿದ್ದೆ. “ಅಯ್ಯೋ, ಎಷ್ಟು ಬೇಗ ಮುಗಿಯಿತಲ್ಲ..’ ಎಂದು ಬೇಸರವಾಯಿತು. ಆ ಕೆಲವು ಕ್ಷಣಗಳ ಹಕ್ಕಿಯ ಹಾಗೆ ತೇಲುವ ಅನುಭವವನ್ನು ವರ್ಣಿಸಲು ಅಸಾಧ್ಯ. ಅಷ್ಟು ರೋಮಾಂಚಕವಾಗಿತ್ತು. 20 ನಿಮಿಷದ ಹೈಕಿಂಗ್ ಮತ್ತು 15 ಸೆಕೆಂಡುಗಳ ಜಿಪ್ ಲೈನಿಂಗ್ ನನಗೆ ಹೊಸ ಚೈತನ್ಯ ತಂದು ಕೊಟ್ಟಿತು.
– ಅನುಪಮಾ ಕೆ. ಬೆಣಚಿನಮರ್ಡಿ
ಜೀವ ಬಿಗಿಹಿಡಿದು ಕುಳಿತರೂ ಏನೋ ಥ್ರಿಲ್ಲಿಂಗ್
ರಿವರ್ ರಾಫ್ಟಿಂಗ್
ದೂರ: 10 ಕಿ.ಮೀ.
ತಾಣ: ಉಬುಡ್, ಇಂಡೋನೇಷ್ಯಾ
ಅದು ಕಾಂಬೋಡಿಯಾದ ನೆನಪು. ಸಿಟ್ಟಿಗೆದ್ದ ಸೂರ್ಯನನ್ನು ಸುತ್ತಲೇ ಸುಮಾರು ಮುನ್ನೂರು ಕಡಿದಾದ ಮೆಟ್ಟಿಲುಗಳನ್ನು ಇಳಿದಾಗಿತ್ತು. ಕಣ್ಣಾಡಿಸಿದಲ್ಲೆಲ್ಲಾ ಹಚ್ಚ ಹಸಿರು, ಎದುರಿಗೆ ಹರಿವಸ್ವತ್ಛ ನದಿ ಮನಸ್ಸಿಗೆ ಖುಷಿ ಕೊಟ್ಟರೂ ಒಳಗೊಳಗೇ ಹೆದರಿಕೆ. ಅದರಲ್ಲೂ ಗೈಡ್, ಪುಟ್ಟ ರಬ್ಬರ್ ಬೋಟ್ ಅನ್ನು ಎಳೆದುತಂದು, ನಮಗೆ ಬಿಗಿಯಾದ ಲೈಫ್ಜಾಕೆಟ್ ಹಾಕಿ, ತಲೆಗೆ ಹೆಲ್ಮೆಟ್ ಕಟ್ಟಿ, ಕೈಗೆ ದೊಡ್ಡ ಹುಟ್ಟುಕೊಟ್ಟಾಗಲಂತೂ ಪ್ರಾಣ ಬಾಯಿಗೆ ಬಂದಿತ್ತು. ಅದು, ನೀರೆಂದರೆ ಹೆದರುವ ನಾನು, ಬಾಲಿಯ ಉಬುಡ್‌ನಲ್ಲಿ ಕೈಗೊಂಡ ಮೊದಲ ಸಾಹಸ ಕ್ರೀಡೆ, ರಿವರ್ ರಾಫ್ಟಿಂಗ್!
ಬಾಲಿಯ ಅಯುಂಗ್ ನದಿಯ ರಭಸ, ಧುಮುಕುವಿಕೆ, ಸುಳಿ, ನದಿಪಾತ್ರದಲ್ಲಿನ ಬಂಡೆ ಕಲ್ಲುಗಳು ಈ ಸಾಹಸ ಕ್ರೀಡೆಗೆ ಅತ್ಯುತ್ತಮವಾಗಿದೆ. ಸುಮಾರು ಹತ್ತು ಕಿ.ಮೀ. ಪ್ರಯಾಣವನ್ನು ಪುಟ್ಟ ಬೋಟ್‌ನಲ್ಲಿ ಕ್ರಮಿಸಲು ಎರಡು ಗಂಟೆಯ ಸಮಯ ಬೇಕು. ಮೊದಲು ನಿಧಾನವಾಗಿ ತೇಲುವ ಅನುಭವದೊಂದಿಗೆ ಶುರುವಾಗಿತ್ತು ನೀರ ಮೇಲಿನ ಪಯಣ. ಸುತ್ತಮುತ್ತಲ ವನಸಿರಿ, ಬಂಡೆಗಳ ಕೆತ್ತನೆ ಎಲ್ಲವನ್ನೂ ನೋಡುತ್ತಿರುವಾಗಲೇ ಇದ್ದಕ್ಕಿದ್ದ ಹಾಗೆ ನೀರಿನ ಅಭಿಷೇಕ.
ಬೃಹತ್ ಬಂಡೆಗಳ ನಡುವೆ ನಮ್ಮ ಬೋಟ್ ವೇಗವಾಗಿ ನುಗ್ಗುತ್ತಿತ್ತು. ಬೋಟ್‌ನಲ್ಲಿದ್ದೇ ಅಕ್ಷರಶಃ ಬಂಡೆಯನ್ನು ಹತ್ತಿ ಹೈಜಂಪ್ ಮಾಡಿ ಮತ್ತೆ ನೀರಿಗೆ ಬರುವಷ್ಟರಲ್ಲಿ ಕೈಲಿದ್ದ ಹುಟ್ಟು ಎಲ್ಲೋ ಹೋಗಿತ್ತು! ನಂತರ ಹಿಮ್ಮುಖವಾಗಿ ಸುಳಿಗೆ ಹೋಗಿ, ಎತ್ತರದ ಝರಿಯ ಕೆಳಗೆ ನಿಲ್ಲಿಸಿ, ದೊಡ್ಡ ಅಲೆಯ ನಡುವೆ ನುಗ್ಗಿಸಿ ಹೀಗೆ ನಮ್ಮ ಗೈಡ್ ಮಾಡದ ಸಾಹಸವಿಲ್ಲ! ಜೀವ ಬಿಗಿ ಹಿಡಿದು ಕುಳಿತರೂ ಇಡೀ ಅನುಭವ ಥ್ರಿಲ್ಲಿಂಗ್ ಅನಿಸಿತ್ತು; ಮಾತ್ರವಲ್ಲ, ಇತರ ಸಾಹಸಕ್ರೀಡೆಗಳತ್ತ ಆಕರ್ಷಣೆ ಮೂಡಲು ಕಾರಣವಾಗಿತ್ತು.
– ಡಾ.ಕೆ.ಎಸ್. ಚೈತ್ರಾ
ಬಾನಲ್ಲಿ ಬೋರಲು ಬಿದ್ದಾಗ…
ಸ್ಕೈ ಡೈವಿಂಗ್
ಎತ್ತರ: 13 ಸಾವಿರ ಅಡಿ
ತಾಣ: ಪೆಪ್ಪೆರಲ್, ಅಮೆರಿಕ
ಚಿಕ್ಕಂದಿನಿಂದಲೂ ನನಗೆ ಖಗೋಳ ವಿಜ್ಞಾನಿಯಾಗಿ ಅಂತರಿಕ್ಷದಲ್ಲಿ ಹಾರಬೇಕೆಂಬ ಕನಸಿತ್ತು. ಒಮ್ಮೆಯಾದರೂ ಸ್ಪೇಸ್ ಟ್ರಾವೆಲ್ ಮಾಡಲೇಬೇಕೆಂಬ ಆಸೆ ಈಗಲೂ ಇದೆ. ಸ್ಕೈಡೈವಿಂಗ್ ಇಂಥ ವಿಚಿತ್ರ ಆಸೆಯ ಅತಿಚಿಕ್ಕ ತುಣುಕಷ್ಟೇ. ನಾನು ಸ್ಕೈಡೈವಿಂಗ್ ಮಾಡುತ್ತೇನೆಂದು ಹೊರಟಾಗ ಅನಿಸಿದ್ದು, ಇದು ನನ್ನ ಯಾವುದೇ ದೈಹಿಕ ಸಾಮರ್ಥ್ಯವನ್ನಾಗಲೀ, ಪ್ರತಿಭೆ, ಕೌಶಲ್ಯವನ್ನಾಗಲೀ ಕೇಳುತ್ತಿಲ್ಲ. ಕೇವಲ ನನ್ನ ಮಾನಸಿಕ ಸ್ಥೈರ್ಯದ ಮೇಲೆ ಅವಲಂಬಿತ ಸಾಹಸವಿದು. ಇದು ಶುದ್ಧಾತಿಶುದ್ಧ ಹುಂಬ ಸಾಹಸವಲ್ಲದೆ ಮತ್ತೇನೂ ಅಲ್ಲ. ಇಲ್ಲಿ ಯಾವುದೂ ನನ್ನ ನಿಯಂತ್ರಣದಲ್ಲಿಲ್ಲ. ಒಪ್ಪಿಗೆ ಪತ್ರಕ್ಕೆ ಸಹಿಹಾಕುವ ಮುಂಚೆ ಒಮ್ಮೆ ಇವೆಲ್ಲ ಯೋಚನೆ ತಲೆಯಲ್ಲಿ ಸುಳಿದು ಹೋಯಿತು. ಜೊತೆಗೆ ಮನಸೇ ಹೇಳಿತು… “ಸಾಹಸದ ಅನುಭವವೊಂದೇ ನಿರಂತರ ಜೊತೆಯಲ್ಲಿರುವಂಥದ್ದು, ಆದದ್ದಾಗಲಿ ಬಿಡು’ ಅಂತ.
ಹೆಲ್ಮೆಟ್, ಗಾಗಲ್ಸ್, ಬೆಲ್ಟ್, ಹಾರ್ನೆಸ್‌ಗಳೆಲ್ಲ ಒಂದೊಂದೇ ನನ್ನ ಮೈಯೇರುತ್ತಿದ್ದರೆ, ಒಳಗೊಳಗೇ ಭಯದ ಪೊರೆಯೂ ಒಂದೊಂದೇ ಸುತ್ತಿಕೊಳ್ಳುತ್ತಿತ್ತು. ವಿಮಾನವೇರಿ ಅದು ಸುಮಾರು ಹದಿನೈದು ಸಾವಿರ ಅಡಿಗಳಷ್ಟೆತ್ತರ ಏರತೊಡಗಿದಾಗ, ನನ್ನ ಎದೆಯ ಬಡಿತ ನನಗೇ ನಗಾರಿಯಂತೆ ಕೇಳಿಸತೊಡಗಿತು.
ನನ್ನ ಬೆನ್ನಿಗೆ ಬಿಗಿದುಕೊಂಡಿದ್ದ ಸ್ಕೈಡೈವಿಂಗ್ ಗೈಡ್ ಶಾನ್, “ಜಂಪ್’ ಎಂದಂತೆ, ಏನಾಯಿತೆಂದು ಅರಿವಾಗುವಷ್ಟರಲ್ಲಿ ನಾ ಆಗಾಧ ಆಗಸಕ್ಕೆ ಬೋರಲು ಬಿದ್ದಿದ್ದೆ. ಹಾಗೆಬಿದ್ದ ಆ ಕ್ಷಣದಲ್ಲೇ, ನನ್ನೆಲ್ಲ ಭಾವವೂ ಮಾಯವಾಗಿ, ಅಗಾಧ ಸುಖವೊಂದು ಆವರಿಸಿಕೊಂಡಿತ್ತು. ನೆನಪು, ನೋವು, ನಲಿವು ಏನೊಂದೂ ಇರದ ಅದ್ವಿತೀಯ ನಿರ್ವಾಣವೊಂದು ನನ್ನನ್ನಾವರಿಸಿಕೊಂಡಂತಿತ್ತು, ಆ ಅರ್ಧ ನಿಮಿಷದ ಫ್ರೀಫಾಲ್ ಹತ್ತಿಯಂಥ ಮೋಡ, ಜೊತೆಗೆ ಹಕ್ಕಿಯಂಥ ನಾನು, ಎದುರಿಗೆ ಹೊಳೆವ ಸೂರ್ಯ, ತಳದಲ್ಲಿ ಗುಂಡನೆಯ ಭೂಮಿ. ಇದೆಲ್ಲ ನಿಜಕ್ಕೂ ನಡೆದಿದ್ದು ಹೌದೇ, ನಿಜಕ್ಕೂ ಅದು ನಾನೆ? ಎಂದೆಲ್ಲ ಕೇಳಿಕೊಳ್ಳುವಂತಾಗುತ್ತದೆ.
ಆ ಅನುಭವದ ಫೋಟೋಗಳೇನಾದರೂ ಇಲ್ಲದಿದ್ದಲ್ಲಿ, ಇದು ಕನಸೇ ಸೈ ಎಂದುಕೊಳ್ಳುತ್ತಿದ್ದೆನೇನೋ. ಆದರೆ, ಹಾಗೆ ಆಗಸದ ತಪ್ಪಲಿಂದ ಧುಮುಕಿದಾಗ, ಸರಿಯಾದ ಸಮಯದಲ್ಲಿ ಪ್ಯಾರಾಚೂಟ್ ಬಿಚ್ಚಿಕೊಳ್ಳದಿದ್ದರೆ, “ಬಾ’ ಎಂದು ಅಪ್ಪಿಕೊಳ್ಳುವ ಭೂಮಿಗೆ ರಪ್ಪೆಂದು ಬೀಳಬೇಕು. ಇದು ಸ್ಕೈಡೈವಿಂಗಿನ ಅತ್ಯಂತ ನಿರ್ಣಾಯಕ ಹಂತ. ಈ ಪ್ರಶಾಂತ ತೇಲಾಟ ಹೀಗೆಯೇ ಇರಲಿ ಎಂದುಕೊಳ್ಳುತ್ತಿರುವಾಗಲೇ, ಸಾವಿರಾರು ಅಡಿ ಬಿದ್ದು ಬಿಟ್ಟಿರುತ್ತೀರಿ. ಆಗ ಪ್ಯಾರಾಚೂಟ್ ಬಿಚ್ಚಿಕೊಂಡು ಮತ್ತೆ ಜಗ್ಗಿ ತೇಲಿಸುತ್ತದೆ. ಆಗಲೇ ಪ್ರಜ್ಞೆಗೆ ಬರುವುದು, “ಅಬ್ಟಾ! ಏನು ನಡೆಸಿಬಿಟ್ಟೆ ನಾನು ಈಗಷ್ಟೇ ಈ ಒಂದು ನಿಮಿಷದ ಹಿಂದೆ’ ಎಂದು! ತೇಲಿ ಇಳಿದು ಮತ್ತೆ ಭೂಸ್ಪರ್ಶವಾದಾಗ ನಿಜಕ್ಕೂ ಸ್ವರ್ಗ ತಲುಪಿ ಬಂದಷ್ಟೇ ಆನಂದದ ಕ್ಷಣವದು. ನಾನು ಆ ಬಾನಾಚೆಯ ಅಂತರಿಕ್ಷಕ್ಕೇರುವವರೆಗೂ ಬಾನಲ್ಲಿ ಬೋರಲು ಬಿದ್ದ ಅನುಭವದ ಹೊಳಪು ಮಾಸದು.
– ವೈಶಾಲಿ ಹೆಗಡೆ, ಬಾಸ್ಟನ್
ಅಂಡಮಾನಿನ ತಳದಲ್ಲಿ ಮೀನಾದೆ…
ಸ್ಕೂಬಾ ಡೈವಿಂಗ್
ದೂರ: 200 ಮೀಟರ್ ಆಳ
ತಾಣ: ಹ್ಯಾವ್ಲಾಕ್, ಅಂಡಮಾನ್
ಅಂಡಮಾನ್ ಪ್ರವಾಸ ಅಂದ ಕೂಡಲೇ ನನ್ನ ಮನಸ್ಸಿಗೆ ಬಂದಿದ್ದೇ ಅಲ್ಲಿನ ಸುಂದರ ದ್ವೀಪಗಳು ಮತ್ತು ನೀರಿನಾಟಗಳು. ಟಿವಿ, ಚಿತ್ರಗಳಲ್ಲಿ ಸ್ಕೂಬಾ ಡೈವಿಂಗ್ ಬಗ್ಗೆ ನೋಡಿ ಆಸೆಯಾಗಿತ್ತಾದರೂ ಭಯನೂ ಇತ್ತು, ಹ್ಯಾವ್ಲಾಕ್ ದ್ವೀಪದಲ್ಲಿ ಅದಕ್ಕೆ ಅವಕಾಶ ಸಿಕ್ಕಿತು. ಈಜುವ ಪ್ರಾಥಮಿಕ ಪಾಠ ಮಾತ್ರ ಗೊತ್ತಿದ್ದರಿಂದ ನನ್ನಿಂದ ಆಗುತ್ತೋ, ಇಲ್ವೋ ಅಂದುಕೊಂಡಿದ್ದೆನಾದರೂ, ಒಳ್ಳೆಯ ತರಬೇತುದಾರರು ಜೊತೆಗಿರುತ್ತಾರಾದ್ದರಿಂದ ಈಜು ಅವಶ್ಯಕವಲ್ಲ ಅಂತ ತಿಳೀತು. ಏನೆಲ್ಲಾ ಅನುಮಾನಗಳಿದ್ದವಾದರೂ ಅವರೇ ಕೊಡುವ ಈಜುಡುಗೆ ಕಪ್ಪುಕನ್ನಡಕಗಳ ಸಹಿತ ಹೆಲ್ಮೆಟ್, ಆಕ್ಸಿಜನ್ ಸಿಲೆಂಡರ್ ನಮ್ಮನ್ನು ಪೂರ್ಣ ಸುರಕ್ಷಿತವಾಗಿಡುವ ಭರವಸೆ ಕೊಟ್ಟಿತು.
ತರಬೇತುದಾರರ ಜೊತೆ ಸಹಾಯಕನೊಬ್ಬ ಕ್ಯಾಮೆರಾ ಹಿಡಿದು ಜೊತೆಗೆ ಬರುತ್ತಾನೆಂದಾಗ ಮತ್ತಷ್ಟು ಉತ್ಸುಕಳಾದೆ. ಹತ್ತು ನಿಮಿಷದ ಸಲಹೆ ಸೂಚನೆಗಳನ್ನು ನೀಡಿ, ನೀರಲ್ಲಿ ಉಸಿರಾಡುವ ಅಭ್ಯಾಸ ಮಾಡಿಸಿ, ಸಮುದ್ರದ ಆಳಕ್ಕೆ ಇಳಿಸಲಾಯ್ತು. ಅಬ್ಟಾ! ಅದೊಂದು ರೋಚಕ ಅನುಭವ!
ಆಳಕ್ಕೆ ಇಳಿಯುತ್ತಿದ್ದಂತೆ ಚಡಪಡಿಕೆ ಕರಗಿ, ಹೊಸ ಲೋಕವೇ ತೆರೆದುಕೊಂಡಿತು.
ಆ ಗಾಢ ಮೌನವೂ ಮೊದಲಿಗೆ ಗಲಿಬಿಲಿಗೊಳಿಸಿ ನಂತರ ಅಲ್ಲಿನ ಬಣ್ಣದ ಲೋಕ ಅನಾವರಣಗೊಳ್ಳುತ್ತೆ. ಹೊರಲೋಕಕ್ಕೆ ಕಾಣದ ಅನೇಕ ಬಣ್ಣ, ಆಕಾರ, ಗಾತ್ರ, ವಿನ್ಯಾಸದ ಮೀನುಗಳ ಗುಂಪು, ಸಾದಾ ಹವಳವಷ್ಟೇ ಅಲ್ಲ, ಬಾಯಿ ಮುಚ್ಚಿ ತೆರೆಯುವ ಹವಳ, ವಿಷಕಾರಿ ಹವಳವೂ ಸಿಕ್ಕಿದ್ದು ವಿಶೇಷ. ಪಟ್ಟೆಗಳಿದ್ದ ಹಾವೂ ಅಲ್ಲಿತ್ತು! ಅಪಾಯವನ್ನು ಮುಟ್ಟದಂತೆ ಸಂಜ್ಞೆಯ ಭಾಷೆಯಲ್ಲೇ ನನಗದನ್ನು ಹೇಳಿದರು. ವಿವಿಧ ಗಿಡಗಳೂ, ಆಮೆಯೂ ಅಲ್ಲಿತ್ತು! ಲೈಫಲ್ಲಿ ಒಮ್ಮೆಯಾದರೂ ಇಂಥ ಅನುಭವ ಪಡೀಬೇಕು. ಇದರಲ್ಲಿ ಭಯ, ಅಪಾಯವೇನೂ ಇಲ್ಲ, ಬರೀ ರೋಮಾಂಚನವೇ!! ಈಗ ನನಗೆ ಸ್ಕೂಬಾ ಡೈವಿಂಗ್ ತರಬೇತಿ, ಲೈಸೆನ್ಸ್ ಪಡೆಯುವ ಆಸೆ ಉಕ್ಕಿದೆ!
– ಸಂಜೀವಿನಿ ಮೆಹೆಂದಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.