ಅಮಿತ ಸಾಹಸಿ ನೊಮಿತೊ : ನೇಚರ್ ಅಡ್ವೆಂಚರ್ ಮತ್ತು ಟೀಚರ್
Team Udayavani, May 1, 2019, 6:00 AM IST
ಭಾರತದ ನಕಾಶೆಯನ್ನು ಎದುರು ಹರವಿದಾಗ, ಪುಟ್ಟ ಬಿಂದುವಿನಂತೆ ಕಣ್ಣಾಳವನ್ನು ಸೇರುವ, ತಾಣ ಹೊನ್ನೇಮರಡು. ನೋಮಿತೋ ಕಾಮಾªರ್, ಅಲ್ಲಿ “ದಿ ಅಡ್ವೆಂಚರ್’ ಸಾಹಸ ಕೇಂದ್ರವನ್ನು ಕಟ್ಟಿ, ಮಹಿಳೆಯರಿಗೆ, ಮಕ್ಕಳಿಗೆ, ಯುವಕರಿಗೆ ಸಾಹಸ ಚಟುವಟಿಕೆಯ ಪಾಠ ಹೇಳಿಕೊಡುತ್ತಿರುವ ಅಪರೂಪದ ದಿಟ್ಟೆ. ಇತ್ತೀಚೆಗೆ ಇವರಿಗೆ ಪ್ರತಿಷ್ಠಿತ “ನಾರಿಶಕ್ತಿ ಪುರಸ್ಕಾರ್’ ಒಲಿದುಬಂತು…
ಕಣ್ಣು ಹಾಯಿಸಿದಷ್ಟೂ ದೂರದ ಹಿನ್ನೀರ ರಾಶಿ. ಮೇಲೆ ಕಂಡಷ್ಟೂ ಮುಗಿಯದ ಆಕಾಶ. ಕಾಣದೇ ಬೀಸುವ ತಂಗಾಳಿ. ದಡಕ್ಕೆ ಹಿತವಾಗಿ ತಾಕುವ ಪುಟ್ಟ ಪುಟ್ಟ ಅಲೆ. ಅದರ ಜುಳುಜುಳು ನಾದ. ತೇಲುವ ತೆಪ್ಪ. ಅಲ್ಲಿ ಬದುಕಿನ ಪಾಠ ಹೇಳುವ ಟೀಚರ್! ತೆಪ್ಪವನ್ನೇರಿ ಮೀನಾಗುವ ಪುಳಕವನ್ನು ಬಂದವರಿಗೆ ಸೋಕಿಸುವ ಸಾಹಸಿ. ಹಾಗೆ ಸುಖ ನೀಡಿದ ನೀರನ್ನೇ ಬೊಗಸೆಯಲ್ಲಿ ಎತ್ತಿಕೊಂಡು, “ಇದರ ಮೌಲ್ಯ ಹೇಳಲೇನು?’ ಎಂದು, ಅಲ್ಲೇ ನಿಸರ್ಗದ ಪಾಠ ಶುರುಹಚ್ಚುವ ಆ ಕಾಳಜಿ… “ನೊಮಿತೊ ಕಾಮಾªರ್’ ಎಂಬ ದಿಟ್ಟೆ ಸಾಹಸಪ್ರಿಯರ ಮನದಾಳದಲ್ಲಿ ಅಚ್ಚಾಗಿರುವುದು ಹೀಗೆ.
ಭಾರತದ ನಕಾಶೆಯನ್ನು ಎದುರು ಹರವಿದಾಗ, ಪುಟ್ಟ ಬಿಂದುವಿನಂತೆ ಕಣ್ಣಾಳವನ್ನು ಸೇರುವ, ತಾಣ ಹೊನ್ನೇಮರಡು. ಅಲ್ಲಿನ “ದಿ ಅಡ್ವೆಂಚರ್’ ಸಾಹಸ ಕೇಂದ್ರವನ್ನು ಮುನ್ನಡೆಸುತ್ತಿರುವ ನೊಮಿತೊ ಕಾಮಾªರ್, ಇತ್ತೀಚೆಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗಿಟ್ಟಿಸಿಕೊಂಡ ಚಪ್ಪಾಳೆಯ ಸದ್ದು ನಿಮ್ಮ ಕಿವಿಗೂ ಬಿದ್ದಿರಬಹುದು. ಮಲೆನಾಡಿನ ಮೂಲೆಯಲ್ಲಿ ಸಾಹಸದ ತೋರಣ ಕಟ್ಟಿ, ಈಗಿನ ಪೀಳಿಗೆಯಲ್ಲಿ ಪರಿಸರದ ಪ್ರೀತಿಯನ್ನು ಬಿತ್ತುತ್ತಿರುವ ಇವರಿಗೆ, ಪ್ರತಿಷ್ಠಿತ “ನಾರಿಶಕ್ತಿ ಪುರಸ್ಕಾರ್’ ಒಲಿದುಬಂತು. ಲಿಂಗನಮಕ್ಕಿ ಹಿನ್ನೀರ ನಡುಗಡ್ಡೆ ಹೊನ್ನೆಮರಡುವಿನಲ್ಲಿ 27 ವರ್ಷಗಳಿಂದ ಸಾಹಸ ಚಟುವಟಿಕೆಗಳಿಗೆ ಪ್ರೇರಣೆ ಆಗಿರುವ ಈ ನಾರಿಯ ಬದುಕಿನ ಪುಟಗಳೇ ರೋಮಾಂಚನ.
ನೊಮಿತೊ ಅವರು ಹುಟ್ಟಿದ್ದು ಗುಜರಾತ್‌ನಲ್ಲಿ. ಅಪ್ಪ ಬ್ಯಾಂಕ್ ನೌಕರ. ಅಪ್ಪನಿಗೆ ಟ್ರಾನ್ಸ್‌ಫರ್ ಆದಾಗಲೆಲ್ಲ ಇವರೂ ಹಿಂಬಾಲಿಸಿ ಹೆಜ್ಜೆ ಹಾಕಿದರು. ನಾನಾ ವಿಧದ ಜನ, ಬೇರೆ ಬೇರೆ ಪ್ರದೇಶಗಳ ಅನುಭವ ದಕ್ಕಿತು. ಅದೇ ವೇಳೆಗೆ, ಕನ್ನಡಿಗ ಎಸ್.ಎಲ್.ಎನ್. ಸ್ವಾಮಿ ಅವರ ಜೀವನ ಸಾಂಗತ್ಯ ಬೆಸೆಯಿತು. ಮಲೆನಾಡಿನ ಸೆರಗಿನಲ್ಲಿ ಸಾಹಸ ಕೇಂದ್ರದ ಕನಸು ರೆಕ್ಕೆಬಿಚ್ಚಿ, ಪುರ್ರೆಂದಿದ್ದೂ ಆಗಲೇ. ಇಲ್ಲಿ ಜಲಸಾಹಸ ಶುರು ಮಾಡುವಾಗ ಸ್ಥಳೀಯರು ಪಟ್ಟ ಅನುಮಾನವೆಲ್ಲ ಈಗ ಅದೇ ನೀರಿನಲ್ಲಿ ಕೊಚ್ಚಿ ಹೋಗಿದೆ. ನೊಮಿತೊ ಎಂದರೆ, ಸ್ಥಳೀಯರಿಗೆ ಏನೋ ಹೆಮ್ಮೆ.
ಅಬ್ಟಾ, ಎಷ್ಟೊಂದು ಸಾಹಸ!
ಅಡುಗೆಮನೆಯ ಶೆಲ್ಫ್ ಮೇಲೆ ಇಟ್ಟ ಡಬ್ಬಿ ತೆಗೆಯಲು, “ಓಯ್.. ಇಲ್ಲಿ ಸ್ವಲ್ಪ ಬರ್ತೀರಾ..’ ಎಂದು ಕರೆಯುವ ಸ್ತ್ರೀಯರನ್ನು ನೋಡಿದ್ದೇವೆ. ಆದರೆ, ನೊಮಿತೊ ಹಾಗಲ್ಲ. ಈ ನಾರಿಗೆ ಯಾವ ಸಾಹಸ ಗೊತ್ತಿಲ್ಲ ಅಂತಿಲ್ಲ… ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ಕಯಾಕಿಂಗ್, ಕನಾಯಿಂಗ್, ಕೊರ್ಯಾಕ್ಲಿಂಗ್, ವಿಂಡ್ ಸರ್ಫಿಂಗ್, ಬೋಟಿಂಗ್… ಒಬ್ಬ ಪುಕ್ಕಲು ಹೆಣ್ಣು ಇಲ್ಲಿಗೆ ಬಂದರೂ, ಮರಳುವಾಗ ಮೀಸೆ ತಿರುವುವಂತೆ ಗತ್ತು ತೋರದೇ ಇದ್ದರೆ ಆಗ ಕೇಳಿ… ಮಧ್ಯ ವಯಸ್ಸಿನ ಮಹಿಳೆಯರಿಗಂತೂ ಇಲ್ಲಿ ಹೆಚ್ಚು ಸೇಫ್ಟಿಯೇ ಇದೆ.
3 ಹಗಲು ನೀರಿನಲ್ಲೇ ಯಾನ…
ಅಕ್ಟೋಬರ್‌ನಿಂದ ಜನವರಿವರೆಗೂ ನೊಮಿತೊ ದಂಪತಿ ನಡೆಸುವ ಮೂರು ದಿನಗಳ ಹಿನ್ನೀರ ಜಲಯಾನದ ಕಥೆಯೇ ರೋಚಕ. ಹೊನ್ನೆಮರಡುವಿನಿಂದ ಹೊಸನಗರದವರೆಗಿನ ನೀರದಾರಿ ಹಿಡಿದು, ಮೂರು ದಿನ ಪಯಣಿಸುತ್ತಾರೆ. ಹಗಲಿಡೀ ನೀರಯಾನ. ರಾತ್ರಿ ಆ ನದಿಯ ತೀರದಲ್ಲೇ ತಂಗಿ, ಮರುದಿನ ಬೆಳಗ್ಗೆ ಮತ್ತೆ ರ್ಯಾಫ್ಟಿಂಗ್. ಆ ಕತೆ ಕೇಳುವುದೇ ಒಂದು ಪುಳಕ.
ಸಾಹಸಪ್ರಜ್ಞೆ ಕಲಿಸುವಾಕೆ…
ಹೆಣ್ಣಿಗೆ ಹುಟ್ಟಿನಿಂದಲೇ ವೈವಿಧ್ಯತೆ ಬೇಕು. ಏನಾದರೂ ಮಾಡುತ್ತಲೇ ಇರಬೇಕು. ಗೃಹಿಣಿಯಾದರೂ ಸುಮ್ಮನೆ ಕೂರುವುದರಲ್ಲಿ ಆಕೆಗೆ ತೃಪ್ತಿಯಿಲ್ಲ. ಕೌಶಲ್ಯಕ್ಕೊಂದು ಕೆಲಸ ಬೇಕು. ಇದಕ್ಕೆ ಸಾಕ್ಷಿಯಾಗುವುದು ಅಂಗಳದಲ್ಲಿ ರಂಗವಲ್ಲಿ, ಹಿತ್ತಲಲ್ಲಿ ಹೂವು ತರಕಾರಿ. ಆಕೆಯಲ್ಲಿ ನಮನಮೂನೆಯ ಕೌಶಲವಿದೆ. ಈಗಲೂ ಮಲೆನಾಡಿನ ಎಷ್ಟೋ ಹೆಣ್ಣುಮಕ್ಕಳು ಮರ ಹತ್ತಿ ಹಲಸಿನಕಾಯಿ ಕೊಯ್ಯುವುದುಂಟು. ಸುಪ್ತಾವಸ್ಥೆಯಲ್ಲಿರುವ ಹೆಣ್ಣಿನ ಇಂಥ ಕೌಶಲ, ಸಾಹಸ ಪ್ರಜ್ಞೆಯನ್ನು ಎಚ್ಚರಗೊಳಿಸುವುದು ನೊಮಿತೊರಿಗೆ ಅತಿ ಸುಲಭದ ಕೆಲಸ.
ಇಲ್ಲಿ ಎಂಥವರಿಗೂ ಧೈರ್ಯ ಬರುತ್ತೆ…
ನಿಮ್ಗೆ ಗೊತ್ತಾ? ನೊಮಿತೊ, ವಿಶೇಷ ಚೇತನ ಮಕ್ಕಳಿಗೂ ಸಾಹಸ ಕಲಿಸುತ್ತಾರೆ. ಹಾಗೆ ಕಲಿತ ಕೆಲವರು, ಈ ಹಿನ್ನೀರಿನಲ್ಲಿ ಈಜಿದ್ದನ್ನೂ ಅವರು ನೆನಪಿಗೆ ತಂದುಕೊಡುತ್ತಾರೆ. ವಿಶೇಷಚೇತನ ಮಕ್ಕಳಿಗೆಂದೇ ಕ್ಯಾಂಪ್ ಮಾಡುವ ಅಪರೂಪದ ಮಹಿಳೆ ಇವರು. ಅವರೂ ನಮ್ಮಂತೆಯೇ, ಸಹಜ ಎಂದೇ ನೊಮಿತೊ ಭಾವಿಸುತ್ತಾರೆ. ಎಷ್ಟೋ ಮಕ್ಕಳಿಗೆ ನೊಮಿತೋರ ಕ್ಯಾಂಪಿಗೆ ಬಂದ ಮೇಲೆಯೇ ಗೋಡೆಯಾಚೆಗೂ ಒಂದು ಜಗತ್ತಿದೆ ಎಂದು ತಿಳಿದದ್ದು. ದೌರ್ಬಲ್ಯದ ನೆಪವೊಡ್ಡಿ ಮಕ್ಕಳನ್ನು ಮನೆಗೆ ಸೀಮಿತಗೊಳಿಸಿದ ಪಾಲಕರಿಗೆ ನೊಮಿತೊರ ಶಿಬಿರಕ್ಕೆ ಮೊದಲೇ ಮಕ್ಕಳನ್ನು ಕರೆತರಬೇಕಿತ್ತು ಅನಿಸುತ್ತದೆ. ಇಲ್ಲಿ ಆಗುವುದಿಲ್ಲ ಎಂದು ಯಾವುದೂ ಇಲ್ಲ. ಅಷ್ಟರಮಟ್ಟಿಗೆ ಸ್ವಯಂ ಸಾಧಿಸುವ ಮನಸ್ಸು ರೂಪಿಸುತ್ತಾರೆ ನೊಮಿತೊ.
ಮೊದಲು ತಲೆಯೆತ್ತಿ…
ನಮಗೆ ಜಿಗಿಯಬೇಕು ಅನಿಸುತ್ತೆ. ಹಾರಬೇಕು, ಓಡಬೇಕು. ದಪದಪ ಕುಣಿಯಬೇಕು… ಬೇರೆಯವರಿಗೆ ಉಪದ್ರವಾಗದ ಏನೇನೋ ಹುಚ್ಚು ಬಯಕೆ ಮನಸಿಗೆ ಕಾಡುತ್ತೆ. ಆದರೆ, “ಯಾರು ಏನೆಂದುಕೊಂಡಾರೋ’ ಎಂಬ ಭಯ. ನಮ್ಮ ಮೇಲೆ ನಮಗೇ ವಿಶ್ವಾಸದ ಕೊರತೆ. ಯಾವುದರ ಹಂಗೂ ಇಲ್ಲದೇ, ನನ್ನದೇ ಆಸಕ್ತಿಯ ಲೋಕ ಕಟ್ಟಿಕೊಳ್ಳಬೇಕು. ತಲೆ ಎತ್ತಬೇಕು. ಪ್ರಪಂಚವನ್ನು ಬಲವಾಗಿ ಎದುರುಗೊಳ್ಳಬೇಕು. ನಮ್ಮೆಲ್ಲರಲ್ಲೂ ಇಂಥ ಸಾವಿರದ ನೂರು ಕನಸುಗಳಿವೆ. ಅವು ಈಡೇರಬೇಕು. ಈಡೇರಲು ಧೈರ್ಯ ಬೇಕು. ಆ ಧೈರ್ಯ ಕಲಿಸುವ ಹುಕಿಯೇ ನೊಮಿತೊ ಕಾಮಾªರ್. ಒಮ್ಮೆ ನೀವೂ ಅವರ ಜಲದಂಗಳದಲ್ಲಿ ಸಾಹಸ ಕೈಗೊಳ್ಳುವ ಧೈರ್ಯ ಮಾಡಿಬಿಡಿ.
ಹೊನ್ನೇಮರಡು! ಅಲ್ಲೇನಿದೆ?
ಶಿವಮೊಗ್ಗ ಜಿಲ್ಲೆಯ ಸಾಗರದಿಂದ 25 ಕಿ.ಮೀ. ದೂರದಲ್ಲಿರುವ ಪ್ರವಾಸಿ ತಾಣ, ಹೊನ್ನೇಮರಡು. ಶರಾವತಿ ನದಿಯ ದಡದಲ್ಲಿರುವ ಹಿನ್ನೀರಿನ ಪ್ರದೇಶವಿದು. ಶರಾವತಿ ನದಿಯ ನೀರಿಗೆ ಲಿಂಗನಮಕ್ಕಿಯಲ್ಲಿ ಕಟ್ಟಿರುವ ಅಣೆಕಟ್ಟೆಯು ಇಲ್ಲಿ ಸ್ವರ್ಗದ ಸೌಂದರ್ಯ ಸೃಷ್ಟಿಯಾಗಲು ಕಾರಣವಾಗಿದೆ. ಅತೀ ದೂರದ ವರೆಗೆ ಶುಭ್ರ ನೀರಿನ ನೋಟ ಪ್ರವಾಸಿಗರನ್ನು ಸೆಳೆಯುವಂಥದ್ದು. ತೆಪ್ಪದಲ್ಲಿ ಸುತ್ತು ಹಾಕಿ, ದ್ವೀಪಗಳನ್ನು ತಲುಪುವುದು, ವೈವಿಧ್ಯ ಸಾಹಸ ಕ್ರೀಡೆ ನಡೆಸುವುದು ಇಲ್ಲಿನ ಪ್ರಮುಖ ಮನರಂಜನಾ ಚಟುವಟಿಕೆಗಳು. ನೊಮಿತೊ ಅವರ “ದಿ ಅಡ್ವೆಂಚರ್’ ಸಾಹಸ ಕೇಂದ್ರ ಕೂಡ ಇಲ್ಲಿಯೇ ಇದೆ. ಸಾಗರದಿಂದ 15 ಕಿ.ಮೀ, ಬೆಂಗಳೂರಿನಿಂದ 362 ಕಿ.ಮೀ. ದೂರದಲ್ಲಿದೆ.
— ಗುರುಗಣೇಶ್ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.