ನೋವು ಹೊಟ್ಟೆಯದ್ದು, ಕಾರಣ ಮನಸ್ಸಿನದ್ದು!
Team Udayavani, Dec 26, 2018, 9:32 AM IST
ಗಂಡ- ಹೆಂಡತಿ ಹೊರಗಡೆ ಚಾಟ್ಸ್ ತಿಂದುಕೊಂಡು ಬಂದವರು ಸರಿಯಾಗಿಯೇ ಇದ್ದರು. ಆದರೆ, ಇದ್ದಕ್ಕಿದ್ದಂತೆ
ರತ್ನಾಗೆ ಹೊಟ್ಟೆ ನೋಯಲು ಪ್ರಾರಂಭವಾಯಿತು. ರಾತ್ರಿಯೆಲ್ಲಾ ವಾಂತಿ- ಭೇದಿ. ಸುಧಾರಿಸಿಕೊಳ್ಳಲು ಎರಡು ದಿನಗಳೇ ಬೇಕಾದವು. ಮತ್ತೆ ಮೂರು ತಿಂಗಳ ನಂತರ ಚಾಟ್ಸ್ ತಿಂದಾಗಲೂ ಹೀಗೆಯೇ ವಾಂತಿ ಆದಾಗ ಹೊರಗಡೆ ಚಾಟ್ಸ್ ತಿನ್ನುವುದನ್ನೇ ಬಿಟ್ಟರು. ಸ್ವಲ್ಪ ದಿನ ಕಳೆದ ನಂತರದಿಂದ ಯಾವ ಹೋಟೆಲ್/ ಮದುವೆ ಮನೆ ಊಟವೂ ಆಕೆಗೆ ಸರಿ ಹೋಗುತ್ತಿಲ್ಲ. ತಜ್ಞ ವೈದ್ಯರು ಎಷ್ಟು ಚಿಕಿತ್ಸೆ ಕೊಟ್ಟರೂ ವಾಂತಿ, ಭೇದಿ, ಗ್ಯಾಸ್ ಅಥವಾ ಮಲಬದ್ಧತೆ- ಹೀಗೆ ಏನಾದರೂ ಕಾಡುತ್ತಲೇ ಇತ್ತು. ಎಂಡೋಸ್ಕೊಪಿ ಮಾಡಿದರೂ ಯಾವುದೇ ರೀತಿಯ ವೈದ್ಯಕೀಯ ಸಮಸ್ಯೆಗಳು ಕಾಣಲಿಲ್ಲ.
ಪದೇಪದೆ ಜೀರ್ಣಾಂಗದ ಸಮಸ್ಯೆ ಕಾಡುವುದಕ್ಕೆ ಮನಸ್ಸು ಕೂಡ ಕಾರಣವಿರಬಹುದು ಎಂದು ವೈದ್ಯರು ಆಕೆಯನ್ನು ನನ್ನ ಬಳಿ ಕಳುಹಿಸಿದರು. ರತ್ನಾಳ ಜೀವನದಲ್ಲಿ ನಡೆದಿದ್ದ ಕೆಲವು ಸಂದಿಗ್ಧ ಘಟನೆಗಳ ಬಗ್ಗೆ ಪ್ರಶ್ನೆ ಕೇಳಿ, ಆ ಕುರಿತು ಚರ್ಚಿಸುವಂತೆ ಪ್ರೇರೇಪಿಸಿದೆ. ಮೊದಲ ಸಲ ರತ್ನಾಳ ಹೊಟ್ಟೆ ಕೆಟ್ಟಾಗ,
ಅನಾರೋಗ್ಯದಲ್ಲಿದ್ದ ಮಾವನವರನ್ನು ಬೆಂಗಳೂರಿಗೆ ಕರೆತರುವ ಸುದ್ದಿಯಿತ್ತು. ಅದೇ ಸಮಯದಲ್ಲಿ, ಮಗಳು ಬಾಣಂತನಕ್ಕೆ ಬರುವವಳಿದ್ದಳು. ಮಾವನವರ ಆರೋಗ್ಯ ಮುಖ್ಯ. ಆದರೆ, ಚೊಚ್ಚಲ ಹೆರಿಗೆಯ ಮಗಳ ಕಡೆ ಪೂರ್ತಿ ಗಮನ ಕೊಡಬೇಕೆಂಬುದು ಆಕೆಯ ಮನದಾಸೆ. ಮದುವೆಯಾಗಿ ಹೋದವಳು ಈಗಲೇ ತವರಿಗೆ
ಬರುತ್ತಿರುವುದು. ಅಕಸ್ಮಾತ್ ಮಾವನವರು ಇಲ್ಲಿಯೇ ಉಳಿದರೆ, ಇಬ್ಬರನ್ನೂ ನೋಡಿಕೊಳ್ಳುವುದು ಹೇಗೆ ಎಂಬ ದ್ವಂದ್ವಕ್ಕೆ ಮುಜುಗರಕ್ಕೆ ಒಳಗಾದಳು ರತ್ನಾ. ಆಗ ಅತ್ತಿಗೆಯೇ, ಇವಳ ದುಗುಡವನ್ನು ಅರಿತು, ಮಾವನವರನ್ನು ಊರಿಗೆ ವಾಪಸ್ ಕರಕೊಂಡು ಹೋಗಿದ್ದರು.
ಎರಡನೇ ಸಲ ಹೊಟ್ಟೆ ಕೆಟ್ಟಾಗ, ಆಕೆಯ ಮಗ ಆಫೀಸಿನ ಸಹೋದ್ಯೋಗಿಯನ್ನು ಮದುವೆಯಾಗುವ ಇರಾದೆ ವ್ಯಕ್ತಪಡಿಸಿದ್ದ. ಅದು ಅವರಿಗೆ ದೊಡ್ಡ ಆಘಾತ ಒಡ್ಡಿತ್ತು. ರತ್ನಾ ತನ್ನ ಗೆಳತಿಯ ಮಗಳನ್ನು ಸೊಸೆಯಾಗಿ ತರಲು
ಆಲೋಚಿಸಿದ್ದರು. ಮಗನನ್ನು ಎದುರು ಹಾಕಿಕೊಳ್ಳಲು ಇಷ್ಟವಿಲ್ಲ; ಆದರೆ, ಮಗ ಇಷ್ಟಪಟ್ಟ ಹುಡುಗಿಯನ್ನು ಭೇಟಿಯಾಗುವುದಕ್ಕೂ ಮನಸ್ಸು ಮಾಡುತ್ತಿಲ್ಲ. ಆ ಹುಡುಗಿಯ ಮನೆಯಲ್ಲಿ ಮದುವೆಯ ಒತ್ತಾಯ ಹೇರುತ್ತಿದ್ದಾರೆ. ಹುಡುಗಿ, “ನಿಮ್ಮಮ್ಮ ಒಪ್ಪಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುತ್ತೇನೆ’ ಎಂದಿದ್ದಳಂತೆ. ಅದರಿಂದ ಇವರಿಗೆ ಅನುಕೂಲವಾಗಿದೆ. ಅಮ್ಮನ ಅನುಕೂಲಸಿಂಧು ವ್ಯಕ್ತಿತ್ವ ನೋಡಿ, ಮಗ ಅಂತರ್ಮುಖೀಯಾಗಿದ್ದಾನೆ. ಆತ ಮನೆಯಲ್ಲಿ ಊಟ ಮಾಡುತ್ತಿಲ್ಲ. ಇವರೂ ತಮ್ಮ ಹಠ ಬಿಡುತ್ತಿಲ್ಲ.
ನಲವತ್ತರ ವಯಸ್ಸಿನ ಆಸುಪಾಸಿನ ಮಹಿಳೆಯರಲ್ಲಿ ಅನಾರೋಗ್ಯ/ ಮಕ್ಕಳ ಮದುವೆ/ ಬಾಣಂತನದ ಜವಾಬ್ದಾರಿಯ ಜೊತೆಗೆ ಮೆನೋಪಾಸ್‌ನಿಂದ ಉದ್ವಿಗ್ನತೆ ಜಾಸ್ತಿಯಾಗುತ್ತದೆ. ಆ ಸಮಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಜಾಣ್ಮೆ- ಚಿಂತನೆ- ಮಾರ್ಗೋಪಾಯಗಳು ಎಲ್ಲರಲ್ಲೂ ಇರುವುದಿಲ್ಲ. ಆ ಪರಿಣಾಮ,
ಮಾನಸಿಕ ಸ್ಥಿತಿ ಹದಗೆಟ್ಟು ಒತ್ತಡ ಹೆಚ್ಚುತ್ತದೆ. ಅಂಥ ಸಂದರ್ಭದಲ್ಲಿ ಮುಕ್ತ ಸಮಾಲೋಚನೆ, ಮಾತುಕತೆಯ
ಅಗತ್ಯವಿರುತ್ತದೆ. ಅವುಗಳು ಇಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವ ಕೌಶಲಗಳ ಕಡೆ ಗಮನ ಹರಿಸುವಂತೆ ಪ್ರೇರೇಪಿಸಿ, ವ್ಯಕ್ತಿತ್ವವನ್ನು ದೃಢಗೊಳಿಸುತ್ತವೆ. ಈ ಘಟ್ಟದಲ್ಲಿ ಕೆಲವೊಮ್ಮೆ ಬಾಗಬೇಕು, ಮಗದೊಮ್ಮೆ ಬೀಗಬೇಕು.
ಸ್ವಾರ್ಥದ ಭಾವುಕ ಸ್ಥಿತಿಗೆ ಮನಸ್ಸನ್ನು ಒಡ್ಡಿದರೆ ಮತ್ತಷ್ಟು ಒತ್ತಡವಾದೀತು.
ಈ ಪ್ರಕರಣದಲ್ಲಿ ಕೊನೆಗೆ, ಮಗ ಇಷ್ಟಪಟ್ಟ ಹುಡುಗಿಯೇ ಮನೆಗೆ ಬಂದು, ರತ್ನಾಳ ಆಶೀರ್ವಾದ ಪಡೆದುಕೊಂಡ ಮೇಲೆ, ಇವರ ಭಾವುಕತೆಗೆ ಕಡಿವಾಣ ಬಿದ್ದಿದೆ. ಮಗನ ಆಯ್ಕೆ ಸರಿಯಾಗಿತ್ತು ಅಂತ ಅನ್ನಿಸಿ, ಮನಸ್ಸು ನೆಮ್ಮದಿಯ ನಿಯಂತ್ರಣಕ್ಕೆ ಬಿದ್ದ ಮೇಲೆ, ಜೀರ್ಣಶಕ್ತಿಯೂ ವೃದ್ಧಿಯಾಗಿದೆ.
ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.