ನಮ್ ಕಾಲದಲ್ಲಿ ಹೀಗಿರ್ಲಿಲ್ಲ…
Team Udayavani, Oct 9, 2019, 4:11 AM IST
ಹಿಂದೆಲ್ಲಾ ಬಟ್ಟೆ ಖರೀದಿಸುವುದೇ ಒಂದು ಮಹಾ ಹಬ್ಬ. ವರ್ಷಕ್ಕೊಮ್ಮೆ ಬರುವ ದೊಡ್ಡ ಹಬ್ಬಕ್ಕೆ ಒಮ್ಮೆ ಖರೀದಿಸಿದರೆ ಮುಗೀತಿತ್ತು. ಮತ್ತೆ ಬಟ್ಟೆ ಕೊಳ್ಳುವುದು ಮುಂದಿನ ವರ್ಷವೇ. ಆದರೆ ಈಗ ನವರಾತ್ರಿಗೇ ಒಂಬತ್ತು ಹೊಸ ಬಟ್ಟೆ ಕೊಳ್ಳುವವರಿದ್ದಾರೆ…
ಮಗಳು ಫೋನ್‌ನಲ್ಲಿ ಗೆಳತಿ ಜೊತೆ ಮಾತಾಡುತ್ತಿದ್ದಳು. “ಫಸ್ಟ್ ಡೇ ಆರೆಂಜ್ ಸೀರೆ ಉಡೋಣ. ಮಾರನೆ ದಿನದಿಂದ ವೈಟ್, ರೆಡ್, ರಾಯಲ್ ಬ್ಲೂ, ಹಳದಿ, ಹಸಿರು, ಗ್ರೇ, ಪಿಂಕ್ ಡ್ರೆಸ್… ನನ್ ಹತ್ರ ಎರಡ್ಮೂರು ಕಲರ್ ಡ್ರೆಸ್ ಇಲ್ಲ. ಆನ್‌ಲೈನ್‌ನಲ್ಲಿ ನೋಡಿಟ್ಟಿದ್ದೀನಿ..’ ಹೀಗೆ ಸಾಗಿತ್ತು ಅವಳ ಮಾತು. ಅರ್ಧ ಗಂಟೆ ನಂತರ ಫೋನ್ ಇಟ್ಟ ಅವಳನ್ನು ಕೇಳಿದೆ, “ಏನೇ, ಕಲರ್ ಕಲರ್ ವಾಟ್ ಕಲರ್ ಆಡ್ತಿದ್ರಾ?’ “ಹೋಗಮ್ಮಾ, ಅದ್ಕೆಲ್ಲಾ ಯಾರಿಗಿದೆ ಪುರುಸೊತ್ತು? ದಸರಾ ಬಂತಲ್ಲ, ಆಫೀಸ್‌ನಲ್ಲಿ ಎಥ್ನಿಕ್ ಡೇ.
ಇಡೀ ಟೀಂನವರು ದಿನಾ ಒಂದೊಂದು ಬಣ್ಣದ ಡ್ರೆಸ್ ಹಾಕ್ಕೊಂಡು ಹೋಗ್ಬೇಕು. ಅದ್ಕೆ, ನನ್ನ ಫ್ರೆಂಡ್‌ಗೆ ಯಾವ ದಿನ ಯಾವ ಡ್ರೆಸ್ ಅಂತ ಹೇಳ್ತಿದ್ದೆ’ ಅಂದಳು. “ಮತ್ತೇನೋ ಶಾಪಿಂಗ್ ಅಂದ್ಹಾಗಿತ್ತೂ…’ “ನನ್ ಹತ್ರ ರಾಯಲ್ ಬ್ಲೂ ಡ್ರೆಸ್ ಇಲ್ಲ. ಗ್ರೇ ಚೂಡಿ ಇದ್ಯಲ್ಲ, ಅದನ್ನೇ ಹೋದ ವರ್ಷ ದಸರಾಕ್ಕೆ ಹಾಕಿದ್ದೆ. ಹಾಗಾಗಿ, ಅವೆರಡು ಕಲರ್‌ನ ಡ್ರೆಸ್ ತಗೋಬೇಕು. ಇನ್ನೊಂದು ಗ್ರೀನ್ ಡ್ರೆಸ್ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದೇನೆ…’ “ಅಷ್ಟೊಂದು ನೀಲಿ ಬಟ್ಟೆ ಇದೆಯಲ್ಲೇ ನಿನ್ನತ್ರ…’
“ಅಮ್ಮಾ, ಅದ್ಯಾವೂª ರಾಯಲ್ ಬ್ಲೂ ಅಲ್ಲ. ಒಂದು ಸ್ಕೈ ಬ್ಲೂ, ಇನ್ನೊಂದು ನೇವಿ ಬ್ಲಿೂ, ಮತ್ತೂಂದು ಪರ್ಪಲ್..’
“ನಮ್ ಕಾಲದಲ್ಲೆಲ್ಲಾ ನೀಲಿ ಅಂದ್ರೆ ನೀಲಿ ಅಷ್ಟೇ… ಈಗಿನ ಕಾಲದೋರು; ಶಾಪಿಂಗ್ ಮಾಡೋಕೆ ನೆಪ ಹುಡುಕ್ತಾ ಇರ್ತೀರಾ…’ “ನಿಮ್ ಕಾಲದಲ್ಲಿ ಇಷ್ಟೊಂದು ಆಪ್ಷನ್ಸ್ ಇರ್ಲಿಲ್ಲ ಅಂತ ನಿಂಗೆ ಹೊಟ್ಟೆಯುರಿ ಕಣಮ್ಮಾ’- ಮಗಳು ಅಣಕಿಸಿದಳು. “ಆಯ್ಕೆಯಷ್ಟೇ ಅಲ್ಲ, ಪದೇ ಪದೆ ಬಟ್ಟೆ ಖರೀದಿಸೋ ಅವಕಾಶ, ಅಗತ್ಯ ಎರಡೂ ಇರ್ಲಿಲ್ಲ ನಮಗೆ…’ ಅದ್ಕೆ ನಿಂಗೆ ಹೊಟ್ಟೆಯುರಿ… ಮಗಳು ಮತ್ತೂಮ್ಮೆ ಅಣಕಿಸುತ್ತಾ, ರೂಮ್ ಸೇರಿಕೊಂಡಳು.
ನಾವೆಲ್ಲಾ ಸಣ್ಣವರಿದ್ದಾಗ ಬಟ್ಟೆ ಖರೀದಿಸುವುದು ಅಂದ್ರೆ, ಅದು ವಾರ್ಷಿಕ ಯೋಜನೆ. ಗೌರಿ ಹಬ್ಬಕ್ಕೋ, ದೀಪಾವಳಿಗೋ ಮನೆಮಂದಿಗೆಲ್ಲ ಒಟ್ಟಿಗೆ ಬಟ್ಟೆ ತರುವುದು ರೂಢಿ. ಇನ್ನೂ ಕೆಲವೊಮ್ಮೆ, ಮೀಟರ್‌ಗಟ್ಟಲೆ ಬಟ್ಟೆ ತಂದು ಏಳು ಜನರಿಗೂ ಯೂನಿಫಾರ್ಮ್ನಂತೆ ಉದ್ದ ಲಂಗ ಹೊಲಿಸುತ್ತಿದ್ದ ಅಪ್ಪಯ್ಯ. ನಮ್ಮ ಎತ್ತರ- ದಪ್ಪಕ್ಕಿಂತ ಎರಡ್ಮೂರು ಇಂಚು ದೊಡ್ಡದಾಗಿ ಹೊಲಿಸಿ, ಪದೇ ಪದೆ ಬಟ್ಟೆ ಖರೀದಿಸುವ ತಲೆನೋವಿನಿಂದ ಮುಕ್ತಿ ಪಡೆಯುವುದು ಅವರ ಉಪಾಯ.
ಅಮ್ಮನ ಕೈಗೋ, ದೊಡ್ಡಕ್ಕನ ಕೈಗೋ ಸ್ವಲ್ಪ ದುಡ್ಡು ಕೊಟ್ಟು, “ಹಬ್ಬಕ್ಕೆ ಬಟ್ಟೆ ಹೊಲಿಸಿಕೊಳ್ಳಿ’ ಅಂತ ಅಪ್ಪ ಹೇಳಿ ಬಿಟ್ಟರೆ, ನಾವೆಲ್ಲಾ ಪೇಟೆಗೆ ಹೋಗಲು ತುದಿಗಾಲಲ್ಲಿ ತಯಾರಾಗಿರುತ್ತಿದ್ದೆವು. ಎಲ್ಲಾ ಬರೋದು ಬೇಡ ಅಂತ ಅಮ್ಮ ಬೈದರೂ ನಾವು ಕೇಳುತ್ತಿರಲಿಲ್ಲ. “ಸರಿ, ಆದ್ರೆ ನಾ ಹೇಳಿದ್ದೇ ಕೊನೆ. ನಂಗೆ ಇದು ಬೇಡ, ಅದು ಬೇಕು ಅಂತೆಲ್ಲಾ ಹೇಳ್ಳೋ ಹಾಗಿಲ್ಲ’ ಎಂಬ ಷರತ್ತಿಗೆ ತಲೆದೂಗಿ ಅಮ್ಮನ ಹಿಂದೆ ಹೊರಡುತ್ತಿದ್ದೆವು.
ಕೊನೆಗೆ ಅಂಗಡಿಯಲ್ಲಿ, “ಅದು ಚೆನ್ನಾಗಿಲ್ಲ ಕಣೇ’ ಅಂತ ನಾವು ಕೊಸರಾಡಿದರೂ, ನಮ್ಮ ಮಾತಿಗೆ ಕಿಮ್ಮತ್ತಿನ ಬೆಲೆ ಸಿಗುತ್ತಿರಲಿಲ್ಲ. ಆಕೆ ತನಗೆ ಓಕೆ ಅನ್ನಿಸಿದ್ದನ್ನೇ ಖರೀದಿಸುತ್ತಿದ್ದುದು. ಕಡಿಮೆ ಬೆಲೆಯ, ಸುಲಭಕ್ಕೆ ಹರಿಯದ, ಕೊಳೆಯಾದರೂ ಕಾಣಿಸದ, ಒಬ್ಬರಿಂದ ಒಬ್ಬರಿಗೆ ಹಸ್ತಾಂತರ ಮಾಡಲು (ಅಕ್ಕ, ಅಕ್ಕನ ನಂತರ ನಾನು, ನನ್ನ ನಂತರ ತಂಗಿ) ಸೂಕ್ತವಾದ ಬಟ್ಟೆಯನ್ನೇ ಅಮ್ಮ ಆರಿಸುತ್ತಿದ್ದಳು. ಕೇವಲ ನಮ್ಮ ಮನೆಯಷ್ಟೇ ಅಲ್ಲ, ಬಹುತೇಕ ಎಲ್ಲರ ಮನೆಗಳಲ್ಲೂ ಆಗ ಇದೇ ರೀತಿ ನಡೆಯುತ್ತಿತ್ತು.
ಒಮ್ಮೆ ಹೀಗಾಯ್ತು. ನನಗೂ, ತಂಗಿಗೂ ಒಂದೇ ಬಣ್ಣದ ಲಂಗ ಹೊಲಿಸಿದ್ದರು. ಇಬ್ಬರ ನಡುವೆ ಒಂದೂವರೆ ವರ್ಷ ಅಂತರವಷ್ಟೇ ಇದ್ದುದರಿಂದ, ಅಳತೆಯೂ ಹೆಚ್ಚಾ ಕಡಿಮೆ ಒಂದೇ. ನಾನು ಶಾಲೆಯ ಯಾವುದೋ ಫಂಕ್ಷನ್‌ಗೆ ಆ ಲಂಗ ಹಾಕಿಕೊಂಡು ಹೋಗಿದ್ದೆ. ನನ್ನದು ಹೊಸಾ ಬಟ್ಟೆ ಅಂತ ಬೀಗುತ್ತಾ, ಎಲ್ಲರಿಂದ “ಹೊಸಬಟ್ಟೆ ಗುದ್ದು’ ಪಡೆಯುತ್ತಾ, ಬಟ್ಟೆ ಕೊಳೆಯಾಗದಂತೆ ಜಾಗ್ರತೆ ಮಾಡುತ್ತಾ ದಿನ ಕಳೆದಿದ್ದೇ ಗೊತ್ತಾಗಲಿಲ್ಲ.
ಸಂಜೆ ಮನೆಗೆ ಬರುವಾಗ, ಅಭ್ಯಾಸಬಲದಂತೆ ಯಾವುದೋ ಮುಳ್ಳು ಬೇಲಿಯೊಳಗೆ ನುಸುಳಿಬಿಟ್ಟೆ. ಹಿಂದಿನಿಂದ “ಪರ್ರ’ ಅಂತ ಶಬ್ದ ಬಂದಾಗಲೇ ನೆನಪಾಗಿದ್ದು, ನಾನು ಹೊಸಲಂಗ ಧರಿಸಿದ್ದೇನೆ ಅಂತ. ಮುಳ್ಳಿಗೆ ಅಂಟಿಕೊಂಡಿದ್ದ ಲಂಗವನ್ನು ಬಿಡಿಸಿ ನೋಡಿದರೆ, ಮೂರಿಂಚು ಹರಿದುಹೋಗಿದೆ! ಪ್ರೀತಿಯ ಲಂಗಕ್ಕಾದ ಗತಿ ನೋಡಿ ಜೋರು ಅಳು ಬಂತು. ಲಂಗವನ್ನು ಎತ್ತಿ ಹಿಡಿದು ಅಳುತ್ತಾ ಮನೆ ಕಡೆ ನಡೆವಾಗ, ಒಂದು ಉಪಾಯ ಹೊಳೆಯಿತು.
ಜೊತೆಯಲ್ಲಿ ಯಾರೂ ಇಲ್ಲದ್ದರಿಂದ, ಲಂಗ ಹರಿದ ವಿಷಯ ಯಾರಿಗೂ ಗೊತ್ತಿಲ್ಲ. ಈ ಬಟ್ಟೆಯನ್ನು ತಂಗಿಯ ಬಟ್ಟೆಯ ಜೊತೆಗೆ ಎಕ್ಸ್‌ಛೇಂಜ್ ಮಾಡಿದರೆ ಹೇಗೆ ಎಂಬ ಯೋಚನೆ ಬಂದದ್ದೇ ತಡೆ, ಕಣ್ಣೊರೆಸಿಕೊಂಡು, ಏನೂ ಆಗೇ ಇಲ್ಲ ಅನ್ನುವಂತೆ ಮನೆಗೆ ಹೋದೆ. ಅವಳು ಇಲ್ಲದಿರುವ ಸಮಯ ನೋಡಿ ಲಂಗ ಅದಲುಬದಲು ಮಾಡಿಯೂಬಿಟ್ಟೆ. ಎರಡು ತಿಂಗಳ ನಂತರ, ಅವಳು ಯಾವುದೋ ಫಂಕ್ಷನ್‌ಗೆ ಹಾಕಲೆಂದು ಟ್ರಂಕ್‌ನಲ್ಲಿದ್ದ ಲಂಗ ಹೊರ ತೆಗೆದು ನೋಡ್ತಾಳೆ, ಲಂಗ ಹರಿದಿದೆ! “ನಾನು ಒಂದ್ಸಲಾನೂ ಹಾಕ್ಕೊಂಡೇ ಇಲ್ಲ.
ಆಗ್ಲೆ ಹರಿದುಹೋಗಿದೆ ‘ ಅಂತ ಜೋರಾಗಿ ಅಳತೊಡಗಿದಾಗ, ನನಗೆ ಒಳಗೊಳಗೇ ಗಾಬರಿ. ಅವಳಿಗಿಂತ ಮುಂಚೆ ನನ್ನ ಕುಕೃತ್ಯ ಅಣ್ಣನಿಗೆ ಅರ್ಥವಾಗಿ, ಅಮ್ಮನ ಬಳಿ ಹೇಳಿಬಿಟ್ಟ. ನಾನು ಮೊದಲು “ನಾ ಹಾಗೆ ಮಾಡೇ ಇಲ್ಲ’ ವಾದಿಸಿದರೂ, ಕೊನೆಗೆ ತಪ್ಪು ಒಪ್ಪಿಕೊಳ್ಳಲೇಬೇಕಾಯ್ತು. ನಾವು ಈಗಲೂ ಆ ಲಂಗದ ಪ್ರಸಂಗ ನೆನಪಿಸಿಕೊಂಡು ನಗುತ್ತಿರುತ್ತೇವೆ. ಹೊಸ ಬಟ್ಟೆ ಖರೀದಿಸುವುದು, ಅದನ್ನು ಹೊಲಿಸಿ, ಟ್ರಂಕ್‌ನಲ್ಲಿಟ್ಟು ಜೋಪಾನ ಮಾಡುವುದು- ಇವೇ ಹಬ್ಬಕ್ಕಿಂತ ಜಾಸ್ತಿ ಖುಷಿ ಕೊಡುತ್ತಿದ್ದವು. ಆದರೆ, ಒಂದು ಹಬ್ಬಕ್ಕೇ ಹತ್ತಾರು ಡ್ರೆಸ್ ಖರೀದಿಸುವ ಈಗಿನವರಿಗೆ ಬಟ್ಟೆ ಖರೀದಿ ಅನ್ನೋದು ದೊಡ್ಡ ಸಂಗತಿಯೇ ಅಲ್ಲ ಬಿಡಿ.
* ಅಪರ್ಣಾ ಎಚ್. ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.