ಸ್ವದೇಶ್ ವಾಪ್ಸಿ ಹೆಣ್ಣಿನ ಸಾಹಸ
Team Udayavani, Apr 18, 2018, 5:06 PM IST
ಭಾರತದಲ್ಲಿ ಓದಿದವರೇ ವಿದೇಶಕ್ಕೆ ಹಾರಲು ಹವಣಿಸುತ್ತಾರೆ. ಅಲ್ಲಿನ ಐಷಾರಾಮಕ್ಕೆ ಮನಸೋಲುತ್ತಾರೆ. ಇನ್ನು ವಿದೇಶದಲ್ಲಿ ಪದವಿ ಪಡೆದವರು ಸ್ವದೇಶಕ್ಕೆ ವಾಪಸ್ ಬಂದು, ಇಲ್ಲಿ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಊಹಿಸುವುದೂ ಕಷ್ಟ. ಬೀದರ್‌ನಲ್ಲಿ ಅಂಥ ಒಬ್ಬ ವೈದ್ಯೆಯಿದ್ದಾರೆ. ಅವರೇ ಡಾ. ಸಿಬಿಲ್ ವಿಶ್ರಾಮಕರ್.
ಡಾ. ಸಿಬಿಲ್ ಅವರು ವೈದ್ಯಕೀಯ ಪದವಿ ಪಡೆದಿದ್ದು ವಿದೇಶದಲ್ಲಿ. ನಂತರ ಒಳ್ಳೆಯ ಉದ್ಯೋಗವೂ ಸಿಕ್ಕಿತ್ತು. ಆದರೆ, ಅವರು ಅಲ್ಲಿ ಉಳಿಯಲಿಲ್ಲ. ತಾಯ್ನಾಡಿನ ರೋಗಿಗಳ ಸೇವೆಗಾಗಿ ಭಾರತಕ್ಕೆ ಮರಳಿದರು. ಈಗ ಬಡ ಕುಷ್ಠ ರೋಗಿಗಳ, ನೇತ್ರಹೀನರ, ಎಚ್‌ಐವಿ ಪೀಡಿತರ ಸೇವೆಯಲ್ಲಿ ತೊಡಗಿರುವ ಅವರು ಬರೀ ಡಾಕ್ಟರ್ ಅಲ್ಲ, ಎಲ್ಲರ ಪ್ರೀತಿಯ “ಡಾಕ್ಟರಮ್ಮ’ ಆಗಿದ್ದಾರೆ.
ಸಿಬಿಲ್, ಮೂಲತ: ಮಂಗಳೂರಿನವರು. ತಂದೆ-ತಾಯಿ ಇಬ್ಬರೂ ವೈದ್ಯರಾಗಿದ್ದವರು. ಬೀದರ್‌ನಲ್ಲಿ ಸೈಲೆನ್ಸ್ ಮಶಿನರಿ ಆಸ್ಪತ್ರೆ ಸ್ಥಾಪಿಸಿ, ಬಡ ರೋಗಿಗಳ ಹಾಗೂ ಕುಷ್ಟ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 2002ರಲ್ಲಿ ಕ್ಯಾನ್ಸರ್‌ನಿಂದ ಇಬ್ಬರೂ ವಿಧಿವಶರಾದಾಗ, ಆಸ್ಪತ್ರೆ ನಡೆಸಲು ಯಾರೂ ಇರಲಿಲ್ಲ. ಅಷ್ಟರಲ್ಲಾಗಲೇ ಸಿಬಿಲ್, ಲೂಧಿಯಾನಾದಲ್ಲಿ ಎಂಬಿಬಿಎಸ್, ಲಂಡನ್‌ನಲ್ಲಿ ಎಂಎಸ್ ಶಿಕ್ಷಣ ಪೂರೈಸಿದ್ದರು.
ಕೈಯಲ್ಲಿ ಉದ್ಯೋಗಾವಕಾಶಗಳೂ ಇದ್ದವು. ಆಕರ್ಷಕ ಸಂಬಳದ ಕೆಲಸವೋ, ರೋಗಿಗಳ ಸೇವೆಯೋ ಎಂಬ ಆಯ್ಕೆ ಬಂದಾಗ; ಸಿಬಿಲ್, ವೈದ್ಯವೃತ್ತಿಯ ಮೂಲ ಧ್ಯೇಯವನ್ನೇ ಆರಿಸಿಕೊಂಡರು. ತಾಯ್ನಾಡಿಗೆ ಮರಳಿ, ಆಸ್ಪತ್ರೆಯ ಜವಾಬ್ದಾರಿ ಹೊತ್ತರು. ಅಷ್ಟೇ ಅಲ್ಲ, ಬೀದರ್‌ನಲ್ಲಿ ಇರುವ ಅವರು ಜನಸೇವೆಯ ಕಾರಣದಿಂದ, ತಮಿಳುನಾಡಿನಲ್ಲಿ ಮಕ್ಕಳ ವೈದ್ಯರಾಗಿರುವ ಪತಿಯಿಂದಲೂ ದೂರವಿದ್ದಾರೆ.
ಅಂಧರ “ದಾರಿದೀಪ’: ಬಡ ರೋಗಿಗಳಿಗೆ ಅನುಕೂಲವಾಗಲೆಂದು ವೆಲ್‌ಮೆಗ್ನಾ ಗುಡ್ ನ್ಯೂಸ್ ಚಾರಿಟೇಬಲ್ ಸೊಸೈಟಿ ಸ್ಥಾಪಿಸಿದ್ದಾರೆ. ಆ ಮೂಲಕ ತಮ್ಮ ತಾಯಿಯ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ. ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಮಾಡಿ, ಕಣ್ಣಿಲ್ಲದವರಿಗೆ ದೃಷ್ಟಿ ಕಲ್ಪಿಸುತ್ತಾರೆ. ಇದಕ್ಕಾಗಿ ಆಸ್ಪತ್ರೆ, ಹಳ್ಳಿ ಹಳ್ಳಿಗಳಲ್ಲಿ ಕ್ಯಾಂಪ್ ಕೂಡ ಹಾಕುತ್ತಾರೆ.
ರೋಗಿಗಳ ಮಕ್ಕಳಿಗೆ ಬೆಳಕು: ಈ ಸಮಾಜ ಕುಷ್ಠ ರೋಗಿಗಳನ್ನು ಅಸ್ಪೃಶ್ಯರೆಂದು ದೂರವಿಟ್ಟಿದೆ. ಆದರೆ, ತಂದೆ ಸ್ಥಾಪಿಸಿದ್ದ ನವಜೀವನ ಕೇಂದ್ರದ ಮೂಲಕ ಸಿಬಿಲ್ ಕುಷ್ಠ ರೋಗಿಗಳಿಗೆ ಪುಟ್ಟ ಬಡಾವಣೆ ಸ್ಥಾಪಿಸಿ, 50 ರೋಗಿಗಳ ಕುಟುಂಬಕ್ಕೆ ಮೂಲ ಸೌಕರ್ಯ ಒದಗಿಸಿದ್ದಾರೆ. ಜಿಲ್ಲೆ ಮಾತ್ರವಲ್ಲ ಆಂಧ್ರ, ಮಹಾರಾಷ್ಟ್ರದ ರೋಗಿಗಳೂ ಅಲ್ಲಿದ್ದಾರೆ. ವಾರಕ್ಕೊಮ್ಮೆ ಆಹಾರ ಸಾಮಗ್ರಿ, ಔಷಧ ನೀಡುತ್ತಾರೆ.
ವೈದ್ಯರೊಬ್ಬರು ಆಗಾಗ್ಗೆ ಆರೋಗ್ಯ ತಪಾಸಣೆ ಮಾಡುತ್ತಾರೆ. ನೇತ್ರಾಸ್ಪತ್ರೆಯ ಲಾಭಾಂಶದಲ್ಲಿ ಅರ್ಧದಷ್ಟನ್ನು ಕುಷ್ಠ ರೋಗಿಗಳ ಶುಶ್ರೂಷೆಗಾಗಿ ಮೀಸಲಿಡಲಾಗಿದೆ. ಕುಷ್ಠ ರೋಗಿಗಳ 15ಕ್ಕೂ ಹೆಚ್ಚು ಮಕ್ಕಳ ಜವಾಬ್ದಾರಿ ಹೊತ್ತಿರುವ ಸಿಬಲ್, ಅವರಿಗೆ ಊಟ, ವಸತಿ ಜೊತೆಗೆ ಶಿಕ್ಷಣವನ್ನೂ ಕೊಡಿಸುತ್ತಿದ್ದಾರೆ. ಅವರಲ್ಲಿ ಕೆಲವರು ಕಾಲೇಜು ಶಿಕ್ಷಣ ಪಡೆಯುತ್ತಿದ್ದು, ಮತ್ತೆ ಕೆಲವರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ವೈದ್ಯ ವೃತ್ತಿಯ ಜತೆಗೆ ಬಡವರ ಸೇವೆಯಿಂದ ಜೀವನದಲ್ಲಿ ಸಂತೃಪ್ತಿ ಸಿಗುತ್ತಿದೆ. ಹೆತ್ತವರ ಕನಸನ್ನು ನನಸಾಗಿಸುತ್ತಿದ್ದೇನೆಂಬ ಖುಷಿ ಇದೆ. ಪ್ರತಿಯೊಬ್ಬ ಮಹಿಳೆಯೂ ಉನ್ನತ ಶಿಕ್ಷಣ ಪಡೆದು ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ.
-ಡಾ| ಸಿಬಿಲ್ ವಿಶ್ರಾಮಕರ್
* ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.