“ನಾಗಿಣಿ” ಮಾತು
Team Udayavani, Jun 27, 2018, 6:00 AM IST
ನಾಗಿಣಿ ಭರಣ, ಕನ್ನಡ ಚಿತ್ರರಂಗದ ಯಶಸ್ವಿ ವಸ್ತ್ರವಿನ್ಯಾಸಕಿ, ರಂಗಭೂಮಿ ಕಲಾವಿದೆ. ನಾಗಿಣಿ ಅವರಿಗೆ ಗೊತ್ತಿಲ್ಲದ ಕಲಾಪ್ರಕಾರವೇ ಇಲ್ಲ ಎಂದರೂ ಸರಿಯೇ. ನಟನೆ, ನೃತ್ಯ, ಸಂಗೀತ… ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣತಿ ಇವರದ್ದು. ಕಲೆಯ ಮುಗಿಲು ಮುಟ್ಟಿದರೂ, ಮಕ್ಕಳು- ಮೊಮ್ಮಕ್ಕಳನ್ನು ನೋಡಿಕೊಳ್ಳುವ ಕಲೆಯೇ ಶ್ರೇಷ್ಠ ಎಂದು ನಗುತ್ತಾರೆ. ಇವರು ಚಿತ್ರ ನಿರ್ದೇಶಕ ನಾಗಾಭರಣ ಅವರ ಪತ್ನಿ. “ಜನಪ್ರಿಯತೆ ಬಗ್ಗೆ ಯೋಚಿಸಲೂ ಸಮಯವಿರದಂತೆ ಕಷ್ಟಪಟ್ಟು ಕೆಲಸ ಮಾಡಬೇಕು’ ಎಂಬುದೇ ಇವರ ಜೀವನತತ್ತ. ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರಿಗೆ, ಇತ್ತೀಚೆಗಷ್ಟೇ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ…
– ನೀವು ವಸ್ತ್ರವಿನ್ಯಾಸ ಮಾಡಿರುವ ಸಿನಿಮಾಗಳೆಲ್ಲಾ ವಿಭಿನ್ನ ಸಿನಿಮಾಗಳೇ. ವಸ್ತ್ರವಿನ್ಯಾಸ ಮಾಡುವಾಗ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತೀರ?
ಮೊನ್ನೆಯಷ್ಟೇ “ಕಾನೂರಾಯಣ’ ಚಿತ್ರಕ್ಕೆ ವಸ್ತ್ರವಿನ್ಯಾಸ ಮಾಡಿದೆ. ನಾಗಾಭರಣ ಅವರ 3-4 ಕಮರ್ಷಿಯಲ್ ಚಿತ್ರಗಳನ್ನು ಹೊರತುಪಡಿಸಿ, ಬೇರೆಲ್ಲಾ ಚಿತ್ರಗಳಿಗೂ ನಾನೇ ವಸ್ತ್ರವಿನ್ಯಾಸ ಮಾಡಿರುವುದು. ಎಲ್ಲಾ ಚಿತ್ರಗಳೂ ನನಗೆ ಒಂದೊಂದು ರೀತಿಯಲ್ಲಿ ಸವಾಲು ಒಡ್ಡಿವೆ. “ಅಲ್ಲಮ’ ಚಿತ್ರ 12ನೇ ಶತಮಾನದ ಘಟನೆಗಳನ್ನು ಆಧರಿಸಿದ್ದು. ಆ ಚಿತ್ರ ನನಗೆ ದೊಡ್ಡ ಸವಾಲಾಗಿತ್ತು. 12ನೇ ಶತಮಾನದ ಶಿಲ್ಪಕಲೆಗಳ ಫೋಟೊಗಳನ್ನು ನೋಡಿ, ಅವುಗಳ ಅಧ್ಯಯನ ಮಾಡಿ, ವರ್ಣಚಿತ್ರ ಬರೆಸಿ, ವಸ್ತ್ರವಿನ್ಯಾಸ ಮಾಡಿದ್ದೆ. “ನಾಗಮಂಡಲ’, “ಸಂತ ಶಿಶುನಾಳ ಶರೀಫ’, “ನೀಲಾ’ಗಳಂಥ ಚಿತ್ರಗಳಿಗೆ ವಿನ್ಯಾಸ ಮಾಡುವಾಗ, ಕಥೆ ನಡೆಯುವ ಸ್ಥಳಗಳಿಗೆ ಸ್ವತಃ ಭೇಟಿ ನೀಡಿ, ವಸ್ತ್ರಗಳ ಬಗ್ಗೆ ಅಧ್ಯಯನ ನಡೆಸಿದ್ದೇನೆ. “ಕಲ್ಲರಳಿ ಹೂವಾಗಿ’ಯಂಥ ಐತಿಹಾಸಿಕ ಚಿತ್ರಕ್ಕಾಗಿ ಹಲವಾರು ಪುಸ್ತಕಗಳನ್ನು ಓದಿದ್ದೆ. ಜೊತೆಗೆ ರಾಜಾ ರವಿವರ್ಮರ ಕಲಾಕೃತಿಗಳನ್ನು ಕೊಂಡುತಂದು ಅಧ್ಯಯನ ಮಾಡಿದ್ದೆ. ಅಧ್ಯಯನ ಇಲ್ಲದೆ ಯಾವ ಚಿತ್ರಕ್ಕೂ ನಾನು ವಸ್ತ್ರವಿನ್ಯಾಸ ಮಾಡಿಲ್ಲ.
– ರಂಗಭೂಮಿ ನಂಟು ಆರಂಭವಾಗಿದ್ದು ಹೇಗೆ? ವಸ್ತ್ರವಿನ್ಯಾಸದ ಕುರಿತು ವಿಶೇಷವಾಗಿ ತರಬೇತಿ ಪಡೆದಿದ್ದೀರಾ?
ನನ್ನ ರಂಗಭೂಮಿ ಪಯಣ ಆರಂಭವಾಗಿದ್ದು “ಬಿಸಿಬೇಳೆಬಾತ್’ನಿಂದಾಗಿ. ನಾನು 14 ವರ್ಷದವಳಿದ್ದಾಗ, ಬಿ.ವಿ. ಕಾರಂತರು “ಹಯವದನ’ ನಾಟಕ ಮಾಡಿಸುತ್ತಿದ್ದರು. ರಂಗಕರ್ಮಿ ಟಿ.ಎಸ್. ರಂಗ, ನನ್ನ ಅಣ್ಣನ ಸ್ನೇಹಿತರು. ಒಮ್ಮೆ ಅವರ ಅಮ್ಮ, ನಾಟಕ ತಾಲೀಮು ನಡೆಸುತ್ತಿದ್ದ ಎಲ್ಲರಿಗೂ ಬಿಸಿಬೇಳೆ ಬಾತ್ ಮಾಡಿದ್ದರು. ಅದನ್ನು ನನ್ನ ಕೈಲಿ ಕೊಟ್ಟು ಕಳಿಸಿದ್ದರು. ನಾನು ತಾಲೀಮು ನಡೆಯುವ ಜಾಗಕ್ಕೆ ಹೋದಾಗ, ವಿಮಲಾ ರಂಗಾಚಾರ್ “ನೀನೇಕೆ ನಮ್ಮ ಜೊತೆ ನಾಟಕದಲ್ಲಿ ಕೆಲಸ ಮಾಡಬಾರದು?’ ಎಂದು ಕೇಳಿದರು. ನನ್ನ ಜರ್ನಿ ಶುರುವಾಗಿದ್ದು ಆ ಒಂದು ಮಾತಿನಿಂದ. ಪ್ರೇಮಾ ಕಾರಂತರ ಜೊತೆ ವಸ್ತ್ರವಿನ್ಯಾಸ, ಮತ್ತಿತರ ಬ್ಯಾಕ್‌ಸ್ಟೇಜ್ ಕೆಲಸಗಳನ್ನು ಕಲಿಯಲು ಪ್ರಾರಂಭಿಸಿದೆ. ಬಳಿಕ ಹಲವಾರು ನಾಟಕಗಳಲ್ಲಿ ಕೆಲಸ ಮಾಡಿದೆ. ನಂತರ ಸ್ಮಿತಾ ಪಾಟೀಲ್ ಅಭಿನಯದ, ನಾಗಾಭರಣ ನಿರ್ದೇಶನದ “ಅನ್ವೇಷಣೆ’ ಚಿತ್ರಕ್ಕೆ ವಸ್ತ್ರವಿನ್ಯಾಸ ಮಾಡಿದೆ. ರಂಗಭೂಮಿಯೇ ನನಗೆ ಗುರು. ವಿನ್ಯಾಸ, ಅಭಿನಯ ಅಂತೆಲ್ಲಾ ನಾನು ಯಾವ ಶಿಕ್ಷಣವನ್ನೂ ಪಡೆದಿಲ್ಲ.
– ರಂಗಭೂಮಿಯಲ್ಲಿ ನೀವು ಈಗಲೂ ಸಕ್ರಿಯರು, ಸಿನಿಮಾ ಅಭಿನಯದಿಂದ ದೂರ ಉಳಿದಿದ್ದು ಏಕೆ?
ರಂಗಭೂಮಿ ಕೊಡುವ ಸಂತೃಪ್ತಿಯನ್ನು ಚಿತ್ರರಂಗ ನೀಡುವುದಿಲ್ಲ. ನಾಟಕದಲ್ಲಿ ನೀವು ಒಂದು ಪಾತ್ರ ಮಾಡುತ್ತಿದ್ದೀರಿ ಎಂದರೆ, ನೀವು ಆ ಪಾತ್ರವೇ ಆಗಿಹೋಗುತ್ತೀರಿ. ಆ ಅನುಭವ ಸಿನಿಮಾ ಮತ್ತು ಧಾರಾವಾಹಿಯಲ್ಲಿ ಸಿಗುವುದಿಲ್ಲ. ನಾನು ಈಗಲೂ ತಿಂಗಳಿಗೆ 2 ನಾಟಕಗಳಲ್ಲಿ ಅಭಿನಯಿಸುತ್ತೇನೆ. ಸಮಯ ಸಿಕ್ಕರೆ ವಸ್ತ್ರವಿನ್ಯಾಸವನ್ನೂ ಮಾಡುತ್ತೇನೆ. ಹೊಸ ನಾಟಕಗಳಲ್ಲಿ ಅಭಿನಯಿಸುವುದನ್ನು ಕಮ್ಮಿ ಮಾಡಿದ್ದೇನೆ. ಮನೆ ಜವಾಬ್ದಾರಿ ಜೊತೆ ತಿಂಗಳುಗಟ್ಟಲೆ ನಾಟಕ ತಾಲೀಮು ಮಾಡಲು ಈಗ ಸಾಧ್ಯವಿಲ್ಲ. ಮೊಮ್ಮಕ್ಕಳನ್ನು ನೋಡಿಕೊಳ್ಳುವ ಸುಖ ಇದೆಯಲ್ಲಾ, ಅದು ಎಲ್ಲಾ ರೀತಿಯ ತ್ಯಾಗಕ್ಕೂ ನಮ್ಮನ್ನು ಅಣಿ ಮಾಡುತ್ತದೆ. ಅಗತ್ಯ ಬಿದ್ದಾಗ “ಚಿನ್ನಾರಿ ಮುತ್ತ’ ಮುಂತಾದ ಚಿತ್ರಗಳಲ್ಲಿ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದೇನೆ.
– ಮೊಮ್ಮಕ್ಕಳ ಜೊತೆಗಿನ ಒಡನಾಟವನ್ನು ತುಂಬಾ ಆನಂದಿಸುತ್ತೀರ ಅಂತನ್ನಿಸುತ್ತದೆ…
ಮಕ್ಕಳು, ಮೊಮ್ಮಕ್ಕಳು ನನ್ನ ಪ್ರಾಣ. ಮೊಮ್ಮಗಳು ಇವತ್ತಿಗೂ ನನ್ನ ಮತ್ತು ಭರಣ ಜೊತೆಯೇ ಮಲಗುವುದು. ಸದಾ ನನಗೆ ಅಂಟಿಕೊಂಡೇ ಇರುತ್ತದೆ. ಮೊಮ್ಮಗನಿಗೆ ಇನ್ನೂ ಎರಡೂವರೆ ತಿಂಗಳು. ಆತ ಈಗಲೇ ನನ್ನ ಧ್ವನಿ ಗುರುತಿಸುತ್ತಾನೆ. ಮಕ್ಕಳನ್ನೂ ನಾನು ಅಷ್ಟೇ ಹಚ್ಚಿಕೊಂಡಿದ್ದೇನೆ. ಮಗಳು 10ನೇ ತರಗತಿಗೆ ಹೋಗುವವರೆಗೂ, ನಾನು ಯಾವ ಕೆಲಸವನ್ನೂ ಒಪ್ಪಿಕೊಂಡಿರಲಿಲ್ಲ. ಭರಣ, ಆಗೆಲ್ಲಾ ಮನೆಯಲ್ಲಿ ಇರುತ್ತಿದ್ದುದ್ದೇ ಅಪರೂಪ. ಹಾಗಾಗಿ ಮಕ್ಕಳ ಜವಾಬ್ದಾರಿಯೆಲ್ಲಾ ನನ್ನ ಮೇಲೆಯೇ ಇತ್ತು. 10 ವರ್ಷದ ಗ್ಯಾಪ್‌ನ ನಂತರ “ಸಂಕ್ರಾತಿ’ ಚಿತ್ರದಿಂದ ಮತ್ತೆ ಕೆಲಸ ಆರಂಭಿಸಿದೆ. ಮಕ್ಕಳು ಬೆಳೆದ ನಂತರವೂ ಅಮ್ಮನಿಗಾಗಿ ಸಮಯ ನೀಡುತ್ತಿದ್ದಾರೆ ಅನ್ನೋದೇ ನನಗೆ ಖುಷಿ.
– ನಿಮ್ಮಿಬ್ಬರ ಪ್ರೀತಿ ಆರಂಭವಾಗಿದ್ದು ಎಲ್ಲಿ?
ರಂಗಭೂಮಿಯಲ್ಲಿದ್ದಾಗಲೇ ನಮ್ಮಿಬ್ಬರ ಮಧ್ಯೆ ಪ್ರೀತಿ ಆರಂಭವಾಗಿತ್ತು. ನಮ್ಮ ತಂಡದವರೆಲ್ಲ ಒಂದು ತಿಂಗಳು ಆಲ್ ಇಂಡಿಯಾ ಟ್ರಿಪ್ ಮಾಡಿದ್ದೆವು. ಆಗ ಇಬ್ಬರೂ ಬ್ಯಾಕ್‌ಸ್ಟೇಜ್‌ನಲ್ಲಿ ಕೆಲಸ ಮಾಡುತ್ತಿದ್ದೆವು. ಮದುವೆಯಾಗಲು ತೀರ್ಮಾನಿಸಿದ್ದೂ ಆಗಲೇ. ನನಗಿನ್ನೂ ಆಗ 18 ವರ್ಷ. ಭರಣ ನನಗೆ ಕಳಿಸಿದ್ದ ಗ್ರೀಟಿಂಗ್ ಕಾರ್ಡ್ ಒಂದು ಅಮ್ಮನಿಗೆ ಸಿಕ್ಕು ಮನೆಯಲ್ಲಿ ರಾದ್ಧಾಂತವಾಯಿತು. ನಮ್ಮದು ಅಯ್ಯಂಗಾರಿ ಕುಟುಂಬ. ಮಗಳು, ಗೌಡರ ಹುಡುಗನನ್ನು ಇಷ್ಟಪಟ್ಟಿದ್ದಾಳೆ ಎಂದರೆ ಮನೆಯಲ್ಲಿ ಅಲ್ಲೋಲ ಕಲ್ಲೊಲವಾಗದೇ ಇರುತ್ತದೆಯೇ? ಅಪ್ಪ ನನ್ನನ್ನು ಕೇಳಿದರು, ನಾನು ಒಪ್ಪದಿದ್ದರೆ ಏನು ಮಾಡುತ್ತೀಯ? ಅಂತ. “ನಾನು ಮನೆಬಿಟ್ಟು ಹೋಗಿ ಮದುವೆಯಾಗುತ್ತೇನೆ’ ಅಂತ ಧೈರ್ಯವಾಗಿ ಹೇಳಿಬಿಟ್ಟೆ. ಹಾಗೆಲ್ಲಾ ಆಗಿ ಜನರ ಬಾಯಿಗೆ ಬೀಳುವುದಕ್ಕಿಂತ ನಾವೇ ನಿಂತು ಮದುವೆ ಮಾಡಿದರೆ ಒಳ್ಳೆಯದು ಅಂತ ತೀರ್ಮಾನಿಸಿದ ಅಪ್ಪ ಮದುವೆಗೆ ಒಪ್ಪಿದರು.
– ಮದುವೆ ನಂತರ ಎರಡೂ ಕುಟುಂಬಗಳು ನಿಮ್ಮಿಬ್ಬರನ್ನು ಸ್ವೀಕರಿಸಿದವೇ?
ನಮ್ಮ ಮದುವೆ ನಂತರ ಹಲವಾರು ತಮಾಷೆಯ ಪ್ರಸಂಗಗಳೂ ನಡೆದವು. ಮದುವೆಗೆ, ನನ್ನ ತಾತ ಮತ್ತು ಹಿರಿಯ ಸಂಬಂಧಿಕರು ಬಂದಿರಲಿಲ್ಲ. ಡಿ.10ಕ್ಕೆ ನಮ್ಮ ಮದುವೆಯಾಯಿತು. ಮರುದಿನವೇ ಇಬ್ಬರೂ “ಗ್ರಹಣ’ ಚಿತ್ರದ ಚಿತ್ರೀಕರಣಕ್ಕೆ ಎಂದು ಚೆನ್ನೈಗೆ ಹೊರಟೆವು. 2 ತಿಂಗಳು ಸಿನಿಮಾ ತಯಾರಿಯಲ್ಲೇ ಮುಳುಗಿ ಹೋದೆವು. ಮೂರನೇ ತಿಂಗಳ ಅಂತ್ಯಕ್ಕೆ “ಗ್ರಹಣ’ಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂತು. ಆಗ, ನಮ್ಮ ಮದುವೆ ಕಾರಣಕ್ಕೆ ಮುನಿಸಿಕೊಂಡಿದ್ದ ನಮ್ಮೂರು ಮೇಲುಕೋಟೆಯ ಜನ, ಭರಣರನ್ನು ಊರಿಗೆ ಕರೆಸಿ ಅದ್ಧೂರಿ ಸನ್ಮಾನ ಮಾಡಿದರು. ಅಲ್ಲಿಗೆ ಕವಿದಿದ್ದ ಗ್ರಹಣ ಕರಗಿಹೋಯಿತು. ಭರಣ ಕುಟುಂಬವೂ ನನ್ನನ್ನು ಪ್ರೀತಿಯಿಂದಲೇ ಸ್ವಾಗತಿಸಿತು. ಅಲ್ಲಿದ್ದು ಅವರ ಅಡುಗೆ, ಆಚಾರ, ವಿಚಾರವನ್ನೆಲ್ಲಾ ಕಲಿತೆ. ಅತ್ತೆ, ಮಾವ ಮನೆಗೆ ಬಂದಾಗ ಅವರ ಶೈಲಿಯ ಅಡುಗೆ ಮಾಡಿ ಬಡಿಸಿದಾಗಲೆಲ್ಲಾ ಅವರು ಬಾಯಿತುಂಬಾ ನನ್ನನ್ನು ಹೊಗಳಿದ್ದಾರೆ.
– ನಿಮಗೆ ಅತ್ಯಂತ ಖುಷಿ ಕೊಡುವ ಕೆಲಸ ಯಾವುದು?
ಅಡುಗೆ ಮಾಡುವುದು ನಂಗಿಷ್ಟದ ಕೆಲಸ. ಅದೆಷ್ಟು ಬಗೆಯ ಖಾದ್ಯಗಳನ್ನು ತಯಾರಿಸಿದ್ದೇನೋ, ಲೆಕ್ಕವೇ ಇಲ್ಲ. ಭರಣರಿಗೆ, ನಾನು ತಯಾರಿಸುವ ಎಲ್ಲಾ ಅಡುಗೆಯೂ ಇಷ್ಟ. ಎಷ್ಟೇ ತಡವಾದರೂ ಅವರು ಮನೆಗೇ ಬಂದು ಊಟ ಮಾಡುವುದು. ಹಲವಾರು ಬಗೆಯ ಸಿಹಿತಿಂಡಿ ಮಾಡುತ್ತೇನೆ. 10 ನಿಮಿಷದಲ್ಲಿ ಮೈಸೂರ್‌ಪಾಕ್ ಮಾಡುತ್ತೇನೆ. “ನಾಗಮಂಡಲ’ ಸಿನಿಮಾದ ಚಿತ್ರಕಥೆ ಸಂದರ್ಭದಲ್ಲಿ ಸಿ. ಅಶ್ವಥ್ ಹಾಗೂ ಪ್ರಕಾಶ್ ರೈ ನಮ್ಮ ಮನೆಯಲ್ಲೇ ಊಟ ಮಾಡುತ್ತಿದ್ದರು. ಪ್ರಕಾಶ್ ರೈಗೆ ನಾನು ಮಾಡುವ ಅಕ್ಕಿ ರೊಟ್ಟಿ ತುಂಬಾ ಇಷ್ಟವಾಗುತ್ತಿತ್ತು.
– ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಮೂಡಿಸುವ ಒಂದು ಸಾಧನೆಯ ಬಗ್ಗೆ ಹೇಳುವುದಾದರೆ…
ಮಗಳು ಹುಟ್ಟಿದ ಮೇಲೆ ನಾನು ಕೂಚುಪುಡಿ ನೃತ್ಯ ಕಲಿತು ಕರ್ನಾಟಕಕ್ಕೇ ಮೊದಲು ಆರಂಗ್ರೇಟಂ ಮಾಡಿದೆ. ಆ ಬಗ್ಗೆ ನನಗೆ ಹೆಮ್ಮೆ ಇದೆ. ಬಾಲ್ಯದಲ್ಲಿಯೇ ಸಂಗೀತ, ಭರತನಾಟ್ಯ ಅಭ್ಯಾಸ ಮಾಡಿದ್ದೇನೆ. ಯಾವ ವಯಸ್ಸಿನಲ್ಲೂ ನಾನು ಸುಮ್ಮನೆ ಕೂತಿದ್ದೇ ಇಲ್ಲ. ನಾಗಾಭರಣ ಮೆಗಾ ಸೀರಿಯಲ್‌ಗಳನ್ನು ಮಾಡಲು ಆರಂಭಿಸಿದ ಮೇಲೆ ನಾನು ನನ್ನ ಹವ್ಯಾಸಗಳನ್ನು ಸ್ವಲ್ಪ ಬದಿಗಿರಿಸಿದೆ. “ಮಹಾಮಾಯಿ’ಯಂಥ ಧಾರಾವಾಹಿಗೆ ಕಾಸ್ಟೂéಮ್ ಡಿಸೈನ್ ಮಾಡಲು ದಿನವಿಡೀ ಕೆಲಸ ಮಾಡಿದ್ದಿದೆ. ನನ್ನ ಅಮ್ಮ ಇಂದಿರಾ ಕೇಶವನ್, ಹಲವಾರು ಸಂಸ್ಕೃತದ ಶ್ಲೋಕ, ಹಾಡುಗಳನ್ನು ಕನ್ನಡಕ್ಕೆ ಬರೆದು, ರಾಗ ಹಾಕಿ ಅವರ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಆ ಹಾಡುಗಳನ್ನು ಬಿಡುವಿದ್ದಾಗಲೆಲ್ಲಾ ನಾನು ಹಾಡಿಕೊಳ್ಳುತ್ತಿರುತ್ತೇನೆ.
-ನಿಮ್ಮ ಸೀರೆ, ಆಭರಣಗಳ ವಿಷಯದಲ್ಲೂ ನಿಮ್ಮೊಳಗಿನ ವಸ್ತ್ರವಿನ್ಯಾಸಕಿ ಕೆಲಸ ಮಾಡಿರುತ್ತಾಳಾ? ನಿಮ್ಮ ಶಾಪಿಂಗ್ ಬಗ್ಗೆ ಹೇಳಿ.
ಯಾವ ವಸ್ತುವನ್ನಾದರೂ ನಾನು ಸಾಕಷ್ಟು ಯೋಚಿಸಿಯೇ ಖರೀದಿಸುವುದು. ಸಾಧಾರಣ ಅನ್ನಿಸುವ ಆಭರಣಗಳು ನನಗೆ ಇಷ್ಟವಾಗುವುದಿಲ್ಲ. ಭಿನ್ನವಾಗಿರುವ, ಅಪರೂಪದ ಆಭರಣಗಳನ್ನೇ ಖರೀದಿಸುತ್ತೇನೆ. “ನಾಗಮಂಡಲ’ದ ವಸ್ತ್ರವಿನ್ಯಾಸ ಮಾಡುವಾಗ ಒಂದು ಟಿಕ್ಕಿ ಸರ ಕಣ್ಣಿಗೆ ಬಿತ್ತು. ಅದೆಷ್ಟು ಇಷ್ಟವಾಯಿತೆಂದರೆ, ಅದರ ಫೋಟೊ ತೋರಿಸಿ ಅದೇ ರೀತಿಯ ಟಿಕ್ಕಿ ಸರ ಮಾಡಿಸಿಕೊಂಡೆ. “ನೀಲಾ’ ಚಿತ್ರದ ವೇಳೆ ಡಾಬು ನೋಡಿದೆ. ಅದೇ ರೀತಿಯ ಬೆಳ್ಳಿ ಡಾಬು ಮಾಡಿಕೊಂಡೆ. ಚಿನ್ನದ್ದು ಕೊಳ್ಳಲು ದುಬಾರಿ ಎನಿಸಿದರೆ ಬೆಳ್ಳಿಯ ಆಭರಣ ಮಾಡಿಸಿಕೊಳ್ಳುತ್ತೇನೆ.
– ನಾಗಾಭರಣರಲ್ಲಿ ನೀವು ಮೆಚ್ಚುವ ಗುಣ ಯಾವುದು?
ನಿಷ್ಠೆ ಮತ್ತು ಕಳಕಳಿ. ತಾವು ಮಾಡುವ ಕೆಲಸಕ್ಕೆ ಅವರು ಯಾವತ್ತೂ ಮೋಸ ಮಾಡುವುದಿಲ್ಲ. ಯಾವತ್ತೂ ನಿರ್ಮಾಪಕರಿಗೆ ತೊಂದರೆ ಮಾಡಿಲ್ಲ.
-ನಿಮ್ಮ ಆಲ್‌ಟೈಮ್ ಫೇವರಿಟ್ ನಟ?
ಅನಂತನಾಗ್
– ನೀವು ಹೆಚ್ಚು ಬಾರಿ ನೋಡಿದ ಸಿನಿಮಾ ಯಾವುದು?
ಕಮಲ್ ಹಾಸನ್ ಅಭಿನಯದ “ಸಾಗರ ಸಂಗಮ’. ಮಣಿರತ್ನಂರ “ರೋಜಾ’ ಕೂಡ ನನ್ನ ಫೇವರಿಟ್. ಆ ಚಿತ್ರದ ಹೀರೊ, ಅರವಿಂದ ಸ್ವಾಮಿಯಷ್ಟು ಚೆನ್ನಾಗಿ ರೋಮ್ಯಾನ್ಸ್ ದೃಶ್ಯದಲ್ಲಿ ಅಭಿನಯಿಸುವ ಮತ್ತೂಬ್ಬ ನಟನನ್ನು ನಾನು ನೋಡಿಲ್ಲ.
– ಚೇತನ ಜೆ.ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.