ಮಕ್ಕಳಿಗಿಂತ “ಮೇಷ್ಟ್ರೇ’ ತರ್ಲೆ ಜಾಸ್ತಿ…
Team Udayavani, Oct 30, 2019, 5:12 AM IST
ದೊಡ್ಡವರಿಂದ ಸಣ್ಣವರು ಕಲಿಯುತ್ತಾರೋ, ಸಣ್ಣವರನ್ನು ನೋಡಿ ದೊಡ್ಡವರು ಕಲಿಯುತ್ತಾರೊ ಅರ್ಥವೇ ಆಗದು. ಶಾಲೆಗೆ ಕಳಿಸಿಕೊಡುವಾಗ ಮಕ್ಕಳ ಹಣೆಗೆ ನಾ ಕೊಡುವ ಸಿಹಿಮುತ್ತು ಇವನ ಎದೆಯಲ್ಲೂ ಅಸೂಯೆ ಹುಟ್ಟಿಸಿಬಿಟ್ಟಿದೆ.
ಬೆಳಗ್ಗೆ ಆಗುವುದೇ ತಡ, ಮಕ್ಕಳನ್ನು ಶಾಲೆಗೆ ಕಳಿಸುವ ಧಾವಂತ. “ಹಾಸಿಗೆ ಬಿಟ್ಟು ಏಳೋ’ ಎಂಬ ಸುಪ್ರಭಾತದಿಂದ ಶುರುವಾಗಿ “ಬೇಗ ಬೇಗ ಸ್ನಾನ ಮುಗಿಸ್ರೋ’, “ತಿಂಡಿ ತಿನ್ರೊ’, “ಹಾಲು ಕುಡೀರೋ’… ಹೀಗೆ ನಿರಂತರ ಮಂತ್ರಪಠನೆ ಸಾಗುತ್ತಲೇ ಇರುತ್ತದೆ.
ಸಣ್ಣ ಮಕ್ಕಳನ್ನು ಹೇಗಾದರೂ ಎಬ್ಬಿಸಬಹುದು. ಈ “ದೊಡ್ಡ ಮಗು’ ವನ್ನು ಎಬ್ಬಿಸುವುದೇ ಒಂದು ಸಾಹಸ. “ಇನ್ನೈದು ನಿಮಿಷ ಮಲಗಿಬಿಡ್ತೀನಿ ಕಣೇ’ ಎನ್ನುವವರನ್ನು ಎಷ್ಟೋ ಬಾರಿ ತಟ್ಟಿಯೇ ಎಬ್ಬಿಸಬೇಕಾಗುತ್ತದೆ. ಈ ಕಡೆ ಬಂದ್ರೆ, ಆ ಕಡೆ ಹೆಂಚಿನ ಮೇಲೆರೆದ ದೋಸೆ ಗೋವಿಂದ! ದೋಸೆ ಎಬ್ಬಿಸುವ ಬಿಸಿ ಸಟ್ಟುಗ ಕೈಯಲ್ಲಿ ಹಿಡಿದು ಬಂದರೆ ಮಾತ್ರ ತಡಬಡಾಯಿಸಿ ಏಳುವುದು!
ಕಿರಿಯ ಮಗನನ್ನು ಏಳು ಗಂಟೆಗೆ ವ್ಯಾನ್ ಹತ್ತಿಸಿದರೆ ಮೂರನೇ ಒಂದಂಶ ಭಾರ ಇಳಿದಂತೆ. ಆಗ ಎರಡನೇ ಮಗನ ಟಿಕ್‌ಟಿಕ್ ಟೈಮರ್ ಶುರು. ಏಳೂವರೆಗೆ ಮತ್ತೂಬ್ಬ ಮಗನೂ ಬಸ್ ಏರಿದರೆ ಉಳಿಯುವವ ಈ “ದೊಡ್ಡ ಮಗ’ ಮಾತ್ರ.
ಅಪ್ಪನೂ ಸ್ಕೂಲಿಗೇ ಹೋಗ್ತಾರೆ ಅಂತ ಮಕ್ಕಳಿಗೆ ಖುಷಿಯೋ ಖುಷಿ. ಅಮ್ಮ, “ಅಪ್ಪಾಜಿ ಎಷ್ಟನೇ ಕ್ಲಾಸು?’ ಎಂಬ ಮುಗ್ಧ ಪ್ರಶ್ನೆ ಅವರಿಂದ ಬಂದದ್ದುಂಟು. “ನಿಮ್ಮಪ್ಪ ಟೀಚರ್ರು ಕಣೊ’ ಎಂದು ಹೇಳಿದರೆ ನಂಬಿಕೆಯೇ ಬರಲ್ಲ ಅವಕ್ಕೆ. “ಅಪ್ಪಾಜಿ ಟೀಚರ್ರಾ?’ ಅನ್ನುವ ಅವರ ಆಶ್ಚರ್ಯವಾಚಕ ವಾಕ್ಯ ನನಗೇನೂ ಅಚ್ಚರಿ ಮೂಡಿಸಲಿಲ್ಲ. “ನಾನು ಸ್ಕೂಲಲ್ಲಿ ಮಾತ್ರ ಟೀಚರ್ ಕಣೊ ಮನೆಯಲ್ಲಿ ನಮಗೆಲ್ಲ ನಿಮ್ಮಮ್ಮನೇ ಟೀಚರು’ ಎಂದು ಬೆನ್ನು ತುರಿಕೆ ಬಂದವರಂತೆ ಮಾತನಾಡುವವರಿಗೆ, ಗುದ್ದದೇ ಇರುವುದಾದರೂ ಹೇಗೆ?
ಸಣ್ಣ ಮಕ್ಕಳೆಲ್ಲ ಮನೆ ಬಿಟ್ಟ ಮೇಲೆ ಈ ದೊಡ್ಡ ಮಗನನ್ನು ಸುಧಾರಿಸುವುದೇ ಆಗುತ್ತದೆ. ಹಿಂದಿನ ರಾತ್ರಿ ಎಲ್ಲಾ ಕೆಲಸ ಮುಗಿಸಿ ತೂಕಡಿಸುತ್ತಲೇ ಗರಿಮುರಿಯಾಗಿ ಇಸ್ತ್ರಿ ಮಾಡಿಟ್ಟ ಪ್ಯಾಂಟ್-ಶರ್ಟ್ ಏರಿಸಿಕೊಳ್ಳುವಾಗಲೂ ಕೀಟಲೆಯೇ. “ಈ ಪ್ಯಾಂಟಿನ ಹುಕ್ ಲೂಸ್ ಆಗಿದ್ಯಲ್ಲೇ’ ಅಂತಲೋ “ಶರ್ಟ್ ನ ಬಟನ್ ಬಿದ್ದು ಹೋಗಿದೆ ಕಣೇ’ ಅಂತಲೋ ಕರೆಯೋದು. ಸೂಜಿ-ದಾರ ಹಿಡ್ಕೊಂಡು ಬಂದ್ರೆ, “ಈಗಾಗಲೇ ಅರ್ಧ ಹಾಕ್ಕೊಂಡು ಬಿಟ್ಟಿದ್ದೀನಿ, ಇಲ್ಲೇ ಹೊಲಿದು ಬಿಡೇ’ ಅಂತ ಕಾಡುವುದು!
ದೊಡ್ಡವರಿಂದ ಸಣ್ಣವರು ಕಲಿಯುತ್ತಾರೋ, ಸಣ್ಣವರನ್ನು ನೋಡಿ ದೊಡ್ಡವರು ಕಲಿಯುತ್ತಾರೊ ಅರ್ಥವೇ ಆಗದು. ಶಾಲೆಗೆ ಕಳಿಸಿಕೊಡುವಾಗ ಮಕ್ಕಳ ಹಣೆಗೆ ನಾ ಕೊಡುವ ಸಿಹಿಮುತ್ತು ಇವನ ಎದೆಯಲ್ಲೂ ಅಸೂಯೆ ಹುಟ್ಟಿಸಿಬಿಟ್ಟಿದೆ. ಟಿಫಿನ್ ಬಾಕ್ಸ್ ಮತ್ತು ವಾಟರ್ ಬಾಟಲ್ ಹಾಕಿಕೊಂಡ ಬ್ಯಾಕ್ ಪ್ಯಾಕ್‌ನ್ನು ಸ್ಕೂಲ್ ಬ್ಯಾಗ್ ಶೈಲಿಯಲ್ಲೇ ಹೆಗಲಿಗೇರಿಸಿಕೊಂಡು ಹೊರಡುವಾಗ ತನ್ನ ಕೆನ್ನೆಯನ್ನು ನನ್ನ ಮುಖದ ಮುಂದೆ ತರುತ್ತಾನೆ. ಅದಕ್ಕೆ ಮೆಲ್ಲನೆ ಒಂದು ಪೆಟ್ಟು ಕೊಟ್ಟೋ, ಚಿವುಟಿಯೋ ಅಥವಾ ಅಪೇಕ್ಷಿತ “ಮಾಮೂಲಿ’ ಕೊಟ್ಟೋ ಈ ದೊಡ್ಡ ಮಗನನ್ನು ಸಾಗಹಾಕಿ ನಿರಾಳತೆಯ ಉಸಿರನ್ನು ಒಳಗೆಳೆದುಕೊಳ್ಳುತ್ತೇನೆ ಸೋಫಾದಲ್ಲಿ ಕುಳಿತು. ಮುಂದಿನ ಕೆಲಸ ನೆನಪಾಗುವಲ್ಲಿಯವರೆಗೆ ಮಾತ್ರ…
ಶರ್ವಾಣಿ ಭಟ್, ಗೋವಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.