ಶ್ರೇಷ್ಠತೆಯ ವ್ಯಸನ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ...
Team Udayavani, Sep 25, 2019, 5:00 AM IST
ಓ, ಅದಾ, ನಂಗೇನ್ ಗೊತ್ತಿಲ್ಲ ಅಂದ್ಕೊಂಡ್ರಾ?
ನಾನೂ ದಿನಾ ಮನೆಯಲ್ಲಿ ಮುಂಜಾನೆ ಯೋಗಾಭ್ಯಾಸ, ಪ್ರಾಣಾಯಾಮ ಮಾಡ್ತೇನೆ. ಯೋಗವನ್ನು ಶಾಂತವಾಗಿ, ನಿಶ್ಶಬ್ದವಾಗಿ ಮಾಡಬೇಕು. ಗುಂಪಿನಲ್ಲಿ ಗೋವಿಂದ ಅಂತ ಭಾಗವಹಿಸೋದು, ಫೇಸ್‌ಬುಕ್‌ನಲ್ಲಿ ಸೆಲ್ಫಿ ಹಾಕೋದು ಇಂಥದ್ದೆಲ್ಲ ನಂಗಿಷ್ಟವಾಗಲ್ಲ. ನಾನು ಯೋಗ ಮಾಡ್ತೀನಿ ಅಂತ ಊರಿಗೆಲ್ಲಾ ಸಾರುವುದ್ಯಾಕೆ?
ಅದೊಂದು ದಿನ, ಕೆಲಸದ ನಿಮಿತ್ತ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಆಗ ತಾನೇ ಪರಿಚಯವಾದ ಸಹಪ್ರಯಾಣಿಕರೊಬ್ಬರು, ನಾನು ಧರಿಸಿದ್ದ ಬಟ್ಟೆಯನ್ನು ನೋಡುತ್ತಾ “ಕುರ್ತಾ ಚೆನ್ನಾಗಿದೆ, ಎಲ್ಲಿಂದ ತಗೊಂಡ್ರಿ? ಎಷ್ಟು ಕೊಟ್ರಿ?’ ಅಂತ ಕೇಳಿದರು. ಅದು, ಯಾವುದೋ ಸೇಲ್ಸ್ ನಲ್ಲಿ ಕೊಂಡ ಬಟ್ಟೆಯಾಗಿತ್ತು. ಹಾಗೆಯೇ ಹೇಳಿದೆ. ತಕ್ಷಣ ಅವರು – “ಎಗ್ಸಿಬಿಷನ್ ಕಮ್ ಸೇಲ್ಸ್ ಇರೋ ಕಡೆ ಕ್ವಾಲಿಟಿ ಇರಲ್ಲ. ಮಾಲ್‌ಗಳಲ್ಲಾದರೆ ಬ್ರಾಂಡೆಡ್ ಐಟಂ ಸಿಗುತ್ತೆ. ನಾವೆಲ್ಲ ಅಂಥಾ ಕಡೆ ಡ್ರೆಸ್ ತಗೊಳ್ಳಲ್ಲ. ಹೊಲಿಸಿದ ಬಟ್ಟೆ ಹಾಕುವುದೇ ಜಾಸ್ತಿ. ನಾನು ಬಟ್ಟೆ ಹೊಲಿಸುವ ಕಡೆ ಸ್ಟಿಚ್ಚಿಂಗ್ ಸ್ಟಾಂಡರ್ಡ್ ಆಗಿರುತ್ತೆ. ಆದರೆ, ರೇಟ್ ತುಂಬಾ ಜಾಸ್ತಿ. ಕ್ವಾಲಿಟಿ ಬೇಕೆಂದರೆ ದುಡ್ಡು ಬಿಚ್ಲೇಬೇಕು..’ ಹೀಗೆ ಏನೇನೋ ಹೇಳಿದರು. ಅವರು ಎಲ್ಲಿ ಬಟ್ಟೆ ಖರೀದಿಸುತ್ತಾರೆ, ಯಾವ ಟೈಲರ್ ಬಳಿ ಹೊಲಿಸುತ್ತಾರೆ ಅಂತ ನಾನು ಕೇಳಿರಲೇ ಇಲ್ಲ. ಹಾಗಾಗಿ ಈ ಮಾತು ಅಪ್ರಸ್ತುತ ಎನಿಸಿತು.
ಅವರ ಬಳಿ ಮಾತು ಮುಂದುವರಿಸಲು ಇಷ್ಟವಾಗದೆ, ನನ್ನ ಪಾಡಿಗೆ ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡುತ್ತಿದ್ದೆ. ನನ್ನ ಒಂದೆರಡು ಫೊಟೊಗಳನ್ನು ಗಮನಿಸಿದ ಅವರು “ಓಹೋ, ನೀವೆಲ್ಲಾ ಯೋಗಾಭ್ಯಾಸಕ್ಕೆ ಹೋಗಿದ್ರಾ? ನಾನೂ ದಿನಾ ಮನೆಯಲ್ಲಿ ಮುಂಜಾನೆ ಯೋಗಾಭ್ಯಾಸ, ಪ್ರಾಣಾಯಾಮ ಮಾಡ್ತೇನೆ. ಯೋಗವನ್ನು ಶಾಂತವಾಗಿ, ನಿಶ್ಶಬ್ದವಾಗಿ ಮಾಡಬೇಕು. ಗುಂಪಿನಲ್ಲಿ ಗೋವಿಂದ ಅಂತ ಭಾಗವಹಿಸೋದು, ಫೇಸ್‌ಬುಕ್‌ನಲ್ಲಿ ಸೆಲ್ಫಿ ಹಾಕೋದು ಇಂಥದ್ದೆಲ್ಲ ನಂಗಿಷ್ಟವಾಗಲ್ಲ. ನಾನು ಯೋಗ ಮಾಡ್ತೀನಿ ಅಂತ ಊರಿಗೆಲ್ಲಾ ಸಾರುವುದ್ಯಾಕೆ? ಇನ್ನು ನೂರಾರು ಜನ ಸೇರೋ ಕಡೆ ಧೂಳು, ಗಲಾಟೆ ಇರುತ್ತೆ. ಚೂರೂ ಶಿಸ್ತಿರಲ್ಲ…’ ಅಂದರು.
ನನ್ನನ್ನು ತಾನಾಗಿಯೇ ಮಾತಿಗೆಳೆಯುತ್ತಾ, ಅನವಶ್ಯಕವಾಗಿ ಸಾಮೂಹಿಕ ಕಾರ್ಯಕ್ರಮದ ಬಗ್ಗೆ ತನ್ನ ಅಭಿಪ್ರಾಯ, ಟೀಕೆ ಹಾಗೂ ತಾನೇಕೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲವೆಂಬ ವಿವರಣೆ ಕೊಟ್ಟರು. “ಒಬ್ಬೊಬ್ಬರ ಅಭಿರುಚಿ ಒಂದೊಂದು ರೀತಿ ಇರುತ್ತೆ. ಅದು ಅವರವರ ಇಷ್ಟ’ ಅನ್ನುತ್ತಾ, ನನಗೆ ಮಾತು ಮುಂದುವರಿಸಲು ಇಷ್ಟವಿಲ್ಲ ಎಂಬಂತೆ ಕಿಟಿಕಿಯಿಂದ ಹೊರಗೆ ನೋಡಲಾರಂಭಿಸಿದೆ.
ರಿಸರ್ವೇಶನ್ ಟಿಕೆಟ್ ಆದ ಕಾರಣ, ಬೇರೆ ಜಾಗದಲ್ಲಿ ಕೂರುವಂತಿರಲಿಲ್ಲ. ನಿಗದಿತ ಪ್ರಯಾಣ ಮುಗಿಯುವವರೆಗೆ ಅವರನ್ನು ಸಹಿಸಿಕೊಳ್ಳಲೇಬೇಕಿತ್ತು. ಸಾಧ್ಯವಾದರೆ ನನ್ನ ಪಾಡಿಗೆ ಓದುವುದು ಅಥವಾ ಓದುವಂತೆ ನಟಿಸಿ, ಅನವಶ್ಯಕ ಮಾತಿನಿಂದ ಪಾರಾಗೋಣ ಎಂದು ಪುಸ್ತಕವೊಂದನ್ನು ಕೈಗೆತ್ತಿಕೊಂಡೆ. ಅವರು ಅದನ್ನೂ ಬಿಡಲಿಲ್ಲ. ಪುಸ್ತಕದ ಮುಖಪುಟವನ್ನೊಮ್ಮೆ ನೋಡಿ “ಓಹೋ, ಅವ್ರ ಪುಸ್ತಕವಾ? ಗೊತ್ತು ಬಿಡಿ, ಬರೀ ಬಂಡಲ್ ರೈಟಿಂಗ್. ಅವರೊಬ್ಬರೇ ಫಾರಿನ್ ಪ್ರವಾಸ ಮಾಡಿರೋದಾ? ಬೇರೆ ಯಾರೂ ಟ್ರಾವೆಲ್ ಮಾಡಲ್ವಾ? ಅದನ್ನೇನು ದೊಡ್ಡ ವಿಷ್ಯಾಂತ ಊರಿಗೆಲ್ಲಾ ಹೇಳ್ಕೊಂಡು ಪುಸ್ತಕ ಬೇರೆ ಬರೆಯೋದು…ನಾವೂ ಎಷ್ಟೊಂದು ಕಡೆ ಸುತ್ತುತ್ತೇವೆ…ನಾವು ಅಮೆರಿಕ ಕಂಡಿಲ್ವಾ? ಮಗ ಜರ್ಮನಿಲೇ ಇರೋದು…ಮಗ್ಳು ಕೆನಡಾದಲ್ಲಿ…ವರ್ಷಕ್ಕೊಂದು ಟೂರ್ ಗ್ಯಾರಂಟಿ. ಆದ್ರೆ ನಾವು ಹಾಗೆಲ್ಲಾ ಹೇಳ್ಕೊಳ್ಳಲ್ಲ..’ ಅನ್ನುತ್ತಲೇ ತಾವು ಎಲ್ಲೆಲ್ಲಿ ಹೋಗಿ ಬಂದಿದ್ದೇವೆಂದು ಹೇಳಿ ಮುಗಿಸಿದರು!
ಪ್ರವಾಸದ ಬಗ್ಗೆ ಪುಸ್ತಕ ಬರೆದು ಕೊಚ್ಚಿಕೊಳ್ತಾರೆ ಅನ್ನುವವರೇ ತಮ್ಮ ಫಾರಿನ್ ಟ್ರಿಪ್ ಬಗ್ಗೆ ಹೆಮ್ಮೆಯಿಂದ ಹೇಳಿದ್ದನ್ನು ಕೇಳಿ ನಗು ಬಂತು. ಶ್ರೇಷ್ಠತೆಯ ವ್ಯಸನ ಅಂಟಿಕೊಂಡರೆ ಹೀಗೆಲ್ಲಾ ಆಗಿಬಿಡುತ್ತದೆ; ಆಗುತ್ತಲೇ ಇರುತ್ತದೆ…
– ಹೇಮಮಾಲಾ ಬಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ
Ullala: ಬಿದ್ದು ಸಿಕ್ಕಿದ್ದ 2.5 ಲ.ರೂ. ಮೌಲ್ಯದ ಚಿನ್ನಾಭರಣ ಮರಳಿಸಿದ ಯುವಕ!
Mangaluru:ವಿಮಾನ ನಿಲ್ದಾಣದಲ್ಲಿ ಕಳೆದು ಹೋದ ಚಿನ್ನದ ಸರ; ಮಾಲಕರಿಗೆ ಒಪ್ಪಿಸಿದ ಸಿಐಎಸ್‌ಎಫ್
ಇಂದು ರಾಜ್‌ಕೋಟ್ ಫೈಟ್ ; ಸರಣಿ ಗೆಲುವಿಗೆ ಒಂದೇ ಮೆಟ್ಟಿಲು; ಒತ್ತಡದಲ್ಲಿ ಇಂಗ್ಲೆಂಡ್
Mulki: ಸೌದಿಯಲ್ಲಿ ಕಾರು ಚಲಾಯಿಸುವ ವೇಳೆಯೇ ಹೃದಯಾಘಾತ: ಕ್ರಿಕೆಟಿಗ ಮನ್ಸೂರ್ ಸಾವು