ಪೆಟ್ಟಿಗೆ ಅಂಗಡಿಯ ಪತಂಗ
Team Udayavani, Feb 7, 2018, 4:55 PM IST
ಭಾರತದಲ್ಲಿ ಮಧ್ಯಮವರ್ಗದ ಜೀವನ ನಡೆಸುವ ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಈ ರೀತಿಯ ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ ಕಲ್ಪಿಸಿಕೊಡುವುದು ವಿರಳಾತಿ ವಿರಳ. ಆದರೆ, ನೇಪಾಳದಲ್ಲಿ ಹಾಗಲ್ಲ…
ನಮ್ಮ ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ಹಸಿರುಬೆಟ್ಟ, ಕಂದು ಬೆಟ್ಟ ಅಥವಾ ಹಿಮಚ್ಛಾದಿತವಾದ ಬೆಳ್ಳಿಬೆಟ್ಟಗಳದ್ದೇ ಒಡ್ಡೋಲಗ. ಇಂಥ ಕಠಿಣ ಭೌಗೋಳಿಕ ಪರಿಸರದಲ್ಲಿ ಬದುಕು ರೂಪಿಸಿಕೊಳ್ಳುವ ನೇಪಾಳಿ ಜನರು ಬಹಳ ಶ್ರಮಜೀವಿಗಳು. ನಾನು ಗಮನಿಸಿದಂತೆ, ನೇಪಾಳದಲ್ಲಿ ಹೆಚ್ಚಿನ ಅಂಗಡಿ ಮುಂಗಟ್ಟುಗಳನ್ನು ಮತ್ತು ಹೋಟೆಲ್‌ಗಳನ್ನು ಮಹಿಳೆಯರೇ ನಿಭಾಯಿಸುತ್ತಾರೆ. ಹೊಲ ಗದ್ದೆಗಳಲ್ಲಿಯೂ ಪುಟ್ಟಮಗುವನ್ನು ಬಟ್ಟೆಯ ಜೋಲಿಯಲ್ಲಿ ಬೆನ್ನಿಗೆ ಕಟ್ಟಿಕೊಂಡು ದುಡಿಯುವ ಮಹಿಳೆಯರೂ ಕಾಣಿಸುವುದುಂಟು!
ಈ ವರ್ಷದ ಆರಂಭದಲ್ಲಿ ನೇಪಾಳ ಪ್ರವಾಸ ಕೈಗೊಂಡಿದ್ದೆ. ಭಾರತ ಮತ್ತು ನೇಪಾಳದ ಗಡಿ ಪ್ರದೇಶವಾದ ಸೋನಾಲಿ ಬಾರ್ಡರ್ ದಾಟಿ, ಸುಮಾರು 4-5 ಗಂಟೆ ಪ್ರಯಾಣಿಸಿ, ಗುಡಾದಿ ಎಂಬ ಹಳ್ಳಿಯಲ್ಲಿ ಊಟಕ್ಕಾಗಿ ನಮ್ಮ ಬಸ್ಸು ನಿಂತಿತ್ತು. ಅಲ್ಲಿ ಕಾಣಸಿಕ್ಕಿದ ಪುಟ್ಟ ಪೆಟ್ಟಿಗೆ ಅಂಗಡಿಯೊಂದರಲ್ಲಿ ಬಹಳಷ್ಟು ಸಾಮಗ್ರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು.
ಹಸನ್ಮುಖೀಯಾದ ತರುಣಿಯೊಬ್ಬಳು ಆ ಅಂಗಡಿಯನ್ನು ನಿಭಾಯಿಸುತ್ತಿದ್ದಳು. ಅನುಕೂಲಸ್ಥ ಮನೆಯ ಕಾಲೇಜು ಹುಡುಗಿಯಂತೆ ಕಾಣುತ್ತಿದ್ದ ಆಕೆಗೆ ಇಂಗ್ಲಿಷ್ ಮಾತನಾಡಲು ಬರುತ್ತಿದ್ದುದರಿಂದ ಮಾತಿಗೆಳೆದೆವು. ಪ್ರಶಂಸಾ ಎಂಬ ಹೆಸರಿನ ಆಕೆ ಮ್ಯಾನೇಜ್‌ಮೆಂಟ್ ಪದವಿ ಓದುತ್ತಿರುವ ವಿದ್ಯಾರ್ಥಿನಿ ಎಂದು ತಿಳಿದಾಗ ನಮಗೆ ಅಚ್ಚರಿ. ಸಾಮಾನ್ಯವಾಗಿ, ನಮ್ಮಲ್ಲಿ, ಕಲಿಕೆಯ ಜತೆಗೆ ಗಳಿಕೆ ಮಾಡುವ ವಿದ್ಯಾರ್ಥಿಗಳು ಬಡಕುಟುಂಬದವರಾಗಿರುತ್ತಾರೆ.
ಬಹುಶಃ ಮನೆಯಲ್ಲಿ ಆರ್ಥಿಕವಾಗಿ ಕಷ್ಟವಿರಬೇಕು, ಹಾಗಾಗಿ ಓದುವುದರ ಜೊತೆಗೆ ಅಂಗಡಿಯನ್ನು ನಿಭಾಯಿಸುತ್ತಿದ್ದಾಳೆ ಎಂಬ ಅಭಿಪ್ರಾಯದಿಂದ ಹಾಗೂ ಮೆಚ್ಚುಗೆಯಿಂದಲೇ ಆಕೆಯ ತಂದೆತಾಯಿಗಳು ಏನು ಉದ್ಯೋಗ ಮಾಡುತ್ತಾರೆ, ಎಲ್ಲಿದ್ದಾರೆ ಇತ್ಯಾದಿ ಕೇಳಿದೆವು. ಆಗ ಆಕೆ, “ಇಬ್ಬರೂ ಟೀಚರ್ಸ್, ಇದೇ ನಮ್ಮ ಮನೆ’ ಎಂದು ಎದುರುಗಡೆ ಇದ್ದ, ಮಧ್ಯಮವರ್ಗದವರು ವಾಸಿಸುವಂಥ ಮನೆಯನ್ನು ತೋರಿಸಿದಳು!
ಹಾಗಾದರೆ, ನೀನು ಕಾಲೇಜಿಗೆ ಹೋದಾಗ ಅಂಗಡಿಯನ್ನು ಯಾರು ನಿರ್ವಹಿಸುತ್ತಾರೆ ಎಂದು ಕೇಳಿದಾಗ, ಆಕೆ ನಗುತ್ತಾ, “ನನಗೆ ಬಿಡುವಿದ್ದಾಗ ಮಾತ್ರ ಅಂಗಡಿ ತೆರೆಯುತ್ತೇನೆ’ ಅಂದಳು. ಆಕೆ ಕಾಲೇಜು ಮುಗಿಸಿ ಬಂದ ಮೇಲೆ, ತನ್ನ ಪಾಕೆಟ್ ಮನಿಗಾಗಿ, ದಿನಕ್ಕೆ ಒಂದೆರಡು ಗಂಟೆ ಅಂಗಡಿಯನ್ನು ನಿರ್ವಹಿಸುತ್ತಾಳಂತೆ! ಈಗ ಪ್ರಶಂಸಾಳನ್ನು ಪ್ರಶಂಸಿಸುವ ಸರದಿ ನಮ್ಮದಾಯಿತು.
ಭಾರತದಲ್ಲಿ ಮಧ್ಯಮವರ್ಗದ ಜೀವನ ನಡೆಸುವ ತಂದೆ- ತಾಯಿಯರು ತಮ್ಮ ಮಕ್ಕಳಿಗೆ ಈ ರೀತಿಯ ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ ಕಲ್ಪಿಸಿಕೊಡುವುದು ವಿರಳಾತಿ ವಿರಳ. ಬಹುತೇಕ ಮಧ್ಯಮವರ್ಗದ ಮಕ್ಕಳಿಗೆ, ತಮ್ಮ ಪೋಷಕರು ಕೊಟ್ಟರೆ ಮಾತ್ರ ಕೈಯÇÉೊಂದಿಷ್ಟು ದುಡ್ಡು ಇರುತ್ತದೆ. ಆ ವಯಸ್ಸಿನಲ್ಲಿ ಆರ್ಥಿಕ ಸ್ವಾತಂತ್ರದ ಕಲ್ಪನೆ ಬಹುತೇಕ ಇಲ್ಲ.
ಇನ್ನು, ಮಹಿಳೆಯರು ಹಣಕಾಸು ವ್ಯವಹಾರಕ್ಕೆ ಅಸಮರ್ಥರು ಎಂಬಂತೆ ಬಿಂಬಿಸುತ್ತಿದ್ದ ಕಾಲವೊಂದಿತ್ತು. ಇತ್ತೀಚೆಗೆ ಈ ಮನೋಭಾವ ಬದಲಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ತಾನು ವಿದ್ಯಾವಂತೆಯಾಗಿದ್ದರೂ, ಉದ್ಯೋಗಕ್ಕೆ ಹೋಗದ ಕಾರಣ, ತಮ್ಮದೇ ಆದ ಆದಾಯವಿಲ್ಲದೆ, ಆರ್ಥಿಕ ಸ್ವಾತಂತ್ರವಿಲ್ಲದೆ ಗೃಹಿಣಿಯರು ಹಳಹಳಿಸುವುದಿದೆ.
ಮಕ್ಕಳು ತಮ್ಮ ಖರ್ಚಿಗೆ ಅಮ್ಮನ ಬಳಿ ಹಣ ಕೇಳಿದಾಗ, ತನ್ನ ಬಳಿ ಇಲ್ಲದೆ ಅಸಹಾಯಕರಾಗುವ ತಾಯಿಯರೂ ಇದ್ದಾರೆ. ಮನೆಯ ಆರ್ಥಿಕ ಸಮೃದ್ಧಿಗೂ, ಮನೆಯಾಕೆಯ ಆರ್ಥಿಕ ಸ್ವಾತಂತ್ರಕ್ಕೂ ನೇರ ಸಂಬಂಧವಿರುವುದಿಲ್ಲ. ಬಡವಳಾದರೂ ತನ್ನ ಸಂಪಾದನೆಯ ಹಣದಿಂದ ತನ್ನ ಮಗುವಿಗೆ ಲಾಲಿಪಾಪ್ ಕೊಡಿಸಬಲ್ಲ ತಾಯಿಯ ಆರ್ಥಿಕ ಸ್ವಾತಂತ್ರದ ಎದುರು,
ಶ್ರೀಮಂತೆಯಾದರೂ ಪ್ರತಿ ಖರ್ಚಿಗೂ ಗಂಡನ ಮುಂದೆ ಕೈಚಾಚಬೇಕಾದ ಮಹಿಳೆಯ ಅವ್ಯಕ್ತ ಅಸಹಾಯಕತೆ ಎದ್ದು ಕಾಣುತ್ತದೆ. ಇದಕ್ಕೆ ಅಪವಾದವೆಂಬಂತೆ, ಪತ್ನಿಯ ಬಳಿ ಧಾರಾಳವಾಗಿ ಹಣ ಕೊಟ್ಟು ಆಕೆಗೆ ಮುಜುಗರ, ಕೀಳರಿಮೆ ಉಂಟಾಗದಂತೆ ಕಾಳಜಿ ವಹಿಸುವವರೂ ಇರುತ್ತಾರೆ. ಉದ್ಯೋಗಸ್ಥ ಮಹಿಳೆಯಾಗಿದ್ದರೂ, ಗೃಹಿಣಿಯಾಗಿದ್ದರೂ, ತಮ್ಮ ಕನಿಷ್ಠ ಬೇಡಿಕೆಗಳಿಗೆ ಬೇಕಾಗುವಷ್ಟು ಆರ್ಥಿಕ ಸ್ವಾತಂತ್ರವನ್ನು ಹೊಂದಿರುವುದು ಈ ಕಾಲದ ಅಗತ್ಯ.
* ಹೇಮಮಾಲಾ ಬಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.