ದೇವರು “ಜ್ವರ’ವನು ಕೊಟ್ರೆ…


Team Udayavani, Dec 5, 2018, 6:00 AM IST

d-14.jpg

ಮಕ್ಕಳ ಆರೋಗ್ಯದಲ್ಲಿ ಸಣ್ಣದೊಂದು ಏರುಪೇರಾದರೂ ಅಮ್ಮನಿಗೆ ಗೊತ್ತಾಗಿ ಹೋಗುತ್ತದೆ. ಮಗುವಿಗೆ ಸಣ್ಣದೊಂದು ತೊಂದರೆಯೂ ಆಗದಂತೆ ನೋಡಿಕೊಳ್ಳಲು ಅಮ್ಮ ಮುಂದಾಗುತ್ತಾಳೆ. ಹೆಚ್ಚಿನ ಸಂದರ್ಭದಲ್ಲಿ ಯಶಸ್ವಿಯೂ ಆಗುತ್ತಾಳೆ. ಈ ಸಂದರ್ಭದಲ್ಲಿ ಅಮ್ಮನಿಗೆ ಅರ್ಥವಾಗುವ ಗುಟ್ಟುಗಳು, ಆಕೆ ಕಲಿಯು(ಸು)ವ ಪಾಠಗಳು… ಇವುಗಳ ಸುತ್ತ ಒಂದು ಇಣುಕು ನೋಟ.

ಒಂದಂತೂ ಸತ್ಯ. “ಅಮ್ಮ’ನಿಗೆ ತನ್ನ ಆರೋಗ್ಯದಲ್ಲಿ ಏರುಪಾರಾದರೂ ಪರವಾಗಿಲ್ಲ, ಮಕ್ಕಳ ಆರೋಗ್ಯ ಮಾತ್ರ ಸರಿ ಇರಬೇಕು! ಮಕ್ಕಳಿಗೆ ಜ್ವರ ಬಂದಾಗ, ಕೆಮ್ಮು- ನೆಗಡಿಯಾದಾಗ ನೆರೆ ಹೊರೆಯ ಮನೆಗಳ ಅಮ್ಮಂದಿರು ಪಡುವ ಪಾಡನ್ನು ಸ್ವಲ್ಪ ನೋಡಿ. ಈ ಮಾತು ಸತ್ಯ ಎಂದು ನಿಮಗೇ ಗೊತ್ತಾಗುತ್ತದೆ. ನಾನು ಒಬ್ಬ ವೈದ್ಯೆಯಾಗಿ, ಎರಡು ಮಕ್ಕಳ ತಾಯಿಯಾಗಿ ಈ ಬಗ್ಗೆ ಬಹಳಷ್ಟು ಬಾರಿ ಯೋಚಿಸಿದ್ದೇನೆ. ಮಹಿಳೆಯರು ಮಕ್ಕಳ ಪಾಲನೆಯಲ್ಲಿ ತಮ್ಮನ್ನು ತಾವು ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವ ರೀತಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಅನಿಸುತ್ತದೆ. “ನನ್ನ ಮಗುವೆಂದರೆ ನಾನು’ ಎಂದುಕೊಳ್ಳುವ ತಾಯಿಯ ಮನಸ್ಸು ಸಹಜವಾಗಿ, ಜ್ವರ- ನೆಗಡಿಯಂಥ ಸಾಮಾನ್ಯ ಕಾಯಿಲೆಗಳಿಂದ ಆರಂಭಿಸಿ ದೀರ್ಘ‌ಕಾಲಿಕ ಕಾಯಿಲೆಗಳಾದ ಸಕ್ಕರೆ ಕಾಯಿಲೆ, ಅಸ್ತಮಾವರೆಗೂ ಹೆದರುತ್ತದೆ. 

ಮಕ್ಕಳ ಬಗೆಗೆ ರಕ್ಷಣಾತ್ಮಕ ತಾಯಿ ಭಾವನೆ- Protective maternal instinct ಹೊಂದಿರುವ ತಾಯಿಗೆ, ಕಾಯಿಲೆಯ ವಿರುದ್ಧ ತನ್ನ ಮಗುವನ್ನು ರಕ್ಷಿಸುವುದು ಪ್ರಾಕೃತಿಕವಾಗಿಯೇ ಮೊದಲ ಆದ್ಯತೆ ಎನಿಸಿಬಿಡುತ್ತದೆ. ಹಾಗೆ ನೋಡಿದರೆ, ಮಕ್ಕಳ ಬಾಲ್ಯದ ಬಗೆಗೆ ಯಾವುದಾದರೊಂದು ಸ್ಮರಣೀಯ ಅನುಭವ ಅಥವಾ ಮರೆಯಲಾಗದ ಅನುಭವದ ಬಗೆಗೆ ಕೇಳಿದರೆ, ಹೆಚ್ಚಿನ ತಾಯಂದಿರು ನೆನಪಿಸಿಕೊಳ್ಳುವುದು “ಮಕ್ಕಳಿಗೆ ತುಂಬಾ ಜ್ವರ/ಭೇದಿ ಇತ್ಯಾದಿ ಇತ್ಯಾದಿಯಾಗಿದ್ದ ಸಂದರ್ಭದಲ್ಲಿ, ಹೇಗೆ ತಾವು ಅವರನ್ನು ಬದುಕಿಸಿಕೊಂಡೆವು’ ಎಂಬ ಬಗ್ಗೆಯೇ!

ಮಗು ಬೆಳಗಿನಿಂದ ಚೆನ್ನಾಗಿಯೇ ಇತ್ತು. ರಾತ್ರಿ ಮಲಗಿದ ನಂತರ ಮೈ ಬಿಸಿಯಾಗಲು ತೊಡಗಿ, ಕಡೆಗೆ ಜ್ವರಾನೇ ಬಂದುಬಿಟ್ಟಿದೆ ಎಂದೋ, ಮಧ್ಯರಾತ್ರಿ ಮಗು ಎದ್ದು ಅಳಲು ಶುರುಮಾಡಿತು ಎಂದೋ ಅಮ್ಮಂದಿರು ಹೇಳುವುದನ್ನು ಕೇಳಿರುತ್ತೀರಿ ತಾನೆ? ಮಕ್ಕಳಿಗೆ ಹೆಚ್ಚಾಗಿ, ರಾತ್ರಿಯ ಹೊತ್ತೇ ಅನಾರೋಗ್ಯ ಉಂಟಾಗಲು ವೈಜ್ಞಾನಿಕ ಕಾರಣವೂ ಇದೆ. ಸೋಂಕಿನ ವಿರುದ್ಧ ಹೋರಾಡುವ, ದೇಹದ ರಕ್ಷಣಾ ವ್ಯವಸ್ಥೆಯ “ಕಾರ್ಟಿಸಾಲ್‌’ ಎಂಬ ಹಾರ್ಮೋನು ರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಆಗ ರೋಗದ ಆರ್ಭಟ ಹೆಚ್ಚಾಗುತ್ತದೆ. ಅದರೊಂದಿಗೆ ಮಕ್ಕಳ ಅಳುವೂ ಹೆಚ್ಚುತ್ತದೆ, ಜೊತೆಗೆ “ಅಮ್ಮ’ನ ಗಾಬರಿಯೂ! ಇದು ವೈಜ್ಞಾನಿಕ ಕಾರಣವಾದರೆ, ಮಗುವಿಗೆ ಅನಾರೋಗ್ಯ ಎಂದು ತಿಳಿದಾಕ್ಷಣ ಅಮ್ಮ ಗಾಬರಿಯಾಗುತ್ತಾಳೆ. ಆ ಗಾಬರಿಗೇ ಅರ್ಧ ನಿದ್ರೆ ಮಾಯವಾಗುತ್ತದೆ. ಜೊತೆಗೆ, ದಿನದ ಕೆಲಸದ ದಣಿವು, ಮತ್ತೆ ಮರುದಿನದ ಕೆಲಸ ಮಾಡಬೇಕಾದ ಅನಿವಾರ್ಯ, ಹಾಗೆ ಮಾಡಲು ಸಾಧ್ಯವಾಗುವುದೋ ಇಲ್ಲವೋ ಎಂಬ ಆತಂಕ… ಇವೆಲ್ಲವೂ ಸೇರಿ ಭಯ- ಆತಂಕಗಳ ವಾತಾವರಣ ಸೃಷ್ಟಿಯಾಗುತ್ತದೆ. ಕಾಯಿಲೆ ಶೇ.50ರಷ್ಟೇ ಆಗಿದ್ದರೂ, ಅದನ್ನು ಶೇ.100 ಎನಿಸುವಂತೆ ಮಾಡಿ ಬಿಡುತ್ತದೆ.

ಎಲ್ಲವನ್ನೂ ಭಾವನಾತ್ಮಕವಾಗಿ ನೋಡುವ ಹೆಣ್ಣು ಗುಣ, ಪ್ರಾಯೋಗಿಕವಾಗಿ ನೋಡುವ ಗಂಡು ಗುಣ, ಇಲ್ಲಿಯೂ ಮಕ್ಕಳ ಅಮ್ಮ-ಅಪ್ಪಂದಿರಲ್ಲಿ ಅನುಭವಕ್ಕೆ ಬರುತ್ತದೆ. ಮಗುವಿಗೆ “ಜ್ವರ’ ಎಂದು ಅತೀವ ಆತಂಕ ತೋರುವ ಅಮ್ಮ, ಈ ಆತಂಕವೇ “ಆರೈಕೆ’ಯಾಗಿ ಮಗುವಿನ ರಕ್ಷಣೆ ಮಾಡುತ್ತದೆ ಎಂದು ನಂಬುತ್ತಾಳೆ. ಹಾಗೆ ಆತಂಕ ಪಡದ ಅಪ್ಪನನ್ನು “ಮಗುವಿಗೆ ಇಷ್ಟು ಜ್ವರವಾದರೂ ಇವರಿಗೆ ಒಂದಿಷ್ಟೂ ಲಕ್ಷ್ಯವಿಲ್ಲ’ ಎಂದು ದೂರುತ್ತಾಳೆ. ಅದೇ, ಅಪ್ಪನಿಗೆ ಅನ್ನಿಸುವುದು “ಮಕ್ಕಳೆಂದ ಮೇಲೆ ಸ್ವಲ್ಪ ಜ್ವರ ಬಾರದೆ? ಇವಳು ಕಿರಿಕಿರಿ ಮಾಡುವುದು ನಿಲ್ಲಿಸಿದರೆ ಎಲ್ಲವೂ ಸರಿಯಾಗುತ್ತದೆ!  ಸ್ವಲ್ಪ ತಾಳ್ಮೆ ಬೇಡವೆ?’ ಅಂತ. ಮಗುವಿನ  “ಜ್ವರ’ ಮುಗಿದು ಆರಾಮಾದ ತಕ್ಷಣ ಅಮ್ಮನಿಗೆ ಅನ್ನಿಸುವ “ಸದ್ಯ, ನನ್ನ ಕಾಳಜಿಯಿಂದ ಗುಣವಾಯಿತು’ ಎಂಬ ಭಾವ ಜೊತೆಯಾದರೆ, ಅಪ್ಪನಿಗೆ, “ಜ್ವರ ತನ್ನಿಂತಾನೇ ಗುಣವಾಯಿತು. ಔಷಧಿ ಪರಿಣಾಮ ಬೀರಲೂ ಸಮಯ ಬೇಡವೆ?’ ಎಂದು ಅನ್ನಿಸುತ್ತದೆ! ಇವೆರಡೂ ನಮ್ಮೆಲ್ಲರ ಅನುಭವದಲ್ಲಿಯೂ ಬಂದಿರುವಂಥದ್ದೇ.

ಐದು ವರ್ಷದ ಒಳಗಿನ ಮಕ್ಕಳಲ್ಲಿ ನೆಗಡಿ-ಜ್ವರ ಮುಂತಾದ ಸೋಂಕು ರೋಗಗಳು ಉಂಟಾದಾಗ, ಅದರಿಂದ ಗುಣಮುಖರಾದ ನಂತರವೂ ಕೆಲ ದಿನಗಳವರೆಗೆ ಹಠಮಾರಿತನ ಕಾಣಿಸಿಕೊಳ್ಳಬಹುದು. ಅಮ್ಮಂದಿರನ್ನು “ಸಾಕೋಸಾಕು’ ಎನ್ನಿಸುವಂತೆ ಮಾಡಬಹುದು! ಹಠಮಾರಿತನವನ್ನು ನಿಭಾಯಿಸುವುದನ್ನು ಕಲಿಯುವುದೇ  ಇದಕ್ಕೆ ಪರಿಹಾರ. ಹಲ್ಲು ಕಚ್ಚಿ-ತುಟಿ ಬಿಗಿ ಹಿಡಿದು ಮಗುವಿನ ಹಠವನ್ನು ನಿರ್ಲಕ್ಷಿಸುವುದೇ ಉತ್ತಮ ಮಾರ್ಗ.  ಹೊಡೆಯುವುದಲ್ಲ, ಕೂಗುವುದೂ ಅಲ್ಲ, ತಾಳ್ಮೆ ಕಳೆದುಕೊಳ್ಳುವುದೂ ಕೂಡದು. 

ಪ್ರತಿಯೊಂದು ಮಗುವೂ ವಿಶಿಷ್ಟ ಎನ್ನುವ ಮಾತು ಎಲ್ಲರಿಗೂ ಗೊತ್ತು. ಜ್ವರವಿದ್ದೂ ಕೆಲ ಮಕ್ಕಳು ಎಲ್ಲ ಚಟುವಟಿಕೆಗಳನ್ನೂ ಮಾಡುವವರಾದರೆ, ಇನ್ನು ಕೆಲ ಮಕ್ಕಳು ಜ್ವರದಿಂದ ಬಹು ಚೂಟಿಯಾಗಿ ಬಿಡುತ್ತಾರೆ, ಮತ್ತೆ ಕೆಲವರು ಜ್ವರ ಬರುತ್ತದೆ ಎಂದ ತಕ್ಷಣವೇ ಮಂಕಾಗಿ ಬಿಡುತ್ತಾರೆ. ಅಮ್ಮಂದಿರಿಗೂ ಅಷ್ಟೆ “ಮಗು ಹೀಗೆ ಮಾಡಿದರೆ ಜ್ವರ ಬಂತು ಎಂತಲೇ ಅರ್ಥ’ ಎಂಬುದು gut instinct ಕರುಳಿನ ಭಾವನೆಯ ರೀತಿಯಲ್ಲಿ ಗೊತ್ತಾಗಿಬಿಡುತ್ತದೆ! ಹಾಗಾಗಿ ಎಲ್ಲ ಅಮ್ಮಂದಿರಿಗೂ-ಎಲ್ಲ ಮಕ್ಕಳಿಗೂ ಅನ್ವಯಿಸುವ ರೀತಿಯಲ್ಲಿ ವೈದ್ಯಕೀಯ ಸೂತ್ರಗಳನ್ನು ನಿರ್ದಿಷ್ಟವಾಗಿ ಕೊಟ್ಟುಬಿಡುವಂತಿಲ್ಲ. ಆದರೆ ತನ್ನ ಅನಾರೋಗ್ಯವನ್ನು ತಾನು ನಿಭಾಯಿಸುವ ರೀತಿ, ಅವಳು ತನ್ನ ಆರೋಗ್ಯವನ್ನು ಕಾಯ್ದುಕೊಳ್ಳುವ ಮಾದರಿ, ಅತಿ ಸೂಕ್ಷ್ಮತೆ (ಆರತಿಯಿಂದ ಉಷ್ಣ-ತೀರ್ಥದಿಂದ ಶೀತ!) ಅತಿ ಒರಟುತನ (ದಾರಿಯ ಬದಿಯಲ್ಲೇ, ಗಾಡಿಯಲ್ಲೇ ತಿಂಡಿ ತಿಂದರಾಯಿತು) ಇವೆಲ್ಲವೂ ತಾಯಿಗೆ ಅರಿವಿಲ್ಲದಂತೆ ಮಗುವಿನ ವ್ಯಕ್ತಿತ್ವದಲ್ಲಿ ತಾಯಿಯಿಂದ ಅಡಕಗೊಳ್ಳುತ್ತವೆ. ಮಕ್ಕಳು ಬಲುಬೇಗ ಬೆಳೆದುಬಿಡುತ್ತಾರೆ!  ಮಕ್ಕಳ ಬಾಲ್ಯದ ಕಾಯಿಲೆಯ ಅನುಭವಗಳು ತಾಯ್ತನವನ್ನು ಮಾಗಿಸುತ್ತವೆ. ಮಗುವಿಗೆ (ಮಗು ಬಾಯಿ ಬಿಟ್ಟು ಹೇಳದಿದ್ದರೂ!) “ತಾಯಿ’ ಎಂದರೇನು ಎಂಬುದನ್ನು ಅರ್ಥ ಮಾಡಿಸುವ ಸಂದರ್ಭಗಳು. ಅಪ್ಪ ಕೂಡ ಅಮ್ಮನೊಂದಿಗೆ ಈ ಸಮಯದಲ್ಲಿ ಪಾಲ್ಗೊಂಡರೆ ಆತನಿಗೂ ಈ “ಅಮೃತ’ ಗಳಿಗೆಯ ಕಿಂಚಿತ್‌ ಅನುಭವ ಸಾಧ್ಯವಾಗುತ್ತದೆ. ಸಾಂಗತ್ಯ ಅರ್ಥಪೂರ್ಣವಾಗುತ್ತದೆ. ಆದರೆ ಇಂಥ ಅನುಭವ ಆತನಿಗೆ ಸಿಗದಾಗುತ್ತದೆ!

ಟ್ಯಾಗೋರರಿಗೆ ಜ್ವರ ಬಂದಾಗ…
“ನನ್ನ ಬಾಲ್ಯದ ದಿನಗಳು’ ಎಂಬ ಕೃತಿಯಲ್ಲಿ ರವೀಂದ್ರನಾಥ ಟ್ಯಾಗೋರರು ತಮ್ಮ ಬಾಲ್ಯದಲ್ಲಿನ ಜ್ವರಪ್ರಸಂಗವನ್ನು ತೆರೆದಿಟ್ಟದ್ದಾರೆ. ಅದು ಹೀಗಿದೆ: “ಮಕ್ಕಳಿಗೆ ಜ್ವರ ಬಂದರೆ ಇಂದಿನ ಅಮ್ಮಂದಿರಂತೆ ನಮ್ಮ ಅಮ್ಮಂದಿರು, ಶಾಲೆಗೆ ಹೋಗಲೇಬೇಕು ಎನ್ನುತ್ತಿರಲಿಲ್ಲ. ಇವತ್ತು ಶಾಲೆಗೆ ಬೇಡ ಎಂದುಬಿಡುತ್ತಿದ್ದರು. ನಮಗೆ ಖುಷಿಯೋ ಖುಷಿ. ಹಾಗೆ ಜ್ವರ ಬಂದಾಗ, ಒಂದು ದಿನ ಹೊಟ್ಟೆಗೆ ಏನೂ ಇಲ್ಲ. ಕಹಿಯಾದ ಔಷಧಿ- ನೀರು ಮಾತ್ರ. ಹಸಿವಿಂದ ಕಂಗಾಲಾಗಿರುವಾಗ ಎರಡನೇ ದಿನ ಮೆತ್ತಗಿನ ಅನ್ನ- ಮೌರಾಲಾ ಮೀನಿನ ಸಾರು ಕೊಟ್ಟಾಗ ಅಮೃತವೇ ಸಿಕ್ಕಂತಾಗುತ್ತಿತ್ತು’.

ಜ್ವರದ ಪುಟಾಣಿ ಶಾಲೆಗೆ ಹೊರಟಿದೆಯೇ?
– ನಿಮ್ಮ ಮಗುವಿಗೆ ಬಂದಿರುವ ಜ್ವರ, ತರಗತಿಯಲ್ಲಿನ ಇತರ ಮಕ್ಕಳಿಗೂ ದಾಟುವ ಅಪಾಯವಿರುತ್ತೆ.
– ಮಗುವಿಗೆ ಸೋಂಕು ಕಡಿಮೆಯಾಗಲು ವಿಶ್ರಾಂತಿ ದೊರೆಯದೆ, ಅದು ಇನ್ನಷ್ಟು ದಿನ ಮುಂದುವರಿದು, ಮತ್ತೂಂದಿಷ್ಟು ರಜೆಗಳಾಗಬಹುದು.
– ಹೀಗೆ ಆದಾಗ, ಮನೆಯಲ್ಲಿ ಅಥವಾ ಉದ್ಯೋಗ ಸ್ಥಳದಲ್ಲಿರುವ ತಾಯಿಗೆ ಚಡಪಡಿಕೆ ಹೆಚ್ಚಾಗುತ್ತದೆ.
 - “ಮಗುವಿಗೆ ಜ್ವರ ಜಾಸ್ತಿಯಾದರೆ, ಶಾಲೆಯಿಂದ ಕರೆ ಬರುವುದೋ?’ ಎನ್ನುವ ಚಿಂತೆ ಎದುರಾಗಬಹುದು.
 - “ಪೂರ್ತಿ ಹುಷಾರಾಗದೆ ಶಾಲೆಗೆ ಕಳಿಸಬೇಡಿ’ ಎನ್ನುವ ಶಿಕ್ಷಕರ ಮಾತಿಗೆ ಬದ್ಧರಾಗುವುದೇ ಉತ್ತಮ.
 - ಉದ್ಯೋಗಸ್ಥ ಮಹಿಳೆಯರು ಈ ವೇಳೆ ಒಂದೆರಡು ದಿನ ರಜೆ ಹಾಕಿ, ಪುಟಾಣಿ ಜತೆ ಇರುವುದು ಒಳ್ಳೆಯದು.

ಅಮ್ಮಾ… ನಾ ಶಾಲೆಗೆ ಹೋಗಲ್ಲ…
ಮಕ್ಕಳು ಜ್ವರದಿಂದ ಗುಣಮುಖರಾಗಿದ್ದರೂ, ಶಾಲೆಗೆ ಕಳಿಸಲು ಮತ್ತೆ ಒಂದೆರಡು ದಿನ ತಡ ಮಾಡುವ ಪೋಷಕರೂ ಇದ್ದಾರೆ. ಇದರಿಂದ ಮಕ್ಕಳಲ್ಲಿ “ಶಾಲಾ ನಿರಾಕರಣೆ’ ಭಾವ ಬೆಳೆಯುತ್ತದೆ. ಅಂದರೆ ತಡವಾಗಿ ಏಳುವುದು, ಆರಾಮಾಗಿ ಬೇಕೆಂದಾಗ ಮಲಗುವುದು, ಅಮ್ಮನ ಜೊತೆಗೆ ಸಮಯ ಕಳೆಯುವುದು, ಟಿ.ವಿ. ನೋಡುವುದು… ಶಾಲೆಯ ಶಿಸ್ತು- ಓದು- ಬರಹಕ್ಕಿಂತ ಇವು ಹೆಚ್ಚು ಆಕರ್ಷಕ ತಾನೆ? ಆಗ ಮಗು ಮತ್ತೆ ಮತ್ತೆ “ತಲೆನೋವು’, “ಜ್ವರ ಬಂದ ಹಾಗೆ ಆಗಿದೆ’, “ಸುಸ್ತಾಗಿದೆ’ ಎಂದು ನಾಟಕದ ರೀತಿಯ ರಗಳೆ ಮಾಡಬಹುದು. ಜ್ವರಕ್ಕೆಂದು ಶಾಲೆ ತಪ್ಪಿಸಿದಾಗ ನಡೆದಿರುವ ಪಾಠ-ಬರಹಗಳನ್ನು ಬರೆಯಲು ಪಡಬೇಕಾದ ಕಷ್ಟದ ಒತ್ತಡವೂ ಇದಕ್ಕೆ ಕಾರಣವಾಗಬಹುದು. ಅಂಥ ಸಮಯದಲ್ಲಿ ತಾಯಂದಿರು ಎಚ್ಚೆತ್ತುಕೊಂಡು, ತಾವೂ ಶಿಸ್ತನ್ನು ರೂಢಿಸಿಕೊಂಡು, ಮಕ್ಕಳಿಗೂ ಮರಳಿ ಸಹಜತೆಗೆ ಬರಲು ಸಹಾಯ ಮಾಡಬೇಕು. “ಮಗು ಹುಷಾರಾಗಿದೆ. ಸ್ವಲ್ಪ ಜೋಪಾನ ನೋಡಿಕೊಳ್ಳಿ’ ಎಂದು ಪುಟಾಣಿಯೆದುರೇ, ಶಿಕ್ಷಕರಿಗೆ ಹೇಳಿದರೆ, ಮಗುವಿಗೂ ಧೈರ್ಯ ಬರುತ್ತದೆ.

– ಡಾ. ಕೆ.ಎಸ್‌. ಪವಿತ್ರ

ಟಾಪ್ ನ್ಯೂಸ್

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.